ಎಚ್ಚರವಿದ್ದಷ್ಟು ಹೊತ್ತೂ ಕೈ, ಕಾಲು, ಬಾಯಿ ಯಾವುದೂ ಸುಮ್ಮನಿರೊಲ್ಲ ಇದಕ್ಕೆ ಅಂತ ದಿನಾಲು ಅಜ್ಜಿ ಬೈಯುವುದು  ದೇವಸ್ಥಾನದಲ್ಲಿ  ಬೆಳಿಗ್ಗೆ ಹಾಕುವ ಸುಪ್ರಭಾತದ ಹಾಗೆ ಅಭ್ಯಾಸವಾಗಿ ಹೋಗಿತ್ತು. ರಾತ್ರಿ ಮಲಗುವಾಗಲೂ ಹಾಗೆ ನಿದ್ದೆ ಬಂದಾಗಲೂ ಹಾಗೆ ಯಾವುದೋ ನೃತ್ಯವೋ, ಮಾಡಿದ ಜಗಳವೋ, ಆಡಿದ ಆಟವೋ  ನೆನಪಾಗಿ ನಿದ್ದೆಯ ಮತ್ತಿನಲ್ಲೂ ಅದೂ ಮುಂದುವರಿಯುತ್ತಿತ್ತು. ಒಬ್ಬಳೇ ಮಲಗುವುದು ಕನಸಿನಲ್ಲೂ ಯೋಚಿಸದ ವಿಷಯವಾಗಿದ್ದರಿಂದ ರಾತ್ರಿ ಆಗುತ್ತಿದ್ದ ಹಾಗೆ ಯಾರ ಜೊತೆ ಎಂದು ಶುರುಮಾಡುತ್ತಿದ್ದರಿಂದ  ಅದು ಗೊತ್ತಿದ್ದರಿಂದ ಅಜ್ಜ ಅಂಗಳದ ಆ ಮೂಲೆಯ ದೊಡ್ಡ ಅಶ್ವತ್ಥ ಮರ ತೋರಿಸಿ ರಾತ್ರಿ ಬ್ರಹ್ಮ ರಾಕ್ಷಸ  ಅದರಿಂದ ಇಳಿದು ಅಂಗಳದ ಕೆಳಗಿನ ಬಾವಿಗೆ ಸ್ನಾನಕ್ಕೆ ಬರುವ ಕತೆ ಹೇಳಿ ಪಕ್ಕ ಮಲಗುವುದನ್ನು ತಪ್ಪಿಸಿಕೊಂಡರೆ ಅಜ್ಜಿ ಪುಟ್ಟ ಮಂಚ ತೋರಿಸಿ ಅಸಹಾಯಕತೆ ನಟಿಸುತ್ತಿದ್ದಳು. ಅಲ್ಲಿಗೆ ಮತ್ತೆ ಬಲಿಪಶು ಆಗುತ್ತಿದ್ದದ್ದು ಅಣ್ಣ ಹಾಗೂ ಚಿಕ್ಕಮ್ಮ. ಅವರಿಬ್ಬರ ಮಧ್ಯೆ ಮಲಗಿರುತ್ತಿದ್ದ ನಾನು ಬೆಳಿಗ್ಗೆ ಏಳುವಾಗ ತಮ್ಮದೇ ರಾಜ್ಯದಿಂದ ಗಡೀಪಾರಾದ ಮುಕುಟವಿಲ್ಲದ ರಾಜರಂತೆ ಅವರು ನೆಲದ ಮೇಲೆ ಮಲಗಿರುತ್ತಿದ್ದರು. ಅಖಂಡ ಸಾಮ್ರಾಜ್ಯಾಧಿಪತಿಯಂತೆ ನಾನು ಮೂರೂ ಹಾಸಿಗೆಯಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿರುತ್ತಿದ್ದೆ.

ಆಮೇಲಾಮೇಲೆ ಆರ್ಭಟ ಕಡಿಮೆಯಾದರೂ ಎಡಕ್ಕೆ ಹೊರಳಿ, ಬಲಕ್ಕೆ ತಿರುಗಿ, ಕವುಚಿ, ಅಂಗಾತ ಹೀಗೆ ನಿದ್ದೆ ಬರುವವರೆಗೆ ಹೊರಳಾಟ ನಡೆಯುತ್ತಿತ್ತು. ಹಾಸ್ಟೆಲ್, ಕೆಲಸ ಅಂತ ಬಂದ  ಮೇಲೆ ಒಬ್ಬಳೇ ಮಲಗುವುದು ಅನಿವಾರ್ಯವಾಗಿ ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡು ಅದು ರೂಢಿ ಆಗಿ ಹಾಗೆ ನಾನೇ ನಾನಾಗಿ ಯಾವುದೇ ಅಡತಡೆಯಿಲ್ಲದೆ ಇದ್ದವಳಿಗೆ ಇನ್ನು ಮೇಲೆ ಆದಷ್ಟು ಎಡಕ್ಕೆ ತಿರುಗಿ ಮಲಗಿ ಅಂಗಾತ ಮಲಗಿದರೂ ಪರವಾಗಿಲ್ಲ ಆದ್ರೆ ನಿಧಾನಕ್ಕೆ ನಿಮಗೇ ಕಷ್ಟ ಅನ್ನಿಸುತ್ತೆ ಅಂತ ಡಾಕ್ಟರ್ ಅಂದಾಗ ಮೊತ್ತ ಮೊದಲ ಬಾರಿಗೆ ಬೆಚ್ಚಿಬಿದ್ದಿದ್ದೆ. ತಾಯಿ ಆಗೋದು ಅಂದ್ರೆ ಸಂಭ್ರಮ, ಜವಾಬ್ದಾರಿ ಮಾತ್ರವಲ್ಲ ನಾನು ಅನ್ನೋದಕ್ಕೆ ಕಡಿವಾಣ ಕೂಡಾ ಅನ್ನೋದು ಅರ್ಥವಾಗಿತ್ತು. ದಿನಕಳೆದಂತೆ ಅಂಗಾತ ಮಲಗಿದರೂ ಉಸಿರು ಹಿಡಿದಂತೆ ಆಗಲು ಶುರುವಾಗ ತೊಡಗಿದಾಗ ಎಡಕ್ಕೆ ಮಾತ್ರ ತಿರುಗಿ ಮಲಗುವುದು ಅನಿವಾರ್ಯವಾಗಿ ಹೋಯಿತು. ಮಲಗುವುದಕ್ಕೂ ನಿರ್ಬಂಧವೇ ಅನ್ನಿಸಿದರೂ ಹೊಟ್ಟೆಯ ಜೀವ ಮಿಸುಕಾಡುವಾಗ, ಥೈ ಥೈ ಎಂದು ಕುಣಿಯುವಾಗ ಮರೆತು ಹೋದ ಹಾಗೆ ಆಗುತಿತ್ತು. ಯಾವಾಗ ನನ್ನಿಷ್ಟದ ಹಾಗೆ ಯಾವ ಕಡೆ ಬೇಕಾದಾರೂ ಹೇಗೆ ಬೇಕಾದರೂ ಮಲಗುವ ಸುಖ ಸಿಕ್ಕಿತು ಎಂದು ಕಾಡುತ್ತಿದ್ದದ್ದು ಮಾತ್ರ ಸುಳ್ಳಲ್ಲ.

ಅವಳು ಹೊರಗೆ ಬಂದು ಮೈ ಭಾರ ಇಳಿದು ಉಸ್ಸಪ್ಪಾ ಎಂದು ಉಸಿರುಬಿಡುವ ಹೊತ್ತಿಗೆ ಇನ್ನು ನನ್ನ ನಿದ್ದೆಯ ಸ್ವಾತಂತ್ರ್ಯ ಸಿಕ್ಕಿತು ಎಂದು ಖುಷಿಯಾಗಿ ಸ್ವಲ್ಪ ಹೊತ್ತಿಗೆ  ಓ ಭ್ರಮೆ ಅನ್ನಿಸಿದ್ದು  ಮಲಗಿ ಸ್ವಲ್ಪ ಹೊತ್ತಿಗೆ ಅವಳು ಹಾಲಿಗಾಗಿ ಅತ್ತಾಗಲೇ.  ಒಮ್ಮೆ ಕಳೆದುಕೊಂಡಿದ್ದು ಮತ್ತೆ ಸಿಗುವುದು ವಿರಳದಲ್ಲಿ ವಿರಳ ಎನ್ನುವ ಸತ್ಯ ಆ ನಡುರಾತ್ರಿ ಅರ್ಥವಾಗಿತ್ತು. ಆಮೇಲಾಮೇಲೆ ನಿದ್ದೆ ಅನ್ನುವುದು ಪ್ರಪಂಚದ ಅಮೂಲ್ಯ ವಸ್ತು ಅನ್ನಿಸಿ ಅವಳು ಮಲಗಿದಾಗ ನಾನೂ ಮಲಗುವ ಅವಳು ಎದ್ದಾಗ ನಾನೂ ಏಳುವ  ಸಮಯ ಸಿಕ್ಕಾಗ ಗುಬ್ಬಿ ನಿದ್ದೆ ಮಾಡುವ ಅಭ್ಯಾಸ ರೂಡಿ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿ ನಿಧಾನಕ್ಕೆ ಅದು ಅಭ್ಯಾಸವಾಗುವ ಹೊತ್ತಿಗೆ ಇವಳು ಹೊಸ ವರಸೆ ಶುರು ಮಾಡಿದ್ದಳು. ಬೆಳಿಗ್ಗೆಯಿಂದ ಎಲ್ಲರ ಜೊತೆ ಆಟವಾಡಿದರೂ, ಯಾರು ಎತ್ತಿಕೊಂಡರೂ ಹೋಗುವವಳು  ರಾತ್ರಿ ಆಗುತ್ತಿದ್ದ ಹಾಗೆ ಹಾಸಿಗೆಯ ಮೇಲೆ ಅಮ್ಮನ ಹೊರತು ಅಜ್ಜಿಯನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಮೂರು ತಿಂಗಳಿಗೆ ತೊಟ್ಟಿಲು ಬಿಟ್ಟು ಹಾಸಿಗೆಯಲ್ಲಿ ಮಲಗುವ ಹಂಬಲ. ಅಮ್ಮನ ಮೈ ಬಿಸಿ ತಾಕುವಷ್ಟು ಹೊತ್ತು ನೆಮ್ಮದಿಯ ನಿದ್ದೆ ಅವಳದ್ದು.

ಅವಳು ಬೆಳೆಯುತ್ತಾ ಬಂದ ಹಾಗೆ ಈ ಅಭ್ಯಾಸವೂ ಬೆಳೆದು ಕವುಚಿಕೊಂಡು ಮುಂದೆ ಹೋಗುವ ಹಾಗಾದ ಮೇಲೆ ಮೈ ಮೇಲೆ ಹತ್ತಿ ಮಲಗಲು ಶುರುಮಾಡಿತ್ತು ಗುಬ್ಬಿಮರಿ. ಆದರೆ ಮಲಗುತ್ತಿದ್ದದ್ದು ಮಾತ್ರ ಥೇಟ್ ಕೋತಿಮರಿಯಂತೆ ಅವುಚಿಕೊಂಡು. ಹಾಗೆ ಮಲಗಿ ಮಲಗಿ ಕತ್ತಿನ, ಎದೆ ಭಾಗದ ಮೂಳೆಗಳು ನೋಯ್ಯಲು ಶುರುವಾಗಿ, ತಾಯಿ ಮೈ ಬಿಸಿ ತಾಕುತ್ತಿದ್ದರೆ ಮಗು ಮೈ ಹತ್ತಲ್ಲ ಕಣೆ ಅನ್ನುವ ಅಜ್ಜಿಯ ಮಾತು ಕೇಳಿ ನಿದ್ದೆ ಬಂದ ಮೇಲೆ ಪಕ್ಕಕ್ಕೆ ಮಲಗಿಸಿದರೆ ಅದ್ಯಾವುದೋ ಮಾಯದಲ್ಲಿ ಕಪ್ಪೆ ಮರಿಯಂತೆ ಮತ್ತೆ ಜಿಗಿದು ಮಲಗುತಿತ್ತು. ಸ್ವಲ್ಪ ದೊಡ್ಡವಳಾದ ಮೇಲೆ ಕತ್ತಿನ ಸುತ್ತ ಕೈ ಹಾಕಿ ಅವುಚಿಕೊಂಡು ಮಲಗಲು ಶುರುಮಾಡಿತ್ತು. ಉಸಿರುಗಟ್ಟುವ ಹಾಗಾದರೂ ಅವಳ ನಿದ್ದೆ ಹಾಳಾಗಬಾರದು ಅನ್ನುವ ಕಾರಣಕ್ಕೆ ಅಭ್ಯಾಸವೂ ಆಗಿ ಹೋಯಿತು. ಹೀಗೆ ಇಡೀ ದಿನ ಆವರಿಸಿಕೊಂಡು ಅಮ್ಮನ ಮೈ ಬಿಸಿ ತಾಗದೆ ಇದ್ದರೆ ಮಲಗುವುದೇ ಇಲ್ಲವೇನೋ ಎಂದಿದ್ದ ಮಗಳಿಗೆ ನೆಮ್ಮದಿಯ ನಿದ್ದೆ ಬರಲಿ ಎಂದು ಹೊಂದಿಕೊಂಡು ಹೋಗುತ್ತಿದ್ದೆ ಎಂದುಕೊಳ್ಳುತ್ತಿದ್ದೆ. ನನ್ನ ಪಾಡಿಗೆ ನಾನು ಮಲಗೋಕೂ ಸ್ವಾತಂತ್ರ್ಯ ಇಲ್ಲ ನೋಡು ಎಂದು ಕೆಲವೊಮ್ಮೆ ಗೊಣಗುತ್ತಿದ್ದೆ. ಅದು ನಕ್ಕು ಮತ್ತಷ್ಟು ಅಂಟಿಕೊಳ್ಳುತಿತ್ತು.

ಹೀಗೆ ಅಂಟಿಕೊಳ್ಳುತ್ತೆ ಅಂತ ಬೆಕ್ಕಿನ ಮರಿಯನ್ನು ಇಷ್ಟಪಡದೆ ಇದ್ದವಳು ನಾನು ನೋಡು ಹೇಗಾದೆ ಎಂದರೆ ಅಮ್ಮಾ ಅಂದ್ರೆ ಹಿಂಗೆ ಕಣೆ ಅಂತ ಪುಟ್ಟ ಬಾಯಲ್ಲಿ ದೊಡ್ಡ ಮಾತು ಆಡುತ್ತಿದ್ದವಳು ಅವಳು. ಇಂಚಿಂಚೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾ ಹೋದಾಗ ಅದು ದೊಡ್ಡ ವಿಷಯ ಅನ್ನಿಸುವುದಿಲ್ಲವೇನೋ... ನಿಧಾನಕ್ಕೆ ಅಭ್ಯಾಸವಾಗಿ ಅಮೇಲೆ ಅದೇ ಬದುಕಾಗಿ ಬಿಡುತ್ತದೇನೋ. ಮನಸು ದೇಹ ಎರಡೂ ಯಾವುದಕ್ಕಾದರೂ ಒಗ್ಗಿಕೊಳ್ಳುವುದು ನಿಧಾನವಾದರೂ ಒಮ್ಮೆ ಒಗ್ಗಿಕೊಂಡರೆ ಹಾಗೆ ಇತ್ತೇನೋ ಅನ್ನಿಸುವಷ್ಟರ ಮಟ್ಟಿಗೆ ಒಗ್ಗಿಕೊಂಡು ಬಿಡುತ್ತವೆ. ಹಾಗಾಗಿ ಕಿಂಗ್ ಸೈಜ್ ನ ಹಾಸಿಗೆಯ ಆ ತುದಿಯಲ್ಲಿ ಮಲಗಿದ್ದರೂ ನಡುರಾತ್ರಿಯ ಹೊತ್ತಿಗೆ ಈ ತುದಿಗೆ ಬಂದು ಇನ್ನು ಕೊಂಚ ಜರುಗಿದರೂ ಕೆಳಗೆ ಬೀಳುತ್ತೇನೆ ಅನ್ನುವ ಹಾಗೆ ಅತ್ತಿತ್ತ ಹೊರಳದೆ ಮಲಗುತ್ತಿದ್ದದ್ದು ನಾನೇನಾ ಅಂತ ಆಶ್ಚರ್ಯ ಪಡುತ್ತಿದ್ದದ್ದೂ ಅದೆಷ್ಟು ಸಲವೋ... ಅವಳು ಮಾತ್ರ ನನ್ನ ಹಾಗೆ ಇಡೀ ಹಾಸಿಗೆಯಲ್ಲಿ ಮಲಗಿ ನಿದ್ದೆ ಹೊಡೆಯುತ್ತಿದ್ದಳು. ಅಂದು ಮಹಾ ಸಾಮ್ರಾಜ್ಞಿ ಆಗಿದ್ದ ನಾನು ಇಂದು ಪಾಂಡವರ ಹಾಗೆ ಇಂಚು ಜಾಗ ಸಿಕ್ಕರೂ ಸಾಕು ಎಂದು ಕೇಳುವ ಸ್ಥಿತಿಗೆ ತಲುಪಿದ್ದೀನಿ. ಹೇಗಿದ್ದೆ ಹೇಗಾದೆ ನೋಡು ಎಂದು ಒಮ್ಮೊಮ್ಮೆ ಗೊಣಗುವುದು ಇದ್ದರೂ ಅವಳು ಅದನ್ನು ಕಿವಿಯಮೇಲೂ ಹಾಕಿಕೊಳ್ಳುತ್ತಿರಲಿಲ್ಲ. 


ರಾತ್ರಿ ಊಟಮಾಡಿ ಕೈತೊಳೆದು ಬರುವ ಹೊತ್ತಿಗೆ ಗುಡುಗು ಮಿಂಚು. ಇವತ್ತೂ ಭಾರಿ ಮಳೆ ಸುರಿಯಬಹುದೇನೋ ಎಂದುಕೊಳ್ಳುತ್ತಾ ಕೆಲಸ ಮುಗಿಸಿ ಮಲಗಲು ಬಂದರೆ ರಜಾಯಿ ಹಿಡಿದು ಅಮ್ಮಾ ನಾನು ಇವತ್ತು ನನ್ನ ರೂಮ್ ಅಲ್ಲಿ  ಒಬ್ಬಳೇ ಮಲಗ್ತೀನಿ, ನನ್ನ ಫ್ರೆಂಡ್ಸ್ ಎಲ್ಲಾ ಒಬ್ಬರೇ ಬೇರೆ ಮಲಗ್ತಾರಂತೆ . ನಾನೂ  ಅಭ್ಯಾಸ ಮಾಡ್ಕೊತೀನಿ ಎಂದು ಮಗಳು ಹೇಳಿದಾಗ ಒಳಗೆಲ್ಲೋ ಸಣ್ಣ ಕಿರಿಕಿರಿ, ಏನೋ ಕಳೆದುಕೊಂಡ ಭಾವ. ಜಗತ್ತೇ ಶೂನ್ಯವಾದ ಹಾಗೆ.  ಹೊರಗೆ ದಿಟ್ಟಿಸಿದರೆ  ಆಕಾಶದಲ್ಲಿ ಮೋಡ ಹಾಗೆಯೇ ಹೆಪ್ಪುಗಟ್ಟಿ ಕುಳಿತಿತ್ತು......
ಉಸಿರುಗಟ್ಟಿದ ಹಾಗೆ ಕುಳಿತವಳನ್ನು ಕಂಡು ಇವತ್ತು ಇಲ್ಲೇ ಮಲಗ್ತೀನಿ ಬಿಡು ಅಂತೂ ಕೂಸು.  
ಬಂಧನದಿಂದ ಬಯಲಿಗೆ ಬರುವುದು ಅದೆಷ್ಟು ಕಷ್ಟ ಅನ್ನುತ್ತಲೇ ಹೂ ಅಂದೇ...
 
ಎಲ್ಲಾ ಮೋಡವೂ ಮಳೆ ಸುರಿಸುವುದಿಲ್ಲವಲ್ಲ ಎಂದುಕೊಂಡರೂ ಮಳೆ ಸುರಿಯದೆ ಅದಕ್ಕೆ ಬಿಡುಗಡೆಯಿಲ್ಲ ಎನ್ನುವುದಂತೂ ಸತ್ಯ ಕಣೆ ಎಂದು ಎಂದೋ ಅಜ್ಜಿ ನುಡಿದ ಮಾತು ನೆನಪಾಯಿತು....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...