ಕನ್ನಡಕ

ಇತ್ತೀಚಿಗೆ ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ಎಂದು ಹೋಗಿದ್ದೆ. ಒಳಹೋದವರು ಸಮಯದ ಅರಿವಿಲ್ಲದೆ ಗಂಟೆಗಟ್ಟಲೆ ಅದೇನು ಕೇಳ್ತಾರೋ, ಕೇಳೋಕಾದರೂ ಏನಿರುತ್ತೋ ಎಂದು ಆಲೋಚಿಸುತ್ತಿರುವಾಗಲೇ ಅಪ್ಪ, ಅಮ್ಮನ ಕೈ ಹಿಡಿದೋ, ಅವರ ಹಿಂದೋ ಅಥವಾ ಎಲ್ಲವನ್ನೂ ತೋರಿಸಿ ವಿವರಿಸುತ್ತಾ ಅವರ ಮುಂದೋ ಹೋಗುತ್ತಿದ್ದ ಮಕ್ಕಳನ್ನೇ ಕಣ್ಣು ಗಮನಿಸುತ್ತಿತ್ತು.ಬಣ್ಣ ಬಣ್ಣದ ಬಟ್ಟೆ ತೊಟ್ಟ ಸಾಗುವ ಅವರು ಚಿಟ್ಟೆಯನ್ನು ನೆನಪಿಸುತಿದ್ದರು.ಅದೇನು ವರ್ಣವೈವಿಧ್ಯ, ಅದೇನು ನವಿರುತನ, ಅದ್ಯಾವ ಪರಿ ಮೋಹಕತೆ ಅಂತ ಮೈ ಮರೆಯುವಾಗಲೇ ಯಾವುದೋ ಅಂದದ ಚಿಟ್ಟೆಗೆ ದಾರಕಟ್ಟಿ ಬಿಟ್ಟಂತೆ ಕನ್ನಡಕ ಹೊತ್ತ ಮುಖಗಳು ನಡುವೆ ಕಂಡವು.

ಒಬ್ಬಿಬ್ಬರಲ್ಲ ಅದೆಷ್ಟು ಪುಟಾಣಿಗಳು ಮೂಗಿನ ಮೇಲೊಂದು ಬಣ್ಣದ ಫ್ರೇಮ್ ಹೊತ್ತಿವೆ ಎಂದು ಗಮನಿಸಿದಾಗ ಎದೆಯಲ್ಲಿ ಸಣ್ಣ ಸಂಕಟ. ಇಷ್ಟು ಚಿಕ್ಕ ವಯಸ್ಸಿಗೆ ದೃಷ್ಟಿ ಮಂದವಾಗುವುದು ಹೇಗೆ ಅನ್ನೋ ಭೂತಾಕಾರದ ಪ್ರಶ್ನೆ. ಎಷ್ಟೆಷ್ಟು ಸೌಲಭ್ಯಗಳು, ವೈದ್ಯಕೀಯ ಆವಿಷ್ಕಾರಗಳು, ವೈಜ್ಞಾನಿಕ ಪ್ರಗತಿಯ ಜೊತೆಜೊತೆಗೇ ಈ ಸಮಸ್ಯೆಯೂ ಬೆಳೆದಿದ್ದು ಹೇಗೆ?

ಚಿಕ್ಕವರಿದ್ದಾಗ ಇದೊಂದು ಚೂರು ಸೂಜಿಗೆ ದಾರ ಪೋಣಿಸಿ ಕೊಡು ಅನ್ನುತ್ತಿದ್ದ ಅಜ್ಜಿ ಎಳೆಬಿಸಿಲಲ್ಲಿ ಕಣ್ಣಿನಿಂದ ಮಾರು ದೂರ ಹಿಡಿದು ರಾಮಾಯಣವನ್ನೋ ಮಹಾಭಾರತವನ್ನೋ ಓದುತ್ತಿದ್ದಳು. ಸುಮ್ನೆ ನನ್ನತ್ರ ಕೆಲಸ ಮಾಡಿಸೋಕೆ ಕಣ್ಣು ಕಾಣಿಸೋಲ್ಲ ಅಂತ ನಾಟಕ ಮಾಡ್ತಿಯಾ ಅಂತ ಜಗಳವಾಡುತಿದ್ದೆ. ಬಹುತೇಕ ವಯಸ್ಸಾದವರು ಸೂಕ್ಷ್ಮ ಕೆಲಸಗಳನ್ನು ಬಿಟ್ಟು ಓದುವುದು, ನೋಡುವುದು ಎಲ್ಲವನ್ನೂ ಕನ್ನಡಕಗಳ ಸಹಾಯವಿಲ್ಲದೆ ಮಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಇಷ್ಟೊಂದು ಸಂಖ್ಯೆಯ ಕನ್ನಡಕಗಳು ಬಂದ್ದಿದ್ದಾದರೂ ಎಲ್ಲಿಂದ? ಅವು ಮಕ್ಕಳನ್ನು ಆಕರ್ಷಿಸಿದ್ದು ಹೇಗೆ?

ಹೈ ಸ್ಕೂಲ್ ನ ದಿನಗಳವು. ಆಗಾಗ ಕಾಡುವ ತಲೆನೋವಿಗೆ ಡಾಕ್ಟರ್ ಬಳಿ ಹೋದಾಗ ಮಾತ್ರೆ ಬೇಕಾ ಕನ್ನಡಕವಾ ಎಂದು ಕೇಳಿದಾಗ ಮನಸ್ಸು ಅಪ್ರಯತ್ನವಾಗಿ ಕನ್ನಡಕವನ್ನೇ ಬಯಸಿತ್ತು. ಅದು ಪರಿಹಾರ ಅನ್ನೋದಕ್ಕಿಂತ ಫ್ಯಾಷನ್ ಎನಿಸಿ ಸಂಭ್ರಮವಾಗಿತ್ತು. ಒಂದೆರೆಡು ದಿನ ಕಳೆಯುವುದರೊಳಗೆ ಮೂಗಿನ ಮೇಲೆ ಅದು ಅಸ್ತಿತ್ವ ಸ್ಥಾಪಿಸಿದ ರೀತಿಗೆ ಕಿವಿಗಳನ್ನು ಹಿಡಿದುಕೊಳ್ಳುವ ಪರಿಗೆ ಕಿರಿಕಿರಿ ಹುಟ್ಟಿಸಿತ್ತು. ಸಹವಾಸ ಸಾಕು ಅನ್ನಿಸಿತ್ತು. ಅದು ಎಂಥಹುದೇ ಅಪ್ಪುಗೆಯಾಗಿರಲಿ ಅದು ಕ್ಷಣಕಾಲ ಮಾತ್ರ ಖುಷಿ ಕೊಡುತ್ತದೆ ನಂತರ ಉಸಿರುಗಟ್ಟಿಸುತ್ತದೆ.ಹೀಗಿರುವಾಗ ಜೀವಮಾನ ಪೂರ್ತಿ ಅದನ್ನು ಅನಿವಾರ್ಯ ಕರ್ಮ ಎಂಬಂತೆ ಹೊರಬೇಕಾದಾಗ ಆ ಮಕ್ಕಳಿಗೆ ಹೇಗನ್ನಿಸಬಹುದು?

ಇವತ್ತಿಗೂ ಶಿಸ್ತು ಎಂದು ನೆನಪಾದಾಗ ಕಣ್ಣೆದೆರು ಮೊದಲು ಬರುವುದು ಕನ್ನಡಕ ಹಾಕಿಕೊಂಡು ಗಂಟಿಕ್ಕಿದ ಮುಖ ಹೊತ್ತ ಸರ್ ಅಥವಾ ಮೇಡಂ ಚಿತ್ರ. ಮೂಗಿನ ಮೇಲಿರುವ ಕನ್ನಡಕ ತಾನು ಕೂರುವಾಗ ಅಲ್ಲಿದ್ದ ಕೋಪವನ್ನು ತುದಿಗೆ ತಳ್ಳುತ್ತೇನೋ ಅದಕ್ಕೆ ಅವರಿಗೆ ಮೂಗಿನ ತುದಿಯೇ ಕೋಪ ಹಾಗೂ ಮುಖ ಸದಾ ಗಡುಸಾಗಿರುತ್ತೆ ಅಂತ ಸಂಶೋಧನೆ ಮಾಡಿ ಬೀಗಿದ್ದಲ್ಲದೆ ಅದೇ ಅಂತಿಮ ಸತ್ಯ ಎಂದೇ ನಂಬಿದ್ದ ಕಾಲವದು.ಬೆಳಿಗ್ಗೆ ಏಳುತಿದ್ದ ಹಾಗೆಯೇ ಕನ್ನಡಕ ಅರಸುವ, ರಾತ್ರಿ ಮಲಗುವವರೆಗೂ ಅದನ್ನು ಹೊತ್ತು ತಿರುಗುವ ಈ ಮಕ್ಕಳಲ್ಲೂ ಅರ್ಥವಾಗದ ಗಂಭೀರತೆ ತಂತಾನೇ ಏರುತ್ತದಾ? ಅದಿಲ್ಲದೆ ಸಹಜವಾಗಿ ನೋಡಲಾಗದ ಕೊರಗು ಕಾಡುತ್ತದಾ...

ಕಣ್ಣಿಗೆ ಕನ್ನಡಕ ಹಾಕಿಕೊಂಡಷ್ಟೇ ಸುಲಭವಾಗಿ ಮನಸ್ಸಿಗೂ ಹಾಕಿಬಿಟ್ಟಿದ್ದೇವಾ? ಅವೆರೆಡೂ ಬದುಕಿನ ಅನಿವಾರ್ಯ ಭಾಗವಾಗಿದ್ದು ಯಾವಾಗ? ಸಹಜ ನೋಟ, ಸಹಜ ಚಿಂತನೆ, ಸಹಜ ಬದುಕು ಇವೆಲ್ಲವೂ ನಿಧಾನವಾಗಿ ಮರೆಯಾಗುತ್ತಿದೆಯಾ... ಸ್ವಾತಂತ್ರದ ಹೆಸರಲ್ಲೇ ನಾವು ಇನ್ಯಾವುದರದೋ ಮೇಲೆ ಅವಲಂಬಿತವಾಗುತ್ತಿದ್ದೆವಾ. ಒಂದು ಕನ್ನಡಕ ತನ್ನ ಜೊತೆ ಜೊತೆಗೆ ಹಲವಾರು ಕನ್ನಡಕಗಳ ಸಾಲನ್ನು ಹೊತ್ತು ತರುತ್ತದಾ...

ಈಗಂತೂ ಬೀದಿಗೊಂದು ಕಣ್ಣಿನ ಆಸ್ಪತ್ರೆಗಳಿವೆ. ಇರುವ ಎರಡು ಕಣ್ಣಿಗೆ ಇಪ್ಪತ್ತು ತರಹದ ತಜ್ಞರಿದ್ದಾರೆ. ಒಂದೊಂದು ತೊಂದರೆಗೂ ಒಂದೊಂದು ಡಿಗ್ರಿಗಳಿವೆ.ಇಷ್ಟೆಲ್ಲಾ ಇದ್ದೂ ಸಮಸ್ಯೆ ಹೆಚ್ಚಿದ್ದು ಯಾಕೆ? ಯಾವುದೇ ಅಂಗವನ್ನು ಉಪಯೋಗಿಸುವುದು ಕಡಿಮೆ ಆದ ಹಾಗೆ ಅದು ಕ್ಷೀಣಿಸುತ್ತಾ ಹೋಗುತ್ತದಂತೆ. ದೇಹದ ಜೀವಕೊಶಗಳೂ ಹಾಗೆ ಚಲನೆಯೇ ಇಲ್ಲದಿದ್ದರೆ ಮುದುಡುತ್ತಾ ಹೋಗುತ್ತವಂತೆ. ಹಾಗೆ ಮುದುಡುತ್ತಾ ಹೋದಂತೆ ನಿಶಕ್ತಗೊಳ್ಳುತ್ತವೆ. ಕಣ್ಣುಗಳೂ ಹೀಗೆ ಆದವಾ... ಅವುಗಳ ನೋಟವನ್ನು ನಾವಾಗಿಯೇ ಮಿತಿಗೊಳಿಸುತ್ತಾ ಹೋಗುತ್ತಿದ್ದೆವಾ....

ಚಿಕ್ಕವರಿದ್ದಾಗ ಮಕ್ಕಳು ಮನೆಯೊಳಗೇ ಬೆಳೆಯುತ್ತಿದ್ದಕ್ಕಿಂತ ಹೊರಗೆ ಇರುತಿದ್ದದ್ದೇ ಜಾಸ್ತಿ. ಪ್ರಕೃತಿಯೇ ಆಟದ ಸಾಮಾನುಗಳಾಗಿದ್ದ ಕಾಲ. ದೂರದಲ್ಲಿ ಪಟಪಟಿಸಿ ರೆಕ್ಕೆ ಬಿಚ್ಚಿ ಹಾರುತಿದ್ದ ಹಕ್ಕಿಯನ್ನೋ, ಮೇಲಕ್ಕೆ ಏರುತಿದ್ದ ಗಾಳಿಪಟವನ್ನೋ, ಅಷ್ಟು ದೂರದಲ್ಲಿ ಪೇರಿಸಿಟ್ಟ ಕಲ್ಲೋ ಅಥವಾ ಕಾಯಿಚಿಪ್ಪು ಬೀಳಿಸುವ ಲಗೊರಿಯೋ ದೃಷ್ಟಿಯನ್ನು ಹಿಗ್ಗಿಸಿ ನೋಡುವ ಹಾಗೆ ಮಾಡುತಿತ್ತು. ಆ ಮೂಲೆಯಲ್ಲಿ ನಿಂತು ಹೊಂಚುಹಾಕಿ ಲಗೋರಿ ಕೂಗಲು ಕಾಯುತ್ತಿದ್ದವರನ್ನು ಹೊಡೆದು ಸೋಲಿಸಲು ಕಣ್ಣು ಹಿಗ್ಗಿ ದೂರವನ್ನು ಲೆಕ್ಕ ಹಾಕಬೇಕಿತ್ತು. ನಡೆದು ಹೋಗುವಾಗ ತಿರುವಿನಲ್ಲಿ ಪಕ್ಕನೆ ಮಾಯವಾಗುವ ಯಾವುದೋ ಪ್ರಾಣಿಯನ್ನು ಗುರುತಿಸಲು ಮೈಯೆಲ್ಲಾ ಕಣ್ಣಾಗಬೇಕಿತ್ತು.

ಅಲ್ಲೆಲ್ಲೋ ಸದ್ದು ಮಾಡಿಕೊಂಡು ಬರುತಿದ್ದ ಬಸ್ ನೋಡಲು  ಕೈ ಅಡ್ಡಇಟ್ಟು ಕಣ್ಣು ಕಿರಿದು ಮಾಡಿಕೊಂಡು ದೃಷ್ಟಿ ಹಿಗ್ಗಿಸಿ ನೋಡಬೇಕಿತ್ತು. ಯಾವ ಮರದ ಯಾವ ಕೊಂಬೆಯಲ್ಲಿ, ಗೆಲ್ಲಿನಲ್ಲಿ ಎಲೆಗಳ ನಡುವೆ ಅಡಗಿ ಕುಳಿತ ಹಣ್ಣನ್ನು ಹುಡುಕಿ ತೆಗೆಯಬೇಕಿತ್ತು. ಯಾವ ಮರದ ಹಿಂದೋ, ಮೂಲೆಯಲ್ಲೋ ಅಡಗಿ ಕುಳಿತವರನ್ನು ಕಣ್ಣು ಮುಚ್ಚಾಲೆ ಆಟದಲ್ಲಿ ಹಿಡಿಯಬೇಕಿತ್ತು.  ಆಡುವ ಚಿನ್ನಿದಾಂಡು ಎಷ್ಟು ದೂರ ಹೋಗಿದೆ ಎಂದು ಅಲ್ಲೇ ನಿಂತು ಹೇಳಬೇಕಿತ್ತು. ಹೊಡೆದ ಚೆಂಡು ಎಲ್ಲಿ ಬಿದ್ದಿದೆ ಎಂದು ನಿಂತಲ್ಲೇ ಅಂದಾಜಿಸಿ ಹುಡುಕಬೇಕಿತ್ತು. ಎಷ್ಟೊಂದು ದೂರದೃಷ್ಟಿ ಇತ್ತು. ಅದು ಗೊತ್ತಿಲ್ಲದೇ ಕಲಿಸುತಿದ್ದ ಪಾಠ ಎಷ್ಟೊಂದಿತ್ತು. ಈ ದೂರದೃಷ್ಟಿ ನಮ್ಮನ್ನು ಎಷ್ಟು ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತಿತ್ತು.

ಹಬ್ಬಿದ ಆಕಾಶ, ಮೊರೆವ ಕಡಲಿನ ವಿಸ್ತಾರ ಅಳೆಯುತ್ತಾ, ಚುಕ್ಕೆಯಿಟ್ಟ ನಕ್ಷತ್ರಗಳ ರಂಗೋಲಿ ಬಿಡಿಸುತ್ತಾ, ಕುಳಿತಲ್ಲಿಂದಲೇ ಬಂದವರು ಯಾರು ಎಂದು ಗುರುತು ಹಿಡಿಯುತ್ತಾ, ಗದ್ದೆಯ ಕೊಗಿನ ಆ ಮೂಲೆಯಲ್ಲಿ ಮೇಯುತ್ತಿರುವ ಕೆಂಪಿಯ ಕರುವನ್ನು ಗುರುತಿಸುತ್ತಾ ಕಣ್ಣನ್ನು ಹಿಗ್ಗಿಸುವ, ನೋಟವನ್ನು ವಿಶಾಲಗೊಳಿಸುವ ಕ್ರಿಯೆ ಕಡಿಮೆಯಾಗುತ್ತಾ ಹೋದ ಹಾಗೆ ನೋಟವೂ ದುರ್ಬಲವಾಗುತ್ತಿದೆಯೇ? ನಂಗೆ ಇನ್ನೂ ಹೇಗೆ ಆಪರೇಟ್ ಮಾಡ್ಬೇಕು ಅಂತಾನೆ ಗೊತ್ತಿಲ್ಲ ಇವ್ಳು ನೋಡಿ ಎಲ್ಲವೂ ಗೊತ್ತಿದೆ ಎಂದು ಮೊಬೈಲ್ ಹಿಡಿದು ಆಡುವ ಮಗು ನಮಗೆ ಹೆಮ್ಮೆ ಅನ್ನಿಸುತ್ತಿದೆ. ತನ್ನ ಪಾಡಿಗೆ ಕಂಪ್ಯೂಟರ್ ತೆರೆಯ ಮೇಲೋ, ಟ್ಯಾಬ್ ಮೇಲೋ ಕಣ್ಣುಕೀಲಿಸಿ ಆಡುವ ಮಗು ಎಷ್ಟು ಸಮಾಧಾನಿ, ತುಂಟನಲ್ಲ ಎಂದು ಸಂತೋಷವಾಗುತ್ತಿದೆ.

ಶಾಲೆಯಿಂದ ಬಂದ ಕೂಡಲೇ ಕಣ್ಣೆದೆರು ಪುಸ್ತಕ ಹಿಡಿದು ಸಣ್ಣ ಅಕ್ಷರಗಳನ್ನ ಗಂಟೆಗಟ್ಟಲೆ ಓದುವ ಮಗು ಬುದ್ಧಿವಂತ ಅನ್ನುವುದಕ್ಕಿಂತ ಒಳ್ಳೆಯ ಮಗು ಎನಿಸುತ್ತಿದೆ. ಟಿ.ವಿ.ಯ ಮುಂದೆ ಕುಳಿತು ಕೊಟ್ಟಿದ್ದನ್ನು ತಿಂದು ಹೋಗುವ ಮಗು ಚೂರೂ ರಗಳೆಯಿಲ್ಲ ಎನ್ನುವ ಭಾವ. ತನ್ನ ಪಾಡಿಗೆ ಟಿ.ವಿ ನೋಡ್ಕೊಂಡು, ಮೊಬೈಲ್ ಅಲ್ಲಿ ಆಟ ಆಡ್ಕೊಂಡು ಇರುವ ಮಗು ಪಾಲಕರಿಗೆ ತೊಂದರೆ ಕೊಡದ ಮಗು ಎಂಬ ಪ್ರಶಸ್ತಿ ಬಾಚಿಕೊಂಡಿದೆ. ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡುವವರು ದೇವರಂತೆ ತಾನೇ. ಆ ದೇವರು ಗುಡಿಯೊಳಗೆ ಕುಳಿತು ಕಂಡೂ ಕಾಣದಂತೆ ಇದ್ದರೆ ಈ ದೇವರುಗಳು ಕಾಣುವ ದೃಷ್ಟಿಯನ್ನು ತಮಗರಿವಿಲ್ಲದೆ ಸೀಮಿತಗೊಳಿಸಿಕೊಳ್ಳುತ್ತಿದ್ದಾವಾ? ದೃಷ್ಟಿ ಸೀಮಿತವಾದ ಹಾಗೆ ಬದುಕೂ ಸೀಮಿತವಾಗುತ್ತಿದೆಯಾ...

ಅಂಕಗಳಿಸುವ ಒತ್ತಡ, ಹೊರಗೆ ಹೋಗಿ ಆಡಲಾಗದ ಸನ್ನಿವೇಶ, ಸೂಕ್ತ ಪರಿಸರದ ಕೊರತೆ, ಅತಿಯಾದ ನಾಗರಿಕತೆ ದೂರ ದೃಷ್ಟಿಯನ್ನು ನಿಧಾನಕ್ಕೆ ಮರೆಸಿ ಕೇವಲ ಸಮೀಪ ದೃಷ್ಟಿಗಷ್ಟೇ ಸೀಮಿತವಾಗುವ ಹಾಗೆ ಮಾಡುತ್ತಿದೆಯಾ? ನೋಟ ಕೇವಲ ದೈಹಿಕ ಕ್ರಿಯೆಯಲ್ಲ, ಹೊರನೋಟಕ್ಕೆ ಮಾತ್ರ ಸಂಬಂಧ ಪಟ್ಟಿದ್ದೂ ಅಲ್ಲ. ಅದು ಪ್ರಕೃತಿಯೊಡನೆ ಜೀವದ ಸ್ಪಂದನ. ಒಳ ಪ್ರಪಂಚದ ಕೀಲಿಕೈ. ನೋಟ ಸೂಕ್ಷ್ಮವಾದಷ್ಟೂ ಬದುಕಿನ ಆಳ ಅರ್ಥವಾಗುತ್ತದೆ. ಆಳ ಅರ್ಥವಾದಷ್ಟೂ ಮೌಲ್ಯ ಹೆಚ್ಚುತ್ತದೆ. ನೋಟ ಅಭಿವ್ಯಕ್ತಿಸುವಷ್ಟು ಇನ್ಯಾವುದೂ ಮಾಡಲಾರದು. ನೋಟಕ್ಕೊಂದು ತೆರೆ ಎಂದರೆ ಅಲ್ಲೊಂದು ಗೆರೆ ಎಂದೇ ಅರ್ಥ. ಗೆರೆ ಎಂದ ಕೂಡಲೇ ಅಲ್ಲೊಂದು ಅಂತರ. ಬೆಸೆಯುವುದನ್ನ ಬೇರೆಮಾಡುವ ಅದೃಶ್ಯ ಮಾಂತ್ರಿಕ.

ನಾವೆಷ್ಟು ಆರೋಗ್ಯವಂತರು ಎನ್ನುವುದರ ಮೇಲೆ ನಮ್ಮ ಮುಂದಿನ ಪೀಳಿಗೆಯ ಶಕ್ತಿ, ಸಾಮರ್ಥ್ಯ ಅಡಗಿದೆ ಅನ್ನೋದು ವಿಜ್ಞಾನವೂ ಸಾಬೀತುಮಾಡಿದ ಸತ್ಯ.  ಹಾಗಾಗಿ ಈ ತೊಂದರೆಗೆ ಪರಿಹಾರ ಹುಡುಕಬೇಕಾಗಿದ್ದು ಆದ್ಯ ಕರ್ತವ್ಯ. ತಲೆಮಾರಿನಿಂದ ತಲೆಮಾರಿಗೆ ಇದು ಪ್ರವಹಿಸಿದರೆ ದೃಷ್ಟಿ ಮಂಕಾಗುತ್ತಾ ಹೋದರೆ ಮುಂದಿನ ಪೀಳಿಗೆ ನೋಟ ಸೀಮಿತವಾಗುತ್ತಾ ಒಂದು ದಿನ ಬೆಳಕು ನೋಡುವ ಶಕ್ತಿಯೇ ಕ್ಷೀಣಿಸಿ ಹೋಗಬಹುದಾ.. ಕನ್ನಡಕ ಕೇವಲ ಆ ಕ್ಷಣದ ಸಮಾಧಾನವೇ ಹೊರತು ಪರಿಹಾರವಲ್ಲ. ಅದೊಂದು ಅನಿವಾರ್ಯ ಕರ್ಮವೇ ಹೊರತು ಬೇರೇನಲ್ಲ. ಇನ್ನು ಕಣ್ಣುಗಳ ರಚನೆಯಲ್ಲಿಯೇ ದೋಷವಿದ್ದರೆ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಹೊಣೆ ನಮ್ಮ ಮೇಲಿದೆ..

ಸಂಶೋಧನೆಯ ಜೊತೆಗೆ ಪ್ರಯತ್ನವೂ ಬೇಕಾಗಿದೆ. ಆದಷ್ಟು ದೃಷ್ಟಿಯನ್ನು ವಿಶಾಲಗೊಳಿಸುವುದನ್ನ ಮೊದಲು ನಾವು ಕಲಿಯಬೇಕಾಗಿದೆ. ಅದಾಗ ಬೇಕಾದರೆ ನಾವು ಮೊದಲು ಕುಳಿತಲ್ಲಿಂದ ಎದ್ದು ಹೊರಗೆ ಬರಬೇಕಾಗಿದೆ. ಅನಂತ ಆಕಾಶವನ್ನು ದಿಟ್ಟಿಸಿ ನೋಡಲು ಕಲಿಯಬೇಕಾಗಿದೆ. ಹಾರುವ ಹಕ್ಕಿಯನ್ನು, ಹರಿಯುವ ನೀರನ್ನು, ಅದ್ಯಾವುದೋ ತಿರುವಿನಲ್ಲಿ ಮೆಲ್ಲನೆ ಮಾಯವಾಗುವ ಬಸ್ಸನ್ನು ಗಮನಿಸಬೇಕಿದೆ. ಇವೆಲ್ಲವನ್ನೂ ಮಾಡಬೇಕಾದರೆ ಮತ್ತೆ ಬಂಧನದಿಂದ ಬಯಲಿಗೆ ಬರಬೇಕಿದೆ. ಒಮ್ಮೆ ನಾವು ಬಯಲಿಗೆ ಬಂದರೆ ಹಿಂದೆಯೇ ಮಕ್ಕಳೂ ಬರುತ್ತಾರೆ. ಬಯಲಿನಲ್ಲಿ ಮಾತ್ರ ಬದುಕು ಸುಂದರ.

ಕೊನೆಪಕ್ಷ ನಮ್ಮ ಮಕ್ಕಳಿಗಾದರೂ ನಾವು ಇಷ್ಟನ್ನ ಮಾಡಬಹುದಾ...  ಅವರನ್ನು ಬಂಧಿಸದೆ ಬಯಲಿಗೆ ಬಿಡಬಹುದಾ... ಅವರ ಕಣ್ಣೆದೆರು ಅನಂತ ಆಕಾಶ, ಅವಕಾಶ ಎರಡೂ ತೆರೆದಿಡಬಹುದಾ...  ಹಾಗೆ ಬಯಲು ಅರ್ಥವಾದಾಗಲೇ ನಾವೂ ಬಯಲೇ ಆಗುತ್ತೆವಾ... ಕನ್ನಡಕ ತೆಗೆದಿಟ್ಟು ಆಲೋಚಿಸಬೇಕಿದೆ.   

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...