ಮೇಲುಸುಂಕ.
ನವರಾತ್ರಿ ಶುರುವಾಯ್ತು ಅಂದ್ರೆ ಒಂದಿನ ಮೇಲುಸುಂಕ ಕ್ಕೆ ಹೋಗಿ ಬರಬೇಕು ಅನ್ನೋದು ಊರಲ್ಲಿ ಬಹುತೇಕರ ವಾಡಿಕೆ. ಕಾಡಿನ ನಡುವಿನ ದಾರಿಯಲ್ಲಿ ಹೊಳೆ ದಾಟಿ ಇಂಬಳಗಳಿಂದ ಕಚ್ಚಿಸಿಕೊಂಡು ಹೋಗುವುದರಲ್ಲೂ ಒಂದು ಸಂಭ್ರಮ ಇರುತಿತ್ತು. ಅದೂ ಏನು ಸುಲಭದ ದಾರಿಯಾಗಿರಲಿಲ್ಲ. ಬಸ್ ಎನ್ನುವುದು ಅಲ್ಲಿಯ ಕೆಂಪು ಮಣ್ಣಿನ ರಸ್ತೆ ಕಂಡೂ ಇರಲಿಲ್ಲ. ಅಂಕು ಡೊಂಕಾದ ದಾರಿಯೊಂದು ಗದ್ದೆಯ ಅಂಚಿನಲ್ಲಿ ಸಾಗಿ, ಹಳ್ಳದ ಸೆರಗನ್ನು ದಾಟಿ ಕಾಡಿನ ಮಧ್ಯೆ ಬೈತಲೆ ತೆಗೆದಂತೆ ಸಾಗಿ ಕಲ್ಲು ಮಣ್ಣುಗಳ ನಡುವೆ ರಸ್ತೆಯನ್ನು ಸೃಷ್ಟಿಸಿಕೊಂಡು ಹೋಗಬೇಕಿತ್ತು. ಎತ್ತುಕೊಂಡು ಹೋಗುವಷ್ಟು ಚಿಕ್ಕವಳಲ್ಲ, ನಡೆಯುವಷ್ಟು ದೊಡ್ದವಳಲ್ಲ ಅನ್ನೋ ಗುಂಪಿಗೆ ಸೇರಿದವಳು ನಾನು. ಹಾಗಾಗಿ ನಿನ್ನ ಕೈಯಲ್ಲಿ ಅಷ್ಟು ದೂರ ನಡೆಯೋಕೆ ಆಗೋಲ್ಲ ಮುಂದಿನವರ್ಷ ಕರ್ಕೊಂಡು ಹೋಗ್ತೀನಿ ಅಂತ ಪ್ರತಿ ಸಾರಿಯೂ ಬಿಟ್ಟು ಹೋಗುತಿದ್ದ ಮಾವ. ನಾನು ನಡೆಯಬಲ್ಲೆ ಅನ್ನುವುದರ ಒಳಗೆ ತನ್ನಷ್ಟಕ್ಕೆ ತಾನು ಹರಿಯುತಿದ್ದ ವಾರಾಹಿಗೆ ಒಂದು ಡ್ಯಾಮ್ ಕಟ್ಟಿ ಅವಳನ್ನು ನಿಲ್ಲಿಸುವುದರ ಜೊತೆಗೆ ನಮ್ಮ ಊರಿನ ಉಸಿರು ನಿಂತಾಗಿತ್ತು. ಆಮೇಲೆ ಮೇಲುಸುಂಕ ಅನ್ನೋದು ವರಾಹಿಯ ಮಡಿಲಲ್ಲಿ ಮುಳುಗಿದ ಊರುಗಳಂತೆ ಮನದಲ್ಲೂ ಮುಳುಗಿ ಹೋಗಿತ್ತು, ಗುರುತೇ ಇಲ್ಲದಂತೆ.
ಮೊನ್ನೆ ಊರಿಗೆ ಹೋದಾಗ ಫ್ರೀ ಇದ್ಯಾ ಮೇಲುಸುಂಕಕ್ಕೆ ಹೋಗಿ ಬರೋಣ ಅಂತ ಮಾವ ಅಂದಾಗ ಮತ್ತೆ ಮನಸ್ಸಿನ ಅಂಗಳದಲ್ಲಿ ಅಸೆ ಎದ್ದು ಬಂದಿತ್ತು. ಅದನ್ನು ನೋಡುವ ಆಸೆಗಿಂತಲೂ ಮತ್ತೆ ಊರಿನ ದಾರಿಯಲ್ಲಿ ನೆನಪುಗಳನ್ನ ಅರಸುತ್ತಾ ಹುಡುಕುವ ಪಯಣವೇ ರೋಮಾಂಚನ ಅನ್ನಿಸಿತ್ತು. ವರಾಹಿಯನ್ನು ಮಾತಾಡಿಸಬಹುದು ಅನ್ನೋ ಯೋಚನೆಯೇ ಹುಚ್ಚು ಹಿಡಿಸಿತ್ತು. ಅದೆಷ್ಟು ವರ್ಷಗಳ ನಂತರ ಅವಳ ಭೇಟಿ. ಪ್ರಿಯಕರನ್ನು ನೋಡಲು ಹೋಗುವಾಗಿನ ತವಕ, ಆತಂಕ, ಆಸೆ ಎಲ್ಲವೂ. ಸರಿ ಕಣೋ ಅಂದೇ ನಾಳೆಯೇ ಹೋಗೋಣ ಅಂದಾಗ ರೆಕ್ಕೆ ಬಿಚ್ಚಿ ಹಾರುವ ತವಕ. ಮೊದಲ ನವರಾತ್ರಿ ಹೀಗೆ ಸುಸಂಪನ್ನವಾಗಿ ಅಡಿಯಿಟ್ಟು ನಸುನಕ್ಕಿತ್ತು.ರಾತ್ರಿಯೆಲ್ಲಾ ಊರಿನದೇ ಕನವರಿಕೆ, ಬದುಕು ಎಷ್ಟೇ ಮುಂದಡಿಯಿಟ್ಟರೂ ಬಾಲ್ಯವೆನ್ನುವುದು ಸದಾ ಚಿಮ್ಮುವ ಒರತೆ, ಬಾಲ್ಯ ಎಷ್ಟು ಶ್ರೀಮಂತವಾಗಿರುತ್ತೋ ಬದುಕು ಅಷ್ಟಷ್ಟು ಚೆಂದವಾಗಿರುತ್ತೆ ಅನ್ನೋದು ನನ್ನ ಅನುಭವ. ಅದರಲ್ಲೂ ಹುಟ್ಟಿದ ಊರು ಅನ್ನೋದು ಬದುಕಿನ ಬೇರು. ಎಲ್ಲೇ ಹೋದರು ಹೇಗೆ ಇದ್ದರೂ ಹುಟ್ಟಿದ ಊರಿನ ಮೇಲಿನ ಮೋಹ, ಹಾಗೂ ಸೆಳೆತವನ್ನು ಮೀರಲು, ಮರೆಯಲು ಸಾದ್ಯವೇ ಇಲ್ಲ. ಬೇರನ್ನು ಬಿಟ್ಟು ಬದುಕುವುದಾದರೂ ಹೇಗೆ? ಊರು ಮುಳುಗಿದರೂ ನೆನಪು ಮುಳುಗುವುದಿಲ್ಲ, ಉಸಿರುಕಟ್ಟಿ ಸಾಯುವುದಿಲ್ಲ.
ಮೊದಲೇ ನವರಾತ್ರಿಯ ಸಮಯ. ಮಳೆಗೂ ಬಿಟ್ಟು ಹೊರಡುವ ಹೊತ್ತು. ಹಾಗಾಗಿ ಅದಕ್ಕೂ ದುಃಖ. ಮತ್ತೆ ಇನ್ನೊಂದು ಮಳೆಗಾಲದವರೆಗೂ ವಿರಹ ಸಹಿಸಬೇಕು. ಅದಕ್ಕೇ ಏನೋ ಬೆಳಿಗ್ಗೆ ಏಳುವ ವೇಳೆಗೆ ಸಣ್ಣಗಿನ ಸೋನೆ ಮಳೆ ಹನಿಹನಿಯಾಗಿ ಇಳಿಯುತ್ತಿತ್ತು. ಈ ಮಳೆಗೂ ನೆನಪಿಗೂ ಅದೆಂಥಾ ಅವಿನಾಭಾವ ಸಂಬಂಧ ಅಂದುಕೊಳ್ಳುತ್ತಲೇ ಕಾರ್ ಹತ್ತಿದರೆ ಕಿಟಕಿಯ ಗ್ಲಾಸ್ ಇಳಿಸಿ ಎರಚುವ ಮಳೆಗೆ ಮುಖವೊಡ್ಡಿ ಕುಳಿತಿದ್ದಳು ಅಹಿ, ಶೀತ ಆಗುತ್ತೇನೋ ಅನ್ನುವಳು ಅಲ್ಲೇ ಮಾತನ್ನು ನುಂಗಿ ಅವಳನ್ನೇ ಗಮನಿಸುತಿದ್ದೆ. ಕಾಲಚಕ್ರ ಹಿಂದುರುಗಿ ಬಾಲ್ಯ ವಾಪಾಸ್ ಬಂತೇನೋ ಅನ್ನಿಸುವಷ್ಟರ ಮಟ್ಟಿಗೆ ಅವಳು ನನ್ನಂತೆ ವರ್ತಿಸುತ್ತಿದ್ದಳು. ಊರಿನ ದಾರಿಯನ್ನು ದಿಟ್ಟಿಸಿ ನೋಡುತ್ತಿದ್ದಳು. ಬಿಟ್ಟ ಕಣ್ಣುಗಳಿಂದ ದಾರಿಯನ್ನೇ ನೋಡುತ್ತಾ ಮಳೆಗೆ ಮುಖವೊಡ್ಡಿ ಮಾತೇ ಮರೆತವಳಂತೆ ಕಳೆದು ಹೋಗಿದ್ದಳು. ಯಡೂರು ಹತ್ತಿರವಾಗುತಿದ್ದಂತೆ ಭಾವ ತೀವ್ರತೆ. ಮಳೆಯ ಬಿರುಸೂ ನಿಧಾನಕ್ಕೆ ಜೋರಾಗುತಿತ್ತು, ನೆನಪಿನ ಮಳೆಯೂ ಟಪ ಟಪನೇ ಬೀಳುತ್ತಿತ್ತು.
ಹನಿ ಹನಿಯಾಗಿ ಶುರುವಾದ ನೆನಪುಗಳು ಜಡಿಮಳೆಯೊಂದಿಗೆ ಸ್ಪರ್ದಿಸಿದ್ದು ಯಾವಾಗ ಗೊತ್ತಿಲ್ಲ, ಪ್ರತಿ ತಿರುವೂ, ಪ್ರತಿ ಹೆಜ್ಜೆಯೂ ಅಸಂಖ್ಯಾತ ನೆನಪುಗಳ ಮಳೆಗೆ ಸಿಲುಕಿ ನೆಲದಂತೆಯೇ ಮನಸ್ಸು ತೊಯ್ಯುತಿತ್ತು. ಮತ್ತೆ ಮತ್ತೆ ಮೊಳಕೆಯೊಡೆದು ನಸು ನಗು ಬೀರುತ್ತಿತ್ತು. ತೂಗಾಡುತಿತ್ತು. ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದು ನಿಂತ ಕಾಡಿನಂತೆ ಎದ್ದು ಕಾಣುತಿತ್ತು. ಕಣ್ಣಲ್ಲಿ ಮಾತ್ರ ಸೋನೆಮಳೆ ಸುರಿಯುವುದು ನಿಂತಿರಲಿಲ್ಲ. ಅರೆ ಯಡೂರು ಬಂತು ಅನ್ನುವ ಹೊತ್ತಿಗೆ ಕಣ್ಣು ಸಂಪಗೊಡಿಗೆ ಹೋಗುವ ದಾರಿಯನ್ನು ಹುಡುಕುತಿತ್ತು. ಪರಿಚಿತ ಮುಖಕ್ಕಾಗಿ ಮನಸ್ಸು ತಹತಹಿಸುತಿತ್ತು. ತಟ್ಟನೆ ನಗುವೊಂದು ಅರಳಿಸಲು ತುಟಿ ಕಾಯುತ್ತಿತ್ತು. ಡ್ಯಾಮ್ ಗೇಟ್ ದಾಟಿ ವಾರಾಹಿ ಮಡಿಲು ಎದುರಾದಾಗ ಮಾತ್ರ ಇನ್ನು ಕುಳಿತಿರಲು ಸಾಧ್ಯವಾಗಲೇ ಇಲ್ಲಾ.
ಅದಾಗಲೇ ಮಳೆ ತನ್ನ ಬಿರುಸು ಹೆಚ್ಚಿಸಿ ನೆಲ ಮುಗಿಲು ಒಂದು ಮಾಡಿ ಬೆಳ್ಳನೆಯ ತೆರೆ ಎಳೆದುಬಿಟ್ಟಿತ್ತು. ಅಲ್ಲಲ್ಲಿ ನಿಂತ ನಡುಗಡ್ಡೆಗಳು ಹಸಿರು ಬಿಳಿಯ ಮಧ್ಯದಲ್ಲಿ ಮರೆಯಾಗಿ ಹೋಗಿತ್ತು. ಒಂದಷ್ಟು ಹೊತ್ತು ಅವಳ ದಡದಲ್ಲಿ ಮೌನವಾಗಿ ಕೂತು ಒಂದೊಂದೇ ಹನಿಯನ್ನು ಹಿಡಿದು ಪೋಣಿಸುತ್ತಾ ಕುಳಿತಿದ್ದೆ. ಮಳೆ ನೋಡಬೇಕು ಅಂದ್ರೆ ಹುಲಿಕಲ್ ಕಡೆ ಹೋಗಬೇಕು. ಅಪ್ಪಟ ಮಲೆನಾಡು ಅಂದರೆ ಅದೇ. ಆಗುಂಬೆಯನ್ನು ಸದ್ದಿಲ್ಲದೇ ಹಿಂದಿಕ್ಕಿ ಹುಲಿಕಲ್ ಹರದಾರಿ ಮುಂದಕ್ಕೆ ಎಂದೋ ಹೋಗಿಯಾಗಿದೆ. ಮಳೆ, ಕಾಡು, ಬೆಟ್ಟ, ಪ್ರಾಣಿ, ಪಕ್ಷಿಗಳು ಎಲ್ಲವೂ ಸಮೃದ್ಧ. ಮಾತು ನಿಷಿದ್ಧ.
ವಾರಾಹಿಯ ಆಚೆ ದಡದಲ್ಲಿ ದಟ್ಟ ಕಾಡುಗಳ ಕೆಳಗೆ, ಅಲ್ಲೊಂದು ಇಲ್ಲೊಂದು ಮನೆಯಿರುವ ನೀರವ, ಪ್ರಶಾಂತ ವಾತಾವರಣದಲ್ಲಿ ಅಮ್ಮನವರು ಮೌನವಾಗಿ ಕುಳಿತಿದ್ದಾರೆ. ಮೊದಲು ಅದು ಘಟ್ಟದ ಕೆಳಗಿನ ಹಾಗೂ ಮೇಲಿನ ನಡುವಿನ ಸುಂಕದ ಕಟ್ಟೆಯಾಗಿತ್ತಂತೆ. ಹಾಗಾಗಿಯೇ ಮೇಲುಸುಂಕ ಅನ್ನೋ ಹೆಸರಂತೆ. ಯಾವಾಗ ಮಾಣಿ ಡ್ಯಾಮ್ ಆಗಿ ವರಾಹಿ ಊರೂರು ನುಂಗತೊಡಗಿದಾಗ ಸುತ್ತ ಮೂರು ಕಡೆ ನೀರು ನಿಂತರೂ ಈ ಊರು ಮಾತ್ರ ಉಳಿದು ಬೆರಳೆಣಿಕೆಯ ಮನೆಗಳು ಮಾತ್ರ ಉಳಿದುಕೊಂಡವು. ವರಾಹಿಯೂ ಮುಂದೆ ಬರದೇ ಅಲ್ಲೇ ನಿಂತಳು. ಅಲ್ಲಿಗೂ ಒಂದು ಸ್ಥಳ ಪುರಾಣ ಇದೆ. ಸುಮಾರು ಆರು ನೂರು ವರ್ಷಗಳ ಹಿಂದಿನ ಮಾತದು. ಅಲ್ಲಿ ವಾಸವಿದ್ದ ಕೃಷಿಕರೊಬ್ಬರ ಮನೆಯ ಹಸು ಮೇಯಲು ಹೋಗಿ ಬಂದಿದ್ದು ಹಾಲು ಕೊಡುತ್ತಿರಲಿಲ್ಲವಂತೆ. ಒಂದು ದಿನ ಎಲ್ಲೋ ಕರು ಕುಡಿದಿರಬೇಕು ಅಂದುಕೊಂಡು ಸುಮ್ಮನಾಗಬಹುದು. ಇದು ವಾರಗಟ್ಟಲೆ ಮುಂದುವರಿದಾಗ ಪರೀಕ್ಷೆ ಮಾಡಲೇ ಬೇಕು ಎಂದು ಅದನ್ನು ಬೆಳಿಗ್ಗೆ ಕೊಟ್ಟಿಗೆಯಿಂದ ಮೇಯಲು ಬಿಟ್ಟಾಗಿನಿಂದ ಕಾಯಲು ಕುಳಿತರೆ ಸಂಜೆ ಮನೆಗೆ ಮರಳುವ ಹೊತ್ತಿನಲ್ಲಿ ಅದು ಪೊದೆಯೊಂದರ ಮರೆಗೆ ಹೊಗಿತಂತೆ. ಅಬ್ಬಾ ಸಿಕ್ಕಿಬಿತ್ತು ಅಂತ ಅದನ್ನು ಹಿಂಬಾಲಿಸಿ ಹೋದರೆ ಪೊದೆಯ ಮೇಲೆ ಅದು ಹಾಲು ಸುರಿಸುತ್ತಿತ್ತಂತೆ.
ಅಯ್ಯೋ ನಿನ್ನ ದುಷ್ಟ ಬುದ್ಧಿಯೇ ಅಂತ ನಿನ್ನ ಬಿಟ್ಟರೆ ತಾನೇ ಹೀಗೆ ಮಾಡೋದು ಅಂತ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದನ್ನು ನೋಡಿಯೂ ಸುಮ್ಮನಿದ್ದ ಅವರಿಗೆರಾತ್ರಿ ಕನಸಿನಲ್ಲಿ ದುರ್ಗಿ ಕಾಣಿಸಿಕೊಂಡು ನಾನು ಅಲ್ಲಿ ವಾಸವಾಗಿದ್ದೇನೆ. ನನ್ನ ಪೂಜೆಗೆ ಯಾರನ್ನಾದರೂ ವ್ಯವಸ್ಥೆ ಮಾಡು ಎಂದು ಆದೇಶಿಸಿದಳಂತೆ. ಬೆಳಿಗ್ಗೆ ಎದ್ದು ಹೋಗಿ ಪರೀಕ್ಷೆ ಮಾಡಿದಾಗ ಅಲ್ಲೊಂದು ಕಲ್ಲು ಕಾಣಿಸಿತಂತೆ. ಅದಿನ್ನೂ ದಟ್ಟ ಕಾಡುಗಳ ಮಧ್ಯೆ ಹಾಗೆ ಇದೆ. ಸ್ವಲ್ಪ ಈಚೆಗೆ ವಿಗ್ರಹವೊಂದನ್ನು ಸ್ಥಾಪನೆ ಮಾಡಿ ದೇವಿಯನ್ನು ಅಲ್ಲಿಗೆ ಆವಾಹನೆ ಮಾಡಲಾಗಿದೆ.
ಯಾವುದೇ ಗೌಜು ಗದ್ದಲ ಇಲ್ಲದ ದಿವ್ಯ ಭಾವ ಅನುಭವಿಸಬೇಕಾದರೆ, ಮೌನದಲ್ಲಿ ಕಳೆದು ಹೋಗಬೇಕು ಅನ್ನೋದಾದರೆ ಅಲ್ಲಿಗೆ ಹೋಗಬೇಕು. ಅದು ಬೇರೆಯದೇ ಜಗತ್ತು ಅದರಲ್ಲೂ ಮಳೆಗಾಲದಲ್ಲಿ ಉಹೂ ಅದು ಕಲ್ಪನೆಗೂ ನಿಲುಕದ ಲೋಕ. ಫೋನ್, ಕರೆಂಟ್, ಜನ ಇದ್ದೂ ಇಲ್ಲದಂತೆ ನಾನು ಕೇವಲ ನಾನಾಗಿರಬೇಕು ಅನ್ನೋ ತುಡಿತವಿದ್ದವರಿಗೆ ಹೇಳಿ ಮಾಡಿಸಿದ ಸ್ಥಳ. ನಡೆದಷ್ಟೂ ದಾರಿ, ಹೆಜ್ಜೆಯಿಟ್ಟಲೆಲ್ಲಾ ಮತ್ತಷ್ಟು ತೆರೆದುಕೊಳ್ಳುವ ಕವಲುಗಳು, ಒದ್ದೆ ಒದ್ದೆ ದಾರಿ, ಕಣ್ಣು ಹಾಯಿಸಿದಷ್ಟೂ ಹಸಿರು, ಆಲಸ್ಯತನವನ್ನೇ ಹೊದ್ದು ಮಲಗಿದ ನಾಯಿಗಳು, ಮಂಜಿನ ಪಂಚೆಯುಟ್ಟು ತಯಾರಾದ ಗುಡ್ಡಗಳು, ಪಕ್ಕನೆ ಚಿಮ್ಮಿ ಒಮ್ಮೆ ನೋಡಿ ನಿರ್ಲಕ್ಷ್ಯದಿಂದ ಸಾಗುವ ನವಿಲುಗಳು, ಸದ್ದಿಲ್ಲದೇ ಕಾಲ ಬುಡದಲ್ಲೇ ಹರಿದು ಹೋಗುವ ಹಾವುಗಳು, ಸರಕ್ಕನೆ ಸರಿದು ಹೋಗುವ ಮುಂಗುಸಿ, ರೆಕ್ಕೆ ಪಟ ಪಟಿಸುವ ಕಾಡುಕೋಳಿ.... ನಿಶಬ್ಧದಲ್ಲೊಂದು ಮಾತಾಡುವ ಶಬ್ದ. ಇವೆಲ್ಲದರ ನಡುವೆ ಪುಟ್ಟ ದೇವಸ್ಥಾನದಲ್ಲಿ ದಿವ್ಯವಾಗಿ ಮುಗುಳ್ನಗುತ್ತಾ ಕುಳಿತಿರುವ ಅಮ್ಮನವರು. ಉದ್ಭವ ದುರ್ಗಾಪರಮೇಶ್ವರಿ.
ಮುಳುಗಡೆಗೆ ಮುನ್ನ ಸುತ್ತ ಹತ್ತಾರು ಹಳ್ಳಿಗಳ ಅಮ್ಮ ಅವಳು. ಹಾಗಾಗಿ ಎಲ್ಲದಕ್ಕೂ ಅವಳೇ ದಿಕ್ಕು, ಅವಳೇ ಹೊಣೆ, ಅವಳೇ ಶಕ್ತಿ. ಹಾಗಾಗಿ ತಾವು ಬೆಳೆದ ತಮ್ಮ ಕೈಲಾದ ಸಂಪತ್ತು ಅವಳಿಗೆ ಅರ್ಪಿಸಿ ಕೃತಾರ್ಥರಾಗುತ್ತಿದ್ದರು. ಅವಳೂ ಅಷ್ಟಕ್ಕೇ ತೃಪ್ತಳಾಗಿ ಹರಸುತ್ತಿದ್ದಳು. ನವರಾತ್ರಿಯಲ್ಲಿ ಮಾತ್ರ ಅವಳ ವೈಭವವೇ ವೈಭವ. ದಟ್ಟ ಕಾಡಿನ ನಡುವೆ ಸುರಿಯುವ ಮಳೆಯಲ್ಲಿ ಹತ್ತಾರು ಮೈಲಿ ನಡೆದು ಬಂದು ಅವಳ ಪೂಜೆ ದರ್ಶನ ಮಾಡಿ ಪುನೀತರಾಗುತ್ತಿದ್ದವರು ನೂರಾರು ಮಂದಿ. ಜನರ ಪ್ರಾರ್ಥನೆಯನ್ನು, ದುಃಖವನ್ನು ಅವಳಿಗೆ ತಲುಪಿಸಲು ಕಂಕಣಬದ್ಧರಾಗಿದ್ದಾವೇನೋ ಎಂಬಂತೆ ಹೊರಗೆ ಬರುತ್ತಿದ್ದ ಹಾಗೆ ಕಾಣುವ ಸುಳಿ ಸುಳಿಯಾದ ಹೊಗೆಯೊಂದು ಗುಡ್ಡವನ್ನು ಏರಿ ಅಲ್ಲಿದ್ದ ಮೋಡಕ್ಕೆ ಪಿಸುಗುಡುವುದು ಕಾಣುತ್ತದೆ. ಆಗ ತಂತಾನೇ ಮುಖದಲ್ಲೊಂದು ಕಿರುನಗು, ನಿರಾಳ ಭಾವ ಹುಟ್ಟಿಕೊಳ್ಳುತ್ತದೆ. ಚಿಮಣಿ, ಗ್ಯಾಸ್ ಲೈಟ್ ನಂದಾದೀಪದ ಬೆಳಕಿನಲ್ಲೂ ನವರಾತ್ರಿಯಂದು ಸೇರುವ ಜನ, ನಡೆಯುವ ಪೂಜೆ ಊಟದ ವ್ಯವಸ್ಥೆ ಅಚ್ಚರಿ ಹುಟ್ಟಿಸುತ್ತದೆ. ಬದುಕಿಗೆ ಜಗಮಗಿಸುವ ಬೆಳಕಿಗಿಂತ ಈ ಅರೆ ಬೆಳಕು ಹಿತ.
ಬದುಕೆಂದರೆ ಇದಲ್ಲ ಇನ್ನೇನೋ ಅನ್ನುವುದನ್ನ ಅಲ್ಲಿ ಇಡುವ ಪ್ರತಿ ಹೆಜ್ಜೆಯೂ ಕಲಿಸುತ್ತದೆ. ಹೊರಜಗತ್ತು ನಿಂತಿರುವುದು ಶಬ್ದದ ಮೇಲೆ. ದೂರ ಹೋದಂತೆ ಒಳ ಜಗತ್ತು ಸ್ವಲ್ಪ ಸ್ವಲ್ಪವಾಗಿ ತೆರೆದು ಕೊಳ್ಳುತ್ತಾ ಹೋಗುತ್ತದೆ. ಅಲ್ಲಿ ನಿಶಬ್ಧದ್ದೇ ರಾಜ್ಯಭಾರ. ಜುಳು ಜುಳು ಹರಿಯುವ ತೊರೆ, ಹರಿಯುವಿಕೆಗೆ ಒಂದು ಸದ್ದಿದೆ, ಮತ್ತದು ಶ್ರುತಿ ಬದ್ಧವಾಗಿದೆ. ಪ್ರಕೃತಿಯಲ್ಲಿ ಪ್ರತಿಯೊಂದು ಶ್ರುತಿ ಬದ್ಧವೆ ಅಪಶ್ರುತಿ ಹುಟ್ಟಿಸುವುದು ಮನುಷ್ಯ ಮಾತ್ರ. ಅಲ್ಲೆಲ್ಲೋ ಒಡೆದು ಸ್ಪಟಿಕದಷ್ಟು ಶುಭ್ರವಾಗಿ ಚಿಮ್ಮುವ ಜಲ, ಕಣ್ಣು ಹರಿಸಿದಲೆಲ್ಲಾ ನೀರು, ಹಸಿರು. ಮಳೆಯ ಶ್ರುತಿಗೆ ದನಿ ಸೇರಿಸುವ ಜೀವ ಸಂಕುಲ. ಮೌನ ಅದೆಷ್ಟು ಶಬ್ದಗಳನ್ನು ಪರಿಚಯಿಸುತ್ತದೆ. ಮಾತಿನ ನಡುವೆ ಕಳೆದು ಹೋಗಿರುವ ದ್ವನಿಯೆಷ್ಟು... ಮೌನವಾಗಬೇಕು ಆಗಾಗ ಇಂಥಲ್ಲಿ, ಸಂಗೀತ ಆಲಿಸುವುದಕ್ಕೆ, ಮಾತಿನ ಕರ್ಕಶತೆ ಅರಿವಾಗುವುದಕ್ಕೆ.. ಪ್ರಕೃತಿಯ ಆಗಾಧತೆಯೆದುರು ಕುಬ್ಜತನ ಗೊತ್ತಾಗುವುದಕ್ಕೆ.
ವಾಪಾಸು ಬರುವಾಗ ಮಳೆ ನಿಂತು ಇಳಿಬಿಸಿಲು ನೀರಿನಲ್ಲಿ ಚಿನ್ನಾಟವಾಡುತಿತ್ತು. ವರಾಹಿಯ ಮಡಿಲಲ್ಲಿ ಕುಳಿತು ಕುಶಲ ವಿಚಾರಿಸಿ ಊರಿನ ಬಗ್ಗೆ ಕೇಳುವಾಗ, ಕೇಳುತ್ತಾ ಕೇಳುತ್ತಾ ಹನಿಗಣ್ಣು ಆಗುವಾಗ ಅಮ್ಮಾ ನೀನು ಲಕ್ಕಿ ಕಣೆ ನಂಗೂ ಇಲ್ಲಿ ಇರ್ಬೇಕು ಅನ್ನಿಸುತ್ತೆ, ಡ್ಯಾಮ್ ಒಡೆದು ಬಿಡೋಣವಾ ಅಂತ ಆಸೆ ಕಣ್ಣುಗಳಿಂದ ಅಹಿ ಕೇಳುತಿದ್ದಳು. ವರಾಹಿಯನ್ನೇ ನೋಡಿದೆ. ಎಲ್ಲವನ್ನೂ ನುಂಗಿಕೊಂಡ ಅವಳೂ ಮೌನವಾಗಿ ನಿಂತಿದ್ದಳು. ಹರಿಯುವುದನ್ನು ಮರೆತು, ಅಸ್ತಿತ್ವವನ್ನೇ ಕಳೆದುಕೊಂಡ ಗಾಢವಿಷಾದ ಹೊದ್ದು. ಉತ್ತರಿಸಲು ಸ್ವರ ಏಳಲೇಇಲ್ಲ.ದುಗುಡದ ಕಾರ್ಮೋಡ ಮನದಲ್ಲಿ ದಟ್ಟವಾಗಿ ಕವಿದಿತ್ತು. ಸುತ್ತಲೂ ದಿವ್ಯ ಮೌನ, ಮೌನವೂ ಕರ್ಕಶ, ಎದುರಿಸಲು ಅಸಾಧ್ಯ ಅನ್ನೋದು ಅರ್ಥವಾಗುತಿದ್ದಂತೆ ಕಾರ್ ಹತ್ತಿದ್ದೆ. ಬದುಕಿನ ಬೇರು ತೊರೆಯುವುದು, ಮರೆಯುವುದು ಅಷ್ಟು ಸುಲಭವಲ್ಲ...
ಹರಿಯುವುದೇ ಬದುಕಾದವರಿಗಷ್ಟೇ ಗೊತ್ತು ನಿಲ್ಲುವುದು ಅದೆಷ್ಟು ಕಷ್ಟ ಅಂತ...

Comments
Post a Comment