ಭೂಮಿ ಹುಣ್ಣಿಮೆ.

ಆಗ ತಾನೇ ಮೋಡ ಚದುರಿ ಬಿಸಿಲು ಸಸುನಗುತ್ತಾ ಹೊರಗೆ ಹಣುಕುವಾಗ ಹಾರೆಯನ್ನು ಹೆಗಲ ಮೇಲೆ ಹಾಕಿಕೊಂಡು ಗದ್ದೆಗೆ ನೀರು ಕಟ್ಟಿ ಬರ್ತೀನಿ ಅಂದವನ ಬೆನ್ನ ಹಿಂದೆಯೇ ಹೊರಟೆ. ಆಗಷ್ಟೇ ಮಳೆಗಾಲ ಮುಗಿದು ಸೂರ್ಯನೂ ಹೊರಗೆ ಬಂದಿದ್ದ. ಎಳೆಬಿಸಿಲಿಗೆ ಹಸಿರು ಇನ್ನಷ್ಟು ಹೊಳೆಯುತ್ತಿತ್ತು. ತಣ್ಣನೆಯ ಗಾಳಿ ಹಿತವಾಗಿ ಭತ್ತದ ಪೈರನ್ನು ನೇವರಿಸಿ ಕುಶಲ ವಿಚಾರಿಸುತಿತ್ತು. ಅದು ಇನ್ಯಾರಿಗೂ ಕೇಳಬಾರದೇನೋ ಎಂದು ಬಾಗಿ ಏನೋ ಪಿಸುಗುಡುತಿತ್ತು. ಹಾಗಾಗಿ ಎಷ್ಟು ಕಿವಿ ನಿಮಿರಿಸಿದರೂ ಸುಯ್ ಎನ್ನುವ ಶಬ್ದ ಒಂದು ಬಿಟ್ಟು ಇನ್ನೇನೂ ಕೇಳಲಿಲ್ಲ.  ಜುಳು ಜುಳನೆ ಹರಿಯುವ ನೀರಿಗೂ ಸಂಭ್ರಮ, ತಿಳಿಯಾಗಿ ಹರಿದು ಶುದ್ಧ ಭಾವ ಮೂಡಿಸುತ್ತ ಮುಂದಿನ ಗದ್ದೆಗೆ ಹೋಗುತಿತ್ತು.  ಅದೇನೋ ಅರ್ಜೆಂಟ್ ಕೆಲಸವಿದೆಯೇನೋ ಅನ್ನುವ ಹಾಗೆ ಏಡಿಯೊಂದು ಗಡಿಬಿಡಿಯಲ್ಲಿ ಹೋಗುತಿತ್ತು. ಅಂಚಿನ ಬದಿಯಲ್ಲಿ ಹುಲ್ಲು ಹಸಿರಾಗಿ ನಳನಳಿಸುತಿತ್ತು. ಹುಲ್ಲಿಗೂ ತನ್ನ ಬಣ್ಣಕ್ಕೂ ತಕ್ಷಣಕ್ಕೆ ವ್ಯತ್ಯಾಸ ಗೊತ್ತಾಗದ ಹಾಗಿರುವ ಮಿಡತೆ ಚಳಿ ಕಾಯಿಸುತ್ತಾ ಕನಸು ಕಾಣುತಿತ್ತು.  ಇದ್ಯಾವುದರ ಗೊಡವೆಯೂ ಬೇಡವೆಂಬಂತೆ ಬೆಳ್ಳಕ್ಕಿಯೊಂದು ಬಿಸಿಲಿಗೆ ಮೈಯೊಡ್ಡಿ ಧ್ಯಾನ ಮಗ್ನವಾಗಿತ್ತು. ಯಾವುದೋ ಕಾರ್ಯಕ್ರಮಕ್ಕೆ ಬಂದ ಜನ ಜಂಗುಳಿಯ ಓಡಾಟದಂತೆ ಕಾಣುತಿತ್ತು ಹಾರುತಿದ್ದ ಕೀಟ ಸಂಕುಲ. ಗದ್ದೆಯ ನಡುವೆ ಗಂಭೀರವಾಗಿ ನಿಂತು ಗಮನಿಸುತ್ತಿದ್ದ ಮರದ ತುಂಬಾ ಬಗೆಬಗೆಯ ಹಕ್ಕಿಗಳ ಇಂಚರ.

ಇಡೀ ಗದ್ದೆಯೆಂಬ ಗದ್ದೆಯ ಕೋಗು ಎಳೆಬಿಸಿಲಿನಲ್ಲಿ ಹೀಗೆ ಮೀಯುತ್ತಿದ್ದರೆ ಅದರ ನಗು ಸುತ್ತೆಲ್ಲಾ ಪಸರಿಸಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿತ್ತು. ಯಾವ ಗೌಜು ಗದ್ದಲ ಗಡಿಬಿಡಿಯಿಲ್ಲದೆ ಎಲ್ಲರೂ, ಎಲ್ಲವೂ ತಮ್ಮ ತಮ್ಮ ಲೋಕದಲ್ಲಿ ಮಗ್ನರಾದ ಹಾಗಿತ್ತು. ದಾರಿ ಸವೆದಂತೆ ಕಂಡರೂ ಗದ್ದೆಯ ಬದುವಿನಲ್ಲಿ ನಡೆಯುವುದು ಸುಲಭವಲ್ಲ. ಅಂಕು ಡೊಂಕಾಗಿ ಮೈಚೆಲ್ಲಿ ಬಿದ್ದಿರುವ ಅದು  ಮೈ ಮರೆತರೆ ಕೆಸರು ಆಲಂಗಿಸಿ ಜೋಗುಳ ಹಾಡುತ್ತದೆ. ನಡೆಯುವಾಗ ನೃತ್ಯ ಕಲಿಸುತ್ತದೆ. ಬ್ಯಾಲೆನ್ಸ್ ಮಾಡೋದು ಈ ಅಂಚು ಎಷ್ಟು ಸರಳವಾಗಿ ಕಲಿಸುತ್ತಲ್ಲ ಅಂತ ಆಲೋಚಿಸುತ್ತಾ ಹಸಿರಿನಲ್ಲಿ, ಬೆಳೆದು ನಗುತಿದ್ದ ಪೈರಿನ ನಗೆಯಲ್ಲಿ ಇಷ್ಟಿಷ್ಟೇ ಕಳೆದು ಹೋಗುತ್ತಿರುವಾಗ ಚಕಚಕನೆ ಅಂಚು ಕಡೆದು ನೀರು ನಿಲ್ಲಿಸುತಿದ್ದವನ ಮಾತು ಮತ್ತೆ ಎಳೆದು ತಂದಿತು. ಬೆಳೆದುನಿಂತ  ಪೈರಿಗೆ ಕದಿರು ಒಡೆಯುವ ಸಂಭ್ರಮ. ಕದಿರು ಬರೋಕೆ ಶುರುವಾಗಿದೆ ಅಲ್ವೇನೋ ಅಂದೇ ಖುಷಿಯಲ್ಲಿ.  ಮಾರ್ನವಮಿಗೆ ಮಾರಿಗೊಂದು ಕದಿರು ಅಂತ ಗಾದೇನೇ ಇಲ್ವಾ ಮತ್ತೆ ಅಂತ ಮುಖ ನೋಡಿದ. ಅಬ್ಬಾ ಲೆಕ್ಕಾಚಾರವೇ ಅನ್ನಿಸಿ  ಸುಮ್ಮನೆ ಗದ್ದೆಯನ್ನೇ ದಿಟ್ಟಿಸಿದೆ.

ನಮ್ಮ ಹಿರಿಯರದು ಅದೆಂಥ ಕರಾರುವಕ್ಕಾದ ಲೆಕ್ಕಾಚಾರ.  ಪ್ರತಿ ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯ ಇದ್ದಹಾಗೆ ಅದರ ಹಿಂದೆ ನಿಖರವಾದ ಲೆಕ್ಕಾಚಾರವೂ ಇದೆ ಮತ್ತದೂ ಎಂದು ತಪ್ಪದಷ್ಟು ಗ್ಯಾರಂಟಿಯೂ ಇದೆ. ಪ್ರಕೃತಿ ಲೆಕ್ಕಾಚಾರವನ್ನು ಎಂದೂ ಮೀರುವುದಿಲ್ಲ. ತಪ್ಪುವುದು ಮನುಷ್ಯ ಮಾತ್ರವೇನೋ.  ಪ್ರಕೃತಿಯ ಜೊತೆ ಅದೆಷ್ಟು ಬದುಕು ಮಿಳಿತವಾಗಿತ್ತು ಮತ್ತದೆಷ್ಟು ಸಹಜವಾಗಿತ್ತು ಅನ್ನೋದು ನಮ್ಮ ಆಚರಣೆಗಳನ್ನು ಗಮನಿಸಿದಾಗ ಅರ್ಥವಾಗುತ್ತಾ ಹೋಗುತ್ತದೆ. ಇಬ್ಬರೂ ಲೆಕ್ಕ ತಪ್ಪದೆ ಹೋಗಿದ್ದರಿಂದಲೇ ಸರಿಯಾದ ಪಥ ಸಿಗುತ್ತಿತ್ತೇನೋ ಅಂತ ಯೋಚಿಸುವಾಗ ಕಾಲಚಕ್ರದ  ಅರಿವು ಕೊಂಚವಾದರೂ ತಿಳಿಯುತ್ತದೆ. ಬದುಕಿನ ಸಾರ್ಥಕತೆ  ಧಿಕ್ಕರಿಸುವುದರಲ್ಲಿ ಇಲ್ಲ ಸ್ವಿಕರಿಸುವುದರಲ್ಲೂ ಇಲ್ಲಾ, ಪಡೆದ ಪ್ರತಿಯೊಂದನ್ನೂ ಅಷ್ಟೇ ಗೌರವದಿಂದ ಹಿಂದುರಿಗಿಸುವುದರಲ್ಲಿ ಇದೆ. ಕೊಡು ಕೊಳ್ಳುವಿಕೆಯೇ ಸೃಷ್ಟಿಯ ನಿರಂತರ ಚಲನೆಯ ಬಿಂದು ಅನ್ನಿಸುತ್ತದೆ.

ಇದು ಫಸಲು ಬರುವ ಮುನ್ನಿನ ಸಮಯ. ಇತ್ತ ಗದ್ದೆಯಲ್ಲಿ  ಪ್ರತಿ ಪೈರು ತನ್ನೊಳಗೆ ಜೀವವನ್ನು ಹೊತ್ತು ನಿಂತರೆ ಅತ್ತ ತೋಟದಲ್ಲಿ ಅಡಿಕೆ ಗೊನೆ ಕೊಯ್ಲಿನ ದಿನಗಣನೆ ಮಾಡುತ್ತಿರುತ್ತದೆ. ಎರಡೂ ಮಾಗಿದ ಹಸಿರು.  ಭೂಮಿಯೊಡಲಲ್ಲಿ ಜೀವ ಮಿಸುಕಾಡುತ್ತಿರುತ್ತದೆ.  ಮನುಷ್ಯನಿಗೂ ಅವಳಿಗೂ ಕರುಳಬಳ್ಳಿ ಸಂಬಂಧ. ಅವನು ಕಡಿದುಕೊಂಡು ತುಳಿದು ಹೋದಷ್ಟೂ ಅವಳು ಕಾಯುತ್ತಾಳೆ. ಅವಳದು ಅನಂತ ಗರ್ಭ.  ಪ್ರಸವಿಸುವುದಕ್ಕೆ ದಿನ ಎಣಿಸುವ ಕಾತುರ, ಹೊಸ ಜೀವದ ಬಗ್ಗೆ ಕುತೂಹಲ ಜೊತೆಗೆ ಅಷ್ಟೇ ಅವ್ಯಕ್ತ ಭಯ. ಇಂಥ ಸಮಯದಲ್ಲೇ ಎಲ್ಲವೂ ಸಸೂತ್ರವಾಗಲಿ ಇಬ್ಬರಿಗೂ ಶುಭವಾಗಲಿ ತನ್ಮೂಲಕ ನಮಗೂ ಒಳ್ಳೆಯದಾಗಲಿ ಅಂತ ಪ್ರಾರ್ಥಿಸಿ ಹೊತ್ತವಳಿಗೆ ಗೌರವ ಸಲ್ಲಿಸುವ ಪ್ರಕ್ರಿಯೆಯೇ ಸೀಮಂತ. ಅದೇ ಭೂಮಿ ಹುಣ್ಣಿಮೆ. ಪ್ರತಿ ಹೆಣ್ಣಿಗೂ ಅವಳ ಮೊದಲ ಮಗುವನ್ನು ಹೊತ್ತಾಗ ಈ ಸೀಮಂತ ಮಾಡಲಾಗುತ್ತದೆ. ಆದರೆ ವಸುಂಧರೆ ನಿತ್ಯ ನೂತನೇ. ಅವಳ ಒಡಲಲ್ಲಿ ಜೀವ ಪಡಿಮೂಡದಿದ್ದರೆ ನಮ್ಮ ಬದುಕೇ ಇಲ್ಲವಾಗುತ್ತದೆ. ಹಾಗಾಗಿ ಪ್ರತಿ ವರ್ಷವೂ ಅವಳಿಗೆ ಸೀಮಂತ. ಅವಳು ಹೊತ್ತರಷ್ಟೇ ನಮ್ಮ ಬದುಕು. ಹಾಗಾಗಿ ಅವಳು ಪ್ರತಿ ಪೀಳಿಗೆಯ ಜೋಡಿಸಲು ಮತ್ತೆ ಮತ್ತೆ ಗರ್ಭ ಧರಿಸುತ್ತಾಳೆ.

ಎಲ್ಈಲದರಲ್ಲೂ ಜೀವಂತಿಕೆ ಹುಡುಕುವುದು ಈ ನೆಲದ ಸಂಸ್ಕಾರ. ಹಾಗಾಗಿ ಸೀಮಂತದಲ್ಲೂ  ಸಾಮ್ಯತೆ. ಹೆಣ್ಣಿಗೆ ಹಸಿರು ಸೀರೆ, ಹಸಿರು ಬಳೆ, ಹಸಿರು ಕುಪ್ಪಸ ಕೊಡುತ್ತಾರೆ. ಅವಳು ಅದನ್ನು ಧರಿಸಿ ಹಸಿರಾಗಿ ಕಂಗೊಳಿಸುತ್ತಾಳೆ. ಹಸಿರು ಸಮೃದ್ಧಿಯ ಸಂಕೇತ. ಇಲ್ಲಿ ಭೂಮಿ ಫಸಲು ಹೊತ್ತು ನಿಂತಾಗ ಇಡೀ ವಾತಾವರಣವೇ ಹಸಿರುಮಯ. ಚಿಗುರಿದ ಗಿಡ ಮರಗಳ ದಟ್ಟ ಹಸಿರು, ಪೈರಿನ ಹಸಿರು, ಅಂಚಿನ ಬದಿಯಲ್ಲಿ ಬೆಳೆದ ಹುಲ್ಲೂ ಹಸಿರು, ಗುಡ್ಡ ಬೆಟ್ಟಗಳ ಮೇಲೆಲ್ಲಾ ಚಿಗುರಿನಿಂತ ಹಸಿರೋ ಹಸಿರೋ. ತೋಟದಲ್ಲಿ ತೂಗಾಡುವ ಅಡಿಕೆ ಕೊನೆಯೂ, ಅಂಗಳದ ಬದಿಯ ತೆಂಗಿನ ಗೊಂಚಲೂ, ಹಿತ್ತಲಿನ ತರಕಾರಿ ಫಸಲೂ, ಅಂಗಳದ ತುಂಬಾ ರಂಗೊಲಿಯಂತ ಹಾವಸೆಯೂ ಹಸಿರು. ಅವಳ ಸೀಮಂತಕ್ಕೆ ಇಡೀ ಪ್ರಕೃತಿಯೇ ಹಸಿರು ಉಟ್ಟು ಸಂಭ್ರಮಿಸುತ್ತದೆ. ಆ ಹಸಿರ ನಡುವೆ ಸರಿದು ಹೋಗುವ ಹಸಿರುಹಾವು, ಹಸಿರು ಮಿಡತೆ ಕೂಡಾ ಅವಳದೇ ಭಾಗವಾಗಿ ಕಂಡು ಗೊಂದಲ ಹುಟ್ಟಿಸುತ್ತದೆ. ಅಷ್ಟೊಂದು ವೈವಿಧ್ಯಮಯ ಹಸಿರಿದ್ದೂ ಆ ಹಸಿರಿನಲ್ಲೂ ಎಷ್ಟೊಂದು ಭಿನ್ನತೆ. ಪ್ರತ್ಯೇಕವಾಗಿದ್ದೂ ಒಂದಾಗಿ ಕಾಣುವ ವಿಶಾಲತೆ. ಎಷ್ಟೊಂದು ಗಹನವಾದ ಪಾಠ ಎಷ್ಟು ಸರಳವಾಗಿ ಹೇಳುತ್ತಲ್ಲ ಈ ಪ್ರಕೃತಿ.

ಸೀಮಂತವೆಂದರೆ ಸಡಗರ ಮಾತ್ರವಲ್ಲ, ಕೃತಜ್ಞತೆಯೂ ಹೌದು. ಸೃಷ್ಟಿಸುವ ಕಾರ್ಯ ಸುಲಭವಲ್ಲ. ತನ್ನದೇ ರಕ್ತ ಮಾಂಸಗಳನ್ನು ಹಂಚಿಕೊಂಡು ಇನ್ನೊಂದನ್ನ ಸೃಷ್ಟಿಸಬೇಕು. ಸೃಷ್ಟಿ ಮುಂದುವರಿಯಬೇಕು. ಸರಪಳಿ ಕೊಂಡಿ ಬೆಸೆದುಕೊಂಡು ಮುಂದಕ್ಕೆ ಸಾಗಬೇಕು.  ಹಾಗಾಗಿ ಅವರ ಆರೈಕೆ ಮಾಡಬೇಕು. ಕಾಲಕಾಲಕ್ಕೆ ಏನು ಬೇಕು ನೋಡಿ ಅದನ್ನು ಒದಗಿಸಬೇಕು. ಆಮೇಲೆ ಒಂದು ದಿನ ದೇವರ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಬೇಕು. ಹೊತ್ತ ಜೀವವನ್ನು ಒಂದು ಕ್ಷಣವಾದರೂ ತೃಪ್ತಿ ಪಡಿಸಬೇಕು.  ಅನ್ನ ದೇವರಿಗಿಂತ ಮಿಗಿಲು ದೇವರುಂಟೆ... ಹೊಟ್ಟೆಯನ್ನು ಮಾತ್ರ ಸಂಪೂರ್ಣವಾಗಿ ತೃಪ್ತಿ ಪಡಿಸಲು ಸಾದ್ಯ. ಹಾಗಾಗಿ ಮನೆಯಲ್ಲಿ ಭಕ್ಷ ಭೋಜ್ಯಗಳನ್ನು ತಯಾರಿಸಿ ಸೀಮಂತ ಮಾಡಿದರೆ ಭೂದೇವಿಗೆ  ಕಾಡು, ಬಯಲು, ತೋಟ ಎಲ್ಲಾ ಕಡೆ ಸುತ್ತಾಡಿ ಬಗೆಬಗೆಯ ಚಿಗುರನ್ನು ತಂದು ಅದನ್ನು ಹದವಾಗಿ ಬೇಯಿಸಿ ಪಲ್ಯಮಾಡಿ, ಬಗೆ ಬಗೆಯ ಅಡುಗೆಯನ್ನು ತಯಾರಿಸೋದು. ಬೆರಕೆ ಸೊಪ್ಪಿನ ಪಲ್ಯ ಈ ದಿನದ ವಿಶೇಷ. ಎಲ್ಲವನ್ನೂ ಸೇರಿಸಿಕೊಂಡು ರುಚಿಯಾಗಿ ಮಾಡುವುದು ಎಲ್ಲರೂ ಒಂದಾಗಿ ಸುಖವಾಗಿ ಬದುಕುವುದು....

ಹೀಗೆ ಅಡುಗೆ ತಯಾರಾದ ಮೇಲೆ  ಗದ್ದೆಯಲ್ಲೋ, ತೋಟದಲ್ಲೋ ಬೆಳೆದ ಫಸಲಿನ ನಡುವಿನ ಪುಟ್ಟ ಜಾಗ ಸರಿಮಾಡಿ ಸಾರಿಸಿ  ಪುಟಾಣಿ ಚಪ್ಪರಹಾಕಿ, ತೋರಣ ಕಟ್ಟಿ ಅರಿಸಿನ, ಕುಂಕುಮ, ಹೂ, ಗೆಜ್ಜೆವಸ್ತ್ರ ಏರಿಸಿ  ಪೂಜೆ ಮಾಡಿ ಗಂಟೆ ಜಾಗಟೆಗಳ ಸಾಂಗತ್ಯದಲ್ಲಿ ಆರತಿ ಬೆಳಗಿ  ನೈವೇದ್ಯ ಮಾಡಿ ನಂತರ ಪೈರು ಬೆಳೆವ ಜಾಗದಲ್ಲಿ ಮಾಡಿದ ಅಡುಗೆಯನ್ನು ಬೀರುತ್ತಾ, ಭೂಮಿ ತಾಯಿಗೆ ವಂದಿಸುತ್ತಾ, ಸುಖವಾಗಿ ಪ್ರಸವಿಸಿ ಒಳ್ಳೆಯ ಪೈರು ಮನೆ ತುಂಬಲಿ ಅಂತ ಬೇಡಿಕೊಂಡು ಬಂದು ಪ್ರಸಾದ ಸ್ವೀಕರಿಸಿದರೆ ಅಲ್ಲಿಗೆ ಸೀಮಂತ ಸಂಪನ್ನವಾದ ಭಾವ. ಅವತ್ತು ಗದ್ದೆ, ತೋಟಕ್ಕೂ ಒಂದು ಹೊಸ ಕಳೆ. ಮನೆಯಲ್ಲೂ , ಮನಸ್ಸಿನಲ್ಲೂ ತೃಪ್ತ ಭಾವ. ಇನ್ನು ಪ್ರಸವ ಸುಖವಾಗಲಿ ಬೆಳೆ ಚೆಂದವಾಗಿರಲಿ ಅನ್ನೋದು ಅನುದಿನದ ಬೇಡಿಕೆ.

ಹೊರುವುದು ಅದೆಂತ ಪುಣ್ಯ ಕೆಲಸ ಅನ್ನಿಸೋದು ಪ್ರತಿಸಲ ಫಲ ಹೊತ್ತ ಪೈರನ್ನು ನೋಡುವಾಗ. ಬದುಕನ್ನೇ ಮುಡಿಪಾಗಿಟ್ಟು, ಕಣ ಕಣವನ್ನೂ ಬಸಿದು ಶಕ್ತಿ  ತುಂಬಿ  ಹೊಸ ಜೀವ ಸೃಷ್ಟಿಸಿ ಸ್ವಲ್ಪವೂ ಮೋಹವಿಲ್ಲದೆ ಒಪ್ಪಿಸುವುದಿದೆಯಲ್ಲ ಅದು ಸುಲಭವಲ್ಲ.ಇಡೀ ಪ್ರಕೃತಿಗೆ ಈಗ ಜೀವಕಳೆ, ದಿವ್ಯ ಸೌಂದರ್ಯ, ಮೋಹಕತೆ, ಒನಪು ಎಲ್ಲವನ್ನೂ ಒಳಗೊಂಡ ಗಾಂಭೀರ್ಯತೆ. ಸೌಂದರ್ಯ ಗೌರವ ಮೂಡಿಸುವ ಹಾಗಿರಬೇಕು ಅನ್ನೋದಕ್ಕೆ ಪ್ರಕೃತಿಗಿಂತ ಉತ್ತಮ ಉದಾಹರಣೆ ಬೇಕೇ? ಮನಮೋಹಕವಾದರೂ ನೋಟದಲ್ಲಿ ತಂತಾನೇ ಪವಿತ್ರ ಭಾವ. ತೆನೆ ಹೊತ್ತ ಪೈರು ಸವರಿದರೆ ಅಪ್ಯಾಯಮಾನ. ಮೃದುವಾದ ಹಸಿರಾದ ಅದು ಪುಟ್ಟ ಮಗುವಿನ ಪಾದ ಸ್ಪರ್ಶಿಸಿದ ಹಾಗೇ,  ಬೀಸುವ ಗಾಳಿಗೆ ಅತ್ತಿತ್ತ ತೊನೆಯುವಾಗ ಹೊಟ್ಟೆಯೊಳಗೆ ಪುಟ್ಟ ಮಗು ಓಡಾಡಿದಂತೆ, ಸ್ಪರ್ಷಿಸುವಾಗ ಬೆರಳನಡುವೆ ಕಚಗುಳಿ ಇಡುವಾಗ ಕಂದ ಒದ್ದಂತೆ, ಸ್ತಬ್ಧವಾಗಿ ನಿಂತರೆ ಮಿಸುಕಾಡದೆ ಮಗು ಮಲಗಿದಂತೆ. ಅಮೇಲಿನ ದಿನಗಳು ತುಂಬಾ ಜಾಗರುಕವಾಗಿ ನೋಡಿಕೊಳ್ಳಬೇಕು. ಪೈರು ಮನೆಗೆ ಬರುವವರೆಗೆ ಆತಂಕ.

ಪ್ರತಿಯೊಂದು ಹಬ್ಬ, ಆಚರಣೆ ಬದುಕನ್ನ ಇನ್ನಷ್ಟು ಮಾಗಿಸುವ, ಹಗುರಾಗಿಸುವ ಪ್ರಕ್ರಿಯೆ. ಎಲ್ಲವಕ್ಕೂ ತರ್ಕವೇ ಉತ್ತರವಲ್ಲ, ತರ್ಕದಿಂದ ನೆಮ್ಮದಿ ದೊರುಕುವುದೂ ಇಲ್ಲ. ತಲೆಯಿಂದ ತಲೆಗೆ ಹರಿದು ಬರುವ ಈ ಸಂಪ್ರದಾಯಗಳು ಮನಸ್ಸನ್ನು ಇನ್ನಷ್ಟು ವಿಶಾಲಗೊಳಿಸುತ್ತವೆ, ಋಣ ಕಡಿಮೆಮಾಡಿಕೊಳ್ಳುವ ದಾರಿ ತೋರಿಸುತ್ತದೆ. ಪ್ರಕೃತಿಯೊಡನೆ ಅನುಸಂಧಾನ ಮಾಡಿಕೊಂಡು ಬದುಕಲು ಕಲಿಸುತ್ತದೆ. ಅಹಂ ಬ್ರಹ್ಮಾಸಿ ಅನ್ನೋದು ಹೀಗೆ ಮಿಳಿತಗೊಂಡು ಬದುಕಿದಾಗ ಶಾಸ್ತ್ರ ಓದದೆ ಅರ್ಥವಾಗಿ ಬದುಕಿನ ಭಾಗವಾಗಿ ಬಿಡುತ್ತದೆ. ಇಡೀ ಜಗತ್ತು ನಿಂತಿರುವುದು ಸರಪಳಿಯ ಸೂತ್ರದ ಮೇಲೆ. ಇಲ್ಲಿ ಪ್ರತಿಯೊಂದು ಇನ್ಯಾವುದರ ಜೊತೆಗೆ ಬೆಸೆದುಕೊಂಡಿದೆ. ಭಿನ್ನ ಅಸ್ತಿತ್ವ ತೋರುತ್ತಲೇ ಒಂದಕ್ಕೊಂದು ಸೇರಿಕೊಂಡಿದೆ. ಅದನ್ನು ಈ ಹಬ್ಬಗಳು ಹೇಳದಯೇ ತೋರಿಸುತ್ತದೆ. ಕಾಲ, ಸ್ಥಳ, ಭಾವ ಮೂರೂ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಲೆಕ್ಕಾಚಾರ ಹಾಕಿ ಬರುವ ಈ ಹಬ್ಬಗಳು ಸದಾ ಅಚ್ಚರಿಯೇ...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...