ಮಾದಿಪಾಡು....

ನಂಗೆ ಕೆಲಸ ಸಿಕ್ತು ನೀನು ಬಾ ಅಂತ ಅಣ್ಣ ಕರೆದಾಗ ಖುಷಿ ಮೇರೆ ಮೀರಿತ್ತು. ಅದರಲ್ಲೂ ಹೊರರಾಜ್ಯ ಅನ್ನೋದು ಇನ್ನೊಂದು ಚೂರು ಜಂಬ ಬರುವ  ಮಾಡಿತ್ತು. ರೈಲು ಇಳಿದು, ಅಲ್ಲಿಂದ ಬಸ್ ಹತ್ತಿ ಮತ್ತೊಂದು ರಿಕ್ಷಾ ಹಿಡಿದು ಮತ್ತೆ  ದೋಣಿಗಾಗಿ ಕಾದು ಅದು ಬಂದ ಮೇಲೆ ಆಚೆ ಕಡೆ ನಿಂತಿದ್ದ ಜೀಪ್ ಹತ್ತಿ ಹೊಲದ ನಡುವೆ ಬೆಟ್ಟದ ಬುಡ ಇರುವ ಅವನ ಗುರುಕುಲ ಸೇರುವ ಹೊತ್ತಿಗೆ ಬೆವರು ಸುರಿದು, ತಲೆ ಕಾಯ್ದು ಉಸ್ಸಪ್ಪಾ ಅನ್ನಿಸಿಬಿಟ್ಟಿತ್ತು. ಬೆಂಗಳೂರು ಬಿಟ್ಟು ಅದಾಗಲೇ 18 ಗಂಟೆಗಳಿಗೂ ಹೆಚ್ಚು ಕಾಲವಾಗಿತ್ತು.  ಕೃಷ್ಣಾ ನದಿಯ ದಡದ ಮೇಲೆ ಒಂದು 50 ಎಕರೆ ಜಾಗದಲ್ಲಿ ಇದ್ದ ಗುರುಕುಲವದು. ಕೃಷ್ಣೆ ಮೂರು ದಿಕ್ಕಿನಲ್ಲೂ  ಬಳಸಿಕೊಂಡು ಹರಿಯುತ್ತಿದ್ದಳು, ನಾಲ್ಕನೇ  ಪಕ್ಕದಲ್ಲೊಂದು ಗುಡ್ಡ, ಅದರ ಕೆಳಗೆ ಒಂದು ತಾಂಡಾ.. ಅದರಾಚೆಗೆ ಶುರುವಾದ ಕಾಡು ಎಲ್ಲಿಗೆ ಮುಗಿಯುತ್ತಿತ್ತೋ ಯಾರಿಗೆ ಗೊತ್ತು. ನಕ್ಷಲ್ ಎಂದರೆ ಭಯ ಬೀಳುತ್ತಿದ್ದವಳಿಗೆ ಅದು ನಕ್ಷಲ್ ಏರಿಯ ಎಂದು ಹೋಗುವವರೆಗೂ ಹೇಳಿರಲಿಲ್ಲ ಕೇಡಿ.

ನಗರದಲ್ಲಿದ್ದವಳನ್ನು ಅನಾಮತ್ತಾಗಿ ವಾನಪ್ರಸ್ಥಕ್ಕೆ ಕಾಡಿಗೆ ಕಳುಹಿಸಿದ ಹಾಗಿತ್ತು ಪರಿಸ್ಥಿತಿ. ಪರ್ಯಾಯ ದ್ವೀಪದಂತಹ ಜಾಗ.  ದಿನಕ್ಕೆ ಆರು ಗಂಟೆಗಳ ಕರೆಂಟ್ ಕಡಿತ ಅನ್ನೋದು ನಿಯಮ ಆದರೆ ಕರೆಂಟ್  ಬಂದರೆ ಬಂತು ಇಲ್ಲಾಂದ್ರೆ ಇಲ್ಲಾ ಅನ್ನೋ ವಾತಾವರಣ. ಆ ಕಡೆ ಕಾಡು, ಈ ಕಡೆ ನದಿ ಮಧ್ಯೆ ಇದು. ಒಂದು ಬೆಂಕಿ ಪೊಟ್ಟಣ ಬೇಕು ಅಂದರೂ ಮೈಲುಗಟ್ಟಲೆ ನಡೆದು ನದಿ ದಾಟಿ ಹೋಗಬೇಕಾದ ಪರಿಸ್ಥಿತಿ. ಆಫೀಸ್ ನಲ್ಲಿ ಇದ್ದ ಒಂದು ಮೊಬೈಲ್ ಬಿಟ್ಟರೆ ಟಿ.ವಿ ಕೂಡಾ ಇರದ ಜಾಗವದು. ಹೋದ ದಿವಸ ಯಾವುದೋ ಅನ್ಯಗ್ರಹಕ್ಕೆ ಬಂದ ಹಾಗೆ ಅನ್ನಿಸಿ ಅಪರಿಚಿತ ಭಾವ, ಬಾರದ ಭಾಷೆ, ಗೊತ್ತಿರದ ಜನಗಳು ಇಷ್ಟರ ನಡುವೆಯೂ ಚೂರು ಸಮಾಧಾನ ಕೊಟ್ಟಿದ್ದು ಮಕ್ಕಳು ಹಾಗೂ ಪಕ್ಕದ ಮನೆಯ ಒಂದು ವರ್ಷದ ಮಗು. ಅಯ್ಯೋ ಇಲ್ಲೆಲ್ಲಾ  ಇರೋಕೆ ಆಗುತ್ತಾ ಅನ್ನೋದು ಕೇವಲ ಭ್ರಮೆ ಅಥವಾ ನಾವೇ ಕಟ್ಟಿಕೊಂಡ ಅಹಂ ನ ತುಣುಕು ಅನ್ನಿಸಿದ್ದು ಒಂದೆರೆಡು ದಿನ ಕಳೆದ ಮೇಲೆಯೇ.

ಮೈದುಂಬಿ ಹರಿಯುವ ಕೃಷ್ಣೆ, ಗೋಶಾಲೆ, ಸುತ್ತ ಮುತ್ತಲೂ ಬೆಳಸಿದ ತರಾವರಿ ಗಿಡಗಳು, ಪ್ರತಿಮನೆಯ ಎದುರಿಗೂ ಒಂದು ಕೊಟ್ಟಿಗೆ, ಅದರಲ್ಲೊಂದು ಅಚ್ಚ ಬಿಳಿಯ ಬಣ್ಣದ ದನ ಅದರ ಮುದ್ದಾದ ಕರು, ಇದ್ದ ಜಾಗದಲ್ಲಿ ಬೆಳೆ ಬೆಳೆಯಲು ಉಸ್ತುವಾರಿ ನೋಡಿಕೊಳ್ಳಲು ಬರುವ ತಾಂಡಾದ ಜನಗಳು, ನವಿಲು, ಬಾತುಕೊಳಿಗಳು, ಮನೆಗಳ ಪಕ್ಕದ ವಿಶಾಲ ಜಾಗದಲ್ಲಿ ಕಟ್ಟಿದ ಕೊಳ ಅದರ ದಡದಲ್ಲಿ ಕುಳಿತ ಬೃಹದಾಕಾರದ ಗಣಪ. ನಾಗರಿಕತೆಯ ಮಡಿಲಿನಿಂದ ಪ್ರಕೃತಿಯ ತೊಟ್ಟಿಲಲ್ಲಿ ಬಂದು ಬಿದ್ದ ಬದುಕು ಎಷ್ಟು ಹೊಂದಿಕೊಂಡು ಹೋಗಿತ್ತು ಅಂದರೆ ಯಾವತ್ತೋ ಒಂದು ದಿನ ಆವಶ್ಯಕ ವಸ್ತುಗಳಿಗಾಗಿ ಪೇಟೆಗೆ ಹೋಗುವುದೂ ಬೇಡ ಅನ್ನಿಸಿ ಬೇಕಾದ ವಸ್ತುಗಳ ಚೀಟಿ ಬರೆದು ಹೋಗುವವರ ಕೈಯಲ್ಲಿ ತರಿಸಿಕೊಳ್ಳುವಷ್ಟು. ಯಾವ ಗಡಿಬಿಡಿ ಗೌಜು ಇಲ್ಲದೆ ನಿಧಾನವೆ ಹಾಸಿ ಹೊದ್ದು ಮಲಗಿದ ಹಾಗಿನ ಬದುಕು. 

ಬೇಸಿಗೆಯಲ್ಲಿ ಉರಿಬಿಸಿಲು. ಮನೆಯ ಪಕ್ಕದಲ್ಲಿ ಬೆಳೆದ ಬಾದಾಮಿ ಮರ ಮಾಡಿನ ಮೇಲೆ ಹರಡಿಕೊಂಡಿದ್ದರೂ ಧಗೆ ತಣಿಯುತ್ತಿರಲಿಲ್ಲ. ಇಷ್ಟರ ನಡುವೆ ನದಿಯ ದಡವಾಗಿದ್ದಕ್ಕೋ ಅಥವಾ ಅವುಗಳ ಅವಾಸಸ್ಥಾನವೇ ಅದಾಗಿತ್ತೋ ಎಲ್ಲಿ ನೋಡಿದರೂ ನಾಗರಗಳು. ಮನೆಯ ಹೊರಗೆ ಕಟ್ಟಿದ್ದ ಬಾತ್ ರೂಂ ಗೆ ನೋಡದೆ ಕಾಲಿಡುವ ಹಾಗೆ ಇರುತ್ತಿರಲಿಲ್ಲ. ನಡು ಮಧ್ಯ ಸಿಂಬೆ ಸುತ್ತಿ ಮಲಗಿರುತ್ತಿದ್ದ ಅವುಗಳನ್ನು ನೋಡಿ ಉಸಿರುಕಟ್ಟುತಿತ್ತು.  ಯಾವ ಕ್ಷಣದಲ್ಲಿ ಎಲ್ಲಿ ಬರುತ್ತದೋ, ಯಾವ  ಹೆಜ್ಜೆಯಡಿ ಅದು ಮಲಗಿರುತ್ತದೋ  ಅನ್ನೋ ಭಯದಲ್ಲಿ ಒಂದು ವಾರ ಉಸಿರು ಬಿಗಿಹಿಡಿದು ಓಡಾಡುತ್ತಿದ್ದವಳ ಉಸಿರು ಸಡಿಲವಾಗಿ, ಹೆಜ್ಜೆ ಹಗುರವಾಗಿದ್ದು ಯಾವಾಗ ಎಂದು ಗೊತ್ತಿಲ್ಲದಿದ್ದರೂ ಭಯ ಹೋಗಿದ್ದು ಮಾತ್ರ ಯಾರೊಂದಿಗೋ ಮಾತಾಡುತ್ತಾ ಜಗುಲಿಯಲ್ಲಿ ನಿಂತವಳ ತಲೆಗೆ ಏನೋ ತಾಗಿತು ಎಂದು ಕೈ ಯಿಂದ ಸವರಿದರೆ ತಣ್ಣನೆ ಸ್ಪರ್ಶ ತಗುಲಿತ್ತು. ನೋಡಿದರೆ  ಮಾಡಿನಲ್ಲಿ ನೇತಾಡುತ್ತಿದ್ದ ಮಾರುದ್ದ  ಗೋಧಿ ನಾಗರಕಂಡಿತ್ತು. ಹೊಟ್ಟೆಯಾಳದಿಂದ ಹೊರಟ ಚೀತ್ಕಾರವೊಂದು ಗಂಟಲಲ್ಲೇ ಸಿಲುಕಿ ಬಿಟ್ಟ ಏನು ಮಾಡಲೂ ತೋಚದೆ  ಕಣ್ಣು ಹೊರಳಿಸಲು ಆಗದೆ ದಿಟ್ಟಿಸಿ ನೋಡುವಾಗ ಅದರ ಅದು ಅಲುಗಾಡದೆ ನೋಡುತ್ತಾ ನಿಂತು ಅಲ್ಲೊಂದು ಪ್ರೇಮ ಆವಿರ್ಭವಿಸಿ ಕಾಲ ಅಲ್ಲಿಯೇ ನಿಂತುಬಿಟ್ಟಿದೆ ಎಂದು ಇಬ್ಬರೂ ಸ್ತಬ್ಧವಾಗಿ ನಿಂತಾಗ ಒಂದು ನಿಮಿಷವೂ ಮೌನವಾಗಿರದ ಮಗಳು ಯಾಕೆ ಹಾಗೆ ನಿಂತಿದ್ದಾಳೆ ಎಂದು ಅಮ್ಮ ಬಂದು ಎಚ್ಚರಿಸಿದಾಗಲೇ ಇಹಕ್ಕೆ ಮರಳಿದ್ದು. ಅದು ಸರಿದು ಹೋಗಿದ್ದು. ಭಯ ಮಾಯವಾಗಿದ್ದು.  . ಅಲ್ಲಿಂದ ನಾವೇ ಅವುಗಳ ಜಾಗದಲ್ಲಿ ಇದ್ದೇವೆ ಹೊರತು ಅವು ಅತಿಕ್ರಮಿಸಿಲ್ಲ ಅನ್ನೋದು ಗೊತ್ತಾಗಿ ಹೊಂದಿಕೊಂಡು ಬಾಳುವುದು ಕಲಿತಾಗಿತ್ತು.

ಅಷ್ಟು ಸಂಖ್ಯೆಯಲ್ಲಿ ಇದ್ದರೂ ಎಗ್ಗಿಲ್ಲದೆ ಎಲ್ಲಂದರಲ್ಲಿ ಓಡಾಡಿದರೂ ಒಬ್ಬರಿಗೂ ಕಚ್ಚಿದ್ದಾಗಲಿ, ಬುಸುಗುಟ್ಟಿದ್ದಾಗಲಿ, ತೊಂದರೆ ಕೊಟ್ಟಿದ್ದಾಗಲಿ ಇರಲಿಲ್ಲ ಅನ್ನೋದೇ ಬೆರಗು ಹುಟ್ಟಿಸುವ ಸಂಗತಿಯಾಗಿತ್ತು. ಬಹುಶಃ ಮನುಷ್ಯ ಮಾತ್ರವೇನೋ ಅಗತ್ಯವಿಲ್ಲದ ವಿಷಯದಲ್ಲಿ ಮೂಗು ತೂರಿಸುವುದು ಹಾಗೂ ಇನ್ನೊಬ್ಬರ ಬದುಕಿನಲ್ಲಿ ಅತಿಕ್ರಮಣ ಮಾಡುವುದು, ಅನಾವಶ್ಯಕ ಕುತೂಹಲ ತೋರಿಸುವುದು, ಪ್ರಕೃತಿಯಲ್ಲಿ ಮತ್ತೆಲ್ಲದೂ ತಮ್ಮ ಪಾಡಿಗೆ ತಮ್ಮ ಬದುಕು ಸಾಗಿಸುವುದುರಲ್ಲಿ ಮಾತ್ರ ಮಗ್ನವಾಗಿರುತ್ತವೆ.ಹಾಗಿದ್ದಕ್ಕೆ ಅವುಗಳ ಬದುಕೂ ನೆಮ್ಮದಿಯಾಗಿ ಸಂತೃಪ್ತವಾಗಿರುತ್ತದೇನೋ.

ಇದೆಲ್ಲದರ ನಡುವೆ ಇನ್ನೊಂದು ಮುಖ್ಯ ಸಂಗತಿಯೆಂದರೆ ಬೇಸಿಗೆಯಲ್ಲಿ ಕರೆಂಟ್ ಇಲ್ಲದ ರಾತ್ರಿಗಳ ಪಾಡು.  ಉಸಿರುಗಟ್ಟಿಸುವ ಹಾಗೆ ಮಾಡುವ ಧಗೆಯಲ್ಲಿ ಒಳಗೆ ಮಲಗಲಾಗದೆ ಬಹಳಷ್ಟು ಜನರು ಹೊರಗೆ ಮಲಗುತ್ತಿದ್ದರು. ಹಗ್ಗದ ಮಂಚವನ್ನು ಹೊರಗಿನ ಅಂಗಳದಲ್ಲಿ ಹಾಕಿಕೊಂಡು ಮಲಗಿದರೆ ಒಳ್ಳೆಯ ನಿದ್ದೆ. ಇವತ್ತಿಗೂ ಅಲ್ಲಿ ಬೇಸಿಗೆಯಲ್ಲಿ ಇದು ಸಾಮಾನ್ಯವಾಗಿರುತ್ತೆ. ಮನೆಯ ಮಹಡಿಯ ಮೇಲೋ, ಇಲ್ಲಾ ಅಂಗಳದಲ್ಲೋ ಒಂದು ಮಂಚ ಅದರ ಮೇಲೆ ನಿದ್ದೆ ಅವರ ಬದುಕಿನ ಸಹಜ ಸಂಗತಿಗಳಲ್ಲೊಂದು. ನಮ್ಮ ಮನೆಯ ಎದುರಿಗೆ ನೆಟ್ಟ ಗಿಡಗಳು ದೊಡ್ಡದಾಗಿ ಬೆಳೆದು ಅಂಗಳದಲ್ಲಿ ಜಾಗವಿಲ್ಲದೆ ಜಗುಲಿಯ ಕಟ್ಟೆಯ ಮೇಲೆ ನಾನೂ ಕೆಳಗೆ ಅಣ್ಣನೂ ಮಲಗಲು ನಿರ್ಧರಿಸಿ ಹೊರಗೆ ಬಂದರೆ ಅಮ್ಮ ಮಾತ್ರ ಒಳಗೆ ಉಳಿದಿದ್ದಳು.

ಗಾಳಿಯೂ ಬೀಸದೆ ಹೊರಗೆ ಮಲಗಿದರೂ ನಿದ್ದೆ ಬಾರದೆ ಸೊಳ್ಳೆಗಳ ಕಾಟಕ್ಕೆ ಬೆಚ್ಚುತ್ತಾ, ಕರೆಂಟ್ ಶಪಿಸುತ್ತಾ ಇದ್ದವರಿಗೆ ಬೆಳಗಿನ ಜಾವದಲ್ಲಿ ಸಣ್ಣಗೆ ನಿದ್ದೆ ಹತ್ತುವ ಸಮಯ. ತಣ್ಣನೆ ಗಾಳಿ ಶುರುವಾಗಿ ವಾತಾವರಣ ತಂಪಾಗಿ ಆಹಾ ಎಂದು ಮೈ ಮನಸ್ಸು ತಂಪಾಗುವ ಹೊತ್ತಿಗೆ ಮಲ್ಲಿಗೆಯ ಘಮ. ಮೈ ತುಂಬಾ ಹೂ ಬಿಟ್ಟ ಮಲ್ಲಿಗೆಯ ಹಂಬು ಪಕ್ಕದಲ್ಲೇ ಇದೆಯನೋ ಯಾರೋ ಅದನ್ನು ಬಿಡಿಸಿ ತಂದು ಮೂಗಿಗೆ ಹಿಡಿದಿದ್ದಾರೆ  ಅನ್ನುವಷ್ಟು ಘಮ. ಕಣ್ಣು ಬಿಟ್ಟು ನೋಡಬೇಕು ಅನ್ನಿಸಿದರೂ ಆ ಘಮ, ತಂಪುಗಾಳಿ, ಅಲ್ಲಿಯವರೆಗೂ ಕಾಡಿದ ನಿದ್ದೆ  ಆವರಿಸುವ ಹಾಗೆ ಮಾಡಿ ಪಕ್ಕದಲ್ಲಿ ಯಾವುದೋ ಅತಿ ವೇಗವಾಗಿ ಸರ್ರ್ರೆಂದು ಸರಿದುಹೋದ ಸದ್ದು ಕನಸಿನಲ್ಲಿ ಕೇಳಿದ ಹಾಗಾಗಿ  ಎಚ್ಚರವಾದಾಗ ಮಲ್ಲಿಗೆಯಂತ ಬೆಳಕು ಸುತ್ತಲೂ. ಮಕ್ಕಳು ಆಗಲೇ ವೇದ ಕಂಠಪಾಠ ಮಾಡಲು ಶುರುವಾಗಿತ್ತು.

ಎದ್ದು ಮುಖ ತೊಳೆದು ಸೋಮಾರಿತನದಿಂದಲೇ ಮೆಟ್ಟಿಲು ಮೇಲೆ ಕಾಫಿ ಹೀರುತ್ತಾ ಕುಳಿತಾಗ ಪಕ್ಕನೆ ಮಲ್ಲಿಗೆಯ ಘಮದ ನೆನಪಾಗಿ ಸುತ್ತಲೂ ಹುಡುಕಿದರೆ ಇಲ್ಲ. ಬೇರೆಲ್ಲಾ ತರಾನುತರಹ ಹೂ ಗಿಡಗಳಿದ್ದ  ಇಡೀ ಗುರುಕುಲದ ಆವರಣದಲ್ಲಿ ಒಂದೇ ಒಂದು ಮಲ್ಲಿಗೆ ಬಳ್ಳಿಯೂ ಇರಲಿಲ್ಲ. ಅಣ್ಣನನ್ನು ಕೇಳಿದರೆ ಅವನಿಗೂ ಅದೇ ಅನುಭವ ಜೊತೆಗೆ ಪಕ್ಕದಲ್ಲಿಯೇ ಏನೋ ಸರಿದು ಹೋದ ಸದ್ದು. ಇದೇನು ಕತೆ ಎಂದು ಕೊಳ್ಳುವಾಗಲೇ ದನವನ್ನು ಮೇಯಲುಬಿಡಲು ಭಾವನಾ ಬಂದಿದ್ದ. ಪಕ್ಕದ ತಾಂಡಾದ ಮುಗ್ಧ ಭಾವನ ಇನ್ನೂ  ನಾಗರಿಕತೆಗೆ ತೆರೆದುಕೊಳ್ಳದ ಜೀವ. ಬುದ್ಧಿ ಬಂದಾಗಲಿನಿಂದ ಅಲ್ಲಿಯ ದನಗಳನ್ನು ಬೆಳಗ್ಗೆ ಮೇಯಲು ಕರೆದುಕೊಂಡು ಹೋದರೆ ಸಂಜೆಯ ಹೊತ್ತಿಗೆ ವಾಪಸ್ ಕರೆತರುತಿದ್ದ. ಅವುಗಳಿಗೆ ನೀರು ಕೊಡುವುದು, ಸ್ನಾನ ಮಾಡಿಸುವುದು, ಕಟ್ಟಿ ಹಾಕುವುದು, ಹಾಲು ಕರೆಯುವುದು ಇಷ್ಟೇ ಅವನ ಜಗತ್ತು. ಮಕ್ಕಳಷ್ಟೇ ಮುಗ್ಧತೆ ಮಾತಿನಲ್ಲಿ ಅಷ್ಟೇ ಪ್ರಾಮಾಣಿಕ ವರ್ತನೆ. ಅವನ ಬಳಿ ಮಲ್ಲಿಗೆ ಗಿಡ ಎಲ್ಲಿದೆ ಇಲ್ಲಿ ರಾತ್ರಿಯೆಲ್ಲಾ ಒಂದೇ ಪರಿಮಳ ಎಂದರೆ ಬೆಚ್ಚಿ ಬಿದ್ದ. ಅಣ್ಣ ಮಲಗಿದ ಜಾಗ ಅಲ್ಲಿಂದ ಒಂದು ಇಂಚು ಬಿಟ್ಟು ಯಾವುದೋ ಹರಿದು ಹೋದ ಗುರುತು ನೋಡಿ ಕಾಫಿಯ ಲೋಟ ಕೆಲಗಿಟ್ಟವನೇ  ಭಯದಿಂದ 

ಅಮ್ಮಗಾರು ನೀವು ಕಣ್ಣು ಬಿಟ್ಟು ನೋಡಿಲ್ಲ ತಾನೇ ಎಂದು ಅಂಜಿಕೆಯ ಸ್ವರದಲ್ಲಿ ಕೇಳುವಾಗ ಇನ್ನಷ್ಟು ಕುತೂಹಲ. ಯಾಕೋ ಏನಾಯ್ತು ಅಂದರೆ ಅದು  ದೇವನಾಗ ಅಮ್ಮಗಾರು. ಅದು ಹೋಗುವಾಗ ಮಲ್ಲಿಗೆಯ ಪರಿಮಳ ಬರುತ್ತೆ. ಅದನ್ನು ನರಮನುಷ್ಯರು ನೋಡಬಾರದು ಎಂದು ಕೆನ್ನೆ ಬಡಿದುಕೊಂಡು ಇನ್ಮೇಲೆ ಹೀಗೆಲ್ಲಾ ಹೊರಗೆ ಕೆಳಗೆ ಮಲಗಬೇಡಿ ಅಮ್ಮಗಾರು ಮಂಚಿದಿ ಕಾದು ಅಲಾ ಪರಿಮಳಂ ವಸ್ತೆ ಮೀರು ಲೋಪಲಿಕೆ ವೆಳ್ಳಂಡಿ ದಯಚೇಸಿ ಅಮ್ಮಗಾರು  ಎಂದು ಹೋಗುವವನ್ನು ನೋಡಿ ನಿಜವೋ ಸುಳ್ಳೋ ಅನ್ನುವ ಗೊಂದಲ. ಸುಳ್ಳು ಹೇಳುವವನು ಅವನಲ್ಲ ಎಂದು ಗೊತ್ತಿದ್ದರೂ ಹೇಳಿದ ವಿಷಯ ನಂಬಬೇಕೋ ಬೇಡವೋ ಅನ್ನುವ ಗಲಿಬಿಲಿ. ಆಮೇಲೆ ಉಳಿದ ಗುರುಗಳ ಜೊತೆ ಮಾತಾಡುತ್ತಾ ವಿಷ್ಯ ಪ್ರಸ್ತಾಪಿಸಿದರೆ ಅವರಿಂದ ಬಂದ ಉತ್ತರವೂ ಅದೇ ಆಗಿತ್ತು. ಒಂದು ಸಲ ಮೈ ಜುಮ್ ಅನ್ನಿಸಿ ಹೇಳಲಾಗದ ಬೆರಗು ಭಯ ಎರಡೂ... ಅವತ್ತೇ ರಾತ್ರಿ ಭಾವನ ಎರಡು ಮಂಚ ತಂದು ಇಟ್ಟಿದ್ದ. ಕೆಳಗೆ ಮಲಗಬೇಡಿ ಎಂದು ಆದೇಶಿಸಿದ್ದ. ಅಣ್ಣನನ್ನು ಅದು ಸರಿದು ಹೋದ ಗುರುತನ್ನು ಮತ್ತೆ ಮತ್ತೆ ನೋಡುತ್ತಾ ಕುಳಿತಿದ್ದೆ. 

ಆಮೇಲಾಮೇಲೆ ರಾತ್ರಿಯ ವೇಳೆಯಲ್ಲೋ, ಬ್ರಾಹ್ಮಿ ಮಹೂರ್ತದಲ್ಲೋ ಈ ಪರಿಮಳ ಸುಳಿಯುವಾಗ ಇದು ಪಕ್ಕನೆ ನೆನಪಾಗಿ ಒಳಗಿದ್ದರೂ ಕಣ್ಣು ಮುಚ್ಚಿಕೊಳ್ಳುತ್ತಿದ್ದೆ. ನೋಡಬೇಕು ಅನ್ನುವ ಕುತೂಹಲ ಬೆಟ್ಟದಷ್ಟಿದ್ದರೂ ಅದ್ಯಾಕೋ ಕಣ್ಣು ತಂತಾನೇ ಮುಚ್ಚಿಕೊಳ್ಳುತಿತ್ತು. ಅಲ್ಲಿದ್ದ ಎರಡು ವರ್ಷಗಳೂ ಇದೆ ಅನುಭವ. ನೂರಾರು ಎಕರೆ ಜಾಗದಲ್ಲಿನ ಉಸ್ತುವಾರಿ ವಹಿಸಿಕೊಂಡು, ವ್ಯವಸಾಯ ಮಾಡಿಸುವಾಗ, ಗುಡ್ಡದ ಮೇಲೆ ಶಾರದಾ ದೇವಿಯ ದೇವಸ್ಥಾನ ಕಟ್ಟಿಸುವಾಗ, ಗುಡ್ಡ ಹತ್ತಿ ಒಬ್ಬಳೇ ಓಡಾಡುವಾಗ ಈ ಪರಿಮಳ ಪಕ್ಕದಲ್ಲೇ ಸಾಗಿಹೋದ ಅನುಭವ, ತಣ್ಣನೆಯ ಭಾವ. ನೋಡಬೇಕು ಅನ್ನಿಸಿದಾಗ ಪಕ್ಕನೆ ಎದುರು ಕಾಣಿಸಿಕೊಳ್ಳುವ ಗೋಧಿನಾಗರ ಬಿಟ್ಟರೆ ಈ ದೇವ ನಾಗರ ಕಾಣಿಸಿಕೊಳ್ಳಲೇ ಇಲ್ಲ. ಆ ಊರು ಬಿಟ್ಟ ಬಂದ ಮೇಲೆ ಮಲ್ಲಿಗೆಯ ಘಮವೂ ಮೂಗಿಗೆ ಅಡರಲಿಲ್ಲ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...