ರಂಜದ ಹೂ

ಯಥಾಪ್ರಕಾರ ಕುಣಿಯುತ್ತಾ ಹೋಗುವಾಗ ಓಡುವ ಕಾಲಿಗೆ ಪಕ್ಕನೆ ಬ್ರೇಕ್ ಹಾಕಿ ಕಣ್ಣು ಮೂಗು ಎರಡೂ ಅರಳುವುದು ದಾರಿಯಲ್ಲಿ ಬಿದ್ದ ರಂಜದ ಹೂ ನೋಡಿದಾಗ. ಒಹ್ ಹೂ ಬಿಳೋಕೆ ಶುರುವಾಯ್ತು ಅನ್ನುವ ಸಂಭ್ರಮ ಉಕ್ಕಿ ಅದು ದನಿಯಲ್ಲಿ ವ್ಯಕ್ತವಾಗಿ ಬಿದ್ದ ಹೂ ಅನ್ನು ಮೃದುವಾಗಿ ಎತ್ತಿ ಆಘ್ರಾಣಿಸಿದರೆ ಆಹಾ ಅದೂ ಒಂದು ಧ್ಯಾನವೇ. ಅದೇ ಉತ್ಸಾಹದಲ್ಲಿ ಮನೆಗೆ ಬಂದು ಇನ್ನೇನು ಹೇಳಬೇಕು ಅನ್ನುವಾಗಲೇ ನಾಳೆಯಿಂದ ರಂಜದ ಹೂ ಜಾಸ್ತಿ ಹೆರಕಿಕೊಂಡು ಬಾ ಸಹಸ್ರ ಪದ್ಮ ಪೂಜೆ ಮಾಡ್ತೀನಿ ಅನ್ನೋ ಅಜ್ಜಿಯ ದನಿ ಕೇಳುತಿತ್ತು. ನಾನೇ ತರ್ತೀನಿ ಅನ್ನುವ ಸಂಭ್ರಮ ಇನ್ಯಾರೋ ತಾ ಅಂದಾಗ ಸಿಟ್ಟಾಗಿ ಬದಲಾಗುವುದು ಹೇಗೆ ಎನ್ನುವುದು ಮಾತ್ರ ಅರ್ಥವಾಗುತ್ತಿರಲಿಲ್ಲ. ಜಾಸ್ತಿ ತಲೆಕೆಡಿಸಿಕೊಳ್ಳುವ ವಯಸ್ಸೂ ಅದಾಗಿರದ ಕಾರಣ ಆ ಮುನಿಸಿಗೆ ಆಯಸ್ಸೂ ಅಲ್ಪವೇ ಆಗಿರುತಿತ್ತು.

ರಾತ್ರಿ ಮಲಗುವಾಗಲೇ ಲೆಕ್ಕಾಚಾರ ಶುರು. ಆಚೆಮನೆಯ ಹತ್ತಿರ ಮರ ಸಣ್ಣದು, ಜಾಸ್ತಿ ಹೂ ಸಿಕ್ಕೊಲ್ಲ, ಅದರಲ್ಲೂ ಜಯತ್ತೆ ಬೆಳಿಗ್ಗೆಯೇ ಎದ್ದು ಗಣಪತಿಗೆ ಬೇಕು ಅಂತ ಆರಿಸಿರ್ತಾರೆ. ಇನ್ನು ಗೊಬ್ಬರದ ಗುಂಡಿಯ ಪಕ್ಕದ ಮರದ್ದು ಲೆಕ್ಕವಿಟ್ಟಂತೆ ಸ್ವಲ್ಪವೇ ಹೂ. ಇವಳ ಪೂಜೆಗೆ ಬೇಕಾದಷ್ಟು ಹೂ ಸಿಗೋದು, ಬೇಗ ಆರಿಸಲು ಆಗೋದು ಗೌಡರ ಮನೆಯ ಹಾಡ್ಯದ ಮರದ ಬುಡದಲ್ಲೇ ಎಂದು ನಿರ್ಧರಿಸುವ ವೇಳೆಗೆ ನಿದ್ರೆ ಬಂದಾಗಿರುತಿತ್ತು. ಬೆಳಿಗ್ಗೆ ಬೇಗ ಎದ್ದು ಕೈಯಲ್ಲೊಂದು ಬುಟ್ಟಿ ಹಿಡಿದು ಹೊರಟರೆ ಅಶ್ವಮೇಧಯಾಗಕ್ಕೆ ಹೊರಟಂತೆ. ಸದ್ಯಕ್ಕೆ ಯಾರೂ ವಿರೋಧಿಸುವವರು, ಎದುರಿಸುವವರೂ ಇಲ್ಲದೆ ಇದ್ದುದ್ದರಿಂದ ಅವಸರವಿರುತ್ತಿರಲಿಲ್ಲ ಅಷ್ಟೇ..

 ರಂಜದ ಮರ ಬೆಳೆಯುವುದು ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಎಂದು ಮೇಷ್ಟರು ಪಾಠ ಮಾಡುವಾಗ ನಿತ್ಯಹರಿದ್ವರ್ಣ ಅನ್ನೋ ಪದ ಅರ್ಥವಾಗದಿದ್ದರೂ ಹೂ ಆಯ್ದು ತರಲು ಹೋಗುವಾಗ ಮಾತ್ರ ಅರಿವಾಗುತ್ತಿತ್ತು. ಇದು ಬೆಳೆಯುವುದು ಕಾಡಿನಲ್ಲಿ, ಅದರಲ್ಲೂ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಜಾಸ್ತಿ. ಎತ್ತರಕ್ಕೆ ಬೆಳೆಯುವ ಈ ಮರದಲ್ಲಿ ಸದಾ ಹಸಿರು ಎಲೆಗಳೇ. ಎಂದೂ ಅಷ್ಟೂ ಎಲೆ ಉದುರಿದ್ದು, ಹಣ್ಣಾಗಿದ್ದು ನೋಡಿದ ನೆನಪಿಲ್ಲ. ಎಲೆ ಉದುರಿದರೂ, ಹೊಸ ಚಿಗುರು ಬಂದರೂ ಮರ ಮಾತ್ರ ಸದಾ ಹಸಿರಾಗಿಯೇ ಇರುತಿತ್ತು.ದಟ್ಟ ಹಸಿರುಬಣ್ಣದ ಎಲೆಗಳು. ತಲೆಯೆತ್ತಿ ನೋಡಿದಷ್ಟೂ ಎತ್ತರಕ್ಕೆ ನೇರವಾಗಿ ಬೆಳೆಯುವ ಈ ಮರ ನಾಟಕ್ಕೂ ಉಪಯೋಗಕ್ಕೆ ಬರುತಿತ್ತು. ಹಾಗಾಗಿ ಕಟ್ಟಡ ನಿರ್ಮಾಣದಲ್ಲಿ ಇದನ್ನು ಬಳಸಲಾಗುತ್ತದೆ. ಇದಲ್ಲದೇ ಇದರ ತೊಗಟೆಯನ್ನು ನಾಟಿ ಔಷಧಿಯಾಗಿಯೂ ಉಪಯೋಗಿಸುತ್ತಾರೆ. ಇದು ಅತಿಸಾರ, ಆಮಶಂಕೆ ರೋಗಕ್ಕೆ ರಾಮಬಾಣ. ಆಸ್ಪತ್ರೆ ತುಂಬಾ ದೂರದ ತಕ್ಷಣಕ್ಕೆ ಸಿಗದ ಸೌಲಭ್ಯವಾಗಿದ್ದರಿಂದ ಆಗ ಹಳ್ಳಿಗಳಲ್ಲಿ ಪ್ರಕೃತಿಯೇ ಔಷಧದ ಅಂಗಡಿ.

ಬೆಳಕು, ನಾವೂ ಇಬ್ಬರೂ ನಿಧಾನಕ್ಕೆ ಕಣ್ಣು ಉಜ್ಜುತ್ತಾ ಮರದ ಬುಡ ಸೇರುವ ಹೊತ್ತಿಗೆ ನಕ್ಷತ್ರಗಳು ಚೆಲ್ಲಾಡಿದ ಹಾಗೆ ಹೂ ಗಳು ಬಿದ್ದಿರುತ್ತಿದ್ದವು. ಕಾಲಿಟ್ಟರೆ ಹೊಸಕಿ ಹೋಗುವುದೇನೋ ಎಂದು ಒಮ್ಮೆ ಬೆಚ್ಚಿ ಹಿಂದಕ್ಕೆ ಹಾರಿ ಕುಕ್ಕರಗಾಲಿನಲ್ಲಿ ಕುಳಿತರೆ ಒಂದೊಂದೇ ನಕ್ಷತ್ರಗಳನ್ನ ಆಯ್ದು ಬುಟ್ಟಿಗೆ ತುಂಬುವ ಕೆಲಸ. ಆ ಹಾಡ್ಯದ ತುಂಬಾ ಬೆಳೆದ ಮರಗಳ ನಡುವೆ ಈ ಮರದ ಕಾಂಡ ಮಾತ್ರವೇ ಕಾಣಿಸುತ್ತಿತ್ತು. ಇಬ್ಬರು ಕೈ ಜೋಡಿಸಿ ಅಪ್ಪಿದರೂ ಹಿಡಿತಕ್ಕೆ ನಿಲುಕದಷ್ಟು ದಪ್ಪದ ಮರ. ತಲೆಯೆತ್ತಿ ನೋಡಿದರೂ ಅದರ ಕೊನೆ ಕಾಣಿಸುತ್ತಿರಲಿಲ್ಲ. ಹಾಗಾಗಿ ಹೂ ಬೀಳದೆ ಹೋದರೆ ಅಲ್ಲೊಂದು ರಂಜದ ಮರ ಇದೆ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇಷ್ಟು ಭಾರೀ ಗಾತ್ರದ ಮರಕ್ಕೆ ಎಷ್ಟೊಂದು ಪುಟ್ಟ ಹೂ ನೋಡು ಎಂದು ಎಂದು ಕೊಂಚ ಬೆರಗು, ತುಸು ಆಶ್ಚರ್ಯ, ಸ್ವಲ್ಪ ಅಪನಂಬಿಕೆಯಿಂದ ಹೇಳುತ್ತಲೇ ಆರಿಸುತ್ತಾ ಕುಳಿತರೆ ಬುಟ್ಟಿ ತುಂಬುವ ಹೊತ್ತಿಗೆ ಬೆಳಕು ಚೆಲ್ಲಾಡಿರುತಿತ್ತು.

ಇದಕ್ಕೆ ಬಕುಳ ಪುಷ್ಪ ಅಂತ ಕೂಡಾ ಅಂತಾರೆ ಅನ್ನುವ ಅವಳ ಮಾತಿಗೆ ಯಾರೇ ನಿನ್ನ ಅತ್ತಿಗೆಯ ತಂಗಿ ಬಕುಳನಾ ಎಂದು ಕಿಸಕ್ಕನೆ ನಕ್ಕರೆ ಶ್ರೀನಿವಾಸಕಲ್ಯಾಣ ಪಿಕ್ಚರ್ ನೋಡಿಲ್ವಾ ಎಂದು ಗದರಿಸುತ್ತಿದ್ದಳು. ಐದು ಮೈಲಿ ನಡೆದು ಯಡೂರಿಗೆ ಹೋಗಿ ನೋಡಿದ ಆ ಫಿಲಂ ಮರೆಯುವುದಾದರೂ ಹೇಗೆ?  ಪದ್ಮಾವತಿ ವೆಂಕಟೇಶರ ಮದುವೆ ಮಾಡಿಸಿದ ಬಕುಳಾ ದೇವಿಗೆ  ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು ಈ ಹೂವಿನ ಸೃಷ್ಟಿಯಾಯಿತಂತೆ. ಹಾಗಾಗಿ ಇದಕ್ಕೆ ಬಕುಳ ಪುಷ್ಪ ಅಂತಾರೆ. ಮದುವೆಯಲ್ಲಿ ವಧು ವರರು ಈ ಹಾರವನ್ನು ಧರಿಸಿದರೆ ಅವರ ದಾಂಪತ್ಯ ಸುಖವಾಗಿರುತ್ತದೆ ಎನ್ನುವ ನಂಬಿಕೆ, ಶ್ರೇಷ್ಠ ಎನ್ನುವ ಸಂಪ್ರದಾಯವಿದೆ. ಹಾಗಾಗಿ ಒಣಗಿದ ಹಾರವನ್ನಾದರೂ ಮದುವೆಯಲ್ಲಿ ತಂದು ತೊಡಿಸುತ್ತಾರೆ. ಯಾಕೋ ರಂಜದ ಹೂ ಅನ್ನೋದೇ ಸುಲಭ ಹಾಗೂ ಒಗ್ಗಿ ಹೋಗಿದ್ದರಿಂದ ಸುಮ್ಮನೆ ತಲೆಯಾಡಿಸಿದ್ದೆ. ಯಾರದ್ದೋ ಮದುವೆಯಲ್ಲಿ ಈ ಒಣಗಿದ ಹೂ ಯಾಕೆ ಹಾಕ್ತಾರೆ ಎಂದು ಮುಖ ಸಿಂಡರಿಸಿದ್ದಕ್ಕೆ ಉತ್ತರ ಸಿಕ್ಕ ಖುಷಿಯೂ ಆಗಿ ಫ್ರೆಂಡ್ಸ್ ಜೊತೆಗೆ ಅದನ್ನು ಹಂಚಿಕೊಂಡು ಬೀಗುವ ಅವಕಾಶ ಸಿಕ್ಕಿದ್ದಕ್ಕೆ ಅಲ್ಲಿಂದ ಓಡಿಯಾಗಿತ್ತು.

ದೊಡ್ಡ ಗಾತ್ರದ ಮರ. ಪುಟ್ಟ ಬಿಳಿ ಹೂ. ಬಿಳಿ ಅಂದರೆ ಅಚ್ಚ ಬಿಳಿಯೇನಲ್ಲ. ನಕ್ಷತ್ರ ಬಣ್ಣ ಅಂದರೆ ಸರಿಯಾದಿತೇನೋ. ಮರ ಎತ್ತರವಿರುವುದರಿಂದ ಅದು ಬೀಳುವುದನ್ನೇ ಕಾಯಬೇಕಿತ್ತೆ ಹೊರತು ನಾವೇ ಬಿಡಿಸುವ ಹಾಗಿರಲಿಲ್ಲ. ಅದರ ಪಕ್ಕ ಬೆಳೆದ ಇನ್ಯಾವುದೋ ಪುಟ್ಟ ಮರ ಹತ್ತಿ ಅದರ ಹೂ ಬಿಡಿಸಲು ಹೋಗಿ ಸರಿಯಾಗಿ ಬೈಸಿಕೊಂಡಿದ್ದೂ ನೆನಪಿದ್ದರಿಂದ ಅದನ್ನು ಮತ್ತೆ ಕನಸಿನಲ್ಲೂ ಯೋಚಿಸುತ್ತಿರಲಿಲ್ಲ. ಬೇರೆಲ್ಲ ಹೂ ಬಿಡಿಸಿಯೇ ತರಬೇಕು, ಬಿದ್ದ ಹೂ ಏರಿಸುವ ಹಾಗಿಲ್ಲ ಎನ್ನುವ ನಿಯಮವಿದ್ದರೆ ಈ ಹೂವಿಗೆ ಮಾತ್ರ ವಿರುದ್ಧ. ಅಕಸ್ಮಾತ್ ಹೇಗಾದರೂ ಸಿಕ್ಕರೂ ಬಿಡಿಸುವುದು ಸುಲಭವೇನಲ್ಲ. ಗಟ್ಟಿಯಾಗಿ ಕಚ್ಚಿಕೊಂಡಿರುವ ಹೂಅನ್ನು ಗಾಯಗೊಳಿಸದೆ ಬಿಡಿಸಲು ಆಗುತ್ತಿರಲಿಲ್ಲ. ಹಾಗಾಗಿ ಅದು ಬೀಳುವುದನ್ನೇ ಕಾಯಬೇಕಿತ್ತು. ರಾತ್ರಿ ಅದ್ಯಾವ ಜಾಮದಲ್ಲಿ ಮರ ಹೂ ಅನ್ನು ಉದುರಿಸುತ್ತಿತ್ತೋ ಯಾರಿಗೆ ಗೊತ್ತು, ಬೆಳಿಗ್ಗೆ ಹೋಗುವಾಗ ಮಾತ್ರ ಆಕಾಶದಿಂದ ಉರುಳಿಬಿದ್ದ  ಶಾಪಗ್ರಸ್ತ ನಕ್ಷತ್ರಗಳಂತೆ ಮರದ ಬುಡದಲ್ಲಿ ಬಿದ್ದಿರುತ್ತಿದ್ದವು. ಮರ ದೊಡ್ದದಾದರಂತೂ ನೆಲಕ್ಕೆ ನಕ್ಷತ್ರಗಳ ಚಾದರ ಹಾಸಿದಂತೆ ಕಾಣಿಸುತ್ತಿತ್ತು.

ಆಕಾರವೂ ನಕ್ಷತ್ರದ ಹಾಗೆಯೇ. ಬಣ್ಣವೂ ನನಗಂತೂ ಹಾಗೆಯೇ ಅನ್ನಿಸುತಿತ್ತು. ರಾತ್ರಿಯಿಡೀ ಆಕಾಶದಲ್ಲಿ ಆಡಿದ ಅವುಗಳು ಬೆಳಿಗ್ಗೆ ಭೂಮಿಗೆ ಬಂದು ನಿದ್ರಿಸುತ್ತಿದ್ದಾವೇನೋ ಅನ್ನುವ ಭಾವ. ಅವುಗಳ ನಿದ್ದೆ ಕೆಡದಂತೆ, ಆಡುತ್ತಾ ಆಡುತ್ತಾ ಮನೆಯ ಮೂಲೆಯಲ್ಲಿ ಎಲ್ಲೋ ಮಲಗಿದ ಮಗುವನ್ನು ಜಾಗೃತೆಯಿಂದ ಎಚ್ಚರವಾಗದಂತೆ ಮೃದುವಾಗಿ ಎತ್ತಿಕೊಂಡು ಹೋಗಿ ಮಲಗಿಸುವಂತೆ ಅದನ್ನು ಮೆತ್ತಗೆ ಎತ್ತಿ ಬುಟ್ಟಿಗೆ ಹಾಕುತ್ತಿದ್ದೆವು. ನೂರಾರು ಹೂ ಆಯ್ದು ಬುಟ್ಟಿ ತುಂಬಿಸಿಕೊಂಡು ಮನೆಗೆ ಬರುವ ಹೊತ್ತಿಗೆ ನೀರಲ್ಲಿ ನೆನದ ಬಾಳೆಪಟ್ಟಿ ಕಾಯುತ್ತಿರುತಿತ್ತು. ಈ ಹೂ ಸುರಿಯಲು ಬಾಳೆಪಟ್ಟಿಯೇ ಸರಿಯಾದದ್ದು. ಅವೆರೆಡರ ಸಾಂಗತ್ಯದ ಮುಂದೆ ಬೇರೆ ಯಾವುದೂ ಇಲ್ಲ. ಹೂವಿನ ಮಧ್ಯದಲ್ಲಿ ಪುಟ್ಟ  ರಂಧ್ರವಿರುತ್ತದೆ. ಒಂದೊಂದೇ ಹೂ ಪೋಣಿಸಿದರೆ ನಕ್ಷತ್ರಗಳ ಮುದ್ದಾದ ಹಾರವೊಂದು ದೇವರ ಕೊರಳು ಅಲಂಕರಿಸಲು ತಯಾರಾಗುತ್ತದೆ.

ಹಾಗೆ ತಯಾರಿಸಿದ ಹಾರವೊಂದನ್ನು ಗಣಪತಿಗೆ ಕೊಟ್ಟು ಉಳಿದ ಬಿಡಿ ಹೂ  ಅವಳ ಪದ್ಮ ಪೂಜೆಗೆ ಇಟ್ಟರೆ ಅವತ್ತಿನ ದಿನ ಸಂಪನ್ನವಾದಂತೆ. ಸ್ನಾನ ಮುಗಿಸಿ ಬರುವಾಗ ಬರೆದ ಒಂದೊಂದು ಪುಟ್ಟ ಪದ್ಮದ ಮೇಲೂ ಒಂದೊಂದು ಹೂ ಇಟ್ಟು ಪೂಜೆ ಮಾಡಿರುತ್ತಿದ್ದಳು. ಒಂದು ಸಾವಿರದವರೆಗೂ ಪದ್ಮ ಬರೆದು ಅದೇನೋ ಸಹಸ್ರಪದ್ಮ ವ್ರತ ಅವಳದ್ದು. ಬೇರ್ಯಾವ ಹೂವು ಅಷ್ಟು ಸಿಕ್ಕದೆ ಇದ್ದುದ್ದರಿಂದ, ದುಡ್ಡು ಕೊಟ್ಟು ತರುವ ಚೈತ್ಯನ್ಯ ಇಲ್ಲದೆ ಇದ್ದುದ್ದರಿಂದ ಈ ಹೂ ಅರಳುವ ಕಾಲವನ್ನೇ ಆರಿಸಿಕೊಳ್ಳುತ್ತಿದ್ದಳು ಅವಳು. ಶಾಪಗ್ರಸ್ತ ನಕ್ಷತ್ರ ಹೀಗೆ ಶಾಪಮುಕ್ತಗೊಂಡು ಮತ್ತೆ ಆಗಸಕ್ಕೆ ಸೇರಿ ನಕ್ಷತ್ರವಾಗುತ್ತೆ ಎಂದು ಕೊಳ್ಳುತ್ತಿದ್ದೆ ನಾನು.

ಬರೀ ದೇವರಿಗಷ್ಟೇ ಇದು ಪ್ರೀತಿಪಾತ್ರವಲ್ಲ ಮನುಷ್ಯರಿಗೂ ಅಂತ ಗೊತ್ತಾಗಿದ್ದು ಇದರ ಹೂವಿನ ಸುಗಂಧ ಮಾಡುತ್ತಾರೆ ಅಂತ ತಿಳಿದಾಗಲೇ. ಸುಮಧುರ ಕಂಪು ಈ ಹೂವಿಗೆ. ದುಂಬಿಗಳಿಗೂ ಇದು ಪ್ರಿಯ ಹಾಗಾಗಿ ಅವುಗಳ ದಂಡೇ ಬೆಳಗಿನ ಹೊತ್ತಿನಲ್ಲೋ, ಸಂಜೆಯ ವೇಳೆಯಲ್ಲೋ ಮರದ ಮೇಲೆ ಸುಳಿಯುತ್ತಿತ್ತು. ಆ ಹೊತ್ತಿಗೆ ಮರದ ಬುಡದಲ್ಲಿ ಕುಳಿತಿದ್ದರೆ ಆ ಶಬ್ದಕ್ಕೆ ಹೆದರಿ ಒಳಗೆ ಓಡಿಹೋಗುತ್ತಿದ್ದೆವು. ಗಾಳಿ ಬೀಸಿದಾಗ ಅಡರುವ ಗಂಧ, ದುಂಬಿಗಳ ಝೇಂಕಾರ, ತಣ್ಣನೆಯ ಗಾಳಿ, ತಂಪು ನೆರಳು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿತ್ತು. ಇದಿಷ್ಟು ಹೂವಿನ ಕತೆಯಾದರೆ ಹಣ್ಣಿನದ್ದು ಇನ್ನೊಂದು ಕತೆ.

ಪುಟ್ಟ ಹೂ, ಅದಕ್ಕಿಂತ ತುಸು ದೊಡ್ಡ ಕಾಯಿ ಇದರದ್ದು. ಅಚ್ಚಹಸಿರು ಬಣ್ಣದ ಕಾಯಿ ತೂಗಾಡುವಾಗ ಕಿವಿಯ ಜುಮುಕಿಯ ನೆನಪಾಗುತ್ತದೆ. ಬಲಿತು ಹಣ್ಣಾಗುವಾಗ ಇದು ನಸು ಹಳದಿ ಅಥವಾ ಕಿತ್ತಳೆಯ ವರ್ಣಕ್ಕೆ ತಿರುಗುತ್ತದೆ. ನಮಗೋ ಸಿಹಿ, ಒಗರು ತುಂಬಿಕೊಂಡ ಈ ಹಣ್ಣು ತಿನ್ನುವ ಚಟ. ಅದರ ಬುಡಕ್ಕೆ ಹೋಗುವಾಗ ತಿನ್ನಬೇಡಿ, ನಾಲಿಗೆ ದಪ್ಪವಾಗುತ್ತೆ ಅನ್ನುವ ಅಜ್ಜಿಯ ದನಿ ಹಿಂಬಾಲಿಸಿದರೂ ದಪ್ಪ ಚರ್ಮದ ನಮಗೆ ಅದು ನಾಟುತ್ತಿರಲಿಲ್ಲ. ಮೇಲಿನ ತೊಗಟೆ ಬಿಡಿಸಿ ಬಾಯಿಗೆ ಇಟ್ಟುಕೊಂಡರೆ ಸಿಹಿ ಒಗರು ಗಂಟಲಿಗೆ ಇಳಿಯುತ್ತಿತ್ತು. ನಾಲಿಗೆ ಚಪ್ಪರಿಸಿ ಅದು ಒಳಗೆ ಇಳಿಯುವ ಹೊತ್ತಿಗೆ ನಾಲಿಗೆ ದಪ್ಪವಾಗುವ ಫೀಲ್ ಕಾಡಿದರೂ ತಿನ್ನುವುದು ಮಾತ್ರ ನಿಲ್ಲಿಸುತ್ತಿರಲಿಲ್ಲ. ಸಕ್ಕರೆಯ ಅಂಶ ಜಾಸ್ತಿ ಹೊಂದಿರುವ ಇದು ಒಳ್ಳೆಯ ಗ್ಲುಕೋಸ್. ಕೆಲವೊಮ್ಮೆ ಅದರ ಬೀಜವನ್ನು ಆಡಲು ಸಂಗ್ರಹಿಸಿ ಇಡುವುದೂ ಇತ್ತು.

ಮೊನ್ನೆ ತಂಗಿಯ ಮದುವೆಯಲ್ಲಿ ಅಮ್ಮಾ ಇದ್ಯಾಕೆ ಒಣಗಿದ ಹೂಹಾರ ಹಾಕ್ತಾ ಇದಾರೆ ಎನ್ನುವ ಮಗಳ ದನಿಗೆ ಸಂಭ್ರಮ, ಗದ್ದಲದಿಂದ ಈಚೆ ಬಂದು ದೃಷ್ಟಿಸಿದರೆ ಮದುಮಕ್ಕಳ ಕೊರಳಿನಲ್ಲಿ ರಂಜದ ಹೂ ಹಾರ ರಾರಾಜಿಸುತ್ತಿತ್ತು. ಹಾರ ಸರಿಮಾಡುವಾಗ ಅದನ್ನೊಮ್ಮೆ ಮೃದುವಾಗಿ ನೇವರಿಸಿದರೆ ನೆನಪುಗಳು ಉದುರುದುರಿ ಚೆಲ್ಲಾಡಿದವು. ಮನೆಗೆ ಬಂದ ಮೇಲೆ ಬೆಳಿಗ್ಗೆ ಎದ್ದು ಅದೇ ಹಳೆಯ ಹಾಡ್ಯಕ್ಕೆ ಹೋದರೆ ಅದಕ್ಕೂ ಹಳೆಯದಾದ ಮರ ಅಷ್ಟೇ ನಿಷ್ಠೆಯಿಂದ ಹೂ ಹಾಸಿಗೆ ಹಾಸಿತ್ತು. ಆರಿಸುವ ಮಕ್ಕಳು ಇಲ್ಲದೆ, ಪೋಣಿಸುವ ಕೈಗಳು ಇಲ್ಲದೆ ನಕ್ಷತ್ರಗಳು ಧರಶಾಯಿಯಾಗಿ ಶಾಪವಿಮೋಚನೆಗಾಗಿ ಕಾಯುತ್ತಿರುವಂತೆ ಕಂಡವು. ಆರಿಸಲು ಹೋಗುವಾಗ ಇಲ್ಲದ ಅಜ್ಜಿಯ ನೆನಪಾಗಿ ಅವಳು ನಕ್ಷತ್ರವಾಗಿ ಮೇಲಿರಬಹುದಾ ಎಂದು ದಿಟ್ಟಿಸಿದರೆ ಹಸಿರ ನಡುವೆ ಆಗಸ ಕಾಣಿಸಲಿಲ್ಲ. ಕೆಳಗೆ ನೋಡುವ ಧೈರ್ಯವಾಗಲಿಲ್ಲ...

ಶಾಪವಿಮೋಚನೆ ಈಗ ಅಷ್ಟು ಸುಲಭವಲ್ಲ.....

Comments

Popular posts from this blog

ಮಾತಂಗ ಪರ್ವತ

ಬರಿದೆ ಆಡುವ ಮಾತಿಗರ್ಥವಿಲ್ಲ...