ಸಿಂಗಾರಗೊಂಡ ನವ ವಧುವಿನಂತೆ ಕಂಗೊಳಿಸುವ ಹಂಡೆಯನ್ನು ನೋಡುತ್ತಲೇ ಹಾಸಿಗೆಯತ್ತ ನಡೆಯುತಿದ್ದರೆ ಮನಸ್ಸಿನಲ್ಲಿ ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ಏಳುವ ಆಲೋಚನೆ ಸಿದ್ದವಾಗಿರುತಿತ್ತು. ಉಳಿದ ದಿನ ಏಳಲು ಪರಿಪಾಟಲು ಪಡುವ ನಾವುಗಳು ನರಕ ಚತುರ್ದಶಿಯ ದಿನ ಮಾತ್ರ ಮುಂಚೆ ಏಳಲು ಪಣತೊಟ್ಟಿರುತಿದ್ದೆವು. ಇವತ್ತು ನನ್ನದೇ ಮೊದಲ ಸ್ನಾನ ಗೊತ್ತಾ ಅನ್ನೋ ಹೆಮ್ಮೆಗಿಂತಲೂ ಹೆಚ್ಚು ಆಕರ್ಷಣಿಯವಾಗಿರುತಿದ್ದದ್ದು ಎಂದರೆ ಹೊಸಬಟ್ಟೆ ತೊಟ್ಟು ಹೊಡೆಯುವ ಪಟಾಕಿ. ಎಲ್ಲರಿಗಿಂತ ಮೊದಲು ಯಾರು ಪಟಾಕಿ ಹೊಡಿತಾರೆ ಅನ್ನೋ ಅಘೋಷಿತ ಪಂದ್ಯವೊಂದು ಕಾಯುತ್ತಿರುತ್ತದೆ.

ನಸುಕು ಹರಿಯುವ ಮುನ್ನ ಅಭ್ಯಂಜನವಾಗಬೇಕು, ಅದಕ್ಕೂ ಮುನ್ನ ದೇವರ ಎದುರು ಕೂರಿಸಿ ಎಣ್ಣೆ ಶಾಸ್ತ್ರ. ಗರಿಕೆಯನ್ನು ಹಿಡಿದು ಎಣ್ಣೆಯ ಬಟ್ಟಲಲ್ಲಿ ಅದ್ದಿ ಅಜ್ಜಿ ಶಾಸ್ತ್ರ ಮಾಡುತ್ತಿದ್ದರೆ ಅವಸರದಲ್ಲಿ ಎದ್ದ ಕಣ್ಣುಗಳು ಜೋಕಾಲಿ ಆಡುತಿದ್ದವು. ನಂತರ ಅಂಗೈಗೆ ಹರಳೆಣ್ಣೆ ಸುರಿದುಕೊಂಡು ನೆತ್ತಿಗೆ ತಟ್ಟುತ್ತಿದ್ದರೆ ಕಣ್ಣಿನ ಜೊತೆಗೆ ದೇಹವೂ ಜೋಕಾಲಿಯಾಡಿ ನಿದಿರಾದೇವಿ ಬಂದು ಬಿಗಿಯಾಗಿ ಅಪ್ಪುತ್ತಿದ್ದಳು. ಅವಳಿಂದ ಬಿಡಿಸಿಕೊಂಡು ಬಚ್ಚಲಿಗೆ ಹೋಗುವುದು ಒಂದು ಸಾಹಸವೇ. ಹಿಂದಿನ ಬಾಗಿಲು ತೆರೆಯುತ್ತಿದ್ದಂತೆ ರಾಚುತ್ತಿದ್ದ ಸುಳಿಗಾಳಿ ಮೈಯನ್ನು ನಡುಗಿಸುತಿದ್ದರೆ ಒಂದೇ ಉಸಿರಿಗೆ ಓಡಿ ಬಚ್ಚಲೊಲೆಯ ಮುಂದೆ ಪ್ರತಿಷ್ಟಾಪನೆಯಾಗಿ ಇನ್ನೆರೆಡು ಕಟ್ಟಿಗೆ ಒಟ್ಟಿ ಅಂಗೈ ಹಿಡಿದರೆ ಚಳಿ, ಬಿಸುಪು ಮಂಪರು ಎಲ್ಲಾ ಸೇರಿ ಒಂದು ಭ್ರಮಾ ಲೋಕವೇ ಸೃಷ್ಟಿಯಾಗುತ್ತಿತ್ತು.

ಹಾಗೆಂದು ಅಲ್ಲೇ ಕಳೆದುಹೋಗುವಂತಿರಲಿಲ್ಲ. ಒಲೆಯ ದಂಡೆಯ ಮೇಲಿಟ್ಟ ಬಟ್ಟಲಿನಲ್ಲಿ ಎಳ್ಳೆಣ್ಣೆ ತುಂಬಿರುತ್ತಿತ್ತು. ಅದನ್ನು ಮೈಗೆಲ್ಲಾ ಹಚ್ಚಿಕೊಂಡು ಅದು ಹಿಡಿಯುವುದನ್ನೇ ಕಾಯುತ್ತಾ ಚಳಿ ಕಾಯಿಸುತಿದ್ದರೆ ದೊಡ್ಡದೊಂದು ಪಾಣಿ ಪಂಚೆ ಹಿಡಿದು ಅಜ್ಜಿ ಹಾಜರ್. ಎದ್ದು ಕಲ್ಲಿನ ಮೇಲೆ ಕುಳಿತುಕೊಂಡರೆ ಅಷ್ಟರೊಳಗೆ ಮರಳುತಿದ್ದ ನೀರನ್ನು ದೊಡ್ಡ ತಾಮ್ರದ ಚಂಬಿನಲ್ಲಿ ಹಿಡಿದು ದಬದಬನೆ ಸುರಿದು ಬಿಸಿಯನ್ನು ಆಸ್ವಾದಿಸುವ ಒಳಗೆ ತಲೆಯ ಮೇಲಿನಿಂದ ತಣ್ಣಗೆ ನಾಗರದಂತೆ ಇಳಿದು ಬರುತಿತ್ತು ಮತ್ತಿಯಗುಳ. ಜೊತೆಗಿಷ್ಟು ಸೀಗೆಪುಡಿ. ತಲೆ ಬೆನ್ನು ಉಜ್ಜಿ ನೀರು ಹೊಯ್ಯುತಿದ್ದರೆ ಎಷ್ಟೇ ಗಟ್ಟಿ ಮುಚ್ಚಿದರೂ ಅದ್ಯಾವ ಮಾಯದಲ್ಲೋ ಏಮಾರಿಸಿ ಕಣ್ಣಿಗೆ ನುಗ್ಗುತಿದ್ದ ಸೀಗೆಪುಡಿಯ ಘಾಟಿಗೆ ಕಣ್ಣು, ಮೂಗುಗಳಿಂದ ಸುರಿಯುತಿದ್ದ ನೀರು ಅದಕ್ಕೆ ಸ್ಪರ್ದೆ ಕೊಡುತ್ತಿತ್ತು.

ದೇಹಕ್ಕೆ ತಂಪಾದರು ಹರಳೆಣ್ಣೆ ಜಿಡ್ಡು, ಅದೊಂದು ತರಹ ಕಿರಿಕಿರಿಯೇ. ಅದನ್ನು ತೆಗೆಯಲು ಸೀಗೆಗಿಂತ ಪರಿಣಾಮಕಾರಿ ವಸ್ತು ಬೇರೆ ಯಾವುದಿದೆ? ಜಿಡ್ಡನ್ನು ತೆಗೆಯುತ್ತಲ್ಲ ಅಂತ ಜಾಸ್ತಿ ನೆಚ್ಚಿಕೊಳ್ಳುವ ಹಾಗಿಲ್ಲ, ಅದರ ಘಾಟಿಗೆ, ಸ್ವಲ್ಪ ಏಮಾರಿದರೂ ಮಿಂಚಿನಂತೆ ಅದು ಕಣ್ಣು ಮೂಗಿನೊಳಗೆ ನುಗ್ಗಿ ಧಾಳಿ ಮಾಡುತ್ತದೆ. ಇವೆರಡೂ ಇಲ್ಲದೆ ದೇಹದ ಕೊಳೆ ಹೋಗುವುದಿಲ್ಲ, ಬದುಕಿಗೆ ಹೊಳಪು ಸಿಗುವುದಿಲ್ಲ. ಎಣ್ಣೆ, ಸೀಗೆ, ನೀರು ಎಲ್ಲವೂ ಪರಸ್ಪರ ವಿರೋಧಿಗಳೇ, ಬದುಕಿನಲ್ಲಿ ಎದುರಾಗುವ ಸಂಬಂದಗಳು ಹೀಗೆ. ಹೇಗೆ ಹ್ಯಾಂಡಲ್ ಮಾಡ್ಬೇಕು ಅನ್ನೋದನ್ನ ಎಷ್ಟು ಸರಳವಾಗಿ, ಸಹಜವಾಗಿ ಒಂದು ಅಭ್ಯಂಜನ ಕಲಿಸುತ್ತೆ ಅನ್ನೋದೇ ಅಚ್ಚರಿ. ಎಲ್ಲವೂ ಮುಖ್ಯವೇ ಅವುಗಳ ಸ್ಥಾನ ಅರ್ಥಮಾಡಿಕೊಂಡು ಅಷ್ಟೇ ಜಾಗ ಕೊಟ್ಟಾಗ.

ಸ್ನಾನ ಮುಗಿಸಿ ಹೊರಬಂದರೆ ಯುದ್ಧ ಗೆದ್ದು ಬಂದ ಹಾಗೆ. ಆಮೇಲೆ ಏನಿದ್ದರೂ ವಿಜಯೋತ್ಸವ. ಹೊಸ ಬಟ್ಟೆ ಹಾಕಿ ಗೂಡಿನಲ್ಲಿದ್ದ ಚಿಮಣಿಯನ್ನು ಹಿಡಿದು ಮೊದಲೇ ಪಾಲು ಮಾಡಿ ಇಟ್ಟ ಪಟಾಕಿಯನ್ನು ಹಿಡಿದು ಅಂಗಳಕ್ಕೆ ಹೊರಟರೆ ನಮ್ಮದು ನಾಯಿಯ ಕಿವಿ. ದಶದಿಕ್ಕಿಗೂ ಕಿವಿ ಅಗಲಿಸಿ ಆಲಿಸಿ ಎಲ್ಲೂ ಸದ್ದು ಕೇಳುತ್ತಿಲ್ಲ ಅಂತ ಕನ್ಫರ್ಮ್ ಆದರಂತೂ ಬಿಡಿ ನಾವೇ ಮಹಾರಾಜರು. ಆಮೇಲೆ ಗತ್ತಿನಿಂದ ಇದ್ದಿದ್ದರಲ್ಲೇ ದೊಡ್ಡದಾಗಿ ಸದ್ದು ಮಾಡುವ ಪಟಾಕಿಯೊಂದನ್ನು ಆರಿಸಿ ಅದನ್ನ ಅಂಗಳದ ಮೂಲೆಯಲ್ಲಿಟ್ಟು ಉದ್ದ ಕೋಲಿನ ಕೊನೆಗೊಂದು ಊದಿನಕಡ್ಡಿ ಕಟ್ಟಿ ಅದಕ್ಕೆ ಧೈರ್ಯದಿಂದ ಅದನ್ನು ಹಚ್ಚುವಾಗ ಹಿಂದಿನಿಂದ ಯಾರಾದರೂ ಧಂ ಅಂದರೆ ಬೆಳಕಿನ ವೇಗವನ್ನೂ ಮೀರಿಸುವ ವೇಗದಲ್ಲಿ ಹಿಂದಕ್ಕೆ ನೆಗೆದು ಮರಳಿ ಯತ್ನವ ಮಾಡಿ ಹಚ್ಚಿ ಅದು ಸಿಡಿದರೆ ಸುತ್ತ ಮುತ್ತಲಿನ ಮನೆಗೆ ನಮ್ಮ ವಿಜಯಘೋಷ ಕೇಳಿಸಿ ಬೀಗುತಿದ್ದೆವು.

ಆಮೇಲೆ ಗಡಿಬಿಡಿಯಲ್ಲಿ ಉಳಿದ ಪಟಾಕಿ ಹಚ್ಚಿ ಕೊನೆಯ ನಕ್ಷತ್ರ ಕಡ್ಡಿಯ ಬೆಳಕು ಆರುವ ಮುನ್ನ ಬಾನಂಚಿನಲ್ಲೂ ದೀಪಾವಳಿಯ ರಂಗು ಮೂಡುತಿತ್ತು. ಆಮೇಲೆ ಒಳಗೆ ಬಂದು ಎಲ್ಲರಿಗೂ ನಮಸ್ಕಾರ ಮಾಡಿ ಕಾಫಿ ಕುಡಿದು ಒಂದೇ ಉಸಿರಿಗೆ ಓಡುತಿದ್ದೆ. ಹಾಗೆ ಓಡಿ ಒಳಬಾಗಿಲು ದಾಟಿ ಅಡುಗೆಮನೆಗೆ ಸೇರುವಷ್ಟರಲ್ಲಿ ಇನ್ನೂ ಮಗು ಯಾಕೆ ಬಂದಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ ಅನ್ನೋ ಆಂಟಿಯ ದ್ವ್ಹನಿಯ ಜೊತೆಗೆ ಚೀನಿಕಾಯಿ ಕಡುಬಿನ ಘಮ ಸೇರಿ ವಾತಾವರಣ ರಂಗೇರಿಸುವುದರ ಜೊತೆಗೆ ಹೊಟ್ಟೆಯ ಒಳಗಿನ ಅಗ್ನಿಯನ್ನೂ ಪ್ರಜ್ವಲಿಸುವ ಹಾಗೆ ಮಾಡುತಿತ್ತು. ಅಲ್ಲೇ ಪಕ್ಕದಲ್ಲಿಟ್ಟ ಬಾಳೆಯ ಎಲೆಯನ್ನು ತೆಗೆದುಕೊಂಡರೆ ಅಟ್ಟದಿಂದ ಇಳಿಸಿದ ಹಬೆಯಾಡುವ ಕಡುಬನ್ನು ಹಾಕಿ ಅದರ ಮೇಲೆ ತುಪ್ಪ ಸುರಿಯುತ್ತಿದ್ದರು ಆಂಟಿ.

ಬೆಳಕು, ಸಂಭ್ರಮ, ಹಬ್ಬ, ತುಪ್ಪ ಎಲ್ಲವೂ ಒಂದಕ್ಕೊಂದು ಸ್ಪರ್ಧಿಸುತ್ತಾ, ಕರಗುತ್ತಾ  ಹರಿಯುತ್ತಾ ಬದುಕಿನೊಂದಿಗೆ ಮಿಳಿತವಾಗುತಿತ್ತು. ನರಕಾಸುರನನ್ನು ಕೊಂದುಬಂದು ಅಭ್ಯಂಜನ ಮುಗಿಸಿ ಮಿನುಗುತಿದ್ದ ನಗುತಿದ್ದ ಕೃಷ್ಣನ ಕೊಳಲುಗಾನವೇನೋ ಎಂಬಂತೆ ಹಕ್ಕಿಗಳ ಚಿಲಿಪಿಲಿ ವಾತಾವರಣಕ್ಕೆ ಒಂದು ದಿವ್ಯತೆಯನ್ನು ದಯಪಾಲಿಸಿರುತಿತ್ತು. ಕೊಟ್ಟಿಗೆಯಲ್ಲಿನ ದನಕರುಗಳ ಕೂಗು ಅದಕ್ಕೆ ಸಾಥ್ ಕೊಡುತ್ತಿತ್ತು. ಅಂತಹದೊಂದು ದಿವ್ಯತೆಯಲ್ಲಿ ಮಿಂದು ಹಗುರಾದ ದೇಹ ಮನಸ್ಸನ್ನೂ ಹಗುರಾಗಿಸುವ ಯಕ್ಷಿಣಿ ವಿದ್ಯೆ ತಂತಾನೇ ಕಲಿಯುತಿತ್ತು.

ನಮ್ಮೊಳಗಿನ ನರಕಾಸುರನನ್ನು ಸಂಹರಿಸಿ ಮಿಂದು ಹಗುರಾಗೋಣ...
ಕೊಳೆಯ ಭಾರ ಕಳೆದುಕೊಂಡು ಶುಭ್ರವಾಗೋಣ .....
ಎಲ್ಲರಿಗೂ ನರಕಚತುರ್ದಶಿಯ ಶುಭಾಶಯಗಳು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...