ಹಂಪಿ

ಜೂನ್ ನಲ್ಲಿ ಬಂದರೆ ಇಷ್ಟೊಂದು ಜನರೂ ಇರೋಲ್ಲ, ಒಂದೆರೆಡು ಮಳೆ ಬಿದ್ದಿದ್ದರೆ ನೆಲವೂ ತಂಪಾಗಿ ಹಸಿರು ಚಿಗುರಿರುತ್ತದೆ. ನಿಧಾನವಾಗಿ ನಿರಾಳವಾಗಿ ನೋಡಬಹುದು ಎಂಬ ಗೈಡ್ ಮಾತು ಅಲ್ಲಿಗೆ ಮರೆತು ಹೋಗದೆ ಒಳಗೆ ಸಿಂಬೆ ಸುತ್ತಿದ ಹಾವಿನಂತೆ ಮಲಗಿತ್ತು. ಸಮಯಕ್ಕಾಗಿ ಕಾಯುತ್ತಿತ್ತು. ಹಂಪಿ ಅನ್ನೋ ಹೆಸರೇ ಸಾಕು ಮೈ ರೋಮಾಂಚನಗೊಳ್ಳಲು. ಮೊದಲ ಸಲ ಹೋದಾಗ ಹಾಳು ಹಂಪಿ ಅನ್ನುವುದು ಅದೆಷ್ಟು ಅನ್ವರ್ಥಕವಾಗಿದೆ ಎನ್ನುವ ವಿಷಾದ, ಕ್ರೋಧ ಎಲ್ಲವೂ ಸೇರಿ ಒಂದು ರೀತಿಯ ಅಶಾಂತಿ ಮನಸ್ಸಿಗೆ ಕವಿದಿತ್ತು.

ಯಾವುದೇ ಆದರೂ ಯಾವುದರಿಂದ ಆರಂಭವಾಗುತ್ತದೋ ಅಲ್ಲಿಂದಲೇ ಮುಕ್ತಾಯವಾಗುತ್ತದೆ ಅನ್ನೋದು ತ.ರಾ.ಸು ಮಾತು. ವಿಜಯನಗರ ಸಾಮ್ರಾಜ್ಯ ಶುರುವಾಗಿದ್ದು ಕಾಕತೀಯ ವಂಶದವರಿಂದ. ಕೊನೆಯ ರಾಜನೆಂದೆ ಉಲ್ಲೇಖಿಸಲ್ಪಟ ರಾಮರಾಯ ಸೇರಿದ್ದು ಅದೇ ಕಾಕತೀಯ ವಂಶಕ್ಕೆ. ಇತಿಹಾಸವೆಂದರೆ ಚಕ್ರ ಅದು ತಿರುಗುತ್ತಲೇ ಇರುತ್ತದೆ ಇದರ ಬಗ್ಗೆ ಸಂಶೋಧನೆ ಮಾಡಿ ಈ ತರಹದ ತುಂಬಾ ಉದಾಹರಣೆ ಕೊಟ್ಟಿದ್ದಾರೆ ನನ್ನ ಫ್ರೆಂಡ್ ಅನ್ನೋ ಅಣ್ಣನ ಮಾತು ಕೇಳಿದಾಗ  ಅರಿವಿಗೆ ಬಂದಾಗ ಒಂದು ಕ್ಷಣ ರೋಮಾಂಚನವಾಗಿತ್ತು.

ಅದೊಂದು ಅಧಿಕಾರದ  ಕೇಂದ್ರ ಸ್ಥಾನ ಮಾತ್ರವಲ್ಲ, ಸಾಂಸ್ಕೃತಿಕ ಕೇಂದ್ರ ಸ್ಥಾನವೂ ಹೌದು. ನೈಸರ್ಗಿಕವಾಗಿ ದುರ್ಭ್ಯೇಧವಾದ ಜಾಗ. ಒಳಗಿನವರ ಸಹಾಯವಿಲ್ಲದೆ ಹೊರಗಿನವರಿಗೆ ಕಿಂಚಿತ್ತೂ ಜಾಗ ಕೊಡದ ಸ್ಥಳ. ಅಲ್ಲಿಂದ ಕಣ್ಣು ಹಾಯಿಸಿದರೆ ಸುಮಾರು ಮುನ್ನೂರು ಕಿ.ಮಿ ಗಳವರೆಗೂ ಹರಡಿದ ಕಲ್ಲು ಬಂಡೆಗಳಿಂದ ಆವೃತವಾದ ಬೆಟ್ಟಗಳು ಹಬ್ಬಿರುವುದು ಕಾಣಿಸುತ್ತದೆ. ಅಂತಹ ದುರ್ಗಮ ಜಾಗವನ್ನೂ, ಕಲ್ಲನ್ನೂ ಬಳಸಿಕೊಂಡು ವಿಶ್ವವೇ ತಿರುಗಿ ನೋಡುವಂತ ಸಾಮ್ರಾಜ್ಯ ಕಟ್ಟಿದ್ದು ಅವರ ಸಾಧನೆ. ನಮ್ಮ ಹೆಮ್ಮೆ.

ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳುವುದು ಪ್ರಕೃತಿಯ ನಿಯಮ, ಅದನ್ನು ಚಾಚೂ ತಪ್ಪದಂತೆ ಪಾಲಿಸಿದವರು ಅವರು. ಎಲ್ಲೆಂದರಲ್ಲಿ ಬಿದ್ದಿರುವ ಕಲ್ಲನ್ನು ಒಡೆಯಲು ಅವರು ಬಳಸಿಕೊಂಡ ತಂತ್ರವೂ ಅಷ್ಟೇ ನೈಸರ್ಗಿಕವಾದದ್ದು. ಕಲ್ಲನ್ನು ಸ್ವಲ್ಪ ಕೆತ್ತಿ ಅದಕ್ಕೆ ಹುಣಿಸೆಯ ಆಥವಾ ಆಲದ ಮರದ ಕಟ್ಟಿಗೆಯನ್ನು ಇಟ್ಟು ನೀರು ಹಾಕಿದರೆ ಅದು ಹಿಗ್ಗಿ ಕಲ್ಲನ್ನು ಒಡೆಯುತ್ತಿತ್ತಂತೆ. ಹಾಗೆ ಒಡೆದ ಕಲ್ಲನ್ನು ತಂದು ತಮಗೆ ಬೇಕಾದುದ್ದಕ್ಕೆ ಉಪಯೋಗಿಸಿಕೊಳ್ಳುತ್ತಿದ್ದರಂತೆ. ಕಲ್ಲಂತ ಕಲ್ಲನ್ನೂ ಮೃದುವಾಗಿಸುವ ಶಕ್ತಿ ನೀರಿನದಾ... ಮರದ್ದಾ... ಕಲ್ಲಂತ ಕಲ್ಲನ್ನೂ ಅರಳಿಸಿ ಅದರಲ್ಲಿ ದೈವತ್ವವನ್ನು, ಭವ್ಯತೆಯನ್ನು ತುಂಬಿದವರು ಅವರು.

ಈ ಕಲಾಸಕ್ತಿ ಕೇವಲ ರಾಜರಿಗೆ ಮಾತ್ರವಲ್ಲ ಅಲ್ಲಿನ ವ್ಯಾಪಾರಿಗಳಿಗೂ ಇತ್ತು, ಸಾಸಿವೆಕಾಳು, ಕಡಲೆಕಾಳು ಗಣಪ ಅಂತ ಶಾಲೆಯಲ್ಲಿ ಓದುವಾಗ ಅವುಗಳ ಗಾತ್ರವೂ ಅಷ್ಟೇ ಇರಬಹುದೇನೋ ಅನ್ನೋ ಕಲ್ಪನೆ ನಮ್ಮದು ಎಂದಾಗ ನಿಮ್ಮದು ಮಾತ್ರವಲ್ಲ ಇಲ್ಲಿ ಬರುವ ಹಲವರು ಹಾಗೆ ಅಂದುಕೊಂಡು ಎಲ್ಲಿದೆ ಕೇಳ್ತಾರೆ ಅಂದ್ರು ಗೈಡ್. ಅದು ಸಾಸಿವೆ ಹಾಗೂ ಕಡಲೆ ವ್ಯಾಪಾರಿಗಳು ಕೆತ್ತಿಸಿದ್ದು ಹಾಗಾಗಿಯೇ ಅದೇ ಹೆಸರು ಅಂದರು. ಹಂಪಿ ಎದುರಾಗುವ ಮೊದಲೇ ಸ್ವಾಗತಿಸೋದು ಈ ಸಾಸಿವೆ ಕಾಳು ಗಣಪತಿಯೇ.

ಹೇಮಕೂಟ ಬೆಟ್ಟದ ಕೆಳಗೆ ಧೀಮಂತವಾಗಿ ಕುಳಿತಿರುವ ಈ ಗಣಪ 8 ಅಡಿ ಎತ್ತರವಿದ್ದಾನೆ. ಏಕಾಶಿಲಾ ಮೂರ್ತಿಯ ವಿಶೇಷತೆ ಏನೆಂದರೆ ಎದುರಿನಿಂದ ನೋಡಿದಾಗ ಗಣಪನ ವಿಗ್ರಹವಾದರೂ ಹಿಂದಿನಿಂದ ನೋಡಿದರೆ ಪಾರ್ವತಿ ತನ್ನ ತೊಡೆಯ ಮೇಲೆ ಮಗನನ್ನು ಕುಳ್ಳಿರಿಸಿಕೊಂಡಿರುವ ಹಾಗಿದೆ. ಆಗಿನವರ ಕಲಾಪ್ರತಿಭೆಗೆ ಇದಕ್ಕಿಂತ ಅಪ್ಪಟ ಉದಾಹರಣೆ ಇನ್ನೇನು ಬೇಕು. ಹಂಪಿ ನಡೆದು ಹೋದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತೆ. ಹಾಗಾಗಿ ಕಾಲಿನ ಕಸುವು ತಿಳಿಯುವ ಆಸಕ್ತಿ, ತಾಳ್ಮೆ ಇದ್ದವರಿಗಷ್ಟೇ ಕೊಂಚವಾದರೂ ದಕ್ಕುತ್ತೆ. ಇಲ್ಲವಾದರೆ ಅದು ಹಾಳು ಹಂಪಿಯಷ್ಟೇ ಅನ್ನಿಸುತ್ತದೆ.

ಯಾವ ಕಲ್ಲು ಯಾವ ಗೋಪುರದ ಭಾಗವೋ, ಯಾವ ವಿಗ್ರಹದ ಅವಶೇಷವೋ, ಎಲ್ಲಿ ಕಾಲಿಟ್ಟರೆ ಏನು ಅಪಚಾರವೋ ಅನ್ನಿಸುವುದು ಇಲ್ಲಿಯೇ. ಎತ್ತ ನೋಡಿದರೂ ದೇವಸ್ಥಾನವೋ, ಮಂಟಪವೋ ಯಾವುದೋ ಒಂದು ಕಾಣುತ್ತದೆ. ಮೊದಮೊದಲು ರಾಷ್ಟ್ರಕೂಟ ಶೈಲಿಯ ಪುಟ್ಟ ಪುಟ್ಟ ದೇಗುಲಗಳು ಕಂಡರೂ ನಂತರ ಇವರ ಶೈಲಿಯ ಪ್ರತೀಕವಾಗಿ, ಏರಿದ ಎತ್ತರದ ಕುರುಹಾಗಿ ಕಾಣುವುದೇ ವಿರುಪಾಕ್ಷ ದೇವಾಲಯ. ಮುಸ್ಲಿಮರ ಧಾಳಿಯಿಂದ ಉಳಿದುಕೊಂಡ ಏಕೈಕ ದೇವಾಲಯ. ಆವರಣದ ಸುತ್ತಲೂ ಅನೇಕ ದೇವ ದೇವತೆಗಳ ಗುಡಿಗಳು ಮನಸೆಳೆಯುತ್ತದೆ. ದೈವಭಕ್ತಿ ಹೆಚ್ಚಿದ್ದ ಆ ಕಾಲದಲ್ಲಿ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವ ಕಷ್ಟ ಹಾಗು ವಿಪರೀತ ಸಮಯ ಬೇಕಾಗಿದ್ದರಿಂದ ತನ್ನ ಪ್ರಜೆಗಳಿಗೆ ಒಂದು ಕಡೆಯಲ್ಲೇ ಎಲ್ಲಾ ದೇವರ ದರ್ಶನವಾಗಬೇಕು ಅವರ ಶ್ರಮ ಉಳಿಯುವುದರ ಜೊತೆಗೆ ನೆಮ್ಮದಿಯೂ ಸಿಗಬೇಕು ಅನ್ನೋದು ಕೃಷ್ಣದೇವರಾಯನ ಇಚ್ಚೆಯಾಗಿತ್ತಂತೆ. ಅದರ ದ್ಯೋತಕವಾಗಿ ಆವರಣದ ಸುತ್ತಲೂ ಹಲವಾರು ಪುಟ್ಟ ಪುಟ್ಟ ದೇಗುಲಗಳ ನಿರ್ಮಾಣ ಆಯಿತಂತೆ.

ವಿಜಯನಗರ  ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಶಕ್ತಿಯ ಕೇಂದ್ರಸ್ಥಾನವೂ ಹೌದು ಅನ್ನೋದು ಅಲ್ಲಿನ ಹೆಜ್ಜೆ ಹೆಜ್ಜೆಯೂ ನಿರೂಪಿಸುತ್ತದೆ. ಆಢಳಿತ, ಧರ್ಮ, ದೇವಸ್ಥಾನ ಹಾಗೂ ಸಂಪತ್ತು ಇವಿಷ್ಟೂ ಕೂಡಾ ಒಂದಕ್ಕೊಂದು ಪೂರಕವಾಗಿಯೇ ಬೆಳೆದು ಬಂದಿದೆ. ಒಂದರ ಏಳಿಗೆಯಲ್ಲಿ ಇನ್ನೊಂದು ಮಹತ್ತರ ಪಾತ್ರ ವಹಿಸಿದೆ. ಒಂದಿಲ್ಲದೆ ಇನ್ನೊಂದರ ಅಸ್ತಿತ್ವವೇ ಇಲ್ಲವೇನೋ ಎಂಬಂತೆ ಬೆಸೆದುಕೊಂಡಿದೆ. ದೇವಸ್ಥಾನದ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಾಣವಾದ ಬಜಾರ್ ಆಗಲೇ ಎರಡು ಅಂತಸ್ತುಗಳನ್ನು  ಹೊಂದಿತ್ತು. ಅಲ್ಲಿ ಮುತ್ತು ರತ್ನಗಳನ್ನು ಮಾರುತ್ತಿದ್ದರು ಎಂದರೆ ಆಗಿನ ವೈಭವ ಹೇಗಿದ್ದಿರಬಹುದು?

ಒಂದೊಂದು ವಿಜಯಕ್ಕೂ ಒಂದೊಂದು ದೇವಸ್ಥಾನ, ಹಿಂದಿನದನ್ನೂ ಮೀರಿಸುವ ಶಿಲ್ಪಕಲಾ ವೈಭವ, ಕಲ್ಲೂ ಬೆಣ್ಣೆಯಂತೆ ಮೃದುವಾಗಿ ತನ್ನನ್ನು ತಾನು ಒಡ್ಡಿಕೊಂಡು ದೇವತ್ವವನ್ನು ಅವಾಹಿಸಿಕೊಳ್ಳುತ್ತಿತ್ತೇನೋ. ಉಳಿ ಪೆಟ್ಟಿಗೆ ಮೈಯೊಡ್ಡಿ, ಅನಾವಶ್ಯಕವಾದುದನ್ನು ನಿವಾರಿಸಿಕೊಂಡು, ಸಂಪ್ರದಾಯ ಪ್ರಕಾರ ಕೆತ್ತಿಸಿಕೊಂಡರೆ ನಿರ್ಜಿವ ಕಲ್ಲಿಗೂ ಜೀವಂತಿಕೆ ಮಾತ್ರವಲ್ಲ ದೈವತ್ವ ಆವಾಹನೆಯಾಗುತ್ತಿತ್ತು. ನೋಡುವ ನೋಟದಲ್ಲಿ ಗೌರವ ಮೂಡುತ್ತಿತ್ತು. ಕಲ್ಲಂತ ಕಲ್ಲೇ ದೇವರಾಗಬಹುದಾದರೆ ಜೀವ ಇರುವ ಮನುಷ್ಯ ಯಾಕಾಗಲು ಸಾಧ್ಯವಿಲ್ಲ ಅನ್ನಿಸಿದ್ದು ಸುಳ್ಳಲ್ಲ.

ಅದರಲ್ಲೂ ಹಂಪಿಯದು ಅದ್ಭುತ ಪೌರಾಣಿಕ ಹಿನ್ನಲೆ. ರಾಮಾಯಣದ ಬಹು ಮುಖ್ಯ ಘಟ್ಟ ಜರುಗುವುದು ಇಲ್ಲಿಯೇ. ವಾಲಿಯ ಸಾಮ್ರಾಜ್ಯ, ಹನುಮಂತನ ಜನ್ಮಸ್ಥಾನ, ಮತಂಗ ಮುನಿಗಳ ಆಶ್ರಮ, ಬ್ರಹ್ಮ ನಿರ್ಮಿತ ಸರೋವರವೆಂದೆ ಪುರಾಣಗಳಲ್ಲಿ ಪ್ರಸಿದ್ಧವಾದ ಪಂಪಾ ಸರೋವರ, ವರ್ಷ ಹಾಗೂ ಶರದೃತುವಿನ ನಾಲ್ಕು ತಿಂಗಳುಗಳ ಕಾಲ ರಾಮ ವಾಸಿಸಿದ ಬೆಟ್ಟ, ಅವನು ಕುಳಿತ ದೊಡ್ಡ ಬಂಡೆ.. ಏನಿತ್ತು ಏನಿರಲಿಲ್ಲ ಅಲ್ಲಿ ...

ರಾಜಧಾನಿಯೆನ್ನುವುದು ಬರೀ ಅಭೇಧ್ಯವಾಗಿದ್ದರಷ್ಟೇ ಸಾಲದು ಅಧಿಕಾರ ನಿಯಂತ್ರಿಸುವ ಆಯಕಟ್ಟಿನ ಜಾಗದಲ್ಲೂ ಇರಬೇಕು, ಅದಕ್ಕೆ ಹಂಪಿಯಂತಹ ಉತ್ತಮ ಜಾಗ ಬೇರೊಂದಿಲ್ಲ. ಇತಿಹಾಸದಲ್ಲಿ ಸುವರ್ಣಯುಗವೆಂದೇ ದಾಖಲಿಸಲ್ಪಟ್ಟ ಕಾಲವದು. ಸಂಪತ್ತಿನ ಕ್ರೋಡಿಕರಣ ಎಷ್ಟು ಮುಖ್ಯವೋ ಅದನ್ನು ಸಂರಕ್ಷಿಸುವುದು ಕೂಡಾ ಅಷ್ಟೇ ಮುಖ್ಯ. ಮತ್ತದನ್ನು ಮುಂದಿನ ಪೀಳಿಗೆಗೆ ಹಾಗೆ ದಾಟಿಸಬೇಕಾದ ಜವಾಬ್ದಾರಿ ಸಹ. ಅಪಾತ್ರ ದಾನವಾಗಬಾರದು ಮತ್ತು ಯಾವುದು ಯಾರಿಗೆ ಸೇರಬೇಕೋ ಅವರಿಗೆ ಮಾತ್ರ ಸೇರಬೇಕು ಅನ್ನುವ ಅವರ ಚಾಣಕ್ಷತೆ, ಕಷ್ಟಕಾಲಕ್ಕೆಂದು ಆಪದ್ಧನ ಶೇಖರಿಸಿಡುವ ರೀತಿ.  ಅದರ ಗೌಪ್ಯತೆ ಕಾಪಾಡುವುದಕ್ಕಾಗಿ  ಹಾಡು, ಲಾವಣಿಗಳು ರಚಿಸಿ ಅದನ್ನು ನಂಬಿಕಸ್ಥರಾದವರಿಗೆ ಕಲಿಸಿ ಬಾಯಿಂದ ಬಾಯಿಗೆ ಹರಡುವ ಸಶಕ್ತ ಮಾಧ್ಯಮವನ್ನು ಸೃಷ್ಟಿಸುವ ಬುದ್ದಿವಂತಿಕೆ, . ಅದಕ್ಕೂ ಕೂಡಾ ಒಂದು ಸಮಯ, ಗತಿ, ಎಲ್ಲವನ್ನೂ ರಚಿಸುವುದು ಮಾತ್ರವಲ್ಲ ಅದು ಎಲ್ಲರಿಗೂ ಹೇಳುವ ಹಾಗಿಲ್ಲ, ಕಲಿಸುವ ಹಾಗೂ ಇಲ್ಲ ಒಬ್ಬರ ಕಾಲಾನಂತರವೇ ಅವರ ಉತ್ತರಾಧಿಕಾರಿಗೆ ಮಾತ್ರ ಹೇಳುವ ಕಟ್ಟುನಿಟ್ಟಿನ ಪದ್ದತಿ, ರಹಸ್ಯ ನಕ್ಷೆಗಳ, ಗುಪ್ತ ಸಂಕೇತಗಳ ಮೂಲಕ ಅವುಗಳನ್ನು ಕಾಪಿಡುವ ರೀತಿ ಒಂದೊಂದೂ ಅದ್ಭುತ.

ಹಾಗೆ ಸಂಗ್ರಹಿಸಿದ ಸಂಪತ್ತಿನ ಸದ್ವಿನಿಯೋಗವೂ ತಿಳಿದಾಗ ಮಾತ್ರ ಅದಕ್ಕೊಂದು ಬೆಲೆ. ಆ ಕಾಲದಲ್ಲಿ ಧರ್ಮ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕತೆಯ ಸುವರ್ಣಯುಗ. ದಾಸ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಟ್ಟ ಕಾಲ. ಯಂತ್ರೋದ್ಧಾರಕ ಆಂಜನೇಯ ದೇಗುಲದ ಎದುರು ಕಲ್ಲು ಬಂಡೆಯ ನಡುವೆ ಜಾಗವನ್ನು ಮಾಡಿಕೊಂಡು ತಣ್ಣಗೆ ಹರಿಯುವ ತುಂಗಭದ್ರೆ  ಪ್ರಶಾಂತವಾಗಿ  ಕಾಣುತ್ತಾಳೆ. ಅಲ್ಲಿ  ನದಿಯ ಗುಂಟ ತೆಪ್ಪದಲ್ಲಿ ಹೋಗುವ ಅವಕಾಶವಿದೆ. ಎಷ್ಟು ನೆಮ್ಮದಿಯಾಗಿ ಹರಿಯುತ್ತಾಳೆ ಇವಳು ಅಂದರೆ ಆಳ ಅಷ್ಟೇ ಇದೆ ಹಾಗಾಗಿ ಎಂದರು. ಆಳವಿದ್ದಾಗ ಮಾತ್ರ ತಾನೇ ಪ್ರಶಾಂತತೆ ಸಿಗುವುದು. ಜ್ಞಾನ ಹೆಚ್ಚಿದಷ್ಟೂ ಮೌನವೂ ಹೆಚ್ಚುತ್ತಂತೆ. ಆಳ ಹೆಚ್ಚಿದಷ್ಟೂ ಮನುಷ್ಯನೂ  ಶಾಂತವಾಗುತ್ತನಾ....

ಅಲ್ಲಿ ತೆಪ್ಪದಲ್ಲಿ ಹೋಗುವುದರ ಅನುಭವವೇ ಅನನ್ಯ. ಒಂದರ ಮೇಲೊಂದು ಪೇರಿಸಿಟ್ಟ ಹಾಗೆ ಕಾಣುವ ದೈತ್ಯ ಬಂಡೆಗಳ ನಡುವೆ ಹರಿಯುವ ನದಿಯ ಇಕ್ಕೆಲದಲ್ಲೂ ಆ ಕಲ್ಲನ್ನೇ ಕೆತ್ತಿ ನಿರ್ಮಿಸಿರುವ ದೇಗುಲಗಳು, ಮಂಟಪಗಳು, ನೈಸರ್ಗಿಕವಾಗಿ ಉಂಟಾದ ಗುಹೆಗಳು, ಅಲ್ಲಿ ಬಂದು ಧ್ಯಾನಸ್ಥರಾದ ಮುನಿಗಳ ಮಂತ್ರಘೋಷ ಕಿವಿಗೊಟ್ಟರೆ ಆ ನೀರವತೆಯಲ್ಲಿ ಕೇಳಿಸಬಹುದೇನೋ ಅನ್ನಿಸುತ್ತದೆ. ಹರಿವಿನ ಸದ್ದೂ ಎಲ್ಲಿ ಅಲ್ಲಿಯ ದಿವ್ಯತೆಗೆ ಭಂಗ ತರಬಹುದೋ ಎಂಬಂತೆ ತುಂಗಭದ್ರೆಯೂ ಸದ್ದಿಲ್ಲದೇ ಹರಿಯುವುದು ಅಭ್ಯಾಸ ಮಾಡಿಕೊಂಡಿದ್ದಾಳೆನೋ.  ತೆಪ್ಪದಲ್ಲಿ ಹೋಗಿ ಬರುವಷ್ಟು ಕಾಲ ನಮ್ಮನ್ನು ಮತ್ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗಿ ಹೊಸದೊಂದು ಅನುಭವವನ್ನು ಅರಿವನ್ನು ಕಟ್ಟಿ ಕೊಡುವುದು ಮಾತ್ರ ಸತ್ಯ.

 ಸಂಪತ್ತು ಗಳಿಸುವುದು ಕಷ್ಟ, ಅದನ್ನು ಕಾಪಾಡಿಕೊಂಡು ಬರುವುದು ಮಾತ್ರ ಇನ್ನೂ ಕಷ್ಟ. ಅದರಲ್ಲೂ ವಿಜಯನಗರದ ಸಂಪತ್ತಿನ ಬಗ್ಗೆ ಕೇಳಬೇಕೇ? ಕೊನೆಯ ಯುದ್ಧ ನಡೆದು ರಾಮರಾಯನಿಗೆ ಸೋಲಾದಾಗ ಸುದ್ದಿ ತಿಳಿಯುತ್ತಿದ್ದಂತೆ ತಮ್ಮನ್ನು ರಕ್ಷಿಸಿಕೊಳ್ಳಲು  ಆಂಧ್ರದ ಕಡೆ ಹೊರಟ ರಾಜ ಪರಿವಾರ ಸಾವಿರಾರು ಆನೆಗಳ ಮೇಲೆ ಸಂಪತ್ತನ್ನು ಹೇರಿಕೊಂಡು ಹೊರಟಿತಂತೆ. ಗೆದ್ದ ಹುಮ್ಮಸ್ಸಿನಲ್ಲಿ ವಿಜಯನಗರ ಪ್ರವೇಶಿಸಿದ ಶತ್ರು ಸೈನ್ಯ ಅದನ್ನುನಾಶ ಮಾಡಲು ತೆಗೆದುಕೊಂಡ ಕಾಲ ಬರೋಬ್ಬರಿ ಆರು ತಿಂಗಳು ಎಂದರೆ ಅಲ್ಲಿಯ ವೈಭವ, ಅದರ ಶ್ರೀಮಂತಿಕೆ ಹಾಗೂ ಕಲಾವಂತಿಕೆ ಹೇಗಿದ್ದಿರಬಹುದು.

ರಾಮರಾಯನ ಕೈಯಿಂದ ಅಧಿಕಾರ ಪಡೆಯಲು ಕುತಂತ್ರ ಮಾಡುವ ಕೃಷ್ಣದೇವರಾಯನ ತಂದೆಯ ಮೂರನೆಯ ಹೆಂಡತಿಯ ಮಕ್ಕಳು ಸುಲ್ತಾನರೊಡನೆ ಕೈ ಜೋಡಿಸುತ್ತಾರೆ ಹಾಗಾಗಿಯೇ ರಾಮರಾಯನಿಗೆ ಸೋಲಾಗುತ್ತೆ  ಮೇಡಂ ಅಂತ ಗೈಡ್ ವಿವರಿಸುವಾಗ ಈ ದೇಶಕ್ಕೆ ಆಗಿನಿಂದಲೂ ಜಾಸ್ತಿ ಅಪಾಯಕಾರಿಯಾಗಿದ್ದು  ಒಳಗಿನ ಶತ್ರುಗಳೇ ಹೊರತು ಹೊರಗಿನವರಲ್ಲ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಒಂದೇ ಒಂದು ಚೂರು ಅವಶೇಷವೂ ಉಳಿಯದಂತೆ ಇಡೀ ಅರಮನೆಯ ಆವರಣವನ್ನು ಸುಟ್ಟುಹಾಕಿದ ಅವರ ಕ್ರೌರ್ಯ ಆ ತಣ್ಣಗಿನ ವಾತಾವರಣದಲ್ಲೂ ಮೈ ಬೆವರುವ ಹಾಗೆ ಮಾಡಿತ್ತು.

ಅರಮನೆಯದು ಆ ಪರಿಸ್ಥಿತಿಯಾದರೆ ದೇವಾಲಯಗಳದ್ದು ಇನ್ನೊಂದು ರೀತಿ. ಅರ್ಧಂಬರ್ಧ ಒಡೆದ ಗೋಡೆಗಳು, ಮುರಿದ ವಿಗ್ರಹಗಳು, ಭಗ್ನಗೊಂಡ ಮೂರ್ತಿಗಳು,  ಜೀವಂತಿಕೆಯಿಂದ ಕಂಗೊಳಿಸುವ ಆ ಮೂರ್ತಿಗಳನ್ನ ಭಗ್ನಗೊಳಿಸಿದ್ದಾದರೂ ಹೇಗೆ? ಒಂದರ ಕೈ, ಇನ್ನೊಂದರ ಸೊಂಡಿಲು, ಮತ್ತೊಂದರ ಹೊಟ್ಟೆ. ಸೌಂದರ್ಯ ಕಣ್ಣು ಸೆಳೆಯುತ್ತೆ ಅಂತಾರೆ, ಮಂತ್ರಮುಗ್ಧಗೊಳಿಸುತ್ತೆ ಅಂತಾರೆ ಆದರೆ ಜೀವಂತಿಕೆಯನ್ನು ತುಂಬಿಕೊಂಡು, ಶಿಲ್ಪಕಲಾ ವೈಭವಕ್ಕೆ ಹೆಸರಾಗಿ ಗಾಂಭೀರ್ಯದಿಂದ ನಿಂತಿದ್ದ ಅವುಗಳನ್ನು  ಒಡೆಯುವ ಮನಸ್ಸಾದರೂ ಹೇಗೆ ಬಂತು ಅನ್ನೋ ಆಲೋಚನೆ ಕಾಡಿದಾಗಲೆಲ್ಲ ಅಮಲು ಮನುಷ್ಯನನ್ನು ಎಷ್ಟು ಕ್ರೂರಿಯನ್ನಾದರೂ ಮಾಡಿ ಬಿಡುತ್ತದೆ ಅನ್ನಿಸುತ್ತದೆ. ಅದರಲ್ಲೂ ಜಗತ್ತಿನ ಅತ್ಯಂತ ಶಕ್ತಿಶಾಲಿ ಅಪಾಯಕಾರಿ ಅಮಲೆಂದರೆ ಧರ್ಮದ ಅಮಲು.

ದುರಂತವೆಂದರೆ ಜಗತ್ತಿನ ಇತಿಹಾಸದಲ್ಲೇ ಸುವರ್ಣಯುಗವೆಂದು ಕರೆಯಲ್ಪಟ್ಟ, ಅತ್ಯಂತ ವೈಭವೀ ಸಾಮ್ರಾಜ್ಯವೆಂದು ವರ್ಣಿಸಲ್ಪಟ್ಟ ವಿಜಯನಗರ ಬಗ್ಗೆ ನಮ್ಮ ದೇಶ ಆಸಕ್ತಿ ತೋರಿಸಲೆ ಇಲ್ಲ, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಅದಕ್ಕೂ ವಿದೇಶಿಗರೇ ಬರಬೇಕಾಯಿತು. ಅಂತೂ ಈಗ ಯುನೆಸ್ಕೋ ಪಟ್ಟಿಗೆ ಸೇರಿದ ಹಂಪಿಯಲ್ಲಿ ಪುರಾತತ್ವ ಇಲಾಖೆ ತನ್ನ ಸಂಶೋಧನೆ ಪ್ರಾರಂಭಿಸಿದೆ. ಮಣ್ಣಲ್ಲಿ ಸೇರಿಹೋಗಿದ್ದ ಕುರುಹುಗಳ ಅನಾವರಣ ಆಗುತ್ತಿದೆ. ಅವುಗಳನ್ನು ಸಂರಕ್ಷಿಸುವ ಕೆಲಸವೂ ನಿಧಾನಕ್ಕಾದರೂ ನಡೆಯುತ್ತಿದೆ. ಮರೆಯಾಗಿದ್ದ ಇತಿಹಾಸವೊಂದು ಸ್ವಲ್ಪ ಸ್ವಲ್ಪವೇ ಹೊರಗೆ ಬರುತ್ತಿದೆ.

ಜೀವಂತಿಕೆ ಎಲ್ಲಿರುತ್ತದೆ ಹೇಳೋದು ಕಷ್ಟ. ಒಂದು ಚೂರು ಭಗ್ನವಾದಾಗ ಅದರಲ್ಲಿದ್ದ ಸೌಂದರ್ಯ ಮಾಯವಾಗಿ ವಿರೂಪ ಎದ್ದು ಕಾಣುತ್ತದೆ. ಬದುಕಿನಲ್ಲೂ ಹೀಗೆ ತಾನೇ. ಒಂದು ಸಣ್ಣ ಕಲೆ, ಒಂದು ಸಣ್ಣ ತಪ್ಪು, ಚಿಕ್ಕ ದೋಷ ಇಡೀ ವ್ಯಕ್ತಿತ್ವವನ್ನೇ ಆಪೋಶನ ತೆಗೆದುಕೊಂಡು ಬಿಡುತ್ತದೆ. ಅಲ್ಲಿ ಭಗ್ನಗೊಂಡ ವಿಗ್ರಹಗಳನ್ನು ಮತ್ತೆ ಮೊದಲಿನ ರೂಪಕ್ಕೆ ತರಲು ಪ್ರಯತ್ನಿಸಿ ಕಾರ್ಯರೂಪಕ್ಕೆ ತರಲು ಹೊರಟಾಗ ಶಿವರಾಮ ಕಾರಂತರು ಅಡ್ಡಿ ಪಡಿಸಿದರಂತೆ. ನೀವೇನೇ ಮಾಡಿದರೂ ಅದು ಹೊಸತಾಗುತ್ತೆ ಹೊರತು ಹಳೆಯದೇ ಆಗಿ ಇರುವುದಿಲ್ಲ, ಹಾಗೆ ಮಾಡುವುದು ಇತಿಹಾಸವನ್ನು ತಿರುಚಿದಂತೆ ಹಾಗೆ ಇರಲಿ ಬಿಡಿ ಎಂದರಂತೆ. ಇವತ್ತಿಗೂ ಕಡಲೆಕಾಳು ಕಾಳು ಗಣಪತಿಯ ಬಳಿ ಸರಿಮಾಡಲು ತಂದಿಟ್ಟ ಕಲ್ಲು ಹಾಗೆ ಬಿದ್ದಿದೆ.

ಒಡೆದ ಕನ್ನಡಿ ಕೂಡಿಸಬಹದು ಆದರೆ ಹಳೆಯ ರೂಪ ಅದಕ್ಕೆ ಮರಳ ಬಲ್ಲದೇ, ಮತ್ತೆ ಮೊದಲಿನಂತೆ ಆಗಬಲ್ಲದೇ? ಜೀವಂತಿಕೆ ಮರಳಬಹುದೇ? ಉಹೂ ಸಾಧ್ಯವೇ ಇಲ್ಲ ಇದು ಕಹಿಯಾದ ಸತ್ಯ. ಆಗ ಅವರು ವಿರೋಧಿಸದಿದ್ದರೆ ಅನ್ನುವ ಕಲ್ಪನೆಯೇ ಬೆಚ್ಚಿ ಬೀಳುವ ಹಾಗೆ ಮಾಡುತ್ತದೆ, ಕಟ್ಟುವುದು ಕಷ್ಟ, ಹಾಳು ಮಾಡುವುದು ಸುಲಭ ಆದರೆ ತೇಪೆ ಹಾಕುವುದಿದೆಯಲ್ಲ ಅದನ್ನ ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಇದ್ದದ್ದನ್ನು ಮರೆಮಾಚಿ ಇನ್ನೇನೋ ಹೇಳುವುದಿದೆಯಲ್ಲ ಅದು ಒಡೆದಿದ್ದಕ್ಕಿಂತ ಕ್ರೌರ್ಯವೇನೋ ಅನ್ನಿಸುತ್ತದೆ. ಏನೋ ಆಗಿದ್ದನ್ನು ಇನ್ನೇನೋ ಆಗಿಸುವುದು ಉಹೂ ಅರಗಿಸಿ ಕೊಳ್ಳುವುದು ಕಷ್ಟ. ಅದರಲ್ಲೂ ತಿರುಚುವಿಕೆಯೇ ಇತಿಹಾಸವೆಂದು ಕೊಂಡ ನಮ್ಮಂತ ದೇಶದಲ್ಲಿ..

ಅವರ ಟೌನ್ ಪ್ಲಾನಿಂಗ್, ಆಗಿನ ಕಾಲದಲ್ಲಿ ಮಾಡಿದ ಕಮೋಡ್ ಪದ್ಧತಿ, ಅಚ್ಚುಕಟ್ಟುತನ, ಶಿಸ್ತು, ಎಲ್ಲವನ್ನೂ ಮಿತವಾಗಿ ಬಳಸುವ ಪ್ರಜ್ಞೆ, ಕಮಲಾಪುರದ ಕೆರೆಯಿಂದ ಇಡೀ ಹಂಪಿಗೆ ಮಾಡಿದ ನೀರಿನ ವ್ಯವಸ್ಥೆ, ಪ್ರತಿಯೊಂದರಲ್ಲೂ ಎದ್ದು ಕಾಣುವ ಸೌಂದರ್ಯ.. ಉದ್ಯಾನವನಗಳು, ಈಜು ಕೊಳಗಳು, ರಕ್ಷಣಾ ವ್ಯವಸ್ಥೆ ಒಂದೊಂದೂ ಅತ್ಯುತ್ತಮ. ಜಗತ್ತಿನ ಇನ್ಯಾವುದೂ ಅದನ್ನು ಮೀರಿಸಲಾಗದಷ್ಟು ಮುಂದಿದೆ. ಎಸ್ಕವೆಶನ್ ಅಲ್ಲಿ ದೊರೆತ ಆಗಿನ ಕಾಲದ ನೀರಿನ ಪೈಪ್ ಇವತ್ತಿಗೂ ಸುಸ್ಥಿತಿಯಲ್ಲಿರುವುದು ಅಚ್ಚರಿ ತರುವ ವಿಷಯವೇ. ಕಾಲಿಟ್ಟ ಕೂಡಲೇ ಹಾಳು ಸುರಿಯುವಂತೆ ಕಾಣುವ ಹಂಪಿ ಒಳಗೆ ಹೋದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದರ ವೈಭವ ಕಲ್ಪನೆ ಮಾಡಿಕೊಳ್ಳಲೂ ನಾವು ಶಕ್ತರಲ್ಲ ಅನ್ನೋ ಅಸಹಾಯಕ ಭಾವ ಕಾಡುವ ಹಾಗೆ ಮಾಡುತ್ತದೆ.

ಅಮ್ಮಾ ಹೇಗಿದ್ರೂ ಗೆದ್ದಿದ್ರು ಇದನ್ನ ಹಾಳು ಮಾಡದೆ ಅವರೇ ಆಳಿದ್ರೆ ಉಳಿತಾ ಇತ್ತು ಆಲ್ವಾ, ಈ ವೈಭೋಗವನ್ನು ಅವರೂ ಅನುಭವಿಸ ಬಹುದಿತ್ತು ಅಲ್ವಾ  ಅನ್ನೋ ಸ್ವಲ್ಪ ಆಸೆ, ಚೂರು ವಿಷಾದ, ಹೆಚ್ಚು ಸಿಟ್ಟಿನಿಂದ ಮಗಳು ಕೇಳುವಾಗ ಕಾಲಿಡಲೂ ಯೋಚಿಸುವ ಹಾಗೆ ಮಾಡುವ ಆ ಕಟ್ಟಡಗಳ ಮೇಲೆ ತಮ್ಮ ಹೆಸರು ಕೆತ್ತುವ, ವಿರೂಪ ಗೊಳಿಸುವ, ಅಲ್ಲೇ ಎಲ್ಲವನ್ನೂ ಮಾಡುವ,  ಸಂಸ್ಕೃತಿಯ ಬಗ್ಗೆ ಸ್ವಲ್ಪವೂ ಗೌರವವಿಲ್ಲದ, ಇತಿಹಾಸದ ಬಗ್ಗೆ ಕಿಂಚಿತ್ತೂ ಹೆಮ್ಮೆಯಿಲ್ಲದ  ನಮ್ಮಂತವರ ಕೈಯಲ್ಲಿ ಇದು ನಲುಗುವುದಕ್ಕಿಂತ ನಾಶವಾಗಿದ್ದೇ ಒಳ್ಳೆಯದು ಅನ್ನಿಸುತ್ತೆ ಕಣೆ ಎನ್ನುವವಳು  ಮನುಷ್ಯನ ಕ್ರೌರ್ಯದ ಮಟ್ಟವನ್ನು ಅವಳಿಗೆ ವಿವರಿಸಲಾಗದೆ ಸುಮ್ಮನಾಗಿದ್ದೆ. ಪುಟ್ಟಿ ಬೇಜಾರು ಮಾಡ್ಕೋಬೇಡಾ ನಮ್ಮ ಪ್ರಧಾನಿ ಈಗ ಇದರ ಬಗ್ಗೆ ತುಂಬಾ ಇಂಟರೆಸ್ಟ್ ತಗೊಂಡಿದಾರೆ, ಫಂಡ್ ಕೂಡಾ ರಿಲೀಸ್ ಮಾಡಿದ್ದಾರೆ. ನೋಡು ಈಗ ಸುತ್ತಲೂ ಯಾರೂ ಬರದ ಹಾಗೆ, ಹಾಳು ಮಾಡದ ಹಾಗೆ ಗೋಡೆ ಕಟ್ತಾ ಇದ್ದಾರೆ, ಜೊತೆಗೆ ಅಗೆಯುವ ಕೆಲಸ ಕೂಡಾ ನಡಿತಾ ಇದೆ, ನೀನು ನೆಕ್ಸ್ಟ್ ಟೈಮ್ ಬರೋವಾಗ ಇನ್ನಷ್ಟು ನೋಡೋಕೆ ಸಿಗುತ್ತೆ ಅಂತ ಗೈಡ್ ಅವಳಿಗೆ ಸಮಾಧಾನ ಮಾಡುತ್ತಿದ್ದರು. ಸ್ವರದಲ್ಲಿನ ಹೆಮ್ಮೆ ಅವಳನ್ನು ದಾಟಿ ಕೊಂಡು ಬಂದು ನನ್ನನ್ನೂ ತಾಕುತಿತ್ತು.

ಹಂಪಿ ಯಾರನ್ನು ಸೆಳೆಯುತ್ತೆ ಹೇಳೋದು ಕಷ್ಟ. ಟ್ರೆಕಿಂಗ್ ಪ್ರಿಯರಿಗೆ ಇಲ್ಲಿಯ ಬೆಟ್ಟಗಳು ಆಹ್ವಾನಿಸುತ್ತದೆ, ಇತಿಹಾಸದ ಬಗ್ಗೆ ಒಲವಿದ್ದವರಿಗಂತೂ ಇಲ್ಲಿನ ಪ್ರತಿ ಕಲ್ಲೂ ಒಂದೊಂದು ಕತೆ ಹೇಳುತ್ತದೆ, ಧಾರ್ಮಿಕ ಮನೋಭಾವದವರಿಗೆ ಅಂಜನಾದ್ರಿ, ವಿರೂಪಾಕ್ಷ, ಪಂಪಾ ಸರೋವರ ಕೈ ಬೀಸಿ ಕರೆಯುತ್ತಾರೆ, ಕಳೆದು ಹೋಗಬೇಕು ಅನ್ನುವವರಿಗೆ ಪ್ರತಿ ಜಾಗವೂ ಸೂಕ್ತವೇ. ಸುತ್ತಾಡಬೇಕು ಅನ್ನುವವರಿಗೆ ಇಲ್ಲಿ ನಡೆದಷ್ಟೂ ಜಾಗವಿದೆ. ನಮ್ಮನ್ನು ನಾವು ಅರಸಿಕೊಳ್ಳಬೇಕು ಅನ್ನುವವರಿಗೆ ಹೆಜ್ಜೆ ಹೆಜ್ಜೆಯೂ ಗುರುವಾಗುತ್ತದೆ. ಹಾಗಾಗಿ ಇದು ಬಂದ ಯಾರನ್ನೂ ಸುಮ್ಮನೆ ವಾಪಾಸ್ ಕಳಿಸುವುದಿಲ್ಲ. ಒಂದಷ್ಟು ಕೊಟ್ಟೇ ಕಳಿಸುತ್ತದೆ, ಚೂರು ಕಲಿಸಿಯೇ ಬೀಳ್ಕೊಡುತ್ತದೆ. ಅಂದಿನಿಂದ ಇಂದಿನವರಿಗೆ ಹಂಪಿಗೆ ಕೊಟ್ಟು ಗೊತ್ತು, ವಾಪಾಸ್ ಕೊಡುವುದನ್ನ ನಾವು ಕಲಿಯಬೇಕಾಗಿದೆ.

ಏನು ಲಾಭವಿದೆ ಎಂದು ಎಲ್ಲವನ್ನೂ ಹಣದ ಮೂಲಕವೇ ಅಳೆಯುವ ನಮಗೆ ಸಂಸ್ಕೃತಿ ಉಳಿಸುವ ಕೆಲಸ ದೊಡ್ಡದು ಅನ್ನಿಸುವುದೇ ಇಲ್ಲ. ಉಳಿಸಬೇಕಾಗಿದ್ದು ಸಂಸ್ಕೃತಿ, ಇತಿಹಾಸ ಅಂದರೆ ಆಗಿ ಹೋಗಿದ್ದು ಮಾತ್ರವಲ್ಲ ಮತ್ತೆ ಮರುಕಳಿಸುವಂತದ್ದು, ನಾವೆಷ್ಟು ಘನತೆಯಿಂದ ಅದನ್ನು ಉಳಿಸಿಕೊಳ್ಳುತ್ತೆವೆಯೋ ಅದು ಅಷ್ಟೇ ಅಧ್ಬುತವಾಗಿ ಮರಳಿ ಬರುತ್ತದೆ. ಮುಂದಿನ ಪೀಳಿಗೆ ನೆಮ್ಮದಿಯಾಗಿ ಸಶಕ್ತವಾಗಿ ಇರಬೇಕು ಎಂದರೆ ಅವರ ಹಿಂದಿನ ಪೀಳಿಗೆಯ ಕೊಡುಗೆ ಅತಿ ಮುಖ್ಯವಾಗುತ್ತದೆ. ನಾವೇನು ಕೊಡುತ್ತಿದ್ದೇವೆ ಎಂದು ಒಮ್ಮೆ ಪ್ರಶ್ನಿಸಿಕೊಂಡರೆ ಒಳ್ಳೆಯದೇನೋ.   ಅಲ್ಲಿಂದ ಹೊರಗೆ ಬರುವಾಗ ಮಾತ್ರ ಹಾಳಾಗಿದ್ದು ಹಂಪೆಯಾ ಇಲ್ಲಾ ನಮ್ಮ ಮನಸ್ಥಿತಿಯಾ ಅನ್ನೋ ಪ್ರಶ್ನೆ ಎದ್ದಿತು... ಉತ್ತರ ಹುಡುಕುವ ಧೈರ್ಯವಿಲ್ಲದೆ ಹೊರಗೆ ಬಂದರೆ ಆಕಾಶ ಕಪ್ಪಾಗಿತ್ತು...

ಮಳೆ ಸುರಿಯಬಹುದಾ.......





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...