ತಿರುಗುಬಾಣ

ರಕ್ತರಾತ್ರಿ ಓದಿ ಕೆಳಗಿಡುವ ಹೊತ್ತಿಗೆ ಮೈಯ ರಕ್ತವೂ ಕುದಿದು ನೆತ್ತರಿನ ದಾಹ ಉಂಟಾಗುತ್ತದೆ. ಅಷ್ಟರಮಟ್ಟಿಗೆ ತ.ರಾ.ಸು ನಮ್ಮನ್ನು ಕತೆಯೊಳಗೆ ಎಳೆದುಕೊಂಡು ಅರಿವಿಲ್ಲದಂತೆ ನಾವೂ ಪಾತ್ರವಾಗುವ ಹಾಗೆ ಮಾಡುತ್ತಾರೆ. ಮನುಷ್ಯನ ಮೂಲಭೂತ ಗುಣವೇ ಈ ಗುರುತಿಸಿಕೊಳ್ಳುವಿಕೆ ಅನ್ನಿಸುತ್ತದೆ. ನಾವು ಗೊತ್ತಿಲ್ಲದೇ ಯಾವುದಾದರೂ ಒಂದರ ಜೊತೆ ಗುರುತಿಸಿಕೊಂಡು ಬಿಡುತ್ತೇವೆ. ಹಾಗೆ ಗುರುತಿಸಿ ಕೊಂಡ ಕ್ಷಣದಿಂದ ಅದರ ಸಂಬಂಧಿ ರಾಗ ದ್ವೇಷಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಅಸಲಿಗೆ ಹಾಗೆ ಗುರುತಿಸಿಕೊಳ್ಳುವುದು ಅನಿವಾರ್ಯಾವಾ? ಇನ್ನೊಬ್ಬರನ್ನು ಪ್ರಶ್ನಿಸಿದಷ್ಟು ಸರಳವಲ್ಲ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವುದು.

ದುಃಖದ ಕಣ್ಣೀರು ಪ್ರತಿಕಾರದ ಬೆಂಕಿಯನ್ನು ಹೊತ್ತಿಸುವುದೇ ಸೋಜಿಗ. ಈ ವಿಷಯದಲ್ಲಿ ಮಾತ್ರ ನೀರು ಬೆಂಕಿ ಅಪ್ಪಟ ಸ್ನೇಹಿತರಂತೆ ವರ್ತಿಸುತ್ತದೆ. ಹೀಗೆ ಪ್ರತೀಕಾರದ ಬೆಂಕಿಯಲ್ಲಿ ಬೇಯುವ ಮೊದಲ ವ್ಯಕ್ತಿ ಗಿರಿಜೆ. ಬೆಂಕಿಯದು ಹಬ್ಬುವ ಗುಣ. ನಿಯಂತ್ರಣವಿಲ್ಲದೇ ಹೋದರೆ ಅದು ಹಬ್ಬುತ್ತಾ ಸಿಕ್ಕಿದ್ದನ್ನು ತನ್ನೊಡಲಿಗೆ ಎಳೆದು ಕೊಳ್ಳುತ್ತಾ ಹೋಗುತ್ತದೆ. ಹೀಗೆ ಸಿಲುಕುತ್ತಾ ಹೋಗುವವರು ಪರಶುರಾಮಪ್ಪ, ಭರಮಣ್ಣ, ಊರ ಗೌಡರು ಸಾಲಿಗೆ ಸೇರುವುದು ಕಲ್ಲುಮಠದ ಸ್ವಾಮಿಗಳು ಸಹ. ದುಷ್ಟರಿಗಿಂತ ಅಪಾಯಕಾರಿ ಆ ದುಷ್ಟತನವನ್ನು ವಿರೋಧಿಸದೆ ಮೌನವಾಗಿ ಇರುವವರು ಅನ್ನೋದನ್ನ ಇಡೀ ಪುಸ್ತಕ ಬಿಡಿಸಿಡುತ್ತಾ ಹೋಗುತ್ತದೆ.

ನಮ್ಮ ನಮ್ಮ ನೆಲೆಯಲ್ಲಿ ಕೆಟ್ಟದ್ದನ್ನು ವಿರೋಧಿಸದೆ, ನನಗೇನು ತೊಂದರೆಯಿಲ್ಲ ಅನ್ನುವ ಭಾವದಿಂದ ಮೌನವಾಗಿರುವುದು ಹೇಗೆ ವಿನಾಶಕ್ಕೆ ಕಾರಣವಾಗುತ್ತದೆ ಅನ್ನುವುದಕ್ಕೆ ರಕ್ತರಾತ್ರಿ ಉತ್ತಮ ಉದಾಹರಣೆ. ಅನ್ಯಾಯ ಕಂಡು ಮೌನವಾಗಿರುವುದು ಅದನ್ನ ಪ್ರೋತ್ಸಾಹಿಸಿದಂತೆ. ಸ್ವಾಮಿಗಳನ್ನು ಮಠದಿಂದ ಹೊರಗೆ ಹಾಕುವಾಗ ಶಪಿಸುವ ಶಿವಯ್ಯನಿಗೆ ಸ್ವಾಮಿಗಳಿಗೆ ಹೇಳುವ ಮಾತು ನೋಡಿ "ಶಪಿಸಬಾರದು, ಶಪಿಸಿದರೆ ನಿನ್ನ ಸತ್ವ ನಷ್ಟವಾಗುತ್ತದೆ.ಏನಾಗುವುದಾಗಲಿ. ಶಿವನಿಚ್ಚೆ ನಡೆಯಲಿ ಎನ್ನಬೇಕು" ನಾನು ದುಃಖದಲ್ಲೋ ಕೋಪದಲ್ಲೋ ಮಾತು ಹದ ತಪ್ಪುತ್ತಿದೆ ಎಂದು ಗೊತ್ತಾದಾಗಲೆಲ್ಲ ಅಣ್ಣ ಇದೇ ಮಾತು ಹೇಳುತಿದ್ದ. ವಿರೋಧಿಸುವುದೆಂದರೆ ನಮ್ಮ ಸತ್ವ ಕಳೆದುಕೊಲ್ಲುವುದಲ್ಲ, ಎದುರಿನವರ ಸತ್ವ ಕಡಿಮೆ ಮಾಡುವುದು. ಯೋಚಿಸಿದಷ್ಟೂ ಅರ್ಥ ಹೊಳೆಯುವ ಸಾಲುಗಳು. ದೀಪದಂತೆ ಬೆಳುಗುವ ಮಾತುಗಳು.

ಒಂದು ಕಾರ್ಯವನ್ನು ಸಾಧಿಸಲು ಎಷ್ಟು ಶ್ರಮ ಹಾಕಬೇಕು, ಏನೆಲ್ಲಾ ತ್ಯಾಗ ಮಾಡಬೇಕು, ಹೇಗೆ ಮೈಯೆಲ್ಲಾ ಕಣ್ಣಾಗಿ ಅದೊಂದೇ ಉಸಿರಾಗಿ ಧ್ಯಾನಿಸಬೇಕು ಅನ್ನುವುದಕ್ಕೆ ಗಿರಿಜವ್ವೆ ಮುಕುಟಪ್ರಾಯಳಾಗಿ ನಿಲ್ಲುತ್ತಾಳೆ. ಕನಸು ಕಾಣುವುದು ಸುಲಭ, ನನಸಾಗಿಸುವುದು ಮಾತ್ರ ನಮ್ಮ ಗಟ್ಟಿತನ, ಅಚಲತೆಯನ್ನು ಬೇಡುತ್ತದೆ. ಕ್ರೌರ್ಯವನ್ನು ತಣ್ಣಗಾಗಿಸುವ ಮಾತೃತ್ವ, ಕಣ್ಣಿಗೆ ಕಟ್ಟಿದ್ದ ಅಂಧಕಾರದ ಪರದೆಯನ್ನು ಹರಿದು ಬದಲಾಗುವ ದಾಸನಾಯಕ, ಜನರ ಒಗ್ಗಟ್ಟು, ಪರಶುರಾಮಪ್ಪನ ತಾಳ್ಮೆ, ಸ್ವಾಮಿಗಳ ಮಾರ್ಗದರ್ಶನ, ಅನ್ಯಾಯವನ್ನು ಜೀವ ಕೊಟ್ಟಾದರೂ ವಿರೋಧಿಸಿ ಸಿಡಿದೇಳುವ ಧೈರ್ಯ, ತ್ಯಾಗ ಎಲ್ಲವೂ ಸೇರಿ ದುರ್ಗವನ್ನು ಸರ್ವಾಧಿಕಾರಿಯಿಂದ ವಾಪಾಸ್ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.

ಆರಂಭ ಯಾವುದರಿಂದ ಆಗಿರುತ್ತದೋ ಅಂತ್ಯವೂ ಅದರಿಂದಲೇ ಮುಕ್ತಾಯಗೊಳ್ಳುತ್ತದೆ ಅನ್ನುವುದಕ್ಕೆ ಮುದ್ದಣ್ಣ ಮತ್ತು ಅವನ ತಮ್ಮಂದಿರು ಸಾಕ್ಷಿಯಾಗಿ ನಿಲ್ಲುತ್ತಾರೆ. ಕ್ರೌರ್ಯ, ರಕ್ತದಿಂದ ಶುರುವಾಗಿದ್ದು ಅದರಿಂದಲೇ ದಾರುಣ ಅಂತ್ಯ ಕಾಣುತ್ತದೆ. ಎಲ್ಲವನ್ನೂ ಸಾಧಿಸಿ ಶಾಂತ ಸ್ಥಿತಿಗೆ ಮರಳಿ ಎಲ್ಲವನ್ನೂ ಬಿಟ್ಟು ಹೊರಡುವ ಗಿರಿಜೆ ಆದರ್ಶಪ್ರಾಯಳಾಗಿ ಕಾಣಿಸುತ್ತಾಳೆ. ಒಂದು ಮಹತ್ಕಾರ್ಯ ಮುಗಿಸಿದ ಮೇಲೆ ಯಾವ ನಿರೀಕ್ಷೆಯೂ ಇಲ್ಲದೆ ಮಾಡುವುದಷ್ಟೇ ನನ್ನ ಕರ್ತವ್ಯ ಅಂತ ಮುಂದಕ್ಕೆ ಹೋಗುವುದು ಇದೆಯಲ್ಲ ಅದು ತುಂಬಾ ದೊಡ್ಡತನ.

ನಮ್ಮ ಅವಶ್ಯಕತೆ ಮುಗಿದಮೇಲೆ, ಅಗತ್ಯವಿಲ್ಲವೆನ್ನಿಸಿದ ಮೇಲೆ ಆ ಜಾಗದಲ್ಲಿ ಕ್ಷಣ ಮಾತ್ರವೂ ನಿಲ್ಲಬಾರದು, ಬದುಕು ಹರಿವ ನೀರಂತೆ ಅನ್ನೋದು ಸದಾ ಕಾಲ ನೆನಪಿನಲ್ಲಿ ಚಲಿಸುತ್ತಿರಬೇಕು. ಹರಿಯುವುದು ಜೀವಂತಿಕೆ. ಹಠ ಹಿಡಿದು ನಿಂತರೆ ಕ್ರಿಮಿ ಕೀಟಗಳು ಬೆಳೆದು ಕೊಳೆಯಲು ಶುರುವಾಗುತ್ತದೆ. ಕಳಚಿಕೊಳ್ಳಬೇಕು ಸದ್ದೇ ಆಗದೆ, ಗೊತ್ತೇ ಆಗದೇ ಉದುರುವ ತರಗೆಲೆಯಂತೆ. ಹೊಸತನಕ್ಕೆ ಜಾಗ ಖಾಲಿ ಮಾಡಿಕೊಡಬೇಕು. ಚಲನೆಯಿದ್ದಷ್ಟು ಹೊತ್ತು ಮಾತ್ರ ಬದುಕು ಸಹನೀಯ.
"ಬರುವವರು ಬಂದಾಗ, ಹೋಗಬೇಕಾದವರು ಹೋಗಬೇಕು" ಬದುಕು ಹೇಗಿರಬೇಕು ಅನ್ನುವುದಕ್ಕೆ ದೀಪವಾಗಿ ಬೆಳಕು ಕೊಡುತ್ತದೆ.

ಬದುಕೆಂದರೆ ನಿರಂತರ ಪಯಣ...
 ಸಾಗುತ್ತಿರಬೇಕಷ್ಟೇ ಒಂದಷ್ಟು ಕಳೆದುಕೊಳ್ಳುತ್ತಾ, ಮತ್ತಷ್ಟು ಪಡೆದುಕೊಳ್ಳುತ್ತಾ...
ಪಡೆಯುವುದು ಕಳೆದುಕೊಳ್ಳಲು ಎಂದು ನೆನಪಿನಲ್ಲಿಟ್ಟುಕೊಳ್ಳುತ್ತಾ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...