ಡಿಯರ್ ಸಿದ್ದರಾಮಯ್ಯ...

ತಾಯಿಯೊಬ್ಬಳ ಕರುಳಿನ ಸಂಕಟವನ್ನು ನಿಮ್ಮೆದೆರು ಹೇಳಬೇಕು ಅಂತ ಯೋಚಿಸಿ ಬರೆಯುತಿದ್ದೇನೆ. ಸದ್ಯಕ್ಕೆ ನಾಡಿನ ಚುಕ್ಕಾಣಿ ನಿಮ್ಮ ಕೈಯಲ್ಲಿ ಇರುವುದರಿಂದ ಇಷ್ಟವಿಲ್ಲದಿದ್ದರೂ ಕಿವಿಯಾಗಲೇ ಬೇಕಾದ ಅನಿವಾರ್ಯತೆ ನಿಮ್ಮದು, ನೋವನ್ನು ಹೊರಹಾಕಿ ಸ್ವಲ್ಪವಾದರೂ ಹಗುರವಾಗುವ ಬಯಕೆ ನನ್ನದು.

ಯಾವುದೇ ಬದುಕಿಗೆ ಜೀವ ತುಂಬುವುದು ಸುಲಭವಲ್ಲ. ಅದಕ್ಕೊಂದು ರೂಪು ಕೊಟ್ಟು ಒಡಲಲ್ಲಿ ಹೊತ್ತು ರಕ್ತ ಮಾಂಸ, ಅಸ್ಥಿ ಉಸಿರು ಕೊಟ್ಟು ಹೊರತರುವುದೆಂದರೆ ಸತ್ತು ಬದುಕುವುದು. ನಿಮಗೆ ಹೇಗೂ ವೈಜ್ಞಾನಿಕ ಹಿನ್ನಲೆ ಹುಡುಕುವವರಾದ್ದರಿಂದ ಪ್ರಸವದ ಸಮಯದಲ್ಲಿ ಅವಳು ಅನುಭವಿಸುವ ನೋವಿನ ತೀವ್ರತೆ ಎಷ್ಟಿರುತ್ತದೆ ಅನ್ನೋದು ನೋಡಿ ಆಗ ಅರ್ಥವಾಗುತ್ತೆ ಹೇಗೆ ಸತ್ತು ಒಂದು ಜೀವವನ್ನು ಜಗತ್ತಿಗೆ ಕೊಡ್ತೀವಿ ಅಂತ.

ಅಮ್ಮಂದಿರ ಎರಡನೆಯ ಬದುಕು ಅಂದರೆ ಅದು ಮಕ್ಕಳಿಗಾಗಿ ಮುಡಿಪಿಟ್ಟ ಬದುಕು. ತನ್ನ ಸಮಯ, ಕನಸು, ಆಸೆ ಎಲ್ಲವನ್ನೂ ಮಗುವಿಗಾಗಿ ಧಾರೆಯೆರೆದು ಅವರ ಬೆಳವಣಿಗೆಯಲ್ಲಿ, ಅವರ ಉನ್ನತಿಯಲ್ಲಿ ಮರೆಯುವ ಕಾಲ ಅದು. ಹಾಗಂತ ಏನೋ ತ್ಯಾಗ ಮಾಡ್ತಾ ಇದೀನಿ ಅಂತ ಕನಸಲ್ಲೂ ಯೋಚಿಸೋಲ್ಲ, ಯಾಕೆಂದರೆ ಅದು ಕರುಳಿನ ತುಂಡು. ಭುವಿಗೆ ಬಂದ ಕ್ಷಣದಿಂದ ಎಲ್ಲವನ್ನೂ ಕಲಿಸಿ ಅವರನ್ನು ಸಶಕ್ತರನ್ನಾಗಿ ಮಾಡುವ ಸಮಯದಲ್ಲಿ ನಮ್ಮ ಬದುಕಲ್ಲಿ ಇಳಿ ಸಂಜೆ ಕಾಲಿಟ್ಟುರುತ್ತದೆ. ಮೈ ಹಾಗು ಮನಸ್ಸು ಊರುಗೋಲಿಗಾಗಿ ಹಂಬಲಿಸುತ್ತದೆ. ಯಾವುದೋ ನಿರ್ಜಿವ ಕಟ್ಟಿಗೆಯ ತುಂಡಿನ ಬದಲಾಗಿ ಮಗಳೋ ಮಗನದೋ ಬೆಚ್ಚಗಿನ ಕೈಗಾಗಿ ಅರಸುತ್ತದೆ. ಆ ಸಮಯದಲ್ಲಿ ಇದ್ದಕ್ಕಿದಂತೆ ಆ ಆಸರೆ ಕೈ ತಪ್ಪಿದರೆ ಹೇಗೆ?

ಒಂದು ಮಗು ಹುಟ್ಟುತ್ತಿದ್ದಂತೆ ವೈಯುಕ್ತಿಕ ಬದುಕನ್ನ ಮರೆತು ಅವರಿಗಾಗಿ ಬದುಕುವ ಅನಿವಾರ್ಯತೆ ಮೊದಲಿಗಿದ್ದರೂ ಬರುಬರುತ್ತಾ ಅದೆಷ್ಟು ಅಭ್ಯಾಸವಾಗಿ ಬಿಡುತ್ತದೆ, ಉಸಿರಿನೊಂದಿಗೆ ಮಿಳಿತವಾಗಿ ಬಿಡುತ್ತದೆ ಎಂದರೆ ಅವರಿಲ್ಲದ ಬದುಕು ಶೂನ್ಯ ಅನ್ನಿಸಿಬಿಡುತ್ತದೆ, ಬೆಳಕು ಮಾಯವಾಗಿ ಕಾರ್ಗತ್ತಲು ಆವರಿಸುತ್ತದೆ. ಆಧಾರ ಕಳೆದುಕೊಂಡ ಕಟ್ಟಡದಂತೆ ಕುಸಿದು ಬಿಡುತ್ತದೆ. ಇಂಥ ಕ್ಷಣಗಳಲ್ಲಿ ನಡೆಯುವುದಾದರೂ ಹೇಗೆ ಹೇಳಿ ಮುಖ್ಯಮಂತ್ರಿಗಳೇ.. ನಡೆಯದೆ ಇರುವುದಕ್ಕಾದರೂ ಸಾಧ್ಯವಿದೆಯೇ. ಯಾರೋ ಬಂದು ಮನೆಯ ದೀಪವನ್ನು ಆರಿಸಿ ಕತ್ತಲೆಯನ್ನು, ಮುಗಿಯದ ಕಣ್ಣಿರನ್ನು ಕೊಟ್ಟು ಹೋಗುತ್ತಾರೆ ಎಂದರೆ ಅದೆಂಥ ಬರ್ಬರ ಕಾಲದಲ್ಲಿ ಬದುಕಿದ್ದೇವೆ ನಾವು?

ಮಗು ಎಲ್ಲೋ ಬಿದ್ದು ಪೆಟ್ಟು ಮಾಡಿಕೊಂಡರೆ, ಅನಾರೋಗ್ಯದಿಂದ ಮಲಗಿದರೆ ನಾವೆಷ್ಟು ಒದ್ದಾಡುತ್ತೇವೆ ಅನ್ನೋದು ಗೊತ್ತಿದೆಯೇ ನಿಮಗೆ. ಆ ಸಂಕಟ, ಬೇಗೆಯ ಬಿಸಿ ಎಂದಾದರೂ ಅನುಭವಿಸಿದ್ದಿರಾ? ಅಂಥಾ ದೇವರೇ ತಾಯಿಯ ಎದುರು ಎಲ್ಲವನ್ನೂ ಬದಿಗಿಟ್ಟು ಮಗುವಾದನಂತೆ. ಹೇಗೆ ಲಾಲಿಸುತ್ತಾಳೋ ಅಷ್ಟೇ ಭಾಧೆಯನ್ನೂ ಪಡುತ್ತಾಳೆ. ಸಾದ್ಯವಾದರೆ ರಾಜಕೀಯ, ಅಧಿಕಾರವನ್ನು ಒಂದು ನಿಮಿಷ ಬದಿಗಿಟ್ಟು ನಿಮ್ಮ ತಾಯನ್ನು ನೆನಪಿಸಿಕೊಳ್ಳಿ... ಮನಸ್ಸು ಮಿಡಿದರೆ ನಿಮ್ಮಲ್ಲಿನ್ನೂ ಮನುಷ್ಯತ್ವ ಉಳಿದಿದೆ ಅಂತ ಅರ್ಥ. ನಮ್ಮನ್ನೂ ಮನುಷ್ಯರಾಗಿ ಬಾಳಲು ಬಿಡಿ.

ತಾಯಿಯಾದ ನಂತರ ಪ್ರತಿ ಹೆಣ್ಣು ಬದುಕುವುದು ಮಕ್ಕಳಿಗಾಗಿ, ಉಸಿರು ಬಿಗಿಹಿಡಿದು ಪ್ರಯತ್ನಿಸುವುದು ಅವರ ಶ್ರೇಯಸ್ಸಿಗಾಗಿ, ಈಗ ಶಕ್ತಿಯಿದೆ ದುಡಿದು ಬಿಡುತ್ತೇನೆ ಆಮೇಲೆ ಹೇಗೂ ನನ್ನ ಕರುಳಿನ ತುಂಡು ಇದೆ ಆಸರೆಗಾಗಿ ಅನ್ನೋ ನಂಬಿಕೆಯಲ್ಲಿ ಶ್ರಮಿಸುವ, ಕಷ್ಟಗಳನ್ನೆಲ್ಲಾ ಎದುರಿಸಿ ಬದುಕಿಬಿಡುವ ದುಡಿದು ಹಣ್ಣಾಗುವ , ಚಿಗುರೆಲೆ ಪಕ್ವವಾಗಿ ಬೆಳೆದು ನಿಲ್ಲುವ ಕಾಲಕ್ಕೆ ಕಣ್ಣೆದೆರು ಉರುಳಿದರೆ ಯಾವ ಜೀವ ತಾನೇ ಸಹಿಸಿತು ಮಂತ್ರಿಗಳೇ... ಹೊರಗೆ ಹೋದ ಮಕ್ಕಳು ಸುರಕ್ಷಿತವಾಗಿ ವಾಪಸ್ ಬರಲಾರರು ಅನ್ನೋದು ಯಾವ ಕರುಳು ತಾನೇ ತಡೆದುಕೊಂಡೀತು. ಯಾವ ಶಾಶ್ವತ ಅಧಿಕಾರದ ಭ್ರಮೆಯಲ್ಲಿ ಇದಕ್ಕೆ ಆಸ್ಪದ ಕೊಡುತ್ತಿದ್ದಿರಿ?

ಯಾರ ನೋವಿನ ನಿಟ್ಟುಸಿರು ಶ್ರೇಯಸ್ಸಲ್ಲ ಅನ್ನೋ ಹಿರಿಯರ ಮಾತನ್ನು ಕೇಳಿಕೊಂಡೆ ಬೆಳೆದವರು ನಾವು, ನೀವು ಚಿಕ್ಕವರಿದ್ದಾಗ ಇದನ್ನೆಲ್ಲಾ ಕತೆಗಳ ಮೂಲಕ ಹೇಳುವ ಅಜ್ಜಿಯ ಸಾಂಗತ್ಯ ದೊರಕಿರಲಿಲ್ಲವೇ? ಪ್ರತಿ ಕ್ರಿಯೆಗೂ ಅದು ಒಳ್ಳೆಯದೋ ಕೆಟ್ಟದ್ದೋ ಅದಕ್ಕೆ ಪ್ರತಿಫಲ ಇದ್ದೇ ಇರುತ್ತೆ ಅನ್ನೋದನ್ನ ಹಿಂದೂಧರ್ಮ ಹೋಗಲಿ ಎಲ್ಲಾ ಮತಗಳು ಹೇಳುತ್ತದೆ. ಅದೂ ಮರೆತು ಬಿಟ್ಟಿರಾ ? ವೇದನೆಯ ಕಣ್ಣಿರು ನಿಮಗೆ ಅಷ್ಟೊಂದು ಪ್ರಿಯವಾ?

ನಿಮ್ಮ ಯಾವ ಭಾಗ್ಯಗಳೂ ಬೇಕಾಗಿಲ್ಲ, ಏನು ಮಾಡದಿದ್ದರೂ ಪರವಾಗಿಲ್ಲ  ನಮ್ಮ ಕರುಳಿನ ತುಂಡುಗಳನ್ನು ನಮ್ಮ ಕಣ್ಣೆದೆರು ಸಾಯುವ ಹಾಗೆ ಮಾಡಬೇಡಿ, ಇಳಿ ಸಂಜೆಯಲ್ಲಿ ನಮ್ಮ ಪಾಡಿಗೆ ನಾವು ನೆಮ್ಮದಿಯಿಂದ ಕಳೆಯಲು ಇರುವ ಬೆಚ್ಚಗಿನ ಕೈ ಕತ್ತರಿಸಬೇಡಿ. ಇರುವ ಬೆಳಕನ್ನು ಕಿತ್ತುಕೊಂಡು ಕಗ್ಗತ್ತಲ ಬದುಕು ದಯಪಾಲಿಸಬೇಡಿ, ಮಕ್ಕಳು ವಾಪಸ್ ಬರುವತನಕ ಅಶಾಂತಿಯಿಂದ ಸಂಕಟದಿಂದ ಬಾಗಿಲ ಕಡೆಗೆ ಮುಖ ಮಾಡುವ ಹಾಗೆ ಮಾಡಬೇಡಿ. ಅಮ್ಮಾ ಎನ್ನುವ ಕರೆಯೊಂದು ಸಾಕು ಉಸಿರು ಹಿಡಿಯಲು ಅದನ್ನೂ ಕಿತ್ತುಕೊಂಡು ನಮ್ಮನ್ನು ಜೀವಂತ ಹೆಣಗಳಾಗಿ ಮಾಡಬೇಡಿ. ಇದೆಲ್ಲಾ ಭ್ರಮೆ, ನಾಟಕ ಅನ್ನಿಸಿದರೆ ಒಮ್ಮೆ ನಿಮ್ಮ ಹೆಂಡತಿಯನ್ನು ಕೇಳಿ ನೋಡಿ...

ತಾಯಿಯ ಕರಳು ಕಡಲಿನ ಒಡಲು ಎರಡೂ ಒಂದೇ...
ಎರಡರ ದುಃಖ ಉಕ್ಕಿದರೆ ಬದುಕು ಅಲ್ಲಾಡುತ್ತದೆ.
ದಯವಿಟ್ಟು ನಮ್ಮನ್ನು ಶಾಂತವಾಗಿ ಬದುಕಲು ಬಿಡಿ ಪ್ಲೀಸ್...











Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...