ಕೆಸು

ಮಳೆಗಾಲ ಅದರಲ್ಲೂ ಆಷಾಡದ ತಿಂಗಳಲ್ಲಿ ಮಲೆನಾಡು ಹಾಗೂ ಕರಾವಳಿಯಲ್ಲಿ ಪತ್ರೊಡೆಯದ್ದೇ ಸುದ್ದಿ, ಅದರದ್ದೇ ಘಮ. ಒಮ್ಮೆ ಮೂಗು ಅರಳಿಸಿ ಆಘ್ರಾಣಿಸಿದರೆ ಅದರಲ್ಲಿ ಅಡಕವಾಗಿರುವ ಪತ್ರೊಡೆಯ ಘಮ ಹಾಗೆ ಒಳಕ್ಕಿಳಿದು ಜಠರಾಗ್ನಿಯನ್ನು ಪ್ರಚೋದಿಸುತ್ತದೆ. ಮಳೆಬಿದ್ದ ಒದ್ದೆ ಒದ್ದೆ  ನೆಲ, ಬೀಸುವ ಥಂಡಿಗಾಳಿ ಚಳಿಗೆ ಬಿಸಿಬಿಸಿಯಾದ ಪತ್ರೊಡೆಗಿಂತ ಬೇರೆ ಮದ್ದು ಯಾವುದಿದೆ ಹೇಳಿ.? ಕೆಸುವಿಗಿಂತ ಚೇತೋಹಾರಿ ಮಿತ್ರ ಇನ್ಯಾರು ಸಿಕ್ಕಾರು ಹೇಳಿ?

ಈ ಬಹುಪಯೋಗಿ ಕೆಸು ಬೆಳೆಯೋದು ಜವುಗು ನೆಲ ಹಾಗೂ ನೆರಳಿರುವ ಜಾಗದಲ್ಲಿ. ಬಿಸಿಲು ಅದಕ್ಕೆ ಅಷ್ಟು ಹಿತವಲ್ಲ. ತಂಪು ಬೇಕೇ ಬೇಕು. ಹೀಗೆ ನೀರ ನಡುವೆ, ನೀರಿನ ಜೊತೆ ಜೊತೆಗೆ ಬೆಳೆದರೂ ಅದು ಕಮಲಪತ್ರದಂತೆ. ಜೊತೆಗಿದ್ದರೂ ಅಂಟಿಕೊಳ್ಳದ ಹಾಗಿರುತ್ತದೆ. ಜೊತೆಗಿದ್ದೂ ಬಂಧಿಯಾಗದಂತೆ, ಅಂಟಿಯೂ ಅಂಟದಂತೆ ಇರುವ ಗುಣ ಅದೆಷ್ಟು ಕಷ್ಟ ಕಷ್ಟ. ಹಾಗಿರುವುದರಿಂದಲೇ ಅದೆಷ್ಟು ಇಷ್ಟ.

ಕೆಸು ಅಂದ ಕೂಡಲೇ ಇಲ್ಲೂ ಮನುಷ್ಯರಲ್ಲಿರುವಂತೆ ಅನೇಕ ಜಾತಿಗಳಿವೆ. ಕರಿ ಕೆಸು, ಬಿಳಿ ಕೆಸು, ಮರಕೆಸು, ಬಣ್ಣದ ಕೆಸು ಹೀಗೆ. ಒಂದೊಂದು ಒಂದೊಂದಕ್ಕೆ ಉಪಯೋಗ ಬರುತ್ತದೆ. ಇನ್ನೊಂದಕ್ಕೆ ಬರದು ಅಂತೇನು ಪಟ್ಟು ಹಿಡಿಯದಿದ್ದರೂ ರುಚಿ  ಆ ಸ್ವಾದ ಕೊಡುವುದಿಲ್ಲ. ಯಾವುದನ್ನು ಯಾವುದಕ್ಕೆ ಉಪಯೋಗಿಸಬೇಕೋ ಅದಕ್ಕೆ ಮಾತ್ರ ಉಪಯೋಗಿಸಬೇಕು ನೋಡಿ. ಎಲ್ಲವನ್ನೂ ಎಲ್ಲವದಕ್ಕೂ ಬಳಸಿದರೆ ಅದರ ಘನತೆ ಕಡಿಮೆಯಾಗದಿದ್ದರೂ ರುಚಿ ಮಾತ್ರ ಕಡಿಮೆಯಾಗುತ್ತದೆ.

ಮಳೆ ಬೀಳುತ್ತಿದ್ದ ಹಾಗೆ ಕೆಸುವಿಗೆ ಸಂಭ್ರಮ. ಹಬ್ಬಿ ಸೊಂಪಾಗಿ ಬೆಳೆಯುತ್ತದೆ. ಅದರಲ್ಲೂ ಆಷಾಡ ಮಾಸದಲ್ಲಿ ಇದರ ಬೆಳವಣಿಗೆ ತುಸು ಜಾಸ್ತಿಯೇ. ಬೆಳೆಯುವುದಕ್ಕೂ ಒಂದು ಕಾಲ . ಕರಿ ಕೆಸುವಿನ  ದಂಟು, ಎಲೆ, ಗೆಡ್ಡೆ ಹೀಗೆ ಎಲ್ಲವೂ ಸಹ ಉಪಯೋಗವೇ. ಅನುಪಯುಕ್ತ ಅನ್ನೋದು ಈ ಕೆಸುವಿನಲ್ಲಿ ಇಲ್ಲವೇ ಇಲ್ಲ. ಕಪ್ಪು ಕಪ್ಪೆಂದು ಜರಿಯದಿರಿ ಅನ್ನೋದು ಇದಕ್ಕೆ ಮಾತ್ರ ಸರಿಯಾಗಿ ಹೊಂದಿಕೆಯಾಗುತ್ತದೆ. ಹೃದಯಾಕಾರದ ಇದರ ಎಲೆಗಳು ಎಲ್ಲರ ಹೃದಯವನ್ನೂ ಸೆಳೆದು ಅಲ್ಲೊಂದು ಪ್ರೀತಿ ಹುಟ್ಟುವ ಹಾಗೆ ಮಾಡುತ್ತದೆ. ಇದನ್ನು ಪ್ರೀತಿಸದೇ ಉಳಿಯುವಂತ ಸನ್ಯಾಸಿಗಳಾದರು ಯಾರು ?

ಹಿತ್ತಿಲಲ್ಲೋ, ಕೆರೆಯ ಬದುವಿನಲ್ಲೋ, ತೋಟದ ಬದಿಯಲ್ಲೋ ಬೆಳೆದ ಇದನ್ನು ಕೊಯ್ದು ತಂದು ತೊಳೆದು ಅಲ್ಲೇ ಕೊಟ್ಟಿಗೆಯ ಜಗಲಿಯಲ್ಲಿ ಹರವಿ ಹಾಕಿದರೆ ಆಯಿತು. ಹಾ ಇದನ್ನು ಬೆಳೆಸುವುದು ಎಷ್ಟು ಸುಲಭವೋ ನಿವಾರಿಸಿಕೊಳ್ಳುವುದು ಅಷ್ಟೇ ಕಷ್ಟ. ಕೆರೆಗೆ ಕೆರೆಯೇ ಇದರ ಆಕ್ರಮಣಕ್ಕೆ ಸೊರಗಿ ಸೋತು ಶರಣಾಗಿ ಹೋದ ಉದಾಹರಣೆಗಳೂ ಬೇಕಾದಷ್ಟಿವೆ. ತೊಳೆಯುವುದು ಸುಲಭ,  ನೀರು ಜಾರಿ ಬಿದ್ದು ಹೋಗಿ ಬೇಗ ಒಣಗಿ ಬಿಡುತಿತ್ತು. ತೇವದಲ್ಲೇ ಬೆಳೆದರೂ ತೇವ ಅಂಟಿಸಿಕೊಳ್ಳದ ಇದು ನಮಗೆ ಸದಾ ಅಚ್ಚರಿ ಉಂಟು ಮಾಡುತಿತ್ತು. ಆಮೇಲೆ ಒಂದು ಚೂಪಾದ ಚಾಕುವನ್ನು ತೆಗೆದು ಕೊಂಡು ಎಲೆಯ ಹಿಂಬಾಗದ ನರಗಳಂತ ತಿರುಳು ತೆಗೆದರೆ ಅತ್ತಿತ್ತ ಅಲ್ಲಾಡದೆ ಸುಮ್ಮನೆ ಕೂರುತಿತ್ತು. ಯಾವುದನ್ನೇ ಆದರೂ ಸೀಳಬೇಕು ಅಂದರೆ ಚೂಪಾಗಿರಲೇ ಬೇಕು ನೋಡಿ..

ಇಷ್ಟು ರುಚಿಕರವಾದರೂ, ಸುಲಭವಾಗಿ ಸಿಕ್ಕರೂ ಅದನ್ನು ಅಷ್ಟೇ ಸುಲಭವಾಗಿ ಬಳಸಲು ಬಿಡುತ್ತಿರಲಿಲ್ಲ. ತಿಂದ ರುಚಿ ನಾಲಿಗೆಗೆ ಇಳಿಯುವ ಮೊದಲೇ ಗಂಟಲು ಕೆರೆಯುವ ಹಾಗೆ ಮಾಡುತಿತ್ತು. ಹಾಗಾಗಿ ಅದನ್ನು ಬಗ್ಗಿಸಲು ಅದಕ್ಕೆ ಉಪ್ಪು, ಹುಳಿ, ಖಾರ ಸ್ವಲ್ಪ ಚೆನ್ನಾಗಿಯೇ ಹಾಕಬೇಕಿತ್ತು.  ಇವೆಲ್ಲವೂ ಸ್ವಲ್ಪ ಹೆಚ್ಚೇ ಹಾಕಿದ ಯಾವ ಅಡುಗೆ ತಾನೇ ರುಚಿಸದೇ ಇದ್ದಿತು. ಇವನ್ನು ಪ್ರತಿರೋಧಿಸಿ ಬದುಕಿದ ತರಕಾರಿ ಆದರೂ ಯಾವುದಿತ್ತು. ಬದುಕಬೇಕು ಅಂದರೆ ಸ್ವಲ್ಪ ಜೋರಾಗಿರುವುದು ಆವಶ್ಯಕ ನೋಡು, ಘಾಟು ಮುಖ್ಯ ಕಣೆ  ಅಂತ ಒಂಚೂರು ಹುಳಿ, ಮತ್ತು  ಜೀರಿಗೆಮೆಣಸು ಸ್ವಲ್ಪ ಜಾಸ್ತಿಯೇ ಹಾಕುತ್ತಿದ್ದಳು ಅಜ್ಜಿ. ಅದರಲ್ಲೂ ಈ ಚೋಟುದ್ದದ  ಜೀರಿಗೆ ಮೆಣಸಿನ ಖಾರಕ್ಕೆ ಬಗ್ಗದವರಾದರೂ ಯಾರು?

ಈ ಪತ್ರೊಡೆ ಮಾಡೋದು ಒಂದು ಹದ. ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆ ಮೆಂತ್ಯ, ಧನಿಯಾ ಬ್ಯಾಡಗಿ ಮೆಣಸಿನಕಾಯಿ, ಹುಣಸೇಹಣ್ಣು ಎಲ್ಲವನ್ನೂ ಸೇರಿಸಿ ಸ್ವಲ್ಪ ಗಟ್ಟಿಯಾಗಿಯೇ ರುಬ್ಬಿಕೊಳ್ಳಬೇಕು. ಆಮೇಲೆ ತೊಳೆದು ಒಣಗಿಸಿದ ಎಲೆಯ ಹಿಂಬಾಗದ ನಾರನ್ನು ತೆಳುವಾದ ಚಾಕುವಿನಿಂದ ನಾಜೂಕಾಗಿ ಕತ್ತರಿಸಬೇಕು. ಒಂದು ಎಲೆಯ ಮೇಲೆ ಇನ್ನೊಂದು ಎಲೆ ಸ್ವಲ್ಪವೂ ಅಲ್ಲಾಡದ ಹಾಗೆ ಕುಳಿತುಕೊಳ್ಳುವ ಹಾಗಾಗಬೇಕು. ಆಮೇಲೆ ಒಂದೊಂದೇ ಎಲೆಗೆ ಹಿಟ್ಟನ್ನು ಹಚ್ಚಿ ಒಂದರ ಮೇಲೊಂದು ಇತ್ತು ಒಂದು ನಾಲಕೈದು ಎಲೆ ಆದ ಮೇಲೆ ಅದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ.

ಹಾಗೆ ಬೆಂದ ಸುರಳಿಯನ್ನು ಗೋಲಾಕಾರವಾಗಿ ಕತ್ತರಿಸಿ ಕಾವಲಿಗೆ ಕಾದ ಬಳಿಕ ಕೊಬ್ಬರಿ ಎಣ್ಣೆ ಹಾಕಿ ಅದನ್ನು ಚೆನ್ನಾಗಿ ರೋಸ್ಟ್ ಮಾಡಿ ತಿನ್ನಲೂ ಬಹುದು, ಇಲ್ಲವಾದರೆ ಅದನ್ನು ಸಣ್ಣಗೆ ಹೆಚ್ಚಿ ಒಗ್ಗರಣೆಯಲ್ಲಿ ಬಾಡಿಸಿಯೂ ತಿನ್ನಬಹುದು. ಹೇಗೆ ಮಾಡಿದರೂ ಅದು ತನ್ನ ರುಚಿ ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಡಿಮೆ ಮಾಡಿಕೊಳ್ಳುವುದಿಲ್ಲ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಪತ್ರೊಡೆ ಮಾಡದ ಒಲೆಯಾದರೂ ಇದ್ದಿತಾ....

ಹಿಟ್ಟು ತಯಾರಿಸಿ ನೀರನ್ನು ಅಂಟಿಕೊಳ್ಳಲಾರೆ ಅಂತ ಜಂಬ ಪಡುತಿದ್ದ ಅದರ ಮೈಗೆಲ್ಲಾ ಹಚ್ಚುತ್ತಿದ್ದಳು. ತೆಳುವಾದರೆ ಜಾರಿಸಿಕೊಳ್ಳೋದು ಸುಲಭ, ದುರ್ಬಲರಿಂದ ಕಳಚಿಕೊಳ್ಳುವುದು ತುಂಬಾ ಸುಲಭ. ಎಲ್ಲವನ್ನೂ ಹಾಕಿ ಅರೆದ ಗಟ್ಟಿ ಹಿಟ್ಟನ್ನು ಕೊಡವಿಕೊಳ್ಳಲಾರದು. ದುರ್ಜನರಿಂದ ಬಿಡುಗಡೆ ಸುಲಭಕ್ಕೆ ದೊರಕಲಾರದು. ಹೀಗೆ ಒಂದೊಂದೇ ಎಲೆಗೆ ಹಿಟ್ಟು ಹಚ್ಚಿ, ಒಂದರ ಮೇಲೊಂದು ಇಟ್ಟು ಸುರಳಿ ಸುತ್ತಿ ಹಬೆಯಲ್ಲಿ ಬೇಯಿಸಿದರೆ ಅಲ್ಲಿಗೆ ಮುಕ್ಕಾಲು ಕೆಲಸ ಮುಗಿದಂತೆ. ಒಮ್ಮೆ ಬೆಂದ ಮೇಲೆ ಹಮ್ಮು ಬಿಮ್ಮುಗಳನ್ನು ಕಳೆದುಕೊಂಡು ಅದೂ ಮೆದುವಾಗಿರುತಿತ್ತು. ಕಾರ್ಪಣ್ಯದಲ್ಲಿ ಬೆಂದ ಮನುಷ್ಯರಂತೆ ಎಲ್ಲವಕ್ಕೂ ಸಿದ್ದವಾಗಿರುತಿತ್ತು.

ಮರಕೆಸು ಪತ್ರೊಡೆಗೆ ರುಚಿ ಜಾಸ್ತಿ. ಮರದ ಮೇಲೆ ಬೆಳೆಯುತ್ತಿದ್ದ ಇವನ್ನು ತಂದು ಮಾಡುವುದೇ ಜಾಸ್ತಿ. ಅದು ಸಿಗದಿದ್ದಾಗ ಮಾತ್ರ ಹೀಗೆ ಕರಿಕೆಸು ಅನಿವಾರ್ಯವಕ್ಕೆ ಸಿಲುಕುತಿತ್ತು. ಜಡಿ ಮಳೆಯಲ್ಲಿ, ಗದ್ದೆಯ ಕೆಲಸಗಳಲ್ಲಿ ಪೇಟೆಗೆ ಹೋಗಿ ತರಕಾರಿ ತರುವುದು ದೂರದ ಮಾತು, ಬೆಳೆಯುವುದು ಸಾದ್ಯವಿಲ್ಲದ ಕೆಲಸ. ಇಂಥ ಸಮಯದಲ್ಲಿ ಮಾಡಿಗೆ ಕಟ್ಟಿದ ಸೌತೆಕಾಯಿ, ಹೆಚ್ಚಿಟ್ಟ ಕಳಲೆ, ಒಣಗಿಸಿಟ್ಟ ಹಲಸಿನ ಬೀಜ, ಕಟ್ಟಿಟ್ಟ ದಿಂಡಿನರಸಗಳ ಜೊತೆಗೆ ಕೆಸುವೂ ಜೊತೆಗೂಡುತಿತ್ತು. ದಂಟಿನ ಕಾಯಿರಸ, ಸೊಪ್ಪಿನ ಗೊಜ್ಜು, ಗೆಡ್ಡೆಯ ಪಲ್ಯ ಹೀಗೆ ತನ್ನೆಲ್ಲಾ ಅಂಗಗಳನ್ನು ದಾನ ಮಾಡಿ ಹಸಿವನ್ನು ತಣಿಸುತಿತ್ತು.

ಇನ್ನು ಅಂಗಳದ ಬದಿಯಲ್ಲಿ, ಸೂರಂಕಣದ ಸಾಲಿನಲ್ಲೋ ನೆಟ್ಟಿರುತಿದ್ದ ಬಣ್ಣ ಬಣ್ಣದ ಕೆಸು ನೋಡುವುದಕಷ್ಟೇ ಚೆಂದ, ತಿನ್ನಲು ಯೋಗ್ಯವಲ್ಲ. ಬಣ್ಣ ಬಣ್ಣದ ಮಾತು ಕೇಳಲು ಮಾತ್ರ ಚೆಂದ ಅದರಿಂದ ಏನೂ ಪ್ರಯೋಜನವಿಲ್ಲ. ಬಣ್ಣ ಬಣ್ಣದ ವ್ಯಕ್ತಿತ್ವ ನೋಡಲಷ್ಟೇ ಮನೋಹರ. ಬದುಕಿಗೆ ಹಿತವಿಲ್ಲ. ಹಿಂದಿನ ಹಿತ್ತಲಲ್ಲಿ ಬೆಳೆದ ಕರಿ ಕೆಸು ಮಾತ್ರ ಬಹುಪಯೋಗಿ. ಬೆನ್ನಿಗೆ ಬಲವಾಗುವವರು ಮಾತ್ರ ಬದುಕಿಗೆ ಸಹಕಾರಿ. ಮಳೆ ಬಿದ್ದು ನೆಂದ ಕೆಸು ಹೆಚ್ಚು ರುಚಿ.

ರುಚಿ ಜಾಸ್ತಿ ನಿಜ ಆದರೆ ಅಷ್ಟೇ ಉಷ್ಣ. ಹಾಗಾಗಿ ಜಾಸ್ತಿ ತಿನ್ನುವ ಹಾಗಿಲ್ಲ.  ಮಳೆಗಾಲದ ಥಂಡಿಗೆ ದೇಹ ನಲುಗದಂತೆ ಕಾಪಾಡುತ್ತದೆ. ಮಳೆಯಲ್ಲಿ, ಗದ್ದೆಯಲ್ಲಿ ಸದಾ ನೀರಿನ ಜೊತೆಗೆ ಕೆಲಸ ಮಾಡುವವರನ್ನು ಶೀತ ತಾಗದಂತೆ ಕಾಯುತ್ತದೆ. ಹಾಗಾಗಿ ಇದು ಮಳೆಗಾಲಕ್ಕೆ ಅತ್ಯತ್ತಮ. ಬೇಸಿಗೆಗೆ ಸ್ವಲ್ಪ ಕಷ್ಟವೇ. ಯಾವುದನ್ನು ಯಾವಾಗ ಬಳಸಬೇಕೋ ಹಾಗೇ ಬಳಸಬೇಕು. ಅತಿಯಾದ ಬಳಕೆ ಸಲ್ಲ, ಅಕಾಲದ ಬಳಕೆಯೂ ಒಳ್ಳೆಯದಲ್ಲ. ಸಿಗುತ್ತೆ ಅಂದರೆ ಹೇಗೆ ಬೇಕೋ ಹಾಗೆ ಉಪಯೋಗಿಸುವ ಮನುಷ್ಯನಿಗೆ ಪಾಠ ಕಲಿಸಲು ಪ್ರಕೃತಿ ಹೇಗೆಲ್ಲಾ ಸನ್ನದ್ಧವಾಗಿರುತ್ತದೆ ನೋಡಿ.

ಆದರೂ ಈ ಕೆಸುವಿನ ವ್ಯಾಮೋಹದಿಂದ ಹೊರ ಬರುವುದು ಸುಲಭವಲ್ಲ.. ಅದು ಕಂಡ ಕೂಡಲೇ ನಾಲಿಗೆ ಚಡಪಡಿಸಿ ನೀರೂರಿಸುವುದು ನಿಲ್ಲುವುದಿಲ್ಲ. ಸರಿಯಾಗಿ ಬಳಸದಿದ್ದರೆ ಗಂಟಲು ಕೆರೆಯುವುದು ನಿಲ್ಲುವುದಿಲ್ಲ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...