ದಿಂಡಿನಕಾಯಿ...

ಮಾವಿನ ಹಣ್ಣು ಧಾರಾಳವಾಗಿ ಸಿಕ್ಕಿದ್ರೂ ಮಿಡಿ ಮಾವಿನಕಾಯಿಯ ಮರ ಮಾತ್ರ ವಿರಳ. ಬೆಲೆ ಬಾಳುವಂತದ್ದು ಯಾವಾಗಲೂ ವಿರಳವೇ. ಎಲ್ಲೋ ಒಂದು ಇದ್ದರೆ ಅದಕ್ಕೆ ರಾಜ ಮರ್ಯಾದೆ. ಅದಕ್ಕಾಗಿ ಎಷ್ಟೊಂದು ಜನರ ಬೇಡಿಕೆ. ಉಪ್ಪಿನಕಾಯಿಯ ರುಚಿ ನಿರ್ಧಾರ ಆಗ್ತಾ ಇದ್ದಿದ್ದೇ ಅದರ ಘಮದ ಮೇಲೆ. ಮಲೆನಾಡಿಗರ ಊಟದ ಎಲೆಯ ತುದಿಯಲ್ಲಿ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಇಲ್ಲದಿದ್ದರೆ ಎಂಥ ಮೃಷ್ಟಾನ್ನ ಭೋಜನವೂ ಸಪ್ಪೆಯೇ. ಅದರಲ್ಲೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಅಂದರೆ ಮುಗಿಯಿತು ಅದರ ಗತ್ತೇ ಬೇರೆಯಾಗಿರುತ್ತಿತ್ತು. ಊಟಮಾಡಿ ಕೈ ತೊಳೆದರೂ ಮಾವಿನ ಘಮ ಬೆರಳ ತುದಿಯಲ್ಲಿಯೇ ಇರುತಿತ್ತು.

ಸುರಿಯುವ ಮಳೆಗೆ ತರಕಾರಿ ಬೆಳೆಯುವುದು ದೂರದ ಮಾತು. ಪೇಟೆಯಿಂದ ತರಕಾರಿ ತರಬೇಕು ಅಂದರೆ ಯಾರೋ ಅಪರೂಪದ ನೆಂಟರು ಬರಬೇಕು. ಅಲ್ಲಿಗಾದರೂ ಬೆಳೆದು ಬರುವುದು ಎಲ್ಲಿಂದ. ಮಲೆನಾಡಿನ ಮಳೆಯೆಂದರೆ ಹಾಗೆ ಶ್ರುತಿ ಹಿಡಿದ ಸಂಗೀತಗಾರನಂತೆ. ಲಹರಿ ಬಂದಹಾಗೆ ಸುರಿಯುತ್ತಿರುವುದಷ್ಟೇ ಕೆಲಸ. ಹಾಗಾಗಿ ಶ್ರಾವಣ ಮುಗಿಯುವವರೆಗೆ ತರಕಾರಿ ಬೀಜ ಹಾಕಿದರೆ ಅದು ಹರಿದು ಯಾವ ನದಿಯ ಮಡಿಲು ಸೇರುತಿತ್ತೋ ಬಲ್ಲವರು ಯಾರು.

ಹಾಗಾಗಿ ಮಳೆಗಾಲಕ್ಕೆಂದೇ ಕೆಲವು ತರಕಾರಿಗಳು ನಿರ್ಧಾರಿತವಾಗಿರುತಿದ್ದವು. ಜಗಲಿಯಲ್ಲೋ ಊಟದ ಹಾಲಿನಲ್ಲೋ  ಮಾಡಿನ ಜಂತಿಗೆ  ಸಾಲಾಗಿ ಬಾಳೆಪಟ್ಟಿಯಲ್ಲಿ ಕಟ್ಟಿದ್ದ ಬಣ್ಣದ ಸೌತೆ, ಬೂದುಕುಂಬಳ, ಕೆಸುವಿನ ಸೊಪ್ಪು, ಮುರುವಿನ ಒಲೆಯನೇರಿ ಕುದಿಯುವ ಹುರಳಿ ಸಾರು, ಪಾತ್ರೆಯ ಒಳಗೆ ನೆನೆಯುತ್ತಿರುವ ಕಳಲೆ,  ಜಾಡಿಯಲ್ಲಿ ಬೆಚ್ಚಗೆ ಕುಳಿತ ಮಿಡಿ ಉಪ್ಪಿನಕಾಯಿ, ಪತ್ತಾಸಿನ ಮೂಲೆಯಲ್ಲಿ ಮುದುರಿ ಕುಳಿತ ಹಲಸಿನ ಬೀಜ, ಮಾವಿನ ಹಣ್ಣು ಚಟ್ಟು, ನೆಲ್ಲಿ ಚಟ್ಟುಗಳೆಲ್ಲವುದರ ಸಾಲಲ್ಲಿ ಅಗ್ರಪಂಕ್ತಿ ದಿಂಡಿನರಸಕ್ಕೆ.

ಉಪ್ಪಿನಕಾಯಿ ಹಾಕುವ ಮಾವು ಹುಳಿಯಾಗಿರುತ್ತೆ. ಅದು ಹಣ್ಣಾದರೆ ತಿನ್ನಲು ಸಾದ್ಯವಿಲ್ಲ.  ಹಲ್ಲೆಲ್ಲಾ ಜುಮುಗುಟ್ಟವಷ್ಟು ಹುಳಿ. ಅಷ್ಟೇ ಘಮ. ತಿನ್ನುವ ಹಣ್ಣು ಉಪ್ಪಿನಕಾಯಿಗೆ ಬರುವುದಿಲ್ಲ. ಸಿಹಿ ಖಾರ ಎರಡೂ ಸೇರುವುದಾದರೂ ಹೇಗೆ? ಹಾಗಾಗಿ ಮಿಡಿ ಬಲಿಯುವ ಮೊದಲೇ ತಂದು ಉಪ್ಪಿನಕಾಯಿ ಹಾಕಿಬಿಡಬೇಕು. ಎಲ್ಲೋ ಅಲ್ಲಲ್ಲಿ ಉಳಿದ ಕಾಯಿಗಳು, ಹತ್ತಲು ಭಯವಾಗಿ ಕೊಯ್ಯದೆ ಬಿಟ್ಟ ಕಾಯಿಗಳು ನೋಟಕ್ಕೆ ಸಿಗದೇ ಎಲೆಮರೆಯಲ್ಲಿ ಉಳಿದವು ಹೀಗೆ ಒಂದಷ್ಟು ತಪ್ಪಿಸಿಕೊಂಡು ಬಿಡುತ್ತಿದ್ದವು. ಅವು  ಮರದಲ್ಲೇ ಹಣ್ಣಾಗುತ್ತಿದ್ದವು. ಹಣ್ಣಾದ ಮೇಲೆ ಉದುರಲೇ ಬೇಕು ಅದು ಪ್ರಕೃತಿಯ ನಿಯಮ. ಹಣ್ಣಾಗಲಿ, ಎಲೆಯಾಗಲಿ ಕೊನೆಗೆ ಮನುಷ್ಯರಾಗಲಿ ಜಾಗ ಖಾಲಿ ಮಾಡಲೇ ಬೇಕು.

ಮಳೆಗಾಲದ ಆರಂಭದ ಮಳೆಯ ಆರ್ಭಟ ಜೋರು. ಗುಡುಗು, ಮಿಂಚು ಸಿಡಿಲುಗಳ ಜೊತೆ ಜೋರಾಗಿ ಬೀಸುವ ಗಾಳಿಗೆ ಎಲ್ಲವೂ ಬಾಗಿ, ತೊನೆದು ಓಲಾಡುತ್ತವೆ. ಹೀಗೆ ಓಲಾಡುವಾಗ ಅಲ್ಲಿಯವರೆಗೂ ನೆಮ್ಮದಿಯಾಗಿದ್ದ ಹಣ್ಣುಗಳು ತೊಟ್ಟು ಕಳಚಿ ಕೆಳಕ್ಕೆ ಬೀಳುತ್ತದೆ. ಅದರಲ್ಲೂ ಈ ದಿಂಡು ಮಾವಿನ ಹಣ್ಣು ಮೊದಲು ಉದುರಿ ಕೆಳಕ್ಕೆ ಬೀಳುತ್ತದೆ. ಹಾಗಾಗಿ ಮಳೆ ಗಾಳಿ ಶುರುವಾಗುತ್ತಿದ್ದ ಹಾಗೆ ನಾವೂ ಕೊಡೆಯನ್ನೋ, ಕಂಬಳಿ ಕೊಪ್ಪೆಯನ್ನೋ ಹುಡುಕಿ  ಹಣ್ಣನ್ನು ಆರಿಸಿ ತರಲು ಓಡುತ್ತಿದ್ದೆವು. ಕೆಲವೊಮ್ಮೆ ಮಳೆ ಬಿಡುವವರೆಗೂ ಕಾಯಲು ಸಮಯವಿಲ್ಲದಂತೆ.

ಮಳೆಯ ಆರ್ಭಟ ನಿಲ್ಲುವ ಮೊದಲೇ ಓಡಿದರೂ ಕೆಲವೊಮ್ಮೆ ಸೋಲಾಗುತಿತ್ತು. ನಮಗಿಂತ ಮೊದಲು ಇನ್ಯಾರೋ ಬಂದು ಆರಿಸುತ್ತಿದ್ದರು. ಅಂತೂ ಯಾರಿಗೆ ಜಾಸ್ತಿ ಸಿಗುತ್ತೆ ಅನ್ನೋ ಅಲಿಖಿತ ಪಂದ್ಯದಲ್ಲಿ ಎಲ್ಲರೂ ಸಿ ಐ ಡಿ ಗಳಿಗಿಂತ ಚುರುಕಾಗಿ ಹುಡುಕಿ ಎತ್ತಿಟ್ಟುಕೊಳ್ಳುತ್ತಿದ್ದೆವು. ಪ್ರತಿ ಮೂಲೆಯನ್ನೂ ಬಿಡದೆ ಶೋಧಿಸುತ್ತಿದ್ದೆವು. ಗಾಳಿಯ ಚಲನೆ ಅದು ಬಿದ್ದಿರುವ ಜಾಗದ ಅಂದಾಜು ಹೀಗೆ ಅರಿವಿಲ್ಲದಂತೆ ಗಣಿತ ಒಳಕ್ಕೆ ಇಳಿಯುತ್ತಿತ್ತು. ಎಷ್ಟು ವೇಗದಲ್ಲಿ ಬೀಸುವ ಗಾಳಿಗೆ ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಕಾಯಿ ಬೀಳಬಹುದು ಎನ್ನುವ ಅಂದಾಜು ಯಾವತ್ತೂ ತಪ್ಪುತ್ತಿರಲಿಲ್ಲ. ಪ್ರಕೃತಿಯಲ್ಲಿ ಲೆಕ್ಕಾಚಾರ ಯಾವತ್ತೂ ತಪ್ಪುವುದೂ ಇಲ್ಲ ಬಿಡಿ. ಲೆಕ್ಕ ತಪ್ಪುವುದು ಏನಿದ್ದರೂ ಮನುಷ್ಯರಿಗಷ್ಟೇ ಮೀಸಲು.

ಹೋಗುವ ಗಡಿಬಿಡಿಗೆ ಬ್ಯಾಗ್ ತೆಗೆದುಕೊಂಡು ಹೋಗಲು ಮರೆತರೂ ಅದೇನು ಅಷ್ಟು ತಲೆಕೆಡಿಸಿಕೊಳ್ಳುವ ಸಮಸ್ಯೆ ಯಾವತ್ತೂ ಆಗಿರಲೇ ಇಲ್ಲ.   ಲಂಗಕ್ಕೋ, ಇಲ್ಲಾ ಅಲ್ಲೇ ಬಿದ್ದಿರುವ ಅಡಿಕೆ ಹಾಳೆಗೋ, ಮಳೆಗೆಂದು ತೆಗೆದುಕೊಂಡು ಹೋದ ಕಂಬಳಿ ಕೊಪ್ಪೆಯಲ್ಲೋ,  ಹಾಕಿಕೊಂಡು ಮನೆಗೆ ಬಂದು ಕೊಟ್ಟು ಯುದ್ಧಗೆದ್ದಂತೆ ಬೀಗುತಿದ್ದೆವು. ಅವುಗಳನ್ನು ಆರಿಸಿ ಜಜ್ಜಿ ಹೋದವುಗಳನ್ನು ಒಂದು ಕಡೆ, ಸ್ವಲ್ಪ ಗಟ್ಟಿಯಿರುವುದನ್ನ ಒಂದು ಕಡೆ ಹೀಗೆ ವಿಂಗಡಿಸಿ ಅದನ್ನು ಒಲೆಯ ದಂಡೆಯ ಮೇಲಿಡುತ್ತಿದ್ದಳು ಅಜ್ಜಿ.

ಮಲೆನಾಡಿನಲ್ಲಿ ಆಗಿನ್ನೂ ಗ್ಯಾಸ್ಅ ಓಲೆಗಳು ಇನ್ನೂ ಕಾಲಿಟ್ಟಿರಲಿಲ್ಲ. ಇಟ್ಟರೂ ಹಳ್ಳಿ ಮನೆಯೆಂದ ಮೇಲೆ ಒಂದು ಕಟ್ಟಿಗೆ ಒಲೆ ಇಲ್ಲದಿದ್ದರೆ ಅದು ಲಕ್ಷಣವೇ ಅಲ್ಲ ಅನ್ನುವ ಮನೋಭಾವ.  ಹಾಗಾಗಿ ಮಣ್ಣಿನ ಒಲೆ, ಅದಕ್ಕೊಂದು ಕೊಡೊಲೇ, ಬೆಳಿಗ್ಗೆ ಉರಿ ಹಾಕಿದರೆ ಸಂಜೆಯವರೆಗೂ ಬೇಸರವಿಲ್ಲದೆ ಒಲೆ ಉರಿಯುತ್ತಲೇ ಇರುತಿತ್ತು. ಒಲೆಯ ಮೇಲುಗಡೆಯ ಜಾಗ ಸದಾ ಬಿಸಿಯಾಗಿ ಇರುತಿತ್ತು. ಹಾಗೆ ಬಿಸಿಯಾಗಿರುವ ಜಾಗದಲ್ಲಿ ತೆಂಗಿನಕಾಯಿ, ಕಾಫಿ ಪಾತ್ರೆ ಕೂತು ಮಾತಾಡುವಾಗ ಅವುಗಳನ್ನು ಸರಿಸಿ ದಿಂಡಿನಕಾಯಿಯೂ ಬಂದು ಕೂರುತಿತ್ತು. ಚಳಿಗೆ ಬೆಂಕಿ ಕಾಯಿಸಿಕೊಳ್ಳುತಿತ್ತು.

ಜಾಸ್ತಿ ನುಜ್ಜುಗುಜ್ಜಾದ ಕಾಯಿಗಳಿಗೆ ಮಾತ್ರ ತಕ್ಷಣಕ್ಕೆ ಮುಕ್ತಿ ಸಿಗುತಿತ್ತು. ಹಸಿ ಮೆಣಸು ಸೀಳಿ ಹಾಕಿ, ಒಂಚೂರು ನೀರು ಹಾಕಿ ಕುದಿಸಿ ಸ್ವಲ್ಪ ಇಂಗು ಜಾಸ್ತಿ ಹಾಕಿ ಒಗ್ಗರಣೆ ಕೊಟ್ಟರೆ ಅಪ್ಪೆಕಾಯಿ ಸಾರು ರೆಡಿ. ಅದು ಕಲೆಸಿ ತಿನ್ನಲು ರುಚಿಯಿದ್ದರೂ ಕುಡಿಯಲು ಮತ್ತಷ್ಟು ರುಚಿ. ಕರುಳಿನ ಒಳಗೆ ಹನಿ ಹನಿಯಾಗಿ ಇಳಿಯುತ್ತಿದ್ದ ಹಾಗೆ ಚಳಿಗೆ ಮುದುರಿ ಮಲಗಿರುತಿದ್ದ ಜೀರ್ಣಾಂಗ ವ್ಯವಸ್ಥೆ ಬೆಚ್ಚಿ ಎದ್ದು ಕೂರುತ್ತದೆ.. ಹೊಟ್ಟೆಯೊಳಗೆ ಬೆಚ್ಚಗಿನ ಭಾವ ಅನುಭವಕ್ಕೆ ಬರುತ್ತದೆ. ಜೊತೆಗೆ ಜೀರಿಗೆ ಮೆಣಸು ಸೇರಿಸಿದರಂತೂ ಮುಗಿದೇ ಹೋಯಿತು. ತಿನ್ದಿದ್ದೆಲ್ಲಾ ಜೀರ್ಣವಾಗಿ ಮತ್ತೆ ರಾತ್ರಿಗೆ ಏನು ಹುಡುಕುವ ಪರಿಸ್ಥಿತಿ. ಹಾಗಾಗಿ ಯಾವುದಾದರೂ ಕಾರ್ಯಕ್ರಮದಲ್ಲಿ ಊಟದಲ್ಲಿ ಇದು ಇದ್ದೆ ಇರುತಿತ್ತು..

 ಹಾಗೆ  ಚಳಿ ಕಾಯಿಸಿಕೊಳ್ಳುವಾಗ ಬಿಸಿಯಾಗಿ ಅರೆಬೆಂದ ಹಾಗೆ ಆದ ಮೇಲೆ ಅದನ್ನು ಅಜ್ಜಿ ಚೆನ್ನಾಗಿ  ಅದರ ರಸವನ್ನು ಒಂದು ಅಗಲವಾದ ಪಾತ್ರೆಗೆ ಹಿಂಡುತ್ತಿದ್ದಳು. ಆಮೇಲೆ ಅದಕ್ಕೆ  ಒಂದಷ್ಟು ಉಪ್ಪುಸುರಿಯುತ್ತಿದ್ದಳು. ಉಪ್ಪು ಹಾಕಿದರೆ ಕೆಡುವುದಿಲ್ಲ. ಕೆಡದಿರಲು ಒಂದು ಜೊತೆ ಬೇಕು ನೋಡಿ. ಒಂದು ಹನಿ ನೀರು ಬಿತ್ತೋ ಮುಗಿದೇ ಹೋಯಿತು.. ಅದು ಹಾಳಾದಂತೆ. ಹಾಗಾಗಿ ಜೊತೆ ಬೇಕು ನಿಜ ಆ ಜೊತೆ ಯಾವುದಿರಬೇಕು ಅನ್ನೋದೂ ಅಷ್ಟೇ ಮುಖ್ಯ ಅನ್ನೋಳು ಅವಳು. ಅದ್ಯಾವುದು ಅರ್ಥವಾಗದೆ, ಅರ್ಥ ಮಾಡಿಕೊಳ್ಳುವ ಮನಸ್ಸೂ ಇಲ್ಲದೆ ಆ ಗಟ್ಟಿ ರಸವನ್ನೇ ನೋಡುತ್ತಾ ಕುಳಿತಿರುವಾಗಲೇ ಅದನ್ನು ಉದ್ದ ಮೈಯ ಚಿಕ್ಕ ಬಾಯಿಯ ಬಾಟಲಿಗೆ  ಹಾಕಿ ಅದಕ್ಕೆ ಬಿಳಿ ಪಂಚೆಯ ತುಂಡೊಂದನ್ನ ಬಿಗಿಯಾಗಿ ಕಟ್ಟಿ ಅದನ್ನು ಅಟ್ಟದಲ್ಲಿ ಬೆಚ್ಚಗೆ ಇಡುತಿದ್ದಳು.


ಬೇಕಾದಾಗ ಅದರಿಂದ ಸ್ವಲ್ಪ ರಸವನ್ನು ಒಂದು ಪುಟ್ಟ ಪಾತ್ರೆಗೆ ಬಗ್ಗಿಸಿ ತರುತಿದ್ದಳು. ತರುವುದು ಅಷ್ಟು ಸುಲಭವಲ್ಲ, ಕೈ ಒದ್ದೆ ಇರಬಾರದು, ಬಾಟಲಿಯನ್ನು ಬಿಚ್ಚಿ ತುಂಬಾ ಹೊತ್ತು ಬಿಡಬಾರದು. ಮಕ್ಕಳನ್ನಂತೂ ಅಲ್ಲಿ ಬರಲು ಬಿಡಲೇ ಬಾರದು. ಏಕಾಗ್ರತೆಯಿಂದ ಅಷ್ಟೇ ಶ್ರದ್ಧೆಯಿಂದ ಅದನ್ನು ನಿಧಾನವಾಗಿ ಬಿಡಿಸಿ ಒಲೆಯ ಉರಿಗೆ ಹಿಡಿದು ಒಣಗಿಸಿದ ಸೌಟಿನಿಂದ ಇಷ್ಟೇ ಇಷ್ಟು ರಸ ತೆಗೆದು ಮತ್ತೆ ಅದನ್ನು ಅಷ್ಟೇ ಜಾಗೃತೆಯಿಂದ ಕಟ್ಟಿ ಇಳಿದುಬರುತಿದ್ದಳು. ಹಾಗೆ ತಂದ ರಸಕ್ಕೆ ಒಣಗಿಸಿ ಡಬ್ಬಿಯಲ್ಲಿಟ್ಟ ಜೀರಿಗೆ ಮೆಣಸು ತೆಗೆದು ಇಷ್ಟೇ ಇಷ್ಟು ಮೆಂತೆ, ಸ್ವಲ್ಪ ಜೀರಿಗೆ ಹುರಿದು ಎಲ್ಲವನ್ನೂ ಸೇರಿಸಿ ಹದವಾಗಿ ಕುಟ್ಟಿ ಅದಕ್ಕೆ ಬೆರೆಸಿ ಇಂಗಿನ ಒಗ್ಗರಣೆ ಕೊಟ್ಟರೆ ಮುಗಿಯಿತು ಘಮಗುಡುವ ದಿಂಡಿನಕಾಯಿ ಗೊಜ್ಜು ರೆಡಿ.

ಹೊಯ್ಯುವ ಮಳೆಯಲ್ಲಿ, ಸಣ್ಣನೆ ಚಳಿಯಲ್ಲಿ ಬಿಸಿ ಬಿಸಿ ಹಬೆಯಾಡುವ ಕೆಂಪಕ್ಕಿ ಅನ್ನಕ್ಕೆ ಗೊಜ್ಜು ಹಾಕಿಕೊಂಡು ತಿನ್ನುತಿದ್ದರೆ ಬಕಾಸುರನೂ ಬೆರಗಾಗುತಿದ್ದ. ನಾಲಿಗೆ ಚುಮುಗುಟ್ಟಿಸುವ ಉಪ್ಪು, ಹುಳಿ, ಖಾರ, ಮೂಗಿಗೆ ಅಡರುವ ಘಮ ಕೈಯಿಗೂ ಬಾಯಿಗೂ ಸ್ಪರ್ದೆಯನ್ನು ಒಡ್ಡಿ ಹೊಟ್ಟೆ ಭಾರವಾಗುವುದನ್ನೂ ಲೆಕ್ಕಿಸದೆ ತಿನ್ನುತ್ತಿದ್ದೆವು. ಜ್ವರ ಬಂದು ನಾಲಿಗೆಗೆ ರುಚಿಸದಿದ್ದರೆ, ಜೀರ್ಣಕ್ರಿಯೆ ಸರಾಗವಾಗಿ ಆಗದಿದ್ದರೆ, ಏನೂ ತಿನ್ನಬೇಕು ಅನ್ನಿಸದ ಪರಿಸ್ಥಿತಿ, ಮನಸ್ಥಿತಿ ಇದ್ದರೆ ಗೊಜ್ಜು ಮಾಡುತಿದ್ದರು. ಅವಸರಕ್ಕೆ ಒಂದು ರುಚಿಕಟ್ಟಾದ ಅಡುಗೆ ಮಾಡುವಾಗಲು ಮೊದಲು ನೆನಪಾಗುತಿದ್ದದ್ದೆ ಇದು. ಬೇಸರಕ್ಕೆ, ಸೋಮಾರಿತನಕ್ಕೆ, ತಕ್ಷಣಕ್ಕೆ, ಸುರಿಯುವ ಮಳೆಗೆ, ಜಡ್ಡು ಗಟ್ಟಿದ ಬದುಕಿಗೆ ಹೀಗೆ ಯಾವಾಗ ಕರೆದರೂ ಅದು ಜೊತೆಯಾಗುತಿತ್ತು.

ಪ್ರತಿಸಲ ಊರಿಗೆ ಹೋದಾಗ ಅಹಿ ಏನು ಬೇಕೇ ನಿಂಗೆ ಅಂತ ಅವಳಜ್ಜ ಕೇಳಿದ್ರೆ ಇವಳು ತಟಕ್ಕಂತ ದಿಂಡಿನಕಾಯಿ ಗೊಜ್ಜು ಅಂತಾಳೆ. ವಾಪಾಸ್ ಬರುವಾಗ ಏನು ಬೇಕು ತಗೊಂಡು ಹೋಗೋಕೆ ಅಂತ ಕೇಳುತ್ತಲೇ ಅಜ್ಜಿ ದಿಂಡಿನಕಾಯಿ ಗೊಜ್ಜಿನ ಬಾಟಲಿ ಕಟ್ಟುತ್ತಾಳೆ. ಜೊತೆಗಿಷ್ಟು ಜೀರಿಗೆ ಮೆಣಸು ಪೊಟ್ಟಣ ಕಟ್ಟುತ್ತಾಳೆ. ಮೊನ್ನೆ ಊರಿಗೆ ಹೋದಾಗ ಮಾತಿನ ಮಧ್ಯೆ ನಂಗೆ ದಿಂಡಿನಕಾಯಿ ಗೊಜ್ಜು ಇಷ್ಟ ಕಣೋ ಅಂದಿದ್ದನ್ನ ನೆನಪಿನಲ್ಲಿ ಇಟ್ಟುಕೊಂಡ ಅಭಿ ತಿನ್ನಬೇಕಾದರೆ ನಿನ್ನ ನೆನಪಾಯ್ತು ಇಷ್ಟೇ ಇಷ್ಟು ಉಳಿದಿದೆ ಅಂತ ಹೇಳಿ ಅದನ್ನ ಥೇಟ್ ಅಜ್ಜಿ ಕಟ್ಟಿದ ಹಾಗೆ ಪುಟ್ಟ ಪ್ಲಾಸ್ಟಿಕ್ ಹಾಕಿ ಕಟ್ಟಿ ಇಲ್ಲಿಗೆ ಕಳಿಸಿದ್ದಾನೆ.

ಅಮ್ಮಾ ಮಗಳು ಇಬ್ಬರೂ ಆಗಾಗ ಫ್ರಿಡ್ಜ್ ಬಾಗಿಲು ತೆರೆದಾಗಲೆಲ್ಲ ಘಮಗುಡುವ ಗೊಜ್ಜು ಕಣ್ಣೆದೆರು ಊರನ್ನ ಬಿಡಿಸಿ ಇಡುತ್ತದೆ. ಇಬ್ಬರ ದೃಷ್ಟಿ ಕಲೆತಾಗ ಏನೋ ಅವ್ಯಕ್ತ ಭಾವ ಅರಿವಾಗದೆ ಇಬ್ಬರೂ ತೆಕ್ಕೆಗೆ ಬೀಳುತ್ತೇವೆ. ಕಣ್ಣಂಚಿನ ಮಳೆ ಸಣ್ಣಗೆ ಸುರಿಯುವಾಗಲೇ ವಿಷಲ್ ಹೊಡೆಯುವ ಕುಕ್ಕರ್ ಎಳೆದುತರುತ್ತದೆ. ಮತ್ತೊಮ್ಮೆ ಓಡಬೇಕೆನಿಸುತ್ತದೆ. ಈಗ ಮಳೆ ಬಿಟ್ಟರೂ ಮರದಡಿ ಸದ್ದಿಲ್ಲ ... ಸಾಲಾಗಿ ಕೂತು ಹರಟುತಿದ್ದ ಬಾಟಲಿಗಳಿಗೂ ಅನಾಥಭಾವ.. ಸ್ಪರ್ಧೆ ನಿಂತು ಯಾವ ಕಾಲವಾಗಿದೆಯೋ ಕೇಳೋಣವೆಂದರೆ ರೆಂಬೆ ಕಳೆದುಕೊಂಡ ಮಾವಿನಮರಕ್ಕೂ ಕಿವುಡು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...