ಹಂಸಗೀತೆ


ಕೋಟೆಎಂದರೆ ಬರೀ ಅಧಿಕಾರದ ಪ್ರತೀಕವಾ...ಈಗಿನ ರಾಜಕೀಯ ವೈಖರಿಯನ್ನು ನೋಡಿದಾಗ ಅಷ್ಟೇ ಅನ್ನಿಸುತ್ತೆ. ಆಗಿನ ಕಾಲದಲ್ಲಿ ರಾಜರು ಅಧಿಕಾರಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನು, ಕಲೆಗೂ, ಸಂಸ್ಕೃತಿಗೂ, ಧರ್ಮಕ್ಕೂ ಕೊಟ್ಟಿದ್ದರು. ಪ್ರತಿಯೊಂದು ಒಂದಕ್ಕೊಂದು ಪೂರಕವಾಗಿಯೇ ಬೆಳೆದು ಬಂದಿತ್ತು.

ಕೋಟೆ ಅಂದಕೂಡಲೇ ನೆನಪಾಗೋದು ಮೊದಲಿಗೆ ಚಿತ್ರದುರ್ಗ ಕೋಟೆಯೇ. ಕೊಟೆಯೆಂದರೆ ಕಲ್ಲು ಕಟ್ಟಡವಲ್ಲ ಅದು ಮಲಗಿ ನಿದ್ರಿಸುತ್ತಿರುವ ಇತಿಹಾಸ, ಪ್ರತಿಯೊಂದು ಕಲ್ಲಿಗೂ ತನ್ನದೇ ಆದ ಕತೆಯಿದೆ, ಮಿಡಿವ ಮೂಕ ಮನಸ್ಸಿದೆ, ಕೇಳುವ ಕಿವಿಗಾಗಿ ಕಾಯುವ ತಪಸ್ಸಿದೆ, ಮೌನವಾಗಿ ನಿಲ್ಲುವ ಧೀ ಶಕ್ತಿಯಿದೆ, ಆದರೆ ವ್ಯಥೆಯನ್ನು ಮೌನವಾಗಿ ಹೊದ್ದು ಮಲಗಿದೆ ಅನ್ನೋದು ಅರ್ಥವಾಗಬೇಕಾದರೆ ತ.ರಾ. ಸು ಬರೆದ ಕಾದಂಬರಿಗಳನ್ನು ಓದಲೇ ಬೇಕು.

ಬದುಕು ತೀರಾ ಲೆಕ್ಕಾಚಾರದ ಹಿಂದ ಬಿದ್ದಾಗ ಪ್ರತಿಯೊಂದನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತೇವೆ. ಉಪಯೋಗವಿದ್ದದ್ದಷ್ಟಕ್ಕೆ ಮಾತ್ರ ಗಮನ ಕೊಡುತ್ತೇವೆ. ಉಳಿದೆಲ್ಲವು ನಗಣ್ಯವೆನಿಸುತ್ತದೆ. ಒಟ್ಟಿನಲ್ಲಿ ಯಾವುದು ಏನಾದರಾಗಲಿ ನಾನು ಮಾತ್ರ ಬದುಕಬೇಕು ಅನ್ನುವ ಸ್ವಭಾವ ಬದುಕಿಗೊಂದು ಪರಿಮಿತಿಯನ್ನು ಸೃಷ್ಟಿಸುತ್ತದೆ. ಆ ಪರಿಮಿತಿಯನ್ನು ಮೀರಿದಾಗ ಮಾತ್ರ ಮನಸ್ಸು ಕಾಲದ ಕಟ್ಟನ್ನು ಮೀರಿ ಗತಕಾಲದ ಗರ್ಭ ಪ್ರವೇಶಿಸುತ್ತದೆ. ಅರಸುತ್ತದೆ, ತಿಳಿದುಕೊಳ್ಳಲು ಪ್ರಯತ್ನಿಸುತ್ತದೆ. ಅಪೂರ್ವವಾದದ್ದು ಯಾವಾಗಲೂ ಆಳದಲ್ಲಿ ಮಾತ್ರ ಅಡಗಿರುತ್ತದೆ.

ಆಕಾಶಾತ್ ಪತಿತಂ ತೋಯಂ
ಯಥಾ ಗಚ್ಛತಿ ಸಾಗರಂ
ಸರ್ವ ದೇವ ನಮಸ್ಕಾರಃ
ಕೇಶವಂ ಪ್ರತಿ ಗಚ್ಛತಿ

ಅಂದರೆ ಆಕಾಶದಿಂದ ಬಿದ್ದ ನೀರು ಹೇಗೆ ಸಾಗರವನ್ನು ಸೇರುತ್ತದೋ ಹಾಗೆಯೇ ಮಾಡಿದ ನಮಸ್ಕಾರ ಕೇಶವನಿಗೆ ಸೇರುತ್ತದೆ ಅನ್ನೋ ಅರ್ಥ. ಇಲ್ಲಿ ಕೇಶವ ಎಂದರೆ ದೇವರೊಬ್ಬನೇ ನಾಮ ಹಲವು ಎನ್ನುವ ಸಾಲಿಗೆ ಅನ್ವರ್ಥಕಾರಕ ಪದ. ಯಾವುದೇ ದಾರಿಯನ್ನು ಆರಿಸಿಕೊಂಡರು ಅದರಲ್ಲಿ ಶ್ರದ್ಧೆಯಿಂದ ಸಾಧನೆ ಮಾಡಿದರೆ, ಸಂಪೂರ್ಣವಾಗಿ ಸಮರ್ಪಿಸಿಕೊಂಡರೆ ಸಿದ್ಧಿ ದೊರೆಯುತ್ತದೆ. ಅಂದರೆ ದೇವರು ಸಿಕ್ಕಿದಂತೆ. ಆ ಗುರಿ ತಲಪುವ ಮಾರ್ಗ ಮಾತ್ರ ಸುಲಭದ್ದಲ್ಲ, ಯಾಕೆಂದರೆ ಅಮೂಲ್ಯವಾದ ಯಾವುದೂ ಸುಲಭಕ್ಕೆ ದೊರಕುವುದಿಲ್ಲ. ಎಡರು ತೊಡರುಗಳು ನಮ್ಮ ಧೀ ಶಕ್ತಿಯನ್ನು ಪಣಕ್ಕಿಟ್ಟು ಪರೀಕ್ಷೆ ಮಾಡುತ್ತದೆ. ಯಾವ ಸಿದ್ದಿಯೂ ಗುರುವಿಲ್ಲದೆ ಸಿದ್ಧಿಸುವುದಿಲ್ಲ.

ಸಂಗೀತಕ್ಕಾಗಿ ತನ್ನನ್ನೇ ಮುಡುಪಾಗಿಟ್ಟು ಕೊಂಡು ಗುರುವಿಗಾಗಿ ಹಂಬಲಿಸುವ ವೆಂಕಟ ಸುಬ್ಬಯ್ಯನವರ ದಾರಿಯೂ ಸುಲಭವಾಗಿರಲಿಲ್ಲ. ಶುರುವಾಗಿದ್ದೆ ವಿಷಾದದಿಂದ. ಅಪ್ಪನಿಗೆ ವಂಶಪಾರಂಪರ್ಯದಿಂದ ಬಂದ ವಿದ್ಯೆಯನ್ನು ಮಗ ಕಲಿಯಲಿಲ್ಲವಿಲ್ಲವೆಂಬ ವಿಷಾದ, ಸಿಕ್ಕ ಗುರುವಿನ ಅಹಂ ನಿಂದ ನೊಂದು ಆಡಿದ ಒಂದು ಮಾತಿನಿಂದಾಗಿ ಗುರುವಿಗೆ ಸವಾಲು ಹಾಕುವ ಸಂದರ್ಭ, ಸೋತ ಗುರುವಿನ ಆತ್ಮಹತ್ಯೆ, ಉಳಿದ ಗುರುಗಳ ನಿರಾಕರಣೆ, ಬದುಕಿನ ಗುರಿಗೆ ದಾರಿ ತೋರದೆ ಕಂಗಾಲಾಗುವ ಎಳೆಯ ಹುಡುಗ.

ಮನಸ್ಸು ಯಾವುದನ್ನು ಏಕಾಗ್ರವಾಗಿ ಆಲೋಚಿಸುತ್ತದೋ, ಯಾವುದನ್ನು ಬಯಸುತ್ತದೋ ಆ ದಾರಿ ಗೋಚರಿಸಿಯೇ ಗೋಚರಿಸುತ್ತದೆ ಅನ್ನೋದು ನಂಬಿಕೆ. ಬಯಕೆ ತೀವ್ರವಾದಷ್ಟೂ, ಉತ್ಕಟವಾದಷ್ಟೂ ಪರಿಣಾಮಕಾರಿಯಾಗುತ್ತದೆ. ಮನಸ್ಸಿನ ತರಂಗಗಳು ಅಷ್ಟೇ ಪ್ರಬಲವಾಗಿ ಅದಕ್ಕೆ ಸಮಾನವಾದ ತರಂಗಗಳನ್ನು ಅರಸಿ ಅದಕ್ಕೆ ಪ್ರತಿಕ್ರಿಯಿಸುತ್ತದೆ. ಆ ರೀತಿಯಾಗಿ ಸಿಕ್ಕ ಗುರು ಶಿಷ್ಯನನ್ನು ಪರಿ ಪರಿಯಾಗಿ ಪರೀಕ್ಷಿಸಿ ಅಷ್ಟೇ ಕಠಿಣವಾಗಿ ಅಂತೂ ವಿದ್ಯೆಯನ್ನು ಧಾರೆಯೆರೆಯುತ್ತಾರೆ. ಹದ ತಪ್ಪಿದ ಶ್ರುತಿಯೊಂದು ನಾದವಾಗಿ ಜಗತ್ತೇ ತಂಬೂರಿಯಾಗಿ ಸಂಗೀತವೇ ಉಸಿರಾಗುತ್ತದೆ. ಮರಳಿ ಊರಿಗೆ ಬಂದಾಗ ಆ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿ ರಾಜಾಶ್ರಯವೂ ದೊರಕಿ ಇನ್ನಷ್ಟು ಕಳೆಗಟ್ಟುತ್ತದೆ.

ಹಾಗಾದರೆ ಶಿಷ್ಯ ಹೇಗಿರಬೇಕು... ದೇಹಿ ಎಂದು ಕೈಯೊಡ್ಡ ಬೇಕು. ಹಾಗೆ ಕೈಯೊಡ್ಡ ಬೇಕಾದರೆ ವಿನೀತ ಭಾವ ಇರಬೇಕು, ಏನು ಬೇಕು ಎನ್ನುವುದರ ಅರಿವಿರಬೇಕು, ಬೊಗಸೆ ಒಡ್ಡಿದರೂ ದೇಹ ಮನಸ್ಸೂ ಎರಡೂ ಏಕವಾಗಿ ಸ್ವೀಕರಿಸಲು ತಯಾರಿರಬೇಕು. ಗುರು ಹಾಗೂ ಗುರಿ ಎರಡೂ ಒಂದೇ ಎಂದು ಅರ್ಥವಾಗಬೇಕು. ಇಲ್ಲಿ ಕೇವಲ ಶಿಷ್ಯ ಗುರುವಿಗಾಗಿ ಕಾಯುವುದಲ್ಲ, ಗುರುವೂ ಯೋಗ್ಯ ಶಿಷ್ಯನಿಗಾಗಿ ಹುಡುಕುತ್ತಾರೆ. ಹಾಗಾಗಿಯೇ ಏಕಾಗ್ರ ಧ್ಯಾನ ಗುರುವನ್ನು ಸೆಳೆಯುತ್ತದೆ. ಒಂದರೊಳಗೊಂದು ಸೇರುತ್ತದೆ.

ಸಾಧನೆಯದು ಏರು ಹಾದಿ. ಹಾಗೆ ಏರುವಾಗ ಸುತ್ತಲಿನ ದೃಶ್ಯ ಒಮ್ಮೊಮ್ಮೆ ಮುಂದಿನ ದಾರಿಯನ್ನು ಮರೆಯುವ ಹಾಗೆ ಮಾಡುತ್ತದೆ, ಏರಿದ ಎತ್ತರ ತಾನೇ ದೊಡ್ಡವನೆಂದು ಬೀಗುವ ಹಾಗೆ ಮಾಡುತ್ತದೆ. ವೆಂಕಟಸುಬ್ಬಯ್ಯ ಕೊಡಾ ಇದಕ್ಕೆ ಹೊರತಾಗಲಿಲ್ಲ. ಅಲ್ಲಿಯವರೆಗಿನ ಸಾಧನೆ ಅಡ್ಡ ಕಟ್ಟಿದ ಆಣೆಕಟ್ಟು ತೆಗೆದಂತೆ ಹರಿಯತೊಡಗಿತು, ಎಲ್ಲರನ್ನೂ ಆವರಿಸಿಕೊಂಡಿತು. ರಾಜಾನುಗ್ರಹ ದೊರೆಯುವುದೂ ತಡವಾಗಲಿಲ್ಲ. ಕೀರ್ತಿ ಮನ್ನಣೆ ದೊರಕಿ ಎಲ್ಲೆಲ್ಲೂ ಅವರ ಹೆಸರು ಪ್ರಸಿದ್ದಿ ರಾರಾಜಿಸತೊಡಗಿತು. ಕೀರ್ತಿ ಮಹಾರಾಜನಿದ್ದಂತೆ, ಧನ ಕನಕ , ಗೌರವ ಎಲ್ಲವೂ ಅನುಚರರಂತೆ. ಮಹಾರಾಜನನ್ನು ಹಿಂಬಾಲಿಸುವ ವಂಧಿ ಮಾಗಧರಂತೆ ಅವೂ ವೆಂಕಟಸುಬ್ಬಯ್ಯನನ್ನು ಹಿಂಬಾಲಿಸತೊಡಗಿದವು. ಅವೆಲ್ಲವೂ ಬಂದಾಗ ಅಟ್ಟಹಾಸವೂ ತಣ್ಣಗೆ ಮೆರವಣಿಗೆ ಸೇರಿಕೊಳ್ಳುತ್ತದೆ. ಅಹಂ ನ ಬುಧ್ಬುದ ಆವರಿಸಿಕೊಳ್ಳುತ್ತದೆ. ಗುಳ್ಳೆ ಒಡೆಯಲು ಎಷ್ಟು ಹೊತ್ತು ಬೇಕು?

ಮನುಷ್ಯನಿಗೆ ಅವನ ಅಹಂಕಾರವೇ ಪರಮ ವೈರಿ, ಸಾಧನೆಗೆ ತಡೆ. ಸಂಗೀತವೂ ಸಾಗರ. ಒಂದೊಂದು ರಾಗವೂ ದೇವತೆಯೇ.. ದೇವರು ಸುಲಭಕ್ಕೆ ಒಲಿಯುವುದಿಲ್ಲ, ಒಲಿಸಿಕೊಳ್ಳಬೇಕು ಎಂದರೆ ಸಾಧನೆ ಮಾಡಬೇಕು, ಸಾಧನೆ ಕೂಡಾ ತಪಸ್ಸಿನ ಒಂದು ವಿಧವೇ. ಹಾಗೆ ಒಲಿದ ದೇವತೆಯನ್ನು ಹೇಗೋ ಎಲ್ಲೋ ಬಳಸಿಕೊಳ್ಳುವುದು ಹೇಗೆ? ಅದಕ್ಕೆ ಆದ ಗೌರವ, ಪಾವಿತ್ರ್ಯತೆ, ಸ್ಥಾನ ಎಲ್ಲವೂ ಇರುತ್ತದೆ. ತಪಸ್ಸು ಎಂದರೆ ಅದನ್ನು ಭಂಗಪಡಿಸಲು ನೂರಾರು ದಾರಿಗಳು, ಹಲವಾರು ಆಮಿಷಗಳು ಬಾಯ್ದೆರೆದು ಕಾದಿರುತ್ತವೆ. ಮೋಹಗಳಲ್ಲಿ ಬಲುದೊಡ್ಡ ಮೋಹ ಹೆಣ್ಣಿನ ಮೋಹ. ಮೋಹ ಕವಿದಾಗ ಕಣ್ಣಿಗೆ ಪೊರೆ ಕವಿಯುತ್ತದೆ, ದಾರಿ ಮಸುಕಾಗುತ್ತದೆ. ಎಡವಿ ಬೀಳುವುದು ಸಹಜ. ಬಿದ್ದರೆ ಚಲನೆ ನಿಲ್ಲುತ್ತದೆ. ಚಲನೆ ನಿಂತಾಗ ಗುರಿ ಇನ್ನಷ್ಟು ದೂರವಾಗುತ್ತದೆ.

ಸಾಧನೆ ಒಬ್ಬರದೇ ಆದರೂ ಸಾಗುವ ದಾರಿಯಲ್ಲಿ ಜೊತೆಯಾಗುವವರು ಹಲವರು. ಜೊತೆಯಾದವರು ಹೇಗಿರಬೇಕು, ಒಂದು ದಿವ್ಯ ಸಾಧನೆಗೆ ಪೂರಕವಾಗಿರಬೇಕು ಹೊರತು ತಡೆಗೋಡೆಯಾಗಬಾರದು, ಬದುಕಿನಲ್ಲಿ ತ್ಯಾಗ ಯಾಕೆ ದೊಡ್ಡದು ಎನಿಸಿಕೊಳ್ಳುತ್ತದೆ ಎಂದರೆ ಯಾರದೋ ಸಾಧನೆಗೆ ಅದು ತೈಲವಾದಾಗ, ತನ್ನನ್ನು ತಾನು ಕಳೆದುಕೊಂಡು ಬೆಳಗಲು ಅನುವುಮಾಡಿ ಕೊಟ್ಟಾಗ. ಕಳೆದುಕೊಳ್ಳುವುದು ಅಷ್ಟು ಸುಲಭವಾ.. ಇಲ್ಲಿ ಯಾರು ದೊಡ್ಡವರು? ಸಾಧಿಸಲು ಹೊರಟವರಿಗೆ ಬಾಳನ್ನೇ ಅರ್ಪಿಸಿದವರಾ? ಸಾಧಿಸಿದ ಮೇಲೆ ಬಾಳನ್ನು ಅವರಿಗೆ ಮೀಸಲಾಗಿ ಇಟ್ಟವರಾ..

ಭ್ರಮೆ ಹರಿಯುವುದು ಹೇಗೆ? ವ್ಯಾಮೋಹದಿಂದ ಕಳಚಿಕೊಳ್ಳುವುದು ಹೇಗೆ? ತ್ಯಾಗದ ಮೂಸೆಯಲ್ಲಿ ಯಾತನೆಯ ಕಿಚ್ಚು ಉರಿಯಬೇಕು. ಆ ಅಗ್ನಿ ಎಲ್ಲವನ್ನೂ ದಹಿಸಬೇಕು. ಹಾಗಾದಾಗ ಮಾತ್ರ ದೃಷ್ಟಿ ನಿಚ್ಚಳವಾಗಲು ಸಾಧ್ಯ, ದೃಷ್ಟಿ ನಿಚ್ಚಳವಾದಾಗ ಮಾತ್ರ ದಾರಿಯೂ ಸ್ಪಷ್ಟವಾಗಿ ಕಾಣುತ್ತದೆ. ಆಗ ಮಾತ್ರ ಕಾಲುಗಳು ಗುರಿಯ ಕಡೆಗೆ ನಡೆಯುತ್ತದೆ. ಒಂದಕ್ಕೊಂದರ ಸಹಾಯವಿಲ್ಲದೆ ಜಗತ್ತಿನಲ್ಲಿ ಯಾವುದೂ ಜರುಗುವುದಿಲ್ಲ. ಹಾಗಾದರೆ ಸಾಧನೆ ಕೇವಲ ನನ್ನ ಸಾಧನೆ ಎನ್ನುವುದು ಭ್ರಮೆಯೇ ಅಲ್ಲವಾ? ಯಾವುದೂ ಸ್ವತಂತ್ರವಲ್ಲ ಅನ್ನೋದು ಎಷ್ಟೊಂದು ನಿಜ ಆದರೂ ಸ್ವತಂತ್ರಕ್ಕಾಗಿ ಪರಿತಪಿಸುವುದೂ ಅಷ್ಟೇ ಸಹಜ.

ನಂಬಿಕೆ ಹಾಗೂ ಅಪನಂಬಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದರ ಜೊತೆಗೆ ಇನ್ನೊಂದು ಇದ್ದೆ ಇರುತ್ತದೆ ಒಂದು ಪ್ರಕಟವಾದಾಗ ಇನ್ನೊಂದು ಮರೆಯಾಗಿ ತನ್ನ ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಸಣ್ಣ ಜಾಗ ಸಿಕ್ಕಿದರೂ ಅದು ಪ್ರಕಟವಾಗುತ್ತದೆ. ಆದರೆ ದೇವರ ಮೇಲಿನ ನಂಬಿಕೆ ಹೀಗಿರುವುದಿಲ್ಲ. ಅಸಲಿಗೆ ಅಲ್ಲಿ ನಂಬಿಕೆ ಅಪನಂಬಿಕೆ ಪ್ರಶ್ನೆಯೇ ಇರುವುದಿಲ್ಲ. ಮನುಷ್ಯನ ನಂಬಿಕೆ ಗಾಳಿಗೊಡ್ಡಿದ ಸೊಡರು, ಆದರೆ ದೇವರ ನಂಬಿಕೆ ಶಾಶ್ವತ ನಂದಾದೀಪ. ಇಂತಹದೊಂದು ಸಂದರ್ಭವನ್ನು ಕಣ್ಣಾರೆ ಕಂಡ ಮೇಲೆ ನೆರಳು ನಂಬಿ ಬದುಕಬೇಡ ಅನ್ನುವ ಪಾಠ ಕಲಿತ ಅವರು ಅಲ್ಲಿಂದ ಮುಂದೆ ಇನ್ನು ಹಾಡುವುದು ಕೇವಲ ದೇವರ ಸನ್ನಿಧಿಯಲ್ಲಿ ಅವನಿಗಾಗಿ ಮಾತ್ರ ಎಂದು ನಿರ್ಧರಿಸುತ್ತಾರೆ. ಭೈರವಿ ರಾಗವನ್ನು ಒಲಿಸಿಕೊಂಡು ಭೈರವಿ ವೆಂಕಟ ಸುಬ್ಬಯ್ಯ ಎಂದೇ ಪ್ರಸಿದ್ಧಿಯಾಗುತ್ತಾರೆ. ಇವತ್ತಿಗೂ ಅವರು ಕುಳಿತು ಹಾಡುತಿದ್ದ ಕಲ್ಲು ವೆಂಕಟಸುಬ್ಬಯ್ಯನ ಕಲ್ಲು ಎಂದೇ ಪ್ರಸಿದ್ಧಿ.

ಇದ್ದಕ್ಕಿಂದ್ದಂತೆ ಮೇಲೆ ಹೈದರಾಲಿಯ ಧಾಳಿ ನಡೆದು ಇಡೀ ದುರ್ಗಕ್ಕೆ ಕತ್ತಲು ಆವರಿಸಿದ ಮೇಲೆ ಆ ಕತ್ತಲಿನ ನೆರಳು ವೆಂಕಟ ಸುಬ್ಬಯ್ಯನವರನ್ನೂ ಕವಿಯುತ್ತದೆ. ಕತ್ತಲೆ ಆತಂಕ ಹುಟ್ಟಿಸುತ್ತದೆ, ಮನಸ್ಸಿಗೆ ಕಳವಳ ಹುಟ್ಟಿಸುತ್ತದೆ, ಆತ್ಮಶಕ್ತಿಯನ್ನು ಪರೀಕ್ಷೆ ಮಾಡುತ್ತದೆ. ಅಧಿಕಾರ ಅನ್ನೋದು ಮದಗಜವಿದ್ದಹಾಗೇ.. ಅದಕ್ಕೋ ಸೇಡಿನ ಹಾವಿನ ಕಿರೀಟ ತಲೆಯ ಮೇಲೆ. ದೌಲತ್ತು ಅನ್ನುವುದು ಕೈಯಲ್ಲಿನ ಖಡ್ಗ. ನರನಾಡಿಯಲ್ಲಿ ಹರಿಯುವುದು ಅಹಂ ಅನ್ನೋ ರಕ್ತ. ಅಧಿಕಾರ ಮನುಷ್ಯನನ್ನು ಅಧೀನವಾಗಿಸಿ ಕೊಳ್ಳಬಹುದು ಬೀಗ ಬಹುದು ಆದರೆ ಕಲೆ ಅದು ದೈವಾಧೀನ. ಮನುಷ್ಯನಿಗೆ ಮಿತಿಯಿದೆ, ಆದರೆ ಕಲೆ ?

ಇನ್ನು ದೇವರಿಗೆ ಮೀಸಲು ಅಂದಿದ್ದು ಮನುಷ್ಯನಿಗೆ ಒಪ್ಪಿಸುವುದೆಂತು? ಕಿರೀಟ ಧರಿಸಬೇಕಾಗಿದ್ದು ತಲೆ ಅದರ ಸ್ಥಾನ ಪಲ್ಲಟ ಮಾಡುವುದು ಹೇಗೆ? ಯಾವುದು ಎಲ್ಲಿರಬೇಕೋ ಅಲ್ಲಿದ್ದರೆ ಅದಕ್ಕೂ ಗೌರವ, ನೋಡುವವರಿಗೂ ಹಿತ. ನಡತೆ ಬೆಲೆಯನ್ನು ಹೆಚ್ಚಿಸುವಂತಿರಬೇಕೆ ಹೊರತು ಕುಗ್ಗಿಸುವಂತಿರಬಾರದು. ಯಾವುದನ್ನೇ ಆಗಲಿ ಪಡೆಯುವ ಯೋಗ್ಯತೆ ಇರಬೇಕು ಹೊರತು ಅಧಿಕಾರ ಚಲಾಯಿಸುವ ಹಾಗಿರಬಾರದು.

ನವಾಬನ ಬೆದರಿಕೆಗೆ ಬಗ್ಗದ ವೆಂಕಟಸುಬ್ಬಯ್ಯ ದೇವಿಯ ಎದುರು ಕುಳಿತು ಹಾಡಲು ತೊಡಗುತ್ತಾರೆ. ದೇಹವನ್ನೇ ತಂಬೂರಿಯಾಗಿಸಿ, ಉಸಿರನ್ನೇ ಶ್ರುತಿ ಹಿಡಿದು ಮುಂಗಾರಿನ ಮೇಘ ಭೋರ್ಗೆರೆದು ಹನಿ ಹನಿಯುವಂತೆ ಹಾಡು ಹರಿಯುತಿತ್ತು. ಆಕಾಶಾತ್ ಪತಿತಂ ತೋಯಂ.. ಕಡಲು ಸೇರಬೇಕಲ್ಲವೇ... ರಾಗ ಅದರ ಮೂಲಸ್ಥಾನಕ್ಕೆ ಹಿಂದುರಿಗ ಬೇಕಲ್ಲವೇ? . ಅವಳೆದರು ಮೊದಲಾಗಿದ್ದು ಅವಳೆದುರೆ ಕೊನೆಯಾಗಬೇಕಲ್ಲವೇ ? ಮತ್ತೆಂದೂ ಯಾರ ದಬ್ಬಾಳಿಕೆಗೂ ಆಸ್ಪದವಿಲ್ಲದಂತೆ, ಆಡಿದ ಮಾತು ತಪ್ಪಲು ಕಾರಣಗಳೇ ಇಲ್ಲದಂತೆ ಹಾಡುತ್ತಾ ಹಾಡುತ್ತಾ ಅವಳಿಗೆ ಸಾಕೆನಿಸಿದ್ದು ಮತ್ತ್ಯಾರಿಗೂ ಬೇಕೆನಿಸಬಾರದಲ್ಲವೇ... ಅರ್ಪಣೆ ಸಮರ್ಪಣೆಯಾಗಬೇಕಲ್ಲವೇ..

ಹಾಗಾಗಬೇಕಾದರೆ ಅದಕ್ಕೆ ಧೀ ಶಕ್ತಿ ಬೇಕು, ಮೇರು ವ್ಯಕ್ತಿತ್ವ ಇರಬೇಕು, ಮನಸ್ಸು ಮಾಗಿರಬೇಕು. ಎಲ್ಲಿ ಬಾಗಬೇಕು, ಎಷ್ಟು ಬಾಗಬೇಕು ಎನ್ನುವುದು ತಿಳಿದಿರಬೇಕು, ಎಲ್ಲಿ ಕಟುವಾಗಬೇಕು ಮಾರ್ದವತೆ ಯಾವಾಗ ಬೇಕು ಎನ್ನುವ ಅರಿವು ಇರಬೇಕು.ತಪಸ್ಸು ಅದನ್ನು ಕಲಿಸುತ್ತದಾ... ಸಾಧನೆಯ ಫಲ ಅದೇನಾ? ಕಲೆ ಸಮರ್ಪಣಾ ಭಾವದಿಂದ ಹರಿಯುವಾಗ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದಾ? ಸ್ವಚ್ಛವಾಗಿಸುತ್ತದಾ? ಮಗುವಿನ ನಗುವಿನಂತೆ ಪ್ರತಿಫಲಿಸುತ್ತದಾ... ಮಾನವ ಜೀವನದಷ್ಟೇ ಅವನ ಸಾಧಿಸಿದ ಕಲೆಯೂ ಪರಿಮಿತ ಅನ್ನುವುದನ್ನ ತಿಳಿಸುತ್ತದಾ? ಎಲ್ಲವೂ ಒಂದು ದಿನ ಕೊನೆಗಾಣಲೇ ಬೇಕು ಎನ್ನುವ ನಿತ್ಯ ಸತ್ಯವನ್ನು ಹೊಳೆಯಿಸುತ್ತದಾ? ಇವೆಲ್ಲವನ್ನೂ ಹೇಳಲು ವೆಂಕಟಸುಬ್ಬಯ್ಯನವರು ಆ ದಾರಿ ಆಯ್ದು ಕೊಂಡರಾ?

ಇತಿಹಾಸ ಏನನ್ನು ಕಲಿಸುತ್ತದೆ ಅನ್ನೋದಕ್ಕೆ ಉತ್ತರ ನೂರಾರು ಇರಬಹುದು ಆದರೆ ಕಲಿಯುವ ಆಸಕ್ತಿ ಯಾರಿಗಿದೆ ಅನ್ನುವ ಪ್ರಶ್ನೆಗೆ ಮಾತ್ರ ಉತ್ತರ ಕೊಡಲು ತಡವರಿಸುವ ಹಾಗಾಗುತ್ತದೆ. ಹಿಂದಿವರ ಕತೆ ಇಂದಿನವರಿಗೆ ಬೇಕಿಲ್ಲ, ತಿಳಿದು ಆಗಬೇಕಾಗಿದ್ದು ಏನು ಹೊಟ್ಟೆ ತುಂಬಿಸುತ್ತದಾ, ಅಷ್ಟು ತಾಳ್ಮೆ ಸಮಯ ಯಾರಿಗೂ ಇಲ್ಲ ಅನ್ನುವ ಸಮರ್ಥನೆಯಲ್ಲಿ ನಮ್ಮ ಸೋಮಾರಿತನ, ಅನಾಸಕ್ತಿಯನ್ನು ಮುಚ್ಚಿಟ್ಟುಕೊಳ್ಳುತ್ತೇವೆ. ನಾವು ನಿರ್ಲಕ್ಷಿಸುತ್ತಿರುವುದು ಇತಿಹಾಸವನ್ನಾ ಅಥವಾ ಮೌಲ್ಯವನ್ನಾ? ಸಂಕುಚಿತ ಪರಿಧಿಯನ್ನು ಹಾಕಿಕೊಂಡು ಕೇವಲ ನಾನು ಅನ್ನುವ ಜಗತ್ತಿನೊಳಗೆ ಬದುಕುತ್ತಿರುವ ನಮಗೆ ಅವರ ವಿಶಾಲತೆ ಔದಾರ್ಯ ಕೀಳರಿಮೆ ಹುಟ್ಟಿಸುತ್ತದಾ? ಅದಕ್ಕೆಂದೇ ಸಮಯದ ನೆಪದಲ್ಲಿ ಅದನ್ನು ದೂರ ಮಾಡಿಕೊಳ್ಳುತ್ತಿದ್ದೆವಾ? ಮೌಲ್ಯಗಳೇ ಉಸಿರಾಗಿ ಬದುಕಿದ್ದವರು, ಜಗತ್ತಿನ ಒಂದು ಭಾಗ ಎಂದು ಜೀವಿಸಿದವರು ನನ್ನದು ಮಾತ್ರ ಜಗತ್ತು, ಬದುಕಲು ಏನು ಮಾಡಿದರೂ ಅದು ಸರಿಯೇ ಅನ್ನುವ ನಮ್ಮ ನಂಬಿಕೆಯನ್ನು ಮೌನವಾಗಿಯೇ ಸೋಲಿಸುತ್ತಾರೆ ಅನ್ನುವ ಭಯವಾ? ಮರೆಯಾಗಿದ್ದು ಇತಿಹಾಸವಾ ನಮ್ಮ ಬದುಕಿನ ಮಟ್ಟವಾ? ಮರೆತದ್ದು ಹಿಂದಿನ ಘಟನೆಗಳನ್ನಾ ಅಥವಾ ಜೀವನದ ರೀತಿಯನ್ನಾ? ಸಂಸ್ಕಾರ ಅನ್ನೋದು ಹುಟ್ಟಿನಿಂದಲ್ಲ ಬದುಕುವ ರೀತಿಯಿಂದ, ಮರೆಯಾಗಿದ್ದು ಇತಿಹಾಸವಲ್ಲ ನೈತಿಕತೆ ಅನ್ನೋದನ್ನು ಸೂಚ್ಯವಾಗಿ ತಿಳಿಸಲೆಂದೇ ಈ ಕಾದಂಬರಿ ಬರೆದರಾ ತ.ರಾ.ಸು.....

ಇತಿಹಾಸವನ್ನು ಉಪೆಕ್ಷಿಸುತ್ತಾ ನಾವು ಮರೆತಿದ್ದು ಜೀವನ ಪದ್ದತಿಯನ್ನು . ನಮಗೆ ಹಿಂದಿನವರು ಬೇಕಿಲ್ಲದ ಹಾಗೆಯೇ ಮುಂದಿನವರಿಗೆ ನಾವೂ ಬೇಕಿಲ್ಲ ಅನ್ನುವ ಸತ್ಯ ಅರ್ಥವಾದಾಗ ಸರಿಯಾಗಬಹುದಾ.... ಅಷ್ಟರೊಳಗೆ ಕಾಲ ಮಿಂಚಿರುತ್ತದಾ... ಏನನ್ನೂ ಪಡೆದುಕೊಳ್ಳದ ನಾವು ಮತ್ತೇನೂ ಕೊಡಲಾರೆವೂ ಕೂಡಾ ಅನ್ನುವ ಸತ್ಯ ಅರಿವಾಗಬಹುದಾ... ಕೊಡದೆ, ಪಡೆಯದೇ ಇದ್ದ ಯಾವುದೂ ಬಹಳಕಾಲ ಬದುಕಿ ಉಳಿಯಲಾರದು ಅನ್ನುವ ಸತ್ಯ ಕೊನೆಗೂ ಗೊತ್ತಾಗದೆಯೇ ಹೋಗುತ್ತದಾ... ಮೌಲ್ಯಗಳಿಲ್ಲದ ಬದುಕಿಗೂ ಬರಡು ಭೂಮಿಗೂ ವ್ಯತ್ಯಾಸವಿಲ್ಲ ಎನ್ನುವುದು ತಿಳಿಯದಷ್ಟು ವಿದ್ಯಾವಂತರಾಗುತ್ತಿದ್ದೆವಾ ಅಥವಾ ಜಾಣ ಮರೆವಾ? ನಮ್ಮತನವನ್ನು ನಾವೇ ಉಪೇಕ್ಷೆ ಮಾಡುವ ತನ್ಮೂಲಕ ನಮ್ಮನ್ನು ನಾವೇ ಅವಮಾನ ಮಾಡಿಕೊಳ್ಳುವಷ್ಟು ನಾಗರೀಕರಾಗಿ ಬಿಟ್ಟಿದ್ದೇವಾ?

ಇದಕ್ಕೇನಾ ತ.ರಾ.ಸು "ಬರದಾಗ ನಾನು ಮಾಡಿದ ಹಾಗೆ, ಓದಿದ ನಿಮ್ಮ ಕಣ್ಣಿನಿಂದಲೂ ಒಂದು ಹನಿ ಉರುಳಿದರೆ - ಅದೇ ದರಿದ್ರ ವರ್ತಮಾನ ಕಾಲ, ಭವ್ಯ ಗತಕಾಲಕ್ಕೆ ನೀಡುವ ಅಣಿಮುತ್ತಿನ ಕಾಣಿಕೆ. ಅದಕ್ಕಿಂತ ಹೆಚ್ಚು ಅವರು ಬಯಸುವುದಿಲ್ಲ : ಅದಕ್ಕಿಂತ ಹೆಚ್ಚು ಕೊಡುವ ಶಕ್ತಿಯೂ ನಮಗಿಲ್ಲ" ಎಂದಿದ್ದು... ನಿಜಕ್ಕೂ ನಾವಿಷ್ಟು ಹತಭಾಗ್ಯರಾ ಅಥವಾ ನರಸತ್ತವರಾ....

ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ ಅನ್ನುವ ಹಾಗೆ ಹಂಸಗೀತೆ ಕಾಡುತ್ತಲೇ ಇರುತ್ತದೆ...
ಗಾಳಿಯ ನೇವರಿಕೆಗೆ ಮಿಡಿಯುವ ತಂಬೂರಿಯಂತೆ..
ಏಳುವ ಮೊದಲೇ ಗುನುಗುವ, ದಿನವಿಡೀ ಕಾಡುವ ಯಾವುದೋ ಹಾಡಿನಂತೆ...


.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...