ಮೊದಲ ಕಾರು ಕೊಂಡ ಸಂಭ್ರಮ. ಇಬ್ಬರೂ ಆಫೀಸ್ ಗೆ ಹೋಗುತ್ತಿದ್ದರಿಂದ ರಜೆ ಸಿಕ್ಕಿದ ಕೂಡಲೇ ಎಲ್ಲಾದರೂ ಹೊರಡುವ ಅಭ್ಯಾಸ. ಹೊಸ ಕಾರ್ ಸುತ್ತುವ ಹುಚ್ಚು ಎರಡು ಜೊತೆಯಾಗಿತ್ತು. ಹಾಗೆ ಮೈಸೂರಿಗೆ ಹೋಗುವ ಹುಕಿ ಬಂದು ಹೋಗಿದ್ದೆವು. ಎಲ್ಲಾ ಕಡೆ ಸುತ್ತಾಡಿ ಅರಮನೆ ನೋಡಿ ಬಂದು  ಕಾರ್ ಸ್ಟಾರ್ಟ್ ಆಗಿ  ಇನ್ನೇನು ಹೋರಡಬೇಕು ಅಕ್ಕಾ ಎನ್ನುವ ಸ್ವರ. ಕಿಟಕಿಯಿಂದ ಹೊರಗೆ ನೋಡಿದರೆ ಕೈಯಲ್ಲಿ ಪುಟ್ಟ ಮರದ  ಆಭರಣದ ಪೆಟ್ಟಿಗೆ ಹಿಡಿದ ವ್ಯಕ್ತಿಯೊಬ್ಬ ಕಾಣಿಸಿದ. ಅದರ ಮೇಲಿನ ಕುಸುರಿ ಕೆಲಸ ಒಳಗೆ ಹಾಕಿದ ಕೆಂಪು ಮಕಮಲ್ ಬಟ್ಟೆ ಎಲ್ಲವೂ ಚೆಂದವಿದ್ದರೂ ತಗೊಂಡು ಏನು ಮಾಡೋದು ಅನ್ನಿಸಿ  ಬೇಡ ಎಂದೇ. ನಾವು ಹೋಗಿ ತೆಗೆದುಕೊಳ್ಳುವುದಕ್ಕೂ ಯಾರಾದರೂ ಬಂದು ತೆಗೆದುಕೊಳ್ಳಿ ಎನ್ನುವುದಕ್ಕೂ ತುಂಬಾ ವ್ಯತ್ಯಾಸ. ಅವನು ಹೋಗುವ ತರಹ ಕಾಣಿಸಲಿಲ್ಲ.  ತಗೊಳ್ಳಿ ಬಂಗಾರ ಹಾಕಿಡಲು ಚೆನ್ನಾಗಿರುತ್ತದೆ ಅವನ ದನಿಯಲ್ಲಿ ಸಣ್ಣಗೆ ಒತ್ತಾಯ ಕಾಣಿಸಿ ಕಸಿವಿಸಿ. ಬೇಡ ಅಂದೇನಲ್ಲ ದನಿ ಕೊಂಚ ಜೋರಾದ ಹಾಗೆ ಅನ್ನಿಸಿತು. 

ಅದೇನೋ ಇನ್ನೂ ಬಂಗಾರದ ಮೋಹವಿರಲಿ ಅಲಂಕಾರ ಮಾಡಿಕೊಳ್ಳುವ ಆಸಕ್ತಿಯು ಇರಲಿಲ್ಲ. ಬಟ್ಟೆಗಳ ಬಗ್ಗೆ ವಿಪರೀತ ಮೋಹಕ್ಕೆ ಬಿದ್ದ ಹೊತ್ತು ಅದು. ಅದೆಷ್ಟು ಬಟ್ಟೆಗೆ ದುಡ್ಡು ಸುರಿತಿ ಅದರ ಬದಲು ಬಂಗಾರ ತಗೋಬಾರದ ಆಪತ್ಕಾಲಕ್ಕೆ ಆಗುತ್ತೆ ಮನೆಯ ಓನರ್ ಆದರೂ ಅಮ್ಮನಂತಿದ್ದ ಅವರು ಬೈಯ್ದು ಬೈದು ಸಾಕಾಗಿ ತಿಂಗಳಿಗೆ ಇಂತಿಷ್ಟು ಅಂತ ನಂಗೆ ಕೊಡು ಎಂದಿದ್ದರು. ಅವರ ಮಾತು ಮೀರದೆ ಯಾವುದಕ್ಕೆ ಎಂದೂ ಕೇಳದೆ ತಲೆ ಅಲ್ಲಾಡಿಸಿ ಕೊಡುತ್ತಿದ್ದೆ. ಹಾಗಿರುವಾಗ ಮೊದಲೇ ಹೀಗೆ ಹಿಂದೆ ಬಂದು ಬಲವಂತ ಮಾಡುವವರ ಕಂಡರೆ ಕಿರಿಕಿರಿಯಾಗುವಳು  ಅವತ್ತು ತೀರಾ  ರೇಗದೆ ನಂಗೆ ಬಂಗಾರ ಇಷ್ಟವಿಲ್ಲ ಹಾಗಾಗಿ ಬೇಡ ಎಂದು ನಕ್ಕಿದ್ದೆ. ಇನ್ನೂ ಇಲ್ಲೇ ಇದ್ದರೆ  ಸುಮ್ನೆ ಕಿರಿಕಿರಿ ಹೊರಡುವ ಎಂದು ಗಂಡನಿಗೆ ಹೇಳಿದರೆ ಅವನು ಅತ್ತಲೇ  ನೋಡುತ್ತ ಕಾರ್ ಸ್ಟಾರ್ಟ್ ಮಾಡದೆ ಕುಳಿತಿದ್ದ. 

ಇದೊಂದೇ ಬಾಕ್ಸ್ ಅಕ್ಕಾ ಕೊನೆಯ ಬಾರಿ ಎಂಬಂತೆ ತನ್ನ ಕೈಯೆತ್ತಿ ಹೇಳಿದ. ಹೊರಟವಳ ಕಣ್ಣಿಗೆ ಅವನ ಕೈಯಲ್ಲಿ ಕಂಡಿದ್ದು ನಾಲ್ಕು ಬೆರಳು ಮಾತ್ರ. ಮನಸ್ಸು ಒಂದು ಕ್ಷಣ ಚಡಪಡಿಸಿತು. ಹುಟ್ಟುತ್ತಿದ್ದ ಕೋಪ ಅಲ್ಲಿಯೇ ಸ್ತಬ್ಧ.  ಎಷ್ಟು ಹೇಳಿ ನಂಗೆ ಬಾರ್ಗೈನ್ ಮಾಡೋಕೆ ಬರೋಲ್ಲ ಎಂದರೆ ಇಲ್ಲ ಅಕ್ಕ ಕೊಟ್ಟವರು ಕೋಪ ಮಾಡಿಕೊಂಡೋ ಬೇಜಾರು ಮಾಡಿಕೊಂಡೋ ಹಣ ಕೊಟ್ಟರೆ ಅದು ಒಳ್ಳೆಯದಲ್ಲ ಎಂದವನು ಬೆಲೆ ಹೇಳಿದ್ದ. ಅವನ ದನಿಯಲ್ಲಿನ  ಪ್ರಾಮಾಣಿಕತೆ ಮನಸ್ಸಿಗೆ ತಾಕಿತ್ತು. ಮರು ಮಾತಾಡದೆ ಅವನು ಹೇಳಿದಷ್ಟು ಕೊಟ್ಟರೆ ಆ ಪುಟ್ಟ ಬಾಕ್ಸ್ ಕಾರ್ ಒಳಗೆ ಇಟ್ಟು  ನೋಡ್ತಾ ಇರಿ ಬಂಗಾರ ಇಷ್ಟವಿಲ್ಲ ಅಂದ್ರು ಅದರ ತುಂಬಾ ಬಂಗಾರ ತುಂಬೋ ಹಾಗಾಗುತ್ತೆ ಎಂದು ದುಡ್ಡನ್ನು ಕಣ್ಣಿಗೆ ಒತ್ತಿಕೊಂಡಿದ್ದ.  ದಿಟ್ಟಿಸಿ ನೋಡಿದವಳ ಕಣ್ಣಲ್ಲಿ ಚಕ್ರಸುಳಿ. ಒಂದು ಕ್ಷಣದ ಭಾವೋದ್ವೇಗ.  

ಮರದ ಬಾಕ್ಸ್, ನವಿರಾದ ಕೆತ್ತನೆ. ಒಳಗೆ ಮೃದುವಾದ ಕೆಂಪು ಬಟ್ಟೆಯ ಹಾಸು. ಪುಟ್ಟ ತಾಮ್ರದ ಚಿಲಕ. ಎಷ್ಟು ಚೆಂದ ಇದೆ ನೋಡಿ ಎಂದು ಆಂಟಿಗೆ ತೋರಿಸಿದರೆ ನಂಗೆ ಕೊಡು ಎಂದು ತೆಗೆದುಕೊಂಡಿದ್ದರು. ಮರುದಿನ ಆಫೀಸ್ ಗೆ ಹೊರಡುವಾಗ ಕರೆದರೆಂದು ಒಳಗೆ ಹೋದರೆ ದೇವರ ಮುಂದೆ ಪೂಜೆಗೊಂಡ ಬಾಕ್ಸ್ ಅದರೊಳಗೆ ಒಂದು ಸರ . ನೋಡು ನೀನು ಕೊಟ್ಟ ದುಡ್ಡಲ್ಲಿ ಮಾಡಿಸಿದ್ದು ಅದು ನಿಂಗೆ ಬೇಡಾ ಅಂದ್ರು ಮುಂದೆ ಕಷ್ಟಕಾಲಕ್ಕೆ ಆಗುತ್ತೆ. ಇಲ್ಲಾ ಹುಟ್ಟೋ ಮಗುವಿಗೆ ಆಗುತ್ತೆ  ತಗೋ ಎಂದಾಗ ಮನಸ್ಸು ಹುಣ್ಣಿಮೆಯ ಸಮುದ್ರ. ಆ ಅಪರಿಚಿತ ಮನುಷ್ಯನ ಹಾರೈಕೆ ನಿಜವಾಗಲು ಶುರುವಾಗಿತ್ತು. ಏನೇ ಕೊಂಡರು ಅದು ಎಂಥಾ ಚೆಂದದ ಬಾಕ್ಸ್ ಆದರೂ ತಂದ  ಕೂಡಲೇ  ಆ ಪುಟ್ಟ ಬಾಕ್ಸ್ ನಲ್ಲಿ ಹಾಕದೆ ಸಮಾಧಾನವಾಗುವುದಿಲ್ಲ. ಯಾಕೆ ಅದರಲ್ಲಿ ಹಾಗೆ ತುರುಕೋದು ಎನ್ನುವ ಗಂಡ ಬಾಕ್ಸ್ ನೋಡಿ ಸುಮ್ಮನೆ ಉಳಿಯುತ್ತಾನೆ. 

ಅದೇನೋ ಮಗಳಿಗೆ ಚಿಕ್ಕವಳಿಂದ ಬಂಗಾರದ ಮೋಹ. ಹುಟ್ಟಿದ ಕೂಡಲೇ ಕಿವಿಯೋಲೆ, ಸರ ಅವಳ ಮಾವ ಕೊಟ್ಟಿದ್ದರಿಂದ ಪುಟ್ಟದೊಂದು ಬ್ರೇಸ್ಲೆಟ್ ಮಾಡಿಸಿದ್ದೆವು. ಏನೇ ಮಾಡಿದರು ಒಂದಷ್ಟು ವರುಷ ಬರಬೇಕು ಅನ್ನೋದು ಆಂಟಿಯ ಪಾಲಿಸಿ ಹಾಗಾಗಿ ಅದಕ್ಕೆ ಪುಟ್ಟ ಪುಟ್ಟ ರಿಂಗ್ ಹಾಕಿಸಿ ಅವಳದನ್ನು ಇವತ್ತಿಗೂ ಹಾಕುವ ಹಾಗೆ ಹೇಳಿ ಮಾಡಿಸಿದ್ದರು. ಈಗ ರಜೆ ಅಲ್ವ ಕೊಡು ಎಂದು ಹುಟ್ಟಿದ ಹಬ್ಬಕ್ಕೆ ಹಾಕಿಕೊಂಡ ಮಗಳು ಬಿಚ್ಚುವ ಯೋಚನೆಯೇ ಮಾಡಿರಲಿಲ್ಲ. ಆಡುವಾಗ ಹಾಳಾಗುತ್ತೆ ಬೇಡ ಕೊಡೆ ಎಂದು ಬಲವಂತವಾಗಿ ಬಿಚ್ಚಿಸಿ ಜೋಬಿಗೆ ಹಾಕಿಕೊಂಡು ಎತ್ತಿಡಲು ಮರೆತೇ ಬಿಟ್ಟಿದ್ದೆ. ಅದಾಗಿ  ಎರಡು ದಿನದ ಮೇಲೆ ಯಾಕೋ ನೆನಪಾಗಿ ಇಡೀ ಮನೆ ಹುಡುಕಿದರೂ ಕಾಣಿಸದೆ ಬೇಜಾರಾಗಿ ಹೋಗಿತ್ತು.

ಎಲ್ಲೂ  ಹೋಗೋಲ್ಲ ಬಿಡು ಮನೆಯಲ್ಲಿಯೇ ಎಲ್ಲೋ ಇರುತ್ತೆ ಯಾವಾಗ್ಲೋ ಸಿಗುತ್ತೆ ಗಂಡ  ಹೇಳಿದರು ಸಮಾಧಾನವಾಗಿರಲಿಲ್ಲ. ಅಮ್ಮಾ ಗಣಪತಿ ಕೊಡಿಸ್ತಾನೆ ಬಿಡೆ ಗರಿಕೆ ಕೊಯ್ದು ಹಾಕ್ತಿನಿ ಅಂತ ಹೇಳದೀನಿ  ಮಗಳು ಹೇಳಿದರು ಉಹೂ .. ಆದವಳ  ಮೊದಲ ಒಡವೆ ಎಲ್ಲೂ  ಹೋಗಬಾರದು ಕಳೆದು ಹೋದರೆ ಎನ್ನುವ ಸಂಕಟ. ಒಂದಲ್ಸ ನಿನ್ನ ಡ್ರೆಸ್ ಅಲ್ಲೇ ನೋಡು ಎಂದು ಅಪ್ಪ ಮಗಳು ಹೇಳಿದಾಗ  ಹೋಗಿ ಒಗೆದು ಹರವಿದ  ಬಟ್ಟೆ ನೋಡಿದರೆ ಜೇಬಲ್ಲಿ ಭದ್ರವಾಗಿ  ಅಡಗಿ ಕುಳಿತಿತ್ತು. ತಂದು ಒಳಗೆ ಇಡುವಾಗ ಕಂಡ ಬಾಕ್ಸ್ ಯಾಕೋ ಆ ಅಪರಿಚಿತ ಮನುಷ್ಯನನ್ನು ಅವನ ದನಿಯನ್ನು ನೆನಪಿಸಿತು. ಅದರಲ್ಲಿ ಇಟ್ಟ  ಯಾವ ಒಡವೆಯೂ ನನ್ನ ಬೇಜಾವಾಬ್ದಾರಿ, ಉಢಾಫೆತನದಲ್ಲಿ ಇಲ್ಲಿಯವರೆಗೂ ಕಳೆದಿಲ್ಲ. ಆ ಮನುಷ್ಯನ ಹಾರೈಕೆ ಹುಸಿಹೋಗಿಲ್ಲ.

ಆ ಮನುಷ್ಯ ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಪ್ರತಿ ಬಾರಿ ಬಾಕ್ಸ್ ತೆರೆಯುವಾಗ, ಹೊಸತೇನೋ ಕೊಳ್ಳುವಾಗ ನೆನಪಾಗುತ್ತಾನೆ. ಮರುದಿನ ದೀಪ ಹಚ್ಚುವಾಗ ಅವನ ಬದುಕಿಗೂ ಬಂಗಾರದ ಘನತೆ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ. ಕೆಲವಷ್ಟು ಬಂಧಗಳು, ವ್ಯಕ್ತಿಗಳು ಎಲ್ಲಿಯೋ ಸಿಕ್ತಾರೆ, ಕ್ಷಣವಷ್ಟೇ ಇರ್ತಾರೆ. ಆದ್ರೆ ಬದುಕ ಪೂರ್ತಿ ನೆನಪಾಗಿ ಉಳಿದು ಬಿಡುತ್ತಾರೆ. ಋಣ ಉಳಿಸಿಬಿಡುತ್ತಾರೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...