ಮಗುವೇ ನಿನ್ನ ಆಂಟಿಗೆ ಸುಸೂತ್ರ ಪ್ರಸವ ಆಗಿ ಗಂಡು ಮಗು ಹೆತ್ತಿದಾಳೆ ಅಂತ ಜಯತ್ತೆ ಹೇಳಿದಾಗ ತಟ್ಟನೆ ಹಾರಿ ಹೋಗುವ ಆಸೆ ಗರಿಗೆದರಿತ್ತು. ಬಹಳ ವರ್ಷಗಳ ಗ್ಯಾಪ್ ನಂತರ ಪುಟ್ಟ ಮಗುವಿನ ಆಗಮನ ಅದೊಂತರ ಸಂಭ್ರಮ. ಕಾಯುವಿಕೆಗೆ ನೂರು ಕಣ್ಣು. ಆಸೆಗಳಿಗೆ ಸಾವಿರ ರೆಕ್ಕೆ. ಬಾಣಂತನ ಮುಗಿಸಿ ಮನೆಗೆ ಬರುತಿದ್ದಂತೆ ನಾನು ಎತ್ಕೋಳ್ಳ ಅಂತ ಕೇಳಿದವಳಿಗೆ ಒಂಚೂರು ಆತಂಕ, ಭಯ ಯಾವುದೂ ಇಲ್ಲದೆ ಅದೆಷ್ಟು ಸಹಜವಾಗಿ ಮಗುವನ್ನು ಕೊಟ್ಟಿದ್ದರು ಆಂಟಿ.. ವರ್ಷಗಳು ಉರುಳಿ ಕಾಲ ಸಮುದ್ರದಲ್ಲಿ  ಅದೇನೇ ಉಬ್ಬರವಿಳಿತವಾದರೂ  ಇವತ್ತಿಗೂ ಅದೇ ಸಹಜತೆ ಅವರಲ್ಲಿ.

ಐದು ತಿಂಗಳು ಮುದ್ದು ಕೂಸು ಎತ್ತಿಕೊಂಡರೆ ಪಿಳಿ ಪಿಳಿ ಕಣ್ಣು ಬಿಡುತಿತ್ತು. ಅದನ್ನೇ ದಿಟ್ಟಿಸಿದರೆ ಅದರ ತುಟಿಯಂಚಿನಲ್ಲಿ ಮುದ್ದಾದ ಹೂ ನಗು ಅರಳುತಿತ್ತು. ಅವತ್ತಿನಿಂದ ಇವತ್ತಿನವರೆಗೂ ಅಕ್ಕನನ್ನು ಕಂಡಾಗ ಅದರ ಮುಖದಲ್ಲಿ ಅದೇ ಹೂ ನಗು ಕಿಂಚಿತ್ತೂ ಮಾಸಿಲ್ಲ, ಬದಲಾಗಲೂ ಇಲ್ಲ. ಆಮೇಲೆ ಆ ಮಗು ನನ್ನ ಪಾಲಿಗೆ ಆಟಿಕೆ, ಜೊತೆಗಾರ, ಸಂಭ್ರಮ ಎಲ್ಲಾ .. ಶಾಲೆ ಮುಗಿಸಿ ಬರುತಿದ್ದಂತೆ, ರಜೆ ಇದ್ದಾಗಲೆಲ್ಲ ಅವನೇ ಪ್ರಪಂಚ.

ಮಧ್ಯಾನದ ಊಟ ಮುಗಿಯುತಿದ್ದಂತೆ ಜಯತ್ತೆ ಕತೆ ಹೇಳಿ ಮಲಗಿಸ್ತಿನಿ ಬಾರೋ ಅಂತ ಅವನನ್ನ ಕರೆದು ಕೊಂಡು ಹೋದರೆ ಅವನ ಹಿಂದೆಯೇ ಹೋಗುತಿದ್ದೆ. ಕತೆ ಹೇಳುತ್ತಾ ಹೇಳುತ್ತಾ ಜಯತ್ತೆ ನಿದ್ದೆ ಹೋದರೆ ನಾವಿಬ್ಬರು ಮೆಲ್ಲಗೆ ಎದ್ದು ಹೊರಗೆ ಬಂದು ಆಡಲು ಶುರುಮಾಡುತಿದ್ದೆವು. ಎಲ್ಲರೂ ಏಳುವ ಹೊತ್ತಿಗೆ ನಾವಿಬ್ಬರು ಅಲ್ಲೇ ಸೋಫಾ ಮೇಲೋ ಚಾಪೆಯ ಮೇಲೋ ನಿದ್ದೆ ಹೋಗಿರುತಿದ್ದೆವು. ಕೆಲವೊಮ್ಮೆ ನಾನೇ ಸ್ನಾನ ಮಾಡಿಸಲ ಅವನಿಗೆ ಅಂದ್ರೆ ಆಂಟಿ ಎರಡನೇ ಮಾತೆ ಇಲ್ಲದಂತೆ ಹೂ ಅನ್ನುತಿದ್ದರು, ಈಗ ನೆನಪಿಸಿಕೊಂಡರೆ ಅವರ ಪ್ರೀತಿ, ಆ ನಂಬಿಕೆ ಅದೆಷ್ಟು ಇತ್ತು ಅನ್ನೋದು ಅರ್ಥವಾಗಿ ಕಣ್ಣಂಚುತೇವವಾಗುತ್ತದೆ.

ಅವನ ತೊದಲು ಮಾತು, ತಪ್ಪು ಹೆಜ್ಜೆ, ಕೊರಳು ತಬ್ಬಿ ಮಲಗುವ ರೀತಿ ಇದಿನ್ನೂ ಪುಟ್ಟ ಕೂಸು ಅನ್ನುವುದರೊಳಗೆ ಸ್ಕೂಲ್ ಗೆ ಹೋಗುವ ದಿನ ಬಂದಾಗಿತ್ತು. ನೋಡು ಪುಟ್ಟು ರಸ್ತೆಯಲ್ಲಿ ಹೋಗುವಾಗ ವೆಹಿಕಲ್ ಬಂದ್ರೆ ಸೈಡ್ ಹೋಗ್ಬೇಕು ಆಯ್ತಾ ಇಲ್ವಾ ಅಲ್ಲೇ ನಿಂತು ಅದು ಹೋದ ಮೇಲೆ ಮುಂದಕ್ಕೆ ಹೋದ್ರು ಆಗುತ್ತೆ ರಸ್ತೆ ಮಧ್ಯೆ ನಡಿಬಾರ್ದು ಅಂತ ಹೇಳಿದ್ದನ್ನ ಎಷ್ಟು ವಿಧೇಯವಾಗಿ ಪಾಲಿಸುತ್ತಿದ್ದ ಅಂದ್ರೆ ಯಾವುದಾದರೂ ವೆಹಿಕಲ್ ಅಷ್ಟು ದೂರದಲ್ಲಿ ಕಂಡರೆ ರಸ್ತೆಯ ಬದಿ ಹೋಗಿ ನಿಂತು ಬಿಡುತಿದ್ದ. ಜೊತೆಯಲ್ಲಿ ಇದ್ದವರು ಬಾರೋ ಏನೂ ಆಗೋಲ್ಲ ನಾವಿಲ್ವಾ ಅಂದ್ರೆ ಇಲ್ಲಾ ಅಕ್ಕ ಹೇಳಿದಾಳೆ ಸೈಡ್ ಅಲ್ಲಿ ನಿಲ್ಲಬೇಕು ಅಂತ ಹೇಳಿ ವೆಹಿಕಲ್ ಪಾಸ್ ಆಗುವರೆಗೂ ಅಲ್ಲೇ ನಿಂತು ಮತ್ತೆ ಬರುತಿದ್ದ.

ಅವನ ಕಣ್ಣೆದುರು ಮೊದಲ ಕಂಡ ಅಕ್ಕ ನಾನೇ ಆಗಿದ್ದಕ್ಕೋ, ಅದರ ಜೊತೆ ಬಾಲ್ಯದಲ್ಲಿ ಜೊತೆಯಾಗಿದ್ದಕ್ಕೋ. ಅಥವಾ ಅದ್ಯಾವ ಋಣಾನುಬಂಧವೋ ಇವತ್ತಿಗೂ ಅಕ್ಕನೆಂದರೆ ಅವತ್ತಿನಷ್ಟೇ ಪ್ರೀತಿ, ಅಂತಃಕರಣ. ನನ್ನ ಕಣ್ಣಿಗೆ ಇವತ್ತಿಗೂ ಅವನು ಪುಟ್ಟುವೇ. ಅಂತ ಪುಟ್ಟುವಿಗೆ ಮೊನ್ನೆ ಮದುವೆ ಅಂದ್ರೆ ಕಾಲ ಚಕ್ರದ ವೇಗಕ್ಕೆ ಬೆರಗಾಗೋ ಹಾಗಿದೆ. ಬದುಕಿನ ವೇಗಕ್ಕೆ ಖುಷಿ ಪಡುವುದೋ, ಇಲ್ಲಾ ಬೇಜಾರೋ ತಿಳಿಯದ ಗೊಂದಲ. ಪುಟ್ಟ ಹೆಜ್ಜೆಗೆ ಜೊತೆಯಾಗಿ ಪುಟ್ಟಿ ಸುನಿತಾ ಅಡಿಯಿಟ್ಟಿದ್ದಾಳೆ. ಒಂದು ವಾರದ ಮದುವೆಯಲ್ಲಿ ಅಕ್ಕನ ಮಡಿಲಿಗೆ ಸಂಭ್ರಮತಂದು ಸುರಿದಿದ್ದಾನೆ. ಸಾವಿರ ಸಾವಿರ ನೆನಪುಗಳ ಬುತ್ತಿ ಕಟ್ಟಿ ಕೊಟ್ಟು ಬದುಕಿನ ಹೆಜ್ಜೆಗೆ ಗರಿ ಮೂಡಿಸಿದ್ದಾನೆ. ಇನ್ನೇನು ಬೇಕು ಈ ಜೀವಕ್ಕೆ...


ಇಟ್ಟ ಹೆಜ್ಜೆ ಸದಾ ಜೊತೆಯಾಗಿರಲಿ, ಬೆಸೆದ ಬೊಗಸೆಯಲ್ಲಿ ಪ್ರೀತಿ ನಿರಂತರವಾಗಿರಲಿ.
ಕಿರುನಗು ತುಟಿಯಂಚಿನಲ್ಲಿ ನಂದಾದೀಪವಾಗಿರಲಿ.ಬದುಕು ಹಸಿರಾಗಲಿ.
ಹೊಸ ಬದುಕಿಗೆ ಶುಭವಾಗಲಿ... ಲವ್ಯೂ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...