ವಿಜಯೋತ್ಸಾಹ

ಯುದ್ಧವೂ ಬೇಡಾ, ಸಾವು ನೋವೂ ಬೇಡಾ ಅಂತ ಮನಸ್ಸಿಗೆ ಅರ್ಥಮಾಡಿಸುವ, ರಣೋತ್ಸಾಹಕ್ಕಾಗಿ ತುಡಿಯುವ ಮನಸ್ಸನ್ನು ಸಮಾಧಾನ ಪಡಿಸುವ ಕಾರ್ಯದಲ್ಲಿದ್ದಾಗಲೇ ಆಗಮಿಸುವ ಸೀರ್ಯದ ವಕೀಲರು ಆಗಮಿಸಿ ಹೊಯ್ದಾಡುವ ದೀಪಕ್ಕೆ ಇನ್ನಷ್ಟು ಗಾಳಿ ಬೀಸಿದ ಹಾಗಾಗುತ್ತದೆ. ತಮ್ಮ ಬಲವನ್ನು ಪ್ರಚುರ ಪಡಿಸುವ, ನೆಲೆಯನ್ನು ಭದ್ರಗೊಳಿಸುವ ಆಶಯದೊಂದಿಗೆ ದುರ್ಗವನ್ನು ವಶಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು ಅನ್ನುವ ನೀರಿಕ್ಷೆಯಲ್ಲಿ ತಮ್ಮ ಉಳಿವಿಗಾಗಿ ಇನ್ನೊಬ್ಬರ ಸ್ವಾಭಿಮಾನವನ್ನು ಒತ್ತೆಯಾಗಿಸಿ ಕೊಳ್ಳುವ ಪ್ರಯತ್ನಕ್ಕೆ ಮುನ್ನುಡಿಯಾಗುತ್ತದೆ.  ನಮ್ಮ ಬಲ ಜಗತ್ತಿಗೆ ತಿಳಿಯಬೇಕಾದರೆ ಇನ್ಯಾರೋ ಬಲವಂತ ನಮ್ಮ ಅಡಿಯಾಗಬೇಕು.

ಎಳೆಯ ಬಾಳು ವ್ಯವಸ್ಥಿತವಾಗಿ ಬೆಳೆಯುವುದಕ್ಕೆ ಶಿಸ್ತು ಎಷ್ಟು ಅಗತ್ಯವೋ, ಮುಂದೆ ಬಾಳಿನ ಹೋರಾಟಗಳನ್ನು ಎದುರಿಸಬೇಕಾದರೆ ಚಿಕ್ಕಂದಿನಿಂದಲೇ ನಿರ್ಭಯವೂ ಅಭ್ಯಾಸವಾಗಿರಬೇಕು ಅನ್ನುವ ನಾಯಕನ ಮಾತು ಮಕ್ಕಳ ಬೆಳವಣಿಗೆ ಹೇಗಿರಬೇಕು ಅನ್ನುವುದನ್ನ ವಿವರಿಸುತ್ತದೆ. ಇಂದು ತಂದೆ ತಾಯಿಗೆ ಹೆದರಿದ ಮಕ್ಕಳು ನಾಳೆ ನೆರಳಿಗೂ ಹೆದರುವ ಅಂಜುಬುರುಕರಾಗಿರುತ್ತಾರೆ ಅನ್ನುವುದು ಎಷ್ಟು ಸತ್ಯವೋ ಇಂದು ತಂದೆ ತಾಯಿಗೆ ಗೌರವ ಕೊಡದ ಮಕ್ಕಳು ನಾಳೆ ಯಾರಿಗೂ ಗೌರವ ಕೊಡಲಾರರು ಅನ್ನೋದೂ ಅಷ್ಟೇ ಸತ್ಯ. ತನ್ನದನ್ನು ತಾನು ಉಳಿಸಿಕೊಂಡು ತನ್ನ ಗೌರವವನ್ನು ರಕ್ಷಿಸಿಕೊಂಡು ಬದುಕಬೇಕೆನ್ನುವ ಮನುಷ್ಯ ಕತ್ತಿಯನ್ನು ಹಿಡಿದೇ ಬದುಕಬೇಕು ಅನ್ನುವ ಮಾತು ಈ ಕ್ಷಣಕ್ಕೂ ಪ್ರಸ್ತುತ, ಹಾಗೂ ಅದನ್ನು ಮರೆತಿರುವುದೇ ಈಗಿನ ದುರಂತ.

ದುರ್ಗ ಸಾಮಂತ ರಾಜ್ಯವಾದರೆ ತನ್ನ ಸ್ಥಾನಕ್ಕೆ ಕುತ್ತಿಲ್ಲ ಎಂದು ಪ್ರಯತ್ನಿಸುವ ಸೀರ್ಯ, ಅವಮಾನವನ್ನು ಸಹಿಸದೆ ಬೇರೇನೂ ಯೋಚಿಸದೆ ಸಿಡಿದೇಳುವ ದಳವಾಯಿ, ಆತುರಕ್ಕಿಂತ ತಾಳ್ಮೆಯೇ ಅಗತ್ಯ, ಮೊದಲು ಶತ್ರುವಿನ  ಬಲಾಬಲ ಅರಿಯದೆ ಆವೇಶ ಒಳ್ಳೆಯದಲ್ಲ ಅನ್ನುವ ಪ್ರಧಾನಿ, ಯುದ್ಧಕ್ಕೆ ಹಾತೊರೆದರೂ ನಂತರದ ಪರಿಣಾಮಗಳಿಗೆ ನೋಯುವ ನಾಯಕ, ಹೊನ್ನು, ಮಣ್ಣಿಗೆ ಸೋಲದ ಗಂಡು ಹೆಣ್ಣಿಗಾದರೂ ಸೋಲಬಹುದು ಅನ್ನುವ ಸಣ್ಣ ಆಸೆಯನ್ನು ಹೊತ್ತು ಕಾಯುವ ಸೀರ್ಯದ ವಕೀಲ.. ಎಲ್ಲರಿಗೂ ತಮ್ಮದೇ ಲೆಕ್ಕಾಚಾರ. ಬದುಕು ಕಲಿಸುವ ಲೆಕ್ಕಾಚಾರ ಯಾವ ಪುಸ್ತಕ, ಯಾವ ವಿಶ್ವವಿದ್ಯಾಲಯ ಕಲಿಸೀತು? ಓದು ಬರಹ ಬಲ್ಲದವರು ಬದುಕಬಲ್ಲರು... ಲೆಕ್ಕಾಚಾರ ಕಲಿಯದವರು ..........????

ಕಲಾವಿದೆ ಬೆಲೆವೆಣ್ಣಲ್ಲ, ಕಲೆ ಮಾರಾಟದ ಸೊತ್ತಲ್ಲ ಎಂದು ಸಿಡಿದು ಯಾವ ಆಮಿಷಕ್ಕೂ ಬಲಿಯಾಗದೆ ತನ್ನತನ ಕಾಪಾಡಿಕೊಳ್ಳುವ ಮೆಹರ್ ಬಾನು ಪುಸ್ತಕವನ್ನು ಕೆಳಗಿಟ್ಟ ಮೇಲೂ ಕಾಡುತ್ತಾಳೆ. ಹೆಣ್ಣು ಅದರಲ್ಲೂ ರೂಪವತಿಯಾದ ಹೆಣ್ಣು ಬಹು ದಿನ ಕಲೋಪಾಸಕಳಾಗಿ ಉಳಿಯುವುದು ಸಾಧ್ಯವಾಗುವುದಿಲ್ಲ ಅನ್ನುವ ಗುರುಗಳಿಗೆ ಯಾವುದೇ ಕಾರಣಕ್ಕೂ ತನ್ನ ಸೌಂದರ್ಯ ಸಂಗೀತಾಭ್ಯಾಸದ ಹಾದಿಯಲ್ಲಿ ಅಡ್ಡ ಬರಲು ಅವಕಾಶ ಕೊಡುವುದಿಲ್ಲ ಎಂದು ಮಾತು ಕೊಟ್ಟು ಅದಕ್ಕೆ ಅನುಗುಣವಾಗಿ ತನ್ನ ಬಾಳನ್ನು ರೂಪಿಸಿಕೊಳ್ಳುವ ಅವಳ ದಿಟ್ಟತನ, ಗಟ್ಟಿತನ ಮಾದರಿಯಾಗಿ ನಿಲ್ಲುತ್ತದೆ.

ಮರಾಠರ ಧಾಳಿಗೆ ಸಿಲುಕಿ ಪ್ರಾಣಪಾಯದಿಂದ ತಪ್ಪಿಸಿಕೊಂಡು ದುರ್ಗದ ಜನರ ಕೈಯಲ್ಲಿ ಸಿಕ್ಕಿಕೊಳ್ಳುವ ಜಾನ್ ಡ್ಯುವರೋ, ಅವರ ಆತಿಥ್ಯಕ್ಕೆ, ಕಾರುಣ್ಯಕ್ಕೆ ಮಾರುಹೋಗಿ ದುರ್ಗದ ಕೋಟೆ ಕೊತ್ತಲಗಳನ್ನೂ ಭದ್ರಗೊಳಿಸುವ ಕಾರ್ಯಕ್ಕೆ ಸಹಾಯ ಮಾಡುತ್ತಾನೆ. ಧರ್ಮವೆನ್ನುವುದು ಸ್ವಾರ್ಥದ ಕರಾಳ ತಾಂಡವಕ್ಕೆ ಹಾಕಿದ ಮುಖವಾಡವಾಗಿದೆ ಎಂದು ಸ್ವತಃ ಅನುಭವಿಸಿ, ಮರಾಠರ ಕ್ರೌರ್ಯಕ್ಕೆ ತುತ್ತಾಗಿ ಮಾನವಿಯತೆಯಲ್ಲಿ ನಂಬಿಕೆ ಕಳೆದುಕೊಂಡ ಸ್ಥಿತಿಯಲ್ಲಿ ಇರುವಾಗ "ಪರರ ಕ್ರೌರ್ಯವನ್ನು ಕಂಡು ನಮ್ಮ ದಯೆಯಲ್ಲಿನ ನಂಬಿಕೆ ಕಳೆದುಕೊಳ್ಳಬಾರದು, ಉಳಿದವರು ಪಶುಗಳಾದರೂ ನಾವು ನಂಬಿಕೆಯನ್ನು ನಷ್ಟ ಮಾಡಿಕೊಳ್ಳಬಾರದು" ಅನ್ನುವ ಪರಶುರಾಮಪ್ಪನವರ ಮಾತು ಬದುಕಿಗೆ ಹೊಸ ದೃಷ್ಟಿಕೊನವನ್ನೇ ಕೊಡುತ್ತದೆ. ಪ್ರತಿ ಪುಸ್ತಕ ನಮ್ಮದಾಗುವುದು ಹೀಗೆ..

ಮೆಹರ್ ಬಾನುವಿನ ಕೋರಿಕೆಯಂತೆ ಸ್ನೇಹ ಹಸ್ತ ಚಾಚುವ ನಾಯಕರು, ಅದೇ ಸಮಯಕ್ಕೆ ಅವರ ಸ್ನೇಹ ಅನಿವಾರ್ಯವಾಗುವ ಪರಿಸ್ಥಿತಿಗೆ ಸಿಲುಕುವ ಸೀರ್ಯದ ದಿವಾನರು, ಮರಾಠರ ಧಾಳಿ, ಅದನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ದುರ್ಗದ ಸೇನೆ.  ಸಂತೋಜಿ ಘೋರ್ಪಡೆಯನ್ನು ಕೊಲ್ಲುವ ತನ್ನ ಬದುಕಿನ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಂಡು ತನ್ನ ಪ್ರೇಮವನ್ನು ಸಾಕಾರಗೊಳಿಸಿಕೊಳ್ಳುವ ಜಾನ್ ಡ್ಯುರೋ, ಕೊನೆಯವರೆಗೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಯಾರ ನಂಬಿಕೆಗೂ ದ್ರೋಹ ಮಾಡದ ಮೆಹರ್ ಬಾನು, ಸಮಸ್ಯೆಯನ್ನು ಚಾಣಾಕ್ಷತನದಿಂದ ಬಗೆಹರಿಸಿಕೊಂಡು ವಿಜಯಶಾಲಿಯಾಗುವ ದುರ್ಗ.

ಭೀತಿ ಅನ್ನುವುದು ಇಬ್ಬಗೆಯ ಕತ್ತಿಯಂತೆ, ಅದನ್ನು ಎದುರಿಸಿದವನು ಮಾತ್ರ ವಿಜಯಶಾಲಿಯಾಗಬಲ್ಲ. ಹಾಗೆಯೇ ಬಯಕೆಯಿದ್ದರೆ ಸಾಲದು ಅದನ್ನು ಈಡೇರಿಸಿ ಕೊಳ್ಳುವ ಪ್ರಯತ್ನಶೀಲತೆಯೂ ಬೇಕು. ಸಾಕ್ಷೀಭಾವದಿಂದ ಪೂರ್ಣ ಪರಿಶ್ರಮದಿಂದ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಛಲ ಬಿಡದೇ ಮಾಡಿದಾಗ ಮಾತ್ರ ವಿಜಯಶಾಲಿ ಆಗಲು ಸಾಧ್ಯ.

ಬದುಕಿನಲ್ಲಿ ನಿರಾಶೆ ಸೋತಾಗ, ಭೀತಿಯನ್ನು ಮೀರಿದಾಗ, ಛಲ ಮೂಡಿದಾಗ  ಮಾತ್ರ ವಿಜಯೋತ್ಸಾಹ ನಗುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...