ಕೃಷ್ಣ

ಹೊಟ್ಟೆಯೊಳಗೆ ಜೀವವೊಂದು ಪಡಿಮೂಡುವ ಹೊತ್ತಿನಲ್ಲಿ ಭಾಗವತ ಓದು ಅನ್ನುವ ಸಲಹೆಯೊಂದು ಬಂದೇ ಬರುತ್ತದೆ. ತಾಯಿಯ ಉಸಿರನ್ನೇ ಉಸಿರಾಗಿಸಿಕೊಂಡು, ತಿಂದಿದ್ದನ್ನೇ ರಸವಾಗಿಸಿಕೊಂಡು, ಅವಳ ರಕ್ತ ಮಾಂಸಗಳನ್ನೇ ಹಂಚಿಕೊಂಡು ಒಳಗೆ ಬೆಳೆಯುವ ಮಗು ಅವಳ ಭಾವವನ್ನೂ ಜೀರ್ಣಿಸಿಕೊಳ್ಳುತ್ತದೆ. ಆಹಾರವೆಂದರೆ ಕೇವಲ ತಿಂದಿದ್ದು ಮಾತ್ರವಲ್ಲ, ಬೆಳವಣಿಗೆಯಾಗೋದು ಕೇವಲ ಆ ಆಹಾರದಿಂದ ಮಾತ್ರವಲ್ಲ, ಪಂಚೇಂದ್ರಿಯಗಳು ಸಂಗ್ರಹಿಸುವ ಪ್ರತಿಯೊಂದೂ ಆಹಾರವೇ. ಹಾಗಾಗಿ ನೋಡಿದ್ದು, ಕೇಳಿದ್ದು, ಸ್ಪರ್ಶಿಸಿದ್ದು, ಗ್ರಹಿಸಿದ್ದು, ಘ್ರಾಣಿಸಿದ್ದು ಎಲ್ಲವೂ ಆಹಾರವೇ ಹಾಗೂ ಅವೆಲ್ಲವೂ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತ್ತದೆ. ಹಾಗಾಗಿಯೇ ಸೃಷ್ಟಿಗೊಳ್ಳುವ ಜೀವದ ಬಗ್ಗೆ ಕಾಳಜಿ, ಆ ಕಾಲದಲ್ಲಿ ಎಚ್ಚರ ಎಲ್ಲವೂ ಅಗತ್ಯ ಅನಿವಾರ್ಯ. ತಾಯಿಯ ಒಡಲು ಕೇವಲ ಸುರಕ್ಷತೆ ಮಾತ್ರವಲ್ಲ ಸಂಸ್ಕಾರವನ್ನೂ ಕೊಡಬೇಕು.

ಒಳಗಿನ ಗೂಡುಕಟ್ಟುವ ಸಮಯದಲ್ಲಿ ಅಮ್ಮಾ ಭಾಗವತವನ್ನು ಒಂದೊಂದಾಗಿ ಜೋಡಿಸಿ ಇಡುತಿದ್ದಳು. ಪ್ರತಿ ತಾಯಿಯೂ ಬಯಸುವುದು ಕೃಷ್ಣನಂತಹ ಮಗುವನ್ನ. ಯಶೋದೆ ಕೇವಲ ಒಂದು ಜೀವವಲ್ಲ ಅವಳು ಪ್ರತಿ ಹೆಣ್ಣಿನ ಕನಸು. ಗರ್ಭದೊಳಗೆ ಕುಳಿತ ಕೃಷ್ಣನ ಕತೆಯನ್ನು ಕೇಳದೆ ಹೊರಬರುವ ಯಾವ ಮಗುವೂ ಇಲ್ಲವೇನೋ ಅನ್ನುವಷ್ಟು ಕೃಷ್ಣ ಜೀವಂತ, ಜೀವ ತುಂಬುವಂತವನು. ಹೊಟ್ಟೆಯನ್ನು ನೇವರಿಸಿದಷ್ಟೇ ಮೃದುವಾಗಿ ಭಾಗವತವನ್ನು ನೇವರಿಸಿ ಮಡಿಲಲ್ಲಿ ಎತ್ತಿಕೊಂಡು ಪುಟ ತಿರುಗಿಸಿದವಳಿಗೆ ಕೃಷ್ಣನಂತ ಮಗ ಹುಟ್ತಾನೆ ದಿನಾ ಓದು ಅನ್ನುವ ಅಮ್ಮನ ಮಾತು ದಿಗಿಲು ಹುಟ್ಟಿಸಿತ್ತು. ಹೆಣ್ಣು ಮಗುವೆ ಬೇಕು ಅನ್ನೋ ನಿರೀಕ್ಷೆ, ಕನಸು ಗರಿಗೆದರುವ ಹೊತ್ತಿನಲ್ಲಿ ಗಂಡು ಮಗು ಅನ್ನೋ ದನಿ ಬೆಚ್ಚಿ ಬೀಳಿಸುತಿತ್ತು. ಅಷ್ಟೇ ಮೃದುವಾಗಿ ಅದನ್ನು ಸ್ವಸ್ಥಾನದಲ್ಲಿರಿಸಿ ಓದೋಲ್ಲ ಕಣೋ ಕೃಷ್ಣಾ ಅಂತ ಪಿಸುಗುಟ್ಟಿದ್ದೆ.

ಆದರೆ ಕೃಷ್ಣನ ಮೋಹವನ್ನು ಧಿಕ್ಕರಿಸಿ ಯಾವ ತಾಯಿ ಬದುಕಬಲ್ಲಳು. ಪಾಪ ದೇವಕಿ, ಅನ್ನದ ಯಾವ ತಾಯಿ ಇದ್ದಾಳು. ಅವನ ವ್ಯಾಮೋಹದಿಂದ ಕಳಚಿಕೊಳ್ಳುವುದು ಅಷ್ಟು ಸುಲಭವೇ. ಅವನು ಕಾಡತೊಡಗಿದ್ದ.  ಕೃಷ್ಣಾ... ಮಗು ಹೆಣ್ಣಾಗಲಿ ಅದು ನಿನ್ನ ತರಹವೇ ತುಂಟು ಮಗುವಾಗಲಿ, ನಿನ್ನಂತ ಪ್ರೀತಿಯ ಒರತೆಯಾಗಲಿ ಎಂದು  ಕೃಷ್ಣನ  ಹುಟ್ಟುವುದರಿಂದ ಹಿಡಿದು ಮಥುರೆಗೆ ಬರುವವರೆಗಿನ ಸಿ.ಡಿ ಯನ್ನು ತಂದಿಟ್ಟುಕೊಂಡು ಪ್ರತಿದಿನ ಅದನ್ನು ನೋಡಿ ಯಮುನೆಯಲ್ಲಿ ಮೀಯುತ್ತಿದ್ದೆ, ತೊಯ್ಯುತಿದ್ದೆ. ಅವನ ಲೀಲೆಗಳಿಗೆ ಇಲ್ಲಿ ಹುಸಿಕೋಪ, ಪ್ರೀತಿ ಮುದ್ದು ಉಕ್ಕುತ್ತಿದ್ದರೆ ಒಳಗಿನ ಜೀವ ಅದಕ್ಕೆ ತಕ್ಕಂತೆ ಮಿಸುಕಾಡಿ ಕುಣಿಯುತಿತ್ತು. ಅಮ್ಮನ ಕೋಪ ಪ್ರಕಟವಾದಾಗಲೆಲ್ಲಾ ಒದ್ದು ಅಣಕಿಸುತಿತ್ತು. ಮಮತೆ ಉಕ್ಕಿ ಹರಿಯುವಾಗ ಕುಣಿಯುತಿತ್ತು. ಗೋಕುಲ ತೊರೆದು ಹೋಗುವಾಗ ಕಣ್ಣಿರಾದರೆ ಇದು ಮುಲುಕಾಡಿ ತನ್ನ ದುಃಖ ಪ್ರಕಟಿಸುತ್ತಿತ್ತು. ಕೃಷ್ಣ ಎಲ್ಲಿದ್ದಾನೆ ಹೊರಗಾ ಒಳಗಾ  ಅನ್ನುವ ಗೊಂದಲ ಮೂಡುವ ಹಾಗೆ ಆಗುತಿತ್ತು. ಹುಟ್ಟುವ ಪ್ರತಿ ಜೀವಿಯಲ್ಲೂ ಕೃಷ್ಣ ಇರುತ್ತಾನಾ... ಇಲ್ಲಾ ಎಂದು ಯಾವ ಅಮ್ಮ ತಾನೇ ಹೇಳಬಲ್ಲಳು. ಎಲ್ಲರೂ ದೇವಕಿಯರೇ ಗರ್ಭ ಹೊತ್ತಾಗ.

ಮಹಾಭಾರತದ ಯುದ್ದ ಬಹುತೇಕ ಮುಗಿದು ಕೌರವ ಸೈನ್ಯವೆಲ್ಲಾ ನಾಶವಾಗಿ ಹೋಗಿರುತ್ತದೆ. ಆ ಸಮಯದಲ್ಲಿ ಕ್ರೋಧದಿಂದ ಕುರುಡಾದ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ಉತ್ತರೆಯ ಗರ್ಭದ ಮೇಲೆ ಬಿಡುತ್ತಾನೆ. ಕಂಗಾಲಾದ ಉತ್ತರೆ ರಕ್ಷಣೆಗಾಗಿ ಓಡುತ್ತಾಳೆ, ಹಾಗೆ ಓಡುವುದಾದರೂ ಎಲ್ಲಿಗೆ,  ಕೃಷ್ಣನ ಬಳಿಗೆ. ಅವನೊಬ್ಬನೇ ರಕ್ಷಕ ಅನ್ನುವ ನಂಬಿಕೆಯಲ್ಲಿ. ಜಗತ್ತಿನ ಎಲ್ಲಾ ಅಮ್ಮಂದಿರಂತೆ ನನಗೇನಾದರೂ ಆಗಲಿ ಮಗು ಉಳಿಯಲಿ ಕಾಪಾಡು   ಕೃಷ್ಣಾ ಅಂತ ಮೊರೆಯಿಡುತ್ತಾಳೆ. ತಾಯಿ ಒಡಲೇ ಸುರಕ್ಷಿತವಲ್ಲ ಅಂತ ಮಗು ಭಾವಿಸಬಾರದು ಕೃಷ್ಣ ಸುದರ್ಶನ ಹಿಡಿಯುತ್ತಾನೆ. ಬ್ರಹ್ಮಾಸ್ತ್ತವನ್ನು ಉಪಸಂಹಾರ ಮಾಡಿ ತಾಯಿ ಮಗು ಇಬ್ಬರನ್ನೂ ರಕ್ಷಿಸುತ್ತಾನೆ. ಹಾಗೆ ರಕ್ಷಿಸುವ ಸಮಯದಲ್ಲಿ ಮಗುವಿಗೆ ಅಂಗುಷ್ಠ ಪ್ರಮಾಣದ ಪುರುಷನಾಗಿ ಕಾಣಿಸುತ್ತಾನೆ. ಅದು ಇನ್ನೂ ಹುಟ್ಟದ ಮಗುವಿಗೆ ಹತ್ತಿದ ಗುರುತು. ಜನ್ಮಾಂತರಗಳಲ್ಲೂ ಮರೆಯದ ಗುರುತು. ಅಂಗುಷ್ಠ ಎಂದರೆ ಹೆಬ್ಬೆರಳು. ಮಕ್ಕಳು ಹುಟ್ಟಿದ ಮೇಲೆ ಬೆರಳು ಚೀಪುವುದು ಇದಕ್ಕೇ ಏನು? ಲಕ್ಷೀಶ  ತೋಳ್ಪಾಡಿಯವರ ಈ ಸಾಲುಗಳನ್ನು ಓದುತ್ತಿದ್ದರೆ ಯಾವ ತಾಯಿಯ ಗರ್ಭ ಬೀಗುವುದಿಲ್ಲ. ಧನ್ಯತೆಯಿಂದ ಬಾಗುವುದಿಲ್ಲ. ಕಣ್ಣೆದೆರು ಆಲದೆಲೆಯ ಮೇಲೆ ಪವಡಿಸಿದ ಕೃಷ್ಣ ಬಾರದೇ ಇರುವುದಿಲ್ಲ...

ಕೈ ಕಾಲು ಆಡಿಸಲು ಶುರುಮಾಡಿದ ಕೂಡಲೇ ಅಹಿ ಮಾಡಿದ ಮೊದಲ ಕೆಲಸ ಬಲಗಾಲು ಎತ್ತಿ ಕಾಲಿನ ಅಂಗುಷ್ಠವನ್ನು ಬಾಯೊಳಗೆ ಇಟ್ಟು ಚೀಪುವುದು.   ಕ್ಷೀರ ಸಾಗರದಲ್ಲಿ ಆಲದೆಲೆಯ ಮೇಲೆ ಮಲಗಿ ಮಾತೃತ್ವ ಹರಿಯುವ ಹಾಗೆ ಮಾಡಿದ ಕೃಷ್ಣ  ನೆನಪಾಗಿ ತಟ್ಟನೆ ಬಾಚಿ ಮುದ್ದಿಸಿದ್ದೆ. ಅಂಗುಷ್ಟದ ಮಹಿಮೆ ಕಣ್ಣೆದೆರು ಬಂದು ಕೆನ್ನೆ ಒದ್ದೆಯಾಗಿತ್ತು. ಅಲ್ಲೂ ಕಾಣಿಸಿದ್ದು, ನೆನಪಾಗಿದ್ದು ಕೃಷ್ಣನೇ.. ಎಲ್ಲಾ ತಾಯಂದಿರಿಗೂ ಮಕ್ಕಳಲ್ಲಿ ಅವನೇ ಕಾಣುವುದು ಯಾಕೆ? ಮಗು ಎಂದ ಕೂಡಲೇ ಕೃಷ್ಣನಂತಿರ ಬೇಕು, ಕೃಷ್ಣನೇ ಬೇಕು ಅನ್ನಿಸುವುದು ಯಾಕೆ... ಅವನು ಅರ್ಥವಾದಷ್ಟೂ ತೆರೆದುಕೊಳ್ಳುತ್ತಾ ಹೋದರೂ ಮತ್ತಷ್ಟು ನಿಗೂಢ ಅನ್ನಿಸುವುದು ಯಾಕೆ? ಎಲ್ಲವೂ ಪ್ರಶ್ನೆಗಳೇ  ಕೃಷ್ಣನೇ ಉತ್ತರ. ಪರಿಪೂರ್ಣ ಅವತಾರ ಅನ್ನೋದೂ ಇದಕ್ಕೆ ಏನೋ...

 ಎಲ್ಲವೂ ಒಂದು ಸೂತ್ರದ ಮೂಲಕ ನಡೆಯುತ್ತದೆ ನಾನು ನಿಮಿತ್ತ ಮಾತ್ರ ಅನ್ನುವ ಭಾವ ಇನ್ನಷ್ಟು ಗಟ್ಟಿಯಾದ ಕ್ಷಣ. ತಾಯ ಒಡಲಲ್ಲೂ ಮಗುವನ್ನು ಪೊರೆಯುವವನು ಬೇರೊಬ್ಬನಿದ್ದಾನೆ, ಅವನು ಮಗುವಿನ ಜೊತೆಗೆ ಇದ್ದಾನೆ ಅದೂ ಅವನೆಂಥಾ ಜೊತೆಗಾರ! ಹೊಕ್ಕುಳ ಬಳ್ಳಿಯೂ ತುಂಡಾಗುತ್ತದೆ, ಈ ಜೊತೆಗಾರಿಕೆ ತುಂಡಾಗುವುದಿಲ್ಲ ಅನ್ನುವ ಸಾಲುಗಳು ಕೊಡುವ ಶಕ್ತಿ ತುಂಬುವ ನೆಮ್ಮದಿ ವರ್ಣಿಸಲು ಅಸಾಧ್ಯ. ಅದೆಷ್ಟು ನಿಜ ಒಡಲೊಳಗೆ ಬೆಳೆದ, ರಕ್ತ ಮಾಂಸ ಅಷ್ಟೇಕೆ ಎಲ್ಲವನ್ನೂ ಹಂಚಿಕೊಂಡು ಕರುಳು ಬಳ್ಳಿಯೊಂದಿಗೆ ಬೆಸೆದ ಮಗುವೂ ಬೇರಾಗಬೇಕು.. ಅಲ್ಲಿಂದ ಅದು ಸ್ವತಂತ್ರ ಜೀವಿ, ಏನೇ ಜೊತೆಗಿದ್ದರೂ ಅದರ ನೋವು, ನಲಿವು ಅದೇ ಅನುಭವಿಸಬೇಕು. ಹಂಚಿಕೊಳ್ಳಲಾರೆವು. ಅಂತ ತಾಯಿಯೇ ಬೇರೆ ಆದಾಗಲೂ ಜೊತೆಗೆ ಬರುವುದು ಯಾರು ಈ ಕೃಷ್ಣನೇ.. ಅದೃಶ್ಯ ಜೊತೆಗಾರ... ಜೊತೆಗಾರ ಹೇಗಿರಬೇಕು ಅನ್ನೋದು ಕಲಿಸುತ್ತಾನಾ....

ಇಂಥಾ ಕೃಷ್ಣನ ಬಾಲ್ಯವಾದರೂ ಹೇಗಿತ್ತು. ದೇವಾಧಿದೇವ, ಅರಸು ಮನೆತನ ಆದರೆ ಹುಟ್ಟಿದ್ದು  ಸೆರೆಮನೆಯಲ್ಲಿ , ಸುತ್ತಲು ಒಂದು ಬೆಚ್ಚಗಿನ ಬಟ್ಟೆಯೂ ಇಲ್ಲದ ಜಾಗದಲ್ಲಿ. ಅಪಾಯವನ್ನೇ ಸುತ್ತಿಕೊಂಡು ಬಂದವನಿಗೆ ಉಳಿದರ ಹಂಗ್ಯಾಕೆ .... ಹುಟ್ಟಿದ ಕೂಡಲೇ ತಾಯಿಯಿಂದ ಬೇರಾಗ ಬೇಕಾದ ಸ್ಥಿತಿ. ಸುರಿವ ಮಳೆಯಲ್ಲಿ ಅಲ್ಲಿಂದ ಪಾರಾಗಿ ಗೋಕುಲ ಸೇರಿ ಗೊಲ್ಲ ಬಾಲನಾಗಿ ಬೆಳೆಯಬೇಕಾಯಿತು. ಇಲ್ಲಿಂದ ಅಲ್ಲಿಗೆ ಹೋದರೂ ಸಂಕಷ್ಟಗಳು ಮುಗಿದವಾ ಉಹೂ ಮತ್ತಷ್ಟು ಹೆಚ್ಚೇ ಆಯಿತೇನೋ ಅನ್ನುವಷ್ಟು ಎದುರಾದವು. ಮೊದಲಿಗೆ ಬಂದಿದ್ದೇ ಪೂತನಿ. ಸುಂದರ ಯುವತಿಯ ರೂಪ ಹೊತ್ತ ರಾಕ್ಷಸಿ. ಒಳಗಿನ ಕುರೂಪ ಕಾಣಿಸುವುದಿಲ್ಲ ಅದು ಕೇವಲ ಅನುಭವಕ್ಕೆ ಮಾತ್ರ ನಿಲುಕುವುದು. ಎಲ್ಲರೂ ಎತ್ತಿ ಮುದ್ದಾಡುತ್ತಿದ್ದ, ತನಗೆ ಇಂತ ಮಗು ಇರಬಾರದೇ ಎಂದು ಹಂಬಲಿಸುತಿದ್ದ ಅಷ್ಟು ಸುಂದರ ಕೂಸನ್ನ ಕೊಲ್ಲಲು ಬರುವ ಅವಳೊಳಗೆ ಅದೆಂಥಾ ರಾಕ್ಷಸತ್ವ ...

ಪ್ರತಿ ಹೆಣ್ಣಿನಲ್ಲೂ ಹುಟ್ಟುವಾಗಲೇ ಮಾತೃತ್ವ ಜೊತೆಯಾಗುತ್ತದಂತೆ. ಅಂಥಾ ಹೆಣ್ಣು ರಾಕ್ಷಸಿಯಾಗುವುದು ಹೇಗೆ? ಹಾಲು ಕುಡಿಸುವ ನೆಪದಲ್ಲಿ ವಿಷ ಉಣಿಸಲು ಯತ್ನಿಸಿದರೂ ಕೃಷ್ಣ ಹಾಲನ್ನು ಕುಡಿದೇ ಕುಡಿದ. ಕೇವಲ ಹಾಲನ್ನು ಕುಡಿದನಾ ಉಹೂ ಅವಳ ರಾಕ್ಷಸತ್ವವನ್ನೇ ಹೀರಿದ. ತಣಿದಳು ಪೂತನಿ.  ದಣಿಯಲಿಲ್ಲ. ಇನ್ನಷ್ಟು ಎದೆಗೊತ್ತಿಕೊಂಡಳು. ಜೀವ ರಸವನ್ನೇ ಹೀರಿ ಮುಕ್ತಗೊಳಿಸೋ ಎಂದು ಕೇಳಿಕೊಂಡಳು. ನಮ್ಮ ಕಣ್ಣಿಗೆ ಜೀವವನ್ನು ಕಳೆದುಕೊಂಡ ಹಾಗೆ ಕಾಣಿಸಿದಳು. ವಾಸ್ತವದಲ್ಲಿ ಪಾಪವನ್ನು ಕಳೆದುಕೊಂಡಳು, ರಾಕ್ಷಸತ್ವವನ್ನು ಕಳೆದುಕೊಂಡಳು. ಪೂತನಿ ಪುನೀತಳಾದಳು, ತಾಯಿಯಾದಳು.  ತನ್ನಡೆಗೆ ಬಂದವರು ಯಾರನ್ನೂ ಕೃಷ್ಣ ಬರಿಗೈಯಲ್ಲಿ ವಾಪಾಸು ಕಳಿಸಲೇ ಇಲ್ಲ. ಅವರು ಯಾರೇ ಆದರೂ. ಕೊಲ್ಲಲು ಬಂದವರನ್ನೂ ಕಾಪಾಡುವವನು ದೇವರಲ್ಲದೆ ಮತ್ತೇನು ಆದಾನು..

ಕೃಷ್ಣ ಕಳ್ಳ ಎನ್ನುವುದು ದೊಡ್ಡ ಆರೋಪ. ಅವನು ಕದಿಯುತ್ತಿದ್ದಾದರೂ ಏನು ಬೆಣ್ಣೆಯನ್ನು. ಮೊಸರನ್ನು ಕಡೆದು ಮಥಿಸಿ ಹದವಾಗಿ ಮೇಲಕ್ಕೆ ತೇಲಿ ಬರುತಿದ್ದ ಬೆಣ್ಣೆ ಯಾರಿಗೆ ತಾನೇ ಕದಿಯುವ ಆಸೆ ಹುಟ್ಟಿಸುವುದಿಲ್ಲ. ಹಾಗಾದರೆ ಅಲ್ಲಿ ಕಡೆಯುತ್ತಿದ್ದದ್ದು ಬರೀ ಮೊಸರಾ ಉಹೂ ಹುದುಗಿದ್ದ ಭಾವಗಳು, ಗಟ್ಟಿಯಾದ ನೋವುಗಳು, ಹೆಣ್ಣು ಜೀವದ ಆಸೆಗಳು. ಅವೆಲ್ಲವನ್ನೂ ಕಡೆ ಕಡೆದು ಮನಸ್ಸು ಹಗುರವಾಗಿ ಬೆಣ್ಣೆ ತೇಲಿಬರುವಾಗ ನಿನ್ನೆಲ್ಲಾ ಭಾವಗಳನ್ನೂ ಸ್ವೀಕರಿಸಲು ನಾನಿದ್ದೇನೆ ಬಿಡು ಎಂದು ಬರುತ್ತಿದ್ದನಾ.. ಹಾಗಾಗಿ ಪ್ರತಿ ತಾಯಿಯೂ ಅವನು ಬರಲಿ ಎಂದು ಕಾಯುತ್ತಿದ್ದಳಾ.. . ಬೆಣ್ಣೆ ಬಂದಂತೆ ಮಾತೃತ್ವವೂ ತೇಲಿ ಬರುತಿತ್ತಾ... ಅದನ್ನು ಗಮನಿಸಿಯೇ ಓಡಿ ಬರುತಿದ್ದನಾ...  ಅಲ್ಲಿಗೆ ಕದ್ದದ್ದು ಏನನ್ನಾ.... ತಾಯಿಯಷ್ಟೇ ಉತ್ತರಿಸಬಹುದಾದ ಪ್ರಶ್ನೆ...

ಹಾಗಾಗಿ ಕೃಷ್ಣ ಪ್ರತಿ ಅಮ್ಮಂದಿರ ಕನಸು, ಅವರ ಬದುಕಿನ ಸಾರ್ಥಕತೆ. ಜೀವದ ಭಾಗ. ಉಸಿರಿನ ಮಿಡಿತ. ಅವನು ಅರ್ಥವಾದಷ್ಟೂ ನಿಗೂಢ. ಮಗನಾಗಿ, ಸ್ನೇಹಿತನಾಗಿ, ಪ್ರೇಮಿಯಾಗಿ, ಗುರುವಾಗಿ, ಅಣ್ಣನಾಗಿ ಹೀಗೆ ಯಾವ ಪಾತ್ರಗಳಿಗಾದರೂ ಸೂಕ್ತವಾಗಿ ಹೊಂದುವ ಜೀವ. ಪರಿಪೂರ್ಣ ವ್ಯಕ್ತಿತ್ವ. ಅವನು ಸುಲಭಕ್ಕೆ ಅರ್ಥವಾಗಲಾರ. ಕೃಷ್ಣನೆಂದರೆ ಪ್ರೀತಿ, ಪ್ರೀತಿಯೆಂದರೆ ಕೃಷ್ಣ. ಕೃಷ್ಣ ಅರ್ಥವಾದ ದಿನ ಜಗತ್ತೇ ಅರ್ಥವಾದಂತೆ. ಜಗತ್ತು ಅರ್ಥವಾದ ದಿನ ಬದುಕೂ ಅರ್ಥವಾದಂತೆ. ಪ್ರೀತಿಯ ಒರತೆಯೊಂದು ಹರಿದಂತೆ..



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...