ಓದಿನ ಮೆಟ್ಟಿಲುಗಳು (ವಿಜಯಕರ್ನಾಟಕ)

 ಆಟದ ನಡುವೆ ತುಸು ಸುಧಾರಿಸಿಕೊಳ್ಳಲು ಕುಳಿತಾಗ ಕೈ ಗೆ ಬರುತ್ತಿದ್ದದ್ದು ಚಂದಮಾಮ. ಅದರಲ್ಲಿ ಬರುತ್ತಿದ್ದ ಬೇತಾಳನ ಕತೆಗಳನ್ನು ಮೊದಲು ಓದಿಯೇ ಆಮೇಲೆ ಉಳಿದ ಕಥೆಗಳತ್ತ ಕಣ್ಣು ಹರಿಯುತ್ತಿದ್ದದ್ದು. ವಿಕ್ರಮಾದಿತ್ಯ ಏನು ಉತ್ತರ ಕೊಟ್ಟಿದ್ದಿರಬಹುದು ಎಂದು ಯೋಚಿಸಿ ಕೆಲವೊಮ್ಮೆ ಚರ್ಚಿಸಿ(?) ಯಾರು ಸರಿಯಾದ ಉತ್ತರ ಕೊಡ್ತಾರೋ ಅವರಿಗೆ ಚಂದಮಾಮ ಮೊದಲು ಓದುವ ಅವಕಾಶ. ಹೀಗೆ ಪುಸ್ತಕವನ್ನು  ಮೊದಲು ಓದಬೇಕಾದರೆ  ತಲೆಗೆ ಕೆಲಸ ಕೊಡಬೇಕು ಎಂದು ಕಲಿಸಿದ್ದು ಚಂದಮಾಮ.  ಚಿಕ್ಕಂದಿನಿಂದಲೂ ರೈಲುಬೋಗಿಯ ಪಯಣದಲ್ಲಿ ಬಂದವರು ಹೋದವರು, ಬರುತ್ತಿರುವವರ  ನಡುವೆ ಜೊತೆಗೆ ನಿರಂತರವಾಗಿ ಅಷ್ಟೇ ಆಪ್ತವಾಗಿ ಇವತ್ತಿಗೂ ಉಳಿದಿದ್ದು, ಪೊರೆದದ್ದು, ಸಾಂಗತ್ಯ ನೀಡಿದ್ದು ಪುಸ್ತಕಗಳು. ನಂತರ ಬಂದ ಬಾಲಮಂಗಳ, ಚಂಪಕ, ಶಾಲೆಯ ಲೈಬ್ರರಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿದ್ದ ಅಮರ ಚಿತ್ರಕಥಾ, ಭಾರತ ಭಾರತೀ ಪುಸ್ತಕಗಳು ಹಸಿವೆಯ ತಣಿಸಿದ ಆತ್ಮಬಂಧುಗಳು.

ಇದೆ ಪ್ರಪಂಚದಲ್ಲಿ ಮುಳುಗಿಹೋದವರನ್ನು ಹಠಾತ್ತನೆ ಮತ್ತೊಂದು ಪ್ರಪಂಚಕ್ಕೆ ಎಳೆದೊಯ್ದಿದ್ದು ಅಜ್ಜನ ಅನಾರೋಗ್ಯ. ಅವರಿಗಾಗಿ ರಾಮಾಯಣ ಮಹಾಭಾರತ ಓದುವ ಕೆಲಸ ಅಂಟಿಕೊಂಡಿತ್ತು. ಆಟವನ್ನು ಬಿಟ್ಟು  ಅದರಲ್ಲೂ ನಮ್ಮಷ್ಟಕ್ಕೆ ನಾವೇ ಓದಿಕೊಳ್ಳುವ ಸುಖದಿಂದ ಜೋರಾಗಿ ಇನ್ನೊಬ್ಬರಿಗೆ ಓದಿ ಹೇಳುವ ಸಂಕಟ ಬೇರೆ. ಕತೆಗಳು ಉಪಕಥೆಗಳು, ವಾಲ್ಮೀಕಿ, ವ್ಯಾಸರ ಕತೆ ಹೇಳುವ ರೀತಿ ಆಳವಾಗಿ ತಿಳಿಯದಿದ್ದರೂ ಬದುಕಿನ ಎಷ್ಟೋ ಪ್ರಶ್ನೆಗಳಿಗೆ ಇವತ್ತಿಗೂ ಅವೆರೆಡು ಉತ್ತರ ಕೊಟ್ಟಿವೆ. ಭಾರ ಇಳಿಸಿವೆ. ಒಪ್ಪಿಕೊಳ್ಳುವ ಬುದ್ಧಿ ಕೊಟ್ಟಿವೆ. 

ಮನೆಯಲ್ಲಿ ಎಲ್ಲರಿಗೂ ಓದುವ ಹುಚ್ಚು ಇದ್ದಿದ್ದರಿಂದ  ಯಾವತ್ತೂ ಪುಸ್ತಕಕ್ಕಾಗಿ ತಡಕಾಡುವ ಪರಿಸ್ಥಿತಿ ಬರಲಿಲ್ಲ. ಆಚೆಮನೆಯ ಜಗುಲಿಯ ಪಕ್ಕದ ಕೋಣೆಗೆ  ಹೋದರೆ ಸಾಕಿತ್ತು. ಮೇಜಿನ ಮೇಲೆ ತರಂಗ, ಸುಧಾ. ಸಾಯಿಸುತೆ, ಉಷಾ ನವರತ್ನ ರಾಮ್ ಎಲ್ಲರ ಎದುರು ಓದಿದರೆ ಬೈಸಿಕೊಳ್ಳುವುದು ಶತಃ ಸಿದ್ಧ ಎನ್ನುವ ಸತ್ಯ ಗೊತ್ತಿರುತ್ತಿದ್ದರಿಂದ ಬೇಸಿಗೆಯಲ್ಲಿ ಗದ್ದೆ ಕಾಯುವ ನೆಪದಲ್ಲಿ ಹೋಗಿ ಮರದ ಕೆಳಗೆ ಕುಳಿತರೆ ಸಂಜೆಯಾಗುವುದು  ಗೊತ್ತಾಗುತ್ತಿರಲಿಲ್ಲ. ಈ ಆದರ್ಶ, ಸಂಪ್ರದಾಯ, ಒಂದೇ ಟೋನ್ ನ ಕಾದಂಬರಿಗಳು ಇಷ್ಟೇನಾ ಅನ್ನಿಸುವ ಹೊತ್ತಿಗೆ ಸಿಕ್ಕವರು ಯಂಡಮೂರಿ.

ಅದು ಹೈ ಸ್ಕೂಲ್ ನ ಕೊನೆಯ ವರ್ಷ. ಆ ಸಮಯದಲ್ಲಿ, ಆ ವಯಸ್ಸಿಗೆ ಯಂಡಮೂರಿಯ ಸಸ್ಪೆನ್ಸ್, ಭಾವ ತೀವ್ರತೆ, ಚಾಲೆಂಜ್, ಹಠ ಎಷ್ಟು ಇಷ್ಟವಾಗಿಬಿಟ್ಟಿತ್ತು ಎಂದರೆ ಹುಡುಕಿ ಹುಡುಕಿ ಅವರ ಪುಸ್ತಕಗಳನ್ನು ಓದುವಷ್ಟು.  ಅದರಲ್ಲಿ ಬರುವ ಕೆಲವು ಸಾಲುಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ಗೆಳತಿಯರು ಓದಿ ಪುಳಕಗೊಳ್ಳುವ ಚರ್ಚಿಸುವ ಕೆಲಸವನ್ನು ವಿಪರೀತ  ಆಸಕ್ತಿಯಿಂದ ಮಾಡುತ್ತಿದ್ದೆವು.  ಇವೆಲ್ಲಾ ಭಾವತೀವ್ರತೆಯ  ನಡುವೆ ಸಿಕ್ಕವರು ಭೈರಪ್ಪ. ವಂಶವೃಕ್ಷ ಓದಿದ ಮೇಲೆ ಸಾಹಿತ್ಯದ ಇನ್ನೊಂದು ಮಜಲು ಏರುವ ಮೆಟ್ಟಿಲು ಸಿಕ್ಕಿತ್ತು. ಆಮೇಲೆ ಜೊತೆಯಾದವರು ಚಿತ್ತಾಲರು, ತ.ರಾ.ಸು. ಕಾರಂತರು, ತೇಜಸ್ವಿ ಇನ್ನೂ ಹಲವಾರು. ಒಬ್ಬೊಬ್ಬರು ಪರಿಚಯವಾದ ಹಾಗೆ ಬದುಕು ಶ್ರೀಮಂತವಾಗುತ್ತಾ ಹೋಗಿತ್ತು. ಮನಸ್ಸು ತುಂಬಿಕೊಳ್ಳುತ್ತಿತ್ತು.

ಯಾಕೆ ಓದಬೇಕು? ಯಾರೋ ಬರೆದ ಕತೆಯಿಂದ ಏನು ಉಪಯೋಗ? ಬರೀ ಸಮಯ ಕಳೆಯಲಾ? ಬೇರೆ ಮನೋರಂಜನೆಗಳು ಇರುವಾಗ ಸಾಹಿತ್ಯವೇ ಯಾಕೆ? ಎಷ್ಟೋ ಸಲ ಹಲವರು ಕೇಳಿದ್ದಿದೆ. ಪುಸ್ತಕಕ್ಕೆ ಹಾಕುವ ದುಡ್ಡು ವ್ಯರ್ಥ ಎಂದು ನೋಡಿದ್ದಿದೆ. ಆದರೆ ಓದಿದ ಯಾವ ಓದು ವ್ಯರ್ಥ ಅನ್ನಿಸಲೇ ಇಲ್ಲ. ಪ್ರತಿ ಓದೂ  ಮನಸ್ಸಿನ ಗದ್ದೆಯೊಳಗೆ ಅಗೇಡಿ ಹಾಕಿದ ಹಾಗೆ. ಅವಲ್ಲೇ ಹರಳುಗಟ್ಟಿ ಕುಳಿತು ಯಾವತ್ತೋ ಯಾವ ಕ್ಷಣದಲ್ಲೂ ಎದುರಿಸುವ  ಗೊಂದಲ, ಆವರಿಸಿದ ಸಮಸ್ಯೆ, ಕಾಡಿದ ಪ್ರಶ್ನೆಗೆ ಉತ್ತರವಾಗಿವೆ.  ಶಿಕಾರಿಯಾಗುತ್ತಿದ್ದಾಗ ಅಥವಾ ಆಗುತ್ತಿದ್ದೇನೆ ಎಂದು ಗೊತ್ತಾದಾಗ ನಾಗಪ್ಪ ನೆನಪಾದರೆ ದಾರಿಯೊಂದು ಸಿಕ್ಕ ಹಾಗೆ. ಯಾರೋ  ನಿರಾಕರಿಸಿದ ಭಾವ ಕಾಡಿದಾಗ ಬರುವವರು ಬಂದಾಗ ಹೋಗುವವರು ಹೋಗಬೇಕು ಎನ್ನುವ ಸ್ವಾಮಿಗಳ ಮಾತು ನಮಗೂ  ಉತ್ತರವಾದ ಹಾಗೆ. ಎಲ್ಲೋ ದಾರಿಯಲ್ಲಿ ನಡೆಯುವಾಗ ತೇಜಸ್ವೀ ನೆನಪಾದರೆ ಕಣ್ಣು ಮನಸ್ಸು ತೀಕ್ಷವಾಗಿ ಒಂದಷ್ಟು ಹೊಸ ನೋಟ ಹೊಸ ಭಾವ ದಕ್ಕಿಸಿಕೊಂಡ ಹಾಗೇ . ತೊಳಲಾಡುವಾಗ ಕಾರಂತರು ನೆನಪಾದರೆ ಸ್ಪಷ್ಟವಾಗಿ ಹೇಳುವ ಧೈರ್ಯ  ಬಂದ ಹಾಗೆ. ಹದಿವಯಸ್ಸಿನ ತುಮಲಗಳಿಗೆ ಯಂಡಮೂರಿ ಉತ್ತರವಾದ ಹಾಗೆ. ನನ್ನದಲ್ಲದ್ದು ಎದುರಾದಾಗ ಏನು ಮಾಡಬೇಕು ಎನ್ನುವ ಗೋಜಲು ಕಾಡಿದಾಗ ವಂಶವೃಕ್ಷದ ಶ್ರೋತ್ರಿಗಳು ನೆನಪಾದರೆ ಉತ್ತರ ಸಿಕ್ಕ ಹಾಗೆ.

ಬದುಕಿನಲ್ಲಿ ಸವಾಲು, ಗೊಂದಲ, ಕಷ್ಟ, ದುಃಖ ಪ್ರತಿಯೊಂದು ಸಹಜವೆಂದು ಗೊತ್ತಿದ್ದೂ ನಮ್ಮ ಕಷ್ಟವೇ ದೊಡ್ಡದೆಂದೋ, ನಮಗೆ ಮಾತ್ರ ಯಾಕೆ ಹೀಗಾಗುತ್ತದೆ ಎಂದೋ ಪ್ರತಿಯೊಬ್ಬರಿಗೂ ಒಂದೊಂದು ಸಲ ಅನ್ನಿಸಿಯೇ ಇರುತ್ತದೆ. ಅಂತ ಕೃಷ್ಣನೇ ಇಷ್ಟೆಲ್ಲಾ ಕಷ್ಟ, ಅವಮಾನ  ಅನುಭವಿಸಿದ ಮೇಲೆ ನಮ್ಮದೇನು ಬಿಡು ಎನ್ನುತ್ತಿದ್ದಳು ಅಜ್ಜಿ ಮಹಾಭಾರತ ಕೇಳುವಾಗ. ಸಾಹಿತ್ಯ ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ. ಒಮ್ಮೆ ಒಪ್ಪಿಕೊಂಡ ಮೇಲೆ ದಾರಿ ಹುಡುಕುವುದು ಸರಳ. ಒಪ್ಪಿಕೊಳ್ಳದೆ ಹೋದಾಗ ಮಾತ್ರ ಘರ್ಷಣೆ, ಅಡೆತಡೆ. ಒಂಟಿತನವನ್ನು ಏಕಾಂತಕ್ಕೆ ತಲುಪಿಸುವ ಶಕ್ತಿ ಸಾಹಿತ್ಯದ್ದು. ಯಾವುದೋ ತಿರುವಿನಲ್ಲಿ ಮುಗುಳಕ್ಕು ಕೈ ಹಿಡಿವ ಜೊತೆಗಾರ ಓದು. 

ನಾವು ಬೆಳೆಯುತ್ತಾ ಹೋದ ಹಾಗೆ ನಮ್ಮ ಅಭಿರುಚಿಗಳು ಬದಲಾಗುತ್ತಾ ಹೋದ ಹಾಗೆ ಓದಿನ ವಿಸ್ತಾರವೂ ಬದಲಾಗುತ್ತದೆ. ಉನ್ನತ ಶಿಕ್ಷಣ ಕಲಿಸಿದವರೂ  ಮುಖ್ಯ. ಅಷ್ಟು ದೂರಕ್ಕೆ ಸಾಗಲು ಬೇಕಾದ ಮೊದಲ ಅಕ್ಷರ ಕಲಿಸಿದವರೂ ಮುಖ್ಯ. ಒಂದು ಮೆಟ್ಟಿಲು ಏರಿದಾಗ ಮಾತ್ರ ಇನ್ನೊಂದು ಮೆಟ್ಟಿಲು ಕಾಣಿಸಲು ಸಾಧ್ಯ. ಒಮ್ಮೆಗೆ ಎತ್ತರವನ್ನು ಯಾರಿಂದಲೂ ತಲುಪಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರಮುಖರೇ. ಇದು ಅರ್ಥವಾದಾಗ ಯಾರನ್ನೂ ಯಾವುದನ್ನೂ ಹೀಗೆಳೆಯಲು ಸಾಧ್ಯವಿಲ್ಲ.  ಹಾಗಾಗಿ ಓದು ಯಾಕೆ ಬೇಕು ?

ಹರಳುಗಟ್ಟಿದ ಮನಸ್ಸನ್ನೊಮ್ಮೆ ಕೇಳಬೇಕು...   

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...