ಸಂಪಗೋಡು (ಹನಿ ಕಡಿಯದ ಮಳೆ )

ಮುಂದಿನವಾರ ಲಾರಿ ಬರುತ್ತೆ, ಅಷ್ಟರೊಳಗೆ ಸಾಮಾನೆಲ್ಲಾ ಪ್ಯಾಕ್ ಮಾಡಬೇಕು ಎಂದು ಮಾವ ಅಜ್ಜಿಯ ಬಳಿ ಹೇಳುತಿದ್ದದ್ದು ಅಂಗಳದಲ್ಲಿ ಕುಂಟಪಿಲ್ಲೆ ಆಡುತಿದ್ದ ನನ್ನ  ಕಿವಿಗೆ ಬಿದ್ದಾಗ ಯಾಕೋ ಆಟ ಮುಂದುವರಿಸುವ ಮನಸ್ಸಾಗಲಿಲ್ಲ. ಏನಾಯ್ತೆ?  ನಿಂದೇ ಆಟ ತಗೋ ಎಂದು ಬಚ್ಚೆ ಕೊಡಲು ಬಂದ ಜಯಂತಿಯ ಕೈ ಸರಿಸಿ ಇವತ್ತಿಗೆ ಸಾಕು ಕಣೆ ಅಂದಾಗ ಜಯಂತಿಗೆ ಜಗತ್ತಿನ ಎಂಟನೆ ಅದ್ಭುತ ಅನ್ನಿಸಿತ್ತು.

ಹದಿನೈದು ಇಪ್ಪತ್ತು ಮನೆಗಳಿರುವ ಪುಟ್ಟ ಊರು ಅದು. ವಕ್ರ ರೇಖೆಯೊಂದು ಹಾದುಹೋಗುವಂತೆ ಕಟ್ಟಿದ ಮನೆಗಳು. ಎರಡೂ ಕೈ ಬೆರಳುಗಳ ಸಹಾಯದಿಂದ ಎಣಿಸುವಷ್ಟು ಜನಗಳು. ಆ ಕಡೆ ಸೋಮಯಾಜಿಗಳ ಮನೆಯಿಂದ ಶುರುವಾದರೆ ಕೆಳಗೆ ಅಪ್ಪಿನಾಯಕನ ಮನೆ,  ಹೀಗೆ ನಾಲಕ್ಕೈದು ಮನೆಗಳು ಸಾಲಾಗಿರುವಾಗಲೇ ಅಲ್ಲೊಂದು ದೊಡ್ಡ ಅಶ್ವತ್ಥ ಕಟ್ಟೆಯಿತ್ತು. ಅದರ ಪಕ್ಕವೇ ನಮ್ಮ ಮನೆ. ಅಲ್ಲಿಂದ ಮೇಲಕ್ಕೆ ಸಾಗುವ ಮಣ್ಣಿನ ದಾರಿಯಲ್ಲಿ ಒಂದು ಐವತ್ತು ಹೆಜ್ಜೆ ನಡೆದರೆ ಸಿಗೋದು ಗುಂಡಯ್ಯನ ಮನೆ. ಅದರಾಚೆಗೆ ಸಣ್ಣಗೆ ಸರಿದು ಹೋಗುವ ರಸ್ತೆ ಕೊನೆಯಾಗುತ್ತಿದ್ದದ್ದು ವೆಂಕಟರಮಣನ ಗುಡಿಯ ಅಂಗಳದಲ್ಲಿ. ಅದರ ಹಿಂಬಾಗ ಮಾಸ್ತಿ ಕಾಡಿನ ಅಂಚು ಅಲ್ಲಿಂದ ಮುಂದೆ ದಾರಿಯಿಲ್ಲ ಊರೂ ಇಲ್ಲ. ದಟ್ಟ ಕಾಡು ಅಷ್ಟೇ... ಪ್ರತಿ ದಾರಿಗೂ ಒಂದು ಅಂತ್ಯವಿದೆಯೇ... ಒಂದು ಕೊನೆಯೇ ಇನ್ನೊಂದರ ಆರಂಭವೇ?.

ಪ್ರತಿಯೊಬ್ಬರ ಮನೆಯ ಹಿತ್ತಲಿನ ಹಿಂಬಾಗದಿಂದಲೇ ಕಾಡಿನ ಅಂಚು ಶುರುವಾಗುತ್ತಿತ್ತು. ಎದುರಿಗೆ ಹರಡಿದ ವಿಶಾಲವಾದ ಗದ್ದೆಯ ಕೋಗು. ಆ ಕೋಗಿನ ಅಂಚಿನಲ್ಲಿ ವಯ್ಯಾರವಾಗಿ ಹರಿಯುತ್ತಲೇ ಗಡಿ ನಿರ್ಮಿಸುತಿದ್ದ ಹೆಸರಿಲ್ಲದ ಹಳ್ಳ. ಬೇಸಿಗೆಯಲ್ಲಿ ಎಲ್ಲರಿಗೂ ತನ್ನೆದೆಯ ಮೇಲೆ ಒದ್ದೆ ಕಾಲುಗಳನ್ನು ಮಾಡಿಕೊಂಡು ಹೆಜ್ಜೆ ಮೂಡಿಸಲು ಅನುವು ಮಾಡಿಕೊಡುತ್ತಿದ್ದರೂ ಮಳೆಗಾಲದಲ್ಲಿ ಮಾತ್ರ ಅದ್ಯಾಕೋ ಮುನಿಸುಕೊಳ್ಳುತಿತ್ತು. ಕೆಲವೊಮ್ಮೆ ರೌದ್ರಾವತಾರ. ಆಚೆ ಹೋಗಲು ಬಿಡದಂತೆ ನಿರ್ಬಂಧ ಹೇರುತಿತ್ತು. ಮುನಿಸು ಇಳಿದ ಮೇಲೆ ತಣ್ಣಗಾಗಿ ಅವಳೇ ದಾರಿ ಮಾಡಿಕೊಡುತ್ತಾಳೆ ಎಂದು ಊರವರು ಬೇಸರಿಸಿಕೊಳ್ಳದೇ ನಕ್ಕು ಸುಮ್ಮನಾಗುತ್ತಿದ್ದರು. ಸಿಟ್ಟಿನಲ್ಲಿದ್ದಾಗ ಏನನ್ನೂ ಹೇಳಬಾರದು ಅದು ಎದುರಿನವರ ಕಿವಿಗೆ ಹೋಗುವುದಿಲ್ಲ, ಮನಸ್ಸಿಗೆ ಇಳಿಯುವುದಿಲ್ಲ ಅನ್ನೋ ಪಾಠ ಮೊದಲು ಕಲಿಸಿದ್ದೇ ಆ ಹಳ್ಳ.

ದಿನಾ ಬೆಳಗಾಗುತ್ತಲೇ ಅಶ್ವತ್ಥ ಕಟ್ಟೆಗೆ ಪೂಜೆ ಮಾಡಲು  ಅಕ್ಕಯ್ಯಬರುತಿದ್ದಳು. ಆ ಮರದ ಬುಡದಲ್ಲಿ ಮೂರು ಮುದ್ದಾದ ಕಪ್ಪು ಕಲ್ಲಿನ ನಾಗನ ಕಲ್ಲುಗಳು ಇದ್ದವು. ಅದರ ಎದುರು ಬೆಲ್ಲ ಇಟ್ಟು ಮರಕ್ಕೆ ಸುತ್ತುಬರುತ್ತಿದ್ದಳು ಅವಳು. ಅವಳು ಬರುತಿದ್ದ ಹಾಗೆ ತುಂಬಾ ಭಕ್ತಿಯಿರುವವರ ಹಾಗೆ ನಾವೂ  ಮರಕ್ಕೆ ಸುತ್ತು ಬಂದರೂ ಕಣ್ಣೆಲ್ಲಾ ಅವಳು ನೈವೇದ್ಯಕ್ಕೆ ತಂದ ಬೆಲ್ಲದ ಮೇಲೆಯೇ ಇರುತಿತ್ತು. ಅವಳ ಪೂಜೆ ಆಗುವವರೆಗೂ ಸುತ್ತುತ್ತಿದ್ದ ನಾವು ಪ್ರಸಾದ ಕೈಗೆ ಬೀಳುತಿದ್ದ ಹಾಗೆ ಅವಳು ತಿರುಗಿ ನೋಡುವ ವೇಳೆಗೆ ಮಾಯವಾಗಿ ಬಿಡುತ್ತಿದ್ದೆವು. ಮತ್ತೆ ಪ್ರತ್ಯಕ್ಷವಾಗುತ್ತಿದ್ದದ್ದು ಮರುದಿನ ಅವಳು ಬಂದಾಗಲೇ. ನೆನಪಾಗುತ್ತಿದ್ದದ್ದು ಬೆಲ್ಲ ತಂದಾಗಲೇ.

 ಸಂಜೆಯ ಹೊತ್ತಿಗೆ ಅದು ಊರವರ ಹರಟೆ ಕಟ್ಟೆಯೂ ಆಗುತಿತ್ತು. ಹಗಲೆಲ್ಲಾ ಖುಷಿ ಕೊಡುತಿದ್ದ ಅದು ರಾತ್ರಿಯಾಗುತ್ತಿದ್ದ ಹಾಗೆ ಭಯ ಹುಟ್ಟಿಸುತ್ತಿತ್ತು. ದೈತ್ಯಾಕಾರದ ಮರ, ಅಸಂಖ್ಯಾತ ರೆಂಬೆಕೊಂಬೆಗಳು. ಜಗುಲಿಯಲ್ಲಿ ಮಲಗುತಿದ್ದ ಅಜ್ಜನ ಪಕ್ಕ ಮಲಗುತ್ತಿನಿ ಎಂದು ಹಠ ಹಿಡಿದಾಗಲೆಲ್ಲ ಅಜ್ಜ ಆ ಮರವನ್ನು ತೋರಿಸಿ ಮಧ್ಯ ರಾತ್ರಿ ಆ ಮರದಿಂದ ಬ್ರಹ್ಮರಾಕ್ಷಸ ಇಳಿದು ಬಂದು ಅಂಗಳದ ಕೆಳಗಿರುವ ಕೆರೆಯಂತ ಬಾವಿಯಲ್ಲಿ ಸ್ನಾನ ಮಾಡ್ತಾನೆ, ಅವನು ಬರುವಾಗ ಕೋಲು ಕುಟ್ಟಿ ಗೆಜ್ಜೆ ಸದ್ದು ಮಾಡಿಕೊಂಡು ಬರ್ತಾನೆ, ಅವನು ವಾಪಾಸ್ ಹೋಗುವವರೆಗೆ ನೋಡಬಾರದು. ನೋಡಿದ್ರೆ ಎತ್ತಿಕೊಂಡು ಹೋಗ್ತಾನೆ ಹಾಗಾಗಿ ಒಳಗೆ ಮಲಗು ಎನ್ನುತ್ತಿದ್ದರು. ಭಯದಿಂದ ಓಡಿಹೋಗಿ ಅಜ್ಜ ಹೊರಗೆ ಇದ್ದಾರೆ ಅನ್ನೋದು ಮರೆತು ಬಾಗಿಲು ರಪ್ಪೆಂದು ಹಾಕಿ ಮುಸುಗು ಹೊದ್ದು ಮಲಗಿ ಬಿಡುತಿದ್ದೆ. ರಾತ್ರಿ ಯಾವ ಜಾಮದಲ್ಲೋ ಎಚ್ಚರವಾದಾಗ ಕಿವಿ ನಿಮಿರಿಸಿ ಕೇಳುವಾಗ ಗೆಜ್ಜೆಯ ಸದ್ದಿನ ಬದಲು ಹುಲಿಯ ಗರ್ಜನೆ ಕೇಳಿ ಇನ್ನಷ್ಟು ಮುದುರಿ ಮಲಗುವ ಹಾಗಾಗುತಿತ್ತು.

ಹತ್ತಿರದಲ್ಲೇ ಇದ್ದ ಶಾಲೆ, ಅಲ್ಲೂ ಮನೆಗೆ ಬಂದ ಮೇಲೂ ಸಿಗುವ ಅದೇ ಗೆಳೆಯ ಗೆಳತಿಯರು, ಒಬ್ಬರೇ ಮೇಷ್ಟ್ರು. ಒಂದರಿಂದ ನಾಲ್ಕನೇ ತರಗತಿಯವರೆಗೆ ಇದ್ದ ಅಲ್ಲಿಗೆ ಮೇಷ್ಟರೂ ಹಳಬರಾಗಿದ್ದರಿಂದ  ಎಲ್ಲೂ ಹೊಸತು ಎನಿಸದೇ, ಅಪರಿಚಿತ ಭಾವ ಕಾಡದೇ ನಮ್ಮದೇ ಒಂದು ಪುಟ್ಟ ಜಗತ್ತು ನಿರ್ಮಾಣವಾಗಿತ್ತು. ಹೊರಗಿನಿಂದ ಆ ಪುಟ್ಟ ಹಳ್ಳಿಗೆ ಬರುವವರೂ ಯಾರೂ ಇಲ್ಲದೆ ಜಗತ್ತಿನಲ್ಲಿ ನಾವಿಷ್ಟೇ ಜನವೇನೋ ಅಂದುಕೊಂಡು ನಾವೂ ಆರಾಮಾಗಿಯೇ ಇದ್ದೆವು. ಅಲ್ಲೂ, ಬಂದ ಮೇಲೂ ಆಟ ಆಡಿಕೊಂಡು ಅರಾಮಾಗಿದ್ದೆವು. ಶಾಲೆ ಮುಗಿಸಿ ಬರುವಾಗ ಹೇಗೂ ಕರ್ಜಿಗಿಡ, ಬೆಮ್ಮರಲು ಹಣ್ಣು, ಹುಳಿ ಹಣ್ಣು, ಸಂಪಿಗೆಹಣ್ಣು, ಹಿಪ್ಪೆ ಹೂ, ರಂಜದ ಹಣ್ಣು ಹೀಗೆ ಬಗೆಬಗೆಯ ಮರಗಳು ಕಾಯುತ್ತಿರುತಿದ್ದರಿಂದ ಅವುಗಳ ಕ್ಷೇಮ ಸಮಾಚಾರ ವಿಚಾರಿಸಿ ಮನೆ ತಲುಪುವ ಹೊತ್ತಿಗೆ ಕತ್ತಲು ನಮಗಿಂತ ಮೊದಲು ಬಂದು ಕಾಯುತ್ತಿರುತಿತ್ತು.

ಟಿ.ವಿ ಇರಲಿ ಕರೆಂಟ್ ಕೂಡ ಇರದ ಆ ಹಳ್ಳಿಯಲ್ಲಿ ಯಾವತ್ತೂ ಬೇಜಾರು ಅನ್ನಿಸುತ್ತಲೇ ಇರಲಿಲ್ಲ. ಪ್ರತಿಯೊಬ್ಬರಿಗೂ ಕೆಲಸವಿರುತಿತ್ತು. ಸಂಜೆಯ ಹೊತ್ತಿಗೆ ಎಲ್ಲಾ ಮನೆಗಳ ಮಕ್ಕಳು ಒಂದು ಕಡೆ, ದೊಡ್ಡವರು ಒಂದು ಕಡೆ ಸೇರಿ ಆಡುತ್ತಿದ್ದರು. ಲಗೋರಿ, ಚಿನ್ನಿದಾಂಡು, ಗೋಲಿ ಮರಕೋತಿ  ಹೀಗೆ ಏನೆಲ್ಲಾ ಆಟಗಳು. ನಾವೇ ಕಾಗದ, ಪ್ಲಾಸ್ಟಿಕ್ ಸಣ್ಣ ಕಲ್ಲು ಹಾಕಿ ಸುತ್ತಿ ಅದಕ್ಕೊಂದು ದಾರ ಕಟ್ಟಿದರೆ ಚೆಂಡು ರೆಡಿ. ರಾಮನ ಚೆಂಡು ಭೀಮನ ಚೆಂಡು ಎಂದು ರಾಗ ಶುರುವಾದಾಗ ಚೆಲ್ಲಾಪಿಲ್ಲಿಯಾಗಿ ಹೊಡೆತವನ್ನು ತಪ್ಪಿಸಿಕೊಳ್ಳುತ್ತಾ, ಗುರಿ ಇಟ್ಟು ಹೊಡೆಯುವುದಕ್ಕೆ ಪ್ರಯತ್ನಿಸುತ್ತಾ  ಇರುವುದರಲ್ಲೇ ಖುಷಿ ಪಡುವುದನ್ನ ಅದೆಷ್ಟು ಚೆಂದವಾಗಿ ಕಲಿಸುತಿತ್ತು ಬದುಕು ಅಲ್ಲಿ.   

ಏನೇ ಜಗಳ, ಭಿನ್ನಾಭಿಪ್ರಾಯವಿದ್ದರೂ ಮರುದಿನ ಅವರ ಮನೆಯ ಎದುರೇ ಹೋಗಬೇಕಾದ ಸಂದರ್ಭ, ಮುಖ ನೋಡಬೇಕಾದ ಸನ್ನಿವೇಶ ಇದ್ದಿದ್ದರಿಂದ ಯಾರೂ ಅದನ್ನು ಮರುದಿನಕ್ಕೆ ವಿಸ್ತರಿಸುತ್ತಿರಲಿಲ್ಲ. ಸಾಧಿಸುವುದು ಇನ್ನು ದೂರದ ಮಾತು. ಕೃಷಿ ಕೆಲಸಕ್ಕೆ ಜನ ಜಾಸ್ತಿ ಬೇಕು ಹಾಗಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಬೇಕಾದ್ದರಿಂದ ಯಾರಿಗೂ ಅದೇನು ತೀರಾ ದೊಡ್ಡ ವಿಷ್ಯ ಅನ್ನಿಸುತ್ತಿರಲಿಲ್ಲವೇನೋ. ಇರುವ ಹತ್ತಾರು ಜನಗಳ ಜೊತೆ ದ್ವೇಷ ಸಾಧಿಸಿ ಗಳಿಸುವುದಾದರೂ ಏನು? ಹಾಗಾಗಿ ಹೊಂದಿಕೊಂಡು ಬಾಳುವುದನ್ನ ಹಳ್ಳಿ ಅದರಲ್ಲೂ ಇಂಥಹ ಅಪ್ಪಟ ಹಳ್ಳಿಗಳು ಮೌನವಾಗಿಯೇ ಕಲಿಸುತ್ತದೆ.

ಗದ್ದೆ ಕುಯಿಲು ಮುಗಿಯುತ್ತಿದ್ದ ಹಾಗೆ ಇಡೀ ಕೋಗು ಖಾಲಿ ಹೊಡೆದು ದನಗಳ ಮೇವಿನ ತಾಣವಾದರೂ ಅಲ್ಲಲ್ಲಿ ಮಧ್ಯದಲ್ಲಿ ಕೆಲವು ಗದ್ದೆಗಳಿಗೆ ಬೇಲಿ ಹಾಕಿ ಅದರಲ್ಲಿ ತರಕಾರಿಗಳನ್ನು, ಹುರುಳಿ, ಉದ್ದು,  ಅವಡೆ, ಎಳ್ಳು ಮುಂತಾದ ಧಾನ್ಯಗಳನ್ನು ಬೆಳೆಯುತ್ತಿದ್ದರು. ಸೌತೆ, ಮೆಣಸು, ತರಕಾರಿ ಸೊಪ್ಪುಗಳ ಮುಡಿಗಳು ಜೊತೆಗಿರುತ್ತಿದ್ದವು. ಆದಷ್ಟು ಸ್ವಾವಲಂಬಿಗಳಾಗಿ ಬದುಕುವುದು ಅವರಿಗೆ ಅಭ್ಯಾಸವಾಗಿತ್ತು. ಎಂಥಾ ಬಡವರಿಗೂ ಹೊಟ್ಟೆಗೆ ಕಡಿಮೆ ಆಗುತ್ತಿರಲಿಲ್ಲ. ಆದಷ್ಟು ಎಲ್ಲವನ್ನೂ ಬೆಳೆಯುತ್ತಿದ್ದರು. ಅವುಗಳನ್ನು ದನಗಳಿಂದ ಉಳಿದ ಕಾಡು ಪ್ರಾಣಿಗಳಿಂದ ಕಾಯಲು ಅಲ್ಲೊಂದು ಹಕ್ಕೆಮನೆ ತಯಾರಾಗುತ್ತಿತ್ತು. ಹಾಗಾಗಿ ಬೇಸಿಗೆಯಲ್ಲಿ ಹಕ್ಕೆ ಮನೆಗೆ ಹೋಗುವುದು ಮಕ್ಕಳಿಗೆ ಪ್ರಿಯವಾದ ಸಂಗತಿಯಾದರೆ ನಮ್ಮ ಕಾಟದಿಂದ ತಪ್ಪಿಸಿಕೊಳ್ಳುವುದು ಮನೆಯವರಿಗೆ ನೆಮ್ಮದಿಯ ವಿಷ್ಯ.

ಇನ್ನು ಕಾಡಿನಲ್ಲಿ ಜೇನು ಹೇರಳವಾಗಿ ಸಿಗುತಿತ್ತು. ಕೊಟ್ಟಿಗೆ ತುಂಬಿರುತ್ತಿದ್ದರಿಂದ ಹಾಲು, ಮೊಸರು, ಬೆಣ್ಣೆ ತುಪ್ಪ ಯಾವುದಕ್ಕೂ ಕಡಿಮೆ ಇರುತ್ತಿರಲ್ಲ. ಮೈ ಬಗ್ಗಿಸಿ ಕೆಲಸ ಮಾಡಿ, ಹೊಟ್ಟೆ ತುಂಬಾ ತಿಂದು ಸೊಂಪಾಗಿ ನಿದ್ರೆ ಮಾಡುವುದು ತುಂಬಾ ಸಹಜವಾದ ದಿನಚರಿಯಾಗಿತ್ತು.ಆಗೊಮ್ಮೆ ಈಗೊಮ್ಮೆ ಪೇಟೆಗೆ ಹೋಗಿ ಒಂದು ಫಿಲಂ ನೋಡಿ ಬಂದರೆ ಅದೇ ದೊಡ್ಡದು. ಇನ್ನು ಬೇಸಿಗೆಯಲ್ಲಿ ಅಲ್ಲಲ್ಲಿ ನಡೆಯುವ ಹರಿಕತೆ ಹಾಗೂ ಯಕ್ಷಗಾನ ದೊಡ್ಡ ಮನೋರಂಜನೆ.  ಬದುಕು ವರಾಹಿಯಂತೆ ನೆಮ್ಮದಿಯಾಗಿ ತನ್ನ ಪಾಡಿಗೆ ತಾನು ಹರಿದು ಹೋಗುತಿತ್ತು, ಯಾರ  ಹಂಗಿಲ್ಲದೇ, ಯಾವ ಗೋಜಲೂ ಇಲ್ಲದೇ.

ಎದುರಿನ ಗದ್ದೆ, ಹಿಂಬದಿಯ ಕಾಡು, ಜನಗಳಿಗಿಂತ ಜಾಸ್ತಿಯಿದ್ದ ಕಾಡು ಪ್ರಾಣಿಗಳು, ರಾತ್ರಿ ಕಾಡಿನ ಮಧ್ಯದಲ್ಲಿ ಎಲ್ಲೋ ಗರ್ಜಿಸುವ ಹುಲಿಯ ದನಿ. ಕಾಡೆಮ್ಮೆಯ ಹೆಜ್ಜೆ ಸದ್ದು, ನರಿಯ ಊಳು, ಸೀಳು ನಾಯಿಗಳ ಕೂಗು. ನಡುಕು ಹುಟ್ಟಿಸುತ್ತಿದ್ದದ್ದು ಆ ಸದ್ದೋ ಇಲ್ಲವೋ ಚಳಿಯೋ ಎಂದೂ ಗೊತ್ತಾಗದೆ ಇನ್ನಷ್ಟು ಗಟ್ಟಿಯಾಗಿ ಕಂಬಳಿ ಹೊದ್ದು ಮುದುರಿ ಮಲಗಿದರೆ ಬೆಳಿಗ್ಗೆ ಬೆಳಕು ಬಂದು  ಕಚಗುಳಿ ಇಟ್ಟಾಗಲೇ ಎಚ್ಚರವಾಗುತ್ತಿದ್ದದ್ದು. ಮನೆ, ಶಾಲೆ ಎನ್ನುವ ಯಾವ ಭೇಧವೂ ಕಾಣದೆ ನಾವುಗಳೇ ಎಲ್ಲೆಲ್ಲೂ ಇರುತ್ತಿದ್ದ ಕಾಲದಲ್ಲಿಯೇ ವರಾಹಿಗೆ ಡ್ಯಾಮ್ ಕಟ್ಟುತ್ತಾರಂತೆ, ಸುಮಾರು ಊರುಗಳು ಮುಳುಗಿ ಹೋಗುತ್ತಂತೆ ಅನ್ನೋ ಸುದ್ದಿ ಬಂದಿದ್ದು. ಜೊತೆಗೆ ದೈತ್ಯಾಕಾರದ ಲಾರಿಗಳು, ಗುರುತೇ ಇಲ್ಲದ ಜನರು ಊರೋಳಗೆ ಅಡಿಯಿಟ್ಟದ್ದು. ಮತ್ತು ಇಂತಿಷ್ಟು ದಿನದಲ್ಲಿ ಜಾಗ ಖಾಲಿ ಮಾಡಬೇಕು ಅನ್ನೋ ಆದೇಶ ಕೈಗೆ ತಲುಪಿದ್ದು.

ತಮ್ಮದೇ ಆದ ಪ್ರಪಂಚದಲ್ಲಿ ಯಾವ ಹಂಗಿಲ್ಲದೆ ಬದುಕುತ್ತಿದ್ದವರನ್ನು ಹೀಗೆ ಏಕಾಏಕಿ ಖಾಲಿ ಮಾಡಿ ಎಂದರೆ ಹೋಗುವುದಾದರೂ ಎಲ್ಲಿಗೆ? ಹುಟ್ಟಿ ಬೆಳೆದು ತನ್ನದೇ ಆದ ಅಸ್ತಿತ್ವ ಸ್ಥಾಪಿಸಿಕೊಂಡವರನ್ನು, ಬದುಕು ಕಟ್ಟಿಕೊಂಡವರನ್ನು ಎದ್ದೇಳಿ ಎಂದರೆ ಮಾಡುವುದಾದರೂ ಏನು. ಆದರೆ ಆಯ್ಕೆಗೆ ಅವಕಾಶವೇ ಇರಲಿಲ್ಲ. ಹೊರಡುವುದರ ವಿನಃ ಹೋರಾಡುವ ಯಾವ ದಾರಿಗಳೂ ಇರಲಿಲ್ಲ ಅದಾಗಲೇ ಎಲ್ಲಾ ದಾರಿಗಳಿಗೂ ಅಡ್ಡ ಕಟ್ಟೆ ಕಟ್ಟಿಯಾಗಿತ್ತು. ವರಾಹಿಯೂ ಸೋತು ಶರಣಾಗಾಗಿತ್ತು.  ಒಂದಾಗಿ ಬೆಳೆದ, ಒಂದೇ ಮನೆಯಂತೆ ಬದುಕಿನ ಎಲ್ಲರೂ ತಮ್ಮ ಮುಂದಿನ ದಾರಿಯನ್ನು ಹುಡುಕ ಹೊರಟಾಗಲೇ ಮಾವನೂ ಹೊರಟಿದ್ದ. ಹಾಗೆ ಹೊರಟವನಿಗೆ ಅದೆಲ್ಲೋ ಕೇಳದ ಊರಿನಲ್ಲಿ ಅಪರಿಚಿತ ಜನಗಳ ನಡುವೆ ಜಾಗ ಸಿಕ್ಕಿತ್ತು. ಬದುಕು ಅಲ್ಲಿ ಬೇರು ಬಿಡಬೇಕಿತ್ತು.

ನೀವೆಲ್ಲ ಹೋಗಿ ನಾನು ಮಾತ್ರ ಬರೋಲ್ಲ ಅಂತ ಹಠ ಹಿಡಿದು ಜಗುಲಿಯ ಮೇಲೆ ಕುಳಿತವಳನ್ನು ಹರಸಾಹಸ ಮಾಡಿ ಹೊರಡಿಸಿಕೊಂಡು ಹೊರಟವರ ಮೇಲೆ ಅಸಾಧ್ಯ ಕೋಪ. ಮುಖವನ್ನು ನೋಡಲಾರದ ಹಾಗೆ ಆಚೆ ತಿರುಗಿ ಧುಮ್ಮಿಸಿ ಕುಳಿತವಳು ಒಂದು ಬಾರಿ ತಿರುಗಿ ನೋಡಿದ್ದರೆ ಅವರ ಕಣ್ಣಲ್ಲಿ ವರಾಹಿ ಕಾಣಿಸುತ್ತಿದ್ದಳೇನೋ. ಆದರೆ ಇವತ್ತಿಗೂ ಅವರನ್ನು ನೋಡುವುದಿರಲಿ ವರಾಹಿ ದಿಟ್ಟಿಸಿದರು ಕಣ್ಣಲಿ ಸುಳಿ ಸುತ್ತುತ್ತದೆ. ಅಲ್ಲಿಯವರೆಗೆ ಪರಿಚಿತರಾಗಿ ಒಟ್ಟಿಗೆ ಬೆಳೆದಿದ್ದ ಜನರೆಲ್ಲಾ ಒಂದೊಂದು ಊರಿಗೆ ಹೋಗಿ ಮತ್ತೆ ಅಪರಿಚಿತರಾಗಿದ್ದು ನೆನಪಾದಾಗಲೆಲ್ಲಾ ನೀರು ಮೇರೆ ಮೀರುತ್ತದೆ.

ಈಗಲೂ ಯಾರಾದರೂ ನಿಮ್ಮ ಊರು ಯಾವುದು ಎಂದರೆ ತಡವರಿಸುವ ಹಾಗಾಗುತ್ತದೆ. ಬಿರುಬೇಸಿಗೆಯಲ್ಲಿ ಹಿನ್ನೀರು ಇಳಿದಾಗ ಹೋಗಿ ನೋಡಿದರೆ  ಕಣ್ಣು ಬಿಡಿಸಿ ನೋಡಿದಷ್ಟೂ ಕಾಣುವ ನೀರಿನಲ್ಲಿ ಬದುಕು ಅರೆಸುವುದು, ಹುಡುಕುವುದು ಕಷ್ಟವಾಗುತ್ತದೆ. ಆದರೂ ಅನುಭವ ಗುರುತು  ಹುಡುಕಿ ಖುಷಿ ಪಡುವಾಗ ಕಣ್ಣು ಮಂಜು ಮಂಜಾಗಿ ನೋಟ ಮಸುಕಾಗಿಬಿಡುತ್ತದೆ. ಮನಸ್ಸು ಇನ್ನಷ್ಟು ಮೌನವಾಗುತ್ತದೆ. ಬ್ರಹ್ಮರಾಕ್ಷಸ ಈಗ ಎಲ್ಲಿರಬಹುದು ಎಂದು ಹುಡುಕಿದರೆ  ಆ ನೀರ ನಡುವೆ ಇಷ್ಟು ವರ್ಷಗಳಾದರೂ ಗಟ್ಟಿಯಾಗಿ ನಿಂತ ಅಶ್ವತ್ಥ ಮರ ಬೋಳು ಬೋಳಾಗಿ ಕಾಣಿಸುತ್ತದೆ. ಥೇಟ್ ನನ್ನ ಬದುಕಿನಂತೆ.

 ಬೇರು ಬಿಟ್ಟ ಜಾಗದಿಂದ ಕಿತ್ತು ಇನ್ನೊಂದು ಕಡೆ ನೆಟ್ಟ ಗಿಡ ಬದುಕುವ ಅನಿವಾರ್ಯತೆಗೆ ಚಿಗುರಿದರೂ  ಬೇರಿನ ಮೂಲದ ನೆನಪು ಮಾತ್ರ ಮಾಸುವುದೇ ಇಲ್ಲ. ಅಲ್ಲಿಂದ ಬೇರೆ ಊರಿಗೆ  ಬಂದರೂ ಬೆಳೆದರೂ  ಅದು ನನ್ನೂರು ಅನ್ನಿಸಲೇ ಇಲ್ಲ. ಆ ಖಾಲಿತನ ತುಂಬಲೇಇಲ್ಲ. ಯಾರಾದರೂ ನಿಮ್ಮೂರು ಯಾವುದೇ ಎಂದರೆ  ಅದೇ ನನ್ನೂರು ಎಂದು ಹೇಳುವುದು ಹೇಗೆ... ಹೇಳಿದರೆ ಅರ್ಥವಾಗುವುದಾದರೂ ಯಾರಿಗೆ? ಹಾಗಾಗಿ ಚಡಪಡಿಸುತ್ತೇನೆ ನಾನಿಲ್ಲಿ ,  ಉಸಿರುಗಟ್ಟಿಸಿಕೊಂಡು ಮೌನವಾಗುತ್ತಾಳೆ ವರಾಹಿ ಅಲ್ಲಿ.

ಮುಳುಗಿದ್ದು ಕೇವಲ ಊರಾ ನೀವೇ ಹೇಳಬೇಕು ಈಗ....



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...