ಮಳೆಗಾಲದ ಮಳೆ

ಮಳೆಯಿಲ್ಲ ಅಂತ ಬೈಕೊಂಡಿದ್ದು ಕೇಳಿಸ್ತೇನೋ ಕಣೆ ಒಂದೇ ಸಮನೆ ಸುರಿದು ಸಿಟ್ಟು ತೀರಿಸಿಕೊಳ್ತಾ ಇದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಈ ಗಾಳಿ ನೋಡು, ರಾಮಮಂಟಪ ಮುಳುಗಬಹುದೇನೋ ಬರ್ತಿಯಾ ಮನೆಗೆ ಅಂತ ಚಿಕ್ಕಿ ಬೆಳ್ಬೆಳಿಗ್ಗೆ ಫೋನ್ ಮಾಡಿದ್ರೆ ರೆಕ್ಕೆ ಇರಬಾರದಿತ್ತ ಅನ್ನಿಸಿಬಿಡ್ತು. ಮಲೆನಾಡಿನ ಮಳೆ ಅನ್ನೋದು ಮರೆಯಾಗೆ ಬಿಡ್ತಾ ಅಂತ ಬೇಸರಿಸಿಕೊಳ್ಳುವ ವೇಳೆಗೆ ಸುರಿಯುತ್ತಿದೆ ಮಳೆ ಧಾರಾಕಾರವಾಗಿ. ಎಲ್ಲವನ್ನೂ ಕೊಚ್ಚಿ ಹೊಸತನ ತುಂಬಲು.
ಬಾಲ್ಯ ಅಂದ್ರೆ ಊರು, ಊರು ಅಂದ್ರೆ ಮಳೆ. ಬದುಕಿನಲ್ಲಿ ಮಳೆ ಬೆಸೆದುಕೊಂಡಷ್ಟು ಇನ್ಯಾವುದೂ ಬೆಸೆದುಕೊಂಡಿಲ್ಲ. ಎದೆಯನ್ನು ಹಸನುಗೊಳಿಸಿ ನಳನಳಿಸ ಹಾಗೆ ಮಾಡೋದು ಮಳೆ ಮಾತ್ರ. ತನ್ನೆಲ್ಲಾ ಒಲವನ್ನು ಸುರಿಸುವ ಆಕಾಶ ಸುಮ್ಮನಾಗುತ್ತಿದ್ದಂತೆ ಒಮ್ಮೆ ಇಳೆಯನ್ನು ನೋಡಿ. ಪ್ರಸವಿಸಿ ಬೀಗುತ್ತಿರುತ್ತಾಳೆ. ಮಕ್ಕಳೋ ಚಿನ್ನಾಟವಾಡುತ್ತಾ ಇಡಿ ಪ್ರಕೃತಿಗೆ ಬಣ್ಣ ತುಂಬಿ ಮನೋಹರವಾಗಿಸಿರುತ್ತಾರೆ. ಅದರಲ್ಲೂ ಮಲೆನಾಡಿನ ಮಳೆಯ ಸೊಬಗೆ ಬೇರೆ, ಅದೊಂದು ತರಹ ರುದ್ರ ಮನೋಹರ.
ಮಲೆನಾಡಿನ ಮಳೆಯೆಂದರೆ ಮಂದ್ರದಿಂದ ಶುರುವಾಗಿ ತಾರಕ್ಕೆರುವ ಸಂಗೀತದಂತೆ. ಎಲ್ಲಿಯೂ ಶ್ರುತಿ ತಪ್ಪುವುದಿಲ್ಲ, ಬದುಕಿನ ಶ್ರುತಿ ಮಾತ್ರ ಆಗಾಗ ಹದ ತಪ್ಪುತ್ತದೆ ಅಷ್ಟೇ. ಇಡೀ ವಾತಾವರಣಕ್ಕೆ ಸೋಮಾರಿತನದ ಕಳೆ ಕಳೆಗಟ್ಟುತ್ತದೆ. ಚಳಿಗೆ ಬೆದರಿ ಇನ್ನಷ್ಟು ಒಲೆಯ ಬದಿಗೆ ಸರಿದು ಮುದುರಿ ಮಲಗುವ ನಾಯಿಯಿಂದ ಹಿಡಿದು ಮನುಷ್ಯರವರೆಗೂ ಒಂದೇ ತರಹ. ಮಳೆಯೆಂದರೆ ಒಲವಾ.. ದೂರವಿರುವ ನೆಲ ಮುಗಿಲನಡುವಿನ ಅಭಿವ್ಯಕ್ತಿಯಾ? ಬಿದ್ದ ಪ್ರತಿ ಹನಿಯೂ ವ್ಯರ್ಥವಲ್ಲ. ಅದು ಮೊಳಕೆಯೊಡೆಯಿಸುತ್ತದೆ, ಮೈತುಂಬಾ ನೆಲದ ತುಂಬಾ ಚಿಗುರಿ ನಳನಳಿಸುವ ಹೊಸ ಚಿಗುರುಗಳು, ಅರಳಿ ನಗುವ ಹೂ ಗಳು, ಬಣ್ಣ ಬಣ್ಣದ ವರ್ಣ ಚಿತ್ತಾರ ಪ್ರಕೃತಿಯ ಕ್ಯಾನ್ವಾಸ್ ಮೇಲೆ ಸೃಷ್ಟಿಯಾದಂತೆ ಮನಸ್ಸಿನಲ್ಲೂ ಸೃಷ್ಟಿಯಾಗಿರುತ್ತದೆ.
ಒಮ್ಮೆ ಹಿಡಿದ ಮಳೆ ತಕ್ಷಣಕ್ಕೆ ಬಿಡುತ್ತೆ ಅನ್ನುವುದೆನಿಲ್ಲ, ದಿನ, ವಾರಗಟ್ಟಲೆ ಸುರಿದರೂ ಸುರಿಯ ಬಹುದು. ಅಲ್ಲೊಂದು ಇಲ್ಲೊಂದು ಮನೆಯಿರುವ ಮಧ್ಯೆ ಕಾಡೋ ಗದ್ದೆಯೋ ಹಬ್ಬಿಕೊಂಡಿರುವ ಹೆಂಚಿನ ಮಾಡಿನ ಹಳ್ಳಿಯ ಮನೆಗಳಲ್ಲಿ ಮಳೆ ನೋಟಕ್ಕೆ ಮಾತ್ರವಲ್ಲ ಶ್ರವಣಕ್ಕೂ ಹೇಳಿ ಮಾಡಿಸಿದ್ದು. ಅದರಲ್ಲೂ ರಾತ್ರಿ ಸುರಿಯುವ ಮಳೆ ಇದೆಯಲ್ಲ ಅದರ ವೈಭವ ವರ್ಣಿಸಲು ಪದಗಳೇ ಇಲ್ಲ. ಟಪ ಟಪ ಎಂದು ಹೆಂಚಿನ ಬೀಳುವ ಮಳೆಯ ಸದ್ದು ಎದೆಯಲ್ಲಿ ಅವಲಕ್ಕಿ ಕುಟ್ಟುವ ಹಾಗೆ ಆಗುತ್ತದೆ. ಅದೊಂತರ ಭಯ ಮಿಶ್ರಿತ ಅನುಭವ. ಅತ್ತ ಮಾಡಿಗೆ ಕಟ್ಟಿದ್ದ ದಬ್ಬೆಯಲ್ಲಿ ಹರಿದು ತುದಿಯಲ್ಲಿ ಇಟ್ಟ ಡ್ರಮ್ ಗೆ ದಬದಬನೆ ಬೀಳುವ ಸದ್ದು, ಬೀಸುವ ಜೋರುಗಾಳಿಗೆ ಅಲ್ಲೆಲ್ಲೋ ಮರ ಲಟಲಟನೆ ಮುರಿಯುವ ಸದ್ದು, ತೋಡಿನಲ್ಲಿ ಹರಿದು ಹೋಗುವ ನೀರಿನ ರಭಸದ ಸದ್ದು ಇದರ ನಡುವೆ ಗಿಯ್ ಗುಡುವ ಜೀರುಂಡೆ, ವಟಗುಡುವ ಕಪ್ಪೆಗಳ ಸದ್ದು, ಕಣ್ಣು ತೆರೆದರೆ ಕಾರ್ಗತ್ತಲು ಸುತ್ತಿಟ್ಟ ಜಗತ್ತು. ನೀರವತೆಯಲ್ಲಿ ಸಣ್ಣದೊಂದು ಭಯ ಹುಟ್ಟಿಸಿ, ಹೊಟ್ಟೆಯಾಳದಲಿ ಸಣ್ಣದೊಂದು ನಡುಕ ಸುಳಿ ಸುತ್ತಿ ಮೈ ಆವರಿಸಿಕೊಳ್ಳುವ ಹೊತ್ತಿಗೆ ಹೊದ್ದಿದ್ದ ಕಂಬಳಿಯನ್ನು ಇನ್ನಷ್ಟು ಬಲವಾಗಿ ಸುತ್ತಿಕೊಂಡು ಮುಸುಕು ಬೀರುವ ಹಾಗಾಗುತ್ತದೆ.
ಅಲ್ಲಿಯವರೆಗೂ ಹರಿದು ಹರಿದು ಬೇಜಾರಾದ ಹಳ್ಳ ತೊರೆಗಳು ಸೋಮಾರಿಯಾಗಿ ಮೆಲ್ಲಗೆ ನಡೆಯುತ್ತಲೋ, ಕೆಲವೊಮ್ಮೆ ಒಣಗಿ ನಿದ್ದೆ ಮಾಡುತ್ತಲೋ ಕಾಲ ಕಳೆಯುವ ವೇಳೆಗೆ ಬರುವ ವರ್ಷಧಾರೆ ಅವನ್ನು ಬಡಿದೆಬ್ಬಿಸುವ ಪರಿ ನೋಡುವುದೇ ಚೆಂದ. ಮನುಷ್ಯನ ದೌರ್ಜನ್ಯಕ್ಕೆ ಬಸವಳಿದ ಸೊರಗಿದ ನದಿಗಳಂತೂ ಮಳೆಯ ಭೇಷರತ್ ಬೆಂಬಲ ಸಿಕ್ಕಿದ ಕೂಡಲೇ ಕೊಬ್ಬುವ ಸೊಗಸು, ಸಂಭ್ರಮದಿಂದ ಉಕ್ಕಿ ಹರಿಯುವ ಪರಿ, ನನಗ್ಯಾರು ಸಾಟಿ ಎಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ರಭಸ, ಇನಿಯನನ್ನು ಸೇರುವ ಉತ್ಸಾಹದಲ್ಲಿ ಕಡಲಕಡೆಗೆ ಧಾವಿಸುವ ವೇಗ, ಅದಕ್ಕೆ ಹಿಮ್ಮೇಳ ಕೊಡುವ ಗಾಳಿ, ತಲೆದೂಗಿ ಹಾರೈಸುವ ಗಿಡ ಮರಗಳು, ನಾನೂ ಬರ್ತೀನಿ ಅಂತ ರಚ್ಚೆ ಹಿಡಿದು ಹೊರಡುವ ಮಕ್ಕಳಂತೆ ಜೊತೆಗೆ ಸಾಗುವ ಅದೆಷ್ಟೋ ವಸ್ತುಗಳು... ನೋಡಲು ಕಣ್ಣು ಎರಡೇ ಕೊಟ್ಟನಲ್ಲ ಇವನೆಂಥಾ ಸ್ವಾರ್ಥಿ ಅಂತ ಜಿನುಗುವ ಮಳೆಯಲ್ಲಿ ಗೊಣಗುವ ಹಾಗೆ ಮಾಡುತ್ತೆ.
ಕೆಲವೊಮ್ಮೆ ಗಗನದ ಒಲವು ಭಯಂಕರ. ಒಂದು ಕ್ಷಣ ತಡೆದರೂ ಬದುಕೇ ಇಲ್ಲವೇನೋ ಎಂಬಂತೆ ಬರೆದಿರುವ ಅಷ್ಟೂ ಮೇಘ ಪತ್ರಗಳನ್ನು ಇಳೆಗೆ ಕಳಿಸುವ ಹಪಾಹಪಿಗೆ ಬೀಳುತ್ತದೆ. ಇವಳೋ ಅಷ್ಟನ್ನೂ ಮಡಿಲಲ್ಲಿ ಬಚ್ಚಿಟ್ಟುಕೊಳ್ಳುವೆ ಅಂತ ನಸುನಗು ಬೀರುತ್ತಾಳೆ. ಆಗ ಶುರುವಾಗುವ ಇವರಿಬ್ಬರ ಪ್ರೇಮ ಸಲ್ಲಾಪಕ್ಕೆ ಸುರಿಯವ ಮಳೆ ಸಾಥ್ ಕೊಡುತ್ತಾ ಅದೆಷ್ಟು ಮಗ್ನವಾಗುತ್ತದೆ ಎಂದರೆ ದಿನಗಟ್ಟಲೆ ಸುರಿದರೂ ಸುಸ್ತಾಗುವುದಿಲ್ಲ. ನಿಲ್ಲುವುದೂ ಇಲ್ಲ. ನಿಧಾನಕ್ಕೆ ಮೈ ತುಂಬಿಕೊಳ್ಳುವ ತೊರೆ, ಹಳ್ಳಗಳಿಗೂ ಮಿತಿಯನ್ನು ಮೀರುವ ತವಕ. ಉಕ್ಕುತ್ತಾ ಹರಡುತ್ತಾ ತನ್ನ ಸುತ್ತೆಲ್ಲವನ್ನೂ ಆವರಿಸುತ್ತಾ ಸಾಗುತ್ತಿದ್ದರೆ ಸಮೀಪದ ಗದ್ದೆ ಪಾತ್ರಗಳೆಲ್ಲಾ ನಾಚಿಕೆಯಿಂದ ಕೆಂಪಾಗಿ ರುದ್ರರಮಣಿಯ ಸೊಬಗನ್ನು ತುಂಬಿಕೊಂಡು ಕಂಗೊಳಿಸುತ್ತವೆ.
ಇಷ್ಟಕ್ಕೆ ನಿಲ್ಲೋಲ್ಲ ಇವರ ಆರ್ಭಟ. ತಣ್ಣಗೆ ಹಾವಿನಂತೆ ಮೈ ಚಾಚಿ ಮಲಗಿರುವ ರಸ್ತೆಗಳನ್ನೂ ಎದ್ದೆಳಿಸುವ ಹಂಬಲ. ಅವೋ ಹೊಟ್ಟೆ ತುಂಬಿಸಿಕೊಂಡ ಹೆಬ್ಬಾವಿನಂತೆ ನೀರನ್ನೇ ಹೊದ್ದು ಮಲಗಿ ಬಿಡುತ್ತದೆ. ಇಡಿ ಬದುಕೇ ಸ್ತಬ್ದವಾಗಿ, ಒಲವೇ ಉಸಿರಾಗಿ ಮಕ್ಕಳ ಕುಣಿದಾಟಕ್ಕೆ ಕಣ್ಣಾಗಿ , ಹೊಸತನಕ್ಕೆ, ನವಭಾವಕ್ಕೆ ತೆರೆದುಕೊಳ್ಳಲು ವೇದಿಕೆ ಸಿದ್ದವಾಗಿಬಿಡುತ್ತದೆ. ತುಂಬಿಸಿಕೊಳ್ಳುವ ಮನಸ್ಸು, ಆಸೆಬುರುಕತನ ನಮ್ಮಲ್ಲಿರಬೇಕು ಅಷ್ಟೇ. ಎಲ್ಲೋ ಬಿದ್ದ ಮರದ ಅಪ್ಪುಗೆಗೆ ಸಿಕ್ಕು ಧರಾಶಾಯಿಯಾದ ಕರೆಂಟ್ ತಂತಿ ಪ್ರವಹಿಸುವಿಕೆಯನು ಸ್ತಬ್ಧವಾಗಿಸಿ ಸುತ್ತಮುತ್ತಲಿನ ಹತ್ತೆಂಟು ಹಳ್ಳಿಗಳನ್ನ ಏಕಾಂತಕ್ಕೆ ದೂಡಿ ಬಿಡುತ್ತದೆ. ಗಾಳಿಯ ಸುಯ್ಯುವಿಕೆಗೆ ತಲೆದೂಗುವ ಚಿಮಣಿ ಬುಡ್ಡಿಯ ನಸುಕು ಬೆಳಕಿನಲ್ಲಿ, ಉರಿಯುವ ಬಚ್ಚಲೊಲೆಯ ಎದುರಿನಲ್ಲಿ ಮನೆಮಂದಿಯಷ್ಟೇ ಒಟ್ಟಿಗೆ ಕೂರುವ ಹಾಗೆ ಮಾಡುವ ಈ ಮಳೆ ಭಾಂದವ್ಯಕ್ಕೆ ಒಂದು ಹೊಸ ಭಾಷ್ಯ ಬರೆಯುತ್ತದೆಯೇನೋ ಎನ್ನಿಸುತ್ತದೆ ಯಾವಾಗಲೂ..
ಮಳೆ ಕೇವಲ ಸುರಿಯುವುದಿಲ್ಲ ತೊಳೆಯುತ್ತದೆ ಕೂಡಾ. ಇದು ಒಲವಿನ ಪ್ರತಿರೂಪವಾ? ಎಲ್ಲವನ್ನೂ ತೊಳೆದು, ಕಸ ಕಡ್ಡಿಗಳನ್ನು ಗುಡಿಸಿ ಶುಭ್ರವಾಗಿಸುತ್ತದೆ. ಮನೆಯಂಗಳ ಗುಡಿಸುವುದರ ಜೊತೆ ಜೊತೆಗೆ ಮನದಂಗಳವನ್ನೂ ಗುಡಿಸಿ ಬಿಡುತ್ತದೆ. ಜೊಳ್ಳು ತೊಳೆದು ಗಟ್ಟಿಯನ್ನು ಉಳಿಸುವ ಚಾಣಾಕ್ಷತೆ ಮಳೆಗಿಂತ ಚೆಂದ ಇನ್ಯಾರಿಗೆ ಗೊತ್ತಿದೆ ನೋಡಿ. ಅಲ್ಲಿಯವರೆಗೆ ಎಷ್ಟು ಕಸ ಪೇರಿಸಿಟ್ಟಿದ್ದೆವು ಅನ್ನುವುದು ಅರ್ಥವಾಗುವುದು ಮಳೆ ನಿಂತು ಮನ ಹಗುರವಾದಾಗಲೇ, ಅಲ್ಲಿ ಇನ್ನೇನೋ ಚಿಗುರಿ ನಳ ನಳಿಸಿದಾಗಲೇ. ಮಳೆ ಮತ್ತೆ ಮತ್ತೆ ಹೊಯ್ಯುತಿರಲಿ ಎಂದು ಕಾಯುವುದು ಇದಕ್ಕಾಗಿಯೇನೋ...
ಹೆಸರಿಗೊಂದು ಕೊಡೆ ಹಿಡಿದು ಉಕ್ಕುವ ನೆರೆಯನ್ನು ನೋಡುತ್ತಾ ಈಗ ಇಲ್ಲಿಗೆ ನೀರು ಏರಬಹುದೇನೋ ಎಂದು ಲೆಕ್ಕ ಹಾಕುತ್ತಾ, ನದಿ ಮೈದುಂಬಿದಂತೆ ಮನದೊಳಗೂ ಭೀತಿ ತುಂಬಿಕೊಳ್ಳುತ್ತಾ, ಅಲ್ಲಿಯವರೆಗೂ ಶಾಂತವಾಗಿದ್ದವಳು ಇವಳೇನಾ ಎಂದು ಅವಳ ಆರ್ಭಟ ನೋಡುತ್ತಾ ತೊಯ್ಯುವ ಸುಖ ಬೇರೆಲ್ಲಿ ಸಿಕ್ಕೀತು. ನದಿಗಳೂ ಅಷ್ಟೇ ಸಿಕ್ಕಿದ್ದನ್ನು ಬಾಚಿ ತೆಕ್ಕೆಗೆಳೆದುಕೊಳ್ಳುತ್ತಾ, ಆರ್ಭಟಿಸುತ್ತಾ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ವೇಗವಾಗಿ ಹರಿಯುತ್ತಾ ಕಡಲನ್ನು ಸೇರುವ ತವಕದಲ್ಲಿ ಸಂಭ್ರಮದಲ್ಲಿ ಏನೇನು ಕೊಚ್ಚಿಕೊಂಡು ಹೋಗುತ್ತಿದ್ದೇವೆ ಎನ್ನುವುದನ್ನ ಗಮನಿಸಲೇ ಮರೆತುಬಿಡುತ್ತವೆ.
ಅದರಲ್ಲೂ ತುಂಗೆಯದು ಇನ್ನೂ ಸಂಭ್ರಮ. ಅಲ್ಲಿ ಶ್ರಿಂಗೇರಿಯಲ್ಲಿ ಶಾರದೆಯನ್ನು ನೋಡುವ ವ್ಯಾಮೋಹವಾದರೆ ಇಲ್ಲಿ ತೀರ್ಥಹಳ್ಳಿಯಲ್ಲಿ ರಾಮ ಮಂಟಪವನ್ನೇ ಮುಳುಗಿಸಿ ಶಿವನನ್ನು ತೊಯ್ಯಿಸುವ ಪುಳಕ. ಸೋಮಾರಿಗಳಾಗಿ ಬಿದ್ದು ನಿದ್ದೆ ಹೊಡೆಯುವ ಕಲ್ಲು ಬಂಡೆಗಳನ್ನೆಲ್ಲಾ ಮುಳುಗಿಸಿ ಮತ್ತಷ್ಟು ಉಕ್ಕಿ ಹರಿಯುವ ಜೋಷ್. ಸೇತುವೆಯನ್ನು ಮುಟ್ಟುವ ಹಠ.ಅಗಾಧವಾಗಿ ಹರಡಿಕೊಂಡು ಮೈ ದುಂಬಿ ಹರಿಯುವ ತುಂಗೆ ರುದ್ರ ಮನೋಹರವಾಗಿ ಕಾಣಿಸುತ್ತಾಳೆ. ಸೌಂದರ್ಯ ಭಯ ಎರಡೂ ಒಂದೇ ಕಡೆ ಎಂಥಾ ಅದ್ಭುತ. ಸುರಿವ ಮಳೆ ಕಾದು ಬೆಂದು ಬಸವಳಿದ ಇಳೆಯನ್ನು ಇಷ್ಟಿಷ್ಟೇ ತೊಯ್ಯಿಸಿ, ಹದವಾಗಿಸಿ ಮೈ ಮುರಿಯುವ ಹೊತ್ತಿಗೆ ಇಳೆಗೂ ಸಂತೃಪ್ತಿಯಾಗಿ ದ್ರವಿಸುತ್ತಾಳೆ. ಬಂಡೆಯ ಕೊರಕಲಿನಲ್ಲಿ, ಧರೆಯ ಬುಡದಲ್ಲಿ, ಮರದ ಬೇರಿನ ಸಂದಿಯಲ್ಲಿ, ಕಾಲುದಾರಿಯ ಪಕ್ಕದಲ್ಲಿ ಉಕ್ಕಿ ಬರುವ ಜಲ ಶುಭ್ರವಾಗಿ, ಜುಳಜುಳನೆ ವಯ್ಯಾರವಾಗಿ ಹರಿಯುವುದನ್ನ ನೋಡುವುದೇ ಸೊಗಸು.

ಹರಿಯುವ ನೀರನ್ನು ಕಾಲಿನಿಂದ ಚಿಮ್ಮುತ್ತಾ, ಗಾಳಿಗೆ ಎಗರುವ ಕೊಡೆಯನ್ನು ಹಿಡಿಯಲು ಪ್ರಯತ್ನಿಸುತ್ತಾ, ಹಳೆಯ ನೋಟ್ ಬುಕ್ ಹಾಳೆಯನ್ನು ಹರಿದು ದೋಣಿಮಾಡಿ ಬಿಡುತ್ತಾ, ಚಳಿಗೆ ನಡುಗುತ್ತಾ, ಬೊಗಸೆಯಲ್ಲಿ ನೀರನ್ನು ಹಿಡಿದು ಎರಚುತ್ತಾ, ಒಬ್ಬರನೊಬ್ಬರು ತೊಯ್ಯಿಸಿಕೊಳ್ಳುತ್ತಾ, ಹದವಾಗುತ್ತಾ, ಹದವಾಗಿಸುತ್ತಾ ಬಾಗಿ ನಿಂತ ನೇರಳೆ ಹಣ್ಣು ಬಿಡಿಸುತ್ತಾ, ಹಣ್ಣಾದ ಹಲಸಿನ ಹಣ್ಣನ್ನು ಉದುರಿಸುತ್ತಾ, ಪಾಟೀ ಚೀಲದ ಮೂಲೆಯಲ್ಲೆಲ್ಲೋ ನಯಕಲಾದ ಹಲಸಿನ ಬೀಜ ಹುಡುಕುತ್ತಾ ಸಾಗುವ ಚಿಣ್ಣರ ದಂಡು ಅವರ ಕೇಕೆ ಮಳೆಯ ಸದ್ದನ್ನೂ ಕೆಲವೊಮ್ಮೆ ಮೀರಿಸುವುದು ಸುಳ್ಳಲ್ಲ.

ಮಳೆ ನೋಟಕ್ಕೆ ದಕ್ಕ ಬೇಕಾದರೆ ಮುಗಿಲು ನೋಡಬಾರದು, ನೆಲವನ್ನೂ ದಿಟ್ಟಿಸಬಾರದು. ಇವೆರಡರ ಮಧ್ಯದ ಬಯಲಿನ ಶೂನ್ಯತೆಯನ್ನು ಗಮನಿಸಬೇಕು. ಬಯಲಿನಲ್ಲಷ್ಟೇ ನೋಟ ವಿಶಾಳವಾಗುವುದು, ಅರಿವಿಗೆ ಸಿಕ್ಕುವುದು. ಸರಳ ರೇಖೆಯಂತೆ ಇಳಿಯುವ ಮಳೆ, ವಕ್ರವಾಗಿ ಸುರಿಯವ ಮಳೆ, ಸಾಲಾಗಿ ಕಂಬಳಿ ಹೊದ್ದು ಸಾಗುವ ಜನರಂತೆ ಕಾಣುವ ಮಳೆ, ರಪರಪನೆ ರಾಚುವ ಮಳೆ, ಹನಿ ಹನಿಯಾಗಿ ಜಿನುಗುವ ಮಳೆ, ಪಟ ಪಟನೆ ಬಾರಿಸುವ ಮಳೆ, ದಬ್ಬಳದಂತೆ ಚುಚ್ಚುವ ಮಳೆ, ಭೂಮಿ ಆಕಾಶ ಒಂದು ಮಾಡಿದಂತೆ ಸುರಿಯುವ ಮಳೆ, ರಚ್ಚೆ ಹಿಡಿದ ಕಂದನಂತೆ ಸುರಿಯುವ ಮಳೆ, ಮಳೆ ಒಂದೇ ಪ್ರೀತಿಯೂ ಒಂದೇ. ಆದರೆ ರೂಪ ಮಾತ್ರ ಹಲವು, ಗುರಿ ಒಂದೇ ಜೀವಂತಿಕೆ ತುಂಬೋದು.

ಅಕ್ಕಾ ಕಾಲೇಜ್ ಗೆ ರಜಾ ಕಣೆ. ರೋಡ್ ಬ್ಲಾಕ್ ಆಗಿದೆ ಅಂತ ಅಜ್ಜಿ ಮನೆಯಿಂದ ಫೋನ್ ಬರುತ್ತಿದ್ದ ಹಾಗೆ ನೋಟ್ ಪುಸ್ತಕ ಹರಿದು ದೋಣಿ ಮಾಡುವ ಮನಸ್ಸಾಗುತ್ತಿದೆ. ತೇಲಿಬಿಡುತ್ತಿದ್ದಿದ್ದು ದೋಣಿಯಾ ಇಲ್ಲಾ ಮನಸ್ಸಿನ ಭಾರವಾ ಅಂದು ಗೊತ್ತಿರಲಿಲ್ಲ. ಅದನ್ನು ಬಿಟ್ಟು ಅದು ಮುಂದೆ ಮುಂದೆ ಹೋಗುತ್ತಿದ್ದಂತೆ ನಿರಾಳವಾಗಿ ಕುಣಿದಾಡುತ್ತಿದ್ದದ್ದು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಹರಿಯುವ ರಭಸವನ್ನೇ ನೋಡುತ್ತಾ, ಕೈಯಲ್ಲೊಂದು ಛತ್ರಿ ಹಿಡಿದು ನದಿಯ ನೆರೆಯನ್ನೇ ಅಸ್ವಾದಿಸುತ್ತ, ಕೆಲವೊಮ್ಮೆ ಹೆದರುತ್ತಾ, ಹಲವೊಮ್ಮೆ ಇನ್ನಷ್ಟು ಏರಲಿ ಎಂದು ಕಾಯುತ್ತಾ ಅದರ ಜೊತೆ ಒಂದಾಗಿ ಹರಿಯುತ್ತಿದೇವೆ ಎಂದು ಭ್ರಮಿಸುತ್ತಾ ತನ್ನೊಂದಿಗೆ ನಮ್ಮ ದುಗುಡ, ನೋವುಗಳನ್ನೂ ಅರಿವಿಲ್ಲದೆ ಕೊಚ್ಚಿಕೊಂಡು ಹೋಗಿ ಹಗುರವಾಗಿಸುತ್ತಿದ್ದ ತುಂಗೆಯ ಮಡಿಲಲ್ಲಿ ಮತ್ತೊಮ್ಮೆ ಮೌನವಾಗಿ ಕೂರಬೇಕನಿಸುತ್ತಿದೆ.

ಮಳೆಯ ಹನಿ ಹನಿಯಲ್ಲೂ ಪಾಠವಿದೆ, ಪ್ರತಿ ಬಿಂದುವಿನಲ್ಲೂ ಜೀವಂತಿಕೆಯಿದೆ, ಸುರಿವ ಪರಿಯಲ್ಲಿ ಸೊಗಸಿದೆ, ಹರಿಯುವ ರಭಸದಲ್ಲೂ ರಮ್ಯತೆಯಿದೆ, ತೊಡೆಯುವುದರಲ್ಲಿ ನಿರ್ಲಿಪ್ತತೆಯಿದೆ, ಚಿಗುರಿಸುವಲ್ಲಿ ನಿರ್ವಿಕಾರವಿದೆ, ಇಷ್ಟೆಲ್ಲದರ ನಡುವೆಯೂ ಶ್ರುತಿ ತಪ್ಪದಿರುವ ಜಾಗೃತೆಯಿದೆ, ಕೊಡುವ ಮುಗಿಲಿಗೆ ಹಮ್ಮಿಲ್ಲ, ಪಡೆಯುವ ಇಳೆಗೆ ದೀನತೆಯಿಲ್ಲ. ಇಬ್ಬರ ನಡುವಿನ ಸಮರ್ಪಣಾ ಭಾವ, ಜಿನುಗುವ ಒಲವು, ನಗುವ ಹಸಿರು ಕೊಟ್ಟು ಪಡೆದುಕೊಳ್ಳುವುದರಲ್ಲಿಯ ಸಂತೃಪ್ತಿ, ಕಣಕಣದಲ್ಲೂ ಜೀವಂತಿಕೆ ಎದ್ದು ಕಾಣುತ್ತದೆ. ಪ್ರೀತಿಯೆಂದರೆ ಇದೇನಾ... ಬದುಕಿಸುವ ಜೀವಂತಿಕೆಯೇನಾ?

ಹೀಗೆ ಒಂದೇ ಸಮನೆ ಸುರಿಯುವ ಮಳೆಯೂ ರೇಜಿಗೆ ಹುಟ್ಟಿಸುತ್ತದೆ. ಪ್ರೀತಿಯೂ ಹಾಗೇನಾ? ಸುರಿಯುವ ಮಳೆಯೂ ಸ್ವಲ್ಪ ನಿಲ್ಲಬಾರದಾ ಅನ್ನಿಸುತ್ತದೆ, ಪ್ರತಿಯೊಂದಕ್ಕೂ ಒಂದು ವಿರಾಮ ಬೇಕು. ಒಂದು ಅಂತರ ಬೇಕು. ಇನ್ನಷ್ಟು ಬೇಕು ಎನ್ನಿಸುವಾಗಲೇ ಮುಗಿಯಬೇಕು. ಮತ್ತೆ ಕಾಯುವ ಹಾಗಾಬೇಕು, ಬಳಲಿ ಬೆಂಡಾಗಿ ಬಾಯಾರಬೇಕು. ಯಾವುದು ಸುಲಭಕ್ಕೆ ದಕ್ಕಬಾರದು ಅದಕ್ಕೆ ಬೆಲೆಯಿರುವುದಿಲ್ಲ ಅನ್ನುವುದನ್ನು ಕಲಿಸಲೆಂದೇ ಮತ್ತೆ ಮರೆಯಾಗುತ್ತಾದ ಮಳೆ, ಬಂದೆ ಬರುತ್ತದೆ ಎಂದು ನಂಬಿಕೆಯಿಂದ ಕಳಿಸಿಕೊಡುತ್ತದಾ ಇಳೆ, ಪ್ರತಿಯೊಬ್ಬರಿಗೆ ತಮ್ಮದೇ ಆದ ಒಂದಷ್ಟು ಕಾಲ ಇದ್ದಾಗ ಮಾತ್ರ ಭಾಂಧವ್ಯ ಬೆಳೆಯುತ್ತದೆ ಅನ್ನುವ ಸತ್ಯವನ್ನು ಇಬ್ಬರೂ ಸೇರಿ ಹೀಗೆ ಕಲಿಸುತ್ತಾರ?

ಒಣಗಿಸಿಟ್ಟ ಹಲಸಿನಬೀಜ, ಡಬ್ಬಿಯಲ್ಲಿಟ್ಟ ಹಲಸಿನ ಹಪ್ಪಳ ಮುರುವಿನ ಒಲೆಯ ಸಾಂಗತ್ಯಕ್ಕಾಗಿ ಹಾತೊರೆಯುತ್ತಿವೆ. ಬೇಯುವ ಹುರಳಿಯ ಘಮ ಕೈ ಬೀಸಿ ಕರೆಯುತ್ತಿವೆ. ನಾನೋ ಇಲ್ಲಿ ಮೋಡಕಟ್ಟಿದ ಬಾನನ್ನೇ ದಿಟ್ಟಿಸುತ್ತ ಹನಿಯಲಾರದೆ ಕುಳಿತೇ ಇದ್ದೇನೆ.

ಮಳೆ ಸುರಿಯುತ್ತಿದೆ ಅಲ್ಲಿ ಹೊರಗೆ ಇಲ್ಲಿ ಒಳಗೇ.... ಊಹೂಂ ಪ್ರಸವಿಸುವುದು ಅಷ್ಟು ಸುಲಭವಲ್ಲ.....





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...