ಅರಿಸಿನ ಶಾಸ್ತ್ರ.

ಈ ಸಲ ಮಾತ್ರ ಯಾವುದೇ ಕಾರಣಕ್ಕೂ ಯಾವ ಸಣ್ಣ ಘಳಿಗೆಯನ್ನೂ ಮಿಸ್ ಮಾಡಿಕೊಳ್ಳದೆ ಸಂಪೂರ್ಣವಾಗಿ ಅನುಭವಿಸಬೇಕು, ನೆನಪುಗಳ ಬಾಚಿ ಕಟ್ಟಿಕೊಳ್ಳಬೇಕು ಅಂತಾನೇ ಪುಟ್ಟು ಮದುವೆಗೆ ಹೊರಟಿದ್ದೆ. ಹೊರಡುವ ವೇಳೆಗೆ ಅಹಿಗೆ ವಿಪರಿತ ಜ್ವರ ಶುರುವಾಗಿತ್ತು. ಏನೂ ಆಗೋಲ್ಲ ಕಣೆ ಅಕ್ಕಾ ನಾಳೆ ಡಾಕ್ಟರ್ ಹತ್ರ ನಾನು ಕರ್ಕೊಂಡ್ ಹೋಗ್ತೀನಿ ಗಟ್ಟಿ ಮನಸ್ಸು ಮಾಡಿ ಹೊರಟುಬಿಡು ಅನ್ನೋ ರಾಕೆಟ್ ಧ್ವನಿ ಧೈರ್ಯ ಕೊಟ್ಟಿತ್ತು.

ಮದುವೆ ಮನೆ ಅಂದ್ರೆ ಜಗತ್ತಿನ ಗದ್ದಲ, ಸಂಭ್ರಮ, ಟೆನ್ಶನ್, ಗಡಿಬಿಡಿ, ಉಲ್ಲಾಸ, ಎಲ್ಲವನ್ನೂ ತಂದು ಗುಡ್ಡೆ ಹೊಯ್ದ ಹಾಗೆ. ಬೆಳಿಗ್ಗೆ ಸ್ವಲ್ಪ ಬೇಗ ಎದ್ದು ರೆಡಿ ಆಗಿಬಿಡು, ಅರಿಸಿನ ಶಾಸ್ತ್ರ ಬೇಗನೆ ಶುರುಮಾಡೋಣ ಅಂತ ಆಂಟಿ ಹೇಳಿದಾಗ ನನಗಿಂತ ಎಕ್ಸೈಟ್ ಆಗಿದ್ದು ಅಹಿ. ಅವಳಿಗೆ ಈ ಆಚರಣೆ, ಸಂಪ್ರದಾಯ ಅಂದರೆ ಎಲ್ಲಿಲ್ಲದ ಉತ್ಸಾಹ. ಎಲ್ಲರಿಗಿಂತ ಮುಂದೆ ನಾನು ಮಾಡ್ತೀನಿ ಅಂತ ನಿಂತು ಬಿಡ್ತಾಳೆ. ಹಾಗಾಗಿ ಅಮ್ಮಾ ಬೆಳಗಾಯ್ತಾ ಅಂತ ರಾತ್ರಿಯೆಲ್ಲಾ ತಲೆ ತಿಂದು ಊರಿಗೆ ಮುಂಚೆ ಎಬ್ಬಿಸಿ ಸ್ನಾನ ಮಾಡಿ ರೆಡಿ ಆಗಿ ಲೇಟ್ ಆಯ್ತು ಎಲ್ಲರನ್ನೂ ಗಡಿಬಿಡಿ ಮಾಡುತ್ತಿದ್ದಳು.

ನಮ್ಮ ಹಿರಿಯರು ಮಾಡಿದ ಪ್ರತಿ ಸಂಪ್ರದಾಯ ಆಚರಣೆಯಲ್ಲೂ ಅವರು ಕಟ್ಟಿಕೊಟ್ಟ ಜೀವನ ಸೂಕ್ಷ್ಮಗಳು, ಸಂಬಂಧಗಳನ್ನು ಜೋಡಿಸುವ ರೀತಿ ನನ್ನಲ್ಲೊಂದು ಸದಾ ಬೆರಗನ್ನು ಹುಟ್ಟಿಸುತ್ತಲೇ ಇರುತ್ತದೆ. ಇಲ್ಲೂ ಹಾಗೆ ಅರಿಸಿನ ಶಾಸ್ತ್ರಕ್ಕೆ ಮುಖ್ಯವಾಗಿ ಬೇಕಾಗಿದ್ದು ಮದುಮಗನ ತಂಗಿ ಅಥವಾ ಅಕ್ಕ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಗಾದೇ ಮಾಡಿದವರೇ ತವರಿನ ಪ್ರತಿ ಕಾರ್ಯಕ್ರಮ ಶುರುವಾಗಬೇಕಾದರೆ ಅಲ್ಲಿ ಮನೆಯ ಮಗಳು ಇರಲೇ ಬೇಕು ಮತ್ತು ಅವಳಿಂದಲೇ ಶುಭಾರಂಭ ಆಗಬೇಕು ಅಂತ ಮಾಡಿರೋದು ನೋಡಿದಾಗ ಸಣ್ಣದೊಂದು ಹೆಮ್ಮೆ ಹೆಡೆಯಾಡುತ್ತದೆ. ಹಿಂದಿನ ದಿನವೇ ತೊಳೆಸಿಕೊಂಡು ಸ್ವಚ್ಚವಾಗಿ ಒರೆಸಿಕೊಂಡು ಒರಳಕಲ್ಲು ಗಂಭಿರವಾಗಿ ಕುಳಿತಿದ್ದರೆ ಪಕ್ಕದಲ್ಲಿ ಅಟ್ಟದಿಂದ ಇಳಿದು ಸ್ನಾನ ಮಾಡಿ ಮಿರುಗುತ್ತಾ ಒನಕೆ ಹಮ್ಮಿನಿಂದ ತಲೆಯೆತ್ತಿ ಸಾಥ್ ಕೊಟ್ಟಿತ್ತು.

ಮನೆ ಮಗಳು ಅದಕ್ಕೆ ಪೂಜೆ ಮಾಡಿ ಆರಿಸಿ ಒಣಗಿಸಿ ಇತ್ತ ಅರಿಸಿನ ಕೊಂಬನ್ನು ಹಾಕಿದರೆ ಐದು ಜನವೋ, ಇಲ್ಲಾ ಒಂಬತ್ತು ಜನ ಮುತ್ತೈದರೆಯರು ರಾಗವಾಗಿ ಹಾಡುತ್ತಾ ಬಳೆಗಳ ಘಲ್ ನಾದ ಹೊರಡಿಸುತ್ತಾ ಸೇರಿಕೊಂಡು ಒನಕೆಯಿಂದ ಅದನ್ನು ಕುಟ್ಟಿ ಪುಡಿಮಾಡಿದರೆ ಅದನ್ನು ತೆಗೆಯುವ ಕೆಲಸ ಮಾತ್ರ ಮಗಳೇ ಮಾಡಬೇಕು. ಹಾಗೆ ಕುಟ್ಟಿದ ಅರಿಸಿನದಲ್ಲಿ ಸ್ವಲ್ಪ ಭಾಗ ಹಾಕಿ  ಅಕ್ಷತೆ ಕಲಿಸಿದರೆ ಇಡೀ ಮದುವೆ ಮನೆಯ ಕಾರ್ಯಕ್ರಮ ಮುಗಿಯುವ ತನಕ ಅದೇ ಅಕ್ಷತೆ. ಅದನ್ನು ಕಲಿಸುವ ಹಕ್ಕಿರುವುದು ಮನೆಯ ಮಗಳಿಗೆ ಮಾತ್ರ. ಆಮೇಲೆ ಪುರೋಹಿತರ ಮಂತ್ರ ಘೋಷದ ನಡುವೆ ಕಳಸ ಕನ್ನಡಿ ಇಟ್ಟುಮಗಳನ್ನು ಕೂರಿಸಿ  ಅರಿಸಿನ ಕುಂಕುಮ ಕೊಟ್ಟು ಅದನ್ನು ಕೊಟ್ಟರೆ ಮುಂದೆ ಮದುವೆ ಮುಗಿಯುವ ತನಕವೂ ಅವಳದೇ ನೇತೃತ್ವ, ಅವಳೇ ಪ್ರಮುಖ.
ಆಮೇಲೆ ಅವಳು ಅಕ್ಷತೆಯನ್ನು ಎಲ್ಲರಿಗೂ ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮೇಲೆ ನಡೆಯೋದು ಮದುಮಗನಿಗೆ ಅರಿಸಿನ ಶಾಸ್ತ್ರ. ಅವನನ್ನು ಕೂರಿಸಿ ಎಣ್ಣೆ ಅರಿಸಿನ ಹಚ್ಚಿ ಪುಣ್ಯ ಸ್ನಾನ ಮಾಡಿಸಿ ಮದುಮಗನಾಗಿ ಮಾಡುವ ಕಾರ್ಯ. ಹೆಂಗಳೆಯರ ಗದ್ದಲ, ತಮಾಷೆಯ ನಡುವೆ ನಡೆಯುವ ಶಾಸ್ತ್ರ ಅದೂ ಹಿರಿಯರು ಮಾಡಿದರೆ ಒಳ್ಳೆಯದು ಅನ್ನೋ ಭಾವ ಹಿರಿಕಿರಿಯಾದಿಯಾಗಿ ಎಲ್ಲರನ್ನೂ ಒಂದು ಕಡೆ ಸೇರಿಸುವ ಹಾಗೆ ಮಾಡುವ ಎಲ್ಲರಿಗೂ ಸಂತೋಷವಾಗುವಂತೆ ಮಾಡುವ ಬಂಧು ಮಿತ್ರರನ್ನು ಒಗ್ಗೂಡಿಸಿ ಎಲ್ಲರೊಳಗೊಂದು ಭಾವ ಬೆಸೆಯುವ ಹಾಗೆ ಮಾಡಿ ಬಂಧುತ್ವ ಬಿಗಿಯಾಗುವ ಹಾಗೆ ಮಾಡುವ ಈ ಆಚರಣೆಗಳು ನಮ್ಮ ಹಿರಿಯರು ಕಟ್ಟಿಕೊಟ್ಟ ಪರಿ ತುಂಬಾ ಚೆಂದ.

ಏನು ಕನಸು ಕಾಣ್ತಾ ಇದ್ದಿ, ಹುಡುಗನ ಅಕ್ಕ ನೀನೆ ಮೊದಲು ಹೋಗಿ ನೀರು ಹಾಕು ನಾನು ಆಮೇಲೆ ಬರ್ತೀನಿ ಅಂತ ಆಂಟಿಯ ದ್ವನಿ ಎಚ್ಚರಿಸಿ ಈ ಜಗತ್ತಿಗೆ ಬರುವ ಹಾಗೆ ಮಾಡಿತ್ತು. ಹಂಡೆಯಲ್ಲಿ ಮರಳುವ ನೀರನ್ನು ತಂಬಿಗೆಯಲ್ಲಿ ತುಂಬಿ ಹಾಕುವಾಗ ಮನದಲ್ಲೂ ಭಾವನೆಗಳು ಮರಳುತ್ತಿದ್ದವು, ಕಣ್ಣು ಮಾತ್ರ ತಂಬಿಗೆಯ ನೀರಿಗೆ ತನ್ನ ಕೊಡುಗೆ ಸದ್ದಿಲ್ಲದೇ ನೀಡುತ್ತಿತ್ತು.  ಒಬ್ಬೊಬ್ಬರಾಗಿ ನೀರು ಹಾಕಿ ಛೇಡಿಸಿ ಬರುತ್ತಿದ್ದರೆ ಕಾದ ನೀರಿಗೆ, ಮಾತಿನ ಬಿಸಿಗೆ ಮದುಮಗನೂ ಕೆಂಪಗೆ ಹೊಳೆಯುತಿದ್ದ.ಹೊರಬಂದರೆ ಜನಗಳ ಗದ್ದಲಕ್ಕೆ ಇಡೀ ಮನೆ ಸಂಭ್ರಮದಿಂದ ಕಂಪಿಸುತ್ತಿತ್ತು.

ಆ ಸಂಭ್ರಮವನ್ನ, ಭಾವನೆಗಳನ್ನು ಅಷ್ಟೇ ಜೋಪಾನವಾಗಿ ಸೆರೆಹಿಡಿದು ನೆನಪಿನ ಬುಟ್ಟಿಯನ್ನು ಕಟ್ಟಿ ಕೊಟ್ಟಿದ್ದು ಮಾತ್ರ ಪಧ್ಮನಾಭನ್.

ಮದುವೆಯಂದ್ರೆ ಎಷ್ಟೊಂದು ಭಾವಗಳ ಜಾತ್ರೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...