ಬಿಸಿಬೇಳೆ ಬಾತ್

 ಇವತ್ತು ಬಿಸಿ ಬೇಳೆ ಬಾತ್ ಮಾಡ್ತೀನಿ ಆಯ್ತಾ ಮಗುವೇ ಎಂದರೆ ಅವತ್ತು ಮನೆಯಲ್ಲಿ ಯಾರೂ ಇಲ್ಲವೆಂದು ಅರ್ಥ. ಬಹುಶಃ ಅವತ್ತು ನಾವು ಮಾತ್ರವೇ ಎನ್ನುವುದು ಒಳಾರ್ಥ. ದಿಟ್ಟಿಸಿ ನೋಡಿದರೆ ಅವಳ ಕಣ್ಣುಗಳಲ್ಲಿ ಮಿಂಚು ಕಾಣಿಸುತ್ತಿತ್ತು. ಆದರೆ ನಾನು ನೋಡುತ್ತಿರಲಿಲ್ಲ ಅಷ್ಟೇ. ಈ ಬಿಸಿಬೇಳೆ ಬಾತ್ ಎಂದರೆ ಅವಳಿಗೆ ಅತ್ಯಂತ ಪ್ರಿಯವಾದ ತಿನಿಸು. ಈಗಿನ ಹಾಗೆ ಬಗೆಬಗೆಯ ತರಕಾರಿ ಹಾಕಿ ಅಲಂಕಾರ ಮಾಡುವ ಪರಿಸ್ಥಿತಿ, ಅನುಕೂಲ ಎರಡೂ ಇಲ್ಲದ ಕಾಲದಲ್ಲಿ ಅವಳ ಬಿಸಿಬೇಳೆ ಬಾತ್ ಎಂದರೆ ಸರಳ ಸುಂದರಿ ಬೇಳೆ ಅನ್ನ ಅಷ್ಟೇ. ಅದಕ್ಕೆ ಇಷ್ಟೊಂದು ಸಂಭ್ರಮವಾ ಎಂದರೆ ಹೌದು. 

ಹುಟ್ಟಿದ್ದು ಆರ್ಥಿಕವಾಗಿ ಸಣ್ಣ ಆದರೆ ತಲೆಯ ಲೆಕ್ಕದಲ್ಲಿ ದೊಡ್ಡ ಕುಟುಂಬದಲ್ಲಿ. ಬಡತನಕ್ಕೆ ಅವಳ ಮೇಲೆ ಎಷ್ಟು ಪ್ರೀತಿ ಎಂದರೆ ಅದು ಅವಳನ್ನು ಬೆಂಬಿಡದೆ ಕೊಟ್ಟ ಮನೆಗೂ ಹಿಂಬಾಲಿಸಿ ಬಂದಿತ್ತು. ಬಡತನಕ್ಕೆ ಬೇಸರವಾಗಿ ಅವಳನ್ನು ಬಿಡುವ ಹೊತ್ತಿಗೆ ಅವಳು ಆ ಬಡತನಕ್ಕೆ ಎಷ್ಟು ಅಭ್ಯಾಸವಾಗಿ ಹೋಗಿದ್ದಳು ಎಂದರೆ ಸಿರಿವಂತಿಕೆ ಒಪ್ಪಲೂ ಇಲ್ಲ, ಅಪ್ಪಲೂ ಇಲ್ಲ. ನೀನು ಬಿಟ್ಟರೆನು ನಾನು ಬಿಡಲಾರೆ ಎಂದು ತನ್ನ ಬದುಕಿನ ಶೈಲಿ ಬದಲಾಯಿಸಿಕೊಳ್ಳಲೇ ಇಲ್ಲ. ಇಂತಿರ್ಪ ನನ್ನ ಅಜ್ಜಿಗೆ ಇದ್ದ ಒಂದೇ ಆಸೆ, ಒಂದೇ ಬಲಹೀನತೆ ಎಂದರೆ ಅದು ಬಿಸಿಬೇಳೆ ಬಾತ್ ಮಾತ್ರ. 

ತೊಗರಿಬೇಳೆ ಶ್ರೀಮಂತರ ಮನೆಯಲ್ಲೂ ಅಪರೂಪದ ಅತಿಥಿಯಾಗಿದ್ದ ಮಲೆನಾಡಿನ ಆ ಕಾಲದಲ್ಲಿ ಇವಳ ಬಿಸಿಬೇಳೆ ಬಾತ್ ದುಬಾರಿಯಾದ ಬಯಕೆಯೆ ಆಗಿತ್ತು. ಹಾಗಾಗಿ ಅದನ್ನು ಮಾಡಿ ತಿನ್ನಬೇಕು ಎಂದರೆ ಅಷ್ಟು ಸುಲಭವಿರಲಿಲ್ಲ. ಹಾಗಾಗಿ ಯಾರೂ ಇಲ್ಲದೆ ಇದ್ದಾಗ ಅವತ್ತು ಯಾರೂ ಬರುವುದಿಲ್ಲ ಎಂದು ನಿರ್ಧಾರವಾದ ದಿನ ಅವಳಿಗೆ ಸಾಹಸ ಮಾಡುವ ಆಸೆ ಹುಟ್ಟುತಿತ್ತು. ಒಂದು ಪುಟ್ಟ ಪಾತ್ರೆಯಲ್ಲಿ ಒಂದು ಮುಷ್ಟಿ ಬೇಳೆ ಹಾಕಿ ಬಿಸಿಬೇಳೆ ಬಾತ್ ಮಾಡಿದರೆ ಅವತ್ತಿಡೀ ಅದೇ ತಿಂಡಿ, ಅದೇ ಊಟ. ಅದು ತಣ್ಣಗಾಗಿ ಮುದ್ದೆಯಾಗಿ ಹೋಗಿದ್ದರೂ ಅದನ್ನು ತಟ್ಟೆಗೆ ಹಾಕಿಕೊಂಡು ಅವಳು ತಿನ್ನುವ ಸೊಗಸು ಇವತ್ತಿಗೂ ಕಣ್ಣಿಂದ ಮರೆಯಾಗಿಲ್ಲ. ಅಷ್ಟು ಪ್ರೀತಿಯಿಂದ, ತಾದಾತ್ಮ್ಯತೆಯಿಂದ ಇವತ್ತಿನವರೆಗೆ ಏನನ್ನೂ ತಿನ್ನಲು ನಾನು ಕಲಿಯಲೇ ಇಲ್ಲ.  ಆದರೆ ಅವಳ ಸಾಹಸಕ್ಕೆ ಸಮಯ ದೊರಕುವುದು ಮಾತ್ರ ಅಪರೂಪ. ಕೆಲವೊಮ್ಮೆ ವರ್ಷಾನುಗಟ್ಟಳೆ ಕಾಯಬೇಕಾಗಿತ್ತು. 

ಹಾಗೆ ಕಾದು ಮಾಡಿದರೂ ಅವಳ ಆತಂಕ ಕಡಿಮೆ ಆಗುತ್ತಿರಲಿಲ್ಲ. ಒಂದು ನೂರು ಸಲವಾದರೂ ಯಾರಿಗೂ ಹೇಳಬೇಡ ಎಂದು ಹೇಳಿದರೂ ಅವಳಿಗೆ ಈ ಮೊಮ್ಮಗಳ ಮೇಲೆ ಭಯ . ಮಾವ ಮನೆಯ ಉಣುಗೋಲಿನ ಹತ್ತಿರ ಬರುತ್ತಿದ್ದ ಹಾಗೆಯೇ ಓಡಿ ಹೋಗಿ ವರದಿ ಒಪ್ಪಿಸುವ ನನ್ನ ಮೇಲೆ ಅನುಮಾನ. ಅವಳ ಎದುರು ಶ್ರದ್ಧೆಯಿಂದ ವಿಧೇಯತೆಯಿಂದ ತಲೆ ಅಲ್ಲಾಡಿಸಿದರೂ ಆಮೇಲೆ ಅದು ಮರೆತೇ ಹೋಗುತಿತ್ತು. ಕೊಂಚ ಬುದ್ಧಿ ತಿಳಿದ ಮೇಲೆ ಅವಳದೆ ಮನೆ ಅವಳೇ ಉಳಿಸಿಕೊಂಡ ಜಮೀನು ಆದರೂ ಒಂದು ಬಿಸಿಬೇಳೆ ಬಾತ್ ಮಾಡಿ ತಿನ್ನಲು ಇಷ್ಟೊಂದು ಕಷ್ಟ ಪಡುವ ಅಗತ್ಯ ಏನು ಎಂದು ಕೋಪ ಬರುತಿತ್ತು. ಧೈರ್ಯವಾಗಿ ಮಾಡಿಕೊಂಡು ತಿಂದರೆ ಏನಾಗುತ್ತದೆ ಎನ್ನುವ ಅಸಹನೆ. ಬದುಕಿಡಿ ಹಾಗೆ ಕಳೆದಿದ್ದ ಅವಳು ಇಳಿಸಂಜೆಯ ಹೊತ್ತಿಗೆ ಬದಲಾಗುವುದು ಹೇಗೆ ಎಂದು ಅರ್ಥವಾಗದೆ ಕಿರಿಕಿರಿಯಾಗುತಿತ್ತು. ನಿನಗೆ ಇದೆಲ್ಲಾ ಅರ್ಥವಾಗೋಲ್ಲ ಬಿಡು ಎಂದು ಅವಳು ನಿಡುಸುಯ್ಯುತ್ತಿದ್ದಳು. ನನ್ನಿಷ್ಟ ನನ್ನ ಬದುಕು ಎಂದು ಬದುಕುವ ಹಂಬಲ ಇದ್ದ ನನಗೆ ಈ ದೈನ್ಯ ಮೈ ಪರಚಿಕೊಳ್ಳುವ ಹಾಗಾಗುತಿತ್ತು. ಇದ್ದರೂ ಅದನ್ನು ಅನುಭವಿಸದ ಅವಳ ಮನಸ್ಥಿತಿ ಬಗ್ಗೆ ಆಕ್ರೋಶ ಹುಟ್ಟುತಿತ್ತು. 

ಒಂದೊಂದು ವಯಸ್ಸು ದಾಟಿದಾಗಲೂ ಮನಸ್ಸು ಒಂದೊಂದು ರೀತಿ ಮಾಗುತ್ತದೆ. ಅಂದಿನ ನಮ್ಮದೇ ಆಲೋಚನೆ ಬಗ್ಗೆ ಇಂದು ನಗು ಬರುತ್ತದೆ. ಬದುಕಿನ ರೀತಿಯೇ ವಿಚಿತ್ರ. ಆಯಾ ಕಾಲಕ್ಕೆ ಅದೇ ಸರಿ ಅನ್ನಿಸುವ ಹಾಗೆ ಬದುಕಿ ಬಿಡುತ್ತೇವೆ. ಹಾಗಾಗಿ ಹಾಗಿಲ್ಲದವರ ಬಗ್ಗೆ ಒಂದು ಅಸಹನೆ, ಅಥವಾ ಬದುಕಲು ಗೊತ್ತಿಲ್ಲ ಎನ್ನುವ ಹಮ್ಮು ಬೆಳೆಸಿಕೊಳ್ಳುತ್ತೇವೆ. ಆದರೆ ಬದುಕಿನ ಕೊನೆಯ ತನಕ ಅವಳ ಬಿಸಿಬೇಳೆ ಬಾತ್ ಬಗೆಗಿನ ಪ್ರೀತಿ ಭಯ ಎರಡೂ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದನ್ನು ನೋಡಿ ನೋಡಿಯೇ ಏನೋ ಆ ವಸ್ತುವಿನ ಬಗ್ಗೆ ನನಗೆ ಎಂದಿಗೂ ಪ್ರೀತಿ ಹುಟ್ಟಲಿಲ್ಲ. ಅವಳು ಹೋದ ಮೇಲೆ ಒಂದೊಂದೇ ನೆನಪು ಹರಡಿಕೊಂಡು ಕುಳಿತಿರುವಾಗ ಇಷ್ಟವಾದ ವಸ್ತುವನ್ನು ಇಷ್ಟ ಪಟ್ಟಾಗ ಯಾರಿಗೂ ಕೇಳದೆ ಮಾಡಿಕೊಂಡು ಅಥವಾ ತರಿಸಿಕೊಂಡು ತಿನ್ನುವಾಗ ಪಕ್ಕನೆ ಅವಳು ನೆನಪಾಗುತ್ತಾಳೆ. ವಿಷಾದ ಕಾಡುವ ಹೊತ್ತಿಗೆ ನನ್ನನ್ನು ಈ ಸ್ವಾತಂತ್ರ್ಯ ದಿಂದ ಸ್ವೇಚ್ಚೆಗೆ ತಿರುಗದಂತೆ ಕಾಯುತ್ತಿರುವುದು ಅವಳ ಆ ಆತಂಕವೇನೋ ಅನ್ನಿಸಿ ಸಣ್ಣ ನೆಮ್ಮದಿ ಮನಸ್ಸಿನ ಆಳದಲ್ಲಿ ಹುಟ್ಟಿ ತುಟಿಯಲ್ಲಿ ಪ್ರತಿಬಿಂಬಿಸುತ್ತದೆ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...