ಚಕ್ರೇಶ್ವರಿಯಿಂದಲೇ  ತ. ರಾ. ಸು ಓದಲು ಶುರುಮಾಡಿದ್ದು ನಾನು. ಚಿತ್ರದುರ್ಗಕ್ಕೆ ಹೋಗಿ ಬಂದ ಮೇಲೆ ಓದಿದ್ದು ದುರ್ಗಾಸ್ತಮಾನ. ಆಮೇಲೆ ಅದರ ಸರಣಿ ಕೃತಿಗಳು ಇವೆ ಅಂತ ಗೊತ್ತಾಗಿ ಅದನ್ನ ಓದಿದ ಮೇಲೆ ಇನ್ನೊಮ್ಮೆ ಅದನ್ನ ಓದಬೇಕು ಅಂತ ಅಂದ್ಕೊಂಡ್ ಸುಮ್ಮನಾಗಿರುವಾಗಲೇ ಸ್ನೇಹಿತರ ಮನೆಯಲ್ಲಿ ಮೊದಲ ಪುಟ ಕಿತ್ತು ಜೀರ್ಣಾವಸ್ಥೆಗೆ ತಲುಪಿದ ಪುಸ್ತಕವೊಂದು ಕಣ್ಣಿಗೆ ಬಿಟ್ಟು. ಮೊದಲಿಂದಲೂ ಈ ಜೀರ್ಣಾವಸ್ಥೆ ತಲುಪಿದ ಯಾವುದೇ ಆಗಲಿ ಅದರ ಬಗ್ಗೆ ನನಗೊಂದು ಕುತೂಹಲ, ಆಸಕ್ತಿ. ಯಾವುದು ಅಂತ ನೋಡಲು ಹೋದವಳಿಗೆ ಶೀರ್ಷಿಕೆಯೇ ಇಷ್ಟವಾಗಿ ಬಿಡ್ತು. ಬಿಡುಗಡೆಯ ಬೇಡಿ. ಮತ್ತದನ್ನ ಬರೆದಿದ್ದು ತ. ರಾ. ಸು.

ಈ ಬದುಕು ಮತ್ತು ಬಂಧನ ಅವಳಿ ಜವಳಿಗಳೇನೋ ಅನ್ನಿಸುತ್ತಿರುತ್ತದೆ ನಂಗೆ. ಮನುಷ್ಯನಲ್ಲಿ ಯಾವುದನ್ನೂ ಮೀರುವ, ಹೊರಬರುವ ಪ್ರಯತ್ನ ಕೊನೆಯ ಉಸಿರಿನ ತನಕವೂ ಚಾಲನೆಯಲ್ಲಿರುತ್ತೆ. ಅದು ಅರಿವಿಗೆ ಬಂದಿರಬಹುದು ಬರದಿರಲೂ ಇರಬಹುದು. ಈ ನೆಲದ ಮುಖ್ಯ ಗುಣವೂ ಅದೇ ಈ ದೇಹದಿಂದ ಬಿಡುಗಡೆ, ಆಥವಾ ಮುಕ್ತಿಗಾಗಿ ಪ್ರಯತ್ನ ಪಡೋದು. ಇಡೀ ಬದುಕಿನ ಗಮ್ಯವೇ ಬಿಡುಗಡೆ ಅಲ್ವಾ ಅಂತ ಅನ್ನಿಸಿ ಬೆರಗು, ಬೇಜಾರು ಎರಡೂ ಆಗುತ್ತೆ ಒಂದೊಂದುಸಲ.

ಮುಖ್ಯ ಪಾತ್ರಧಾರಿ ಪ್ರಭಾವತಿ, ಅವಳಿಗೋ ಯಾವುದೋ ಬಲೆಯಲ್ಲಿ ಸಿಲುಕಿಕೊಂಡ ಭಾವ, ಆ ಉಸಿರುಗಟ್ಟಿಸುವ ಪರಿಸರದಿಂದ ಬಿಡಿಸಿಕೊಳ್ಳುವ ಬಯಕೆ. ಪಂಜರದಿಂದ ಬಿಡಿಸಿಕೊಂಡು ಸ್ವಚ್ಚಂದವಾಗಿ ಹಾರಾಡುವ ಬಯಕೆ. ಆದರೆ ಅವಳಿಗೆ ಪ್ರತಿಯೊಂದು ಪಂಜರದಂತೆ ಕಾಣುತ್ತದೆ. ಆಫೀಸ್, ಅಲ್ಲಿಂದ ಹೊರಬರುವ ಲಿಫ್ಟ್, ರೈಲು, ಕೊನೆಗೆ ಮನೆ ಎಲ್ಲವೂ.. ಓದುತ್ತಾ ಓದುತ್ತಾ ಅರೆ ಹೌದಲ್ವಾ ಅನ್ನಿಸಿಬಿಡುತ್ತದೆ. ಪ್ರತಿಯೊಂದು ನಾಲ್ಕು ಗೋಡೆಗಳಿಂದ ಆವೃತವೇ. ಹಾಗೆ ನೋಡಿದರೆ ಎಲ್ಲವಕ್ಕೂ ಬೇಲಿಯಿದೆ. ನಾವೆಲ್ಲರೂ ಆ ಪಂಜರದೊಳಗಿನ ಗಿಣಿಯೇ. ವಿಸ್ತಾರದಲ್ಲಿ ವ್ಯತ್ಯಾಸ ಇರಬಹುದು ಅಷ್ಟೇ. ನಮ್ಮ ಬದುಕು ಪೂರಾ ಇಂಥ ಒಂದಲ್ಲೊಂದು ಪಂಜರದೊಳಗೆ ಕೊನೆಯವರೆಗೂ ನಡೆಯುತ್ತದೆ. ಆದರೆ ಆ ಪಂಜರದಿಂದ  ಹೊರಬರಬೇಕು ಅನ್ನೋ ನಾವು ಬಯಲಿಗೆ ಬಂದರೆ ಭಯ ಪಡುತ್ತೇವೆ. ಕಂಗಾಲಾಗುತ್ತೇವೆ. ಮತ್ತೆ ಆ ಪಂಜರವೇ ಸುರಕ್ಷಿತವೆನ್ನಿಸಿ ವಾಪಾಸ್ ಆಗುತ್ತೇವೆ.

ಮಕ್ಕಳ ಬೆಳೆಸುವಲ್ಲಿನ ತಾರತಮ್ಯ ಎಷ್ಟು ದೊಡ್ಡ ಪರಿಣಾಮವನ್ನು ಉಂಟು ಮಾಡಬಲ್ಲದು ಅನ್ನುವುದಕ್ಕೆ ಪ್ರಭಾವತಿಯ ಬದುಕು ಉದಾಹರಣೆಯಾಗಿ ನಿಂತು ಬಿಡುತ್ತದೆ. ಗಂಡು, ಹೆಣ್ಣು ಎನ್ನುವ ಭೇದ, ಬೆಳೆಸುವಲ್ಲಿನ ತಾರತಮ್ಯ ಅದರಿಂದ ಮಕ್ಕಳಲ್ಲೇ ಸಹಜವಾಗೇ ಬರುವ ಮೇಲರಿಮೆ ಹಾಗೂ ಕೀಳರಿಮೆ, ಸ್ವಲ್ಪ ಧೈರ್ಯವಂತರಾದರೆ ಮನಸ್ಸು ಬಂಡೇಳುವ ರೀತಿ ಹಾಗೂ ಅದಕ್ಕೆ ಸಮಾಜದಿಂದ ಸಿಗುವ ಪ್ರತಿಕ್ರಿಯೆ ಎಲ್ಲವನ್ನೂ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ಹೆಣ್ಣಾಗಿ ಹುಟ್ಟಬಾರದು, ಹೆಣ್ಣು ಜನ್ಮ ತನ್ನ ವೈರಿಗೂ ಬೇಡಾ ಅನ್ನುವ ವಿಷಾದ ಅಂದಿನ ಸಾಮಾಜಿಕ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದರೂ ಈಗಲೂ ಪ್ರಸ್ತುತವೇನೋ ಅನ್ನಿಸಿ ಬಿಡುತ್ತದೆ. ಮತ್ತದಕ್ಕೆ ನಾವು ಬೆಳೆಸುವ ರೀತಿ ಹಾಗೂ ಮಾನಸಿಕತೆಯ ಕಾರಣ ಅನ್ನೋದು ಅರ್ಥವಾಗಿ ನಾಚಿಕೆಯೂ..

ನಾನು ರಕ್ಷಕ ಅನ್ನೋ ಭಾವ ಬಂದಾಗ ಎದುರಿನವರು ಅಡಿಯಾಳು ಅನ್ನೋ ಭಾವ  ಸಹಜವಾಗಿ ಬಂದು ಬಿಡುತ್ತದೆ. ಹಾಗಾಗಿ ಅಧಿಕಾರ ಚಲಾವಣೆ ಅನ್ನೋದು ಕರ್ತವ್ಯವಾಗಿ ಅದನ್ನು ಪಾಲಿಸಲೇ ಬೇಕು ಅನ್ನೋದು ಅಲಿಖಿತ ನಿಯಮವಾಗಿ ಮನುಷ್ಯ ಮನುಷ್ಯರ ಸಹಜ ಬಂಧದ ಮೇಲೊಂದು ಸಣ್ಣ ಅಂತರ ತಂತಾನೇ ನಿರ್ಮಾಣವಾಗಿ ಬಿಡುತ್ತದೆ. ಮತ್ತದು ಬೆಳೆಯುತ್ತಲೇ ಹೋಗುತ್ತದೆ ಮತ್ತೆಂದು ಮನಸ್ಸುಗಳು ಹತ್ತಿರವಾಗದಂತೆ. ಹಾಗೆ ಅಧಿಕಾರ ಚಲಾಯಿಸುವ ಮನಸ್ಸುಗಳಿಂದ ಸಿಡಿದು ದೂರವಾಗಿ ಬಂದು ತಾನು ಸ್ವತಂತ್ರಳಾದೆ ಎಂದು ಭಾವಿಸಿ ಬೀಗುವ ಹೊತ್ತಿನಲ್ಲೇ ಇನ್ಯಾವುದರಿಂದಲೋ ಬಂಧಿಸಲ್ಪಟ್ಟಿದ್ದೇನೆ ಅನ್ನೋ ಭಾವದಿಂದ ಬಿಡುಗಡೆಗಾಗಿ ಬಯಸುವ ನಾಯಕಿ ಬದುಕೆಂದರೆ ಬಂಧನವೇ ಅನ್ನಿಸೋ ಹಾಗೆ ಮಾಡುತ್ತಾಳೆ.

ಯಾವುದು ಬಂಧನ, ಯಾವುದು ಬಿಡುಗಡೆ ಉಹೂ ಅಷ್ಟು ಸುಲಭವಲ್ಲ ಹೇಳೋದು. ಆದರೆ ಪ್ರತಿ ಜೀವಿಯೂ ಬಿಡುಗಡೆಗಾಗಿ ಹಂಬಲಿಸುವುದು ಮಾತ್ರ ಉಸಿರಿನಷ್ಟೇ ಸತ್ಯ ಅಷ್ಟೇ ಸಹಜ. ಬಂಧನದಿಂದ ಬಯಲಿಗೆ ಬರಲು ಹಂಬಲಿಸುವ ಮನುಷ್ಯ ಬಯಲಿನ ವಿಶಾಲತೆಯಲ್ಲಿ ಕಂಗಲಾಗಿ ಮತ್ತೆ ವಾಪಸ್ ಹೋಗಲು ಬಯಸೋದು ಅಷ್ಟೇ ಸತ್ಯ. ಬದುಕು ಬಂಧನದಲ್ಲಿರುವಷ್ಟು ಹೊತ್ತು ಉಸಿರುಗಟ್ಟಿಸುತ್ತೆ ಅನ್ನಿಸುತ್ತೆ. ಬಯಲಿಗೆ ಬಂದರೆ ಉಸಿರು ಎಳೆದು ಕೊಳ್ಳಲು ಕಷ್ಟ ಪಡುವ ಹಾಗೆ ಮಾಡುತ್ತೆ.

ಬಯಲಿಗೆ ಬರುವುದು ಅಷ್ಟು ಸುಲಭವಲ್ಲ. ಬಯಲಿಗೆ ಒಗ್ಗಿಕೊಂಡ ಕ್ಷಣ ಮನುಷ್ಯನಿಗೆ ಯಾವ ಬೇಲಿಯೂ ಕಾಡುವುದಿಲ್ಲ. ಮತ್ತವನು ಮನುಷ್ಯನಾಗಿಯೂ ಉಳಿಯೋಲ್ಲ ಅನ್ನಿಸಿಬಿಡ್ತು ಓದಿ ಮುಗಿಸಿದಾಗ. ಮಿತಿಯನ್ನು ಮೀರುವುದು ಸುಲಭವಾದ ದಿನ ತನ್ನೆಲ್ಲಾ ಮಿತಿಯನ್ನು ಮೀರಿದ ಕ್ಷಣ ಅವನು ದೇವರಾಗಿ ಬಿಡುತ್ತಾನೆ. ಬಯಲಿನ ವಿಶಾಲತೆ ಅರ್ಥವಾಗಬೇಕಾದರೆ ಸಂಕುಚಿತತೆ ಮೀರಬೇಕು, ಬದುಕಬೇಕಾದರೆ  ನಾನೂ ಬಯಲೇ ಅನ್ನೋದು ಅರ್ಥವಾಗಬೇಕು. ವಿಪರ್ಯಾಸವೆಂದರೆ ಬಯಲು ಅರ್ಥವಾದ ದಿನ ನಾವು ಮನುಷ್ಯರಾಗಿರುವುದಿಲ್ಲವೇನೋ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...