ಕಂಬನಿಯ kuyilu

ದುರ್ಗದ ಬೆಟ್ಟ ಇಳಿಯುವಾಗಲೇ ನಿರ್ಧರಿಸಿದ್ದೆ. ಇದರ ಕುರಿತು ಬಂದಿರುವ ಅಷ್ಟೂ ಕಾದಂಬರಿ ಓದಲೇ ಬೇಕು ಅಂತ. ಕಲ್ಲುಗಳಿಗೆ ಮಾತು ಬರಬಾರದಿತ್ತಾ ಅಂತ ಯೋಚಿಸುತ್ತಾ ಬಂದವಳಿಗೆ ಅವುಗಳಿಗೆ ದನಿಯಾದ ತ.ರಾ.ಸು ಸಿಕ್ಕಿದ್ದು. ಮೊದಲ ಪುಸ್ತಕವೇ ಕಂಬನಿಯ ಕುಯಿಲು. ಎತ್ತಿಕೊಳ್ಳುವಾಗಲೇ ಏನೋ ಸಂಕಟ, ಅವ್ಯಕ್ತ ವೇದನೆ. ಮಧ್ಯಾನ ಕೆಲಸ ಮುಗಿಸಿ ಹಿಡಿದವಳು ಪುಟ ತಿರುಗಿಸಿ ಕೆಳಗಿಟ್ಟಾಗ ಕತ್ತಲಾಗಿತ್ತು, ಹೊರಗೂ ಒಳಗೂ...

ಶುರುವಾಗೋದೇ ಕಂಬನಿಯ ಮಳೆಯಿಂದ.ಇದ್ದಕ್ಕಿದ್ದಂತೆ ಸುಳಿವೇ ಕೊಡದೇ ಆಕ್ರಮಣ ಮಾಡಿ ನಾಯಕರ ಮೇಲೆ ವಿಜಯ ಸಾಧಿಸುವ ಸಾವು, ಆ ಸಾವು ಮೂಡಿಸುವ ದುಗುಡದ ಕಾರ್ಮೋಡ, ಕವಿಯುವ ಮಬ್ಬು, ಸುರಿಯುವ ದುಃಖದ ಆಶ್ರುಗಳ ಧಾರೆ, ಮೊಳಕೆಯೊಡೆಯುವ ಅಧಿಕಾರದ ಆಸೆಯ ಹೆಮ್ಮರ. ಬದುಕಿನ ವೈಚಿತ್ರ್ಯವೇ ಅದೇನೋ.. ಒಂದು ಸಾವು ಮುಗಿಯುತ್ತಿದ್ದಂತೆ ದೇಹವನ್ನು ಮೊದಲು ದಹಿಸುವುದೇ ಅಧಿಕಾರದ ಜ್ವಾಲೆ.. ಉತ್ತರಾಧಿಕಾರಿಯ ಹುಟ್ಟು. 

ಸಿಂಹಾಸನವೆಂದರೆ ಕೇದಿಗೆಯ ಹೂ ಇದ್ದಂತೆ.  ಕುಟಿಲತೆಯ ಪೊದೆಗಳ ನಡುವೆ, ಮುಳ್ಳುಗಳ ಹಂದರದಲ್ಲಿ, ಅಧಿಕಾರದಾಸೆಯ ಸರ್ಪದೊಡಲಿನ ಸುತ್ತ ನಗುವ ಹೂ ಅದು. ರಕ್ತದಲ್ಲಿ ಕಟ್ಟಿದ ಕೋಟೆ ರಕ್ತದಲ್ಲಿ ಮುಳುಗುತ್ತದೆ, ಕತ್ತಿಯಲ್ಲೇ ಬಿತ್ತಿದುದು ಕತ್ತಿಯಲ್ಲೇ ಕೊಯಿಲಾಗುತ್ತದೆ ಅನ್ನುವ ನಾಯಕರ ಮಾತು ಅದೆಷ್ಟು ಸೂಚ್ಯ. ಯಾವುದರಿಂದ ಆರಂಭಿಸುತ್ತೆವೋ, ಎಲ್ಲಿಂದ ಶುರುವಾಗುತ್ತೋ ಅಲ್ಲಿಗೆ ತಂದು ನಿಲ್ಲಿಸುತ್ತದೆ ಪ್ರಕೃತಿ. ಚಕ್ರದ ಚಲನೆಯೇ ಹಾಗೇ.. ಮುಂದಕ್ಕೆ ಚಲಿಸಿ, ಏರಿ ಮತ್ತೆಲ್ಲಿಗೆ ತಂದು ಬಿಡುತ್ತದೆ.

ಬದುಕೆಂದರೆ ಋಣಗಳ ಮೊತ್ತ. ಹಾಗಾಗಿ ಜೀವ ಕೊಟ್ಟಾದರೂ ಅದನ್ನು ತೀರಿಸಿಕೊಳ್ಳುವ ಮನಸ್ಸುಗಳು ಇರುವ ಹಾಗೆಯೇ ಇನ್ನಷ್ಟು ಕಟ್ಟಿಕೊಂಡು ಏರಿಸಿಕೊಳ್ಳುವ ಬೆನ್ನೂ ಇರುತ್ತದೆ. ದುರ್ಗದ ಕ್ಷೇಮಕ್ಕಾಗಿ ಸಹಗಮನವನ್ನು ತ್ಯಜಿಸುವ ಹಿರಿಯ ನಾಗತಿ, ತನ್ನ ಹಕ್ಕಿನದಾದರೂ ಸಿಂಹಾಸನವನ್ನೇ ಬಿಟ್ಟು ಕೊಡುವ ಲಿಂಗಣ್ಣನಾಯಕ, ಆ ಎಳೆಯ ಮನಸ್ಸಿನ ಪ್ರಬುದ್ಧತೆ ಅರಿತು ವಂಶಪಾರಂಪರ್ಯವಾಗಿ ಬಂದ ಪ್ರಧಾನಿ ಪಟ್ಟವನ್ನೇ ಧಾರೆಯೆರೆಯುವ ಭುವನಪ್ಪನವರು, ದೊರೆಯ ಕೂದಲು ಕೊಂಕದಂತೆ ಕಾಪಾಡುವ ಮೀರಿದರೆ ಪ್ರಾಣತ್ಯಾಗ ಮಾಡಲು ಸಿದ್ದವಿರುವ ಕಸ್ತೂರಿ ನಾಯಕ,  ತನ್ನ ಬದುಕಿನ ಕನಸನ್ನೇ ಕಳೆದುಕೊಂಡರೂ ನಂಬಿಕೆ ಉಳಿಸಿಕೊಳ್ಳುವ ಗಿರಿಜೆ... ಒಬ್ಬೊಬ್ಬರೂ ಮೌನವಾಗಿ ಕಲಿಸುವ ಪಾಠಗಳು ಅದೆಷ್ಟೋ..

ನಾಯಕರು ಇಹಲೋಕ ಯಾತ್ರೆ ಮುಗಿಸುತ್ತಿದ್ದ ಹಾಗೆ ತಮ್ಮ ಪಯಣವನ್ನೂ ಅಲ್ಲಿಗೆ ಮುಗಿಸಿ ಹೊರಡುವ ನಾಗತಿಯರು ಉರಿಯುವ ಚಿತೆಯಲ್ಲಿ ಕುಳಿತು ಸದ್ದೂ ಹೊರಡದಂತೆ ದಹಿಸಿಕೊಳ್ಳುವುದು ಒಂದು ಕ್ಷಣ ಮೈ ನಡುಗುವ ಹಾಗೆ ಮಾಡುತ್ತದೆ. ಇಲ್ಲಿಯ ಚಿಂತೆಗಳಿಗಿಂತ ಆ ಚಿತೆಯೇ ಮೇಲು ಅನ್ನಿಸುವಷ್ಟು ರಾಜಕಾರಣ ತಾಪವೇ? ಬಹುಶಃ ಸೂಕ್ಷ್ಮವಾಗಿ ನೋಡಿದರೆ ಹೌದೇನೋ ಅನ್ನಿಸುತ್ತದೆ. ದುರ್ಗದ ಹಿತರಕ್ಷಣೆಗಾಗಿ ಉಳಿದ ಹಿರಿಯ ನಾಗತಿಯ ಬಗ್ಗೆ ಹರಿಯುವ, ಹೇಗೇಗೋ ತಿರುಗುವ ನಾಲಿಗೆ ಬಿಸಿಯ ಮುಂದೆ, ಅದು ಹುಟ್ಟು ಹಾಕುವ ಕಾವಿನ ಮುಂದೆ ಆ ಚಿತೆಯೇ ಮೇಲು ಅನ್ನಿಸುವುದಂತೂ ನಿಜ. ಸುಡುವುದರಲ್ಲಿ ಅಗ್ನಿಗಿಂತಲೂ ನಾಲಿಗೆಯೇ ಚುರುಕು.

ಮಾತು ಏನೆಲ್ಲಾ ಅನಾಹುತಗಳನ್ನು ಸೃಷ್ಟಿಸಬಹದು ಅನ್ನೋದು ದಾರಿಯಾಗಿ ಅರ್ಥವಾದ ದಿನ ಲೋಕದಲ್ಲಿ ಮಾತಿನ ತೂಕ ಹೆಚ್ಚಿ ಪ್ರವಾಹ ಕಡಿಮೆಯಾಗಬಹುದೇನೋ. "ಯಾವ ಮಾತನ್ನೂ ಅಷ್ಟು ಸುಲಭ ಅಂದು ಕೊಳ್ಳಬಾರದು ಲಿಂಗಣ್ಣ, ಕಲ್ಲಿಗೆ ಕಲ್ಲಿನ ತೂಕವಿದ್ದರೆ ಹೂವಿಗೆ ಹೂವಿನ ತೂಕ ಇದ್ದೇ ಇರುತ್ತದೆ. ಆದ್ದರಿಂದ ಎಲ್ಲಕ್ಕೂ ತೂಕವಿದೆ ಎಂದು ಅರಿತುಕೊಂಡು ನಡೆಯುವುದು ಒಳಿತು" ಅನ್ನುವ ನಾಗತಿಯ ಮಾತು ಮಾತಿನ ಬೆಲೆಯನ್ನು ಅದರ ಪ್ರಾಮುಖ್ಯತೆಯನ್ನು ಹೇಳುತ್ತದೆ. ಬೆಲೆ ಕಟ್ಟುವುದನ್ನು ಮರೆತಾಗಲೇ ಬೆಲೆ ಕೊಡುವುದನ್ನೂ ಮರೆಯುತ್ತೆವೇನೋ...

ರಕ್ತದಾಹ, ಸಿಂಹಾಸನಕ್ಕಾಗಿ ನಡೆಯುವ ಬೇಟೆ, ಅಧಿಕಾರದ ನಿರ್ದಯತೆ ಎಲ್ಲವಗಳ ಜೊತೆ ಜೊತೆಗೆ, ನಾಗತಿಯ ವಾತ್ಸಲ್ಯ, ಲಿಂಗಣ್ಣ ನಾಯಕನ ತ್ಯಾಗ, ಪ್ರಧಾನಿಗಳ ವೈಶಾಲ್ಯತೆಗಳನ್ನ ಬಿಚ್ಚಿಡುವ ತ.ರಾ.ಸು ಓದುಗನ ನವರಸಗಳೂ ಸ್ರವಿಸುವ ಹಾಗೆ ಮಾಡುತ್ತಾರೆ. ಆ ಹರಿಯುವಿಕೆಯಲ್ಲಿ ಹೊಸ ಹೊಳವನ್ನು ಕಂಡುಕೊಳ್ಳುವ ಹಾಗೆ ಮಾಡುತ್ತಾರೆ. ಬೆಳೆಯುತ್ತಾ ಬಂದಂತೆ ಮಾಗಬೇಕು ಅನ್ನೋದನ್ನ ಅರ್ಥಮಾಡಿಸುತ್ತಾ ಕರೆದೊಯ್ಯುತ್ತಾರೆ. ಒಂದು ಯುದ್ಧ ಇನ್ನೊಂದು ಯುದ್ಧಕ್ಕೆ ನಾಂದಿಯೇ ಹೊರತು ಮತ್ತೇನಲ್ಲ ಅನ್ನೋದನ್ನ ಚೆಂದವಾಗಿ ವಿವರಿಸುತ್ತಾರೆ.ಅಧಿಕಾರಸ್ಥರ ಸಹವಾಸದಲ್ಲಿ ಎಷ್ಟು ಎಚ್ಚರವಾಗಿದ್ದರೂ ಸಾಲದು ಎನ್ನುವುದನ್ನು ಸೂಚ್ಯವಾಗಿ ಹೇಳುತ್ತಾರೆ. "ಆಡಿದರೆ ಅರಗಿಳಿ, ಕಾಡಿದರೆ ಘಟಸರ್ಪ" ಅನ್ನುವ ಸಾಲು ಇವತ್ತಿಗೂ ಪ್ರಸ್ತುತವಾಗಿದೆ.

ಋಣ ತೀರಿಸಿಕೊಳ್ಳುವುದು ಕಷ್ಟ, ಹೊರುವುದು ಇನ್ನೂ ಕಷ್ಟ. ಬದುಕಿನ ಭಾರ ಕಳೆದುಕೊಳ್ಳಬೇಕಾದರೆ ಋಣ ಕಳೆದುಕೊಳ್ಳಬೇಕು, ಆ ಪ್ರಕ್ರಿಯಲ್ಲಿ ಮನಸ್ಸು ಮಾಗುತ್ತದೆ, ಬದುಕು ಹಗುರಾಗುತ್ತದೆ. ಎದುರಾಗುವ ಕಷ್ಟಗಳು ಹರಿಯುವ ಕಣ್ಣೀರು ಆ ಕ್ಷಣಕ್ಕೆ ಕಾಡಿದರೂ, ನೋವು ಭಾಧಿಸಿದರೂ ಅಂತಿಮವಾಗಿ ಅವೆಲ್ಲವೂ ಋಣ ಹರಿದುಕೊಳ್ಳುವ ಪ್ರಕ್ರಿಯೆ ಎಂದು ಅರ್ಥವಾದಾಗ ಮನಸ್ಸಿಗೆ ನಿರ್ಲಿಪ್ತ ಭಾವ ತಂತಾನೇ ಆವರಿಸುತ್ತದೆ. ನಿರ್ಲಿಪ್ತದ ಸಾಂಗತ್ಯ ದೊರೆತಾಗ ಹೆಜ್ಜೆ ಹಗುರಾಗುತ್ತದೆ. ದಾರಿ ನಿರುಮ್ಮಳವಾಗಿ ಸಾಗುತ್ತದೆ.

ಕಂಬನಿಯ ಕುಯಿಲು ಥೇಟ್ ಬದುಕಿನಂತೆ. 
ಆರಂಭವಾಗೋದು ಕಂಬನಿಯಿಂದಲೇ... 
ಮುಗಿಯೋದು ಕಂಬನಿಯಿಂದಲೇ. 
ನಡುವಿನ ಪಯಣ ಮಾತ್ರ ನಮ್ಮ ಮನಸ್ಥಿತಿ, ಎದುರಿಸುವ ರೀತಿಯನ್ನು ಅವಲಂಬಿಸಿರುತ್ತದೆ.

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.