ಹೊಸ ಹಗಲು.

ರಾತ್ರಿ ನಿದ್ದೆಯೆಂಬ ಮರಣವನ್ನು ಕಳೆದು ಮುಂಜಾವಿನ ಪ್ರತಿ ಉದಯವೂ ಒಂದು ಹೊಸ ಹಗಲೇ. ದಳವಾಯಿಯ ಅಂತ್ಯದೊಂದಿಗೆ ಕರಾಳ ರಾತ್ರಿ ಮುಗಿದು ಹಾಗೆಯೇ ದುರ್ಗಕ್ಕೂ ಹಗಲಾಗಿತ್ತು. ಹೊಸನಾಯಕನ ಬರುವನ್ನು ಕಾಯ್ದ, ದುರ್ಗದ ಅಭಿವೃದ್ಧಿಯ, ಕನಸಿನ ಹೊಸ ಹಗಲು. ಅತ್ತ ಬಿಸಿಲಿನ ಧಗೆಯಲ್ಲಿ ಕಣ್ಣಲ್ಲಿ ಕತ್ತಲೆಯನ್ನು ತುಂಬುವ ಬೆಳಕಿನಲ್ಲಿದ್ದ ಭರಮಣ್ಣನಿಗೂ ಅದು ಹೊಸಹಗಲಿಗೆ ನಾಂದಿಯಾಗಿತ್ತು. ಕತ್ತಲೆಯಲ್ಲೂ ಕಣ್ಣು ಕಾಣದು, ಅತಿ ಬೆಳಕಲ್ಲೂ ಕಣ್ಣು ತೋರದು. ಎರಡೂ ದೃಷ್ಟಿಯನ್ನು ಮಂಕಾಗಿಸುತ್ತದೆ.

ದುರ್ಗದ ಬೆಟ್ಟದಷ್ಟೇ ದುರ್ಗಮ ಕನಸು ಅವನದು. ಅದನ್ನು ನನಸಾಗಿಸಿ ಕೊಳ್ಳುವಲ್ಲೇ ಅವನ ಪ್ರಯತ್ನ. ಯಾವುದೇ ಕನಸನ್ನು ಪೂರ್ಣ ಪ್ರಮಾಣದ ಶಕ್ತಿಯನ್ನು ವ್ಯಯಿಸಿ ಕಿಂಚಿತ್ತೂ ಸಂದೇಹವಿಲ್ಲದೆ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಭರಮಣ್ಣ ಸಾಕ್ಷಿಯಾಗಿ ನಿಲ್ಲುತ್ತಾನೆ. ನನ್ನಿಂದ ಆಗುತ್ತಾ ಅನ್ನೋ ಸಣ್ಣ ಸಂದೇಹ ಹಡಗಿನ ಸಣ್ಣ ಕಿಂಡಿಯಂತೆ ಮುಳುಗಿಸಿ ಬಿಡುತ್ತದೆ.

ನಿದ್ದೆಯಲ್ಲಿ ನಾಯಕನಾಗುವ ಕನಸು, ಎದ್ದಾಗ ಎದುರಿನಲ್ಲಿ ಸ್ವಾಮಿಗಳು, ಗೊಂದಲದ ಮನಸ್ಥಿತಿಯಲ್ಲಿ ಭರಮಣ್ಣ, ಕನಸುಗಳು ವಿಚಿತ್ರವಾಗಿ, ಅದ್ಭುತವಾಗಿ, ಅಲೌಕಿಕವಾಗಿ ಇದ್ದ ಮಾತ್ರಕ್ಕೆ ಅದು ಸುಳ್ಳಾಗಲಾರದು, ಇಂದು ಕಂದ ಕನಸು ಎಚ್ಚತ್ತಾಗಿನ ಮನದ ಬಯಕೆಯ ಪ್ರತಿಬಿಂಬವೋ, ನಾಳೆ ಬರಲಿರುವ ಘಟನೆಯ ಮುಂಗುರುಹೂ ಆಗಿರಬಹುದು ಅನ್ನುವ ಸ್ವಾಮಿಗಳು ಕನಸು ಸುಳ್ಳಲ್ಲ, ಒಳಗಿರುವುದೇ ಹೊರಬರುವುದು ಅನ್ನುವ ಸತ್ಯದ ಅನಾವರಣ ಮಾಡಿ ಅವನ ಆಸೆಯ ಗಿಡಕ್ಕೆ ನೀರೆರೆಯುವದರ ಜೊತೆಗೆ ಅಧಿಕಾರವೆಂದರೆ ಸುಖದ ಸುಪ್ಪತ್ತಿಗೆ ಮಾತ್ರವಲ್ಲ ಅದು ಕತ್ತಿಯ ಅಲುಗು ಅನ್ನುವುದನ್ನ ಸಿಂಹಾಸನದ ಮೇಲಿನ ಕೊಡೆ, ನಾಗರಹಾವಿನ ಹೆಡೆ ಎರಡೂ ಒಂದೇ ಎಂದು  ಸೂಚ್ಯವಾಗಿ ತಿಳಿಸುತ್ತಾರೆ.

ಉತ್ತರಾಧಿಕಾರಿಯನ್ನು ಆರಿಸುವ ಪ್ರಶ್ನೆ ಬಂದಾಗ ಚಿಂತೆಯಲ್ಲಿ ಎಷ್ಟು ನಾಜೂಕಾಗಿದೆ ಸಮಸ್ಯೆ ಎಂದು ವಿವರಿಸುವ ಪರಶುರಾಮಪ್ಪನವರ ಮಾತು ನೋಡಿ: "ಜನ ಎಲ್ಲಾ ಇದರಲ್ಲಿ ಒಳ್ಳೆಯದೇನಿದೆ ಎಂದು ಕಾಣಲು ಯತ್ನಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಲೋಪ ದೋಷಗಳನ್ನೇ ಕಾಣಲು ಯತ್ನಿಸುತ್ತಾರೆ"  ಅನ್ನುವ ಮಾತು ಎಷ್ಟು ಚೆನ್ನಾಗಿ ಮಾನಸಿಕತೆಯನ್ನು ಪರಿಚಯಿಸುತ್ತದೆ. ಒಳ್ಳೆಯದಕ್ಕಿಂತ ದೋಷವೇ ಎದ್ದು ಕಾನುವುದೇಕೆ? ಕೆಟ್ಟ ಆಲೋಚನೆಗಳೇ ಡಾಮಿನೇಟ್ ಮಾಡುವುದು ಯಾಕೆ ಅನ್ನೋ ಪ್ರಶ್ನೆಗೆ ಇಂದಿಗೂ ಉತ್ತರ ಹುಡುಕುತ್ತಲೇ ಇದ್ದೇನೆ. ಕರೆ ಕಳಿಸದೇ ಬರುವುದು ಹಾಗೂ ಕೇಳದೇ ಬುದ್ಧಿವಾದ ಹೇಳುವುದು ಎರಡೂ ತಪ್ಪು ಅನ್ನುವ ಮಾತೆ ಕಿವಿಯಲ್ಲಿ ರಿಂಗುಣಿಸುತ್ತಿದೆ.

ಸಿದ್ದರ ಮಾತಿನಂತೆ ಆರನೆಯ ತಲೆಮಾರಿಗೆ ವಂಶ ಬದಲಾಗಿ ಬಿಳಿಚೋಡಿನ ಭರಮಣ್ಣ ನಾಯಕನಾಗಿ ಆಯ್ಕೆಯಾಗಿ ದುರ್ಗದ ಸಿಂಹಾಸನ, ಜನರ ಬದುಕು ಎರಡರ ಉನ್ನತಿಗೂ ನಾಂದಿಯಾಗುತ್ತದೆ. ನಂಬಿಕೆ ನಮ್ಮ ಶಕ್ತಿಯಾಗಿರಬೇಕೇ ವಿನಃ ದುರ್ಬಲತೆಯಾಗಬಾರದು, ದುರ್ಬಲತೆಯಾದಾಗ ನಂಬಿಕೆಯೇ ದ್ರೋಹ ಬಗೆಯುತ್ತದೆ. ನಂಬಿಕೆ ಕಣ್ಣು ತೆರೆಸುವ ಬೆಳಕಾಗಬೇಕೇ ಹೊರತು ಕಣ್ಣನ್ನು ಕವಿಸುವ ನಿಷಾ ಆಗಬಾರದು ಅನ್ನುವ ಪರುಶರಾಮಪ್ಪನವರ ಮಾತು ನಂಬಿ ಮೋಸ ಹೋದೆ ಅನ್ನುವ ಮಾತನ್ನು ಇನ್ನೊಮ್ಮೆ ಆಲೋಚಿಸುವ ಹಾಗೆ ಮಾಡುತ್ತದೆ.

ರಂಗಪ್ಪನಾಯಕನ ಅಸೂಯೆ, ಕೆಂಚಯ್ಯನ ದುರಾಸೆ, ದಳವಾಯಿಯ ಆತುರ, ನಾಯಕರ ಆಕ್ರೋಶ ಇನ್ನೊಮ್ಮೆ ದುರ್ಗಕ್ಕೆ ಭೀತಿಯ ಮೋಡ ಆವರಿಸುವ ಹಾಗೆ ಮಾಡಿ ಕತ್ತಲಾಯಿತು ಅನ್ನುವ ಭ್ರಮೆಯನ್ನು ಹರಿದು ಅವರ ಶೌರ್ಯ, ಆತ್ಮಾಭಿಮಾನ ಮತ್ತೆ ದುರ್ಗಕ್ಕೆ ಹೊಸ ಹಗಲು ಮೂಡುವ ಹಾಗೆ ಮಾಡುತ್ತದೆ. ದುರ್ಗದ ಅಭಿವ್ರುಧ್ಹಿಗೆ ನಾಯಕರು ಕಂಡ ಕನಸು, ಅದಕ್ಕಾಗಿ ಅವರ ತ್ಯಾಗ ಜನರನ್ನು ಬಡಿದು ಎಬ್ಬಿಸಿ ಕೈ ಜೋಡಿಸುವ ಹಾಗೆ ಮಾಡುತ್ತದೆ. ಇಡೀ ದುರ್ಗದ ಜನರು ಟೊಂಕಕಟ್ಟಿ ಅದಕ್ಕಾಗಿ ಶ್ರಮಿಸಿ, ಜೀವವನ್ನು ಒತ್ತೆಯಿಟ್ಟು ಕಾಪಾಡುವ ದುಡಿಯುವ ಮನಸ್ಥಿತಿಯೇ ಬೆಳಕಾಗಿ ಅದು ಎಲ್ಲೆಡೆ ಚೆಲ್ಲಿ ಹೊಸ ಹಗಲು ಮೂಡುತ್ತದೆ.

ಕರುಣೆ ಸಹಾನುಭೂತಿ ಎಲ್ಲಿ ಹೇಗೆ ಉಪಯೋಗಿಸಬೇಕು ಅನ್ನುವ ಅರಿವಿಲ್ಲದೆ ಹೋದರೆ ಅವೂ ದೌರ್ಬಲ್ಯ ಪ್ರಚೋದನೆ ಮಾಡಿ ಇನ್ನಷ್ಟು ಅಂಧಕಾರವನ್ನು ತರುತ್ತದೆ. ಗುಣ ಹಾಗೂ ದೋಷದ, ಶಕ್ತಿ ಹಾಗೂ ದೌರ್ಬಲ್ಯದ ನಡುವಿನ ಗೆರೆ ತುಂಬಾ ತೆಳು. ಅದನ್ನ ಅರ್ಥಮಾಡಿಕೊಂಡಾಗ ಬದುಕಲ್ಲೂ ಹೊಸಹಗಲು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...