ಹನಿಕಡಿಯದ ಮಳೆ 

ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ ಎಂಬ ಹಾಡು ಕೇಳುವಾಗ ಪಕ್ಕನೆ ನೆನಪಾಗಿದ್ದು ಸಂಪಗೋಡು  ಎಂಬ ನನ್ನೂರು. ಪ್ರತಿಯೊಬ್ಬರಿಗೂ ತಮ್ಮ ಹುಟ್ಟಿದ ಊರಿನ ಮೇಲೆ ವ್ಯಾಮೋಹ ಇದ್ದೇ ಇರುತ್ತದೆ. ಆಗಾಗ ಅಲ್ಲಿಗೆ ಹೋಗಿ ಹಳೆಯ ಹೆಜ್ಜೆ ಗುರುತು ಹುಡುಕುವುದು, ಬೇರು ಅರಸುವುದು ಸಹಜವಾಗಿ ನಡೆಯುತ್ತಿರುತ್ತದೆ. ಆದರೆ ಅದೇ ಊರು ಮುಳುಗಿ ಹೋದರೆ ಬರೀ ನೆನಪುಗಳಲ್ಲಿ ಅದನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅಂತಹದೊಂದು ಹುಡುಕಿಕೊಳ್ಳುವ ಪ್ರಕ್ರಿಯೆಯೇ ಇಲ್ಲಿರುವ ಪ್ರಬಂಧಗಳು. ಹುಡುಕಿದ್ದು, ಹುಡುಕುತ್ತಿರುವುದು ಬರೀ ಊರು ಮಾತ್ರವಾ.. ಓದಿದ ಮೇಲೆ ನೀವು ಅದನ್ನು ಹೇಳಬೇಕು. 

ಬೆಂಗಳೂರಿನಲ್ಲಿ ಕುಳಿತು ಊರು ಕಾಡಿದಾಗಲೆಲ್ಲಾ ಹೀಗೆ ಏನಾದರೂ ಬರೆದು ಫೇಸ್ಬುಕ್ ಅಲ್ಲಿ ಹಾಕಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಬರೆಯುವುದು ನೆನಪಿಸಿಕೊಳ್ಳುವ, ಹಗುರಾಗುವ ಕ್ರಿಯೆಯಾಗಿತ್ತು ಅಷ್ಟೇ. ಇವುಗಳನ್ನು ನೋಡಿ ಇವೆಲ್ಲಾ ಸೇರಿ ಒಂದು ಬುಕ್ ಮಾಡೋಣವಾ ಅಂತ ಕೇಳಿದ್ದು ಚೈತನ್ಯ ಅವರು. ಆ ಕ್ಷಣಕ್ಕೆ ಅಚ್ಚರಿ, ನಗು, ಅನುಮಾನ ಎಲ್ಲವೂ ಏಕಕಾಲಕ್ಕೆ ಆವಿರ್ಭವಿಸಿತ್ತು. ಒಂದು ಪುಸ್ತಕ ಬರಲಿ ಅನ್ನುವ ಆಸೆ ಹುಟ್ಟಿ ತಲೆ ಅಲ್ಲಾಡಿಸಿದ್ದೇ. ಕಾರಣಗಳಿಂದ ಇದು ಮುಂದೆ ಹೋಗಿ ಎರಡು ಪುಸ್ತಕಗಳು ಬಂದರೂ ಇದು ನನ್ನ ಮೊದಲ ಪುಸ್ತಕ. ನನ್ನ ಶಕ್ತಿ,  ಸ್ವಂತಿಕೆ ಇರುವುದು ಈ ಬರಹಗಳಲ್ಲಿ. ಚೈತ್ಯನ್ಯ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. 

ಈ ಪುಸ್ತಕ ಬರುತ್ತೆ ಎಂದಾಗ ಮೊದಲಿನಿಂದಲೂ ಇದರ ಜೊತೆಗೆ ಇದ್ದಿದ್ದು ಮಾಲಿನಿ ಗುರುಪ್ರಸನ್ನ. ಅಕ್ಕ, ಗೆಳತಿ ಎರಡೂ ಆಗಿರುವ ಜೀವ. ನನಗಿಂತಲೂ ಈ ಪುಸ್ತಕ ಹೀಗೆ ಬರಬೇಕು ಎನ್ನುವುದರ ಬಗ್ಗೆ ಆಸ್ಥೆ. ಇದರ ರೂಪುರೇಷೆ ಹೇಗಿರಬೇಕು ಎಂದು ವಿವರಿಸುವಾಗ ಅವರ ಪ್ರೀತಿ, ಕಾಳಜಿ ಕಂಡು ಎಷ್ಟೋ ಬಾರಿ ಕಣ್ಣು ಒದ್ದೆಯಾಗಿದ್ದು ಇದೆ, ಆ ಮಟ್ಟಕ್ಕೆ ಬರೆಯಲು ಆಗುತ್ತಾ ಎಂದು ಭಯ ಪಟ್ಟಿದ್ದು ಇದೆ. ಬರಹದ ವಿಷಯಕ್ಕೆ ಬಂದರೆ ಅವರು ಹೆಡ್ ಮಾಸ್ಟರ್. ಸಾಧಾರಣಕ್ಕೆ ಒಪ್ಪುವುದಿಲ್ಲ  ಆಗುತ್ತಾ ಎಂದು ಕೈ ಚೆಲ್ಲಿದಾಗಲೆಲ್ಲಾ ಆತ್ಮವಿಶ್ವಾಸ ತುಂಬುವುದು ಅಲ್ಲದೆ ಬಾಲಿಶ ಬರಹಕ್ಕೆ  ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟು ಹಾರೈಸಿದ್ದಾರೆ. ಇದಕ್ಕೊಂದು ಚೆಂದದ ಹೆಸರು ಕೊಟ್ಟಿದ್ದು ಅವರೇ. ನನ್ನ ಭಾವ ಬದುಕು ಎರಡೂ ಪ್ರತಿಫಲಿಸುವ ಹಾಗಿನ ಹೆಸರು ಹುಡುಕಿದ, ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿರುವ  ಅವರ ಪ್ರೀತಿ ಬೆಲೆಕಟ್ಟಲಾಗದ್ದು.  ಪ್ರೀತಿಯಲ್ಲದೆ ಅವರಿಗೆ ಬೇರೆ ಏನೂ ಕೊಡಲು ಸಾಧ್ಯವಿಲ್ಲ. 

ಬಯಲುಸೀಮೆಯ ಹುಡುಗಿಯಾಗ ಬೇಕಿದ್ದ ನನ್ನನ್ನು ಅಪ್ಪಟ ಮಲೆನಾಡ ಬೆಡಗಿಯಾಗಿಸಿದ್ದು ವಾರಾಹಿ. ಅಲ್ಲಿಂದ ಬಿಟ್ಟು ಬರುವಾಗ ಇನ್ನೂ ನಾಲ್ಕು ವರ್ಷ. ಆದರೆ ಬಾಲ್ಯ, ಊರು ಎಂದರೆ ನೆನಪಾಗುವುದು ಸಂಪಗೊಡು ಮಾತ್ರ. ಅಲ್ಲಿಯ ನೆನಪುಗಳು ಸದಾ ಹಸಿರು. ಪ್ರತಿ ನೆನಪಿನಲ್ಲೂ ವಾರಾಹಿ ಇದ್ದಾಳೆ. ಅವಳಿದ್ದಾಳೆ ಎನ್ನುವ ಕಾರಣಕ್ಕೆ ಭಾವ ಹಸಿರಾಗಿ ಉಳಿದಿದೆ. ಏನೆಲ್ಲಾ ಅಡೆತಡೆ ಇದ್ದರೂ ಗಮ್ಯದೆಡೆಗೆ ಸಾಗುವ ಅವಳ ಛಲ ಬದುಕಿನ ಅಂತಃಶಕ್ತಿ. 

ಈ ಪುಸ್ತಕ ಮಾಡಲು ಹೊರಟಾಗ ಸಿಕ್ಕ ಇನ್ನೊಂದು ಅಮೂಲ್ಯ ಸಂಗತಿ ಎಂದರೆ ಬಾಲ್ಯದ ಗೆಳತಿ ಅಶ್ವಿನಿ ಸಿಕ್ಕಿದ್ದು. ಅವಳೂ ನನ್ನ ಹಾಗೆ ಊರ ಕನವರಿಸುವ ಹುಡುಗಿ. ಹಾಗಾಗಿಯೇ ಅವಳು ತೆಗೆದ ಫೋಟೋಗಳು ಇದರ ಚೆಂದ ಹೆಚ್ಚಿಸಿವೆ. ಆಚಾನಕ್ ಆಗಿ ಅವಳು ಮತ್ತೆ ಸಿಗುವ ಹಾಗೆ ಮಾಡಿದ್ದು ಈ ನೆನಪುಗಳು. ಹಾಗಾಗಿ ಈ ಬರಹ ಬದುಕಿನ ಕೆಲವು ಕೊಂಡಿಗಳನ್ನು ಮತ್ತೆ ಸಿಗುವ ಹಾಗೆ ಮಾಡಿದೆ. ಯಾವ ಫೋಟೋ ಬೇಕಾದರೂ ತೆಗೆದುಕೊಳ್ಳಿ ಎಂದು ನನ್ನಷ್ಟೇ ಖುಷಿ ಪಟ್ಟ ಅಶ್ವಿನಿಗೆ ಥ್ಯಾಂಕ್ಸ್ ಹೇಳದಿದ್ದರೆ ಹೇಗೆ. ಥ್ಯಾಂಕ್ಸ್ ಅಶ್ವಿನಿ. 

ಈ ಪುಸ್ತಕ ಸುಜಿತ್ ಕನಸು ಕೂಡಾ. ಪುಸ್ತಕ ಬಿಡುಗಡೆ ಎಂದು ನಿರ್ಧಾರವಾದ ಮೇಲೆ ಅವನ ಸಂಭ್ರಮ ಹೇಳತಿರದ್ದು. ಇವೆರಲ್ಲರೂ ನನಗಿಂತ ಸಂಭ್ರಮಿಸುವುದು ನೋಡುವಾಗ ವಾರಾಹಿ ಕಣ್ಣಲ್ಲಿ ಸುಳಿ ಸುತ್ತುತ್ತಾಳೆ. ಒಂದು ದಿನ ಅವಳಿಗೂ ಬಿಡುಗಡೆಯಾಗಲಿ ಅಂದುಕೊಳ್ಳುತ್ತಲೇ ಇದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. 

ಪ್ರೀತಿ ಇರಲಿ. 

ಧನ್ಯವಾದಗಳು. 

ಶೋಭಾ ರಾವ್ 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...