ಅಷ್ಟು ದೂರದಿಂದಲೇ ಭೋರ್ಗೆರೆಯುವ ಸದ್ದು ಕೇಳುತಿದ್ದ ಹಾಗೆ ಮೈ ಮನವೆಲ್ಲಾ ಪುಳಕ ಆವರಿಸಿತು. ಕಣ್ಣು  ಸಾಧ್ಯವಾದಷ್ಟೂ ಅಗಲವಾಗಿ ತೆರೆದರೆ ಆಕಾಶವನ್ನು ಚುಂಬಿಸುವ ಕಡಲು ಕಾಣಿಸಿತು. ಈ ಕಡಲು ಅದೆಷ್ಟು ಕಾಡುತ್ತೆ ನನ್ನ ಅನ್ನೋದು ಮಾತಲ್ಲಿ ಹೇಳೋದಕ್ಕೆ ಆಗುವುದಿಲ್ಲ. ಅವನೆಡೆಗೆ ಮೊದಲಿಂದಲೂ ಮುಗಿಯದ ಸೆಳೆತ, ತೀರಲಾಗದ ವ್ಯಾಮೋಹ. ನೋಡಿದಷ್ಟೂ ತಣಿಯದ ದಾಹ. ಕಣ್ಣು ಬೇರೆಡೆತಿರುಗಿಸಲಾಗದಷ್ಟು ಮೋಹ.. ಅದೂ ಮೊರೆಯುತ್ತಿತ್ತು, ಕರೆಯುತಿತ್ತು. ಅಪ್ಪಳಿಸಿ ಬಂದು ಅಪ್ಪಲು ಪ್ರಯತ್ನಿಸುತ್ತಿತ್ತು.

ಕಡಲು ಸದಾ ಅಚ್ಚರಿ. ಅದೇನು ಸೆಳೆತವೋ ಅವನಲ್ಲಿ, ಸಣ್ಣ ಪುಟ್ಟ, ತೊರೆ, ಹಳ್ಳ, ನದಿಗಳೆಲ್ಲವುದರ ಗುರಿ ಗಮ್ಯ ಒಂದೇ.  ಕಾಣದ ಕಡಲನ್ನು ಕಾಣುವುದು, ಹಾಗೂ ಕೂಡುವುದು. ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಸರಿಯೇ ಅವನನ್ನು ಸೇರಲೇಬೇಕು ಅನ್ನುವ ತಪನೆ ಹುಟ್ಟಿಸುವ ಅವನ ಆಕರ್ಷಣೆಯಾದರೂ ಏನು ಅನ್ನುವುದಕ್ಕೆ ಆಲೋಚಿಸಿದಾಗಲೆಲ್ಲ ಹೊಳೆಯುವುದು ಪ್ರೀತಿ ಒಂದೇ.

ಅವನದೋ ವಿಶಾಲ ಹೃದಯ. ಬಂದವರನ್ನೆಲ್ಲಾ ಕೈ ಚಾಚಿ ಆಹ್ವಾನಿಸುವ, ಬಾಚಿ ತಬ್ಬಿ ತನ್ನೊಳಗೆ ಒಂದಾಗಿ ಕರಗಿಸಿಕೊಳ್ಳುವ ಶಕ್ತಿ. ಬರುವವರು ಲೆಕ್ಕವಿಲ್ಲದಷ್ಟು ಅವರೆಲ್ಲರನ ಅಸ್ತಿತ್ವ ಮರೆಸಿ ತಾನೇ ಆಗಿಬಿಡುವ ಅವನ ದೈತ್ಯ ಶಕ್ತಿ ಬಗ್ಗೆ ಹೆಮ್ಮೆಯ ಜೊತೆ ಅಸೂಯೆ ಕೂಡ. ಬಂದವರಾರಿಗೂ ಪ್ರತ್ಯೇಕ ಅಸ್ತಿತ್ವವೇ ಇಲ್ಲದಂತೆ ಅದು ಅವರ್ಯಾರಿಗೂ ಕಾಡದಂತೆ ತಾನೇ ತಾನಾಗಿ ಆವರಿಸಿ ಹಬ್ಬುವ ಅವನ ಚತುರತೆಗೆ ಖುಷಿ ಪಡಬೇಕೋ ಅಸ್ತಿತ್ವ ಕಳೆದುಕೊಂಡು ಮರೆಯಾದವರ ಬಗ್ಗೆ ದುಃಖ ಪಡಬೇಕೋ ಅನ್ನೋ ಗೊಂದಲದಲ್ಲಿ ಕುಳಿತಿರುವಾಗಲೇ ಬಂದು ಅಪ್ಪಳಿಸಿ ಅವನೊಲವಿನ ಅಲೆ ಚುಂಬಿಸಿ ಎಲ್ಲವನ್ನೂ ಮರೆಸಿ ಬಿಡುತ್ತದೆ.  ಎಲ್ಲಾ ವಿವಿಧತೆಯನ್ನು ಏಕವಾಗಿಸುವ, ಒಂದಾಗಿಸುವ ಗುಣ ಕಡಲಿನಲ್ಲದೆ ಇನ್ನೆಲ್ಲಿ ಕಲಿಯಬೇಕು. ಅಸ್ತಿತ್ವವೇ ಮರೆಯಾಯಿತಾ ಅನ್ನುವ ದುಃಖ ಕಾಡುವ ಮುನ್ನ, ಪ್ರೀತಿ ಉಸಿರುಗಟ್ಟಿಸುವ ಮುನ್ನ ಮತ್ತೆ ಆವಿಯಾಗಿ ಮೋಡವಾಗಿ ಮತ್ತೆ ಹರಿದು ಸೇರುವ ಹಂಬಲ ಹುಟ್ಟಿಸುವ ಅವನ ಪರಿ ಸೋಜಿಗ. ಪ್ರೀತಿ ಅಂದರೆ ಹೀಗೆನಾ... ಪಡೆದುಕೊಳ್ಳುತ್ತಾ, ಮತ್ತೆ ತಿರುಗಿ ಕೊಡುತ್ತಾ ಕೊಡು ಕೊಳ್ಳುವ ನಿರಂತರ ಪ್ರಕ್ರಿಯೆಯಲ್ಲಿ ಜೀವಂತವಾಗಿರುತ್ತಾ... ಕಡಲಿಗೆ ಅಂತ್ಯವಿಲ್ಲ.. ಪ್ರೀತಿಗೂ ಮಿತಿಯಲ್ಲ..

ಅವನದು ನಿಲ್ಲದ ಉತ್ಸಾಹ, ನದಿಗಳು ತಾವಾಗೆ ಬಂದು ಅರ್ಪಿಸಿಕೊಂಡರೂ ಭುವಿಯ ಕಂಡರೆ ಅವನಿಗೆ ಮುಗಿಯದ ವ್ಯಾಮೋಹ. ಪದೇ ಪದೇ ಬಂದು ತಬ್ಬಿ, ಅಪ್ಪಳಿಸಿ ಚುಂಬಿಸಿ ಅವಳನ್ನು ಸೆಳೆಯಲು ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ನಮ್ಮನ್ನು ಪ್ರೀತಿಸಿ ಸಕಲವನ್ನೂ ಅರ್ಪಿಸಿಕೊಂಡವರಿಗಿಂತ ನಮಗೆ ಇಷ್ಟವಾದವರ ಕಡೆಗಿನ ಗಮನ, ಆಸಕ್ತಿಯೇ ಜಾಸ್ತಿ. ನೀನು ಥೇಟ್ ನಮ್ಮ ಹಾಗೆನೇಯಾ ಅಂದರೆ ಇನ್ನಷ್ಟು ಉಕ್ಕಿ ನಗುತ್ತದೆ ಕಡಲು. ಕೆಲವೊಮ್ಮೆ ಅಪ್ಪಳಿಸಿ ಗಲಿಬಿಲಿ ಹುಟ್ಟಿಸುತ್ತದೆ. ಕಡಲು ಮನಸ್ಸೂ ಎರಡೂ ಅರ್ಥವಾಗದ್ದು... ಹಾಗಾಗಿಯೇ ಕುತೂಹಲ ಉಳಿಸಿಕೊಂಡಿರುವುದಾ.. ಎಷ್ಟು ಪಡೆದುಕೊಂಡರೂ ಯಾರೇ ಬಂದರೂ ಕಡಲಿಗೆ ಹಮ್ಮಿಲ್ಲ... ಅದು ತನ್ನ ದಡ ಮೀರಿ ಹರಿಯುವುದಿಲ್ಲ. ಒಮ್ಮೊಮ್ಮೆ ಪ್ರೀತಿ ಉಕ್ಕಿದಾಗ ಮುದ್ದುಗರೆಯುವ ಮಗುವಿಂತೆ ಮುನ್ನುಗ್ಗಿ ಬರುತ್ತದೆ ಅಷ್ಟೇ..

ಬಂದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ವಿಶಾಲತೆ ಕಡಲನ್ನು ನೋಡಿ ಕಲಿಯಬೇಕು. ಅಡಿಯಿಟ್ಟ ಪ್ರತಿ ಜೀವಿಯನ್ನೂ ಸಮಾನವಾಗಿ ತೊಯ್ಯಿಸಿ ಭಾವದ ಬುತ್ತಿಯನ್ನು ಕಟ್ಟಿಕೊಟ್ಟು ಬಿಡಲಾರದೆ,  ಭಾರವಾದ, ಒದ್ದೆ ಮನಸ್ಸಿನಿಂದ ಹೋಗುವ ಹಾಗೆ ಮಾಡುವ ಅದರ ಪ್ರೀತಿಯ ಮುಂದೆ ಶರಣಾಗಲೇ ಬೇಕು. ಪ್ರೀತಿಯಲ್ಲಿ ತೊಯ್ಯಿಸುವುದು ಸುಲಭವಲ್ಲ. ಅದೆಷ್ಟು ಧೀಮಂತಿಕೆ, ವೈಶಾಲ್ಯತೆ ಬೇಕು. ಅದರ ಹರವಿನ ಮುಂದೆ ಎಲ್ಲವೂ, ಎಲ್ಲರೂ ಶರಣಾಗಿ ಮಂಡಿಯೂರುವ ಹಾಗೆ ಮಾಡುವ ಅದರ ಪ್ರೀತಿಗೆ ಅವನ ರೀತಿಗೆ ಕರಗಿ ತೊಯ್ಯುವುದರ ವಿನಾ ಬೇರಾವ ದಾರಿಯಿದೆ. ಯಾರೇ ಬಂದರೂ ಅವರಿಂದ ಏನೂ ನಿರೀಕ್ಷಿಸಿದೆ ಕೇವಲ ಕೊಡುವ, ಏನಾದರೂ ಕೊಟ್ಟರೂ ಮತ್ತದನ್ನು ಹಾಗೆಯೇ ತಂದು ದದಡಕ್ಕೆ ಎಸೆಯುವ ಅದರ ನಿರ್ಲಿಪ್ತತೆಗೆ, ಆತ್ಮಾಭಿಮಾನಕ್ಕೆ ಮತ್ತೆ ಮತ್ತೆ ಸೋತು ಶರಣಾಗಿ ಮಂಡಿಯೂರಿದ್ದೇನೆ. ತಲೆಬಾಗಿಸಿ ತೊಯ್ದಿದ್ದೇನೆ. ಅವನೆದರು ಸೋಲುವುದು ಅವಮಾನವೆಂದು ಯಾವತ್ತೂ ಯಾಕೆ ಅನ್ನಿಸಿಲ್ಲ ಅನ್ನೋದೂ ಸದಾ ಕಾಡುವ ಪ್ರಶ್ನೆಯೇ. ಕೇಳಬೇಕು ಎಂದು ಹೋದಾಗಲೆಲ್ಲ ಮರೆತು ಮತ್ತೆ ಮಂಡಿಯೂರುವ ಹಾಗೆ ಮಾಡುವ ಅವನ ಪ್ರೀತಿ ಸದಾ ಬೆರಗು.

ಬದುಕಿನ ಪ್ರತಿ ಹಂತಗಳನ್ನು ಕಡಲು ಪ್ರತಿಬಿಂಬಿಸುತ್ತದೆಯೇನೋ ಅನ್ನಿಸಿದ್ದು ಸುಳ್ಳಲ್ಲ. ದಡದ ಬಳಿಯ ಕಡಲು ಬಾಲ್ಯವನ್ನು ನೆನಪಿಸುತ್ತದೆ. ಸಣ್ಣಗಿನ ಅಲೆಗಳು ಮುಂದಕ್ಕೆ ಹೋಗುವ ಆಸೆ ದಾಟಿ ಮುನ್ನುಗ್ಗುವ ಉತ್ಸಾಹ. ಬಾಲ್ಯದಷ್ಟೇ ಸೇಫ್. ಹಾಯಾಗಿ ಆಟವಾಡುವ ಅವಕಾಶ, ಆಟ ಉತ್ಸಾಹ, ಮುನ್ನುಗ್ಗುವ ತವಕ. ಆಚೆ ದಡವೋ ಇಳಿ ಸಂಜೆಯ ಪ್ರತೀಕ, ಸೂರ್ಯ ಮುಳುಗುವುದನ್ನೇ ಕಾಯುವ ಉತ್ಸಾಹದಲ್ಲೊಂದು ನಿರುತ್ಸಾಹ. ಕತ್ತಲು ಯಾವಕ್ಷಣದಲ್ಲಾದರೂ ಆವರಿಸಬಹುದು ಎನ್ನುವ ಆತಂಕದ ನಡುವೆಯ ಕೆಲವೊಮ್ಮೆ ಕಾಯುವ ತವಕ. ಬೊಬ್ಬಿರಿಯುವ ಕಡಲು ಇಷ್ಟೊಂದು ನೆಮ್ಮದಿ ಕೊಡಬಹುದಾ... ಆವರಿಸುವ ಕತ್ತಲು ಇಷ್ಟೊಂದು ನಿರಾಳ ಭಾವ ಕೊಡಬಲ್ಲದಾ..ಇದೆ ಕತ್ತಲು ಊರಲ್ಲಿ ಹೆದರಿಸುವುದು ಯಾಕೆ, ಒಳಗೆ ಧಾವಿಸಿ ಬಾಗಿಲು ಭದ್ರ ಪಡಿಸಿಕೊಳ್ಳುವುದು ಯಾಕೆ? . ಎಲ್ಲವನ್ನೂ ಪೂರೈಸಿದ ಸಮಾಧಾನದ ನಡುವೆ ಕತ್ತಲನ್ನು ಸ್ವಾಗತಿಸುವ ಒಂದಾಗುವ ಆತಂಕವಿದ್ದರೂ ಆ ದಡದಲ್ಲೂ ನಿರಾತಂಕದ ಭಾವ ಹೇಗೆ ಎಂದರೆ ಕಡಲು ಉತ್ತರಿಸುವುದಿಲ್ಲ... ದುರುಗುಟ್ಟಿದರೂ ಸರಿಯಾಗಿ ಕಾಣಿಸುವುದಿಲ್ಲ.. ಆದರೆ ಅನುಭವಕ್ಕೆ ಸದಾ ದಕ್ಕುತ್ತದೆ. ಒಳಮನಸಿಗೆ ಪಿಸುಗುಡುತ್ತದೆ. ಮೊರೆತದ ನಡುವೆ ಕೇಳಿಸಿಕೊಳ್ಳುವ ಏಕಾಗ್ರತೆ ಇರಬೇಕು ಅಷ್ಟೇ.

ಆದರೆ ಈ  ನಡು ಕಡಲು ಇದೆಯಲ್ಲ ಅದು  ಭಯಾನಕ. ಬಾಲ್ಯದ ದಡವನ್ನು ಬಿಟ್ಟು ಹೊರಟ ಪಯಣ ಆ ಕಡೆಯ ದಡವನ್ನು ಸೇರಲೇ ಬೇಕೆನ್ನುವ ತುಡಿತ, ಅಲೆಗಳ ಅಬ್ಬರ, ತೂಗಾಡುವ ನಾವೆ, ಮುಳುಗದೆ ಆ ದಡ ಮುಟ್ಟುವ ಆತಂಕದಲ್ಲಿ ಅನುಭವಿಸುವ ಕ್ಷಣಗಳು, ಆವೇಗ, ಹೆದರಿಕೆ, ಆ ದಡ ಸೇರುವುದರ ಬಗ್ಗೆ ಆಲೋಚನೆ, ಮುಳಗದ ಹಾಗೆ ವಹಿಸುವ ಜಾಗ್ರತೆ, ಜವಾಬ್ದಾರಿ ಇವುಗಳ ಅಬ್ಬರದಲ್ಲಿ  ತೀವ್ರತೆ ಕಳೆದು ಕೊಂಡು ಸುತ್ತ ಮುತ್ತ ಇರುವುದನ್ನು ನೋಡುವುದನ್ನ ಬಿಟ್ಟು ಕಣ್ಣು ಆ ದಡದತ್ತಲೇ. ಹೊರಗೆ ಪ್ರಶಾಂತವೆನಿಸಿದರೂ ಅದು ಒಳಗೆ ಭೋರ್ಗರೆವ ಕಡಲು. ಆ ವಯಸ್ಸಿನ ಮನಸ್ಸು ಹಾಗೇ. ಒಳಗೇನಿದೆ ಯಾರೂ ಅರಿಯಲಾರರು. ಆಳ ತಿಳಿಯುವುದು ಕಷ್ಟ. ಅಲೆಗಳ ಲೆಕ್ಕಾಚಾರ ಉಹೂ ನಿಲುಕುವುದೇ ಇಲ್ಲ.ಬದುಕು ಈ ಹಂತದಲ್ಲಿ ಮುಳುಗುವುದು ಜಾಸ್ತಿ. ಕಡಲು ನುಂಗುವುದು ಜಾಸ್ತಿ. ಬದುಕು ಜವಾಬ್ದಾರಿಗಳ ಹೊರೆ ಕಡಲಲ್ಲಿ ಅಲೆಗಳ ಸಾಲು..

ಅಲ್ಲೆಲ್ಲೋ ಮಧ್ಯದಲ್ಲಿ ಕಾಣುವ ತೇಲುವ ಹಡುಗು ಅತ್ತ ದಡವೂ ಸೇರದ, ಇತ್ತ ದಡವೂ ತಳ್ಳಿದ ಬದುಕನ್ನ ನೆನಪಿಸಿ ಅತಂತ್ರ ಭಾವ ಕ್ಷಣಕಾಲ ಮನಸ್ಸನ್ನು ಕಡಲಿನಂತೆ ಅಲ್ಲೋಲ ಕಲ್ಲೋಲಗೊಳಿಸುತ್ತದೆ. ಬರುವ ಪ್ರತಿ ಅಲೆಯೂ ಬದುಕಿನ ಏರಿಳಿತ ನೆನಪಿಸಿ ಯಾವುದೂ ಸ್ಥಿರವಲ್ಲ, ಯಾವುದೂ ಶಾಶ್ವತವೂ ಅಲ್ಲ ಅನ್ನೋ ಸತ್ಯವನ್ನು ಬಡಿದು ತಿಳಿಸುತ್ತದೆ. ಅಲ್ಲೇ ಹತ್ತಿರ ಅನ್ನಿಸುವ ದಡವೂ ಎಷ್ಟು ದೂರ ಅನ್ನೋದು ಹೋದಂತೆ ಸ್ಪಷ್ಟವಾಗಿ ಯಾವುದೂ ಕಂಡಷ್ಟು ಹತ್ತಿರವಲ್ಲ ಅನ್ನೋ ಸತ್ಯವನ್ನು ಅರ್ಥ ಮಾಡಿಸುತ್ತದೆ. ಯಾವದೂ ಕಂಡಷ್ಟು ಹತ್ತಿರವೂ ಅಲ್ಲ , ಕ್ರಮಿಸದಷ್ಟು ದೂರವೂ ಅಲ್ಲ, ಪ್ರತಿ ಪಯಣವೂ ಏರಿಳಿತಗಳ ಅಲೆಯ ಮೇಲೆಯೇ ಸಾಗಬೇಕೆ ಹೊರತು ಸಮದಾರಿ ಸದಾ ಸಿಗುವುದಿಲ್ಲ ಅನ್ನೋದು ಪ್ರತಿ ಅಲೆಯೂ ಚಿಮ್ಮಿ ಪಿಸುಗುಟ್ಟುತ್ತದೆ. ನಾವೇ ಒಮ್ಮೆ ಮೇಲೇರಿ ಕೆಳಕ್ಕೆ ಇಳಿಯುತ್ತದೆ. ಮುಂದೆ ಹೋಗುತ್ತದೆ.

ಬಂದು ಅಪ್ಪಳಿಸುವ ಪ್ರತಿ ಅಲೆಯೂ ಎದುರಾಗುವ ಹೊಸತನ್ನು ಸ್ವೀಕರಿಸುವ ಹಾಗೆ ಮಾಡುತ್ತೆ ಜೊತೆ ಜೊತೆಗೆ ಹಿಂದಿರುಗುವ ಪ್ರತಿ ಅಲೆಯೂ ಎಷ್ಟು ಸೂಕ್ಷ್ಮವಾಗಿ ಕಾಲ ಬುಡದ ಮರಳನ್ನು ಸದ್ದಿಲ್ಲದೇ ಸೆಳೆದುಕೊಂಡು ಹೋಗಿ ಬಂದಷ್ಟೇ ಸಹಜವಾಗಿ ಕಳೆದು ಹೋಗುತ್ತೆ ಅನ್ನೋ ಪಾಠವನ್ನು ಕಲಿಸುತ್ತೆ. ಕಾಲ ಬುಡ ಜರಿದರೂ ಬೀಳದಂತೆ ನಿಲ್ಲುವುದನ್ನ, ಸಣ್ಣಗೆ ಸದ್ದಿಲ್ಲದೇ ಜಾರಿ ಹೊಗುವುದನ್ನ ನಿರ್ಲಿಪ್ತವಾಗಿ ಕಳಿಸಿಕೊಡುವುದನ್ನು, ಇನ್ನೇನೋ ಎದುರಾಗುವುದನ್ನು ಅಷ್ಟೇ ನಿರಾಳವಾಗಿ ಸ್ವಿಕರಿಸುವುದನ್ನ, ಪಡೆದುಕೊಳ್ಳುತ್ತಾ ಕಳೆದುಕೊಳ್ಳುವುದನ್ನ, ಕಳೆದುಕೊಳ್ಳುತ್ತಾ ಪಡೆದು ಕೊಳ್ಳುವುದನ್ನ ಕಡಲಿನಷ್ಟು ನಿಸ್ಪೃಹವಾಗಿ , ಚೆಂದವಾಗಿ ಸರಳವಾಗಿ ಇನ್ಯಾವುದು ತಾನೇ ಕಲಿಸಬಹುದು. ಬಂದು ಅಪ್ಪಳಿಸುವುದೇನೋ ಅಂದುಕೊಂಡ ಅಲೆಯೊಂದು ಅಲ್ಲೇ ರಭಸ ಕಳೆದುಕೊಂಡು, ಹಿಂದೆ ಹೋಗಿ ಬೆನ್ನುಕೊಟ್ಟು ತಡೆದ ನೀರು ಮತ್ತೆ ಅಲೆಯಾಗಿ ಮೊರೆದು ಬಂದು ಅಪ್ಪಳಿಸಿ ಬದುಕು ಲೆಕ್ಕಾಚಾರ ಎರಡೂ ಕಡಲಿನ ಎರಡು ದಡಗಳು ಅನ್ನುವುದನ್ನ ಕಲಿಯಲಾದರೂ ಕಡಲತಡಿಗೆ ಹೋಗಿ ನಿಲ್ಲಬೇಕು. ಅಲೆಗೆ ಮುಖಮಾಡಿ ನಿಲ್ಲಬೇಕು. ಅರ್ಥವಾಗಬೇಕಾದರೆ ಅಲೆಗಳು ಏಳುವ ಮುನ್ನಿನ ನಿಶಬ್ದ ಆಲಿಸಬೇಕು. ಗಮನಿಸಬೇಕು. ಮೊರೆಯುವ ಕಡಲಿನ ಅಲೆಗಳ ನಡುವೆಯೂ ಒಂದು ಮೌನವಿದೆ. ಬದುಕು ವಹಿಸಬೇಕಾದ ಮೌನದ ಬಗ್ಗೆ ಅದು ಪಾಠ ಹೇಳುತ್ತದೆ.

ಕಡಲು ಎಷ್ಟೇ ಅಗಾಧವಾಗಿದ್ದರೂ, ಎಷ್ಟೇ ಬಲಶಾಲಿ ಆಗಿದ್ದರೂ, ಎಷ್ಟೇ ಆಳವಾದರೂ ಅದು ಎರಡು ದಡಗಳ ನಡುವೆ ಮಾತ್ರ ಸೀಮಿತವಾಗಿರುತ್ತದೆ. ಕಡಲಿನಂತ ಕಡಲಿಗೂ ಒಂದು ಎಲ್ಲೆಯಿದೆ. ಬದುಕಿಗೆ ಇರುವಂತೆಯೇ. ಇನ್ನೊಂದು ದಡ ಸೇರಲು ಈ ದಡವನ್ನು ಬಿಡಲೇ ಬೇಕು ಮತ್ತು ಅಲೆಯ ಮೇಲಾಟಗಳ ಜೊತೆ ಜೊತೆಗೆ ಪಯಣ ಸಾಗಬೇಕು. ಹೋಗುತ್ತಾ ಹೋಗುತ್ತಾ ದಾರಿ ಕ್ಲಿಷ್ಟವಾಗುತ್ತಾ, ಆಳ ಹೆಚ್ಚಿಸಿಕೊಳ್ಳುತ್ತಾ ಭಯ ಹುಟ್ಟಿಸಿದರೂ ಆಚಿನ ದಡ ಪ್ರಶಾಂತವಾಗಿರುತ್ತದೆ ಮತ್ತು ಬಯಲಾಗಿರುತ್ತದೆ. ಕಡಲಿನ ಈಚೆ ಮತ್ತು ಆಚೆ ದಡಗಳ ಜೊತೆಗಿನ ಕಾಲಕ್ಕಿಂತ ಆತಂಕ ಹುಟ್ಟಿಸುವುದು ಮಧ್ಯದ ಕಡಲು. ನಡು ಕಡಲು ಬದುಕಿನ ನಡು ವಯಸ್ಸಿನಂತೆ. ಅಲ್ಲಿ ತೊಳಲಾಟಗಳೇ ಜಾಸ್ತಿ. ಅಲೆಗಳ ಏರಿಳಿತವೆ ಜಾಸ್ತಿ.

 ಕಡಲು ಕಲಿಸುತ್ತದೆ. ಬದುಕು ಬಹಳಷ್ಟು ಸಲ ಕಲಿಯದೇ ಬರೀ ಆಟವಾಡುತ್ತದೆ. ಕಡಲಿಗೆ ಶಶಿಯ ಮೋಹ ಒಂದೇ, ಬದುಕಿಗೆ ಕಡಲಿನಲ್ಲಿರುವ  ಅಲೆಗಳಷ್ಟೇ ವ್ಯಾಮೋಹದ ಸಾಲು. ಎರಡೂ ಸದಾ ಚಲಿಸುತ್ತಿರುವಷ್ಟು ಹೊತ್ತು ಮಾತ್ರ ಜೀವಂತವಾಗಿರುತ್ತದೆ. ಎರಡೂ ಬೆಳಕಿಗೆ ಕಾಯುತ್ತಲೇ ಕತ್ತಲೆಯನ್ನು ಅಪ್ಪುತ್ತವೆ.ಕಡಲಿಗೂ, ಬದುಕಿಗೂ, ಪ್ರತಿ ಹೆಜ್ಜೆಯಲ್ಲೂ ಪ್ರತಿ ಅಲೆಯಲ್ಲೂ ಸಾಮ್ಯವಿದೆ. ನೋಡುತ್ತಾ ಹೋದರೆ ಕಡಲು ಬದುಕು ಎರಡೂ ಒಂದೇ. ಎರಡೂ ನಿಗೂಢ. ಕಡಲಿನ ಆಳ, ಮನಸ್ಸಿನ ಆಳ ಅರಿತವರು ಯಾರೂ ಇಲ್ಲ. ಅಲ್ಲೇನಿದೆ ಎಂದು ನಿಖರವಾಗಿ ಪತ್ತೆ ಮಾಡುವವರೂ ....

ಕಡಲೂ ಬದುಕು ಎಂದಿಗೂ ಮುಗಿಯದ ಅಚ್ಚರಿ....
ಹಾಗಾಗಿಯೇ ಈ ಕಡಲು ಬದುಕು ಎರಡರ ಬಗ್ಗೆಯೂ ನನ್ನದು ತೀರದ ವ್ಯಾಮೋಹ..

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...