ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ, ಮಾಡುವ ಪ್ರತಿ ಕೆಲಸದಲ್ಲೂ ದೇಹದ ಜೊತೆ ಮನಸ್ಸನ್ನೂ ಸಂಯೋಗಿಸಿ ಮಾಡುವ ಕ್ರಿಯೆ. ಸೃಷ್ಟಿಯ ರಚನೆ ಎಷ್ಟು ಅದ್ಭುತ ಹಾಗೂ ಸುಂದರವಾಗಿದೆ ಎಂದರೆ ಪ್ರತಿಯೊಂದೂ ತನ್ನ ಕೆಲಸವನ್ನು ತಾನು ಶ್ರದ್ದೆಯಿಂದ ಹಾಗೂ ಶಿಸ್ತಿನಿಂದ ನಡೆಸಿಕೊಂಡು ಹೋಗುತ್ತದೆ. ನಮ್ಮ ದೇಹದ ಅಂಗಗಳ ಕಾರ್ಯ ವೈಖರಿಯನ್ನು ಗಮನಿಸಿದಾಗ ಇದು ಅರಿವಾಗುತ್ತದೆ. ನಾವು ಗಮನಿಸುತ್ತಿಲ್ಲ ಎಂದು ಯಾವ ಅಂಗವೂ ಅಸಹಿಷ್ಣುತೆಯ ನೆಪವೊಡ್ಡಿ ತನ್ನ ಕಾರ್ಯ ನಿಲ್ಲಿಸಿ ಮುಷ್ಕರ ಹೂಡಿಲ್ಲ.ಯಾವುದೇ ಕೆಲಸವನ್ನಾಗಲಿ ಗಮನವಿಟ್ಟು ಮಾಡಿದಾಗ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಸಿಗುವ ಫಲಿತಾಂಶ ಹಾಗೂ ಕಾಟಾಚಾರಕ್ಕೆ ಮಾಡಿದಾಗ ಸಿಗುವ ಪಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ತನ್ನನ್ನು ಸರಿಯಾಗಿ ಅರಿಯದೆ ಇನ್ನೊಬ್ಬರನ್ನು ತಿಳಿಯಲು ಸಾದ್ಯವಿಲ್ಲ. ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಮಾರ್ಗವೇ ಯೋಗ.
ಹೊರ ಪ್ರಪಂಚವನ್ನು ನಮಗೆ ಅನುಕೂಲಕರವಾಗಿ ನಿರ್ಮಿಸಿಕೊಳ್ಳುವ ನಾವು ನಮ್ಮೊಳಗಿನ ಪ್ರಪಂಚವನ್ನು ಮರೆತೇ ಬಿಟ್ಟಿರುತ್ತೇವೆ. ಉದಾಸೀನ ಮಾಡಿರುತ್ತೇವೆ. ಪ್ರತಿಯೊಂದು ಭಾವದ ಜನ್ಮವೂ ಒಳ ಪ್ರಪಂಚದಲ್ಲೇ, ಬದುಕಿನ ಆರಂಭವೂ ಅಲ್ಲೇ. ಹಾಗಾಗಿ ನಮ್ಮ ಗಮನ ಜಾಸ್ತಿ ಇರಬೇಕಾಗಿದ್ದೂ ಅಲ್ಲೇ. ಹೊರಗಿನ ಘಟನೆಗಳನ್ನು ನಾವು ನಿಯಂತ್ರಿಸಲಾರೆವು, ಆದರೂ ಪ್ರಯತ್ನಿಸುತ್ತೇವೆ, ನಿರಾಶರಾಗುತ್ತೇವೆ. ನಮ್ಮೊಳಗಿನ ಸಾಮ್ರಾಜ್ಯ ನಮ್ಮಧೀನ ಆದರೆ ಮರೆತು ಅರಾಜಕತೆ ಸೃಷ್ಟಿಸುತ್ತೇವೆ. ಇದರ ಅರಿವು ಮೂಡಿಸಿ ನಮ್ಮನ್ನು ಸಶಕ್ತರನ್ನಾಗಿಸುವುದೇ ಯೋಗ.
ಉಸಿರಾಟದ ಗತಿ ಬದುಕಿನ ಗತಿಯನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಬದುಕಿಗೆ ಚೈತನ್ಯ ತುಂಬಿಸುವ ಪ್ರಾಣಶಕ್ತಿಯತ್ತ ನಮ್ಮ ಗಮನ ಹರಿದರೆ, ನಿರ್ಧಿಷ್ಟವಾದ ರೀತಿಯಲ್ಲಿ ಅದನ್ನು ಅಭ್ಯಾಸಮಾಡಿದರೆ ಬದುಕಿನಲ್ಲಿ ಮಹತ್ತರ ಬದಲಾವಣೆಗಳಾಗುತ್ತದೆ. ಪ್ರತಿಯೊಂದಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವ ಕಲೆ ಸಿದ್ದಿಸುತ್ತದೆ. ಸೂಕ್ತವಾಗಿ ಸ್ಪಂದಿಸಲು ಕಲಿತಾಗಲಷ್ಟೇ ಸಹಜೀವಿಗಳೊಂದಿಗೆ ಸುಂದರ ಬದುಕು ಸಾದ್ಯ. ಇದನ್ನು ಕಲಿಸುವಲ್ಲಿ ಬದುಕನ್ನು ಅರಳಿಸುವಲ್ಲಿ ಯೋಗದ ಪಾತ್ರ ಮುಖ್ಯವಾದದ್ದು.
ಸೃಷ್ಟಿಯ ವಿಶಾಲತೆಯೆದುರು, ಅಗಾಧತೆಯ ಮುಂದೆ ಮಾನವ ಅತಿ ಸಣ್ಣ ಬಿಂದು ಅಷ್ಟೇ.. ಇಲ್ಲಿ ಪ್ರತಿಯೊಂದು ಒಂದು ನಿಯಂತ್ರಣಕ್ಕೆ ಶಿಸ್ತಿಗೆ ಒಳಪಟ್ಟು ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ನಮ್ಮ ವೈಭೋಗಕ್ಕಾಗಿ ನಡೆಸುವ ಹಲವು ಚಟುವಟಿಕೆಗಳು ಇದರ ಗತಿಗೆ ವಿರುದ್ದವಾಗಿವೆ. ಪ್ರಕೃತಿ ವಿಕೋಪಗಳೇ ಇದಕ್ಕೆ ಸಾಕ್ಷಿ. ಪ್ರತಿಯೊಂದಕ್ಕೂ ತನ್ನದೇ ಆದ ನಿಯಮಗಳು ಇರುತ್ತವೆ ಮತ್ತು ಅದನ್ನು ಪಾಲಿಸುವುದು ನೆಮ್ಮದಿಯ ಬದುಕಿಗೆ ಅನಿವಾರ್ಯ ಕೂಡಾ. ಸೃಷ್ಟಿಯ ಗತಿಯನ್ನು ಅರಿಯುವ, ಅದರ ಸುಂದರತೆಯಲ್ಲಿ ಸಹಜವಾಗಿ ಮಿಳಿತವಾಗುವ ಪ್ರಯತ್ನವೇ ಯೋಗ.
ಹಾಗಾಗಿಯೇ ಇದೊಂದು ಜೀವನ ಪದ್ಧತಿ. ನಮ್ಮನ್ನು ನಾವು ಅರಿತುಕೊಳ್ಳುವ ತನ್ಮೂಲಕ ಬೆಳಸಿಕೊಳ್ಳುವ ಪ್ರಕ್ರಿಯೆ. ಇದಕ್ಕೆ ಯಾವುದೇ ಜಾತಿ, ಮತ, ಧರ್ಮಗಳ ಹಣೆಪಟ್ಟಿ ಅಂಟಿಸದೆ ಸ್ವಾಗತಿಸೋಣ. ನೆಮ್ಮದಿಯ ಬದುಕಿನತ್ತ ಹೆಜ್ಜೆಯಿಡೋಣ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...