ನೀನು  ಇವತ್ತು ಅಡಿಗೆ ಮನೆಗೆ ಬರುವ ಹಾಗಿಲ್ಲ, ಮೆಟ್ಟಿಲು ಮೇಲೆ ಕೂತ್ಕೋಬೇಕು ಅಷ್ಟೇ ಅಜ್ಜಿ ಊಟ ಮುಗಿಸಿ ಕೈ ತೊಳೆದು ಬರುತ್ತಿದ್ದವಳನ್ನು ನೋಡಿ ಹೇಳಿದ್ದಳು. ಅವತ್ತು ಹೋಳಿಗೆ ಮಾಡುವ ಕಾರ್ಯಕ್ರಮವಿತ್ತು, ಮತ್ತದು ನೈವೈಧ್ಯಕ್ಕಾಗಿ ಇಡಬೇಕಾಗಿದ್ದರಿಂದ ಮಡಿಯಲ್ಲೇ ಮಾಡಬೇಕಿತ್ತು. ಈ ಹುಡುಗು ಬುದ್ಧಿಯ ಹುಡುಗಿಗೆ ತಿನ್ನೋದು ಇಷ್ಟವಿಲ್ಲದಿದ್ದರೂ  ಕೆಲಸ ಮಾಡುವುದು ನೋಡುವ ಸಂಭ್ರಮ. ನೋಡನೋಡುತ್ತಾ ಮುಂದಕ್ಕೆ ಜಾರಿ ತಾನೂ ಕೈ ಜೋಡಿಸುವುದು ಅಯಾಚಿತವಾಗಿ ನಡೆಯುತ್ತಿದ್ದರಿಂದ ಮೊದಲೇ ಎಚ್ಚರಿಕೆ ಹೇಳಿದ್ದಳು ಅವಳು. ಮನೆ ತುಂಬಾ ಜನ, ಅವರ ಮಾತು, ಸರಭರ ನಡೆಯುವ ಕೆಲಸ ಎಲ್ಲವನ್ನೂ ನೋಡುವುದು ಚಿಕ್ಕಂದಿನಿಂದಲೂ ಬಹಳ ಇಷ್ಟದ ಕೆಲಸ. ಕಷ್ಟದಿಂದಲೇ ಆಯ್ತು ಬರೋಲ್ಲ ಎಂದು  ಒಪ್ಪಿಕೊಂಡಿದ್ದೆ.

ಅಡಿಗೆಮನೆಯಲ್ಲಿ ಮಧ್ಯಾಹ್ನವೇ ಗಬಿಡಿಡಿ ಕೆಲಸದ ಭರಾಟೆ ಜೋರಾಗಿತ್ತು. ಸುಮ್ಮನೆ ಕುಳಿತಿರಲಾಗದೆ ಹೇಗೆ ಮಾಡೋದೇ ಎಂದೇ. ಏನೋ ಅಪರೂಪಕ್ಕೆ ಅಡಿಗೆಗೆ ಸಂಬಂಧಿಸಿದ ವಿಷಯ ಕೇಳ್ತಾ ಇದಾಳೆ ಅನ್ನೋದು ಅವಳಿಗೆ ಆಶ್ಚರ್ಯ ಜೊತೆಗೆ ಈಗಲಾದರೂ ಈ ಕಡೆ ಮನಸ್ಸು ತಿರುಗಿತಲ್ಲ ಎನ್ನುವ ಸಮಾಧಾನ. ಅದೇ ಸಂಭ್ರಮದಲ್ಲೇ ಒಂದೊದಾಗಿ ಹೇಳುತ್ತಿದ್ದವಳಿಗೆ ಅದು ಗೊತ್ತು, ಅದು ಗೊತ್ತು ಆಮೇಲೆ ಎನ್ನುತ್ತಿದ್ದವಳ ನೋಡಿ ಕೋಪ ಉಕ್ಕಿ ನಿನ್ನ ತರಹದ್ದೇ ಒಬ್ಬಳು ಸೊಸೆ ಇದ್ದಳಂತೆ. ಹೀಗೆ ಎಲ್ಲಾ ನಂಗೊತ್ತು ಅಂತಿದ್ದಳಂತೆ ತಲೆ ಕೆಟ್ಟ ಅತ್ತೆ ಒಂದು ಮುಷ್ಠಿ ಉಪ್ಪು ಹಾಕಬೇಕು ಅಂದ್ರೆ ಅದೂ ಗೊತ್ತು ಅಂತ ಹಾಕಿ ಮಾಡಿದ್ಳಂತೆ ಎಂದು ಗುರುಗುಟ್ಟುತ್ತಲೇ ನಿಲ್ಲಿಸಿದ್ದಳು. ಮಗುವೇ ಏನು ಬೇಕು ಅಂತ ಗೊತ್ತಿರೋದರ ಜೊತೆಗೆ ಹದ ತಿಳಿದಿರಬೇಕು ಇಲ್ಲಾಂದ್ರೆ ಏನು ಮಾಡಿದ್ರೂ ರುಚಿಯಿರೋಲ್ಲ ಮೊದಲು ರುಬ್ಬುವುದು ಹೇಗೆ ಅಂತ ನೋಡು  ಎಂದು ಜಯತ್ತೆ ನಗುತ್ತಲೇ ರುಬ್ಬಲು ಕಲ್ಲಿನ ಮುಂದೆ ಕುಳಿತಿದ್ದರು.  

ಇನ್ನೂ ಮಿಕ್ಸಿ ಹೊಸಿಲಕ್ಕಿ ಒದೆಯದ ಕಾಲ. ಒಂದು ಮಣೆ ಹಾಕಿಕೊಂಡು ಕುಳಿತರೆ ಅದು ಇನ್ನೊಂದು ಲೋಕ. ರುಬ್ಬುವುದು ಅದೇ ಕಲ್ಲಿನಲ್ಲಿ ಆದರೂ ಒಂದೊದಕ್ಕೆ ಒಂದೊಂದು ಹದ.  ಚಟ್ನಿ ಗಟ್ಟಿಯಾಗಿ,  ಇಡ್ಲಿ ಅತ್ತ ನೀರೂ ಆಗದ ಇತ್ತ ಗಟ್ಟಿಯೂ ಅಲ್ಲದ ಹಾಗೆ, ದೋಸೆ ಸ್ವಲ್ಪ ನೀರಾಗಿ, ಹುಳಿಗೆ ಕಲ್ಲು ತೊಳೆದ ನೀರು ಪೂರ್ತಿ ಹಾಕಿ, ಹೂರಣ ಒಂದು ಹನಿಯೂ ನೀರು ಸೋಕದ ಹಾಗೆ, ಒದ್ದೆ ಕೈಯ್ ತಾಕದ ಹಾಗೆ ಅರೆಯುವುದರಲ್ಲೂ ಎಷ್ಟು ತರಹ.. ಒಂದೊಂದಕ್ಕೆ ಒಂದೊಂದು ಹದ. ಒಂದು ಕೈಯಲ್ಲಿ ತಿರುಗಿಸುತ್ತಾ, ಇನ್ನೊಂದು ಕೈಯಲ್ಲಿ ಸರಿ ಮಾಡುತ್ತಾ ತಿರುವಿಹಾಕುವಾಗ ಮೈ ಮರೆತರೆ ಕೈ ಬೆರಳೆ ಚಟ್ನಿಯಾಗಿ ಹೋಗುವ ಸಂಭವ. ಕಳೆದುಹೋಗುತ್ತಲೇ ಎಚ್ಚರವಾಗಿರುತ್ತಾ , ಎಚ್ಚರವಾಗಿರುತ್ತಲೇ ಕಳೆದುಹೋಗುತ್ತಾ ಸುತ್ತುತ್ತಿರುವುದು ಕಲ್ಲೋ, ಕೈಯೋ ನಾನೋ ಎಂಬ ಗೊಂದಲದಲ್ಲೇ ತಿರುತಿರುಗಿ ಮತ್ತಲ್ಲೇ ನಿಲ್ಲುವ ಹೊತ್ತಿನಲ್ಲಿ ಪುಡಿಯಾಗಿದ್ದು ಏನು? ಹದವಾಗಿದ್ದು ಯಾವುದು?

ರುಬ್ಬುವಾಗ ತನ್ಮಯಳಾಗಿ ಕುಳಿತವನ್ನು ನೋಡಿದಾಗಲೆಲ್ಲಾ ಏನು ಯೋಚಿಸತ್ತಿರಬಹುದು ಇವಳು ಎನ್ನುವ ಪ್ರಶ್ನೆ ಪ್ರತಿಸಲ ಕಾಡಿದೆ . ಗಟ್ಟಿ ರುಬ್ಬಿದರೆ ಒಂಚೂರು ಕಲ್ಲಿಗೆ ಅಂಟೋದಿಲ್ಲ ನೋಡು ಗಟ್ಟಿತನ ಬೇಕು ಎಂದು ನಿಡುಸುಯ್ದು ಹೇಳುವಾಗ  ಇವಳಿಗೇನಾಗಿದೆ ಸರಿಯಾಗಿಯೇ ಇದ್ದಳಲ್ಲ ಅನ್ನಿಸುತಿತ್ತು.  ಬಳಿದು ತೆಗೀಬೇಕು ಆಗ ತೊಳೆಯೋಕೆ ಜಾಸ್ತಿ ನೀರು ಬೇಡಾ ಎಂದು ಕಲಿಸುವಾಗ ಅದು ಬರೀ ಕಲ್ಲಿಗೆ ಹೇಳಿದ್ದಾ ಎನ್ನುವ ಪ್ರಶ್ನೆ ಈಗ ಮಿಂಚಿ ಮರೆಯಾಗುತ್ತದೆ. ಜಿಗುಟು ಜಾಸ್ತಿ ಇದ್ರೆ ಕಲ್ಲು ತಿರುಗೋಲ್ಲ, ಕೈ ನೋವೂ ಜಾಸ್ತಿ ನೀರು ಹಾಕ್ಕೋ ಎನ್ನುವಾಗ ಯಾವುದಕ್ಕೆ ಯಾವುದು ಹಾಕಿದರೆ ಸರಿಯಾಗುತ್ತೆ, ಎಲ್ಲಿ ಗಟ್ಟಿ, ಎಲ್ಲಿ ನೀರು, ಎಲ್ಲಿ ಜಾರು  ಎನ್ನುವ ಬೇಸಿಕ್ ಪಾಠ ಹೇಳುತ್ತಿದ್ದಳು ಎಂದು ಗೊತ್ತೇ ಆಗುತ್ತಿರಲಿಲ್ಲ. ರುಬ್ಬಿದ್ರೆ ಸರಿಯಾಗಿ ಹೊಂದಿಕೊಳ್ಳೋದು ನೋಡು ಎಂದೋ ಎಲ್ಲೋ ನೋಡುತ್ತಾ ಹೇಳುವಾಗ ಇದೇನು ಹೊಸತು ಎಂದು ನೋಡುತ್ತಿದ್ದೆ.. ಎಷ್ಟೊಂದು ಹೊಸತಿದೆ ಎನ್ನುವುದು ಮಿಕ್ಸಿ ತಿರುಗಿಸುವಾಗ ಗೊತ್ತಾಗುತ್ತಿದೆ. ಒಂದು ಹನಿ ನೀರೂ ಸೋಕಿಸದೆ ರುಬ್ಬಿಟ್ಟ ಚಟ್ನಿ ತಿಂಗಳುಗಳ ಕಾಲ ಅಡುಗೆ ಮನೆಯ ಬೀರುವಿನಲ್ಲಿ ಉಳಿದಿರುತ್ತಿದ್ದದ್ದು ಹೇಗೆ ಅನ್ನೋದು ಈಗ ಅರ್ಥವಾಗುತ್ತಿದೆ. 

 ಇಡ್ಲಿ ಒಲೆಯ ಮೇಲೆ ಬೇಯುತಿತ್ತು. ಚಿಕ್ಕಿಯ ನಾದಿನಿ ಚಟ್ನಿ ರುಬ್ಬಲು ಕುಳಿತಿದ್ದಳು. ರುಬ್ಬುತ್ತಾ ರುಬ್ಬುತ್ತಾ ಉಪ್ಪು ಸಾಕಾ, ಖಾರ ಸಾಕಾ ಹುಳಿ ಸಾಕಾ ಎಂದು ರುಚಿ ನೋಡಲು ಕೊಂಚ ಕೊಂಚವೆ ಬಾಯಿಗೆ ಹಾಕಿಕೊಳ್ಳುತ್ತಾ ರುಬ್ಬಿ ಮುಗಿಸಿ ತೆಗೆಯಲು ಹೋದರೆ ಅಲ್ಲಿ ಒಬ್ಬರಿಗೆ ಸಾಕಾಗುವಷ್ಟೂ ಚಟ್ನಿ ಇರಲಿಲ್ಲ. ಆದರೆ ಅಜ್ಜಿಗೆ ಮಾತ್ರ ಅಡುಗೆ ಮನೆಗೆ ಬಂದಾಗ ಯಾವುದೂ ರುಚಿ ನೋಡಬಾರದು ಎನ್ನುವ ನಿಯಮ. ಹಾಗಾಗಿ ಅವಳ ಕಟ್ಟು ನಿಟ್ಟು ನೋಟದ ಅಡಿಯಲ್ಲೇ ಬೆಳೆದು ಬಂದವಳಿಗೆ ಈ ರುಬ್ಬುವಾಗ ರುಚಿ ನೋಡುವ ಅವಕಾಶ ಸಿಗಲೇ ಇಲ್ಲ. ಈಗ ಮಾಡಬೇಕು ಅನ್ನಿಸುವುದಿಲ್ಲ. 

ಯಾವ ಕೆಲಸವೂ ಬರೋಲ್ಲ ಅಂತಿರಬಾರದು ಅನ್ನೋದು ಅವಳ ಪಾಲಿಸಿ. ಅಜ್ಜಿ ಸಾಕಿದ ಮಕ್ಕಳು ಬೊಜ್ಜಕ್ಕೂ ಬಾರಾ ಅನ್ನೋ ಮಾತು ಯಾರೂ ಹೇಳಬಾರದು  ಎನ್ನುವುದು ಅವಳ ಧ್ಯೇಯ.  ತನಗೆ ಗೊತ್ತಿದ್ದ ಪ್ರತಿಯೊಂದು ಕೆಲಸವನ್ನೂ  ಚಿಕ್ಕವಳು ಎನ್ನದೆ ಹೇಳಿಕೊಡುತ್ತಿದ್ದಳು, ಮಾಡಿಸುತ್ತಿದ್ದಳು. ಯಾರಾದರೂ ಹೊಗಳಿದರೆ ಸಣ್ಣ ಮಂದಹಾಸ ಮಿಂಚಿ ಮರುಕ್ಷಣವೇ ಮಿಂಚಿದ್ದೇ ಸುಳ್ಳು ಎನ್ನುವ ಹಾಗೆ ಮಾಯವಾಗಿರುತಿತ್ತು. ಅಡುಗೆಮನೆಯ ಮೂಲೆಯಲ್ಲಿದ್ದ ಕಲ್ಲಿನ ಮುಂದೆ ಕುಳಿತರೆ ಏಳುವಾಗ ಒಂದು ಸರಿಯಾದ ಹದ ಕಂಡುಕೊಂಡಿರುತ್ತಿದ್ದಳು. ಮಧ್ಯೆ ಕೈ ಸಿಕ್ಕಿಕೊಂಡರು, ತೋಳು ಬಸವಳಿದರೂ, ಒಬ್ಬಳಿಗೆ ಆಗುತ್ತಾ ಅನ್ನಿಸಿದರೂ ಧೃತಿಗೆಡದೆ ಅದನ್ನೊಂದು ಹದಕ್ಕೆ ತರದೇ ಏಳದ ಅವಳನ್ನು ನೋಡಿದಾಗ ಏನೋ ಅರೆಯುತ್ತಿದ್ದಾಳೆ ಎಂದಷ್ಟೇ ಅಂದು ಕೊಳ್ಳುತ್ತಿದ್ದೆನಲ್ಲ ಅನ್ನಿಸುತ್ತದೆ ಈಗ. ಮತ್ತೆಷ್ಟು ಎನ್ನುವ ಲೆಕ್ಕಾಚಾರ ಸಿಗುತ್ತಿಲ್ಲ ಇನ್ನೂ ... 

ಈ ಮಿಕ್ಸಿ ಬೋರ್ ಕಣೆ, ರುಚಿನೂ ಆಗೋಲ್ಲ.. ಒಂದು ಕ್ಷಣದಲ್ಲಿ ಕೆಲಸ ಮುಗಿಸಿಬಿಡುತ್ತೆ. ನಾನು ಒಂದು ಅರೆಯೋ ಕಲ್ಲು ತಗೋತೀನಿ ಅಂತ ಹೋದಾಗೆಲ್ಲಾ ಹೇಳುವಾಗ ಸಣ್ಣಗೆ ನಗುತ್ತಿದ್ದಳು ಅವಳು. ಬೇಗ ಎಲ್ಲಾ ಮುಗಿಬೇಕು, ಸಮಯವಿಲ್ಲ  ಅನ್ನೋರಿಗೆ ಕಲ್ಲು ಸರಿ ಹೋಗುತ್ತಾ ಸುಮ್ನೆ ಏನೋ ಹೇಳ್ತಿ ಬಿಡು, ಕಾಲಕ್ಕೆ ತಕ್ಕ ಹಾಗೆ ಇರಬೇಕು ಎನ್ನುತ್ತಿದ್ದಳು. ಅದು ನಿಜವಾದ ಮಾತಾ ಮುಖ ನೋಡಿದರೆ ಅಲ್ಲವೆನಿಸುತ್ತಿತ್ತು. ಗಡಿಬಿಡಿಯ ಬದುಕಿನ ಬಗ್ಗೆ ಅಸಮಾಧಾನ ಕಾಣಿಸಿದರು ಕಾಣಿಸದ ಹಾಗೆ ಇರುತಿತ್ತು. ಕಾಲಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಲು ಕಲಿತಿದ್ದು ಕಾಣಿಸುತಿತ್ತು. ಏನೇ ಹೇಳು ಅದೇ ರುಚಿ ಅನ್ನುವಾಗಲೆಲ್ಲಾ  ಈ ಸಲ ವಾಪಾಸ್ ಹೋದ ಕೂಡಲೇ ಅರೆಯೋ ಕಲ್ಲು ತೆಗೆದುಕೊಳ್ಳಲೇ ಬೇಕು ಎಂಬ ನಿರ್ಧಾರ ಮತ್ತೊಮ್ಮೆ ರಾಜಕಾರಣಿಯ ಆಶ್ವಾಸನೆಯ ಹಾಗೆ ಮತ್ತೆ ಮೂಡುತಿತ್ತು. ಇಷ್ಟೇ ಶ್ರದ್ಧೆಯಿಂದ ಮತ್ತೆ ರುಬ್ಬುವುದು ಸಾಧ್ಯವಾ ಎಂದುಕೊಂಡಾಗಲೆಲ್ಲಾ amazon ನಲ್ಲಿ ಹುಡುಕಿ cart ಗೆ ಹಾಕಿದ್ದು  ಮರೆತು ಹೋಗುತ್ತದೆ. 

ಅಕ್ಕಾ ಮಿಕ್ಸಿ ಗೆ ಹಾಕಲಾ, ಬೇಗ ಆಗುತ್ತೆ, ಆ ಕಲ್ಲು ತೊಳೆದು ಅರೆಯೋ ಹೊತ್ತಿಗೆ ಕೈ ನೋವು ಬಂದಿರುತ್ತೆ  ಎಂದಳು ತಂಗಿ. ದೀಪಾವಳಿಗೆ ಒಬ್ಬಟ್ಟು ಮಾಡುವುದು ಎಂದು ನಿರ್ಧಾರವಾಗಿತ್ತು.  ಬೇಡಾ  ಹೂರಣ ಮಿಕ್ಸಿಯಲ್ಲಿ ಅರೆದರೆ ಚೆನ್ನಾಗಿರೊಲ್ಲ ನಾನು ರುಬ್ಬಿ ಕೊಡ್ತೀನಿ ಕೊಡು ಎಂದು ಹಿಡಿದುಕೊಂಡು  ಕಲ್ಲಿನ ಬಳಿಗೆ ಹೋದರೆ ಅಡುಗೆ ಮನೆಯ ಹೊರಗಿದ್ದ ಅದು ಅನಾಥವಾಗಿ ಕುಳಿತಿತ್ತು. ಧೂಳು ಹಿಡಿಯಬಾರದು ಎಂದು ಹೊದಿಸಿದ ಬಟ್ಟೆ ಮುಸುಕಾಗಿತ್ತು. ಒಂದು ಸ್ಟೂಲ್ ಹಾಕಿಕೊಂಡು ಅದನ್ನು ತೊಳೆದು ರುಬ್ಬಲು ಕೂರುವಾಗ ಮಗಳು ಬಂದು ಮೆಟ್ಟಿಲ ಮೇಲೆ ಕುಳಿತಳು.  ಪಕ್ಕನೆ ಅಂದಿನ ದಿನ  ನೆನಪಾಯಿತು. 

 ಅವಳು ಹೋಗಿ ನಾಲ್ಕು ವರ್ಷಗಳು ಆಗುತ್ತಾ ಬಂದಿದೆ.. 

ಎಲ್ಲವೂ ಇದೆ ಆದರೆ ಏನೋ ಇಲ್ಲ.....

ಕೆಲವೊಮ್ಮೆ ಬದುಕು ರುಬ್ಬುವ ಕಲ್ಲಿಲ್ಲದ ಅಡುಗೆಯ ಮನೆಯ ಹಾಗೆ ಅನ್ನಿಸುತ್ತಿದೆ...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...