ಯಾವುದಾದರೂ ಘಟನೆ ಸಂಭವಿಸುವುದು ಒಂದು ಕ್ಷಣದಲ್ಲಿಯೇ ಆದರೂ ಅದಕ್ಕೆಷ್ಟು ಹಿನ್ನಲೆ ಸಿದ್ಧತೆ ನಡೆದಿರುತ್ತದೆ ಎನ್ನುವುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಯಾವುದೂ ಇಲ್ಲಿ ಅಕಾರಣವಾಗಿ ಸಂಭವಿಸುವುದಿಲ್ಲ. ಅರಿಯುವ ಬುದ್ಧಿ, ನೋಡುವ ಕಣ್ಣು ನಮಗೆ ಇರುವುದಿಲ್ಲ ಅಷ್ಟೇ. ಸದ್ಯಕ್ಕೆ ಕರ್ಣ ಅತ್ಯಂತ ಅನುಕಂಪಕ್ಕೆ ಪಾತ್ರನಾಗುವ ವ್ಯಕ್ತಿಯಾದರೆ ಕುಂತಿ ಅಷ್ಟೇ ದೂಷಣೆಗೆ ಪಾತ್ರಳಾಗುತ್ತಾಳೆ. ಯಾರದು ತಪ್ಪು ಯಾರದು ಸರಿ ನಮ್ಮ ಅನುಭವ ಆಲೋಚನೆಯ ಹಿನ್ನಲೆಯಲ್ಲಿ ತೀರ್ಪು ಕೊಡುತ್ತೇವೆ. ಆದರೆ ಅದು ಕುಂತಿಯ ತಪ್ಪಾ, ಆಕಸ್ಮಿಕವಾ, ಘಟಿಸಲೆ ಬೇಕಾಗಿದ್ದ ಘಟನೆಯ ಅವಳು ನಿಮಿತ್ತ ಮಾತ್ರವಾ ಊಹೂ ಯಾವುದೂ ಯೋಚಿಸುವುದಿಲ್ಲ. ಅದು ಆ ಕ್ಷಣಕ್ಕೆ ನಡೆದ ಘಟನೆಯ ಎಂದರೆ ಬಹು ಹಿಂದೆ ಹೋಗಿ ನೋಡಬೇಕಾಗುತ್ತದೆ. 

ಚಿಕ್ಕ  ವಯಸ್ಸಿನಲ್ಲಿ ದತ್ತಕಕ್ಕೆ ಹೋದ ಕುಂತಿಯ ಮಾನಸಿಕತೆ ಬಾಲ್ಯ ಹೇಗಿತ್ತು ಎನ್ನುವ ವಿವರ ಎಲ್ಲಿಯೂ ದೊರಕುವುದಿಲ್ಲ. ಹಾಗೆ ಹೋದ ಕುಂತಿ ಸುಖವಾಗಿದ್ದಳಾ, ಖಾಲಿತನ ಕಾಡುತ್ತಿರಲಿಲ್ಲವಾ.. ಯಾವುದಕ್ಕಾಗಿ ಅವಳು ಹಂಬಲಿಸುತ್ತಿದ್ದಳು ಎಲ್ಲವೂ ಮುಂದೆ ನಡೆಯುವ ಘಟನೆಗೆ ಸೂತ್ರ ಹಣಿದಿರಬಹುದು. ಅವಳು ಹದಿಹರೆಯಕ್ಕೆ ಕಾಲಿಡುವ ಹೊತ್ತಿಗೆ ಬಂದಿದ್ದು ದೂರ್ವಾಸ ಮುನಿ. ಹೇಳಿ ಕೇಳಿ ಕೋಪಿಷ್ಟ. ಅವನ ಅನುಗ್ರಹ ಇರಲಿ ಕೋಪಕ್ಕೆ ತುತ್ತಾಗದೇ ಇದ್ದರೆ ಸಾಕು ಎಂದು ಹಂಬಲಿಸಿದವರೆ ಎಲ್ಲರೂ. ಅವನಿಗೆ ಎದುರಾದ, ಅವನು ಭೇಟಿ ಕೊಟ್ಟ ಪ್ರತಿ ಜೀವಿಯ ಎದೆಯಲ್ಲೂ ಭಯದ ರುದ್ರ ನರ್ತನ. ಅಂತಹ ಮುನಿ ಕುಂತಿಭೋಜನ ಅರಮನೆಗೆ ಬಂದು ಒಂದು ಮಂಡಲ ಕಾಲ ನೆಲಸಿದಾಗ ತನ್ನ ಸೇವೆಗೆ ಬಯಸಿದ್ದು ಕುಂತಿಯನ್ನು. ಬಾಲಕಿಯನ್ನು. ಅಷ್ಟೊಂದು ಆಳು ಕಾಳು, ದೊಡ್ಡವರು ಇರುವ ಜಾಗದಲ್ಲಿ ಕುಂತಿಯ ಆಯ್ಕೆ ಆಕಸ್ಮಿಕವಾ ಮುಂದಿನ ಘಟನೆಗೆ ನಾಂದೀಯಾ .. 

ಅಂತೂ ಇಂತೂ ಒಂದು ಮಂಡಲ ಮುಗಿದು ಋಷಿ ಸುಪ್ರೀತನಾಗುತ್ತಾನೆ. ಸೇವೆ ಮಾಡಿದ ಕುವರಿಗೆ ವರ ಏನು ಬೇಕು ಎಂದು ಕೇಳುತ್ತಾನೆ. ಚಿಕ್ಕ ಹುಡುಗಿ ಮಗು ಎನ್ನುತ್ತಾಳೆ. ಅಲ್ಲಿಯವರೆಗೆ ಪ್ರಸನ್ನನಾಗಿದ್ದ ಋಷಿ ಒಮ್ಮೆ ಕೋಪದಿಂದ ಕಂಪಿಸಿ ಅವಳನ್ನು ದಿಟ್ಟಿಸಿದರೆ ಕಾಣುವುದು ಮುಗ್ಧತೆ. ನಿಟ್ಟುಸಿರು ಬಿಡುತ್ತಾ ಎಲ್ಲಾ ವಿಧಿ ಲಿಖಿತ ಎಂದು ಮಂತ್ರ ಉಪದೇಶ ಮಾಡುತ್ತಾನೆ. ಮದುವೆಯಾಗುವ ವರೆಗೂ ಉಪಯೋಗಿಸಬೇಡ. ಆಮೇಲೂ ಗಂಡನ ಅನುಮತಿ ಪಡೆದೆ ಪ್ರಯೋಗಿಸು ಎಂದು ಪರಿ ಪರಿಯಾಗಿ ಹೇಳುತ್ತಾನೆ. ಬಾಲಕಿ ತಲೆ ಅಲ್ಲಾಡಿಸುತ್ತಾಳೆ. ಸಮಾಧಾನವಿಲ್ಲದೆ ಹಿಂದುರಿಗಿ ನೋಡುತ್ತಾ ಋಷಿ ಅಲ್ಲಿಂದ ಹೊರಡುತ್ತಾನೆ. ಕಾಲ ಯಾವುದಾದರೇನು? ವಯಸ್ಸಿನ ದುಡುಕು ಒಂದೇ. ಬಹುಶಃ ಹೇಳಿಕೊಳ್ಳಲು ಆತ್ಮೀಯರು ಸ್ವಂತ ಅಪ್ಪ ಅಮ್ಮ ಇದ್ದಿದ್ದರೆ ಅವರ ಬಳಿ ಹೇಳುತ್ತಿದ್ದಳೇನೋ .. ಅವರು ನಿಯಂತ್ರಿಸುತ್ತಿದ್ದರೆನೋ.. ಸಂತೃಪ್ತ ಬದುಕು ಸಿಕ್ಕಿದ್ದರೆ ಇಂತಹ ಹುಚ್ಚು ಸಾಹಸ ಮಾಡಲು ಮನಸ್ಸು ಪ್ರೇರೇಪಿಸುತ್ತಿರಲಿಲ್ಲವೇನೋ .. 

ಹುಚ್ಚು ಸಾಹಸ ಮಾಡಲು ಹೊರಟಾಗ ಕರೆದದ್ದು ಎದುರಿಗೆ ಕಂಡ ಸೂರ್ಯನನ್ನು. ಅವನಿಗೆ ಕೇವಲ ಕರ್ತವ್ಯ ಬುದ್ಧಿ ಮಾತ್ರ. ಬಂದವನಿಗೆ ಕರೆದವರು ಯಾರು ಮುಖ್ಯವಾಗಿರಲೇ ಇಲ್ಲ, ಅವಳ ಪರಿಸ್ಥಿತಿ ಏನು ಬೇಕಾಗಿರಲಿಲ್ಲ. ಯಾಂತ್ರಿಕವಾಗಿ ಬಂದ, ಕೇಳಿದ್ದು ಅನುಗ್ರಹಿಸಿದ ಹೊರಟ ಅಲ್ಲಿಗೆ ಒಂದು ಮಂತ್ರ ಪರೀಕ್ಷೆ ಮುಗಿಯಿತು. ವಿಧಿಯ ಆಟ ಶುರುವಾಯಿತು. ಯುದ್ಧ ನಿರ್ಣಯಕ್ಕೆ ಮತ್ತೊಂದು ಹೆಜ್ಜೆ ಸಿದ್ಧವಾಯಿತು. ಯಾವ ಘಟನೆಗಳೂ ಏಕಾಏಕಿ ಸಂಭವಿಸುವುದಿಲ್ಲ ಕೊಂಡಿ ಎಲ್ಲೋ ಶುರುವಾಗಿ ಇನ್ನೆಲ್ಲೋ ಜೋಡಿಸಿಕೊಂಡು ಮತ್ತೆಲ್ಲೋ ಮುಗಿಯುತ್ತದೆ ಅಥವಾ ನಾವು ಹಾಗೆ ಅಂದುಕೊಳ್ಳುತ್ತೇವೆ. 

ಅಲ್ಲಿಂದ ಗಂಗೆಯಲ್ಲಿ ತೇಲಿ ಬಿಡುವ ನಿರ್ಧಾರ. ಮಗುವನ್ನು ರಕ್ಷಿಸುತ್ತೇನೆ ಎನ್ನುವ ಗಂಗೆಯ ಆಶ್ವಾಸನೆ. ಗಂಗೆಯ ಹರವಿನಲ್ಲಿ ತೇಲಿಹೋಗುವ ಮಗು ಸೇರುವ ಜಾಗ ಸಹ ಪೂರ್ವ ನಿರ್ಧಾರಿತವೇನೋ ಅನ್ನಿಸುತ್ತದೆ. ರಾಜಪುತ್ರ ಸೂತಪುತ್ರನಾಗಿ ಬೆಳೆಯುತ್ತಾನೆ. ಹಾಗಾಗಿ ತನ್ನ ಎಲ್ಲಾ ತಪ್ಪಿಗೂ ವಿಧಿಯನ್ನೇ ಹಳಿದು ನಮಗೂ ಅದೇ ಸರಿ ಅನ್ನಿಸುವ ಹಾಗೆ ಮಾಡುತ್ತಾನೆ. ಆದರೆ ಕೃಷ್ಣನ ಬಾಲ್ಯವೂ ಹಾಗೆ ಆಗಿದ್ದಲ್ಲವೇ. ಅವನು ಆರಿಸಿಕೊಂಡ ದಾರಿ ಯಾವುದು ಎಂಬ ಯೋಚನೆ ಹೊಳೆದಾಗ ನಮ್ಮ ಸೀಮಿತ ಆಲೋಚನೆ ಅರ್ಥವಾಗುತ್ತದೆ. ವಿಧಿ ನಡೆಸುತ್ತದೆ ಆದರೆ ದಾರಿಯ ಆಯ್ಕೆಯ ನಿರ್ಧಾರ ಮಾತ್ರ ನಮ್ಮದೇ ಆಗಿರುತ್ತದೆನೊ ..

ಜಗತ್ತು ಕಾಲ ಎರಡೂ ನಿಲ್ಲುವುದಿಲ್ಲ. ಅದು ನಿರಂತರ ಚಲಿಸುತ್ತಲೆ ಇರುತ್ತದೆ. ನಡು ನಡುವೆ ಸಿಕ್ಕವರು ಸಿಗಬೇಕಾದವರು ಕೊಂಡಿಯಲ್ಲಿ ಸೇರುತ್ತಾರೆ. ನನ್ನಿಂದ ಎನ್ನುವ ಹಮ್ಮು ಮಾತ್ರವೇ ನಮ್ಮದು ಉಳಿದೆಲ್ಲಾ ಪೂರ್ವ ನಿರ್ಧಾರಿತ ಅನ್ನಿಸುತ್ತದೆ. ಒಂದಷ್ಟು ಅರಿವು ಮೂಡಿಸಿಕೊಳ್ಳಲು ಪ್ರಯತ್ನಿಸಿದರೆ ಕೊಂಚ ಭಾರ ಕಡಿಮೆ ಮಾಡಿಕೊಳ್ಳಬಹುದು ಅನ್ನಿಸುತ್ತದೆ. ಆದರೆ ಸ್ವತಃ ಕೃಷ್ಣ ನ ಅತ್ತೆಯಾಗಿಯೂ ಕುಂತಿ ಅನುಭವಿಸಿದ್ದು ನೋಡಿದ ಮೇಲೆ ಎಲ್ಲವೂ ಭ್ರಮೆ ಅನ್ನಿಸುತ್ತದೆ. ಕಾಲನ ಸರಪಳಿಯಲ್ಲಿ ನಾವು ಒಂದು ಕೊಂಡಿ ಮಾತ್ರವೇ. ಯಾವುದಕ್ಕೆ ಬೆಸೆದುಕೊಳ್ಳಬೇಕು, ಎಲ್ಲಿಂದ ಕಡಿದು ಕೊಳ್ಳಬೇಕು ಎನ್ನುವುದು ಎಷ್ಟೋ ಸಲ ನಮ್ಮ ಕೈಯಲ್ಲಿ ಇರುವುದಿಲ್ಲ. ಹಾಗಾಗಿ ಈ ಕ್ಷಣ ಮಾತ್ರ ಸತ್ಯ ಎಂದುಕೊಂಡು ಪೂರ್ಣವಾಗಿ ಆ ಕ್ಷಣಕ್ಕೆ ಯಾವುದು ಸರಿ ಅನ್ನಿಸುತ್ತದೋ ಅದರ ಪ್ರಕಾರ ಬದುಕಿ ಬಿಡಬೇಕು.

ನಮ್ಮ ಕೈಯಲ್ಲಿ ಇರುವುದು ಈ ಕ್ಷಣ ಅಷ್ಟೇ.. 


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...