ಚಪ್ಪರ. (ಹಸಿರುವಾಸಿ)

ಮನೆಗೊಂದು ಅಜ್ಜಿ ಅಂಗಳಕ್ಕೊಂದು ಚಪ್ಪರ ಅನ್ನೋದು ಹಿಂದಿನ ವಾಡಿಕೆಯ ಮಾತು. ಮನೆ ಎಷ್ಟು ಚಿಕ್ಕದಾದರೂ ಅದರ ಎದುರಿಗೊಂದು ಅಂಗಳ ಹಾಗೂ ಅಂಗಳಕ್ಕೊಂದು ಚಪ್ಪರ ಇರದೇ ಇರುತ್ತಲೇ ಇರಲಿಲ್ಲ. ನವರಾತ್ರಿ ಮುಗಿಯುತ್ತಿದ್ದ ಹಾಗೆ ಮಳೆಗಾಲವೂ ಮುಗಿಯುತ್ತಿದ್ದರಿಂದ ವಿಜಯದಶಮಿ ಕಳೆಯುತ್ತಿದ್ದ ಹಾಗೆ ಚಪ್ಪರ ಹಾಕುತ್ತಿದ್ದರು. ಅಲ್ಲಿಂದ ಅಡಿಕೆ ಕೊಯ್ಲು ಸಹ ಶುರುವಾಗುವುದರಿಂದ ಅದು ಅನಿವಾರ್ಯವೂ, ಅವಶ್ಯಕವೂ ಆಗಿತ್ತು. ಎರಡು ಸಾಲುಗಳಲ್ಲಿ ನಿಂತು ಮಳೆ ಬಿಸಿಲು ಎನ್ನದೆ ತೊಯ್ದ ಕಲ್ಲು ಕಂಬಗಳಿಗೂ ಆಗ ನೆರಳು ಸಿಗುತಿತ್ತು,

ಅಂಗಳದ ಎರಡೂ ಬದಿಯಲ್ಲಿ ಶಿಸ್ತಿನ ಸಿಪಾಯಿಯಂತೆ ಕಲ್ಲುಕಂಬಗಳು ಸದಾ ನಿಂತೇ ಇರುತ್ತವೆ. ಬೇಸಿಗೆಯಲ್ಲಿ ಹೆಗಲ ಮೇಲೆ ಚಪ್ಪರವನ್ನು ಹೊತ್ತ ಅವಕ್ಕೆ ಮಳೆಗಾಲದಲ್ಲಿ ಮಾತ್ರ ವಿರಾಮ ಅಂದುಕೊಂಡರೆ ಉಹೂ ಆಗ ಅವುಗಳ ಬುಡದಲ್ಲಿ ಡೇರೆ ಗಿಡಗಳು ಆಶ್ರಯ ಪಡೆದು ಅವುಗಳಿಗೆ ಅಂಟಿಕೊಂಡು ನಿಂತಿರುತ್ತವೆ. ಒಂದೊಂದು ಕಲ್ಲಿನ ಬುಡದಲ್ಲೂ ಒಂದೊಂದು ಬಣ್ಣದ ಹೂವಿನ ಗಿಡ. ಮಳೆಗಾಲ ಮುಗಿಯುತಿದ್ದ ಹಾಗೆ ಅವುಗಳ ಆಯಸ್ಸೂ ಮುಗಿಯುತ್ತಿದ್ದರಿಂದ ಅದನ್ನೆಲ್ಲ ಅಂಗಳ ಹೆರೆಯುವಾಗ ತೆಗೆದು ಹಾಕಿ ಚಪ್ಪರ ಹಾಕಲಾಗುತ್ತಿತ್ತು. ಹಾಗಾಗಿ ಆ ಕಲ್ಲು ಕಂಬಗಳು ಎಂದೂ ಒಂಟಿ ಎನ್ನುವ ಹಾಗೆಯೇ ಇರಲಿಲ್ಲ. ರಜೆಯಲ್ಲಿ ಕಂಬದ ಆಟ ಆಡಲು ಮಕ್ಕಳು ಉಪಯೋಗಿಸುತ್ತಿದ್ದರಿಂದ ಮಕ್ಕಳ ಮೃದು ಸ್ಪರ್ಶಕ್ಕೆ ಅವೂ ಮೆತ್ತಗಾಗುತ್ತಿದ್ದವೇನೋ..

ಬಿಸಿಲು ಮನೆಯಿಂದ ಹೊರಗೆ ಹೊರಡುತ್ತಿದ್ದಂತೆ ಅಲ್ಲಿಯವರೆಗೆ ಹೊದ್ದು ಮಲಗಿದ್ದ ಅಡಿಕೆ ದಬ್ಬೆಗಳೂ ಎದ್ದು ಮೈ ಮುರಿದು ಚಪ್ಪರವೇರಲು ತಯಾರಾಗುತ್ತಿದ್ದವು. ಅವತ್ತು ಮುಂಜಾವಿನಲ್ಲೇ ಅಂಗಳದಲ್ಲೇ ಸದ್ದು, ಗಜಿಬಿಜಿ. ಐದೋ ಆರೋ ಜನ ಚಪ್ಪರ ಹಾಕಲು ಬರುತ್ತಿದ್ದರು. ಅದರಲ್ಲಿ ಒಬ್ಬ ಅನುಭವಿಯ ಕಣ್ಣು ದಬ್ಬೆಯನ್ನು ಒಮ್ಮೆ ನೋಡಿ ಯಾವುದು ಬೇಕು ಯಾವುದು ಬೇಡ ಎಂದು ನಿರ್ಧರಿಸಿ ಮಾಡು ಹತ್ತಿ ಕುಳಿತರೆ ಉಳಿದವರು ಒಂದೊಂದೇ ದಬ್ಬೆಯನ್ನು ಕೊಡುತ್ತಿದ್ದರು. ಮುಂಜಾನೆ ಶುರುವಾದ ಕೆಲಸ ಚಪ್ಪರದ ವಿಸ್ತಾರವನ್ನು ಅವಲಂಬಿಸಿ ಮಧ್ಯಾನ ಹಾಗೂ ಸಂಜೆಯವರೆಗೂ ಸಾಗುತಿತ್ತು. ಚಪ್ಪರದ ವಿಸ್ತಾರದ ಮೇಲೆ ಆ ಮನೆಯಲ್ಲಿ ಬೆಳೆಯುವ ಅಡಿಕೆಯ ಪ್ರಮಾಣ ಹಾಗೂ ಆರ್ಥಿಕತೆಯ ಮಟ್ಟದ ಲೆಕ್ಕಾಚಾರವೂ ಸುಲಭವಾಗಿ ಸಿಗುತಿತ್ತು.

ಚಪ್ಪರ ಹಾಕಿದ ಮೇಲೆ ಇಡೀ ಅಂಗಳಕ್ಕೆ ಸಗಣಿ ಹೊಡೆದರೆ ಅಲ್ಲಿಗೆ ಅದು ತಯಾರಾದಂತೆ. ಅಡಿಕೆ ಕೊಯ್ಲು ಶುರುವಾದ ಮೇಲೆ ಅಂಗಳ ಚಪ್ಪರ ಎರಡೂ ವಿಪರೀತ ಕೆಲಸದಲ್ಲಿ ಮುಳುಗಿ ಹೋಗಿ ಬಿಡುತ್ತಿದ್ದವು. ಚಪ್ಪರಕ್ಕೆ ಮೊದಲು ಹೋಗಿ ಕೂರುತಿದ್ದದ್ದು ಅಟ್ಟದ ಮೇಲಿಟ್ಟ ತಟ್ಟಿಗಳು. ಅವು ಒಂದಕ್ಕೊಂದು ಕುಶಲ ವಿಚಾರಿಸಿಕೊಂಡು ಹಳಬರಾಗುವ ಹೊತ್ತಿಗೆ ಬೆಂದ ಅಡಿಕೆ ಹೋಗುತಿತ್ತು. ಆಮೇಲೆ ಚಪ್ಪರಕ್ಕೆ ಸಂಭ್ರಮ. ಅಡಿಕೆ ಹರುವಲು. ಮಗಿಯಲು  ಆಡಲು ಹೀಗೆ ಮನೆಮಂದಿಯೆಲ್ಲಾ ಇಡೀ ದಿನ ಅಲ್ಲಿಗೆ ಹೋಗಿ ಬರುತ್ತಿದ್ದರಿಂದ ಅದು ಮದುವೆ ಮನೆಯಂತೆ  ಗಿಜಿಗುಡುತ್ತಿರುತಿತ್ತು. ಬೆಳಿಗ್ಗೆ ಹಬೆಯಾಡುವ ಅಡಿಕೆ ಹರಡಿದರೆ ಇಳಿ ಸಂಜೆಯ ಹೊತ್ತಿಗೆ ಅದನ್ನು ಒಟ್ಟು ಮಾಡುವ ಕೆಲಸ. ದಿನಾಲು ಅದನ್ನು ಏಣಿಯಲ್ಲಿ ಹತ್ತಿ ಇಳಿಸುವುದು ಕಷ್ಟವಾದ್ದರಿಂದ ಅದು ಅಲ್ಲೇ ಸುರುಳಿ ಸುತ್ತಿದ ತಟ್ಟಿಯಲ್ಲಿ ಇರುತಿತ್ತು. ಬೆಳಿಗ್ಗೆಯ ಇಬ್ಬನಿಯ ಮಾತಿಗೆ ಕಿವಿಯಾಗುತ್ತಿತ್ತು. ಹಾಗಾಗಿ ಚಪ್ಪರಕ್ಕೆ ಎಂದೂ ಒಂಟಿತನ ಕಾಡುತ್ತಲೇ ಇರಲಿಲ್ಲ. ಬೇರ್ಯಾರಿಗೂ ಒಂಟಿತನ ಕಾಡಲು ಚಪ್ಪರವೂ ಬಿಡುತ್ತಿರಲಿಲ್ಲ.

ನಿಧಾನಕ್ಕೆ ಅಡಿಕೆ ಕೊಯ್ಲು ಮುಗಿಯುತ್ತಿದ್ದಂತೆ ಇಡೀ ಚಪ್ಪರದ ತುಂಬಾ ಹರಡಿಕೊಂಡಿದ್ದ ತಟ್ಟಿಗಳು ಕಡಿಮೆಯಾದರೂ ಖಾಲಿ ಅಂತೂ ಆಗುತ್ತಿರಲಿಲ್ಲ. ಅಡಿಕೆ ಮುಗಿದ ಮೇಲೆ ಜೊತೆಗೂಡಲು ಮಾತಾಡಲು ಕಾಫಿಯೋ, ಅಂಟುವಾಳವೋ, ಎಣ್ಣೆಯಾಗಲು ಕಾತರಿಸುತಿದ್ದ ಒಣ ಕೊಬ್ಬರಿಯೋ,  ಸೀಗೆ ಕಾಯಿಯೋ, ಏಲಕ್ಕಿಯೋ, ಹಪ್ಪಳ ಸಂಡಿಗೆಯೋ ಹೀಗೆ ಯಾವುದೋ ಒಂದು ಇದ್ದೇ ಇರುತಿತ್ತು. ಯಾವತ್ತೂ ಚಪ್ಪರ ಖಾಲಿ ಇರುತ್ತಿರಲಿಲ್ಲ. ಸಂಜೆಯ ಹೊತ್ತಿಗೆ ವಾನರ ಸೈನ್ಯವಂತೂ ಆಡಲು ಹೋಗುತಿತ್ತು.
ಅಂಗಳವೂ ಕೊಯ್ಲಿನ ನಂತರ ಖಾಲಿ ಆದ ಭಾವ ಹುಟ್ಟಿಸಿದರೂ ಶುಕ್ರವಾರ, ಮಂಗಳವಾರ ಸಗಣಿ ಸಾರಿಸಿ ಹಾಕಿದ ರಂಗೋಲಿ ಜೊತೆಗಿರುತಿತ್ತು. ಮಧ್ಯಾನ ಕೆಲಸ ಮುಗಿದ ಮೇಲೆ ಕಂಬಕ್ಕೆ ಒರಗಿ ಕುಳಿತ ಮನೆಯವರ  ಮಾತಿಗೆ ಕಿವಿಯಾಗುತಿತ್ತು. ಬೇಸಿಗೆಯ ಧಗೆಗೆ ತಂಪಾಗುತಿತ್ತು.

ಬಿರು ಬೇಸಿಗೆಯಲ್ಲಿ ಅಂಗಳದಲ್ಲಿ ಚಪ್ಪರದ ಕೆಳಗೆ ಕುಳಿತು ಮಾತಾಡುತ್ತಲೋ, ದಣಿವಾರಿಸಿಕೊಳ್ಳುತ್ತಲೋ ಹಿರಿಯರು ಕಾಲ ಕಳೆದರೆ ಚಿಕ್ಕವರು ಚಪ್ಪರದ ಮಧ್ಯೆ ಒಂದು ಜೋಕಾಲಿ ಕಟ್ಟಿಕೊಂಡು ಆಡುತ್ತಾ ಸಮಯ ಕಳೆಯುತ್ತಿದ್ದರು. ಅಂಗಳದಲ್ಲಿ ರಂಗೋಲಿಗೆ ಪೈಪೋಟಿ ನೀಡುವ ಬಿಸಿಲು ನೆರಳಿನ ಚಿನ್ನಾಟವೂ ಹೊಸತನ, ಸೌಂದರ್ಯವನ್ನು ತುಂಬುತ್ತಿತ್ತು. ಕೆಲಸ ಮುಗಿಸಿ ಊಟಕ್ಕೆ ಬಂದವರೂ ಒಂದು ಕ್ಷಣ ಅಲ್ಲೇ ಕುಳಿತು ಎಲೆ ಅಡಿಕೆ ಮೆದ್ದು ಸುಸ್ತು ಕಳೆದುಕೊಂಡು ಮತ್ತೆ ಕೆಲಸಕ್ಕೆ ಹೊರಡುತ್ತಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗಲೂ ಎದುರಿನ ಚಪ್ಪರ ಸಾಂಗಂತ್ಯ ಕೊಡುತ್ತಿತ್ತು. ಕಂಬಕ್ಕೆ ಒರಗಿ ಕಾಲು ನೀಡಿ ಕುಳಿತರೆ ಎಷ್ಟೋ ನೆನಪುಗಳನ್ನು ನೆರಳಿನಂತೆ ಎದುರು ತಂದು ಹರಡುತಿತ್ತು.  ಹೀಗೆ ಅಂಗಳ ಚಪ್ಪರ ಎರಡೂ ಇಡೀ ಮನೆಯವರನ್ನು ಒಂದಲ್ಲ ಒಂದು ಕಾರಣದಿಂದ ಬೆಸೆಯುವ ಹಾಗೆ ಮಾಡುತಿತ್ತು.

ಇನ್ನು ಬೇಸಿಗೆ ಬಂದರೆ ಶುಭಕಾರ್ಯಗಳ ಸಾಲು ಸಾಲೇ ಎದುರಾಗುವುದು ಮಾಮೂಲು. ಆಗ ಸಹಾಯಕ್ಕೆ ಬರುವುದು ಇದೇ ಚಪ್ಪರವೇ. ಎಷ್ಟು ಜನ ಬಂದರೂ ಜಾಗ ಕೊಡುವ ವಿಶಾಲತೆ ಅದಕ್ಕೆ. ಬಿಸಿಲಿಗೆ ನೆರಳಾಗಿ, ಮೇಲೊಂದು ಟಾರ್ಪಾಲ್ ಹೊಡೆಸಿದರೆ ಮಳೆಗೆ ಮರೆಯಾಗಿ, ಬಂದವರಿಗೆ ತಣ್ಣಗೆ ಕೂರಲು ಜಾಗವಾಗಿ, ಊಟದ ಜಗುಲಿಯಾಗಿ, ಎಲೆ ಅಡಿಕೆ ಮೆಲ್ಲುತ್ತಾ ಹರಟೆ ಹೊಡೆಯುವ ತಾಣವಾಗಿ, ಮಕ್ಕಳ ಆಟದ ಮೈದಾನವಾಗಿ, ಹಿರಿಯ ತಲೆಮಾರುಗಳ ನೆನಪಿನ ಮಾತುಕತೆಗೆ ಶೋತೃವಾಗಿ, ಏಕಾಂತಕ್ಕೆ ಜೊತೆಯಾಗಿ, ಹೀಗೆ ಬಗೆ ಬಗೆಯ ರೂಪ ಧರಿಸಿ ಎಲ್ಲರಿಗೂ ಸಮಾಧಾನ, ನೆಮ್ಮದಿ, ತೃಪ್ತಿ, ನಿರಾಳ ಭಾವ ಎಲ್ಲವನ್ನು ಕೊಡುತ್ತಿತ್ತು. ಎಷ್ಟು ಜನ ಬಂದರೂ ಸುಧಾರಿಸುವ ಧೈರ್ಯವನ್ನೂ ಸಹ. ಬದುಕಿಗೊಂದು ನೆರಳಿನ ಆಸರೆ ಬೇಕು ಅನ್ನೋದು ಚಪ್ಪರ ಕಲಿಸುತಿತ್ತಾ.... ನೆರಳಾಗಬೇಕು ಅನ್ನೋದು ಹೇಳುತಿತ್ತಾ...

ಈಗ ಮನೆಯಲ್ಲಿ ಅಜ್ಜಿಯೂ ಇಲ್ಲ, ಅಜ್ಜಿಯಿದ್ದರೂ ಮೊಮ್ಮಕ್ಕಳು ಇಲ್ಲ. ಅಂಗಳದಲ್ಲಿ ಚಪ್ಪರವೂ ಇಲ್ಲ. ಹತ್ತಿ ಇಳಿಯುವುದು ಪ್ರಯಾಸವೆನಿಸತೊಡಗಿದೆ. ಕೆಲಸಗಾರರು ಕಾಣೆಯಾಗಿದ್ದಾರೆ. ಪ್ರಕೃತಿಗೆ ಸಮೀಪವಾದ ತಟ್ಟಿಗಳು ಬಳಸಲು ತುಟ್ಟಿ ಅನ್ನಿಸತೊಡಗಿದೆ. ಅದನ್ನು ಮಾಡುವವರು ಹಾಗೂ ಕೊಳ್ಳುವವರೂ ಇಬ್ಬರೂ ಇಲ್ಲದೆ ಕರಕುಶಲ ಕಲೆಯೊಂದು ತಣ್ಣಗೆ ಮರೆಯಾಗಿದೆ.  ಹಾಗಾಗಿ ಅಂಗಳದಲ್ಲೇ ಅಡಿಕೆ ಒಣಗಿಸಲು ಕಬ್ಬಿಣದ ಮೆಶ್ ಗಳು ಅಡಿಯಿಟ್ಟು ಕೆಲಸವನ್ನು ಸುಲಭವಾಗಿಸಿದೆ. ಇನ್ನು ಅಡಿಕೆ ಬಿಟ್ಟು ಒಣಗಿಸಲು ಇನ್ಯಾವುದೂ ಲಭ್ಯವಿಲ್ಲ. ಅವುಗಳನ್ನು ಬೆಳೆಯುವುದು, ಒಣಗಿಸುವುದು ನಷ್ಟದ ಬಾಬತ್ತು ಎಂದು ಯಾವತ್ತೋ ಬಿಟ್ಟಾಗಿದೆ. ತಟ್ಟಿಗಳನ್ನು ಸಂಭಾಳಿಸುವುದು ಕಷ್ಟ. ಕಷ್ಟದ ಯಾವುದೂ ಈಗ ಅನಿವಾರ್ಯವಲ್ಲ. ಎಲ್ಲದಕ್ಕೂ ಪರ್ಯಾಯವಿದೆ. ಸುಲಭವಾದದ್ದು ಸಿಕ್ಕಿದೆ, ಬಳಸಿ ಬಿಸಾಡುವುದು ಅಭ್ಯಾಸವಾಗಿ ಸಹಜವಾಗಿ ಹೋಗಿದೆ.

ತುಕ್ಕು ಹಿಡಿದು ಕಿತ್ತು ಹೋಗುತ್ತಿದೆ ಇದನ್ನೆಲ್ಲಾ ವಾಪಸ್ ಕೊಟ್ಟು ಹೊಸದಾಗಿ ತರಬೇಕು ಎಂದು ಮೂಲೆಯಲ್ಲಿ ಕೂಡಿಟ್ಟ ಮೆಶ್ ತೋರಿಸುತ್ತಾ ತಂಬಿ ಹೇಳುವಾಗ ಬಿಡುವುದು ಅಷ್ಟು ಸುಲಭವಾ ಎಂಬ ಗೊಂದಲ. ಹೊಸತು ಎನ್ನಿಸುವುದು ಅಷ್ಟು ಸುಲಭವಾದಾಗ ಹಳೆಯದಕ್ಕೆ ರಿಪೇರಿ ಬೇಡವೆನ್ನಿಸುತ್ತಾ.... ತುಕ್ಕು ಹಿಡಿದಿದ್ದು, ಬಿಟ್ಟು ಹೋಗುತ್ತಿರುವುದು ಮೆಶ್ ಅಥವಾ  ಮನಸ್ಸಾ ಎನ್ನುವ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಉತ್ತರ ಹುಡುಕುವ ಅದನ್ನು ದಿಟ್ಟಿಸುವ ಧೈರ್ಯವಿಲ್ಲದೆ ಹೊರಗೆ ಬರುತ್ತೇನೆ. ಅಟ್ಟದ ಮೂಲೆಯಲ್ಲಿ ಕಟ್ಟಿಟ್ಟಿದ್ದ ತಟ್ಟಿಯ ಪಳೆಯುಳಿಕೆಯೊಂದು ನಿಟ್ಟುಸಿರು ಬಿಟ್ಟ ಹಾಗೆ ಅನ್ನಿಸುತ್ತದೆ. ಬದುಕು ಎನ್ನುವುದು ಅನಾಮತ್ತಾಗಿ ತೊಟ್ಟಿಯ ಸಮೀಪ ಬಂದಿದೆಯಾ ಎಂದು ಕೇಳಿಕೊಳ್ಳುತ್ತಾ ಬಂದರೆ ಚಪ್ಪರವಿಲ್ಲದ ಅಂಗಳದಲ್ಲಿ ಬಿರುಬಿಸಿಲಿಗೆ ತಲೆ ಎತ್ತಲು, ಕಣ್ಣು ಬಿಡಲೂ ಕಷ್ಟವಾಗತೊಡಗಿತು.
ನೆರಳು ಬೇಕು ಅಂಗಳಕ್ಕೆ ಬದುಕಿಗೆ ಎರಡಕ್ಕೂ....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...