ಕಸ್ತೂರಿ ಕಂಕಣ.

ಸರಾಗವಾಗಿ ಹರಿಯುತಿದ್ದ ನದಿಯೊಂದಕ್ಕೆ ಅಡ್ಡಲಾಗಿ ಬಂದ ಮರದ ತುಂಡಿನಂತೆ ಇದ್ದಕ್ಕಿದ್ದ ಹಾಗೆ ಬರುವ ಸೀರ್ಯದ ಪತ್ರ, ಮದುವೆಯ ಬಗೆಗಿನ ಅಪೇಕ್ಷೆ ತಿಳಿನೀರ ಕೊಳದಲ್ಲಿ ಬಿದ್ದ ಕಲ್ಲಿನಂತೆ ಅಲೆಯನ್ನು ಎಬ್ಬಿಸುತ್ತದೆ. ಯಾವ ಅಲೆಯ ಭಾವ ಯಾವುದು ಎಂದು ಗುರುತಿಸುವುದು ಹೇಗೆ? ಅದರಲ್ಲೂ ಹಾವಿನ ಹೆಡೆಯ ಕೆಳಗೆ ಕುಳಿತಿರುವವ ಮೈಯೆಲ್ಲಾ ಕಣ್ಣಾಗಿರಬೇಕು, ಕಿವಿಯಾಗಿರಬೇಕು. "ಅಕಾರಣ ಮೈತ್ರಿ, ಅಕಾರಣ ಪ್ರಶಂಸೆ, ಅಕಾರಣ ಆಶ್ವಾಸನೆಗಳೆಲ್ಲವೂ ಸಂದೇಹಕ್ಕೆ ಕಾರಣವಾಗುವ ವಿಷಯಗಳೇ ಅನ್ನುವ ನಾಯಕನ ಮಾತು ಮೇಲ್ನೋಟಕ್ಕೆ ಅಕಾರಣ ಎನ್ನಿಸುವ ಎಲ್ಲದರಲ್ಲೂ ಒಂದು ಗಹನವಾದ ಕಾರಣ ಇದ್ದೆ ಇರುತ್ತದೆ ಅನ್ನುವುದುದನ್ನ ಸೂಚಿಸುತ್ತದೆ. ಪ್ರಕೃತಿಯಲ್ಲಿ ಯಾವುದೂ ಅಕಾರಣವಲ್ಲ ಅನ್ನುವ  ಮತ್ತದೇ ನಂಬಿಕೆಗೆ ಬಂದು ನಿಲ್ಲುತ್ತೇನೆ ನಾನು.

ಶತ್ರುವನ್ನು ಶತ್ರುವಾಗಿಯೇ ನೇರವಾಗಿ ಎದುರಿಸಲು ಅಸಾಧ್ಯವಾದಾಗ ಹೊಳೆಯುವ ಆಲೋಚನೆಯೇ ಮಿತ್ರರಂತೆ ನಟಿಸಿ ಇರಿಯುವುದು. ಬದುಕಿನ ದೊಡ್ಡ ಭೀತಿ ಎಂದರೆ ಅದು ಶತ್ರುವಲ್ಲ ಹಿತಶತ್ರು. ಬೆನ್ನಿಗೆ ಕಣ್ಣಿಲ್ಲ ಅನ್ನುವುದನ್ನ ಅರಿತು ಅದನ್ನು ಉಪಯೋಗಿಸಿಕೊಳ್ಳುವ ಇವರ ಕ್ರೌರ್ಯ ಜಗತ್ತಿನ ಅತಿ ದೊಡ್ಡ ಕ್ರೌರ್ಯ ಅನ್ನಿಸುತ್ತದೆ ಯಾವಾಗಲೂ. ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಬಹಳಷ್ಟು ಸಫಲವಾಗುವ ಸೀರ್ಯ, ಹಾಗೂ ತರಿಕೇರಿ ಕುಟಿಲತನಕ್ಕೆ ಉತ್ಕೃಷ್ಟ ಉದಾಹರಣೆಯಾಗಿ ನಿಲ್ಲುತ್ತಾರೆ. ಒಮ್ಮೆ ಬದುಕಿನತ್ತ ದೃಷ್ಟಿ ಹರಿಸಿ ಸಿಹಿಯ ಹೆಸರಿನ ಸೀರ್ಯದವರು ಇದ್ದಾರ ಅನ್ನುವುದನ್ನು ಪರಿಕ್ಷೆ ಮಾಡುವ ಹಾಗೆ ಮಾಡುತ್ತದೆ.

ಕ್ರೋಧ ಶತ್ರುವಿಗೆ ಉದಾಹರಣೆಯಾದರೆ, ವ್ಯಂಗ್ಯ ಹಿತಶತ್ರುವಿಗೆ ಉದಾಹರಣೆಯಾಗಬಹುದು. ಅವೆರಡನ್ನೂ ತಕ್ಷಣ ಎದುರಿಸುವುದು ಅಪಾಯವೇ. ತಾಳ್ಮೆಯಿಂದ ವಿವೇಚನೆ ಮಾಡಿದಲ್ಲಿ ಅಪಾಯದಲ್ಲೂ ದೊಡ್ಡ ಉಪಾಯ ಕಂಡು ಬರಬಹುದು. ಅವಮಾನವೂ ಸಂಮಾನವಾಗಬಹುದು. ಆ ತಾಳ್ಮೆ, ದುರದೃಷ್ಟಿ, ಚಾಣಕ್ಷತೆ ನಮ್ಮೊಳಗೇ ಇರಬೇಕು ಅಷ್ಟೇ. ದುರ್ಗದವರ ಉತ್ತರವನ್ನು ಹಾಗೆ ಚಾಣಾಕ್ಷವಾಗಿ ಬಳಸಿಕೊಳ್ಳುವ ತರಿಕೇರಿಯ ವಕೀಲ ದ್ರೋಹದ ಮೊದಲ ಗರ ಉರುಳಿಸುತ್ತಾನೆ. ಅವನ ದಾಳಕ್ಕೆ ತಕ್ಕ ಹಾಗೆ ಸಿಗದೇ ಶಾಸ್ತ್ತ್ರಕ್ಕೆ, ಉಪ್ಪಿಟ್ಟ ಧಣಿಗೆ ದ್ರೋಹ ಮಾಡಲು ಒಪ್ಪದೇ ಯಾವುದೇ ಶಿಕ್ಷೆಗೂ ತಯಾರಾಗುವ ಯಜ್ಞನಾರಾಯಣ ಶಾಸ್ತ್ರಿಗಳು, ಕಂತೆಗೆ ತಕ್ಕ ಬೊಂತೆಯ ಹಾಗೆ ಅವರ ಹೆಗಲಿಗೆ ನಿಲ್ಲುವ ಅವರ ಹೆಂಡತಿ, ಹಣದಾಸೆಗೆ ಮರುಳಾಗಿ ಕಲಿತ ವಿದ್ಯೆಗೆ ದ್ರೋಹ ಬಗೆಯುವ ಚಂದ್ರಶೇಖರ ಶಾಸ್ತ್ರಿ. ವಿದ್ಯೆ ಕಲಿತವ ವಿದ್ಯಾವಂತನಾಗಬಲ್ಲ ಆದರೆ ಸಂಸ್ಕಾರ ಕೇವಲ ವಿದ್ಯೆಯಿಂದ ಬರುವುದಿಲ್ಲ ಅನ್ನುವುದನ್ನ ನಿರೂಪಿಸುತ್ತಾರೆ.

ಹಾಕಿದ ದಾಳ ಆಡಿದ ಆಟ ಸರಿಯಾಗಿ ನಡೆದು ಮದುವೆಯೂ ಮುಗಿಯುತ್ತದೆ. ಅಲ್ಲಿಯವರೆಗೆ ನಿರಾತಂಕವಾಗಿ ಅಂದುಕೊಂಡಂತೆ  ನಡೆಯುತ್ತಿದ್ದ ಆಟಕ್ಕೆ ಭಂಗ ಬರುವುದು ಹಿರಿಯೂರಿನ ಕೆಂಚಣ್ಣ ನಾಯಕನಿಂದ. ಅವನ ಸ್ವಾಮಿನಿಷ್ಠೆ, ಬುದ್ಧಿವಂತಿಕೆ, ಧೈರ್ಯ, ದುರ್ಗವನ್ನು ಕವಿದ ಕಾರ್ಮೋಡದಿಂದ ರಕ್ಷಿಸಿ ತಾನು ಬಿರುಮಳೆಗೆ ಸಿಲುಕುವ ಹಾಗೆ ಮಾಡುತ್ತದೆ. ಅವನ ಅಚಲ ಶ್ರದ್ಧೆ, ದುರ್ಗದ ಬಗೆಗಿನ ನಿಷ್ಠೆಗೆ ಮನಸೋತ ನಾಯಕರೆ ಸ್ವತಃ ಹೋಗಿ ಅವನಿಗೆ ಸಹಾಯ ಮಾಡಿ ಹಿರಿಯೂರು ಹಾಗೂ ತಾವು ತಂಗಿ ಎಂದು ಭಾವಿಸಿದ ಹನುಮವ್ವ ನಾಗತಿಯ ಸೌಭಾಗ್ಯ ಉಳಿಸುತ್ತಾರೆ. ಇತ್ತ ಕೆಂಚಣ್ಣ ನಾಯಕನ ದಳವಾಯಿಯ ಕಾರ್ಯಶ್ರದ್ಧೆ, ಧೈರ್ಯ, ದುರ್ಗವನ್ನು ಕಾಪಾಡುತ್ತದೆ.

ರಕ್ಷೆಗಾಗಿ ಕಂಕಣವನ್ನು ಕಟ್ಟುವುದು ಈ ನೆಲದ ಗುಣ. ಹಾಗೆ ಕಂಕಣ ಕಟ್ಟುವವರು ದೊರಕುವುದು ಬದುಕಿನ ಪುಣ್ಯ. ಕಟ್ಟಿಸಿಕೊಳ್ಳುವ ಪುಣ್ಯ ದಕ್ಕಿದಂತೆ ಕಟ್ಟುವ ಮನಸ್ಥಿತಿಯೂ ಬರಬೇಕು. ಯಾರೋ ನಮಗೆ ಹೆಗಲಾದಂತೆ ನಾವು ಮತ್ಯಾರಿಗೋ ಹೆಗಲಾಗ ಬೇಕು. ಈ ಪ್ರಕ್ರಿಯೆ ನಿರಂತರವಾಗಿ ಚೈನ್ ನಂತೆ ನಡೆದಾಗ ಬದುಕು ಅರ್ಥಪೂರ್ಣ ಹಾಗೂ ನಿರಾಳ. ಕಂಕಣ ಕಟ್ಟುವುದು ಎಷ್ಟು ಜವಾಬ್ದಾರಿ, ಕಾಳಜಿಯನ್ನು ಬೇಡುತ್ತದೋ ಅದನ್ನು ಕಾಪಾಡಿ ಕೊಳ್ಳುವುದು ಅಷ್ಟೇ ಪ್ರೀತಿಯನ್ನು ನಂಬಿಕೆಯನ್ನು ಬೇಡುತ್ತದೆ. ಕಟ್ಟುವವನು, ಕಟ್ಟಿಸಿಕೊಳ್ಳುವನು ಇಬ್ಬರೂ ಅದನ್ನ ಗೌರವಿಸಿದಾಗ ಮಾತ್ರ ಕಂಕಣ ಕಾಪಾಡುತ್ತದೆ ಮಾತ್ರವಲ್ಲ ನಗುವಿನ ಬೆಳಕು ಬೀರುತ್ತದೆ. ಆ ಬೆಳಕಿನಲ್ಲಿ ಬದುಕು ಸರಾಗವಾಗಿ ಚಲಿಸುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...