ಕ್ಷಮಿಸುವುದು ಎಂದರೆ ಮರೆಯುವುದಲ್ಲ.
ನುವ್ವು ನಾಗಪಾಮುಲಾಂಟಿದವಿ , ಏಮಿ ಮರ್ಚಿಪೊಲೆವು, ಸಮಯಕೋಸಂ ಚೂಸ್ತು ಉಂಟಾವು, ನನ್ನ ಅಂಗೈಯನ್ನು ಅವರ ಬೊಗಸೆಯಲ್ಲಿ ಇಟ್ಟುಕೊಂಡು ಹೇಳುವಾಗ ಮುಸ್ಸಂಜೆ. ಆಂಧ್ರದ ಕಾಡಿನ ಅಂಚಿನಲ್ಲಿ, ಕೃಷ್ಣಾ ನದಿಯ ತೀರದಲ್ಲಿ ಇದ್ದ ಆ ಪುಟ್ಟ ಗುರುಕುಲದಲ್ಲಿ ಆಗಷ್ಟೇ ಕತ್ತಲು ಹೊಸಿಲು ದಾಟಿ ಬಂದಿತ್ತು. ಕಾಣಿಸಿದರೂ ಕಾಣಿಸದ ಹಾಗಿನ ಬೆಳಕು. ಅಲ್ಲಿ ಇದ್ದದ್ದೇ ಹತ್ತು ಮನೆಗಳು. ಒಂದಷ್ಟು ವಿದ್ಯಾರ್ಥಿಗಳು. ಸಣ್ಣಗೆ ನಕ್ಕಿದ್ದೆ. ಕತ್ತಲು ಅದಾಗಲೇ ಆವರಿಸುತ್ತಿದ್ದರಿಂದ ನನ್ನ ಮುಖಭಾವ ಅವರಿಗೆ ಕಾಣಿಸಿರಲಿಲ್ಲ. ಮೆಲ್ಲಗೆ ಕೈ ಬಿಡಿಸಿಕೊಂಡು ಕಾಯುತ್ತಿದ್ದ ಕರುವಿನ ಹಿಂದೆ ಮನೆಗೆ ಹೊರಟೆ.
ಅಣ್ಣನಿಗೆ ಮೊದಲ ಕೆಲಸ ಸಿಕ್ಕಿದಾಗ ಸಂಭ್ರಮ. ನಮ್ಮದೇ ಮನೆ, ನಮ್ಮದೇ ಬದುಕು ಅನ್ನುವುದಷ್ಟೇ ಮುಖ್ಯವಾಗಿತ್ತೇ ಹೊರತು ಯಾವ ಊರು, ಯಾವ ರಾಜ್ಯ ಅನ್ನೋದು ಅಲ್ಲವೇ ಅಲ್ಲ. ಸ್ವತಂತ್ರ ಬದುಕು ಬೇಕಾಗಿತ್ತು ಅಷ್ಟೇ. ಕೃಷ್ಣಾ ನದಿ ದೋಣಿಯಲ್ಲಿ ದಾಟಿದರೆ ದಂಡೆಯ ಮೇಲೆ ಒಂದು ಪುಟ್ಟ ಊರು. ಕುಗ್ರಾಮ ಎನ್ನುವುದಕ್ಕೆ ಉದಾಹರಣೆ. ಬಡತನವೆನ್ನುವುದು ಅಲ್ಲಿ ಮರಳಿನ ಹಾಗೆ ಹಬ್ಬಿಕೊಂಡಿತ್ತು. ಅಲ್ಲಿಂದ ಒಂದು ಮೈಲಿ ನಡೆದರೆ ಒಂದು ಐವತ್ತು ಎಕರೆ ಜಾಗವನ್ನು ಖರೀದಿಸಿ ಅಲ್ಲೊಂದು ಪುಟ್ಟ ಗುರುಕುಲ ಕಟ್ಟಿದ್ದರು. ಹಳೆಯ ಕಾಲದ ಕಾನ್ಸೆಪ್ಟ್. ಗುರುವಿನ ಮನೆಯಲ್ಲಿ ಶಿಷ್ಯರ ವಾಸ. ಹೊಸಕಾಲದ ಗುರುಗಳು ಆಗಿದ್ದರಿಂದ ಊಟಕ್ಕೆ ಮಾತ್ರ ವಿದ್ಯಾರ್ಥಿಗಳಿಗೆ ಬೇರೆಯ ವ್ಯವಸ್ಥೆ.
ಅದಷ್ಟು ಸ್ವಾವಲಂಬಿಯಾಗಿ ಇರವುದು ಕಲಿಸಬೇಕು, ಕಲಿಯಬೇಕು ಎನ್ನುವುದು ಅದನ್ನು ಸ್ಥಾಪಿಸಿದವರ ಉದ್ದೇಶ. ಹಾಗಾಗಿ ಅಲ್ಲೊಂದು ಗೋಶಾಲೆಯಿತ್ತು. ವಿಸ್ತಾರವಾಗಿದ್ದ ಜಾಗದಲ್ಲಿ ತರಕಾರಿ, ಬೇಳೆ ಕಾಳುಗಳನ್ನು ಬೆಳೆಯುವ ವ್ಯವಸ್ಥೆ ಮಾಡಿದ್ದರು. ಪಕ್ಕದ ತಾಂಡಾದಿಂದ ಈ ಉಳಿದ ಕೆಲಸಕ್ಕೆ ಜನ ಬರುತ್ತಿದ್ದರು. ವೃತ್ತಾಕಾರವಾಗಿ ಕಟ್ಟಿದ್ದ ಮನೆಗಳು, ಮನೆಯ ಎದುರು ಪುಟ್ಟ ಹಿತ್ತಿಲು ಬಳಸಿ ಹರಿಯುತ್ತಿದ್ದ ನದಿ ಪರ್ಯಾಯ ದ್ವೀಪ ಸೃಷ್ಟಿಸಿ ಹೊರ ಜಗತ್ತಿನ ಸಂಪರ್ಕವವನ್ನೇ ಕಡಿದು ಹೊಸ ಜಗತ್ತು ಸೃಷ್ಟಿಸಿದ ಹಾಗಾಗಿ ಇಬ್ಬರಿಗೂ ಅದೇನೋ ಖುಷಿ. ಆ ಕಡೆ ಪಕ್ಕ ನದಿ, ಈ ಕಡೆ ಪಕ್ಕ ನಲ್ಲಮಲ್ಲ ಕಾಡು. ಇಡೀ ಗುರುಕುಲಕ್ಕೆ ಒಂದೇ ಒಂದು ಫೋನ್, ಜೋಕಾಲಿ ಆಡುವ ನೆಟ್ವರ್ಕ್. ಒಂದು ರೀತಿಯಲ್ಲಿ ವಾನಪ್ರಸ್ಥ ಜೀವನ.
ಕಾಡು ನದಿಯ ಮಧ್ಯದ ಜಾಗವಾದ್ದರಿಂದಲೋ ಅಥವೋ ಅವುಗಳದ್ದೇ ಜಾಗವೋ ಅಲ್ಲಿ ವಿಪರೀತ ನಾಗಗಳು. ಮಾಮೂಲು ನಾಗರ, ಗೋಧಿ ನಾಗರ ಆಗಾಗ ಕಾಣಿಸುತ್ತಿದ್ದರು ದೇವನಾಗವಿದೆ ಎನ್ನುವುದು ಅಲ್ಲಿ ಎಲ್ಲರೂ ಹೇಳುತ್ತಿದ್ದರು. ಅದು ಹೋಗುವಾಗ ಜೋರಾಗಿ ಗಾಳಿ ಬೀಸಿದ ಹಾಗೆ ಮತ್ತು ಮಲ್ಲಿಗೆ ಹೂವಿನ ಪರಿಮಳ ಬರುತ್ತದೆ. ಅಮ್ಮಗಾರು ಹಾಗಾದಾಗ ಹೊರಗೆ ಬರಬೇಡಿ ಒಳಗೆ ಇರಿ ಅದು ದೇವ ನಾಗ ಮನಮು ಚೂಡಕೂಡದು ಎಂದು ಗೋ ಸೇವೆಗೆ ಬರುತ್ತಿದ್ದ ತಾಂಡಾದಲ್ಲಿ ಹುಟ್ಟಿ ಬೆಳೆದು ನಗರವನ್ನೇ ಕಾಣದ ಭಾವನಾ ಕುಕ್ಕುರುಗಾಲಿನಲ್ಲಿ ಕೂತು ಕಾಫಿ ಕುಡಿಯುತ್ತಾ ಹೇಳುತ್ತಿದ್ದ. ದಿನಾ ಅದನ್ನೇ ಹೇಳ್ತಿಯಲ್ಲ ನೆನಪಿದೆ ನಂಗೆ ಎಂದರೆ ಮುಖದಲ್ಲಿ ಒಂದು ಮುಗ್ಧ ನಗು ಹರಡುತ್ತಿತ್ತು. ಜಾಗೃತ ಅಮ್ಮಗಾರು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ಇಡೀ ಜಮೀನು ಸುತ್ತುತ್ತಿದ್ದವಳಿಗೆ ಮತ್ತೊಮ್ಮೆ ನೆನಪಿಸಿ ಹೊರಡುತ್ತಿದ್ದ.
ಮನುಷ್ಯರು ಓಡಾಡುತ್ತಿದ್ದರು ಅವೇನು ಸಂಕೋಚ ಪಡುತ್ತಿರಲಿಲ್ಲ. ಸರ್ರನೆ ಕಾಲಬುಡದಲ್ಲಿ ಸರಿದು ಹೋಗುತ್ತಿದ್ದ, ಬಚ್ಚಲು ಮನೆಯಲ್ಲಿ ಕುಳಿತಿರುತ್ತಿದ್ದ, ಮನೆಯ ಮಾಡಿನಲ್ಲಿ ನೇತಾಡುತಿದ್ದ, ಅವು ಮೊದಮೊದಲು ಭಯ ಹುಟ್ಟಿಸುತ್ತಿದ್ದರು ಜಗಲಿಯಲ್ಲಿ ಒಮ್ಮೆ ಯಾರೊಂದಿಗೋ ಮಾತಾಡುತ್ತಾ ನಿಂತಾಗ ತಲೆಗೆ ಏನೋ ತಾಗಿದ ಹಾಗಾಗಿ ನೋಡಿದರೆ ಮಾಡಿನಲ್ಲಿ ಜೋಕಾಲಿಯಾಡುತ್ತಿದ್ದ ಗೋಧಿನಾಗರ ಇಳಿ ಬಿದ್ದ ಅದರ ಬಾಲ ಕಂಡಿತ್ತು. ಅವತ್ತು ಬೆಚ್ಚಿ ಬಿದ್ದರು ಆಮೇಲೆ ಭಯ ಹೋಗಿತ್ತು. ಪ್ರತಿ ದಿನ ಕಾಣುವ ಮನುಷ್ಯರ ಹಾಗೆ ಅವುಗಳು ದಿನಾ ಕಾಣಿಸುತ್ತಿದ್ದರಿಂದ ಅಭ್ಯಾಸವಾಗ ತೊಡಗಿತ್ತು. ಕಾಣದೆ ಇದ್ದರೆ ಇವತ್ತೇನೂ ಒಬ್ಬರೂ ಕಾಣಿಸಲಿಲ್ಲವಲ್ಲ ಅನ್ನುವ ಭಾವ, ಅವುಗಳೂ ನಮ್ಮನ್ನು ಹಾಗೆಯೇ ಅಂದುಕೊಂಡಿದ್ದವೇನೋ. ಹಾಗಾಗಿ ಅವುಗಳ ಪಾಡಿಗೆ ಅವು ನಮ್ಮ ಪಾಡಿಗೆ ನಾವು ಹೇಗೋ ಹೊಂದಿಕೊಂಡು ಕಾಲ ಕಳೆಯುತ್ತಿದ್ದೆವು. ಸುಮ್ಮನೆ ಮಕ್ಕಳ ಜೊತೆ ಆಟವಾಡಿಕೊಂಡು, ದನ ಕರುಗಳ ಮುದ್ದು ಮಾಡಿಕೊಂಡು ಸೋಮಾರಿಯಾಗಿ ದಿನ ಕಳೆಯುತ್ತಿದ್ದವಳಿಗೆ ಒಂದು ದಿನ ಬುಲಾವ್ ಬಂದಿತ್ತು.
ಸುಮ್ಮನೆ ಏನು ಮಾಡ್ತಿ ನಾಳೆಯಿಂದ ಆಫೀಸ್ ಗೆ ಬಂದು ಹೋಗು ಎಂದು ಅವರು ಎದುರಿಗೆ ಕೂರಿಸಿಕೊಂಡು ಹೇಳುತ್ತಿದ್ದರು. ಇಫ್ಕೋ ದಂತಹ ದೊಡ್ಡ ಸಂಸ್ಥೆಯ ಛೇರ್ಮನ್ ಅವರು. ಅವತ್ತೇ ಮೊದಲು ಮಾತಾಡಿದ್ದು. ಆಫೀಸ್ ಗೆ ಬಂದು ನೋಡಿಕೊಂಡು ಹೋಗೋದು ಅಷ್ಟೇ ತಾನೇ ಎನ್ನುವುದು ತಲೆಯಲ್ಲಿ. ಅದಾಗಲೇ ಒಂದಿಬ್ಬರು ಇದ್ದಿದ್ದರಿಂದ ಮತ್ತೆಲ್ಲವೂ ಅವರ ಆಫೀಸ್ ನಿಂದ ನಡೆಯುತ್ತಿದ್ದರಿಂದ ಇಷ್ಟೇ ಎನ್ನುವ ಭಾವದಲ್ಲಿ ತಲೆ ಅಲ್ಲಾಡಿಸಿ ಬಂದವಳಿಗೆ ಅಷ್ಟೇ ಅಲ್ಲ ಎನ್ನುವುದು ಅರ್ಥವಾಗಿದ್ದು ಮರುದಿನ ಆಫೀಸ್ ಒಳಗೆ ಕಾಲಿಟ್ಟಾಗಲೇ. ಹೋಗುತ್ತಿದ್ದ ಹಾಗೆ ಆಫೀಸ್ ಫೋನ್ ಕೈಗೆ ಬಂದಾಗಲೇ.
ಅಲ್ಲಿಂದ ಇಡೀ ಗುರುಕುಲದ ಆಢಳಿತ, ಹಣಕಾಸು ನಿರ್ವಹಣೆ, ಕೃಷಿ, ಕೆಲಸಗಾರರ ನಿರ್ವಹಣೆ ಎಲ್ಲವೂ ಹೆಗಲಿಗೆ ಏರಿತ್ತು. ಐವತ್ತು ಎಕರೆ ಜಾಗದಲ್ಲಿ ಗುಡ್ಡ ಬೆಟ್ಟಗಳಲ್ಲಿ ಪ್ರತಿದಿನ ಸುತ್ತುತ್ತಿದ್ದರು ಒಂದು ದಿನವೂ ಒಂದು ನಾಗರವೂ ಭಯ ಹುಟ್ಟಿಸಿರಲಿಲ್ಲ. ಆದರೆ ಮನುಷ್ಯರ ಜೊತೆ ಬಾಳುವುದು ಅಷ್ಟು ಸುಲಭವಾಗಲಿರಲಿಲ್ಲ. ಮೊದಲೇ ಸಂಪ್ರದಾಯ ಬದ್ಧ ಆಂಧ್ರ ಜನರಿಗೆ ಎಲ್ಲಿಂದಲೋ ಬಂದ ಅದರಲ್ಲೂ ಹುಡುಗಿ, ಮದುವೆಯಾಗದ ಹುಡುಗಿ ಹೀಗೆ ಜವಾಬ್ದಾರಿ ಹೊತ್ತಿದ್ದು ಅಷ್ಟೇನೂ ಸಮ್ಮತವಾಗಿರಲಿಲ್ಲ. ಇವೆಲ್ಲಾ ಜಂಜಾಟಗಳು ಗೊತ್ತಿದ್ದೂ ಮೊದಲ ಬಾರಿಗೆ ನೋಡಿದ ಒಂದು ಹುಡುಗಿಯ ಕೈಯಲ್ಲಿ ಇಷ್ಟು ದೊಡ್ಡ ಜವಾಬ್ದಾರಿ ಹೇಗೆ ಹೊರಿಸಿದ್ದಾರೆ ಎನ್ನುವುದು ಅವರಿಗೆಲ್ಲಾ ಉತ್ತರ ಸಿಗದ ಪ್ರಶ್ನೆಯಾಗಿತ್ತು. ಅದೂ ನಕ್ಸಲ್ ಪ್ರಾಬಲ್ಯವಿದ್ದ ಪ್ರದೇಶದಲ್ಲಿ...
ಅದೇನು ಕಾಣಿಸಿತ್ತೋ ನನ್ನಲ್ಲಿ ಅವರಿಗೆ.. ಏನು ಬೇಕಾದರೂ ನಿರ್ವಹಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹಾಗು ನನ್ನ ಸಾಮರ್ಥ್ಯ ಅಲ್ಲಿ ಅರಿವಾಗಿತ್ತು. ಯಾವುದೋ ಕ್ಲಿಷ್ಟ ಸಮಸ್ಯೆಯನ್ನು ನೋಡುಗರಿಗೆ ಸರಳವಾಗಿ ಕಾಣಿಸುವಹಾಗೆ ಪರಿಹರಿಸಿ ಪ್ರತಿ ಉತ್ತರ ತುಸು ಖಾರವಾಗಿಯೇ ಕೊಟ್ಟು ಬರುತ್ತಿದ್ದವಳನ್ನು ಕೊಳದ ಬಳಿ ನಿಲ್ಲಿಸಿಕೊಂಡು ಅವರು ಆ ಮಾತು ಹೇಳಿದ್ದರು. ಮೆಲ್ಲಗೆ ನಕ್ಕು ಸರಿದುಹೋಗಿದ್ದೆ. ಚಿಕ್ಕಂದಿನಿಂದಲೂ ಅದೇ ಸ್ವಭಾವ. ಯಾವ ಅವಮಾನ, ತಿರಸ್ಕಾರವನ್ನು ಸುಮ್ಮನೆ ತೆಗೆದುಕೊಂಡು ಬರುವುದು ಗೊತ್ತೇ ಇಲ್ಲ. ಮೊದಮೊದಲು ಕೊಡುವ ತನಕ ತಹತಹ. ಈಗ ಸಮಯ ನೋಡಿ ಸರಿಯಾಗಿ ಕೊಟ್ಟು ಬರುವುದು ಅಭ್ಯಾಸ ಆಗಿದೆ.
ಈ ಮರೆತು ಬಿಡಬೇಕು ಎನ್ನುವುದು ಮಾತ್ರ ಯಾವತ್ತಿಗೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕ್ಷಮಿಸುವುದು ಸರಿ, ಮುಂದಕ್ಕೆ ಭಾರ ಹೊತ್ತು ಹೋಗದೆ ಇರಲು. ಆದರೆ ಆದ ಅವಮಾನ, ಎದುರಿಸಿದ ತಿರಸ್ಕಾರವನ್ನು ಮರೆಯುವುದು ಹೇಗೆ? ಮರೆತೇ ಅನ್ನುವುದು ಕೃತಕ ಅನ್ನಿಸಿಬಿಡುತ್ತದೆ. ಮರೆತರೆ ಆತ್ಮಾಭಿಮಾನ ಇಲ್ಲ ಅನ್ನಿಸಿಬಿಡುತ್ತದೆ. ಮರೆಯುವುದು ಅಷ್ಟು ಸುಲಭವೇ? ಹಾಗೆ ಆದ ಅವಮಾನ ಮರೆಯುತ್ತಾ ಹೋದರೆ ಅದಕ್ಕೆ ಅರ್ಥವಿದೆಯೇ. ಪ್ರತಿ ಅವಮಾನ ಎದೆಯೊಳಗೆ ಒಂದು ಕಿಚ್ಚು ಉರಿಸುತ್ತಲೇ ಇರಬೇಕು ಅನ್ನುವ ಬೆಳೆಗೆರೆ ಮಾತು ಸದಾ ಪ್ರೀತಿ. ಮರೆಯದೆ ಇದ್ದ ಮೇಲೆ ಮರೆತೇ ಅನ್ನುವುದು ಯಾಕೆ? ಕ್ಷಮಿಸುವುದು ಸರಿ, ಮುಂದಕ್ಕೆ ಹೋಗುವುದು ಸರಿ ಎನ್ನುವುದು ಪ್ರತಿಸಲಿಯ ವಾದ. ಕೆಲವೊಮ್ಮೆ ನಾನೇ ವಿಚಿತ್ರವಾ ಅನ್ನಿಸುತಿತ್ತು.
"ಕ್ಷಮಿಸುವುದು ಎಂದರೆ ಮರೆಯುವುದು ಎಂದರ್ಥವಲ್ಲ. ಕ್ಷಮಿಸುವುದು ಎಂದರೆ ಯಾವುದೇ ಕಹಿಯನ್ನು ಉಳಿಸಿಕೊಳ್ಳದೆ ಇರುವುದು" ಎಂದು ಅರ್ಥವಾದ ಮೇಲೆ ಅಲ್ಲಿಗೆ ಸಮಾಧಾನ. ಅವಮಾನ ತಿರಸ್ಕಾರ ನಮ್ಮಲ್ಲೊಂದು ಕಿಚ್ಚು ಹುಟ್ಟಿಸದೆ ಹೋದರೆ ಬೆಳೆಯಲು ಸಾಧ್ಯವೇ ಇಲ್ಲ. ಪ್ರತಿ ಸಲವೂ ಮಾತೇ ಉತ್ತರವಲ್ಲ ನಿಜ. ಆದರೆ ಒಳಗೊಂದು ಕಿಚ್ಚು ಸದಾ ಉರಿಯುತ್ತಿರಬೇಕು. ಮತ್ತದು ನಮ್ಮದು ಸುಡದೇ ಬೆಚ್ಚಗೆ ಇಡಬೇಕು.ಸಾಧಿಸುವ ಕನಸ್ಸಿಗೆ ಇಂಧನವಾಗಬೇಕು ಅನ್ನಿಸಿ ಪಕ್ಕನೆ ಆ ಸಂಜೆ ನೆನಪಾಯಿತು.....
ಕ್ಷಮಿಸುವುದು ಎಂದರೆ ಮರೆಯುವುದು ಎಂದರ್ಥವಲ್ಲ ..
Comments
Post a Comment