ಇತಿಹಾಸ ಅನ್ನೋದು ಯಾವತ್ತೋ ಆಗಿಹೋದ ಘಟನೆ ಮಾತ್ರವಲ್ಲ ಮತ್ತದು ಅನುಕ್ಷಣ ಮರುಕಳಿಸುತ್ತಲೇ ಇರುತ್ತದೆ. ಯಾವುದೂ ಹೊಸತಲ್ಲ ಅನ್ನೋದನ್ನ ಪುನ ಪುನ ನೆನಪು ಮಾಡಿಸುತ್ತೆ. ಈ ನೆಲದಲ್ಲಿ ಅಧ್ಯಾತ್ಮ ಅದೆಷ್ಟು ಹಾಸು ಹೊಕ್ಕಾಗಿತ್ತು ಅನ್ನೋದನ್ನ ನೋಡಲು, ಅನುಭವಿಸಲು ಇತಿಹಾಸ ಸಹಾಯ ಮಾಡುತ್ತೆ.  ಅದರಲ್ಲೂ ತ.ರಾ.ಸು ಬರೆದ ಇತಿಹಾಸ ಓದುತ್ತಿದ್ದರೆ ಒಳಗಿನಿಂದ ಹೆಮ್ಮೆ ಅರಳುವುದರ ಜೊತೆಗೆ  ಬೆಳಕು ಮೂಡುತ್ತದೆ.

ಹೊಯ್ಸಳ ವಂಶದ ಬಿಟ್ಟಿದೇವ ವಿಷ್ಣುವರ್ಧನನಾಗುವ ಮುಂಚಿನ ಕತೆಯನ್ನು, ಸಿಡಿಲು ಬೆಳಕಾಗುವ ಮುನ್ನಿನ ಕತೆಯನ್ನು ಅದೆಷ್ಟು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ ಅಂದರೆ ಈ ನೆಲವನ್ನು ಆಳಿ ಹೋದವರ ಧೈರ್ಯ, ಆತ್ಮಾಭಿಮಾನ , ಕೆಚ್ಚು ಮನದೊಳಗೆ ತಾಕಲಾಡಿ ಅಲ್ಲೊಂದು ಆತ್ಮವಿಮರ್ಶೆಯ ಸಿಡಿಲು ಮೊರೆದು ಬೆಳಕಾಗುತ್ತದೆ. ಆ ಬೆಳಕು  ಬದುಕಿನ ದಾರಿ ನಿಚ್ಚಳವಾಗುವ ಹಾಗೆ ಮಾಡುತ್ತದೆ.

ಅದು ಕೇವಲ ಕತೆಯಾ, ಇತಿಹಾಸವಾ ಉಹೂ ಅಲ್ಲಾ ... ಪ್ರತಿ ಸಾಲುಗಳಲ್ಲೂ ಬದುಕಿನ ದರ್ಶನವಿದೆ. ಗೊಂದಲಗಳಿಗೆ ಉತ್ತರವಿದೆ, ಏನು ಮಾಡಬೇಕು, ಏನು ಮಾಡಬಾರದು ಅನ್ನೋದಕ್ಕೆ ನಿದರ್ಶನವಿದೆ, ಹೇಗೆ ನಡೆಯಬೇಕು ಅನ್ನುವುದಕ್ಕೆ ಮಾರ್ಗದರ್ಶನವಿದೆ. ವಿಷಾದಕ್ಕೆ ಮದ್ದಿದೆ, ಗರ್ವಕ್ಕೆ ಆಣೆಕಟ್ಟು ಇದೆ. ಬಾಗುವಿಕೆಗೆ ಫಲವಿದೆ. ಒಂದು ಘಟನೆ, ಒಬ್ಬರ ಅನುಭವ ಹಲವರ ಭಾವವಾಗುವುದಕ್ಕೆ, ಅನುಭೂತಿಯಾಗುವುದಕ್ಕೆ ಸಾಧ್ಯವೇ ಅನ್ನೋ ಗೊಂದಲಕ್ಕೆ ತೆರೆಯಿದೆ. ಎಲ್ಲವೂ ಇಲ್ಲಿಂದಲೇ, ಮತ್ತಿಲ್ಲಿಗೆ ಕೊನೆಯಾಗುವುದಕ್ಕೆ ಅನ್ನೋ ಸತ್ಯದ ದರುಶನವಿದೆ.

ಚಕ್ರವರ್ತಿಯ ಅಜ್ಞಾನುಸಾರ ಬಳ್ಳಿಗಾಮೆಗೆ ಹೊರಡುವ ಹೊಯ್ಸಳ ಕುಟುಂಬ, ಚಕ್ರವರ್ತಿಗಾಗಿ ತನ್ನ ತನು ಮನ ಧನವನ್ನು ಅರ್ಪಿಸಿ ಅದಕ್ಕಾಗಿಯೇ ಈ ಜನ್ಮ ಎಂದು ಭಾವಿಸಿ ಹಾಗೆಯೇ ಬದುಕುವ ಕುಟುಂಬ ಯಾರದ್ದೋ ಅಸಹನೆಗೆ, ಅಸೂಯೆಗೆ, ಅಹಂ ಗೆ ಬಲಿಯಾಗಿ ಅವಮಾನ ಅನುಭವಿಸಿ ಆ ಅವಮಾನ ಮತ್ತೊಂದು ಚಾರಿತ್ರಿಕ ಘಟನೆಗೆ ಮುನ್ನುಡಿಯಾಗುತ್ತದೆ. ಸಿಡಿಲಿನ ಶಕ್ತಿಯನ್ನು ಲೋಕಕ್ಕೆ ಪರಿಚಯಿಸಿ ಇತಿಹಾಸಕ್ಕೆ ಬೆಳಕಾಗುತ್ತದೆ.

ಸಿಂಹಾಸನವೂ ಚಂಚಲ... ಸದಾ ಅದನ್ನ ಕಾಪಾಡಿಕೊಳ್ಳುವ ಎಚ್ಚರ, ಆತುರದಲ್ಲಿ ಕಣ್ಣಿಗೆ ಕತ್ತಲು ಕವಿಯುವುದು, ಆ ಕತ್ತಲಲ್ಲಿ ಎಡುವುದು ಸಹಜ. ಆ ಕತ್ತಲೆಯಲ್ಲಿ ದಾರಿ ತಪ್ಪಿಸುವ ಅನುಯಾಯಿಗಳೂ ಅನೇಕ. ಕತ್ತಲಲ್ಲಿ ಯಾರು ತಾನೇ ಸರಿ ದಾರಿ ತೋರಬಲ್ಲರು? ಕಣ್ಣಿದ್ದೂ ಕುರುಡರಾಗಿಸುವ ಶಕ್ತಿ ಕತ್ತಲೆಗೆ. ಅದಕ್ಕೆ ಅಂಧಕಾರ ಅನ್ನೋದಾ? ಹೀಗೆ ಕುರುಡಾದ ಚಾಲುಕ್ಯ ಚಕ್ರವರ್ತಿಗೆ ಬೆಳಕಾಗಿ ಕ್ಷಣ ಮಾತ್ರದಲ್ಲಿ ಕಂಡು ಆ ಬೆಳಕು ಕಣ್ಣು ಮಬ್ಬಾಗಿಸಿ ಸಿಡಿಲಾಗಿ ಕಾಡುವ ಬಿಟ್ಟಿದೇವ. ಬೆಳಕು ಮೂಡಲು  ಕತ್ತಲ ಗರ್ಭವೇ ಬೇಕಲ್ಲವೇ...

ತನ್ನೊಳಿಗಿನ ಬಿದಿರನ್ನೇ ಮಸೆದು ಉರಿಯಾದ ಬಿದಿರು ಮೆಳೆ, ತಾನು ದಹಿಸುವುದಲ್ಲದೇ ಕಾಡನ್ನೇ ನುಂಗುವ ಕಾಳ್ಗಿಚ್ಚು ಆಗುತ್ತದೆ. ಹಾಗಾಗಿ ಬೆಳಕು ಮೂಡಿದರೆ ಮಾತ್ರ ಸಾಲದು. ಆ ಬೆಳಕು ಬೆಳಕಾಗಿಯೇ ಇರಬೇಕು. ದಾರಿ ತೋರಬೇಕೇ ಹೊರತು ಸುಡುವ ಉರಿಯಾಗಬಾರದು. ಹಾಗೆ ಅದು ಉರಿಯಾಗದಂತೆ ಕಾಡ್ಗಿಚ್ಹಾಗದಂತೆ ಕಾಪಾಡುವುದು ಇತಿಹಾಸ. ಇತಿಹಾಸವೆಂದರೆ ಹಿಂದಿನವರ ಅನುಭವ. ಅಂದರೆ ಮುಂದಿನ ಬದುಕಿನ ಅಡಿಪಾಯ.

ಒಂದು ಕಾದಂಬರಿ ನನ್ನದಾಗುವುದು, ಒಂದು ಕತೆ ಬದುಕಿನ ಭಾಗವಾಗುವುದು ಹೀಗಾ....  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...