ತುಂಬಾ ದಿನಗಳಿಂದ ಸೇತುರಾಂ ಅವರ ನಾವಲ್ಲ ಕಥಾಸಂಕಲನ ಓದಬೇಕು ಅಂದ್ಕೊಂಡಿದ್ದೆ. ಎರಡು ಸಲ ಹೋದಾಗಲೂ ಸಪ್ನಾದಲ್ಲಿ ಇಲ್ಲಾ ಅನ್ನೋ ಮಾತು ಕೇಳಿ ಬೇಜಾರೂ ಆಗಿತ್ತು. ಅಂತೂ ನಿನ್ನೆ ಪುಸ್ತಕ ಸಿಕ್ಕಿ ಇವತ್ತು ಅದನ್ನು ಹಿಡಿದವಳು ಓದಿಯೇ ಕೆಳಗೆ ಇಟ್ಟಿದ್ದು.
ಅವರ ಧಾರವಾಹಿ ಎಲ್ಲೋ ಒಂದು ಎಪಿಸೋಡ್ ನೋಡಿದ್ದು ಅಷ್ಟೇ ಅದರಲ್ಲಿ ಅವರ ಹರಿತವಾದ ಮಾತಿಗಿಂತ ಭಾಷೆ ಮತ್ತು ಪ್ರಾಕ್ಟಿಕಲ್ ಮನೋಭಾವ ಒಂಥರಾ ಇಷ್ಟವಾಗಿತ್ತು. ಮಾತು ಹೇಗೆ ಪ್ರಾಮಾಣಿಕ ಮತ್ತು ನೇರವಾಗಿರಬೇಕೋ ಅಷ್ಟೇ ಪ್ರಾಕ್ಟಿಕಲ್ ಸಹ ಆಗಿದ್ದಾಗ ಮಾತ್ರ ಅದಕ್ಕೊಂದು ಪೂರ್ಣತೆ.ನಂಗೆ ಇವರ ಮಾತಲ್ಲಿ ಆ ಪೂರ್ಣತೆ ತಟ್ಟಿದ್ದರಿಂದಲೋ ಏನೋ ಅವರನ್ನು ನೋಡದಿದ್ದರೂ, ವೈಯುಕ್ತಿಕವಾಗಿ ತಿಳಿಯದಿದ್ದರೂ ಇಷ್ಟವಾಗ್ತಾರೆ.

ಆರು ಕತೆಗಳ ಪುಸ್ತಕ ಇದು, ಆ ಆರು ಕತೆಗಳು ಬಿಚ್ಚಿಡೋ ಭಾವಗಳು ಮಾತ್ರ ಹಲವಾರು. ವ್ಯಕ್ತಿತ್ವಗಳ ಸೋಗಲಾಡಿತನವನ್ನು ಬಿಚ್ಚಿಡುವಷ್ಟೇ ಸಹಜವಾಗಿ ದೃಢವ್ಯಕ್ತಿತ್ವಗಳನ್ನೂ ಕಟ್ಟಿ ಕೊಡುವ ಚಾಣಕ್ಷತೆ ಇವರಲ್ಲಿದೆ. ಅದರಲ್ಲೂ ಹೆಣ್ಣಿನ ಮೃದುತನ ಮತ್ತು ಗಟ್ಟಿತನ ಎರಡನ್ನೂ ತುಂಬಾ ಸುಂದರವಾಗಿ ಚಿತ್ರಿಸುತ್ತಾ ಭಾವನೆಗಳ ಹೊಯ್ದಾಟದ ನಡುವೆಯೇ ಬದುಕುವ ಛಲ ಹೇಗೆ ಗುರಿ ತಲುಪುವ ಹಾಗೆ ಮಾಡಬಲ್ಲದು ಅನ್ನೋದನ್ನ ತುಂಬಾ ಮನೋಜ್ಞವಾಗಿ ಹೇಳಿದ್ದಾರೆ.

 ಅಧಿಕಾರ, ಪೀಠ  ಇವು ಕಣ್ಣಿಗೆ ಕಾಣುವಷ್ಟು ಸುಲಭವೂ ಅಲ್ಲಾ, ಸಹ್ಯವೂ ಅಲ್ಲಾ. ಗೊಂದಲ, ಆತ್ಮವಂಚನೆ ಹೊಯ್ದಾಟ ಅನಿವಾರ್ಯತೆ ಇವು ಆ ಸ್ಥಾನದ ನಾಲ್ಕು ಕಾಲುಗಳೇನೋ ಅನ್ನಿಸುವುದು ಮೋಕ್ಷ ಎಂಬ ಮೊದಲ ಕತೆ ಓದಿದಾಗ. "ಎಲ್ಲವೂ ಸ್ವಾಭಾವಿಕವಾಗಿದ್ರೆ ಏನೂ ಗೊತ್ತಾಗೊಲ್ಲ ಒಂದು ಅಂಗ ಊನವಾದಾಗಲೇ ಅರ್ಥವಾಗೋದು" ಅನ್ನೋ ಸಾಲೇ ಸಾಕು ನಮ್ಮ ಬದುಕಿನ ಸತ್ಯಗಳ ಅನಾವರಣ ಮಾಡೋದಕ್ಕೆ.  ಮನಸ್ಸು ಹಾಗೆಯೇ.. ಇರದ ಯಾವುದೋ ಒಂದು ಕೊರತೆಯ ಬಗ್ಗೆಯೂ, ನೋವಿನ ಬಗ್ಗೆಯೋ, ಅವಮಾನದ ಬಗ್ಗೆಯೂ ಆಲೋಚಿಸಿದಷ್ಟು ಕೊರಗಿದಷ್ಟು ದೊರಕಿದ ಸೌಲಭ್ಯಗಳ ಬಗ್ಗೆ ಯೋಚಿಸುವುದಿಲ್ಲ.
ಸಮಾಜ ತಾನು ಕಂಡದ್ದೇ ಸತ್ಯ ಅಂತ ಪ್ರತಿಕ್ರಿಯಿಸುತ್ತೆ, ನಮ್ಮ ಸತ್ಯ ಬೇರೆಯದೇ ಇರುತ್ತೆ. ಎಲ್ಲರಿಗೂ ತಿಳಿದುಕೊಳ್ಳುವುದಕ್ಕಿಂತ ಪ್ರತಿಕ್ರಿಯಿಸುವ ಅವಸರವೇ ಜಾಸ್ತಿ. ತಡಮಾಡಿದರೆ ಎಲ್ಲಿ ನಾವು ಹಿಂದುಳಿಯುತ್ತೆವೋ ಅನ್ನೋ ಮನಸ್ಥ್ತಿತಿ ನಮ್ಮನ್ನು ನಿಲ್ಲಗೊಡುತ್ತಿಲ್ಲ.  ಬಾಹ್ಯಕ್ಕೆ ಬಿರುದು, ಶಿಕ್ಷೆ ಆಂತರ್ಯದ್ದಲ್ವಾ ಅನ್ನೋ ಸಾಲು ಕಾಡಿದರೂ ಎಲ್ಲವೂ ತಕ್ಷಣಕ್ಕೆ ಜರುಗಬೇಕು ಅನ್ನುವ ನಮ್ಮ ಗಡಿಬಿಡಿಗೆ ಕಾಯುವ ತಾಳ್ಮೆಯಿಲ್ಲದೆ ನಂಬಿಕೆಯೇ ಮಾಯವಾಗುತ್ತಿದೆಯಾ ಅನ್ನಿಸಿದ್ದಂತೂ ಸುಳ್ಳಲ್ಲ.

ಮೌನಿಯ ಮಂದಾಕಿನಿ ಕೊನೆಯಲ್ಲಿ  ಥೇಟ್ ನನ್ನಂತೆ ಅನ್ನಿಸಿ ಬಿಡುತ್ತಾಳೆ. ಬದುಕು ಬಗ್ಗಿದಷ್ಟೂ ಭಾರ ಹಾಕುತ್ತದೆ. ಎಲ್ಲವಕ್ಕೂ ಹೊಣೆಯಾಗಿಸಿ ತಮ್ಮ ಭಾರವನ್ನು ಕಳೆದುಕೊಂಡು ಬಿಡೋದು ಮಾತ್ರವಲ್ಲ ಅಪರಾಧಿ ಪ್ರಜ್ಞೆಮೂಡುವ ಹಾಗೆ ಮಾಡುತ್ತಾರೆ. ಒಳ್ಳೆಯತನ ಶತ್ರು ಮಾತ್ರವಲ್ಲ ಅದು ನಮ್ಮನ್ನು ವ್ಯಕ್ತಿತ್ವ ವಿಹೀನವಾಗಿಸುತ್ತದೆ ಅನ್ನೋದನ್ನ ತುಂಬಾ ಚೆಂದವಾಗಿ ವಿವರಿಸಿದ್ದಾರೆ. ನಮ್ಮ ಒಳ್ಳೆಯತನ ಎದುರಿನವರನ್ನು ರಾಕ್ಷಸರನ್ನಾಗಿಸುತ್ತದೆ ಎಂದರೆ ನಾವು ದೇವರಾಗುವುದರಿನ ಏನೂ ಉಪಯೋಗವಿಲ್ಲ. ವಿರೋಧಿಸಲು ಕಲಿತಾಗ, ಗಟ್ಟಿಯಾಗಿ ನಿಂತಾಗ ನಾವು ದೇವರಾಗದಿದ್ದರೂ ಎದುರಿನವರು ಮನುಷ್ಯರಾಗುತ್ತಾರೆ.  ಬದುಕಲು ಮನುಷ್ಯರಾಗಿದ್ದಾರೆ ಸಾಕು ಅನ್ನೋದನ್ನ ಸಶಕ್ತವಾಗಿ ಈ ಕತೆ ನಮ್ಮ ಮುಂದೆ ಬಿಚ್ಚಿಡುತ್ತದೆ. ನಮ್ಮೊಳಗಿನ ಭಾವಕ್ಕೆ ಸ್ಪಷ್ಟ ರೂಪು ಧ್ವನಿ ಎರಡೂ ಕೊಡುತ್ತೆ.

ಸುಖಕ್ಕೆ ಭ್ರಮೆ ಬೇಕು, ಅದರಲ್ಲೂ ವಯಸ್ಸಿನ ಏರು ದಾರಿಯಲ್ಲಿ ವಾಸ್ತವಕ್ಕಿಂತ ಭ್ರಮೆಗಳೇ ಹೆಚ್ಚು ಆಪ್ತವಾಗೋದು. ಬದುಕಿದ್ದಾಗ ಉಸಿರುಗಟ್ಟಿಸುವ ಸಮಸ್ಯೆಗಳಿದ್ದರೂ ಸ್ಪಂದಿಸದ ಜನ ಉಸಿರು ನಿಂತಾಗ ಭಾವುಕರಾಗಿ ಮಾತಾಡ್ತಾರೆ. ಅದರಲ್ಲೂ ಬಡತನ ಸೌಂದರ್ಯ ಒಟ್ಟಿಗೆ ಇದ್ದರಂತೂ ಕ್ಷಣ ಕ್ಷಣವೂ ಹಿಂಬಾಲಿಸುವ ಕಣ್ಣಿನ ನೋಟದಿಂದ ಹೆಜ್ಜೆ ತಪ್ಪದಂತೆ ನಡೆಯೋದು ತುಂಬಾ ಕಷ್ಟ. ಹೆಣ್ಣಿನ ದುಃಖಕ್ಕೂ ಕಟ್ಟುಪಾಡು. ಕಣ್ಣೀರು ಧುಮಕಲು ಜಾಗ ಕಾಲ ಎಲ್ಲವೂ ನೋಡಬೇಕು.ಮಾನ, ಅಭಿಮಾನ, ಅವಮಾನಗಳ ಲೆಕ್ಕಹಾಕಿ ಗುಣಿಸಿ, ಭಾಗಿಸಿ ಆಮೇಲೆ ನಿರ್ಧರಿಸಬೇಕು. ತವರು ಸರಿಯಾಗಿದ್ದರೆ ಹೆಣ್ಣಿನ ಬಾಳಿಗೆ ಸ್ವಲ್ಪ ನೆಮ್ಮದಿ, ಕಣ್ಣೀರ ಕೋಡಿಗೆ ದಾರಿ. ಇಲ್ಲವಾದರೆ ಸದಾ ಕಣ್ಣಲ್ಲೇ ತಿರುತಿರುಗಿ ಅಲ್ಲೇ ಸುಳಿಯಾಗಿ ಇಂಗಬೇಕು

ಹೆಣ್ಣಿನ ಮನಸ್ಸನ್ನು, ಭಾವನೆಯನ್ನು ಅದೆಷ್ಟು ಚೆಂದವಾಗಿ ಅರ್ಥಮಾಡಿಕೊಂಡಿದ್ದಾರೆ ಅಂತ ಅನ್ನೋದಕ್ಕಿಂತಲೂ ಹೆಚ್ಚು ಖುಷಿಯಾಗಿದ್ದು ಅದನ್ನು ಪರಿಣಾಮಕಾರಿಯಾಗಿ ಹೇಳೋ ಅವರ ಶೈಲಿಗೆ. ಇದನ್ನ ಓದುವ ಪ್ರತಿ ಹೆಣ್ಣು ಜೀವಕ್ಕೂ ಯಾವುದೋ ಒಂದು ಸಾಲಾದರೂ ಅಯ್ಯೋ ಇದು ನನ್ನದೇ ಮಾತಲ್ವಾ ಅನ್ನಿಸದೇ ಇರದು. ಅಷ್ಟರಮಟ್ಟಿಗೆ ಹೆಣ್ಣಿನ ಸಂವೇದನೆಗೆ ಪ್ರತಿಸ್ಪಂದಿಸಿದ್ದಾರೆ. ದನಿಯಾಗಿದ್ದಾರೆ.

"ಬಾವು ಬಲಿಯೋವರೆಗೂ ಕೆದಕಬಾರದು, ಬಲಿತ ಮೇಲೆ ಒಡೆಯುತ್ತೆ, ತಾನೇ ಒಡೆಯುತ್ತೆ." ಅನ್ನೋ ಸಾಲು ತುಂಬಾ ತುಂಬಾ ಇಷ್ಟ ಆಯ್ತು. ಯಾವುದನ್ನೇ ಆಗಲಿ, ಯಾರನ್ನೇ ಆಗಲಿ ಕೆದಕಬಾರದು, ಕೆಣಕಬಾರದು. ಹೇಳಬೇಕು ಅನ್ನಿಸಿದಾಗ ಎಷ್ಟು ಹೇಳಬೇಕೋ ಅದನ್ನ ಅವರಿಗೆ ಹೇಳುವ ಸ್ವಾತಂತ್ರ್ಯ ಕೊಟ್ಟಾಗಲೇ ಒಂದು ಸಂಬಂಧ ಉಸಿರಾಡೋದು. ಅತಿಯಾದ ಕುತೂಹಲ ಎದುರಿನ ವ್ಯಕ್ತಿಯಲ್ಲಿ ಅಸಹ್ಯವನ್ನೋ, ಅಸಹಾಯಕತೆಯನ್ನೂ ಹುಟ್ಟಿಸಿದರೆ ಆ ಸಂಬಂಧ ಇದ್ದೂ ಸತ್ತಂತೆ.

ಓದಿ ಕೆಳಗಿಟ್ಟ ಮೇಲೂ ಕಾಡುವ, ಯೋಚನೆಗೆ ಹಚ್ಚುವ ಪುಸ್ತಕ. ಭಾವುಕತೆಯಲ್ಲೊಂದು ಗಟ್ಟಿತನ ಅರಳುವ ಹಾಗೆ ಮಾಡೋ ಪುಸ್ತಕ. ಪ್ರಾಮಾಣಿಕತೆಗೆ ಪ್ರಾಕ್ಟಿಕಲ್ ಸಹ ಜೊತೆಯಾಗಿರಬೇಕು ಅನ್ನೋದನ್ನ ಮೌನವಾಗೇ ತಿಳಿಸುವ ಪುಸ್ತಕ. ಒಳ್ಳೆಯತನದ ಕಿರೀಟವನ್ನು ಪಕ್ಕಕ್ಕಿಟ್ಟು ನಾವು ನಾವಾಗೇ ಕೆಲವು ಕ್ಷಣವಾದರೂ ಬದುಕಬೇಕು ಅನ್ನೋ ಆಸೆ ಹುಟ್ಟಿಸುವ ಪುಸ್ತಕ. ಹರಿತವಾದ ಮಾತಿನಲುಗಿನಿಂದ ಸೀಳಿ ನಮ್ಮನ್ನೇ ನಾವು ನೋಡಿಕೊಳ್ಳುವ ಹಾಗೆ ಮಾಡೋ ಪುಸ್ತಕ. ಹೆಜ್ಜೆಗೊಂದು ಕಸುವು ತುಂಬುವ ಪುಸ್ತಕವೂ ಹೌದು.

ಬರೆದಷ್ಟೂ ಮುಗಿಯದ ಭಾವವನ್ನು ಮುಗಿಸೋಕೆ ಅವರ ಈ ಸಾಲೇ ಸರಿ

"ಹೆರೋರು ತಾಯಿ ಆದ್ರೂ, ಹೇರದೊರು ದೇವರಾದ್ರು"  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...