ಭಾರತವನ್ನು ಒಂದುಗೊಳಿಸುವ ನಿಟ್ಟಿನಲ್ಲಿ ಕುಸಿಯುತಿದ್ದ ಅಧ್ಯಾತ್ಮವನ್ನು ಮೇಲಕ್ಕೆ ಎತ್ತಿಹಿಡಿಯುವಲ್ಲಿ ಒಟ್ಟಿನಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಮಹತ್ಕಾರ್ಯದಲ್ಲಿ ಶಂಕರಾಚಾರ್ಯರ ಪಾತ್ರ ತುಂಬಾ ಮಹತ್ವದ್ದು. ಅವರ ಕೊಡುಗೆ ಬೆಲೆಕಟ್ಟಲಾಗದ್ದು. ಕಾಲಟಿಯಲ್ಲಿ ಹುಟ್ಟಿ ಬರಿಗಾಲಿನಲ್ಲಿ ದೇಶಾದ್ಯಂತ ಸಂಚರಿಸಿ ಹೋದಲೆಲ್ಲಾ ಭಾರತೀಯತೆಯನ್ನು ಪುನರುಜ್ಜೀವನಗೊಳಿಸುತ್ತಾ ಸಾಗಿದ ಅವರ ಸಾಧನೆ ಅದ್ವಿತೀಯ.

ಮೊಸಳೆಯ ಬಾಯಿಂದ ಬಿಡಿಸಿಕೊಂಡು ಸನ್ಯಾಸ ದೀಕ್ಷೆ ಪಡೆಯಲು ಸೂಕ್ತ ಗುರುವನ್ನು ಅರಸುತ್ತಾ ಅವರು ಬಂದಿದ್ದು ಮಧ್ಯಪ್ರದೇಶದ ನರ್ಮದಾ ನದಿಯ ತೀರಕ್ಕೆ.  ಓಂಕಾರೇಶ್ವರನ ದೇಗುಲದ ಸಮೀಪದ  ಗುಹೆಯೊಂದರಲ್ಲಿ ತಪೋನಿರತರಾಗಿದ್ದ ಗುರು ಗೋವಿಂದಪಾದರ ಹತ್ತಿರಕ್ಕೆ ಬರುವ ವೇಳೆಗೆ ನರ್ಮದೆಗೆ ಹುಚ್ಚು ಉನ್ಮಾದ. ಸೊಕ್ಕಿನಿಂದ ಉಕ್ಕಿ ಹರಿಯುತಿದ್ದ ನರ್ಮದೆಯ ಪ್ರವಾಹ ಎಲ್ಲಿ ಗುರುಗಳ ತಪಸ್ಸನ್ನು ಭಂಗ ಪಡಿಸುತ್ತದೋ ಎಂದು ವ್ಯಾಕುಲಗೊಂಡ  ಶಂಕರರು ಭಕ್ತಿಭಾವದಿಂದ ನರ್ಮದೆಯನ್ನು ಸ್ತುತಿಸತೊಡಗುತ್ತಾರೆ. ಅವರ ಭಕ್ತಿಗೆ, ಸರಸ್ವತಿಯೇ ಗಂಟಲಿನಲ್ಲಿ ಕುಳಿತು ಹಾಡುತಿದ್ದಾಳೇನೋ ಅನ್ನೋ ಭಾವಕ್ಕೆ ಮನಸೋತ ನರ್ಮದೆ ಬಾಲ ಶಂಕರರ  ಕಮಂಡಲುವಿನಲ್ಲಿ ಬಂಧಿಯಾಗುತ್ತಾಳೆ.


ಧ್ಯಾನ ಮುಗಿಸಿ ಕಣ್ಣು ಬಿಟ್ಟ ಗುರುವು ತನ್ನೆದೆರು ನಿಂತವನನ್ನು ಯಾರು ಎಂದು ಪ್ರಶ್ನಿಸುತ್ತಾರೆ. ನಾನು ಸಚ್ಚಿದಾನಂದ ಸ್ವರೂಪ ಎಂದು  ಉತ್ತರಿಸಿದವನ ಜ್ಞಾನಕ್ಕೆ, ಶಕ್ತಿಗೆ ಬೆರಗಾದ ಗುರು  ದೀಕ್ಷೆಯನ್ನು ನೀಡುತ್ತಾರೆ. ಆಗಲೇ ಬ್ರಹ್ಮಜ್ಞಾನ ಪಡೆದಿದ್ದ ಶಿಷ್ಯನ ಸಾಮರ್ಥ್ಯ ಗುರುವಿಗೆ ಗೊತ್ತಿದ್ದರೂ, ಶಂಕರರು ಸಮರ್ಥರಾಗಿದ್ದರೂ ಪ್ರತಿಯೊಬ್ಬ ಸಾಧಕನಿಗೂ ಗುರುವಿನ ಅಗತ್ಯ ಇದೆ ಅನ್ನೋದನ್ನ ನಿರೂಪಿಸುವುದಕ್ಕಾಗಿಯೇ ಈ ಘಟನೆ ನಡೆಯುತ್ತದೆ. ಹೀಗೆ ಶಂಕರರ ಬದುಕಿನಲ್ಲಿ ಓಂಕಾರನಾಥೆಶ್ವರ ದೇವಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.

ತನ್ನ ಹನ್ನೆರೆಡನೆಯ ವಯಸ್ಸಿನಲ್ಲಿ ನರ್ಮದೆಯ ದಡದಲ್ಲಿ ಹೀಗೆ ಬ್ರಹ್ಮಜ್ಞಾನ ಪಡೆದ ಶಂಕರರಿಗೆ ಅಧ್ವೈತಧರ್ಮವನ್ನು ಪ್ರಚಾರ ಮಾಡಲು ಭಾರತ ಪರಿಭ್ರಮಣ ಕೈಗೊಳ್ಳುವಂತೆ ಆದೇಶಿಸುತ್ತಾರೆ.ಹೀಗೆ ಜ್ಞಾನದ ದುಂಧುಭಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಮೊಳಗುತ್ತದೆ. ಇಡೀ ಭಾರತದ ಐಕ್ಯತೆ ಹೀಗೆ ಭದ್ರಗೊಳ್ಳುತ್ತದೆ. ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಮಠಗಳು ಈ ಕಾರ್ಯವನ್ನು ಮುಂದುವರಿಸಿಕೊಂಡು ಹಾಗುವ ಮಾಡುತ್ತಾರೆ ಶಂಕರರು.ಇದನ್ನೇ ಮಧ್ಯ ಪ್ರದೇಶದ ಮುಖ್ಯ ಮಂತ್ರಿಗಳು ತಮ್ಮ ಭಾಷಣವೊಂದರಲ್ಲಿ ತುಂಬಾ ಸುಂದರವಾಗಿ ವಿವರಿಸಿದ್ದಾರೆ. ರಾಮ ಉತ್ತರ ದಕ್ಷಿಣವನ್ನು ಜೋಡಿಸಿದರೆ, ಕೃಷ್ಣ ಪೂರ್ವ ಮತ್ತು ಪಶ್ಚಿಮವನ್ನು ಜೋಡಿಸಿದ ಆದರೆ ಶಂಕರಾಚಾರ್ಯರು ಮಾತ್ರ ಭಾರತದ ನಾಲ್ಕೂ ದಿಕ್ಕುಗಳನ್ನು ಜೋಡಿಸಿದ್ದಾರೆ.

ಹೀಗೆ ಇಡೀ ಭಾರತಾದ್ಯಂತ ಸಂಚರಿಸಿ ಎಲ್ಲಾ ವಿದ್ವಾಂಸರನ್ನು ಸೋಲಿಸಿ ಅಧ್ವೈತ ದ್ವಜವನ್ನು ಹಾರಿಸುತ್ತಾ ಬಂದ ಶಂಕರರು ನಂತರ ಉಜ್ಜಯಿನಿಗೆ ಬರುತ್ತಾರೆ. ಅಲ್ಲಿದ್ದ ಕಾಪಾಲಿಕರನ್ನು ವಾದದಲ್ಲಿ ಸೋಲಿಸಿ ಅಲ್ಲೂ ಅಧ್ವೈತ ಧ್ವಜ ಹಾರುವ ಹಾಗೆ ಮಾಡುತ್ತಾರೆ. ಮಂಡನಮಿಶ್ರರನ್ನೂ ಸೋಲಿಸಿ ಅಜೇಯರಾಗಿ ಉಳಿಯುತ್ತಾರೆ. ಭಾರತದ ಅಧ್ಯಾತ್ಮ ಶಕ್ತಿಯನ್ನು ಮತ್ತೆ ಪ್ರಜ್ವಲಿಸುವ ಹಾಗೆ ಮಾಡುತ್ತಾರೆ. ಮಧ್ಯ ಪ್ರದೇಶದ ಓಂಕಾರನಾಥ ಜ್ಯೋತಿರ್ಲಿಂಗದಲ್ಲಿ ಸ್ವತಃ ಶಂಕರರೇ ನೆಲಸಿದ್ದಾರೆ ಅನ್ನೋ ನಂಬಿಕೆ ಪ್ರತೀತಿಯಲ್ಲಿದೆ. ಅಲ್ಲಿಯ ಗುಹೆಯೊಂದರಲ್ಲಿ ತಪೋನಿರತವಾಗಿದ್ದಾಗಲೇ ಅವರಿಗೆ ಬ್ರಹ್ಮಜ್ಞಾನ ಪ್ರಾಪ್ತವಾಗಿದ್ದೂ  ಅಲ್ಲಿಂದಲೇ ಅಹಂ ಬ್ರಹ್ಮಾಸ್ಮಿ ಅನ್ನುವ ಸಂದೇಶ ಸಾರಿದರು.

ಹೀಗೆ ಮಧ್ಯಪ್ರದೇಶ ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಪ್ರಮುಖ ಸ್ಥಾನ ವಹಿಸಿದೆ. ಸನ್ಯಾಸ ದೀಕ್ಷೆ ದೊರೆತಿದ್ದೂ ಇಲ್ಲೇ, ಶಂಕರರು ಇಲ್ಲಿಯೇ ಕುಳಿತು ಪ್ರಸ್ಥಾನ ತ್ರಯದ   ಬಗ್ಗೆ ಭಾಷ್ಯವನ್ನು ಬರೆದಿದ್ದಾರೆ. ಅಹಂ ಬ್ರಹ್ಮಾಸಿ ಅನ್ನೋ ಉದ್ಹೊಷಣೆ ಮೊಳಗಿದ್ದು ಇಲ್ಲೇ. ಹೀಗಾಗಿ ಮಧ್ಯಪ್ರದೇಶ ಸರ್ಕಾರ ಶಂಕರರು ತಪಸ್ಸು ಮಾಡಿದ್ದ ಗುಹೆಯನ್ನು ರಕ್ಷಿಸುವ, ಅವರ ಹೆಸರಿನಲ್ಲಿ ಏಕತಾ ಪ್ರತಿಷ್ಠಾನ ನಿರ್ಮಾಣ ಸ್ಥಾಪಿಸುವ , ಇವೆಲ್ಲಕ್ಕಿಂತ ಹೆಚ್ಚಾಗಿ ಶಂಕರರ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಕೆಲಸಕ್ಕೆ ನಿರ್ಧರಿಸಿದೆ. ಈ ಮೂಲಕ ಶಂಕರರ ಬದುಕು, ಅವರ ಬರಹದ ಬಗ್ಗೆ, ಅಧ್ವೈತ ಸಿದ್ಧಾಂತದ ಬಗ್ಗೆ ಜನಗಳಲ್ಲಿ ಚರ್ಚೆ ನಡೆಯಲಿ, ತನ್ಮೂಲಕ ಈ ನಾಡಿನ ಸಂಸ್ಕೃತಿ ಪ್ರಜ್ವಲಿಸಿ ಅನ್ನೋದು ಉದ್ದೇಶವಾಗಿದೆ.

ಜಾತಿ ಮತ ಭೇಧಗಳನ್ನು ತೊಡೆಯುವಲ್ಲಿ ಶಂಕರರದು ಬಹು ಪ್ರಮುಖ ಪಾತ್ರ. ಚಂಡಾಲನ ಘಟನೆಯಲ್ಲಿ ತಮ್ಮ ಅರಿವನ್ನು ವಿಶಾಲಗೊಳಿಸಿಕೊಳ್ಳುವ ಅವರು ಅಹಂ ಬ್ರಹ್ಮಾಸ್ಮಿ ಅನ್ನುವ ಮೂಲಕ ಎಲ್ಲರೂ ಒಂದೇ ಅನ್ನುವುದನ್ನ ಸಾರುತ್ತಾರೆ. ಅಧ್ವೈತ ಅಂದರೆ ಅದೇ ತಾನೇ. ಎಲ್ಲವೂ ಒಂದೇ  ಎಂದ ಮೇಲೆ ಅಲ್ಲಿ ಭೇಧವೆಲ್ಲಿ. ವಿವೇಕ ಹಾಗೂ ಜ್ಞಾನ ಇರುವ ಯಾರೇ ಆಗಲಿ ಅವರು ನನ್ನ ಗುರು ಸಮಾನ ಎನ್ನುವ ಶಂಕರರು ಜಾತಿಯ ಆಧಾರದ ಮೇಲಿನ ಶ್ರೇಷ್ಠತೆಯನ್ನು ತೊಡೆದು ಜ್ಞಾನದ ಆಧಾರದ ಮೇಲೆ ನಿರ್ಧರಿಸುತ್ತಾರೆ. ಕೇವಲ ಶಾಸ್ತ್ರದಿಂದ ದೇವರು ಒಲಿಯುವುದಿಲ್ಲ ಅವನು ಪ್ರಸನ್ನನಾಗುವುದು ಕೇವಲ ಭಕ್ತಿಗೆ ಅನ್ನುವುದನ್ನ ಶಿವಾನಂದ ಲಹರಿಯಲ್ಲಿ ಕಣ್ಣಪ್ಪನ ಉದಾಹರಣೆ ಕೊಟ್ಟು ಹೇಳುತ್ತಾರೆ. ಏಕಾತ್ಮತ ಯಾತ್ರೆಯಲ್ಲಿ ಪಾಲುಗೊಂಡ ಅಲ್ಲಿನ ಆದಿವಾಸಿಗಳ ಉತ್ಸಾಹ, ಶ್ರದ್ಧೆ ಮತ್ತೊಮ್ಮೆ ಆ ಘಟನೆಯನ್ನು ಮರುಕಳಿಸುವ ಹಾಗೆ ಮಾಡಿದೆ.

 ಕೇವಲ ಶಾಸ್ತ್ರ, ಸಂಪ್ರದಾಯಕ್ಕೆ ಮಾತ್ರ ಒತ್ತುಕೊಡದೆ ಪ್ರಾಯೋಗಿಕವಾಗಿ ಯೋಚಿಸುವ ಶಂಕರರ ಗುಣದ ಅನಾವರಣ ಆಗೋದು ಅವರ ತಾಯಿಗೆ ಚಿತೆ ಇಡುವ ಸಂದರ್ಭದಲ್ಲಿ. ಹೀಗೆ ಕೇವಲ ಶಾಸ್ತ್ರ ಅಚಾರ ಅನ್ನುವ ಮಡಿವಂತಿಕೆಯ ಹೊರತಾಗಿ  ಭಾವನಾತ್ಮಕವಾಗಿ ಮಾನವಿಯವಾಗಿ  ಸ್ಪಂದಿಸುವುದೇ ಮುಖ್ಯ ಅಂದು ಸಾರಿದವರು ಶಂಕರರು. ವಿವೇಕವಿಲ್ಲದ ಆಚಾರ ವ್ಯರ್ಥಎಂದು ತಮ್ಮ ಜೀವನದ ಮೂಲಕ ಸಾರಿದರು. ಈ ಜಗತ್ತಿಗೆ ಬೆಳಕು ಕೊಟ್ಟಿದ್ದು ಭಾರತ, ಭಾರತಕ್ಕೆ ಬೆಳಕು ಕೊಟ್ಟಿದ್ದು ಶಂಕರಾಚಾರ್ಯರು. ಹೀಗೆ ಬೆಳಕಾದ ಶಂಕರರ ಬದುಕಿನಲ್ಲಿ ಬೆಳಕು ಮೂಡಿದ್ದು ಮಧ್ಯಪ್ರದೇಶದಲ್ಲಿ.

ಇಡೀ ಭಾರತವನ್ನು ಮೂರು ಬಾರಿ ಬರಿಗಾಲಲ್ಲಿ ಸುತ್ತಿ  ಹನ್ನೆರಡು ಜ್ಯೋತಿರ್ಲಿಂಗಗಳನ್ನೂ, ಶಕ್ತಿ ಪೀಠಗಳನ್ನೂ ಪುನರ್ಸ್ಥಾಪಿಸಿ ಅದಕ್ಕೆ ಶಕ್ತಿ ತುಂಬಿ  ಜನಜಾಗೃತಿ ತನ್ಮೂಲಕ ಭಾರತ ಬೆಳಗುವ ಹಾಗೆ ಮಾಡಿದ ಶಂಕರರ ಕಾರ್ಯವನ್ನು ನೆನಪಿಸಿಕೊಳ್ಳಲು ಅದನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯದಲ್ಲಿ ಮಧ್ಯ ಪ್ರದೇಶ ಸರ್ಕಾರ ನಿರತವಾಗಿದೆ. ಪ್ರತಿ ಊರು ಊರಿನಲ್ಲಿ ಶಂಕರರ ಏಕಾತ್ಮತಾ  ಯಾತ್ರೆ ನಡೆಯಲಿದೆ, ಸಭೆಗಳು ನಡೆದು ಶಂಕರರ ಬಗ್ಗೆ ಚರ್ಚೆ, ಉಪನ್ಯಾಸಗಳು ಜರುಗಲಿವೆ. ಪ್ರತಿ ಊರಿನಲ್ಲೂ ಕೊಡುವ ಕಲಶಗಳನ್ನ ಧಾತುವನ್ನು  ಸಂಗ್ರಹಿಸಿ ಅದನ್ನು ಶಂಕರರ 108 ಅಡಿಯ ಭವ್ಯ  ಮೂರ್ತಿಯ ನಿರ್ಮಾಣಕ್ಕೆ  ಬಳಸಿಕೊಳ್ಳಲಾಗುತ್ತದೆ. ದೇಶದಾದ್ಯಂತ ಇರುವ ಅಧ್ವೈತ ವಿದ್ವಾಂಸರನ್ನು ಕರೆಸಿ ಅವರಿಂದ ಜನರಿಗೆ ಶಂಕರರ ಕುರಿತು ತಿಳಿಸಿಕೊಡಲಾಗುತ್ತದೆ. ಪ್ರಶ್ನೋತ್ತರ ಚರ್ಚೆಗಳ ಮೂಲಕ ಅವರನ್ನು ಇನ್ನಷ್ಟು ಅರ್ಥಮಾಡಿಸುವ, ಜನಜಾಗೃತಿಗೊಳಿಸುವ  ಪ್ರಯತ್ನ ಈಗಾಗಲೇ ಶುರುವಾಗಿದೆ. ಅದಕ್ಕೆ ದೊರೆತಿರುವ ಜನಸ್ಪಂದನವೂ ಅಮೋಘ.

ಓಂಕಾರೇಶ್ವರ, ಉಜ್ಜಯಿನಿ, ಪಚ್ ಮಠ, ಅಮರಕಂಟಕ ಹೀಗೆ ಮಧ್ಯಪ್ರದೇಶದ ನಾಲ್ಕು ದಿಕ್ಕುಗಳಲ್ಲಿರುವ ಮಠಗಳನ್ನ ಬೆಸೆಯುವ ಏಕಾತ್ಮತಾ ಯಾತ್ರ ಶುರುವಾಗಿದೆ. ಸಂಕೇತವಾಗಿ ಧಾತು ಸಂಗ್ರಹ, ಚರ್ಚೆ, ಜನಜಾಗೃತಿ ಅವ್ಯಾಹತವಾಗಿ ನಡೆಯಲಿದೆ.ಗ್ರಾಮ ಗ್ರಾಮದಲ್ಲಿ ನಡೆಯುವ ಸಭೆ ಶಂಕರರ ಬಗ್ಗೆ ಏಕತೆಗಾಗಿ ಅವರು ಶ್ರಮಿಸಿದ ಬಗ್ಗೆ ತಿಳಿಸಿಕೊಡುವ ಕಾರ್ಯ ನಡೆಯುತ್ತಿದೆ. ಬದುಕನ್ನೇ ಯಾತ್ರೆಯಲ್ಲಿ ಕಳೆದ ಅವರ ಬದುಕನ್ನ ನೆನಪಿಸಿಕೊಳ್ಳಲು ಮತ್ತೊಮ್ಮೆ ಯಾತ್ರೆ ಆರಂಭವಾಗಿದೆ.  ಹೀಗೆ ಮತ್ತೊಮ್ಮೆ ಏಕತೆಯನ್ನು ಬೆಸೆಯುವ ಮಹತ್ಕಾರ್ಯ ಮೊದಲಾಗಿದೆ.  ಭೇಧಭಾವ ತೊಡೆದು ಸಮಾನತೆಯ ಪ್ರವಾಹ ಹರಿಯುವ ಹಾಗೆ ಮಾಡುವ ಮಹತ್ಕಾರ್ಯ ಆರಂಭವಾಗಿದೆ. ಭಾವನಾತ್ಮಕವಾಗಿ, ಸಾಂಸ್ಕೃತಿಕವಾಗಿ ಜನರನ್ನು ಬೆಸೆಯಲು ಶಂಕರರಿಗಿಂತ ಬೇರ್ಯಾರು ಸಿಗಲು ಸಾಧ್ಯ.

ಶಂಕರರು ಇಲ್ಲದೇ ಹೋಗಿದ್ದರೆ ಭಾರತದ ಅಸ್ಮಿತೆ ಯಾವತ್ತೋ ಕಳೆದು ಹೋಗುತಿತ್ತು. ಹಾಗಾಗಿ ಅದನ್ನು ಒಗ್ಗೂಡಿಸಿದ ನಾವೆಲ್ಲಾ ಒಂದೇ ಎಂದು ಸಾರಿದ ಶಂಕರರು ಕೇವಲ ವ್ಯಕ್ತಿ ಮಾತ್ರ ಅಲ್ಲ ನಮ್ಮೆಲ್ಲರ ಅಂತಃಶಕ್ತಿ. ಭಾರತದ ಐಕ್ಯತೆ ಹಾಗೂ ಶಂಕರರು ಎರಡೂ ಬೇರೆ ಬೇರೆಯಲ್ಲ. ಹಾಗಾಗಿ 108 ಅಡಿಯ ಶಂಕರರ ಭವ್ಯ ಮೂರ್ತಿ ಕೇವಲ ವಿಗ್ರಹವಲ್ಲ ಅದು ನಮ್ಮೆಲ್ಲರ ಅಸ್ಮಿತೆಯ ಪ್ರತೀಕ. ನಮ್ಮನ್ನು ನಾವು ಕಂಡುಕೊಳ್ಳುವ ಪ್ರಕ್ರಿಯೆ. ದೇಗುಲಗಳ ದರ್ಶನ ಭಕ್ತಿಯ ಪ್ರದರ್ಶನಕ್ಕೊಂದು, ಅಭಿವ್ಯಕ್ತಿಗೊಂದು ವೇದಿಕೆಯಾದರೆ ಶಂಕರರ ವಿಗ್ರಹ ನೋಡುವಾಗಲೆಲ್ಲ ನಮ್ಮ ಅಸ್ಮಿತೆಯ ನೆನಪಾಗುತ್ತದೆ. ನಮ್ಮ ಇರುವಿನ ದ್ಯೋತಕವಾಗುತ್ತದೆ. ಶಂಕರರು ಬೋಧಿಸಿದ ಮಾತುಗಳು ನೆನಪಾಗಿ ದಾರಿ ನಿಚ್ಚಳವಾಗುತ್ತದೆ. ನಮ್ಮ ಅರಿವನ್ನು ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ.

ಅಧ್ವೈತ ಕೇವಲ ಒಂದು ಸಿದ್ಧಾಂತವಲ್ಲ ಅದು ಬದುಕಿನ ಏಕತೆಯ ಮಾರ್ಗ. ಸಮಾನತೆಯನ್ನು ಸಾರುವ ಮಾರ್ಗ. ಎಲ್ಲವೂ ಒಂದೇ ಅನ್ನುವ ಮಹಾ ಮೂಲ ಮಂತ್ರ. ಹೀಗೆ ಮತ್ತೊಮ್ಮೆ ಒಗ್ಗೂಡಿಸುವ, ನಮ್ಮ ಅಸ್ಮಿತೆಯನ್ನು ನೆನಪಿಸುವ, ಬೆಳಕನ್ನು ಮೂಡಿಸುವ ಶಂಕರರ ಕಾರ್ಯವನ್ನು ಮುಂದುವರೆಸಿಕೊಂಡು ಹಾಗುವ ಮಹಾನ್ ಕಾರ್ಯಕ್ಕೆ
ಶಿವರಾಜ್ ಸಿಂಗ್ ಚೌಹಾನ್ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಮತ್ತೊಮ್ಮೆ ಭಾರತ ಸಾಂಸ್ಕೃತಿಕವಾಗಿ ಒಗ್ಗೂಡುವ ಕನಸಿಗೊಂದು ಚಾಲನೆ ಸಿಕ್ಕಂತೆ ಆಗಿದೆ. ಮತ್ತೊಮ್ಮೆ ಪ್ರಕಾಶಿಸುವ ಹಾಗೆ ಮಾಡುವ ಮಂಕು ತೊಳೆಯುವ ಕಾರ್ಯ ಶುರುವಾಗಿದೆ.

ಒಂದು ದೇಶದ ಸಂಸ್ಕೃತಿ ಉಳಿದಾಗ, ಬೆಳೆದಾಗ ಮಾತ್ರ ಅದರ ಅಸ್ತಿತ್ವ ಗಟ್ಟಿಯಾಗುತ್ತದೆ. ಹಾಗೆ ಗಟ್ಟಿಯಾದ ಸಂಸ್ಕೃತಿ ತಲೆಮಾರಿನಿಂದ ತಲೆಮಾರಿಗೆ ಹರಿದಾಗ ಇನ್ನಷ್ಟು ಭದ್ರವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಬೇರು ಗಟ್ಟಿಯಾದಷ್ಟೂ ಮರ ವಿಶಾಲವಾಗಿ ಹಬ್ಬುತ್ತದೆ.ಶಂಕರರೆಂಬ ಬೇರು ಇನ್ನಷ್ಟು ಆಳಕ್ಕೆ ಇಳಿಯಲಿ. ಅದ್ವೈತದ ಹರಿವು ನಿರಂತರವಾಗಿರಲಿ.
ಭಾರತದ ಅಸ್ಮಿತೆ, ಏಕತೆ, ಮತ್ತೊಮ್ಮೆ ಪ್ರಜ್ವಲಿಸಲಿ ಶಂಕರರು ಚಿರಸ್ಥಾಯಿಯಾಗಲಿ. ನಮ್ಮ ಅಸ್ಮಿತೆ ಬೆಳಗಲಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...