ಅಮ್ಮಾ ಹೊಟ್ಟೆನೋವುತ್ತೆ ಅಂತ ಬೆಳಗಿನ ಜಾವವೇ ಎಬ್ಬಿಸಿದವಳಿಗೆ ನೀರು ಕುಡಿದು ಮಲಕ್ಕೋ ಕಂದ ಹೋಗುತ್ತೆ ಅಂತ ಹೊಟ್ಟೆಗೆ ತುಪ್ಪ ಹಚ್ಚಿ ಹೊದಿಕೆ ಹೊದ್ದಿಸಿದವಳಿಗೆ ಮತ್ತೆ ನಿದ್ದೆ ಬರಲಿಲ್ಲ. ಹೂ ಅಂದು ತಿರುಗಿ ಮಲಗಿದವಳನ್ನೇ ದಿಟ್ಟಿಸುತಿದ್ದೆ. ನಿನ್ನೆ ಸ್ಕೂಲ್ ಡೇ ಲೇಟ್ ಆಗಿ ತಿಂದಿದಕ್ಕೆ ಎಲ್ಲೋ ಗ್ಯಾಸ್ ಫಾರಂ ಆದ ಆಗಿರಬಹುದಾ... ಇನ್ನೇನು ಆಗಿರಬಹುದು ಅನ್ನೋ ಯೋಚನೆಗಳು ಅಪ್ಪಳಿಸಲು ತೊಡಗುತಿದ್ದಂತೆ ಮನದ ಕಡಲಲ್ಲಿ ಉಬ್ಬರ ಶುರುವಾಗಿತ್ತು. ಯಾಕೋ ಎಂದಿನಂತೆ ಸಮಾಧಾನವಾಗಲೇ ಇಲ್ಲ.

ಮಲಗಿದ್ದಲ್ಲೇ ನಿಧಾನವಾಗಿ ಮುಲುಕುತಿದ್ದಳು ಅವಳು. ನೀನು ಉಸಿರಾಡೋದು ಚೂರು ವ್ಯತ್ಯಾಸ ಆದರೂ ನಂಗೆ ಗೊತ್ತಾಗುತ್ತೆ ಕಣೆ ಅಂತ ಅನ್ನುತ್ತಿದ್ದವಳು ನಾನು ನನ್ನ ನೋವು ಜಾಸ್ತಿ ಆಗ್ತಾ ಇದೆ ಅಂತ ಅಮ್ಮಂಗೆ ಗೊತ್ತಾಗ್ತಾ ಇದೆಯಾ ಅಂತ ತಿರುಗಿ ನೋಡಿದ್ಲಾ... ಆಗಲೇ ನನಗೂ ಹೊಟ್ಟೆಯೊಳಗೆ ಸಂಕಟ ಶುರುವಾಗಿತ್ತು. ಭಾನುವಾರ ಯಾವ ಡಾಕ್ಟರ್ ಸಹ ಇರೋಲ್ಲ ಏನು ಮಾಡೋದು ಒಬ್ಬರಾದರೂ ಸಿಗಲಿ ದೇವ್ರೇ ಅಂತ ಮನಸ್ಸು ಒಂದೇ ಸಮನೆ ಪ್ರಾರ್ಥಿಸುತಿತ್ತಾ? ಆ ಅಬ್ಬರದಲ್ಲಿ ಯಾವ ಅಲೆಯದು ಯಾವ ಭಾವ ಗುರುತಿಸುವರಾರು?

ಗಡಿಯಾರವನ್ನೇ ದಿಟ್ಟಿಸಿದೆ. ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಸ್ವಲ್ಪ ಬೇಗ ಹೋಗಬಾರದಾ ಅಂತ ಮನಸ್ಸಲ್ಲೇ ಬೈದುಕೊಂಡೆ. ಬೇರೆ ಸಮಯದಲ್ಲಿ ಕೇಳಿಸದ ಈ ಟಿಕ್ ಟಿಕ್ ಸಹ ಇಷ್ಟು ನಿಧಾನ ಹಾಗೂ ಕರ್ಕಶ ಅನ್ನೋದು ನಿಧಾನಕ್ಕೆ ಅರ್ಥವಾಗತೊಡಗಿತ್ತು. ಒಂಬತ್ತು ತಿಂಗಳು ಹೊಟ್ಟೆಯೊಳಗೆ ಬೆಳಸಿ, ಹೊಕ್ಕುಳ ಬಳ್ಳಿಗೆ ಬೆಸೆದುಕೊಂಡ ಕಂದ, ನನ್ನದೇ ರಕ್ತ ಮಾಂಸ ಹಂಚಿಕೊಂಡು ನನ್ನದೇ ದೇಹದ ಒಂದು ಭಾಗವಾಗಿ ಬೆಳೆದ ಕಂದ, ಕರುಳಿನ ಚೂರು ಎಲ್ಲವೂ ನಿಜ. ಆದರೆ ಅವಳ ನೋವು ಮಾತ್ರ ನನ್ನದಲ್ಲ, ಹಂಚಿಕೊಳ್ಳಲಾಗುವುದಿಲ್ಲ, ಹೆಗಲಾಗಬಲ್ಲೆ, ಸಮಾಧಾನ ಮಾಡಬಲ್ಲೆ, ಏನೋ ಕೊಟ್ಟು ಸಹಾಯ ಮಾಡಬಲ್ಲೆ ಆದರೆ ಸ್ವಂತ ಕರುಳಿನ ಚೂರಿನ ನೋವು ಮಾತ್ರ ಹಂಚಿಕೊಂಡು ರಿಲೀಫ್  ಕೊಡಲು ಸಾದ್ಯವಿಲ್ಲ. ಅವರವರ ನೋವು ಅವರವರೆ ಅನುಭವಿಸಬೇಕು....

ಗೊತ್ತಿದ್ದ ಔಷಧಿಯೆಲ್ಲಾ ಮಾಡಿಕೊಟ್ಟರೂ ಆ ಹೊಟ್ಟೆನೋವಿಗೆ ಸಮಾಧಾನವಾಗಲಿಲ್ಲ, ಅದರ ಹಸಿವು ಕಡಿಮೆಯಾಗಲಿಲ್ಲ. ಬೇರೆ ದಾರಿಯಿಲ್ಲದೆ ಡಾಕ್ಟರ್ ಗೆ ಫೋನ್ ಮಾಡಿ ಅವರು ಔಷಧಿ ಮೆಸೇಜ್ ಮಾಡಿ ತಂದು ಕೊಟ್ಟರೂ ಉಹೂ ಕಡಲು ಭೋರ್ಗೆರೆಯುವುದು ನಿಲ್ಲಿಸಲಿಲ್ಲ. ಅಮ್ಮಾ ಈಗ ಒಂಚೂರು ಪರವಾಗಿಲ್ಲ ಕಣೆ ಅಂದ ಕಂದನ ದ್ವನಿಯೂ ಸ್ವಾಂತನ ಕೊಡಲಿಲ್ಲ. ಏನೋ ಕಸಿವಿಸಿ, ಅರ್ಥವಾಗದ ಸಂಕಟ ತಂದ ಅಲೆ ಅಪ್ಪಳಿಸುತ್ತಲೇ ಇತ್ತು. ಸಂಜೆಯವರೆಗೂ ಸ್ವಲ್ಪ ಮರೆಯಾಗಿದ್ದ ನೋವು ರಾತ್ರಿಯಿಡಿ ಅವಳನ್ನು ಹಿಪ್ಪೆ ಮಾಡಿ, ಯಾವ ಔಷಧಿಗೂ ಬಗ್ಗದೇ ಸೆಡ್ಡು ಹೊಡೆದಾಗ ಮಾತ್ರ ಭಯ ನಿಧಾನಕ್ಕೆ ಅಡಿಯಿಟ್ಟು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಏನು ಕೊಟ್ಟರೂ ಹೊಟ್ಟೆ ಅಷ್ಟೇ ವೇಗವಾಗಿ ಹೊರಗೆ ಹಾಕುತಿತ್ತು.

ಅಲಾರಂ ಕೂಗುತಿದ್ದ ಹಾಗೆ ಹಾಳಾದ್ದು ಎಷ್ಟು ಬೇಗ ಬೆಳಗೆ ಆಗುತ್ತೆ ಅಂತ ಗೊಣಗುತ್ತಲೇ ಏಳುವವಳಿಗೆ ಈ ರಾತ್ರಿ ಎಷ್ಟು ದೀರ್ಘವೆನಿಸಿ ಕಂಗಾಲಾಗಿತ್ತು. ಏಳುತ್ತಾ, ಕೂರುತ್ತಾ, ಮೈಯನ್ನು ಮುದ್ದೆ ಮಾಡಿ ಯಾವ್ಯಾವುದೋ ಭಂಗಿಯಲ್ಲಿ ನೋವನ್ನು ತಡೆದು ಕೊಳ್ಳಲು ಪ್ರಯತ್ನಿಸಿ ವಿಫಲಳಾಗುತ್ತಿದ್ದ ಅವಳನ್ನು ದಿಟ್ಟಿಸಿ ಒಣ ಸಮಾಧಾನ ಮಾಡುವುದನ್ನ ಬಿಟ್ಟರೆ, ಗೊತ್ತಿದ್ದ ಯಾವುದೋ ಕಷಾಯ, ಇನ್ಯಾವುದೋ ಎಣ್ಣೆ ಮತ್ತೇನನ್ನೋ ಸವರುತ್ತಾ, ಇಷ್ಟಿಷ್ಟೇ ಎಳನೀರು ಕುಡಿಸುವುದು ಬಿಟ್ಟು ಇನ್ನೇನು ಮಾಡಲು ಆಗದ ಅಸಹಾಯಕತೆ ನನ್ನ ಹಿಂಡುತಲಿತ್ತು. ಗಡಿಯಾರವನ್ನೇ ದಿಟ್ಟಿಸಿದೆ. ಕ್ಷಣ ಕ್ಷಣಕ್ಕೂ ಬದಲಾಗಲು ನಾನೇನು ಮನುಷ್ಯನಾ ಅಂತ ಗುರುಗುಟ್ಟಿ ತನ್ನಷ್ಟಕ್ಕೆ ತಾನು ನಡೆಯುತ್ತಿತ್ತು.

ಕಣ್ಣು ರೆಪ್ಪೆ ಮುಚ್ಚದೆ ಗಡಿಯಾರದ ನಡಿಗೆಯನ್ನೇ ಹಿಂಬಾಲಿಸಿ ಅಂತೂ ಬೆಳಗು ಹರಿದ ಮೇಲೆ ಅವಳನ್ನು ಎಳೆಯ ಮಗುವಿನಿಂದ ಹೋದವರ್ಷದವರೆಗೂ ನೋಡುತಿದ್ದ   ಡಾಕ್ಟರ್ ಬಳಿ ಹೋದಾಗಲೇ ಗೊತ್ತಾಗಿದ್ದು ಅವತ್ತು ಸ್ಟ್ರೈಕ್ ಹಾಗೂ ಅವರು ನೋಡೋಲ್ಲ ಅಂತ. ಏನೂ ಮಾತಾಡದೆ ಒಂದೆರೆಡು ಹಾಸ್ಪಿಟಲ್ ಗೆ ಹೋದರೆ ಇವತ್ತು ಓ ಪಿ ಡಿ ಇಲ್ಲಾ ಅನ್ನೋ ಕರ್ಕಶ ಸ್ವರವೇ ಎದುರಾಗಿದ್ದು. ಕೊನೆಗೆ ಬೇರೆ ದಾರಿಯಿಲ್ಲದೆ ಕ್ಲಿನಿಕ್ ಬಾಗಿಲ ಮೇಲೆ ಬರೆದಿದ್ದ ಫೋನ್ ನಂ ತೆಗೆದುಕೊಂಡು ಫೋನ್ ಮಾಡಿದರೆ ಎತ್ತಿದ  ಡಾಕ್ಟರ್ ಒಬ್ಬರು ಹೇಳುವುದನ್ನ ಅಷ್ಟನ್ನೂ ಕೇಳಿ  ಇಂಥ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿ ನಾನು ಡ್ಯೂಟಿ ಡಾಕ್ಟರ್ ಹತ್ರ ಮಾತಾಡ್ತೀನಿ ಅಂದ್ರು.

ಅಲ್ಲಿ ಹೋದರೆ ಯಥಾಪ್ರಕಾರ ಇಲ್ಲಾ ನಮಗೆ ಸ್ಟ್ರಿಕ್ಟ್ ಆರ್ಡರ್ ಇದೆ ನೋಡೋ ಹಾಗಿಲ್ಲ ಅಂತ ಅಷ್ಟೇ ಸ್ಟ್ರಿಕ್ಟ್ ಆಗಿ ಹೇಳಿ ಇನ್ನೊಂದು ಮಾತು ಆಡದಂತೆ ತನ್ನ ಕೆಲಸದಲ್ಲಿ ಮಗ್ನಳಾದಲು ರಿಸೆಪ್ಶನ್. ವಿಧಿಯಿಲ್ಲದೇ ಪುನ ಅದೇ ನಂಬರ್ ಗೆ ಫೋನ್ ಮಾಡಿದರೆ ಆಯ್ತು ನಾನೇ ಬರ್ತೀನಿ  ಅಂತ ಹೇಳಿ ತಕ್ಷಣ ಬಂದು ನೋಡಿ  ಔಷಧ ಬರೆದು ಕೊಟ್ಟು ಸಂಜೆಯವರೆಗೂ ಕಡಿಮೆ ಆಗಿಲ್ಲ ಅಂದ್ರೆ ಮತ್ತೆ ಕರ್ಕೊಂಡ್ ಬನ್ನಿ ಅಂದು ಅವರು ಬಂದ್ರೆ ನಂಗೆ ಫೋನ್ ಮಾಡಿ ಅಂತ ರಿಸೆಪ್ಶನ್ ಅಲ್ಲಿ ಹೇಳಿದ್ರು.  ಅಪ್ಪಳಿಸುತ್ತಿದ್ದ ಅಲೆ ದಡವನ್ನೂ ಮೀರಿ ಕಣ್ಣಿಂದ ಇಳಿಯತೊಡಗಿತು. ಗಂಟಲು ಸ್ವರವನ್ನು ಹೊರಹಾಕಲಾರೆ ಅನ್ನೋ ಹಠ ಹಿಡಿದಾಗ ಮೌನವಾಗಿ ನಿಂತಿದ್ದ ನನ್ನನ್ನು ನೋಡಿ ಅವರು ಹೇಳಿದ್ದು ಒಂದೇ ಮಾತು ನಂಗೂ ಮಕ್ಕಳಿದ್ದಾರೆ....


ದೇವ ಹಾಗೂ ದೆವ್ವ ಅನ್ನೋ ಪದದ ನಡುವಿನ ವ್ಯತ್ಯಾಸ ತುಂಬಾ ತೆಳು.


#ಆಸ್ಪತ್ರೆ_ಡೈರಿ.


Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.