ಮೋವಿಯ ಇನ್ಸಿಡೆಂಟ್ ಆದ ನಂತರ ನಾಯಿಗಳ ಬಗ್ಗೆ ಅಟ್ಯಾಚ್ಮೆಂಟ್ ಬೆಳಸಿಕೊಳ್ಳುವುದನ್ನೇ ಬಿಟ್ಟಿದ್ದೆ. ಅಹಿಗೋ ಅವುಗಳೆಂದರೆ ವಿಪರಿತ ಪ್ರೀತಿ. ಅದಕ್ಕೆ ಸರಿಯಾಗಿ ಮುತ್ತಜ್ಜಿ ಮನೆಯಲ್ಲಿ ನಾಯಿಮರಿ ತಂದು ಸಾಕಿದ್ದರು. ಪ್ರತಿ ಸಲ ಫೋನ್ ಮಾಡಿದಾಗಲೂ ಅವಳು ಮೊದಲು ಕೇಳೋದೇ ಪಾಂಡು ಬಗ್ಗೆ. ಊರಿಗೆ ಹೋಗುವುದೆಂದರೆ ಅವಳ ಸಂಭ್ರಮ್ಮಕ್ಕೆ ಮುಖ್ಯ ಕಾರಣ ನಾಯಿ ಹಾಗೂ ದನಗಳು.

ಹೋದ ದಿವಸ ಪರಿಚಯವಿಲ್ಲದ್ದಕ್ಕೆ ಬೊಗಳುತ್ತಲೇ ಸ್ವಾಗತಿಸಿದ್ದ ಪಾಂಡುವನ್ನು ಗಂಟೆಗಳು ಕಳೆಯುವ ಮೊದಲೇ ಫ್ರೆಂಡ್ ಮಾಡಿಕೊಂಡು  ಬಿಟ್ಟಿದ್ದಳು. ಅವಳಿಗೆ ಆಟಕ್ಕೆ, ಮಾತಿಗೆ, ಸುತ್ತಾಟಕ್ಕೆ ಎಲ್ಲವಕ್ಕೂ ಜೊತೆಯಾಗಿ ಪಾಂಡುವೇ. ಮೊದಮೊದಲು ಬಿಂಕ ತೋರಿಸುತ್ತಿದ್ದ ಅದು ಬಹಳ ಬೇಗ ಅವಳಿಗೆ ಹೊಂದಿಕೊಂಡು ಬಿಟ್ಟಿತ್ತು. ಅವಳ ಬಳಿ ಬೈಸಿಕೊಳ್ಳುತ್ತಾ, ಅವಳು ಅವನನ್ನು ಮರೆತು ತಿಂದು ಕುಡಿದು ಮಾಡಿದರೆ ಅವಳಿಗೆ ಹೆದರಿಸುತ್ತಾ ಇದ್ದ ಪಾಂಡು ಕೊನೆ ಕೊನೆಗೆ ಎಷ್ಟು ಹಚ್ಚಿಕೊಂಡಿತ್ತು ಅಂದರೆ ಅವಳು ಎಲ್ಲಿ ಹೋದರೂ ಅವಳ ಜೊತೆ ಇರುತಿತ್ತು.

ಹೋದ ಸ್ವಲ್ಪ ಹೊತ್ತು ಮನೆಯ ಒಳಗೆ, ಕೊಟ್ಟಿಗೆ ಓಡಾಡಿ ಎಲ್ಲವನ್ನೂ ನೋಡಿದ ಮೇಲೆ ಅವಳ ಕಾರ್ಯಕ್ಷೇತ್ರ ಮೆಲ್ಲಗೆ ಗದ್ದೆ ಅಲ್ಲಿಂದ ಆಚೆಮನೆ ಕಡೆ ವಿಸ್ತಾರ ಆಗುತ್ತಿದ್ದಂತೆ ಅಲ್ಲಿಯವರೆಗೂ ಹಿಂಬಾಲಿಸುತಿದ್ದ ಅವನು ಆಮೇಲೆ ಲೀಡ್ ಮಾಡಲು ಶುರುಮಾಡಿದ್ದ. ಯಾವತ್ತೋ ಒಂದು ಸಲ ಬರೋ ಪೇಟೆ ಹುಡುಗಿಗೆ ಏನು ಗೊತ್ತು ಹಳ್ಳಿ ಬಗ್ಗೆ ಅಂತ ಅವಳಿಗೆ ಮುಂದೆ ಹೋಗಲು ಬಿಡದೆ ತಾನು ಮುಂದೆ ಹೋಗುತಿದ್ದ. ಅಪ್ಪಿ ತಪ್ಪಿ ಅವಳು ಮುಂದೆ ಹೋದರೆ ಮುಗಿತು ಬೊಗಳಿ ಗಲಾಟೆ ಮಾಡಿ ಅಡ್ಡಗಟ್ಟಿ ಹೋಗಲೇ ಬಿಡುತ್ತಿರಲಿಲ್ಲ. ಬಿಸಿಲು ಕಣೆ ಹಾವು ಗೀವು ಇದ್ದಿತು ಅಂತ ಅವಳ ಮುತ್ತಜ್ಜಿ ಹೇಳುತ್ತಿದ್ದರೆ ಇವನು ಗಂಭಿರವಾಗಿ ಸುತ್ತಾಮುತ್ತಾ ಗಮನಿಸುತ್ತಾ ಅದೆಷ್ಟು ಜಾಗೃತೆಯಿಂದ ಕರೆದುಕೊಂಡು ಹೋಗುತ್ತಿದ್ದನೆಂದರೆ ಅಮ್ಮನಾದ ನನಗೇ ಆಶ್ಚರ್ಯ  ಆಗುತಿತ್ತು.

ಇವಳದೋ ನಿಂತಲ್ಲಿ ನಿಲ್ಲದ ಕಾಲು. ಸದಾ ಸುತ್ತುತಲೇ ಇರುವ ಅವಳನ್ನು ಕ್ಷಣ ಮಾತ್ರವೂ ಬಿಡದೆ ಹಿಂಬಾಲಿಸುತಿದ್ದ. ಒಂಚೂರು ಬೇಜಾರು ಆಗಲ್ವೇನೋ ಮಾರಾಯ ಅಂತ ನಾನು ಗೊಣಗುತಿದ್ದರೆ ಒಮ್ಮೆ ಹಿಂದುರುಗಿ ನನ್ನ ದಿಟ್ಟಿಸಿ ಮುಂದುವರೆಯುತ್ತಿದ್ದ. ಅದರ ಭಾವವೆನಿತ್ತು ಅಂತ ಅರ್ಥೈಸಿಕೊಳ್ಳುವ ಧೈರ್ಯ ಮಾಡದೆ ಆಮೇಲೆ ಸುಮ್ಮನಾಗಿ ಬಿಟ್ಟಿದ್ದೆ. ಅವಳು ಆಚೆಮನೆಗೆ ಹೋದರೂ ಅಷ್ಟೇ ಅವಳು ಬಾಗಿಲು ದಾಟಿ ಒಳಗೆ ಹೋಗುವವರೆಗೂ ನೋಡುತ್ತಾ ನಿಂತು ಆಮೇಲೆ ಅವಳು ಬರುವವರೆಗೂ ಅಲ್ಲೇ ಮಲಗಿ ಕಾದು ಆಮೇಲೆ ವಾಪಾಸ್ ಕರೆತರುತಿದ್ದ. ಆಮೇಲಾಮೇಲೆ ಅಹಿ ಎಲ್ಲಿ ಹೋದರೂ ಪಾಂಡು ಇದಾನಲ್ಲ ಬಿಡು ಅನ್ನುವಷ್ಟು ನಂಬಿಕೆ ಹಾಗೂ ಧೈರ್ಯ.

ಅವಳೂ ಅಷ್ಟೇ ಸದಾ ಅವನ ಜೊತೆ ಮಾತಾಡುತ್ತಾ, ಏನು ಬೇಕೋ ನಿಂಗೆ ಅಂತ ತಾನು ತಿನ್ನುವುದನ್ನ ಶೇರ್ ಮಾಡ್ತಾ, ಅವನಿಗೂ ಕೊಟ್ಟು ಕಾಫಿ ಕುಡಿಯುತ್ತಾ ಮನುಷ್ಯ ಪ್ರಾಣಿ ಅನ್ನೋ ಮಿತಿಯನ್ನು ದಾಟಿ ಅವರಿಬ್ಬರ ನಡುವೆ ಒಂದು ಭಾಂಧವ್ಯ ಬೆಳೆದಿತ್ತು. ಹೀಗೆ ಸಂಜೆ ಅಚೆಮನೆಗೆ ಹೋಗುವಾಗ ಎದುರಾದ ಇನ್ಯಾವುದೋ ನಾಯಿಕಂಡು ಅಹಿ ಹೆದರಿದ್ದನ್ನು ನೋಡಿ  ಇವನಿಗೆ ರೋಷವುಕ್ಕಿ ಅವುಗಳ ಜೊತೆ ಜಗಳವಾಡಿ ಅವುಗಳು ಇವನ  ಕಾಲಿಗೆ ಕಚ್ಚಿ ಗಾಯವಾಗಿ ಆದರೂ ಅವಳನ್ನು ಮನೆಗೆ ತಲುಪಿಸಿದ್ದ. ಅವಳಿಗೋ ಸಂಕಟ. ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಒಂದೊಂದೇ ಹಲಸಿನ ತೊಳೆ ಬಿಡಿಸಿ ಕೊಟ್ಟರೆ ಅವನೂ ಅಷ್ಟೇ ಪ್ರೀತಿಯಿಂದ ನಿಧಾನಕ್ಕೆ ತಿಂದು ಅವಳ ಪಕ್ಕವೇ ಕೂರುತಿದ್ದ.

ರಾತ್ರಿ ಔಷಧಿ ಹಾಕಲು ಹೋದರೆ ಸಿರ್ರೆಂದು ಸಿಡುಕಿ ಹತ್ತಿರ ಹೋಗಲೂ ಬಿಡದೆ ಗುರ್ರ್ ಅನ್ನುತ್ತಿದ್ದ ಅವನನ್ನು ನೋಡಿ ಭಯ ಸಿಟ್ಟು ಎರಡೂ ಬಂದು ಏನಾದರೂ ಮಾಡ್ಕೋ ಹೋಗು ಅಂತ ಒಳಗೆ ಹೋಗಿದ್ದೆ. ಹೊರಗಡೆ ಅಹಿ ಅವನಿಗೆ ಸಮಾಧಾನ ಮಾಡುತ್ತಿದ್ದಳು. ಬೇಜಾರು ಮಾಡ್ಕೋಬೇಡಾ ಕಣೋ ಪಾಂಡು ಇವತ್ತು 21 ದೂರ್ವೆ ಕೊಯ್ದು ಆಂಟಿ ಕೈಯಲ್ಲಿ ಕೊಟ್ಟು ಗಣಪತಿಗೆ ನಿನ್ನ ಕಾಲು ನೋವು ವಾಸಿ ಮಾಡು ಹಾಗೆ ನಿಂಗೆ ಕಚ್ಚಿದ ನಾಯಿಗಳಿಗೆ ಬುದ್ಧಿ ಕಲಿಸು ಅಂತ ಹೇಳಿ ಬಂದಿದೀನಿ ಕಣೋ, ನಾಳೆ ಕೇಶು ಮಾವ ಪೂಜೆ ಮಾಡಿ ಏರಿಸೋ ಹೊತ್ತಿಗೆ ನಿಂಗೆ ನೋವು ಕಡಿಮೆ ಆಗಿರುತ್ತೆ ಕಣೋ ಈಗ ಮಲ್ಕೋ ಜಾಸ್ತಿ ಓಡಾಡಬೇಡ ಅಂತ ಅವನಿಗೆ ಹಾಸಿ ಒಳಗೆ ಬಂದಿದ್ದಳು.

ಮರುದಿನ ಬೆಳಿಗ್ಗೆ ಅವಳು  ಏಳುವ ಹೊತ್ತಿಗೆ ಅವನು ವಾಕಿಂಗ್ ಹೋಗಿಯಾಗಿತ್ತು. ಬಂದವನಿಗೆ ನೋಡಿದ್ಯಾ ಗಣಪತಿ ಮಾಮಿ ನನ್ನ ಮಾತು ಕೇಳಿದಾನೆ ಅಲ್ವಾ ಅಂತ ಅವಳು ನಗುತಿದ್ದರೆ ಅವನು ಅವನದೇ ಭಾಷೆಯಲ್ಲಿ ಏನೋ ಹೇಳುತಿದ್ದ. ಕುಂಟುತಿದ್ದರೂ ಅಹಿ ಒಬ್ಬಳೇ ಎಲ್ಲೂ ಹೋಗಲು ಬಿಡದೆ, ಹಾಗಂತ ಅವಳನ್ನು ತಡೆಯದೆ ಜೊತೆಗೆ ಹೋಗುತಿದ್ದ. ಒಂದು ಕ್ಷಣವೂ ಅಹಿಗೆ ಒಬ್ಬಳೇ ಅನ್ನೋ ಫೀಲ್ ಕೊಡದಂತೆ ಜೊತೆಯಾಗುತಿದ್ದ. ಅಂತ ಪಾಂಡು ಇದ್ದಕ್ಕಿದ್ದ ಹಾಗೆ ಮಂಕಾಗಿದ್ದನಂತೆ. ಇನ್ನು ಓಡಾಡೋಕೆ ಕಷ್ಟ, ಆಗೋದೇ ಇಲ್ಲಾ ಅನ್ನೋ ಸ್ಥಿತಿಗೆ ತಲುಪಿದಾಗ ಬೆಳಗಾಗುವುವ ಮುನ್ನವೇ ಯಾರ ಗಮನಕ್ಕೂ ಬಾರದಂತೆ  ಹೊರಟೇ ಹೋದನಂತೆ.

ತನ್ನಿಂದ ಯಾರಿಗೂ ಕಷ್ಟವಾಗಬಾರದು ಅನ್ನೋ ಅವನ ಕಾಳಜಿ, ತೊರೆದು ಹೋಗುವ ಆ ದೃಢತೆ,  ಹೋಗುವ ದಿನ ಹತ್ತಿರವಾದಾಗ ಸದ್ದಿಲ್ಲದೇ ಎದ್ದು ಹೊರಡುವ ಆ ಸಂಕಲ್ಪ ಶಕ್ತಿ , ಎಲ್ಲಕ್ಕಿಂತ ಯಾರ ಹಂಗಿನ ಸೇವೆಯೂ ಬೇಡಾ ಅನ್ನೋ ಧಾರ್ಷ್ಟ್ಯ... ಮನುಷ್ಯನ ಅಹಂ ಗೆ, ಮಿತಿಮೀರಿದ ಆಸೆಗೆ  ಸೆಡ್ಡು ಹೊಡೆಯುವ ಹಾಗೆ ಕಾಣಿಸಿತು.

ಮನುಷ್ಯ ತಾನೇ ಶ್ರೇಷ್ಠ ಅಂತ ಬೀಗ್ತಾನೆ.... ಪ್ರಾಣಿಗಳು ಬದುಕ್ತಾವೆ.....    

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...