ದೀಪಾವಳಿ ಅಂದರೆ ಸಾಲು ಸಾಲು ಹಬ್ಬ.ಶುರುವಾಗೋದೇ ಶುದ್ದಗೊಳಿಸುವ ಮೂಲಕ ಅಂದರೆ ಅಭ್ಯಂಜನದ ಮೂಲಕ. ಅಭ್ಯಂಜನಕ್ಕೂ ಒಂದು ಕ್ರಮವಿದೆ, ಶುದ್ದಗೊಳಿಸುವ ನೀರಿಗೂ ಗೌರವ ಸಲ್ಲಿಸುವ ಪ್ರಕ್ರಿಯೆ ಇದೆ ಅದೇ ನೀರು ತುಂಬುವ ಹಬ್ಬ.
ಈ ನೀರು ತುಂಬುವ ಕೆಲಸವನ್ನು ಅದೆಷ್ಟು ಕ್ರಮಬದ್ಧವಾಗಿ ಸಾಂಪ್ರದಾಯಿಕ ಆಚರಣೆಯನ್ನಾಗಿಸಿ ಅದನ್ನೊಂದು ಪವಿತ್ರ ಕ್ರಿಯೆಯನ್ನಾಗಿಸಿದ್ದಾರೆ ನಮ್ಮ ಹಿರಿಯರು.
ಸ್ನಾನ ಮಾಡಿದ ಮೇಲೆ ಹಂಡೆ ತುಂಬಾ ನೀರು ತುಂಬಿಸಲೇ ಬೇಕು ಅನ್ನೋದು ನಿಯಮ. ನೀರು ತುಂಬುವ ಹಬ್ಬದ ದಿನ ಮಾತ್ರ ಅದಕ್ಕೆ ರಿಯಾಯಿತಿ. ಕೊನೆಯಲ್ಲಿ ಸ್ನಾನಕ್ಕೆ ಹೋದವರು ಮಾತ್ರ ಅವತ್ತು ಹಂಡೆಯಲ್ಲಿ ಹನಿ ನೀರೂ ಉಳಿಸದೆ ಹೊಯ್ದುಕೊಂಡು ಬರೋ ಭಾಗ್ಯ. ಸಂಜೆ ಕಾಲಿಡುವ ಮುನ್ನ ಹುಣಸೇಹಣ್ಣು, ಉಮ್ಮಿಕರಿಯ ಬೂದಿ ಚಿಟಿಕೆ ಉಪ್ಪು ಸೇರಿಸಿ ಹಂಡೆಯನ್ನು ಉಜ್ಜಿ ತೊಳೆಯುವುದೇ ಒಂದು ದೊಡ್ಡ ಕೆಲಸ. ಅದು ಫಳಫಳಿಸುವುದು ಮುಖದಲ್ಲಿ ಪ್ರತಿಫಲಿಸಿದಾಗಲೇ ಆ ಕೆಲಸಕ್ಕೆ ವಿರಾಮ.
ಅದಾದ ಮೇಲೆ ಅರಿಸಿನ, ಕುಂಕುಮ, ಅಕ್ಷತೆ, ಹೂ ಎಲ್ಲಾ ತೆಗೆದುಕೊಂಡು ಹೋಗಿ ಗಂಗೆ ಪೂಜೆಮಾಡಿದ ಮೇಲೆಯೇ ನೀರು ಸೇದಬೇಕು. ತಂದು ಹಂಡೆಯನ್ನು ತುಂಬಿಸಬೇಕು. ಒಮ್ಮೆ ತುಂಬಿಸಿದ ಮೇಲೆ ಹಂಡೆಯನ್ನು ಸಿಂಗರಿಸುವ ಸಡಗರ. ಇದ್ದ ಸ್ವಲ್ಪದರಲ್ಲೇ ಹೇಗೆ ಸಂಭ್ರಮಿಸಬೇಕು ಅನ್ನೋದು ನಮ್ಮ ಹಿರಿಯರನ್ನು ನೋಡಿ ಕಲಿಯಬೇಕು. ಕೆಮ್ಮಣ್ಣು, ಜೇಡಿಮಣ್ಣು ತಂದು ಅದನ್ನು ಸಾಣಿಸಿ ನುಣುಪಿನ ಪುಡಿಗೆ ಇಷ್ಟಿಷ್ಟೇ ನೀರು ಹಾಕಿ ಕಲೆಸಿ ಅದನ್ನು ಕೈಯಿಂದ ಅದ್ದಿ ಹಂಡೆಗೆ ಬಳಿದರೆ ಅದಕ್ಕೂ ನವವಧುವಿನ ಕಳೆ.
ವಧುವೆಂದ ಮೇಲೆ ಹಾರವಿಲ್ಲದಿದ್ದರೆ ಹೇಗೆ. ಅದಕ್ಕಾಗಿಯೇ ಮೊದಲೇ ಹುಡುಕಿ ಅದಕ್ಕೆಂದೇ ಕಾಯ್ದಿಟ್ಟ ಹಿಂಡಲಕಾಯಿಯ ಬಳ್ಳಿ ಕಿತ್ತು ತರಬೇಕು. ಎಳೆಯ ಸೌತೆಕಾಯಿಯ ತರಹ ಇರುವ ಇದರ ಕಾಯಿ ಹಾಗಲಕ್ಕಿಂತಲೂ ಕಹಿ. ಇದರ ಎಳೆಯ ಕಾಯಿಯನ್ನು ಸೌತೆಕಾಯಿಯೆಂದು ಯಾರಿಗಾದರೂ ತಿನ್ನಲು ಕೊಟ್ಟು ಫೂಲ್ ಮಾಡುವುದು ನಮ್ಮ ಮಾಮೂಲು ಕೆಲಸಗಳಲ್ಲಿ ಒಂದು. ಹದವಾಗಿ ಬೆಳೆದ ತುಂಬು ಕಾಯಿಗಳಿರುವ ಬಳ್ಳಿಯನ್ನು ಆಯ್ದು ತಂದು ಅದನ್ನು ಹಂಡೆಯ ಕೊರಳಿಗೆ ಕಟ್ಟಿದರೆ ಅಲ್ಲಿಗೆ ಅಲಂಕಾರ ಸಂಪೂರ್ಣವಾಗಿ ಮುಹೂರ್ತಕ್ಕಾಗಿ ಕಾಯುತ್ತಿರುವ ನವವಧುವಿನಂತೆ ಕಾಣುತಿತ್ತು.
ಇಷ್ಟೆಲ್ಲಾ ಅಲಂಕಾರವಾದ ಮೇಲೆ ಅದಕ್ಕೆ ದೃಷ್ಟಿಯಾಗಬಾರದೆಂದು  ಅದರ ಎದುರಿಗೆ ಸಗಣಿಯ ಮುದ್ದೆಯೊಂದನ್ನು ಇಟ್ಟು ಅದಕ್ಕೆ ನಾಲ್ಕೈದು ಗರಿಕೆಯನ್ನು ಸಿಕ್ಕಿಸಿ ಇಟ್ಟರೆ ಕೆರಕನನ್ನು ಪ್ರತಿಷ್ಟಾಪಿಸಿದಂತೆ. ಆಮೇಲೆ ಯಾರನ್ನಾದರೂ ಮಾತಾಡಿಸಿ ಅವರು ಆ ಅಂದ್ರೆ ಸಾಕು ಕೆರಕ ಅನ್ನುತಿದ್ದೆವು. ಯಾರು ಜಾಸ್ತಿ ಕೆರಕ ಕೊಟ್ಟಿದ್ದು ಅನ್ನೋ ಅಘೋಷಿತ ಪಂದ್ಯವೂ ಇದ್ದು ಗೆಲ್ಲಬೇಕೆಂಬ ಛಲವೂ, ಅದಕ್ಕಾಗಿ ನಾನಾ ಪರಿಪಾಟಲು ಪಟ್ಟು ಕೆಲವೊಮ್ಮೆ ದೊಡ್ಡವರಿಗೆ ಕೆರಕ ಕೊಟ್ಟು ಬೈಸಿಕೊಳ್ಳುವುದೂ ತೀರಾ ಸಾಮಾನ್ಯ.
ಅಷ್ಟಾದ ಮೇಲೆ ಅದನ್ನು ಮುಟ್ಟುವ ಹಾಗಿಲ್ಲ, ನೀರು ತೆಗೆಯುವ ಹಾಗಿಲ್ಲ. ಸರ್ವಾಲಂಕಾರ ಭೂಷಿತೆಯಾಗಿ ಸಿಂಗಾರಗೊಂಡ ಅಂದು ಎಷ್ಟೇ tempt ಮಾಡಿದರೂ ನಾವು ಮಾತ್ರ ಸರ್ವಸಂಗ ಪರಿತ್ಯಾಗಿಗಳಂತೆ ಪಕ್ಕದಲ್ಲಿದ್ದ ಬಕೆಟ್ ನಲ್ಲಿದ್ದ ನೀರನ್ನೇ ಉಪಯೋಗಿಸಿ ದಿವ್ಯ ನಿರ್ಲಕ್ಷ್ಯ ನಟಿಸುತ್ತಿದ್ದೆವು. ಅಭ್ಯಾಸಬಲದಂತೆ ಕೈ ಹಂಡೆಯ ಮುಚ್ಚಳ ಮುಟ್ಟುತಿದ್ದಂತೆ ನೆನಪಾಗಿ ಬೆಂಕಿ ಸೋಕಿದಂತೆ ಆಗಿ ಕೈ ಅಷ್ಟೇ ವೇಗದಲ್ಲಿ ಹಿಂದಕ್ಕೆ ಬರುತಿತ್ತು.
ರಾತ್ರಿ ಮಲಗುವ ಮುನ್ನ ಅಜ್ಜಿ ಹರಳೆಣ್ಣೆ, ಸೀಗೆಪುಡಿ ಎಲ್ಲವನ್ನೂ ಜೋಡಿಸಿಟ್ಟು, ಸ್ವಲ್ಪ ಗರಿಕೆಯನ್ನು ಬಟ್ಟಲಲ್ಲಿ ಎಣ್ಣೆಯನ್ನು ದೇವರ ಮುಂದಿಟ್ಟು ಮಲಗಲು ಹೊರಟರೆ ನಾವೋ ಬೆಳಗಾಗುವುದನ್ನೇ ಕಾಯುತ್ತಾ ಹಾಸಿಗೆಯ ಕಡೆ ಹೊರಡುತಿದ್ದೆವು. ಇಷ್ಟರ ಮಧ್ಯೆ ಹಂಡೆಯ ಕಡೆ ಕಣ್ಣು ಹಾಯಿಸುವುದನ್ನ ಮಾತ್ರ ಮರೆಯುತ್ತಿರಲಿಲ್ಲ. ಉಪಯೋಗಿಸುವ ಪ್ರತಿ ಸಣ್ಣ ವಸ್ತುವಿಗೂ ನಮ್ಮ ಹಿರಿಯರು ಕೊಟ್ಟ ಸ್ಥಾನ, ಅದಕ್ಕೊಂದು ಆಚರಣೆ, ಆ ಆಚರಣೆಯ ಮೂಲಕ ಸಂಭ್ರಮ ಪಡಲು ಒಂದು ಕಾರಣ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಅದನ್ನು ಸ್ವಾಗತಿಸುವ ರೀತಿ ಮಾತ್ರ ಅಪೂರ್ವ.
ಬಚ್ಚಲು ಮನೆಯಂತಾಗಿದ್ದ ಬೆಂಗಳೂರು ಸುಧಾರಿಸಿಕೊಳ್ಳುತ್ತಿದೆ, ಬಾತ್ರೂಮ್ ನ ಮೇಲೆ ನಿಂತ ಗೀಸರ್ ಅಣಕಿಸುವ ಹಾಗನ್ನಿಸುತ್ತಿದೆ. ಮನಸ್ಸು ಮಾತ್ರ ಹಿಂಡಲಕಾಯಿಯನ್ನು ತಿಂದ ಹಾಗಿದೆ. ಗಂಗಾ ಪೂಜೆಗೆ ನಲ್ಲಿಯೇ ಗತಿಯಾಗಿದೆ.ಪ್ರಕೃತಿಯಿಂದ ದೂರ ಸರಿದಷ್ಟೂ ಬದುಕು ರಸಹೀನ ಆಗುತ್ತಿರುವುದು ಮಾತ್ರ ಸತ್ಯ.ಬ್ಯಾಗ್ ನಲ್ಲ್ಲಿ ಊರಿಂದ ತಂದ ಸೀಗೆಪುಡಿ ಮಾತ್ರ ಯಾಕೋ ಘಾಟು ಅನ್ನಿಸುತ್ತಿಲ್ಲ.
ಗಂಗೆ ಮೈ ಮನಸ್ಸಿನ ಕೊಳೆ ತೊಳೆಯಲಿ... ಬದುಕು ಶುಭ್ರವಾಗಿ ಹೊಳೆಯಲಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...