ಡಿಜಿಟಲ್ ಇಂಡಿಯಾ (ನಿಧಾನವೇ ಪ್ರಧಾನ , ವೇಗವೇ ಪ್ರಧಾನಿ...

ಮೊನ್ನೆ ಮೊನ್ನೆ ಪೇಪರ್ ನಲ್ಲೊಂದು ಸುದ್ದಿ. ಇನ್ನು ಮೇಲೆ ವೀಸಾ ಕೊಡಲು ಫೇಸ್ಬುಕ್ ಸ್ಟೇಟಸ್ ಗಳನ್ನೂ ಸಹ ಗಮನಿಸಿ ವಿರೋಧವಾಗಿ ಬರೆದವರಿಗೆ ನಿರಾಕರಿಸಲಾಗುತ್ತದೆ ಎಂದು. ಈ ರೂಲ್ ಸ್ಟ್ರಿಕ್ಟ್ ಆಗಿ ಫಾಲೋ ಮಾಡೋ ಮುನ್ನ ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರಬೇಕು ಆಮೇಲೆ ನಿರ್ಬಂಧ ವಿಧಿಸಿದರೆ ಏನು ಮಾಡೋದು ಅಂತ ಯೋಚಿಸಿ ಪಾಸ್ಪೋರ್ಟ್ ಗೆ ಅಪ್ಲೈ ಮಾಡಿದ್ದಾಯ್ತು. ಈಗ ಮೊದಲಿನ ಹಾಗೆ ಏಜೆಂಟ್ ಹುಡುಕಿ ಅಪ್ಲಿಕೇಶನ್ ಬರೆದು ಅದನ್ನು ಕೊಟ್ಟು ಅವರು ಯಾವಾಗ ಕರಿತಾರೋ ಅಂತ ಕಾಯೋ ಕೆಲಸ, ಶ್ರಮ ಎರಡೂ ಇಲ್ಲ.

ಆನ್ಲೈನ್ ನಲ್ಲಿ ಅಪ್ಲಿಕೇಶನ್ ತುಂಬಿದರೆ ಯಾವತ್ತು ಬರಬೇಕು ಅನ್ನೋ ಮೆಸೇಜ್ ಮೊಬೈಲ್ ಗೋ ಮೇಲ್ ಬಾಕ್ಸ್ ಗೋ ಬಂದು ಬೀಳುತ್ತದೆ. ಹಾಗೆ ನಮಗೆ ಬೆಳಿಗ್ಗೆ 9 ಗಂಟೆಗೆ appointment ಸಿಕ್ಕಿತ್ತು. ಇನ್ನು ಒಳಗೆ ಹೋದಮೇಲೆ ಎಷ್ಟು ಹೊತ್ತೋ ಎಂದು ಗೊಂದಲದಲ್ಲೇ ಹೋದರೆ ಆಗಲೇ ಹನುಮಂತನ ಬಾಲವನ್ನೂ ಮೀರಿಸುವ ಕ್ಯೂ. ಇವತ್ತು ಆದ ಹಾಗೆ ಅಂತ ಗೊಣಗುತ್ತಲೇ ಸಾಲಿನಲ್ಲಿ ನಿಂತರೆ ಗಡಿಯಾರದ ಮುಳ್ಳು ಅದಾಗಲೇ 8.50 ತೋರಿಸುತಿತ್ತು. ಮುಂದೆ ನೋಡಿದರೆ ಸುಮಾರು ಜನ. ಟೈಮ್ ಮೀರಿದರೆ ಒಳಗೆ ಹೋಗಲು ಬಿಡ್ತಾರೋ ಇಲ್ವೋ ಇವತ್ತು ಹಾಗಿದ್ರೆ ಕೆಲಸ ಆಗಲಿಕ್ಕಿಲ್ಲ ಅಂತ ಅನ್ನಿಸಿ ಯಾವುದಕ್ಕೂ ಒಮ್ಮೆ ಕೇಳಿಯೇ ಬಿಡುವ ಅಂತ ಸೆಕ್ಯೂರಿಟಿ ಹತ್ತಿರ ಹೋಗಿ ಮೇಲ್ ತೋರಿಸಿದರೆ ಈಗ ನಿಮ್ಮ ಬ್ಯಾಚ್ ಇರೋದು ಅಂತ ಒಳಗೆ ಬಿಟ್ಟರು.

ಇಂತಿಷ್ಟು ಜನಗಳಿಗೆ ಒಂದು ಬ್ಯಾಚ್. ಅದು ಒಮ್ಮೆ ಒಳಗೆ ಹೋಗುವ ತನಕ ಇನ್ನೊಂದು ಬ್ಯಾಚ್ ಗೆ ಪ್ರವೇಶವಿಲ್ಲ. ಹಾಗಾಗಿ ಒಳಗೆ ದೊಂಬಿಯಿಲ್ಲ. ಒಳಗೆ ಹೋಗುತ್ತಿದ್ದ ಹಾಗೆ ಟೋಕನ್ ಪಡೆದು ಒಂದೊಂದೇ ಸೆಕ್ಷನ್ ಮುಗಿಸಿ ಹೊರಗೆ ಬರುವಾಗ ಹತ್ತು ಗಂಟೆ. ಕೇವಲ ಒಂದು ಗಂಟೆಯೊಳಗೆ ಎಲ್ಲಾ ಪ್ರೊಸೀಜರ್ ಮುಗಿದೇ ಹೋಗಿತ್ತು. ಅರೆ ಪಾಸ್ಪೋರ್ಟ್ ಮಾಡಿಸೋದು ಇಷ್ಟು ಸುಲಭವಾ ಅನ್ನೋ ಸಣ್ಣ ಅಚ್ಚರಿ ತುಂಬಿಕೊಂಡಿತ್ತು. ಇಡೀ ಆಫೀಸ್ ಸಿಬ್ಬಂದಿ ನಮ್ರವಾಗಿ ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತಿದ್ದರು. ಎಲ್ಲೂ ಅಸಹನೆ, ಕೋಪ ಇರಲಿಲ್ಲ.

ಸಂಜೆಯೊಳಗೆ ಟಣ್ ಎಂಬ ನೋಟಿಫಿಕೇಶನ್ ಸದ್ದು. ನೋಡಿದರೆ ಪೋಲಿಸ್ verification ಗೆ ಹೋಗಿದೆ ಅನ್ನೋ ಸುದ್ದಿ ಮೊಬೈಲ್ ಪರದೆಯ ಮೇಲೆ ಅನಾವರಣ ಆಗುತಿತ್ತು. ಒಹ್ ಇಷ್ಟು ಫಾಸ್ಟ್ ಆಗಿ ಕೆಲಸ ಆಗ್ತಾ ಇದೆಯಾ ಪರವಾಗಿಲ್ಲ ಇನ್ನು ಈ ಪೋಲಿಸ್ ನವರು ಏನು ಮಾಡ್ತಾರೋ, ಆಟ ಆಡಿಸ್ತಾರೆನೋ ಅಂದು ಕೊಳ್ಳುವಾಗಲೇ ಮುಂದಿನ ಸಾಲು ಕಣ್ಣಿಗೆ ಬಿತ್ತು. ಮೂರು ವಾರಗಳಾದರೂ ಪೋಲಿಸ್ ನವರು ಬಂದಿಲ್ಲ, ಅವರಿಂದ ಯಾವ ಸುದ್ದಿಯೂ ಇಲ್ಲವೆಂದರೆ ನೀವೇ ಹೋಗಿ ಅವರನ್ನ ಕಾಂಟಾಕ್ಟ್ ಮಾಡಿ ಎಂದಿತ್ತು. ಅಲ್ಲಿಗೆ ಈ ದೇಶದ ವ್ಯವಸ್ಥೆ ಇಷ್ಟೇ ಇನ್ನು ಕಾಯೋದು ಬಿಟ್ಟು ಇನ್ನು ಏನೂ ಉಳಿದಿಲ್ಲ ಅಂತ ತೆಪ್ಪಗಾಗಿದ್ದೆ.

ಮರುದಿನ ರಾತ್ರಿ ಫೋನ್ ಬಂತು. ನೋಡಿದರೆ ಪೋಲಿಸ್ ಸ್ಟೇಷನ್ ನಿಂದ. ನಾಳೆ ಬರ್ತಾ ಇದೀವಿ ಅನ್ನೋ ಸುದ್ದಿ. ಬೆಳಿಗ್ಗೆ ಎಂಟು ಗಂಟೆಯ ವೇಳೆಗೆಲ್ಲಾ ಟ್ಯಾಬ್ ಹಿಡಿದ ಪೋಲಿಸ್. ಎಲ್ಲವನ್ನೂ ಪರೀಕ್ಷಿಸಿ ಆನ್ಲೈನ್ ನಲ್ಲೆ ಎಲ್ಲವನ್ನೂ ಅಪ್ಡೇಟ್ ಮಾಡಿ ಇನ್ನೊಂದು ವಾರದಲ್ಲಿ ನಿಮಗೆ ಪಾಸ್ಪೋರ್ಟ್ ಬರುತ್ತೆ ಮೇಡಂ ಅಂದಾಗ ಜಗತ್ತಿನ ಎಂಟನೆ ಅದ್ಭುತವೇನೋ ಇದು ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಅನ್ನೋ ನಂಬಿಕೆ ನಮ್ಮದು. ದೇವರ ಕೆಲಸವಲ್ಲವಾ ಅವನಿಗೇನು ಅರ್ಜೆಂಟ್ ಎಂದು ನಿಧಾನಕ್ಕೆ ಮಾಡೋ ಮನಸ್ಥಿತಿಯೂ ನಮ್ಮದೇ. ಎಷ್ಟೋ ಸಲ ಸ್ಟೇಷನ್ ಅಲ್ಲೇ ಕುಳಿತು ಅಲ್ಲಿಗೆ ಕರೆಸಿದ ಉದಾಹರಣೆಗಳನ್ನೂ ಕೇಳಿದ್ದೇ.

ಈಗ ಎಲ್ಲವೂ ಆನ್ಲೈನ್ ಮೇಡಂ, ಇಂತಿಷ್ಟು ಸೆಕೆಂಡ್ ಅಂತ ಇರುತ್ತೆ ಅಷ್ಟರೊಳಗೆ ಅಪ್ಲೋಡ್ ಮಾಡಬೇಕು ಎಂದು ಹೇಳುತ್ತಲೇ ಚಕಚಕನೆ ಕೆಲಸ ಮಾಡಿ ಮುಗಿಸಿದ ಅವರನ್ನೇ ಬಿಟ್ಟ ಕಣ್ಣುಗಳಿಂದ ನೋಡುತಿದ್ದೆ. ಡಿಜಿಟಲ್ ಇಂಡಿಯಾ ದ ಬಗ್ಗೆ ಲೇವಡಿ ಮಾಡಿದ, ಅದರ ಬಗ್ಗೆ ದೂಷಣೆ ಮಾಡಿದ ಜನಗಳಲೆಲ್ಲಾ ಒಮ್ಮೆ ಕಣ್ಮುಂದೆ ಸರಿದು ಹೋದರು. ಒಂದು ಪಾಸ್ಪೋರ್ಟ್ ಕೇವಲ ಒಂದು ವಾರದಲ್ಲಿ ಸಿಗುತ್ತೆ ಅನ್ನೋದೇ ಭಾರತದಂತ ದೇಶದಲ್ಲಿ ಅಚ್ಚರಿಯ ವಿಷ್ಯ. ಎಷ್ಟೋ ಇಂಥ ಸಂಗತಿಗಳನ್ನು ಸಾಧ್ಯವಾಗಿಸಿದ್ದು ಡಿಜಿಟಲ್ ಇಂಡಿಯಾ. ಅದರ ರೂವಾರಿ ಮೋದಿ.

ಏನು ಮಾಡಿದ್ರು?  ಕೇಳೋದು ಸುಲಭ, ತಿಳಿದುಕೊಳ್ಳೋದು ಕಷ್ಟ. ಬದುಕು ಸರಳವಾಗುತ್ತಿದೆ. ಅದು ಅರ್ಥವಾಗಬೇಕಿದೆ ಅಷ್ಟೇ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...