ಭಾನುವಾರ ಬಂತೆಂದರೆ ಅದು ಅಭ್ಯಂಜನದ ಸಮಯ.ನಿಧಾನಕ್ಕೆ ಎದ್ದು ತಿಂಡಿ ತಿಂದು ಹೊರಗೆ ಆಡಲು ಹೋಗಬೇಕು ಅಂತ ರೆಡಿಯಾಗುವಾಗಲೇ ಹೊಂಚು ಹಾಕಿ ಹಿಡಿಯುವ ಬೇಟೆಗಾರನಂತೆ ಅಜ್ಜಿ ಪ್ರತ್ಯಕ್ಷಳಾಗುತ್ತಿದ್ದಳು. ಬಿಲ್ಲಿನ ಬದಲು ಎಣ್ಣೆಯ ಬಟ್ಟಲು ಹಿಡಿದು. ಮಂದವಾದ ಹರಳೆಣ್ಣೆಯನ್ನು ಒಂದು ಹನಿಯೂ ನೆಲಕ್ಕೆ ಜಾರದಂತೆ ಬೊಗಸೆಯಲ್ಲಿ ಸುರಿದು ಅಷ್ಟೇ ನಾಜೂಕಾಗಿ ನೆತ್ತಿಗೆ ಒತ್ತಿ ತನ್ನ ಪುಟ್ಟದಾದ ಕೈಯಿಂದ ಹದವಾಗಿ ತಿಕ್ಕುತ್ತಿದ್ದರೆ ಅದು ಮಳೆಗಾಲದ ನೀರಿನಂತೆ ಜಾಗ ಮಾಡಿಕೊಂಡು ತೊರೆಯಾಗಿ, ಜಲಪಾತವಾಗಿ ಇಳಿದು ಮುಖಕ್ಕೆ ಮುತ್ತಿಕ್ಕುತ್ತಿತ್ತು.

ವಾರಕ್ಕೊಂದು ಸಾರಿ ನೆತ್ತಿಗೆ ಎಣ್ಣೆ ಬೀಳದಿದ್ದರೆ ಕಣ್ಣುರಿ ಬರುತ್ತೆ. ನೆತ್ತಿ ಕಾಯಿಸಬಾರದು. ನೋಡು ಹೇಗೆ ಸುಡ್ತಾ ಇದೆ. ಹಾಳಾದವಳು ಬಿಸಿಲಿಗೆ ಹೋಗಬೇಡಾ ಅಂದ್ರೂ ಮೂರ್ಹೊತ್ತೂ ಅಲ್ಲೇ ಸಾಯ್ತಿ ಅಂತ ಬೈಯುತ್ತಿದ್ದರೆ ಒಳಗೆ ನಿಧಾನಕ್ಕೆ ಇಳಿಯುತ್ತಿದ್ದ ಹರಳೆಣ್ಣೆಯ ತಂಪಿಗೆ ಅದು ಜೋಗುಳದಂತೆ ಭಾಸವಾಗಿ ರೆಪ್ಪೆ ನಿಧಾನವಾಗಿ ಮುಚ್ಚಿಕೊಳ್ಳುತಿತ್ತು. ನೆತ್ತಿಗೆ ಬಡಿದು ಅಷ್ಟೂ ಎಣ್ಣೆಯನ್ನು ಇಳಿಸಿದ ಮೇಲೆ ಒಂದು ಬಟ್ಟಲಿಗೆ ಎಳ್ಳೆಣ್ಣೆಯನ್ನು ಸುರಿದು ಹೋಗು ಮೈಗೆಲ್ಲಾ ಹಚ್ಚಿಕೊಂಡು ಓಲೆ ಉರಿ ಮುಂದೆ ಮಾಡು ಎಂದು ಆ ಏಕಾಂತದಿಂದ ಎಬ್ಬಿಸಿ ಬಚ್ಚಲಿಗೆ ಅಟ್ಟುತ್ತಿದ್ದರೆ ಅವಳನ್ನು ಬೈದುಕೊಳ್ಳುತ್ತಲೇ ಬಿಡಲಾರೆ ಅನ್ನೋ ರೆಪ್ಪೆಗಳನ್ನು ಬಲವಂತವಾಗಿ ಬೇರ್ಪಡಿಸಿ ಹೆಜ್ಜೆ ಎತ್ತಿಡುತ್ತಿದ್ದೆ.

ಅಭ್ಯಂಜನ ಅಂದರೆ ಅವತ್ತು ಬಚ್ಚಲ ಒಲೆಗೂ ಸಂಭ್ರಮ.ಒಡಲ ತುಂಬಾ ಕಟ್ಟಿಗೆಯನ್ನೂ ಅದಕ್ಕೆ ಆಧಾರವಾಗಿ ಒಂದು ಕುಂಟೆಯನ್ನೂ ತುಂಬಿಕೊಂಡು ಧಗಧಗನೆ ಉರಿಯುತ್ತಿತ್ತು. ನಿಗಿ ನಿಗಿ ಉರಿಯುವ ಕೆಂಡ ಕೆದಕಿ ಇನ್ನೊಂದೆರೆಡು  ಕಟ್ಟಿಗೆಯನ್ನು ಪೇರಿಸಿ  ಎಣ್ಣೆ ಹಚ್ಚಿಕೊಳ್ಳುವ ವೇಳೆಗೆ ಮತ್ತೆ ಪ್ರತ್ಯಕ್ಷಳಾಗುತ್ತಿದ್ದ ಅವಳು ಸೀಗೆಯ ಬಟ್ಟಲನ್ನು ತಂದಿಟ್ಟು, ಸರಿಯಾಗಿ ಹಚ್ಕೊ ಅಂತ ಇನ್ನೊಮ್ಮೆ ಅರ್ಚನೆ ಮಾಡಿ ಕುಕ್ಕರುಗಾಲಲ್ಲಿ ಕೂರಿಸಿ ಬೆನ್ನಿಗೆ ಎಣ್ಣೆ ಸುರಿದು ಹದವಾಗಿ ನೀವುತ್ತಿದ್ದರೆ ಅಲ್ಲೇ ಉರಿಗೆ ಒಡ್ಡಲು ಇಟ್ಟಿರುತ್ತಿದ್ದ ಹಾಳೆಯನ್ನೇ ಹಾಸಿಕೊಂಡು ಮಲಗುವ ಮನಸ್ಸಾಗುತ್ತಿತ್ತು. ಎಣ್ಣೆ ಹಚ್ಚಿದ ಕೂಡಲೇ ಸ್ನಾನ ಮಾಡೋ ಆಗಿಲ್ಲ ಅದು ಮೈಗೆ ಹತ್ತಬೇಕು. ಬೇಸಿಗೆಯ ಮಳೆಗೆ ಸೋರುವ ಮನೆಯಂತೆ ಅಲ್ಲಲ್ಲಿ ಇಳಿಯುತ್ತಿದ್ದ ಎಣ್ಣೆಯನ್ನು ಒರೆಸಿಕೊಳ್ಳಲು ಕೈಗೂ ಆಲಸ್ಯ. ರೆಪ್ಪೆಗಳಿಗೋ ಮತ್ತೊಮ್ಮೆ ಸೇರುವ ಅವಸರ.

ಇಂಥಹ ಮಂಪರಿನಲ್ಲಿ ಇರುವಾಗಲೇ ನೀರು ಬಿಸಿಯಾಗಿ ಸುಯ್ಯೆಂಬ ಗಾನ ಹಾಡುತ್ತಿರುತ್ತಿತ್ತು. ಅದರ ಶ್ರುತಿ ಹಿಡಿದೂ ಅವಳೂ ಬರುತ್ತಿದ್ದಳು ಒಮ್ಮೆ ತಣ್ಣೀರು ಉರಿ ಎರಡನ್ನೂ ತನ್ನ ಹದ್ದಿನ ಕಣ್ಣಿಂದ ಗಮನಿಸಿ ಕೂರಿಸಿ ತಂಬಿಗೆ ಹಿಡಿದು ಬಿಸಿ ಬಿಸಿ ನೀರನ್ನು ಎತ್ತಿ ಹೊಯ್ಯಲು ಶುರುಮಾಡಿದರೆ ಅದೊಂದು ತರಹ ಮಂಪರು. ಎಲ್ಲಿದ್ದಿನಿ ಅನ್ನೋದು ಮರೆತು ಹೋಗುವ ಭಾವ. ಹಾಗೆ ಕಳೆದುಹೋಗುವ ಮುನ್ನವೇ ತಣ್ಣನೆ ಹಾವು ಹರಿದಂತೆ ನೆತ್ತಿಯಿಂದ ಮತ್ತಿಯಗುಳ ಇಳಿದು ಬೆನ್ನಿನಿಂದ ಜಾರಿ ಕಚಗುಳಿಯಿಟ್ಟು ಎಬ್ಬಿಸುತ್ತಿತ್ತು. ಮತ್ತಿ ಸೊಪ್ಪು ತಂದು ಅದನ್ನು ಹದವಾಗಿ ಜಜ್ಜಿ ಕಲ್ಲಿನ ಮಡಕೆಗೆ ಹಾಕಿಟ್ಟರೆ ಮಂದ್ರವಾದ ತಣ್ಣಗಿನ ಗುಳ ತಯಾರಾಗಿರುತಿತ್ತು. ಅವತ್ತಿನ ಮಟ್ಟಿಗೆ ಅದೇ ಶಾಂಪೂ ನಮ್ಮ ಪಾಲಿಗೆ. ಇಷ್ಟೇ ತೆಗೆದುಕೊಂಡು ಮತ್ತಷ್ಟು ತಣ್ಣೀರಲ್ಲಿ ಕಲೆಸಿ ಹದ ಮಾಡಿಕೊಂಡು ನೆತ್ತಿಗೆ ಹಾಕಬೇಕು. ಅದು ದೇಹಕ್ಕೆ ನೆತ್ತಿಗೆ ತಂಪು ಮಾತ್ರವಲ್ಲ ಕೂದಲಿಗೆ ಟಾನಿಕ್ ಕೂಡಾ. ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ, ಕಪ್ಪಾಗಿ ಮಿರುಗುತಿತ್ತು ಕೂಡಾ.

ಅಂಗೈಯ್ಯಲ್ಲಿ ಸೀಗೆಪುಡಿ ಹಿಡಿದು ತಲೆಯನ್ನು ಗಸಗಸ ಉಜ್ಜುತ್ತಿದ್ದರೆ ತಲೆಯ ಕೊಳೆಯೆಲ್ಲಾ ಜಿಡ್ಡಿನ ಸಮೇತ ಗಂಟುಮೂಟೆ ಕಟ್ಟಿಕೊಂಡು ಓಡುವ ರಭಸದಲ್ಲಿ ಕಣ್ಣಿಗೆ, ಬಾಯಿಗೆ ಜಾರಿಬೀಳುವ ಪರಿಗೆ ಕಣ್ಣು ಉರಿಯುತ್ತಿತ್ತು. ಅಭ್ಯಂಜನದ ದಿನ ಸೋಪು ನಿಷಿದ್ಧ. ಜಿಡ್ಡು ಶರಣಾಗುತ್ತಿದ್ದದ್ದು ಸೀಗೆಪುಡಿಯ ಘಾಟಿನ ಎದುರು ಮಾತ್ರ. ಹರಳೆಣ್ಣೆ ತಂಪು ಆದರೆ ವಿಪರೀತ ಜಿಡ್ಡು. ಪ್ರತಿಯೊಂದು ಒಳ್ಳೆಯದಕ್ಕೂ ಇನ್ನೊಂದು ಮುಖವಿದ್ದೇ ಇರುತ್ತಾ?  ಜಿಡ್ಡು ತೊಳೆಯಲು ಘಾಟಾದರೂ ಸೀಗೆಪುಡಿಯೇ ಸರಿಯಾದ ವಸ್ತು. ಜಿಡ್ಡು, ಘಾಟು, ತಂಪು ಎಲ್ಲದರ ಸಂಗಮವೇ ಅಭ್ಯಂಜನವೆಂಬ ಅಮೃತ. ಮತ್ತಷ್ಟು ನೀರು ಸುರಿದು ಅವತ್ತಿನ ದಿನಕ್ಕೆಂದೇ ಎತ್ತಿಟ್ಟ ಅಜ್ಜನ ಪಾಣಿ ಪಂಚೆಯಿಂದ ತಲೆ ಮೈ ಒರೆಸುತ್ತಿದ್ದರೆ ನಿದ್ರಾದೇವಿ ತನ್ನ ತೋಳುಗಳನ್ನು ಚಾಚಿ ಅಪ್ಪುತ್ತಿದ್ದಳು.

ಒಳಗೆ ಬರುತ್ತಿದ್ದ ಹಾಗೆ ಒಂದು ಲೋಟ ನೀರು ಮಜ್ಜಿಗೆಯನ್ನೋ, ಮಳೆಗಾಲವಾದರೆ ಕಾಫಿಯನ್ನೋ ಕೊಟ್ಟು ಅವಳು ನಡೆಯುತ್ತಿದ್ದರೆ ನಾವೋ ಮುಚ್ಚುವ ಕಣ್ಣುಗಳನ್ನು ಬಲವಂತವಾಗಿ ತೆರೆಸುತ್ತಾ ಚನ್ನೆಮಣೆಯೋ, ಪಗಡೆಯನ್ನೋ ಆಡುತ್ತಾ ನಿದ್ದೆಯನ್ನು ಓಡಿಸಲು ಪ್ರಯತ್ನದಲ್ಲಿರುತ್ತಿದ್ದೆವು.

ತೊಬತ್ತರ ಹೊಸಿಲಿಗೆ ಧಾಪುಗಾಲಿಕ್ಕುತ್ತಿರುವ ಅವಳ ತಲೆಯಲ್ಲಿ ಈಗ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಹಣಕುತ್ತಿದೆ. ಅವಳನ್ನೇ  ನೋಡುತ್ತಾ ಅಹಿ  ಅಮ್ಮಾ ಮುತ್ತಜ್ಜಿತಲೆಗಿಂತ ನಿನ್ನ ತಲೆಯಲ್ಲೇ ಜಾಸ್ತಿ ಬಿಳಿ ಕೂದಲಿದೆಯಲ್ಲೇ ಅಂತ ಆಶ್ಚರ್ಯವಾಗಿ ಕೇಳುತ್ತಿದ್ದರೆ  ನಾವೆಲ್ಲಾ ನಿಮ್ಮ್ ತರಹ ಶಾಂಪೂ ಉಪಯೋಗಿಸಿಲ್ಲ ಅದ್ಕೆ ಕಣೆ ಅಂತ ತನ್ನ ಸುಕ್ಕುಗಟ್ಟಿದ ಮೃದುವಾದ ಕೈಯಲ್ಲಿ ಅಹಿ ತಲೆನೆವರಿಸುತ್ತಾ ನುಡಿಯುತ್ತಿದ್ದಳು. ನನ್ಕೈಯಲ್ಲಿ ಈಗ ಆಗೋಲ್ಲ ಇಲ್ಲಾಂದ್ರೆ ನಿಂಗೂತಲೆಗೆ ಎಣ್ಣೆ ನೀರು ಹಾಕ್ತಿದ್ದೆ , ಬಂದವಳಿಗೆ ಒಂದು ಎಣ್ಣೆ ನೀರು ಹಾಕೋಕೂ ಆಗದ ಮೇಲೆ ಇರಬಾರದು ನೋಡು ಅಂದು ನೋಯುತ್ತಿದ್ದಳು.

ಹರಳೆಣ್ಣೆಯನ್ನುತೊಳೆಯುವ ಶಕ್ತಿ ಶಾಂಪೂವಿಗಿಲ್ಲ, ಮತ್ತಿಸೊಪ್ಪು ಹುಡುಕುವ ತಾಳ್ಮೆ ಈಗ ಯಾರಿಗೂ ಇಲ್ಲ. ಸಮಯವಂತೂ ಮೊದಲೇ ಇಲ್ಲಾ. ಅಭ್ಯಂಜನ ಅನ್ನೋದು ಈಗ ವಿಪರೀತ ಕಾಸ್ಟ್ಲಿ. ಸಿಗೇಪುಡಿ ಘಾಟು ಮೂಗಿಗೆ ಅಲರ್ಜಿ. ಮೊಮ್ಮಗಳಿಗೆ ಅವಳ ಮಗಳಿಗೆ ಎಣ್ಣೆ ನೀರು ಹಾಕಲಾಗದ  ತನ್ನ ವಯಸ್ಸಿಗೆ ಅಸಹಾಯಕತೆಗೆ ನೋಯುತ್ತಿದ್ದವಳ   ತಲೆಗೆ ಎಣ್ಣೆ ಒತ್ತಿ ಕರೆದುಕೊಂಡು ಹೋಗಿ ನೀರು ಸುರಿದು ಸ್ನಾನ ಮಾಡಿಸಿ ಕರೆತಂದು ಒರೆಸುತ್ತಿದ್ದೆ. ಇಳಿಯುತ್ತಿದ್ದದ್ದು ಬೆವರಾ.. ಕಣ್ಣೀರಾ ಪರೀಕ್ಷಿಸಲು ಧೈರ್ಯವಾಗಲಿಲ್ಲ. ಎದ್ದುಬಂದರೆ ಅಂಗಳದಲ್ಲ್ಲಿ ಒಣಗಲು ಹಾಕಿದ್ದ ಪಾಣಿಪಂಚೆಯೊಂದನ್ನು ತೆಗೆದುಕೊಂಡ ಅಹಿ ಮುತ್ತಜ್ಜಿಯ ಮುಖ ಒರೆಸುತ್ತಿದ್ದಳು. ಈಗ ಹಗುರಾಯ್ತು ನೋಡು ಅಂತ ಅವಳು ಘೋಷಿಸುತ್ತಿದ್ದಳು.

ಅಮ್ಮಾ ಇನ್ಮೇಲೆ ನಂಗೆ ಶಾಂಪೂ ಬೇಡಾ, ಗುಳ ಹಾಕೆ ಸ್ನಾನ ಮಾಡ್ಸು. ನಮ್ಮನೆ ಟೆರಸ್ ಅಲ್ಲಿ ಮಣ್ಣು ಹಾಕಿ ಆ ಮರ ನೆಡೋಣ. ನಂಗೂ ಮುತ್ತಜ್ಜಿ ತರಹ ಕೂದ್ಲುಬೇಕು ಅಂತ ಮಗಳು ಅಪ್ಪಣೆ ಮಾಡಿದ್ಲು. ನಕ್ಕಿದ್ದು ದಾರಿಯ ಬದಿಯಲ್ಲಿದ್ದ ಮತ್ತಿಯ ಚಿಗುರಾ... ಅಜ್ಜಿಯ ಬೊಚ್ಚುಬಾಯಿಯಾ... ಸೀಗೆಬಳ್ಳಿಯನ್ನೇ ಕೇಳಬೇಕು..

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...