ಅದೊಂದು ಹೂವಿಗಾಗಿ ಎಷ್ಟು ಹಂಬಲಿಕೆ ಬಾಲ್ಯದಲ್ಲಿ ಅಸಲಿಗೆ ಅದು ಹೂವಾ  ಉದ್ದನೆಯ ಹಾಳೆಯ ತರಹದ ಅದು ಬೆಳಂದಿಗಳನ್ನ ಕುಡಿದು ಬೆಳದಿತ್ತೇನೋ ಅನ್ನೋ ಹಾಗೆ ಇರುತಿತ್ತು. ಮಾರು ದೂರದವರೆಗೆ ಅದರ ಘಮ ಹರಡುತಿತ್ತು. ಅದಕ್ಕೆ ಮರುಳಾಗದವರೇ ಇಲ್ಲಾ, ಹಾಗಾಗಿ ಅದು ಮನುಷ್ಯರಿಗಷ್ಟೇ ಅಲ್ಲಾ ಹಾವಿಗೂ ಪ್ರಿಯ. ಕೇದಿಗೆ ಅನ್ನೋ ಆ ಘಮ ನನ್ನ ಈಗಲೂ ಕಾಡುತ್ತೆ. ಅಂತಹ ಕೇದಿಗೆ ವನ ಅನ್ನೋ ಪುಸ್ತಕವನ್ನು  ಕಳಿಸಿ,  ತ.ರಾ.ಸು ಇನ್ನಷ್ಟು ಆಳವಾಗಿ ಎದೆಯೊಳಗೆ ಇಳಿಯಲು ಅವಕಾಶ ಮಾಡಿಕೊಟ್ಟವರು,  ಷಣ್ಮುಖಮ್ ಸರ್. ಫೇಸ್ಬುಕ್ ಆಪ್ತವಾಗೋದೆ ಇಂಥಹ ಕಾರಣಕ್ಕೆ.

ಕಥಾ ನಾಯಕ ರಾಜಶೇಖರನಿಗೆ ಗೊಂದಲದ ಪರಿಸ್ಥಿತಿ. ಬದುಕು ಕೆಲವೊಮ್ಮೆ ಅಚ್ಚರಿಯ ತಂದಿಟ್ಟು ತಮಾಷೆ ನೋಡುತ್ತದೆ ಅಂದ್ಕೊತಿವಿ. ಉಹೂ ಅದು ನಮ್ಮ ದೃಢತೆಯನ್ನು ಅಳೆಯುತ್ತದೆ. ಯಾವುದೋ ತಿರುವಿನಲ್ಲಿ ತಂದು ನಿಲ್ಲಿಸಿ ಹೇಗೆ ಸಾಗಬೇಕು ಅನ್ನುವುದರ ಬಗ್ಗೆ ಆಲೋಚನೆ ಹುಟ್ಟುವ ಹಾಗೆ ಮಾಡುತ್ತೆ. ಅಂಥಾ ಪರಿಸ್ಥಿತಿಯಲ್ಲಿ ಮನಸ್ಸು ಹೇಗಿರುತ್ತೆ ಅನ್ನೋದನ್ನ ತ.ರಾ.ಸು ಎಷ್ಟು ಚೆಂದವಾಗಿ ಹೇಳಿದ್ದಾರೆ ನೋಡಿ. "ಟಗರುಗಳೆರೆಡರ ಕಾಳಗದ ನಡುವೆ ಸಿಕ್ಕ ಗಿಡದಂತೆ"  ಆ ಸಂಕಟ, ಗೊಂದಲ, ಅಸಹಾಯಕತೆ, ಕೆಲವೊಮ್ಮೆ ನನ್ನ ತಪ್ಪೇನು ಅನ್ನೋ ಪ್ರಶ್ನೆ ಇವೆಲ್ಲವನ್ನೂ ಒಂದು ಸಾಲಿನಲ್ಲಿ ಕಟ್ಟಿ ಕೊಡುವ ಅವರ ಭಾಷೆ.

ಮೃದು ಸ್ವಭಾವ, ಮುಗ್ಧ , ಲೋಕವನ್ನು ಅರಿಯದವ ಅಂತಲೇ ಜಗತ್ತು ಗುರುತಿಸಿದ ರಾಜಶೇಖರನಿಗೆ ಕಾಲೇಜ್ ಗೆ ಬರುವವರೆಗೂ ನಿರ್ಧಾರ ತೆಗೆದುಕೊಂಡೇ ಗೊತ್ತಿಲ್ಲದವ. ಯಾರೋ ನಿರ್ಧರಿಸಿದ್ದನ್ನ ಪ್ರಶ್ನೆಯೂ ಮಾಡದೇ ಒಪ್ಪಿಕೊಂಡು ನಡೆಯುವವನು. ಯಾರೊಂದಿಗೆ ಬೇರೆಯಲೂ ಹಿಂಜರಿಯುವ ಅವನಿಗೆ ಆಕಸ್ಮಿಕವಾಗಿ ಸಿಗುವ ಶ್ರೀಧರ, ಅವನ ಸ್ವಾಭಿಮಾನವನ್ನು ಮೆಚ್ಚುತ್ತಲೇ ಹತ್ತಿರವಾಗಲು ಪ್ರಯತ್ನಿಸುವ ಇವನನ್ನು ಒಂದು ಅಂತರದಲ್ಲೇ ಇಟ್ಟು ನಡೆಸಿಕೊಳ್ಳುವ ರೀತಿ ಎಲ್ಲವೂ ಅವನನ್ನು ಯೋಚಿಸುವ ಹಾಗೆ ಮಾಡುತ್ತದೆ. ಯಾರೋ ಒಬ್ಬರಿಂದ ನಡೆದ ಅನ್ಯಾಯಕ್ಕೆ ಇಡೀ ಜಾತಿಯ ಮೇಲೆ ಹಗೆ ಸಾಧಿಸುವ ಅವನ ಗುರು, ಗೆಳೆಯನ ಅಸಹಾಯಕತೆ ಬದುಕಿನ ರಾಜಕಾರಣವನ್ನು ಸ್ವಲ್ಪ ಸ್ವಲ್ಪವೇ ಪರಿಚಯಿಸುತ್ತಾ ಹೋಗುತ್ತದೆ.

ಅರ್ಥಿಕ ಅಸಮಾನತೆ ಎಷ್ಟೆಲ್ಲಾ ಅವಮಾನ ಎದುರಿಸುವ ಹಾಗೆ ಮಾಡುತ್ತದೆ ಅನ್ನೋದಕ್ಕೆ ಉದಾಹರಣೆಯಾಗಿ ಶ್ರೀಧರ ನಿಲ್ಲುತ್ತಾನೆ. ಜಗತ್ತು ಸ್ಥಾನ ಮಾನಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕು, ವರ್ತಿಸಬೇಕು ಅನ್ನೋದನ್ನ ನಿರ್ಧರಿಸಿಬಿಡುತ್ತದೆ. ತಪ್ಪೋ ಸರಿಯೋ ಅವರ ನಿರೀಕ್ಷೆಗೆ ತಕ್ಕ ಹಾಗೆ ನಡೆದು ಕೊಳ್ಳದಿದ್ದರೆ ಅಸಮಾಧಾನ ಪಡುತ್ತದೆ. ಇದಕ್ಕೆ ಏನೋ ಬಡವನ ಕೋಪ ದವಡೆಗೆ ಮೂಲ ಅನ್ನೋದು. ಬಡವನಿಗೆ ಬಾಗುವುದಷ್ಟೇ ಕೆಲಸ ಮಾತ್ರ ಅಂತ ಜಗತ್ತು ನಿರ್ಧಾರ ಮಾಡಿಬಿಡುತ್ತದೆ. ಇವತ್ತಿಗೂ ಕಾಲ ಬದಲಾದರೂ ಭಾವ ಮಾತ್ರ ಬದಲಾಗಲೇ ಇಲ್ಲ. ತನ್ನ ಕನಸು ಕೈಗೂಡಲಾಗದು ಎಂದು ಅರ್ಥವಾದ ಕ್ಷಣ ತಲೆಬಾಗದೆ ಹೊರಡುವ ಶ್ರೀಧರನ ಕನಸನ್ನು ತನ್ನದಾಗಿಸಿ ಕೊಂಡು ಮೊತ್ತ ಮೊದಲ ಬಾರಿಗೆ ತನ್ನ ನಿರ್ಧಾರ ತಾನೇ ತೆಗೆದುಕೊಳ್ಳುವ ಹಾಗೆ ರಾಜಶೇಖರ ಬೆಳೆಯುವುದರಲ್ಲಿ  ಶ್ರೀಧರನ ಪಾತ್ರ ಬಹಳ ದೊಡ್ಡದು.

ಡಾಕ್ಟರ ಆಗುವ ಕನಸು ಹೊತ್ತು ಹೋಗುವ ಅವನಿಗೆ ಪ್ರವೇಶ ದೊರಕುವುದು ಕೂಡಾ ಜಾತಿಯ ಆಧಾರದ ಮೇಲೆ. ಅಲ್ಲಿ ಸಿಕ್ಕ ನಂಬಿಯಾರ್ ಅವನ ಬದುಕಿನ ದಾರಿಗೆ ಹಾಗೂ ಮುಖ್ಯ ನಿರ್ಧಾರಗಳಿಗೆ ಆಧಾರವಾಗಿ ಕನಸನ್ನು ನನಸಾಗಿಸುವ ದೀಪ ಪ್ರಜ್ವಲಿಸುವ ಹಾಗೆ ಮಾಡುತ್ತಾರೆ. ಆ ಸಮಯದಲ್ಲಿ ನಡೆಯುವ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಕ್ಲಾಸ್ ಗೆ ತೆರಳುವ ಇವನಿಗೆ ಅರಿಶಿನ ಕುಂಕುಮದ ಪೊಟ್ಟಣ ಕೊಟ್ಟು ಕಳಿಸುವ ಕಾತ್ಯಾಯಿನಿ ಇವನಿಗೆ ಸವಾಲಾಗುತ್ತಾಳೆ, ಮಾನಸಿಕ ಕ್ಷೋಭೆಗೆ ಗುರಿಯಾಗುವ ಹಾಗೆ ಮಾಡುತ್ತಾಳೆ. ತಾಯಿಯ ಸಾವು, ತಂದೆಗಾದ ನಿರಾಸೆಯಿಂದ ಹುಟ್ಟಿದ ಕ್ರೋಧ, ಕಾತ್ಯಾಯನಿಯ ಹೋರಾಟದ ಕನಸು ಇವೆಲ್ಲಗಳ ಮಧ್ಯೆಯೂ ತನ್ನ ಕನಸನ್ನು ನನಸಾಗಿಸಿ ಕೊಳ್ಳಲು ದೃಢಚಿತ್ತದಿಂದ ಹೊರಡುವ ರಾಜಶೇಖರ ಮುಗ್ಧ, ಲೋಕವನ್ನು ಅರಿಯದವ ಅನ್ನುವ ಸಮಾಜದ ಕರುಣೆ, ಕುಹಕಕ್ಕೆ ಸೆಡ್ಡು ಹೊಡೆದು ನಿಲ್ಲುವ ಪರಿ ತ.ರಾ.ಸು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ಮತ್ತದನ್ನ ತುಂಬಾ ಚೆಂದವಾಗಿ ಕಾತ್ಯಾಯನಿಯ ಬಾಯಿಯಲ್ಲಿ ಹೇಳಿಸಿದ್ದಾರೆ.
ಸಾಧನೆಗೆ ಬೇಕಾಗಿದ್ದು ಆವೇಶವಲ್ಲ, ನಿರುದಿಗ್ನ ಚಿತ್ತ.

ಹದಿಹರೆಯದಲ್ಲಿ ಕ್ರಾಂತಿ ಅನ್ನೋದು ಅಪ್ಯಾಯಮಾನವಾದಷ್ಟೂ ಇನ್ನಾವದೂ ಆಗೋಲ್ಲ. ಅದು ಕುದಿಯುವ ಮನಸ್ಸು, ಎಲ್ಲವನ್ನೂ ಧಿಕ್ಕರಿಸಿ, ಆವೇಶದಿಂದ ಮಾತ್ರ ಪರಿಹಾರ ಸಾಧ್ಯ ಅನ್ನೋದನ್ನ ಬಲವಾಗಿ ನಂಬಿರುವ ವಯಸ್ಸು. ಆ ವಯಸ್ಸಿನಲ್ಲಿ ನಮ್ಮ ಓದು, ಸಿಕ್ಕ ಮಾರ್ಗದರ್ಶಕರು ಹೇಗಿರುತ್ತಾರೆ ಅನ್ನುವುದರ ಮೇಲೆ ಬದುಕಿನ ದಾರಿ ನಿರ್ಧಾರವಾಗುತ್ತದೆ. ಕಮ್ಯುನಿಸಂ ನ ಆಕರ್ಷಣೆಗೆ ಒಳಗಾದ ಕಾತ್ಯಾಯನಿಗೆ ಶ್ರೀಮಂತರ ಕಂಡರೆ ದ್ವೇಷ. ಸಮಾಜದ ಬದಲಾವಣೆಗೆ ಕ್ರಾಂತಿಯೊಂದೇ ಪರಿಹಾರ ಅನ್ನೋದರ ಮೇಲೆ ಬಲವಾದ ನಂಬಿಕೆ. ಭುಗಿಲೆದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ತನ್ನ ಪಾಡಿಗೆ ತನ್ನ ಕೆಲಸಕ್ಕೆ ತೆರಳಿದ ರಾಜಷೆಖರನ ಮೇಲೆ ಅಸಹ್ಯ. ಯಾವ ಕಿಚ್ಚೂ ಶಾಶ್ವತವಲ್ಲ, ಉರಿ ನಿರಂತರವಲ್ಲ, ಆವೇಶಕ್ಕೂ ಇಳಿತವಿದೆ ಅನ್ನೋದರ ಅರ್ಥವಾದಾಗ ಭ್ರಮೆ ಸ್ವಲ್ಪ ಮಟ್ಟಿಗೆ ಹರಿದು ಅಸಹ್ಯ ಪಟ್ಟವನನ್ನೇ ಪ್ರೀತಿಸುವ ಹಾಗಾಗೋದು ಬದುಕಿನ ವಿಪರ್ಯಾಸ.

ಜಗತ್ತಿನಲ್ಲಿ ಬಾಳವಷ್ಟು ದಿನ ಅದರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಕು ಅನ್ನುವ ಅವಳ ಅಣ್ಣ ಕ್ರಾಂತಿಯ ಭ್ರಮೆಯಲ್ಲಿ ಕಟುಕರ ಹಾಗೆ ಕಾಣುತ್ತಾನೆ. ಕಮ್ಯುನಿಸಂ ಹುಚ್ಚಿನಲ್ಲಿ ಮದುವೆ, ದೇವರು, ಎಲ್ಲವೂ ಅರ್ಥವಿಲ್ಲದ ಕೇವಲ ದೈಹಿಕ ವಾಂಛೆಯಷ್ಟೇ ಅನ್ನೋ ಭಾವವನ್ನು ನಂಬಿರುವ ಅವಳಿಗೆ ರಾಜಶೇಖರನ ಪ್ರೀತಿ ಬೇಕನಿಸಿದರೂ ನಂಬಿದ ಸಿದ್ದಾಂತ ಅವನನ್ನು ತನ್ನ ವಿಚಾರ ಒಪ್ಪಿದಾಗ ಮಾತ್ರ ಆ ಸಂಬಂಧಕ್ಕೊಂದು ಅರ್ಥ ಅನ್ನೋ ನಿರ್ಧಾರಕ್ಕೆ ಬರುವ ಹಾಗೆ ಮಾಡುತ್ತದೆ. ಎಷ್ಟೇ ಗಟ್ಟಿ ವ್ಯಕ್ತಿತ್ವದವಳಾದರೂ ಕಾತ್ಯಾಯಿನಿ ನನ್ನ ಕಣ್ಣಿಗೆ ಬಲೆಯಲ್ಲಿ ಸಿಕ್ಕಹಾಗೆ ಕಾಣಿಸುತ್ತಾಳೆ. ಗೊಂದಲ, ದ್ವಂದ್ವ ಅವಳ ಬದುಕನ್ನೇ ಆಪೋಶನ ತೆಗೆದುಕೊಂಡ ಹಾಗೆ ಅನ್ನಿಸುತ್ತದೆ. ಬದುಕು ನಿರಾಳವಾಗಿರಬೇಕಾದರೆ ಪತ್ರಿಕೆಯಿಂದ ದೂರವಿರಿ ಅನ್ನುವ ಶ್ರೀಧರನ ಮಾತು ಈ ಕ್ಷಣಕ್ಕೂ ಪ್ರಸ್ತುತವೆನಿಸುತ್ತದೆ.

ಆದರ್ಶದ ಮಾತುಗಳಾಡಿದ ಗೆಳೆಯ, ಬದುಕು ಕೊಟ್ಟ ತಂದೆ, ಪ್ರೀತಿಸಿದ ಹುಡುಗಿ ಎಲ್ಲರೂ ತಮ್ಮ ತಮ್ಮ ಕನಸಿಗೆ ಪೂರಕವಾಗಿಲ್ಲ ಅನ್ನುವ ಕಾರಣಕ್ಕೆ ದೂರವಾದಾಗ ಪರಿತಪಿಸುವ ರಾಜಶೇಖರ ಅವೆಲ್ಲದರ ನಡುವೆಯೂ ತನ್ನ ಗುರಿಯನ್ನು ತಲುಪುವ ಛಲ, ದೃಢತೆ ಇಷ್ಟವಾಗುತ್ತದೆ. ಬದುಕಿಗೆ ಕೇವಲ ಗುರಿಯಿದ್ದರೆ ಸಾಲದು ಅದನ್ನ ಮುಟ್ಟುವ ತಪನೆ, ಹಠ ಎರಡೂ ಬೇಕು ಅನ್ನೋದನ್ನ ಚೆಂದವಾಗಿ ಹೇಳಿದ್ದಾರೆ. ಭ್ರಮೆ ಬದುಕನ್ನ ಹೇಗೆಲ್ಲಾ ಇರಿಯುತ್ತದೆ ಅನ್ನೋದನ್ನ ಸಮರ್ಥವಾಗಿ ತಿಳಿಸಿದ್ದಾರೆ. ಘಮ ಘಮಿಸುವ ಕೇದಿಗೆ ಎಲ್ಲರಿಗೂ ಇಷ್ಟ, ಆದರೆ ಅದನ್ನು ಪಡೆಯುವುದು ಮಾತ್ರ ಕಷ್ಟ. ಅದಕ್ಕೆ ದೃಢ ಚಿತ್ತ ಬೇಕು, ಏನೇ ಆಗಲಿ ಮುಂದೆ ಸಾಗುವ ಛಲ ಬೇಕು. ಎಲ್ಲವುದಕ್ಕಿಂತ ಮುಖ್ಯವಾಗಿ ಇದು ನನ್ನ ಬದುಕು  ನಾನು ಮಾತ್ರ ನಡೆಯಬೇಕು ಅನ್ನೋದು ಅರ್ಥವಾಗಬೇಕು. ಅವರದೇ ಸಾಲಿನಿಂದ ಮುಗಿಸುವುದಾದರೆ....

ಕೇದಿಗೆಯ ವನದೊಳಗೆ ಸಂಚರಿಸದಿರು ಚೆಲುವೆ..
ಕಂಪಿನಾಗರವಲ್ಲ .... ಸರ್ಪದೊಡಲು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...