ರಾಜಕಾರಣವೆಂಬ ಅಮಲು (ಹೊಸದಿಗಂತ)

ಅದೊಂದು ಚಿಕ್ಕ ಊರು. ತನ್ನ ಪಾಡಿಗೆ ತಾನಿದ್ದ ಆ ಊರಲ್ಲಿ ಇದ್ದಿದ್ದು ಪುರಾಣ ಪ್ರಸಿದ್ಧ ದೇವಸ್ಥಾನ. ಅದಕ್ಕೊಂದು ಸಮಿತಿ ಅದರಲ್ಲಿ ಆ ಊರಿನವರೇ ಒಂದಷ್ಟು ಉತ್ಸಾಹಿಗಳು. ಕಿರಿಯರ ಉತ್ಸಾಹ, ಹಿರಿಯರ ಪ್ರೋತ್ಸಾಹ ಎರಡೂ ಸೇರಿ ನಿಧಾನಕ್ಕೆ ದೇವಸ್ಥಾನ ಅಭಿವೃದ್ಧಿಯಾದಂತೆ ಜನರ ಹರಿವು ಹೆಚ್ಚಿ ಮನೆಮಾತಾಗತೊಡಗಿತು. ಅಲ್ಲಿಯವರೆಗೂ ಸಹಜವಾಗಿ ನದಿಯ ಹರಿವಿನಂತೆ ಸಾಗಿ ಹೋಗುತ್ತಿದ್ದ ಕೆಲಸಕ್ಕೂ ಆಕಸ್ಮಿಕ ತಿರುವು ಸಿಗತೊಡಗಿತು. ಹೆಸರು ಬರುತ್ತಿದ್ದ ಹಾಗೆ ಅಧಿಕಾರದ ಆಸೆಗೆ ಸಮಿತಿಯ ಒಳಗೆ ಸಣ್ಣದಾಗಿ ಮನಸ್ತಾಪವಾಗಿ ಆ ಮನಸ್ತಾಪ ಹೊಡೆದಾಟದ ಹಂತಕ್ಕೆ ತಿರುಗಿ ಕೊನೆಯಲ್ಲಿ ಆ ಆಸೆಗೆ ರಾಜಕೀಯ ಬೆನ್ನಲುಬಾಗಿ ದಲಿತ ಮೇಲ್ವರ್ಗದ ಹೆಸರಲ್ಲಿ ಕೇಸ್ ಆಗಿ ಯಾರ್ಯಾರ ಮೇಲೆ ದ್ವೇಷವಿತ್ತೋ ಅವರ ಹೆಸರು ಸೇರ್ಪಡೆಯಾಯಿತು. ಒಂದು ಸಲ ಕಂಪ್ಲೇಂಟ್ ರಿಜಿಸ್ಟರ್ ಆಗುತ್ತಿದ್ದ ಹಾಗೆ ಅದು ಸತ್ಯವೋ ಸುಳ್ಳೋ ಎಂದು ತಿಳಿಯುವ ಮೊದಲೇ ಅರೆಸ್ಟ್ ಮಾಡುವ ಅವಕಾಶ ನಮ್ಮಲ್ಲಿ ಇರುವುದರಿಂದ ಅದಕ್ಕೆ ಬಲಿಯಾದ ಹನ್ನೊಂದು ಜನರ ಮೇಲೆ ಕಾನೂನಿನ ಕುಣಿಕೆ ಬಿಗಿಯತೊಡಗಿತು. ಹಾಗಾಗಲು ನೆರವಾಗಿದ್ದು, ಬೇಕಾದ ಎಲ್ಲಾ ಅಧಿಕಾರವನ್ನು ಆಢಳಿತ ಯಂತ್ರವನ್ನು ಬಳಸಿಕೊಂಡಿದ್ದು ಒಂದು ಪಕ್ಷ.. ಬಲಿಯಾದ ಹನ್ನೊಂದು ಜನ ಅದರ ವಿರೋಧ ಪಕ್ಷದವರು.

ಸುದ್ದಿ ಪ್ರತಿಯೊಬ್ಬರಿಗೂ ಬೆರಳ ತುದಿಯಲ್ಲಿ ತಲುಪುವ ಹಾಗೆ ಮಾಡಿದ್ದು ಮಾಧ್ಯಮಗಳು. ಅದರಲ್ಲೂ ಈಗಂತೂ ಕ್ಷಣಮಾತ್ರದಲ್ಲಿ ಬ್ರೇಕಿಂಗ್ ನ್ಯೂಸ್ ಕೊಡುವಲ್ಲಿ ಸುದ್ಧಿ ಮಾದ್ಯಮಗಳ ಪಾತ್ರ ಬಹುದೊಡ್ಡದು. ಅಲ್ಲಿ ಸಿಗುವ ಸುದ್ಧಿ ಖಚಿತ ಮಾಹಿತಿ ಅನ್ನುವ ನಂಬಿಕೆ , ಸುಳ್ಳನ್ನು ಅಷ್ಟು ಘಂಟಾಘೋಷವಾಗಿ ಬಿತ್ತರಿಸಲಾರರು ಅನ್ನುವ ಧೈರ್ಯ, ನಿಖರವಾಗಿ ತಿಳಿಯದೆ ಜನರ ಮುಂದೆ ಬರುವುದಿಲ್ಲ ಅನ್ನುವ ವಿಶ್ವಾಸ ಜನಗಳದ್ದು. ಹೀಗೆ ಬಿತ್ತರಿಸಲ್ಪಟ್ಟ ಒಂದು ಸುದ್ದಿಯನ್ನು ಸತ್ಯವೆಂದು ಹಂಚಿಕೊಂಡ ಒಬ್ಬರ ಮೇಲೆ ಅವರಿಗೆ ಗೊತ್ತಿಲ್ಲದೇ  ಇದ್ದಕ್ಕಿದ್ದ ಹಾಗೆ ಕೇಸ್ ಒಂದು ರಿಜಿಸ್ಟರ್ ಆಗಿ ಹೋಗುತ್ತದೆ. ಕೇಳಿದಾಗ  ಅದು ಫೇಕ್ ನ್ಯೂಸ್ ಎಂಬ ಕಾರಣ. ಅದನ್ನು ಮೊದಲು ಪ್ರಕಟಿಸಿದವರ ಮೇಲೂ ಕರ್ಮ ಕೈಗೊಂಡರಾ ಎಂದರೆ ಉಹೂ ಇಲ್ಲ ಹಂಚಿಕೊಂಡವರ ಮೇಲೆ ಮಾತ್ರ. ಇಲ್ಲೂ ಅದನ್ನು ರಾಜಕೀಯ ಶಕ್ತಿ ಬಳಸಿ ಪ್ರಭಾವಬೀರಿದ್ದು ಒಂದು ಪಕ್ಷ. ಬಲಿಯಾಗಿದ್ದು ಅದರ ವಿರೋಧ ಪಕ್ಷ.

ಇತಿಹಾಸದ ಘಟನೆಗಳ ಆಧಾರದ ಮೇಲೆ ಒಂದು ಜನಾಂಗದ ಮೇಲೆ ನಡೆದ ಕ್ರೌರ್ಯ ಹಾಗೂ ಮಾರಣಹೋಮವನ್ನು ದಾಖಲೆಗಳ ಸಮೇತ ಬಿಚ್ಚಿಡುತ್ತಾ ಭಾಷಣ ಮಾಡಿದವರನ್ನು ರಾತ್ರೋ ರಾತ್ರಿ ಬಂಧಿಸಲಾಯಿತು. ಕೇವಲ ಭಾಷಣ ಮಾಡಿದ್ದೆ ಹೊರತು ಇನ್ಯಾವ ಹಿಂಸೆಯೋ, ಅನ್ಯಾಯವೋ ಅವರಿಂದ ಆಗಿರಲಿಲ್ಲ. ಆ ವ್ಯಕ್ತಿಗೆ ಯಾವುದೇ ಕ್ರಿಮಿನಲ್ ಹಿನ್ನಲೆಯೂ ಇರಲಿಲ್ಲ. ಆದರೂ ಆತುರಾತುರವಾಗಿ ರಾತ್ರೋ ರಾತ್ರಿ ಬಂಧಿಸಲು  ಆದೇಶ ಕೊಟ್ಟಿದ್ದು ಮತ್ತದೇ ಪಕ್ಷ ಹಾಗೂ ಆ ವ್ಯಕ್ತಿಯನ್ನು ಅದು ತನ್ನ ವಿರೋಧ ಪಕ್ಷದವನು ಎಂದು ಭಾವಿಸಿದ್ದು ಆ ವರ್ತನೆಗೆ ಕಾರಣ.

ಈ ಮೂರೂ ಘಟನೆಗಳಲ್ಲಿ ಬಲಿಯಾದ ವ್ಯಕ್ತಿ ಒಂದು ನಿರ್ಧಿಷ್ಟ ಪಕ್ಷಕ್ಕೆ ಸೇರಿದವರು ಅನ್ನುವ ಏಕೈಕ ಕಾರಣವೊಂದು ಬಿಟ್ಟರೆ ಇನ್ಯಾವ ತಲೆಹೋಗುವ ಕಾರಣಗಳಿರಲಿಲ್ಲ. ಅಸಭ್ಯವಾದ ವರ್ತನೆಯೋ, ಹಿಂಸೆಯೋ, ಅಪರಾಧವೋ ಜರುಗಿರಲಿಲ್ಲ. ಮತ್ತದು ಅಸತ್ಯವೂ ಆಗಿರಲಿಲ್ಲ. ಹೀಗಿದ್ದೂ ಅವರ ಮೇಲೆ ಕಾನೂನು ಕ್ರಮ ಕೈಗೊಂಡಿದೆ ಎಂದರೆ ನಮ್ಮ ಕಾನೂನು ವ್ಯವಸ್ಥೆ ಅಷ್ಟು ಬಲಿಷ್ಠವಾಗಿದೆ, ಅಷ್ಟು ಚುರುಕಾಗಿದೆ ಎನ್ನುವುದು ಕೇವಲ ಭ್ರಮೆ ಅಷ್ಟೇ. ಉತರಪ್ರದೇಶದ ಮುಖ್ಯಮಂತ್ರಿಯ ಫೋಟೋವನ್ನು ತೆಗೆದುಕೊಂಡು ಅಸಭ್ಯವಾಗಿ ಫೋಟೋಶಾಪ್ ಮಾಡಿದ ಮಹಿಳೆಯ ಬಗ್ಗೆ ಕಂಪ್ಲೇಂಟ್ ಕೊಟ್ಟರೂ ಆ ಮಹಿಳೆ ಎದುರಿಗೆ ಓಡಾಡಿದರೂ ಆ ದಿಕ್ಕಿನತ್ತ ತಿರುಗಿಯೂ ನೋಡದ ವ್ಯವಸ್ಥೆ ಇಲ್ಲಿದೆ. ಘಟನೆಯ ನಡೆಯದ ಜಾಗಕ್ಕೆ ಹೋಗಿ ತಾವೇ ಕಲ್ಲು ಮರ, ಕೋಲು ತಂದು ಗುಡ್ಡೆ ಹಾಕಿ ಮಹಜರ್ ಮಾಡಿದವರು ಇಲ್ಲಿದ್ದಾರೆ. ಹಾಗಾದರೆ ಈ ವೈರುಧ್ಯವೇಕೆ ಎಂದರೆ ಉತ್ತರ ಸರಳ.. ಕಾಯುವ ವ್ಯವಸ್ಥೆ ರಾಜಕೀಯದ ಮುಷ್ಠಿಯೊಳಗೆ ಸಿಲುಕಿಕೊಂಡಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ ಅದನ್ನು ಕಾಪಾಡುವ ಕೆಲಸ ಸರ್ಕಾರದ್ದು ಆಗಬೇಕೆ ಹೊರತು ದಮನಿಸುವುದಲ್ಲ. ಹಾಗೆ ದಮನಿಸಲು ಹೊರಟಾಗ ಅಲ್ಲಿ ಭಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಎಲ್ಲರನ್ನೂ ಸಮಾನವಾಗಿ ಕಾಯಬೇಕಾದ ಸರ್ಕಾರವೇ ಒಂದು ವರ್ಗದ ಆಥವಾ ಒಂದು ಸಿದ್ಧಾಂತದ ಪರವಾಗಿ ನಿಂತರೆ ಅಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲು ಶುರುವಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು  ವಿರೋಧಪಕ್ಷದ ಜವಾಬ್ದಾರಿ. ಆದರೆ ಕನ್ನಡಿಗರ ದೌರ್ಭಾಗ್ಯವೇನೆಂದರೆ ಇಲ್ಲಿ ಅಂತ ವಿರೋಧಪಕ್ಷವೆ ಇಲ್ಲದಿರುವುದು. ಯಾವಾಗ ವಿರೋಧ ಇರುವುದಿಲ್ಲವೋ ಆಗ ಸರ್ವಾಧಿಕಾರ ತಲೆ ಎತ್ತುತ್ತದೆ. ತಾನು ಮಾಡಿದ್ದೆ ಸರಿ ಎನ್ನುವ ಭಾವ, ವರ್ತನೆ ಮೊಳಕೆಒಡೆದು ಹೆಮ್ಮರವಾಗುತ್ತದೆ. ಅದಕ್ಕೆ ಬಲಿಯಾಗುವುದು ಮಾತ್ರ ಸಾಮಾನ್ಯ ಜನಗಳು.

ರಾಜಕೀಯ, ಸಿದ್ಧಾಂತ, ಇವೆಲ್ಲವೂ ಆವಷ್ಯಕವೇ ಹೊರತು ಅನಿವಾರ್ಯವಲ್ಲ. ಪ್ರತಿಯೊಬ್ಬರಿಗೂ ತನ್ನದೇ ಆದ ಸಿದ್ಧಾಂತ ಇರುವ ಹಾಗೆ ತನ್ನ ಭಾವಕ್ಕೆ ಒಗ್ಗುವ ಪಕ್ಷದ ಬಗ್ಗೆ ಒಲವಿರುವುದು ಸತ್ಯ ಅದು ಸಹಜವೂ ಕೂಡಾ. ಹಾಗಿದ್ದಾಗಲೂ ಯಾವುದು ಸರಿ ಯಾವುದು ತಪ್ಪು ಎಂದು ಗುರುತಿಸುವ ಶಕ್ತಿ ಇರಬೇಕು. ಅದನ್ನು ನೇರವಾಗಿ ಹೇಳುವ ಧೈರ್ಯ ಇರಬೇಕು. ಹಾಗಿಲ್ಲದೆ ಹೋದಾಗ, ತನ್ನದು ಎನ್ನುವ ಮೋಹಕ್ಕೆ ಸಮರ್ಥಿಸಲು ತೊಡಗಿದಾಗ ಸ್ವಾತಂತ್ರ್ಯ ಅನ್ನುವುದು ಸತ್ತು ಗುಲಾಮಿತನ ಹುಟ್ಟುತ್ತದೆ. ವಿಶಾಲ ಮನೋಭಾವ ಅಳಿದು ಸಂಕುಚಿತ ಭಾವ ಆವರಿಸುತ್ತದೆ. ಹಾಗಾಗಿಯೇ ಅಯ್ಯೋ ಯಾರಿಗೋ ಆಗಿದ್ದು ನನಗಲ್ಲವಲ್ಲ ಎನ್ನುವ ಯೋಚನೆ ಹುಟ್ಟಿ ನಿಷ್ಕ್ರಿಯತೆ ಕಾಡುತ್ತದೆ. ಆ ನಿಷ್ಕ್ರಿಯತೆಯಲ್ಲಿ ನಾಳೆ ನಮಗೂ ಆಗಬಹುದು ಎನ್ನುವ ಎಚ್ಚರಿಕೆ ಮರೆತೇ ಹೋಗುತ್ತದೆ. ಆಕ್ಷಣಕ್ಕೆ ವೈಯುಕ್ತಿಕವಾಗಿ ಏನೂ ನಷ್ಟವಲ್ಲದಿದ್ದರೂ ಸಾಮಾಜಿಕವಾಗಿ ಅದು ದೊಡ್ಡ ದುರಂತವೇ. ಈ ನಿಷ್ಕ್ರಿಯತೆಯೇ ರಾಜಕೀಯ ಪಕ್ಷಗಳ ಶಕ್ತಿ. ಮತ್ತದೇ ನಮ್ಮ ನಿಯಂತ್ರಿಸುವ ಅಂಕುಶ.

ಹಾಗಾಗಿ ಒಂದು ಸರ್ಕಾರವೋ, ವ್ಯವಸ್ಥೆಯೂ ಸರ್ವಾಧಿಕಾರ ಪ್ರವೃತ್ತಿ ತೋರಿಸುವ ಲಕ್ಷಣ ಕಂಡು ಬಂದಾಗ ಅದನ್ನು ಪಕ್ಷಾತೀತವಾಗಿ, ಸಿದ್ಧಾಂತದ ಹೊರತಾಗಿ ವಿರೋಧಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ಯಾರಿಗೋ ಸಹಾಯ ಅನ್ನುವುದಕ್ಕಿಂತ ನಮ್ಮ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಮಾಡಬೇಕು. ಇಲ್ಲವಾದಲ್ಲಿ ರಾಜಕೀಯದ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುವುದು ಕೇವಲ ಸ್ವಾತಂತ್ರ್ಯ ಮಾತ್ರವಲ್ಲ ಮನುಷ್ಯತ್ವ ಕೂಡಾ. ಒಟ್ಟಿಗೆ ಬೆಳೆದ, ಜೊತೆಯಲ್ಲಿ ಕೆಲಸ ಮಾಡುವ, ಮನೆಯವರ, ಬಂಧು ಮಿತ್ರರ ಅಸಲಿಗೆ ನೋಡದೆಯೂ ಇರುವ ವ್ಯಕ್ತಿಗಳ ನಡುವೆ ದ್ವೇಷ ಹುಟ್ಟುಹಾಕಿದ್ದು, ಹಾಕುತ್ತಿರುವುದು ಇದೇ ರಾಜಕೀಯ ಹಾಗೂ ಸಿದ್ಧಾಂತ. ಇನ್ನಾದರೂ ಎಚ್ಚೆತ್ತುಕೊಳ್ಳದೆ ಹೋದರೆ, ದನಿ ಎತ್ತದೆ ಹೋದರೆ ಕಳೆದುಕೊಳ್ಳುವುದು ಮನುಷ್ಯತ್ವ..


ರಾಜಕೀಯವೂ ಅಮಲು... ಅಮಲೇರಿದವರು ಆಲೋಚಿಸುವ ಶಕ್ತಿ ಕಳೆದುಕೊಂಡಿರುತ್ತಾರೆ. ಸ್ವಾತಂತ್ರ್ಯದ ಬಗ್ಗೆ ಕನವರಿಸುತ್ತಲೇ ಗುಲಾಮತ್ವದ ಕಡೆಗೆ ಅಂಧರಾಗಿ ನಡೆಯುವ ಮುನ್ನ ಎದ್ದೆಳಬೇಕಿದೆ. ನಮ್ಮ ದನಿಯನ್ನು, ನಮ್ಮತನವನ್ನು ಉಳಿಸಿಕೊಳ್ಳಬೇಕಿದೆ. ಎಲ್ಲಕ್ಕಿಂತ ಹೆಚ್ಚು ಮನುಷ್ಯರಾಗಬೇಕಿದೆ. ಯಾಕೆಂದರೆ ನಾವು ಮನುಷ್ಯರಾಗದ ಹೊರತು ರಾಜಕೀಯದ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲಾರೆವು, ಚಕ್ರವ್ಯೂಹ ಬೇಧಿಸಲಾರೆವು. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...