ಮರಳು ಸೇತುವೆ.

ಮರಳು ಸೇತುವೆ ಅಂದಾಗಲೇ ಕೈ ಅದರೆಡೆಗೆ ಹೋಗಿ ಬಾಚಿ ಎತ್ತಿಕೊಂಡಿತ್ತು. ಈ ತ.ರಾ.ಸು ಕಾದಂಬರಿಯ ಹೆಸರುಗಳೇ ಹಾಗೆ ಕಣ್ಣನ್ನು ತಕ್ಷಣ ಸೆಳೆಯೋದು ಮಾತ್ರವಲ್ಲ ಇಡೀ ಪುಸ್ತಕದ ವಿಸ್ತಾರವನ್ನು ಸೂಕ್ಷ್ಮವಾಗಿ ಹೇಳಿಬಿಡುತ್ತದೆ. ಇದು ಅರ್ಥವಾಗಿದ್ದು ಬಿಡುಗಡೆಯ ಬೇಡಿ ಪುಸ್ತಕದ ಕುರಿತು ಬರೆದ ಅನಿಸಿಕೆಯಲ್ಲಿ ಮಾಲಿನಿ ಅಕ್ಕ ಹೆಸರೇ ಹಾಗಿದೆ ನೋಡು ಅಂದಾಗ. ಅರೆ ಹೆಸರು ಇಷ್ಟವಾಗಿತ್ತು ಆದ್ರೆ ಇಡೀ ಪುಸ್ತಕದ ಆಶಯ ಹೇಗೆ ಬಿಂಬಿತವಾಗಿದೆ ಅನ್ನೋದು ಗಮನಿಸಿಯೇ ಇರ್ಲಿಲ್ಲ ಅಂತ ಆಶ್ಚರ್ಯದ ಜೊತೆಗೆ ಮಾಲಿನಿ ಅಕ್ಕನ ಸೂಕ್ಷ್ಮತೆ ಬಗ್ಗೆ ಬೆರಗು ಸಹ.

"ಎಲ್ಲವುದಕ್ಕೂ ಮುಕ್ತಾಯವಿರುವಂತಯೇ, ಒಂದು ಆರಂಭವೂ ಇದೆ ಅನ್ನೋ ಸಾಲಿಂದಲೇ ಶುರುವಾಗುವ ಕಾದಂಬರಿ ಮುಂದೆ ಓದದಂತೆ ಒಂದು ಕ್ಷಣ ತಡೆ ಹಿಡಿದಿದ್ದು ಹೌದು. ಅರೆ ಹೌದಲ್ವಾ ನಂಗೆ ಯಾಕೆ ಹೀಗಾಗುತ್ತೆ ಅನ್ನೋ ಎಷ್ಟೋ ಪ್ರಶ್ನೆಗಳಿಗೆ ಇದೊಂದು ಸಾಲು ಉತ್ತರ ಕೊಡುತ್ತಲ್ವಾ, ಯಾವುದೋ ತಿರುವಿನಲ್ಲಿ ನಿಂತು ಕಂಗಾಲಾಗುವ ಮುನ್ನ ಆರಂಭವನ್ನು ಒಮ್ಮೆ ಅವಲೋಕಿಸಿದರೆ ಮುಂದಿನ ದಾರಿ ನಿಚ್ಚಳವಾಗಬಹುದೇನೋ, ಅಥವಾ ಕೊನೆಪಕ್ಷ ನಡೆಯಲು ಕಾಲಿಗೆ ಕಸುವಾದರೂ ತುಂಬಬಹುದೇನೋ. ಯಾಕೆಂದರೆ ಬದುಕು ಅನಿರೀಕ್ಷಿತ ತಿರುವಿನಲ್ಲಿ ತಂದು ನಿಲ್ಲಿಸಿಬಿಡುತ್ತದೆ,  ವಿನಾಕಾರಣ ಅನುಭವಿಸವ ಹಾಗೆ ಮಾಡುತ್ತೆ ಅನ್ನೋ ನಮ್ಮ ಯೋಚನೆಯೇ ತಪ್ಪು, ಅಕಾರಣವಾಗಿ ಯಾವುದೂ ಜರುಗುವುದಿಲ್ಲ  ಅನ್ನೋದಕ್ಕೆ ಪುನಃ ಪುನಃ ಇಂಥ ಹಲವಾರು ಕಾರಣಗಳು ಪುಷ್ಟಿ ಕೊಟ್ಟಿವೆ.

ನಮ್ಮ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲಾಗಿಸುವ ಶಕ್ತಿ  ಪ್ರಕೃತಿಗಿದೆಯೋ ಅಥವಾ ನಮ್ಮ ಲೆಕ್ಕಾಚಾರಗಳೇ ಬುಡವಿಲ್ಲದವೋ ಅನ್ನೋದು ಈ ಕ್ಷಣಕ್ಕೂ ಗೊಂದಲವೇ. ಪ್ರತಿಯೊಂದನ್ನೂ ಅಧ್ಯಾತ್ಮಿಕ ನೆಲಗಟ್ಟಿನಲ್ಲಿ ನೋಡಿ ಯಾವ ಜನ್ಮದ ಕರ್ಮ ಫಲವೋ ಕಳೆದು ಕೊಳ್ಳಬೇಕು ಅನ್ನೋ ಭಾವ ಬದುಕನ್ನ ಮುಂದಕ್ಕೆ ಸಾಗಲು ಶಕ್ತಿ ಕೊಡುತ್ತೆ. ಈ ನೆಲದ ವೈಶಿಷ್ಟ್ಯವೇ ಅದು. ದೇವಸ್ಥಾನದ ಸುತ್ತ ಸುತ್ತವ ಈ ಕಾದಂಬರಿ ಮನುಷ್ಯನ ಅರಿಷಡ್ವರ್ಗಗಳನ್ನ ಪರಿಚಯಿಸುತ್ತಾ ಹೋಗುತ್ತದೆ. ಒಂದು ಕತೆ ಇನ್ಯಾವುದೋ, ಇನ್ಯಾರದೋ ಸಂಕಟಕ್ಕೆ ಮುಲಾಮು ಆಗಬಹುದು ಅನ್ನುವುದನ್ನ ಮೌನವಾಗಿಯೇ ಪರಿಚಯಿಸುತ್ತದೆ.  ಐತಿಹಾಸಿಕ ಸ್ಥಳಗಳ ಬಗೆಗಿನ ನಮ್ಮ ನಿರ್ಲಕ್ಷ್ಯ, ತಾತ್ಸಾರ ನೋಡಿ ಕೊರಗುವ ಕ್ರೋಧಗೊಳ್ಳುವ ಕಥಾನಾಯಕ ಅದನ್ನು ವಿವರಿಸಲು ಹೋದಾಗ ಅಲ್ಲಿಯ ಮೇಟಿ ಹೇಳುವ ಮಾತು ನೋಡಿ..
"ಬಿಡಿ ಸ್ವಾಮೀ ಅದೆಲ್ಲಾ ಬೋಳಿ ತುರುಬು ನೆನಸಿಕೊಂಡ ಸಮಾಚಾರ! ಸತ್ತ ಮಗು ಹೆಸರು ಜ್ಞಾಪಿಸಿಕೊಂಡರೆ ಯಾವ ತಾಯ ಮೊಲೆ ಹಾಲು ತೊಟ್ಟಿಕ್ಕುತ್ತೆ? ನಿಮಗೇನೂ ಹುಚ್ಚು ಬಂದಿದೀಗ. ನಿಮ್ಮ ಹುಚ್ಚು ನಮಗೂ ಇಲ್ಲಾಂತ ನಮ್ಮ್ ಮೇಲೆ ಯಾಕೆ ರೇಗ್ತಿರಾ!

ಇಡೀ ಭಾರತೀಯರ ಮನಸ್ಥಿತಿಯನ್ನು, ವಸ್ತುಸ್ಥಿತಿಯನ್ನು ಇದಕ್ಕಿಂತ ಚೆಂದ ಹೇಳಲು ಸಾದ್ಯವೇ? ಬೆಲೆ ಕಟ್ಟವುದನ್ನ ಮರೆತೇ ಬಿಟ್ಟಿದ್ದೇವೆ ನಾವು ಅನ್ನೋ ಸಣ್ಣ ವೇದನೆ ಹೊಗೆಯಾಡುತ್ತಿದ್ದಂತೆ ಓದು ಮುಂದುವರಿಸಿದೆ. ಸ್ವಾತಂತ್ರ್ಯ ಪೂರ್ವಕಾಲವದು. ನರಸಿಂಹರಾಜ ಅಗ್ರಹಾರದ ನರಸಿಂಹ ಸ್ವಾಮಿ ದೇವಸ್ಥಾನ ಕಾದಂಬರಿಯ ಕೇಂದ್ರ ಬಿಂದು. ಶ್ರೀವೈಷ್ಣವರು, ಸ್ಮಾರ್ಥರ ನಡುವಿನ ಅಂತಃಕಲಹಕ್ಕೆ, ಅಧಿಕಾರದ ಹಂಬಲಕ್ಕೆ ದೇವಸ್ಥಾನ ಪಣವಾಗುತ್ತದೆ. ವೆಂಕಟಾಚಾರಿಯೆಂಬ ಬುದ್ಧಿವಂತ, ಚಾಣಾಕ್ಷ ವ್ಯಕ್ತಿಯಿಂದ ಅದು ಶ್ರೀವೈಷ್ಣವರಿಗೆ ಸೇರುತ್ತದೆ. ನಂತರ ಅತಿ ಆಸೆಗೆ ಬಿದ್ದ ವೆಂಕಟಾಚಾರಿ ದೇವಸ್ಥಾನದ ಮೇಲೆ ಅಧಿಕಾರ ಸ್ಥಾಪಿಸಿ ಅಲ್ಲಿನ ಸಂಪತ್ತನ್ನ ಕಂಡು ಮೋಹಿತನಾಗಿ ಅದನ್ನು ಲಪಟಾಯಿಸಿ ಧನ ಮದ ಅಧಿಕಾರ ಮದದಿಂದ ಬೀಗುತ್ತಾನೆ.

"ಯಾರನ್ನಾದರೂ ಒಬ್ಬರನ್ನು ಮುರಿಯಬೇಕು ಎನಿಸಿದಾಗ ದೇವರು ಆ ವ್ಯಕ್ತಿಯ ಯಾವುದೋ ಒಂದು ಬಯಕೆಯನ್ನು ಕಾರಣವಾಗಿ ಮಾಡಿಕೊಂಡು ಆ ವ್ಯಕ್ತಿಯನ್ನು ವಿನಾಶಕ್ಕಟ್ಟುತ್ತಾನೆ." ಎಷ್ಟೇ ಚಾಣಾಕ್ಷನಾದರೂ ಏನೇ ಮೆರೆದರೂ ಪ್ರತಿಯೊಬ್ಬ ವ್ಯಕ್ತಿಗೂ ಒಂದು ದೌರ್ಬಲ್ಯ ಇದ್ದೆ ಇರುತ್ತದೆ ಮತ್ತದೇ ಅವನ ಅಧಃಪತನಕ್ಕೂ ಕಾರಣವಾಗುತ್ತದೆ. ಒಂದು ಬಗೆಯ ಅಮಲಿನಲ್ಲಿದ್ದ ವೆಂಕಟಾಚಾರಿಯನ್ನೂ ಅವನ ದೌರ್ಬಲ್ಯದಿಂದ ನಲುಗಿದ್ದ ಅವನ ಮಿತ್ರನೊಬ್ಬನ ಸೇಡಿನಿಂದ ಕೊನೆಯಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ಅವನು ಎದೆಯೊಡೆದು ಸಾಯುತ್ತಾನೆ. ಅವನದೋ ಸುಲಭ ಸಾವು ಆದರೆ ಅವನ ಕುಟುಂಬ ಮಾತ್ರ ಇನ್ನಿಲ್ಲದ ತೊಂದರೆಗೆ ಒಳಗಾಗಿ ಮೊಮ್ಮಗ ಮಾತ್ರ ಇವರಿಬ್ಬರಿಗಿಂತ ಬೇರೆಯಾಗಿ ನಿಂತು ತನ್ನ ಕೊನೆಯುಸಿರಿಗೆ ಇದು ಕೊನೆಯಾಗಲಿ ಎಂದು ಕಾಯುತ್ತಾನೆ, ಫಲ ಕೊನೆಗೊಳ್ಳಲಿ ಋಣ ತೀರಲಿ ಅನ್ನ್ನುತ್ತಲೇ  ಅನುಭವಿಸುತ್ತಾನೆ.
 ಒಳ್ಳೆಯದೋ ಕೆಟ್ಟದ್ದೋ ಮಾಡಿದ ಪ್ರತಿ ಕೆಲಸಕ್ಕೂ ಫಲವುಂಟು, ಮತ್ತು ಆ ಫಲ ಕೇವಲ ಮಾಡಿದವರನ್ನು ಮಾತ್ರವಲ್ಲ ಅವರ ಕುಟುಂಬವನ್ನು ಕಾಡುತ್ತೆ ಅನ್ನೋದು ಈ ನೆಲದ ನಂಬಿಕೆ. ಅದಕ್ಕೆಂದೇ ಒಳ್ಳೆಯ ಕೆಲಸವನ್ನೇ ಮಾಡಬೇಕು ಅನ್ನೋದು ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದು. ಇವತ್ತಿಗೂ ಬಹುತೇಕರು ಕರ್ಮಫಲನಂಬಿಯೇ ಬದುಕಿಗೆ ಶಕ್ತಿ ಕೂಡಿಸಿಕೊಂಡಿದ್ದಾರೆ. ಚಕ್ರೇಶ್ವರಿಯ ಬಳಿಕ ಮತ್ತೊಂದು ದುರಂತ ಕತೆ ಓದಿದ್ದೆಂದರೆ ಅದು ಮರಳು ಸೇತುವೆ. ಪ್ರಕೃತಿಯ ನಿಗೂಢತೆ ನಮ್ಮ ತರ್ಕಕ್ಕೆ ನಿಲುಕದ್ದು. ಅದನ್ನ ಧಿಕ್ಕರಿಸಿ ಎಂದೂ ನೆಮ್ಮದಿಯಾಗಿ ಬದುಕಲಾರೆವು.

"ವಿಷವನ್ನು ವಿಷವೆನ್ನಬಾರದು: ದೇವಸ್ವವೇ ವಿಷ.
ವಿಷ ಒಬ್ಬನನ್ನು ಕೊಂದರೆ, ದೇವಸ್ವ ಪುತ್ರ ಪೌತ್ರಿಕರನ್ನೂ ಕೊಲ್ಲುತ್ತದೆ.
ಬ್ರಹ್ಮಸ್ವ ದಿಂದ ಪರಿಪುಷ್ಪವಾದ ವಾಹನ, ಬಲ ಮೊದಲಾದ ಸಕಲ ಸಂಪತ್ತು
ಯತ್ನ ಕಾಲದಲ್ಲಿ, ಮರಳಿನಲ್ಲಿ ಕಟ್ಟಿದ ಸೇತುವೆಯ ಹಾಗೆ ವಿನಾಶವಾಗುತ್ತದೆ."

ಅನ್ನುವ ಈ ಸುಭಾಷಿತ ಬದುಕಲ್ಲಿ ಎಷ್ಟು ಎಚ್ಚರವಾಗಿರಬೇಕು ಅನ್ನೋದನ್ನ ತಿಳಿಸುವುದರ ಜೊತೆಗೆ ನಮ್ಮ ತಪ್ಪು ಮತ್ಯಾರೋ ಬದುಕನ್ನ ಅವರ ತಪ್ಪಿಲ್ಲದೇ ಹೇಗೆ ನರಕಗೊಳಿಸಲು ಕಾರಣವಾಗುತ್ತೆ ಅನ್ನೋದೂ ಅರ್ಥವಾಗುತ್ತೆ. ದೇವರೋ, ಪ್ರಕೃತಿಯೋ, ಶಕ್ತಿಯೋ ಮತ್ತೇನೋ ನಾವು ಏನು ಮಾಡುತ್ತೇವೋ ಅದು ವಾಪಾಸ್ ಬರುತ್ತೆ ಅನ್ನೋದು ಈ ನೆಲ ಕಂಡುಕೊಂಡ ಸತ್ಯ.ಮತ್ತದೇ ಹೇಗೆ ಬದುಕಬೇಕು ಅನ್ನೋ ಪ್ರಶ್ನೆಗೆ ಉತ್ತರ.

ಮರಳುಗಾಡಿನಲ್ಲಿ ಮರೀಚಿಕೆಯದೇ ರಾಜ್ಯಭಾರ........


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...