ಶ್ರಾವಣ ಮಾಸದಲ್ಲಿ ಜರುಗುವ ಪುರಾಣ ವಾಚನ ಸಂದರ್ಭದಲ್ಲಿ ಚನ್ನ ಬಸವ ಪುರಾಣ ಕೇಳಿದ ಜನಗಳು ಉಕ್ಕಿ ಬಂದ ಭಕ್ತಿಯ ಭಾವದಲ್ಲಿ ತಮಗೂ ಲಿಂಗಧಾರಣೆ ಮಾಡಬೇಕು ಎಂದು ಕೇಳಿದ ಸ್ವಾಮಿಗಳು ಒಪ್ಪಿ ಲಿಂಗಧಾರಣೆ ಮಾಡಿ ಇಂದಿನಿಂದ ಶಿವಭಕ್ತರಾದಿರಿ ಇನ್ನು ಮೇಲೆ ಒಳ್ಳೆಯ ಕೆಲಸವನ್ನೇ ಮಾಡಿ ಶಿವಕೃಪೆಗೆ ಪಾತ್ರರಾಗಿ ಎಂದು ಆಶೀರ್ವಾದ ಮಾಡುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತಾರೆ. ಮೊದಲೇ ದಂಡಿನ ಜನ, ಉತ್ಸಾಹ, ಆವೇಶ ಎರಡೂ ಜಾಸ್ತಿಯೇ. ಭಕ್ತಿಗೆ ಮರುಳಾದಂತೆ ವೇಶ್ಯೆಯ ಮೋಹಕ್ಕೂ ಮರುಳಾಗಿ ಅವಳ ಕೋರಿಕೆಯಂತೆ ಧರಿಸಿದ್ದ ಲಿಂಗವನ್ನು ಅವಳಿಗೆ ಒಪ್ಪಿಸಿ ಮೈ ಮರೆಯುತ್ತಾರೆ. ನೀನು ಕಟ್ಟಿಸಿಕೊಳ್ಳಲು ಲಾಯಕ್ಕಿಲ್ಲ ಅಂದ ಗುರುವಿನ ಮಾತಿನಿಂದ ಅವಮಾನಿತಳಾದ ಅವಳು ಅಷ್ಟೂ ಲಿಂಗವನ್ನು ಅವರ ಎದರು ಹಿಡಿದು ಸವಾಲು ಹಾಕಿ ಅವಮಾನಿಸುತ್ತಾಳೆ. ಸಿಡಿದ ಗುರು ಇಂಥ ಕೆಲಸ ಮಾಡಿದವರಿಗೆ ನೀರು ಬೆಂಕಿ ಕೊಡಬೇಡಿ ಅಂತ ಕಟ್ಟು ಮಾಡಿ ಅಜ್ನಾಪಿಸುತ್ತಾರೆ.

ಗುರುಶಾಪ ಕೇಳಿ ಕಂಗಾಲಾದ ದಂಡಿನ ಜನ ನಾಯಕರು ಊರಿಗೆ ಬಂದಾಗ ಅವರೆದುರು ಕ್ಷಮೆಗಾಗಿ ತಮ್ಮ ಅಹವಾಲು ಸಲ್ಲಿಸುತ್ತಾರೆ. ದಂಡಿನ ಜನರ ಬಲ, ಹಾಗೂ ಬಲಹೀನತೆ ಎರಡೂ ಅರಿತಿದ್ದ ನಾಯಕ ಅವರಿಗಾಗಿ ಮರುಗಿ ಅಭಯ ನೀಡುತ್ತಾನೆ. ಅದರಂತೆ ಗುರುಮನೆಗೆ ಆ ವಿಷಯದ ಬಗ್ಗೆ ಮಾತಾಡಲು ಬರುವ ನಾಯಕ ಅವರನ್ನು ಕ್ಷಮಿಸಲು ಕೇಳಿದಾಗ ತಪ್ಪು ಯಾರೇ ಮಾಡಿದರೂ ಒಂದೇ ಸಾದ್ಯವೇ ಇಲ್ಲಾ ಎಂದು ಗಟ್ಟಿಯಾಗಿ ನಿಲ್ಲುವ ಗುರುಗಳು,  ಅರಸನಾಗಿ ಪ್ರಾರ್ಥಿಸುತ್ತಿದ್ದೇನೆ ಅನ್ನುವ ನಾಯಕ,  ಅರಮನೆ ದಾರಿ ತಪ್ಪಿದಾಗಲೇ ತಿದ್ದಲು ಇರುವುದೇ ಗುರುಮನೆ ಎಂದು ಹಠ ಬಿಡದ ಸ್ವಾಮಿಗಳು,  ಅಹಂ ಪೆಟ್ಟು ತಿಂದು ಅರಮನೆಗೆ ಗುರುಮನೆ ಇರುವಂತೆ ಗುರುಮನೆಗೂ ಅರಮನೆ ಬೇಕು, ಗುರುಪೀಠಕ್ಕೆ ಕರ್ತವ್ಯ ಇರುವಂತೆ ರಾಜಪೀಠಕ್ಕೂ ಕರ್ತವ್ಯವಿದೆ  ಎಂದು ನೆನಪಿಸುವ ನಾಯಕ, ಅಂತಿಮವಾಗಿ ಮಾತಿನ ತಿಕ್ಕಾಟದಲ್ಲಿ, ಅಹಂ ನ  ಮೇಲಾಟದಲ್ಲಿ ಬೃಹನ್ಮಠ ಖಾಲಿಯಾಗುತ್ತದೆ. ದುರ್ಗದ ಅವಸಾನದ ಇನ್ನೊಂದು ಮೆಟ್ಟಿಲು ನಿರ್ಮಾಣವಾಗುತ್ತದೆ.

ತಪ್ಪು ಯಾರದ್ದು? ಕ್ಷಣ ಆವೇಶವನ್ನು ಗಮನಿಸದೆ  ದೀಕ್ಷೆ ಕೊಟ್ಟಾ ಗುರುವಿನದಾ?  ಅದನ್ನ ಅರ್ಥಮಾಡಿಕೊಂಡು ನಾಯಕನ ವಿಶಾಲತೆ ಅರ್ಥವಾದರೂ ಇಬ್ಬರ ಜಗಳದಲ್ಲಿ ಮೂರನೆಯವನಾಗಿ ಸ್ವಾತಂತ್ರ್ಯ ತೆಗೆದುಕೊಂಡ ಅಭಯ ಕೊಟ್ಟ ನಾಯಕನದಾ? ಪ್ರಾರ್ಥಿಸಲು ಬಂದಾಗ ಯೋಚಿಸಲು ಸಮಯವನ್ನೂ ತೆಗೆದು ಕೊಳ್ಳದೆ, ಅರ್ಥ ಮಾಡಿಸುವ ಪ್ರಯತ್ನವನ್ನೂ  ಹಠಕ್ಕೆ ಬೀಳುವ ಗುರುವಿನದಾ? ರಾಜ  ನಾನು ಅನ್ನುವ ಹಮ್ಮಿನ ನಾಯಕನದಾ? ಧರ್ಮವೇ ಶ್ರೇಷ್ಠ, ರಾಜನೇ ಶ್ರೇಷ್ಠ ಅನ್ನುವ ಇಬ್ಬರ ತಾನೇ ಹೆಚ್ಚು ಅನ್ನುವ ಮನೋಭಾವವಾ? ಈ ಕ್ಷಣಕ್ಕೆ ಉತ್ತರ ಬೇಕು ಅನ್ನುವ ದುಡುಕುತನವಾ? ಧರ್ಮ ಹಾಗೂ ರಾಜಕಾರಣ ಒಂದಕ್ಕೊಂದು ಪೂರಕವಾಗಿರಬೇಕೆ ವಿನಃ ಒಂದರ ವಿಷಯದಲ್ಲಿ ಇನ್ನೊಂದರ ಇಂಟರ್ಫಿಯರೆನ್ಸ್ ಇರಬಾರದು ಅನ್ನೋ ಸಣ್ಣ ತಿಳುವಳಿಕೆಯ ಕೊರತೆಯದೋ?

ಸಣ್ಣ  ತಪ್ಪಿನಿಂದ ಶುರುವಾದ ಸರಣಿ ಹೇಗೆ ಒಂದೊಂದೇ ತಪ್ಪನ್ನು ಸೇರಿಸಿಕೊಂಡು ಮಾಲೆಯಾಗಿ ಪತನದ ಒಂದೊಂದೇ ಮೆಟ್ಟಿಲನ್ನು ಕಟ್ಟುತ್ತಾ ಹೋಗುತ್ತದೆ. ಉನ್ನತಿ ಹಾಗೂ ಅವನತಿ ಎರಡೂ ಕ್ಷಣಮಾತ್ರದಲ್ಲಿ ಜರುಗುವುದಿಲ್ಲ ಅದರ ಮೂಲ ಎಲ್ಲೋ ಆರಂಭವಾಗಿರುತ್ತದೆ. ನಾವು ಗಮನಿಸಿರುವುದಿಲ್ಲ ಅಷ್ಟೇ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...