ರಕ್ತರಾತ್ರಿ.

ಕಂಬನಿ ತುಂಬಿ ಮಬ್ಬಾದ ಕಣ್ಣುಗಳಿಂದಲೇ ಎತ್ತಿಕೊಂಡಿದ್ದು ರಕ್ತರಾತ್ರಿ. ಹೆಸರೇ ಭೀಭತ್ಸ ಅನ್ನಿಸೋ ಹಾಗಿತ್ತು. ರಾತ್ರಿ ಇರೋದೇ ವಿಶ್ರಾಂತಿಗೆ ಅನ್ನಿಸಿದರು ಯಾವ್ಯಾವುದಕ್ಕೆಲ್ಲಾ ವಿಶ್ರಾಂತಿ ಸಿಗುತ್ತೆ ಅನ್ನೋದರ ಲೆಕ್ಕ ಹಾಕಿದರೆ ಕೆಲವೊಮ್ಮೆ ಮೈ ಜುಮ್ ಅನ್ನುತ್ತೆ. ತ.ರಾ.ಸು ವೈಶಿಷ್ಟ್ಯವೇ ಅವರು ಇಡುವ ಹೆಸರುಗಳು. ಇಡೀ ಪುಸ್ತಕದ ಆಶಯವನ್ನು, ಹೂರಣವನ್ನು ಒಂದು ಪದದಲ್ಲಿ ಹೇಳುವುದಿದೆಯಲ್ಲ ಅದು ಸುಲಭ ಸಾಧ್ಯವಲ್ಲ. ಅಲ್ಲಿ ಶುರುವಾದ ನೆತ್ತರಿನ ದಾಹ ಇಲ್ಲೂ ಮುಂದುವರಿಯುತ್ತದೆಯೇನೋ  ಅನ್ನೋ ಭಾವದಲ್ಲೇ ಪುಸ್ತಕ ಬಿಡಿಸಿದೆ.

ಏನೇ ಘಟಿಸಿದರೂ ಪ್ರಕೃತಿ ಎಷ್ಟು ಸಹಜವಾಗಿ ತೆಗೆದುಕೊಂಡು ತನ್ನ ಪಾಡಿಗೆ ತಾನು ತನ್ನ ಕೆಲಸ ನಿರ್ವಹಿಸುತ್ತದೆ. ಯೋಚಿಸುವ, ಬುದ್ಧಿ ಇರುವ ಮನುಷ್ಯ ಮಾತ್ರ ಆಗಿ ಹೋಗಿದ್ದಕ್ಕೆ ಕೊರಗುತ್ತಾನೆ, ಹಳಹಳಿಸುತ್ತಾನೆ, ಕೆಲವೊಮ್ಮೆ ತನ್ನ ಕರ್ತವ್ಯವನ್ನೂ ಮರೆತುಬಿಡುತ್ತಾನೆ. ಒಣ ವೇದಾಂತವನ್ನು ಧರಿಸಿ ಕುರುಡನಾಗುತ್ತಾನೆ. ಜಗತ್ತಿನಲ್ಲಿ ಕಣ್ಣಿಲ್ಲದ ಕುರುಡರಿಗಿಂತ ಕಣ್ಣಿರುವ ಕುರುಡರೇ ಜಾಸ್ತಿಯೇನೋ. ಅಂಥಹ ಕುರುಡುತನದಿಂದ, ದುಃಖಕ್ಕೆ ವೇದಾಂತದ ಹೊದಿಕೆ ಹೊಚ್ಚಿ ಕುಳಿತ ಲಿಂಗಣ್ಣ ನಾಯಕನೂ ಎಚ್ಚರವಾಗುವ ಅನಿವಾರ್ಯತೆ ಎದುರಾಗುತ್ತದೆ.

ಮನಸ್ಸಿನಲ್ಲಿ ಅದುಮಿಟ್ಟ ಯಾವ ಬಯಕೆಗಳೂ ಸಾಯುವುದಿಲ್ಲ. ಅದು ಸಮಯಕ್ಕಾಗಿ ಕಾಯುತ್ತದೆ. ಅಲ್ಲಿಯವರೆಗೂ ಅದು  ನಮ್ಮ ನಿರೀಕ್ಷೆಯನ್ನೂ ಮೀರಿ ಬೆಳೆದಿರುತ್ತದೆ. ಯಾವದೂ ಒಳಗೆ ಉಳಿಯುವುದಿಲ್ಲ ಒಂದಲ್ಲ ಒಂದು ದಿನ ಹೊರಗೆ ಬರಲೇ ಬೇಕು. ಅದುಮಿಟ್ಟ ಬಯಕೆಗಳು ಅಗ್ನಿಪರ್ವತವಿದ್ದಂತೆ. ಆಸ್ಪೋಟಗೊಂಡರೆ ಅಪಾಯವೇ. ಅದು ತಾನಾಗೇ ಚಿಮ್ಮುವುದಕ್ಕಿಂತ ನಾವು ಹೊರಹಾಕುವುದೇ ಒಳ್ಳೆಯದು. ಬಚ್ಚಿಡುವುದು ಅದೆಷ್ಟು ಕಷ್ಟ.... ಹೊಟ್ಟೆಯಲ್ಲಿಟ್ಟು ಕೊಂಡ ಮುನಿಸು, ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಎರಡೂ ದಹಿಸುತ್ತದೆ. ಅವಕಾಶ ದೊರೆತರೆ ಕಾಡ್ಗಿಚ್ಚಾಗುತ್ತದೆ.

ಲಿಂಗಣ್ಣ ನಾಯಕನ ಪಟ್ಟಾಭಿಷೇಕದಲ್ಲ್ಲಿ ಪ್ರಮುಖ ಪಾತ್ರ ವಹಿಸುವುದು ಕಲ್ಲುಮಠ.  ನಿಲುವಿಗೆ, ಶ್ರದ್ಧೆಗೆ, ನಂಬಿಕೆಗೆ, ನೀತಿಗೆ ಅನ್ವರ್ಥಕವಾಗಿ   ಕಲ್ಲಿನಂತೆ ಅಚಲವಾಗಿ ನಿಲ್ಲುವ ಮಠ. "ಯಾವ ಮಾತನ್ನು ಯಾರು ಯಾರು ಆಡಿಕೊಳ್ಳಬೇಕೋ ಅವರೇ ಆಡಿಕೊಂಡರೆ ಒಳಿತು. ಮೂರನೆಯ ಕಿವಿ, ಮೂರನೆಯ ಬಾಯಿ ಅಪಾಯದ ತಾಯಿ" ಅನ್ನುವ ಸ್ವಾಮಿಗಳ ಮಾತು ಅದೆಷ್ಟು ಅರ್ಥಪೂರ್ಣ. ಯಾರದ್ದೋ ಮಾತು ಇನ್ಯಾರದ್ದೋ ಬಾಯಿ ಮತ್ಯಾರದ್ದೋ ಕಿವಿಯಾಗುವ ಪ್ರಸ್ತುತ ಕಾಲದಲ್ಲಿ ಇದು ಮಂಗಳಾರತಿಯ ಸಮಯದ  ಗಂಟೆಯಂತೆ ಭಾಸವಾಗುತ್ತದೆ. ಆರತಿಯ ಬೆಳಕು ಪ್ರತಿಫಲಿಸುವ ಹಾಗೆ ಮಾಡುತ್ತದೆ."ಒತ್ತೆಗೆ ಹಾಕಿದ ಕಸುಗಾಯಿ ಹಣ್ಣಾದರೂ ಹುಳಿಯೇ!" ಅನ್ನುವ ಮಾತು ಸಹಜವಾಗಿಯಲ್ಲದೆ ಒತ್ತಾಯಕ್ಕೆ ಯಾವುದೂ ದಕ್ಕುವುದಿಲ್ಲ ಅನ್ನುವ ಸತ್ಯದ ಅನಾವರಣ ಮಾಡುತ್ತದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಬಂತು ಅನ್ನೋ ಗಾದೆಯ ಹಾಗೆ ಸಿಕ್ಕಿದ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳದೇ ಎಳೆಯ ನಾಗರವನ್ನು ಘಟಸರ್ಪವನ್ನಾಗಿ ಬಲಿಯಲು ಬಿಟ್ಟು ಲಿಂಗಣ್ಣ ನಾಯಕ ಅದನ್ನು ಕೆಣಕಿ ಅದರ ಬಾಯಿಗೆ ತುತ್ತಾಗಿ ಅಂತ್ಯ ಕಾಣುವುದರೊಂದಿಗೆ ಪುಸ್ತಕದ ಪುಟವೂ ಮುಗಿಯುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಒಂದು ತಪ್ಪು ಅಥವಾ ಸಣ್ಣ ನಿರ್ಲಕ್ಷ್ಯ ಎಷ್ಟು ದೊಡ್ಡ ಅಪಾಯವನ್ನಾದರೂ ತರಬಹುದು ಅನ್ನೋ ಪಾಠವನ್ನು ಕಲಿಸುತ್ತದೆ. "ಯಾವುದು ನಮಗೆ ಪ್ರಿಯವಾಗಬೇಕಾದರೂ, ಯಾವುದರಲ್ಲಾದರೂ ಆಸಕ್ತಿ ಮೂಡಬೇಕಾದರೂ ಅದಕ್ಕೊಂದು ಸ್ವಾರ್ಥದ ಕಾರಣ ದೊರೆತರೆ ಅದು ಬೇಗ ಪ್ರಿಯವಾಗುತ್ತದೆ" ಅನ್ನುವ ಸ್ವಾಮಿಗಳ ಮಾತು ಬದುಕನ್ನ ಒರೆ ಹಚ್ಚಿ ನೋಡುವ ಹಾಗೆ ಮಾಡುತ್ತದೆ.

ಒಳ್ಳೆಯತನಕ್ಕೆ ಗಟ್ಟಿತನವಿದ್ದರೆ ಮಾತ್ರ ಅದು ಬೆಳಗುತ್ತದೆ, ಇಲ್ಲವಾದಲ್ಲಿ ಸುಡುತ್ತದೆ. ಒಳ್ಳೆಯತನ ಅನ್ನೋದು ಸ್ಟ್ರೆಂತ್ ಅಥವಾ ವೀಕ್ನೆಸ್ಸ್ಆಗೋದು ಅದನ್ನ ನಾವು ಹೇಗೆ ದುಡಿಸಿಕೊಳ್ಳುತ್ತಿವಿ ಅನ್ನುವುದರ ಮೇಲೆ ನಿರ್ಧಾರವಾಗುತ್ತದೆ. "ಧರ್ಮ ಮಾರುಕಟ್ಟೆಯಲ್ಲ, ಗುರು ವ್ಯಾಪಾರಿಯಲ್ಲ ಅನ್ನುವ ಸ್ವಾಮಿಗಳ ಮಾತು ಸಮಾಜದಲ್ಲಿ, ಮುಖ್ಯವಾಗಿ ರಾಜಕಾರಣದಲ್ಲಿ ಮಠಗಳ ಜವಾಬ್ದಾರಿಯೇನು ಅನ್ನುವುದನ್ನ ಸರಳವಾಗಿ ಅಷ್ಟೇ ನಿಖರವಾಗಿ ತಿಳಿಸುತ್ತದೆ. ಈ ಸಾಲು ಇವತ್ತಿನ ಪರಿಸ್ಥಿತಿಗೆ ಎಷ್ಟು ಅರ್ಥಪೂರ್ಣ ಹಾಗೂ ಮುಖ್ಯ ಅನ್ನೋದನ್ನೂ.

ಇಡೀ ಪುಸ್ತಕದಲ್ಲಿ ಸೆಳೆದಿದ್ದು ಸ್ವಾಮಿಗಳ ವ್ಯಕ್ತಿತ್ವ. ಗಿರಿಜೆಯ ಸಾಹಸ, ಹರಕೆ ನಾಯಕನಂತವರ ಸ್ವಾಮಿಭಕ್ತಿ, ಪರುಶುರಾಮಪ್ಪ ನಂತವರ ಜ್ಞಾನ ಲಿಂಗಣ್ಣ ನಾಯಕರ ನಿಷ್ಕ್ರಿಯತೆಯಲ್ಲಿ ವ್ಯರ್ಥವಾಗುವುದು ನೋಡಿದಾಗ ಅಧಿಕಾರದಲ್ಲಿರುವ ವ್ಯಕ್ತಿತ್ವ ಹೇಗಿರಬೇಕು ಅನ್ನೋದು ಅರ್ಥವಾಗುತ್ತೆ. ಒಬ್ಬರ ಮಹತ್ವಾಕಾಂಕ್ಷೆ, ದುರಾಸೆ ಹೇಗೆ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲ ಹಲವರ ಬದುಕಿನ ತ್ಯಾಗ ಬೇಡುತ್ತೆ ಅನ್ನೋದು ಅರಿವಿಗೆ ಬರುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪುಸ್ತಕವನ್ನು ಓದಿ ಕೆಳಗಿಡುವ ಮುನ್ನ ಅದು ಮನಸ್ಸನ್ನು ಹೀಗೆ ತಯಾರುಮಾಡುತ್ತೆ.

ಸಣ್ಣ ಗಾಳಿಗೂ ಹೊಯ್ದಾಡುವ ದೀಪ, ದೀಪವೇ ಆದರೂ ಯಾರಿಗೆ ಬೆಳಕು ತೋರೀತು ಅದು?
ಮನಸ್ಸು ಗಾಳಿಗೊಡ್ಡಿದ ಸೊಡರಾಗಬಾರದು.....
ಎದುರಿಸುವ ಕೋಡುಗಲ್ಲಾಗಬೇಕು.....

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.