ನಾಳೆ ಬೆಂಗಳೂರಿಗೆ ಹೋಗು ವಿಜಯಕರ್ನಾಟಕ ಆಫೀಸ್ ಅಲ್ಲಿ ಇಂಟರ್ವ್ಯೂ ಇದೆ ಎಂದು ಫ್ರೆಂಡ್ ಫೋನ್ ಮಾಡಿದಾಗ ನಾಳೆಯಾ ಎಂದು ಕಂಗಲಾಗಿದ್ದೇ.  ಕಾಲೇಜ್ ಮುಗಿಸಿ ಸ್ವಲ್ಪ ದಿನ ಕಳೆಯುವ ಹೊತ್ತಿಗೆ ಅಣ್ಣನಿಗೆ ಕೆಲಸ ಸಿಕ್ಕಿ ದೂರದ ಆಂಧ್ರಕ್ಕೆ ಬಂದು ವರ್ಷ ಕಳೆಯುವ ಹೊತ್ತಿಗೆ ಅಪ್ಪಟ ಆಂಧ್ರದವಳಾಗಿ ಹೋಗಿದ್ದೆ.   ತಿರುಪತಿ ಸೇರಿದ ಮೇಲಂತೂ  ವಿದ್ಯಾಪೀಠ, ತಿರುಮಲ, ಫಿಲ್ಮ್ ಎಂದು ಆರಾಮಾಗಿ ಓಡಾಡಿಕೊಂಡು ಹೊತ್ತು ಹೊತ್ತಿಗೆ ತಿಂದು ಉಂಡಾಡಿ ಗುಂಡನ ಹಾಗಿದ್ದವಳಿಗೆ ಇದ್ದಕ್ಕಿದ್ದ ಹಾಗೆ ನಾಳೆಯೇ ಹೊರಡು ಎಂದರೆ ಹೇಗಾಗಬೇಡ? ಹೂ ನಾಳೇನೆ. ರಾತ್ರಿ ಹೊರಟರೆ ಬೆಳಿಗ್ಗೆ ಬೆಂಗಳೂರು ತಲುಪಬಹುದು,  ಬಿಟ್ಟರೆ ಹೀಗೆ ಇರ್ತಿ. ಸ್ವಲ್ಪ ಜವಾಬ್ದಾರಿ ಕಲಿ, 10 ಗಂಟೆಗೆ ಆಫೀಸ್ ಅಲ್ಲಿ ಇರಬೇಕು  ಎಂದವನೇ ಮುಂದೆ ಮಾತಿಗೆ ಅವಕಾಶ ಕೊಡದ ಹಾಗೆ ಫೋನ್ ಇಟ್ಟಿದ್ದ. ಆಕಾಶವೇ ತಲೆಯ ಮೇಲೆ ಬಿದ್ದ ಹಾಗಾದರೂ ಅಯ್ಯೋ ಬಿಡು ಬರೀ ಇಂಟರ್ವ್ಯೂ ತಾನೇ ಎಂದು ಸಮಾಧಾನ ಮಾಡಿಕೊಂಡು ಸಿದ್ಧಳಾಗಲು ಹೊರಟಿದ್ದೇ. 

ಅಂತೂ ಬೆಂಗಳೂರು ಸೇರಿ ಆಫೀಸ್ ತಲುಪಿ ಕುಳಿತರೆ ಸರಿಯಾದ ಸಮಯಕ್ಕೆ ಕರೆ ಬಂದಿತ್ತು. ಎದುರಿಗೆ ಇದ್ದಿದ್ದು ಆನಂದ್ ಸಂಕೇಶ್ವರ್. ಅನೌಪಚಾರಿಕ ಮಾತುಕತೆಯ ನಂತರ ಮದುವೆ ಆದರೆ ಕೆಲಸ ಬಿಡ್ತೀನಿ ಅನ್ನೋದು ಏನಾದರೂ ಇದೆಯಾ ಎಂದು ಕೇಳಿದರು. ಇಂಟರ್ವ್ಯೂ ಅಲ್ಲಿ ಸೆಲೆಕ್ಟ್ ಆದ ಮೇಲೆ ತಾನೇ ಇವೆಲ್ಲಾ ಎನ್ನುವ ಧೈರ್ಯದಲ್ಲಿ ಇಲ್ಲ ಎಂದು ತಲೆ ಅಲ್ಲಾಡಿಸಿದ್ದೇ. ಸರಿ ನಾಡಿದ್ದು ಬಂದು ಜಾಯಿನ್ ಆಗು ಎಂದಾಗ  ಮಾತ್ರ ಆಶ್ಚರ್ಯವಾಗಿತ್ತು. ತಕ್ಷಣ ನಾಡಿದ್ದು ಎಂದರೆ ಏಪ್ರಿಲ್ 1 ಎಂದು  ಡೇಟ್ ನೆನಪಾಗಿ ನಗು ಬಂದು  ನಾಡಿದ್ದಾ ಫೂಲ್ ಮಾಡ್ತೀಲ್ಲಾ ತಾನೇ  ಅಂತ ತುಸು ಜೋರಾಗಿಯೇ ಪ್ರಶ್ನೆ ಹೊರಗೆ ಬಂದಿತ್ತು. ಇದೆಂಥಾ ಹುಡುಗಿ ಇದು ಅನ್ನಿಸಿತ್ತೇನೊ,  ನಗು ತಡೆಯುತ್ತಲೇ ಗಂಭೀರ ಮುಖಭಾವದಲ್ಲಿ  ಹೌದು ನಾಡಿದ್ದು ಎಂದಿದ್ದರು. ಅಲ್ಲಿಗೆ ಉಳಿದದ್ದು ಒಂದೇ ದಿನ ಎಂದು ನೆನಪಾಗಿ, ತಿರುಪತಿ ಬಿಟ್ಟು ಬರಬೇಕು ಎಂದು ಬೇಸರವಾಗಿ ನಿಧಾನಕ್ಕೆ ಎದ್ದು ಬಂದಿದ್ದೆ.  ಫ್ರೆಂಡ್ ಮೇಲೆ ಕೋಪ ಉಕ್ಕಿ ಬಂದಿತ್ತು. 

accounts ನ ಎ ಬಿ ಸಿ ಡಿ ಗೊತ್ತಿಲ್ಲದವಳು, ಲೆಕ್ಕಾಚಾರ ಎಂದರೆ ಬೆಚ್ಚಿ ಬೀಳುವವಳು  ಬಂದು ಸೇರಿದ್ದು ಜಾಹೀರಾತು ವಿಭಾಗದ accounts ಡಿಪಾರ್ಟ್ಮೆಂಟ್ ಗೆ. ನಾಲ್ಕು ಜನರ ಟೀಮ್. ಒಂದು ಸೆಪರೇಟ್ ಕ್ಯಾಬಿನ್, ಟೇಬಲ್ ಫೋನ್ ಎಲ್ಲಾ ನೋಡಿ ಉಳಿದ ಆತಂಕ ಮರೆಯಾಗಿ  ಅರೆ ವಾವ್ ಎಂಬ ಹೆಮ್ಮೆ. ಎಲ್ಲಿ ಕೆಲಸ ಮಾಡೋದು ಎಂದರೆ ಪ್ರೆಸ್ ಅಲ್ಲಿ ಎನ್ನುವ ಗರ್ವ. ವಾರ ಕಳೆಯುವ ಹೊತ್ತಿಗೆ ಎಲ್ಲವನ್ನೂ ನಿಭಾಯಿಸಲು ಕಲಿತ ಮೇಲೆ ಏನೋ ಸಾಧಿಸಿದ ಜಂಭ. ಒಬ್ಬಳೇ ದೂರದಲ್ಲಿ ಇರುತ್ತಾಳೆ ಎಂದು ಅಣ್ಣ ಚೆಂದದ ಸ್ಯಾಮ್ಸಂಗ್ ಮೊಬೈಲ್ ಕೊಡಿಸಿದ್ದು, ಆಫೀಸ್, ಕೆಲಸ ಎಲ್ಲವೂ ಸೇರಿ ಒಂದು ಅಹಂ ರೂಪುಗೊಂಡಿತ್ತು. ರಜೆ ಬಂದ ಕೂಡಲೇ ತಿರುಪತಿ ಬಸ್ ಹತ್ತಿದರೆ ಮುಗಿಯಿತು. ಹಾಯಾಗಿ ಅಲ್ಲಿ ಇಲ್ಲಿ ಓಡಾಡಿಕೊಂಡು ಬದುಕು ಸಾಗುತಿತ್ತು. 

ಅಣ್ಣನ ಮದುವೆ ನಿಶ್ಚಯವಾಗಿತ್ತು. ನಂಗೆ ಜಾಸ್ತಿ ರಜೆ ಕೊಡೊಲ್ಲ ಕಣೋ ಎಂದು ಜಂಬ ಮಾಡುತ್ತಲೇ ಊರಿಗೆ ಬಂದಿದ್ದೆ. ಮೊದಲೇ ಕೆಲಸ ಮಾಡ್ತಾ ಇದೀನಿ  ಅದೂ ಎಲ್ಲಿ ಅನ್ನುವ ಕೊಂಬು ಬೇರೆ. ಈ ಮದುವೆ ಮನೆಗಳು ಅದರಲ್ಲೂ ಮನೆಯ ಮದುವೆ ಎಂದರೆ ಮಾಡೋಕೆ ಕೆಲಸವಿಲ್ಲ ಕೂರೋಕೆ ಪುರುಸೊತ್ತಿಲ್ಲ ಎನ್ನುವ ತರ. ಇತ್ತಲಿಂದ ಅತ್ತ , ಅತ್ತಲಿಂದ ಇತ್ತ ಓಡಾಡುತ್ತಿದ್ದವಳನ್ನು ಹತ್ತಿರದ ನೆಂಟರೊಬ್ಬರು ಕರೆದಿದ್ದರು. ಬೆಂಗಳೂರಿನಲ್ಲಿ ಇರೋದಂತಲ್ಲ ಎನ್ನುವ ಹೊತ್ತಿಗೆ ಹೆಮ್ಮೆಯ ಬಲೂನ್ ದೊಡ್ಡದಾಗಲು ಶುರುವಾಗಿತ್ತು. ತುಸು ಬಿಂಕದಿಂದಲೇ ಹೂ ಅಂದೇ. ಕೆಲಸ ಅಂತೆ ಅಂದರು ಇನ್ನೊಂದು ಸ್ವಲ್ಪ ಗಾಳಿ ತುಂಬಿ ಹೌದು ಎಂದೇ. ಎಲ್ಲಿ ಕೆಲಸ ಎಂದು ಕೇಳಿದಾಗ  ಇರುವ ಹೆಮ್ಮೆಯೆಲ್ಲಾ ಸ್ವರದಲ್ಲಿ ಬೆರೆಸಿ ಆಗ ಹಳ್ಳಿಗಳಿಗೆ ಜಾಸ್ತಿ ಬರುತ್ತಿದ್ದದ್ದು ಪ್ರಜಾವಾಣಿ ಆಗಿದ್ದರಿಂದ  ಅವರಿಗೆ ವಿಜಯ ಕರ್ನಾಟಕದಲ್ಲಿ ಅಂದರೆ ಅರ್ಥವಾಗಲಾರದು, ಅರ್ಥವಾಗದೆ ಹೋದರೆ ಬೀಗುವುದು ಹೇಗೆ ಎಂದೆಲ್ಲಾ ಯೋಚಿಸಿ  ಪ್ರೆಸ್ ಅಲ್ಲಿ ಅಂದೇ. 

ಅಲ್ಲಿಯವರೆಗೆ ಕುತೂಹಲದಿಂದ ನನ್ನ ಬಿಂಕವನ್ನೇ ನೋಡುತ್ತಾ ಯಾವುದೋ ದೊಡ್ಡ ಕೆಲಸದಲ್ಲಿ ಇರಬಹುದು ಎಂದು ಭಾವಿಸಿ ವಿಚಾರಿಸುತ್ತಿದ್ದ ಅವರ ಮುಖಭಾವ ಇದ್ದಕ್ಕಿದ್ದ ಹಾಗೆ ಬದಲಾಗೆ ಅಲ್ಲಿ ಒಂದು ರೀತಿಯ ಅನುಕಂಪ ಕಂಡು ಇದೇನಾಗಿ ಹೋಯಿತು ಎಂದು ನಾನು ಕಕ್ಕಾಬಿಕ್ಕಿಯಾಗಿ ಯೋಚಿಸುವ ಹೊತ್ತಿಗೆ ಪ್ರೆಸ್ ಅಲ್ಲಿ ಕೆಲಸ ಮಾಡೋಕೆ ಅಲ್ಲಿ ತನಕ ಹೋಗಬೇಕಿತ್ತಾ, ಇಲ್ಲಿ ಶಾರದಾ ಪ್ರಿಂಟಿಂಗ್ ಪ್ರೆಸ್ ಅಲ್ಲಿ ಕೆಳಬಹುದಿತ್ತು ಎಂದರು.... ಇನ್ನೇನು ಗಾಳಿಗೆ ಹಾರಬೇಕಿದ್ದ ಬಲೂನ್ ಇದ್ದಕ್ಕಿದ್ದ ಹಾಗೆ ಧರಾಶಾಯಿಯಾಯಿತು. ಸುಮ್ಮನೆ ಅಲ್ಲಿಂದ ಎದ್ದು ಹೋದೆ. ಈಗಿನ ಕಾಲದ ಮಕ್ಕಳಿಗೆ ಬುದ್ಧಿ ಇಲ್ಲ ಪ್ರೆಸ್ ಅಲ್ಲಿ ಕೆಲಸ ಮಾಡೋಕೆ ಅಷ್ಟು ದೂರ ಹೋಗಬೇಕಾ ಎಂದು ಪಕ್ಕದವರ ಬಳಿ ಲೋಚಗುಟ್ಟಿದ್ದು ಕೇಳಿದ ಮೇಲಂತೂ ಬಲೂನ್ ಒಡೆದು ಚೆಲ್ಲಾಪಿಲ್ಲಿಯಾಗಿ ಅವಶೇಷವಾಗಿ ಹರಡಿಕೊಂಡಿತು.. ಅದೇ ಕೊನೆ ಮತ್ತೆಂದೂ ಊರಲ್ಲಿ ಎಲ್ಲಿ ಕೆಲಸ ಎಂದರೆ ಪ್ರೆಸ್ ಎನ್ನದೆ ಆಫೀಸ್ ಅಲ್ಲಿ ಅನ್ನಲು ಶುರು ಮಾಡಿದೆ. 


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...