ನೆನಪೇ ಸಂಗೀತ

ಪ್ರತಿಬಾರಿ ಸ್ಕೂಲ್ ಡೇ ಬಂದರೂ ಹೊಸ ಮಕ್ಕಳು ಬಂದರೂ ಈ ಪಿಳ್ಳಂಗೋವಿಯ ಚೆಲ್ವಕೃಷ್ಣನ ಹಾಡು ಅದಕ್ಕೆ ಡಾನ್ಸ್ ಮಾತ್ರ ಬದಲಾಗುತ್ತಲೇ ಇರಲಿಲ್ಲ. ಆ ಹಾಡು ಬಂದ ಕೂಡಲೇ ಮಾತು ನಿಲ್ಲಿಸಿ ನೋಡುವ ಪೋಷಕರೂ ಬದಲಾಗಿರಲಿಲ್ಲ. ಯಾವುದೇ ಶಾಲೆಯಲ್ಲಾಗಲಿ ಈ ಹಾಡು ಬರದೆ ಕಾರ್ಯಕ್ರಮವೂ ಸಂಪನ್ನವಾದ ಉದಾಹರಣೆಯಿರಲಿಲ್ಲ. ಹಾಡು ಅದರಲ್ಲೂ ದಾಸರ ಹಾಡು ಅಂದರೆ ವಿದ್ಯಾಭೂಷಣ ತೀರ್ಥ ಸ್ವಾಮೀಜಿಗಳು ಎಂದೇ ಪ್ರಸಿದ್ಧಿಯಾಗಿದ್ದ ಕಾಲವದು. ಬೆಳಿಗ್ಗೆ ಎದ್ದ ಕೂಡಲೇ ಟೇಪ್ ರೆಕಾರ್ಡರ್ ಗೆ ಕ್ಯಾಸೆಟ್ ತುರುಕಿ ಸುಪ್ರಭಾತ ಹಾಕುವ ಜಮಾನದಲ್ಲಿ ಕಪಾಟಿನ ಬಹುಭಾಗ ಜಾಗ ಆಕ್ರಮಿಸಿಕೊಂಡಿದ್ದು ಇವರ ಕ್ಯಾಸೆಟ್ ಗಳೇ.

ಹೀಗೆ ಇವರ ಹಾಡು ಕೇಳುತ್ತಾ, ಅದನ್ನೇ ಡಾನ್ಸ್ ಮಾಡುತ್ತಾ, ಸ್ಪರ್ಧೆಗಳಲ್ಲಿ ಹಾಡಿ ಬಹುಮಾನ ಗೆಲ್ಲುತ್ತಾ ಹೈ ಸ್ಕೂಲ್ ಮೆಟ್ಟಿಲು ಹತ್ತಿದವಳಿಗೆ  ಧ್ವನಿ ಮಾತ್ರವಲ್ಲ ಇವರೂ ಚೆಂದ ಅನ್ನಿಸಿತ್ತು. ಹಾಡು ಕೇಳುವಾಗ ಅವರು ಕಣ್ಮುಚ್ಚಿ ತನ್ಮಯರಾಗಿ ಹಾಡುತ್ತಿದ್ದಾರೆನೋ ಅನ್ನಿಸುತಿತ್ತು. ಹೀಗಿರುವಾಗ ಒಂದು ದಿನ ಮನೆಯಲ್ಲಿ ಗುಸು ಗುಸು ಪಿಸು ಮಾತು ಶುರುವಾಗಿತ್ತು. ಕಳ್ಳ ಹೆಜ್ಜೆ ಇಟ್ಟು ಒಳಗೆ ಹೋದರೆ ಆಚೆ ಹೋಗಿ ಓದೋದು ಆಡೋದೋ ಏನಾದರೂ ಮಾಡಿಕೊಳ್ಳಿ ಅನ್ನೋ ಗದರುವಿಕೆ ಕೇಳಿ ಹೊರಗೆ ಬಂದರೂ ಕಿವಿಗೆ ಅವರು ಮಾತು ಕೇಳಿಸಿತ್ತು. ಸ್ವಾಮೀಜಿಗಳು ಮದುವೆ ಆದರಂತೆ ಅನ್ನೋ ಆತಂಕದ, ಮುಂದೆ ಏನಾಗುತ್ತೋ ಅನ್ನೋ ಭಯದ ಮಾತುಗಳು ಅವು.

ಇನ್ನೂ ನನ್ನಿಚ್ಚೆ, ನನ್ನಿಷ್ಟ ಎನ್ನುವುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದ, ಸಹಮತಿಸಿದ ಇನ್ನೂ ಮುಂದುವರಿಯದ ಕಾಲವದು. ಎಲ್ಲರನ್ನೂ ಆತಂಕ, ಏನೋ ಅಸಹನೆ. ಇವರಿಗಿಂತಲೂ ಒಪ್ಪಿ ಮದುವೆಯಾದ ಹುಡುಗಿಯ ಮೇಲೆ ಆಕ್ರೋಶ, ಈ ಹೆಣ್ಮಕ್ಕಳ ಹಣೆಬರಹವೇ ಇಷ್ಟು ಎನ್ನುವ ಶರಾ ಎಲ್ಲವೂ ನಡೆದು ಚರ್ಚೆ, ವಾದ ವಿವಾದ ಬಿರುಸಾಗಿ ನಡೆಯುತ್ತಿತ್ತು. ಎಲ್ಲಿ ಹೋದರೂ ಯಾರೂ ಸೇರಿದರೂ ಅದೇ ಮಾತು. ಆಗಿದ್ದಾದರೂ ಏನು ಎನ್ನುವ ಪ್ರಶ್ನೆ ಎಲ್ಲರ ಹಾಗೆ ನನ್ನೊಳಗೂ ಉಧ್ಬವಿಸಿ ಮೂಲೆಯಲ್ಲೆಲ್ಲೋ ಹಾಗೆ ಉಳಿದುಬಿಟ್ಟಿತ್ತು. ಮೊನ್ನೆ ಮೊನ್ನೆಯ ತನಕ ನೆನಪೇ ಸಂಗೀತ ಅನ್ನುವ ಅವರ ಜೀವನ ಕಥನ ಸಿಕ್ಕುವವರೆಗೂ..

ಆತ್ಮಕತೆ ಬರೆಯುವುದು ಸುಲಭವಾ ಖಂಡಿತ ಅಲ್ಲ. ಅಲ್ಲೊಂದು ಸಮಚಿತ್ತ ಬೇಕು. ಇದ್ದದ್ದನ್ನು ಇದ್ದ ಹಾಗೆ ಹೇಳುವ ನಿರ್ಲಿಪ್ತತೆ ಇರಬೇಕು. ಎದುರಿಸುವ ಧೈರ್ಯ ಬೇಕೇ ಬೇಕು. ಆತ್ಮರತಿ ಆಗದಂತೆ ನೋಡಿಕೊಳ್ಳುವ ಪ್ರಜ್ಞೆ ಇರಲೇಬೇಕು, ಇದರ ಜೊತೆಗೆ ಭಾವಾವೇಶ ಇಲ್ಲದಂತೆ ನದಿಯೊಂದು ತಣ್ಣಗೆ ಹರಿದಂತೆ ಹೇಳುವ ಕಲೆ ಗೊತ್ತಿರಬೇಕು. ನಾನು ಹೀಗೇ ಅನ್ನುವುದಕ್ಕಿಂತ ಇದು ನಡೆದದ್ದು ಎಂದು ತನ್ನ ಜೀವನದ ಘಟನೆಯನ್ನು ಸಾಕ್ಷಿಯಾಗಿ ನೋಡುತ್ತಾ ಹೇಳುವುದಿದೆಯಲ್ಲ ಅದಕ್ಕೆ ಮಾತ್ರ ಪ್ರಬುದ್ಧತೆ ಬೇಕು. ಹೀಗಾಗಿ ಆತ್ಮಕಥನ ಓದುವುದು ಸ್ವಲ್ಪ ಕಡಿಮೆಯೇ. ಆ ನಿಟ್ಟಿನಲ್ಲಿ ನೆನಪೇ ಸಂಗೀತ ಅದ್ಭುತ ಪುಸ್ತಕ. ತನ್ಮಯರಾಗಿ ಹಾಡುವ ಹಾಗೆಯೇ ಕಥನವನ್ನೂ ಹೇಳುತ್ತಾ ಹೋಗಿದ್ದಾರೆ. ಓದುವವರಿಗೂ ನದಿಯಗುಂಟ ನಡೆದುಹೋಗುವ ಅನುಭವ ದಕ್ಕುವ ಹಾಗೆ ಬರೆದಿದ್ದಾರೆ.

ಸನ್ಯಾಸಿಯಾದವ ಎಲ್ಲವನ್ನೂ ತೊರೆಯಬೇಕು. ಕೊನೆಗೆ ತನಗೆ ತಾನೇ ಶ್ರಾದ್ಧವನ್ನೂ ಮಾಡಿಕೊಳ್ಳಬೇಕು. ಅಂದರೆ ಅಲ್ಲಿಯವರೆಗಿನ ಬದುಕು, ಭಾವ, ಕುಟುಂಬ, ಹೆತ್ತವರು ಎಲ್ಲವನ್ನೂ ತೊರೆದು ಎಲ್ಲವಕ್ಕೂ ಒಂದು ಅಂತಿಮ ಮುದ್ರೆ ಒತ್ತಿ ಅಲ್ಲಿಂದ  ಹೊಸ ಗುರಿ , ಹೊಸಬದುಕು. ಹೀಗೆ ಎಲ್ಲವನ್ನೂ ತೊರೆದು ಹೋಗಲು ಪ್ರೇರೇಪಿಸಿ,  ಬಂಧನ ತೊರೆದು ಬಯಲು ಅರಸಲು ಹೇಳಿ  ಅವರನ್ನು ಮಠವೊಂದಕ್ಕೆ ಕಟ್ಟಿ ಹಾಕಿ, ಮತ್ತೆ ಪ್ರಾಪಂಚಿಕ ಹೊಸ  ಕರ್ತವ್ಯಗಳಿಗೆ ಹೆಗಲು ಕೊಡುವ ಹಾಗೆ ಮಾಡುವುದು ವಿಪರ್ಯಾಸ. ಬದುಕಿನ ಈ ದ್ವಂದ್ವವನ್ನು ಅರಗಿಸಿಕೊಂಡು ಹೆತ್ತವರನ್ನು ಅಪರಿಚತರಂತೆ ಅಥವಾ ಎಲ್ಲರಂತೆ  ಕಂಡು, ಹೊಸತರದ ಬದುಕು ಬದುಕುವುದು ಸುಲಭವಲ್ಲ. ಅದಕ್ಕೆ ಪ್ರಚಂಡ ಆತ್ಮಶಕ್ತಿ ಬೇಕು, ಮನಸ್ಥೈರ್ಯ ಬೇಕು. ಕಾಮನೆಗಳನ್ನು ನಿಗ್ರಹಿಸಿಕೊಳ್ಳುವ ಸಾಮರ್ಥ್ಯ ಒಳಗಿರಬೇಕು. ಅವೆಲ್ಲಕ್ಕಿಂತ ಈ ಬದುಕಿನ ಬಗ್ಗೆ ಒಂದು ನಿರಾಕರಣೆ ಬೇಕೇ ಬೇಕು. ಅದ್ಯಾವುದೂ ಗೊತ್ತಿಲ್ಲದ ಹಾಲುಗಲ್ಲದ ಮಕ್ಕಳನ್ನು ಈ ಸನ್ಯಾಸಕ್ಕೆ ದೂಡುವ ವ್ಯವಸ್ಥೆ ಬಗ್ಗೆ, ಬದುಕಿನ ಬಗ್ಗೆ ಬಹಳಷ್ಟು ಕನಸುಗಳನು ಕಂಡ ಹುಡುಗನಿಗೇ ಸನ್ಯಾಸ ಅನಿವಾರ್ಯ ಕರ್ಮವಾಗಿ ಒದಗಿಬರುವುದು ಅದನ್ನು ಒಪ್ಪಿಕೊಳ್ಳಲೇ ಬೇಕಾದ ವಾತಾವರಣ ನಿರ್ಮಾಣ ಆಗುವುದು ಜಗದ ವೈಚಿತ್ರ್ಯ.

ಮಠದ ಉಳಿವು, ಅಧಿಕಾರವನ್ನು ಉಳಿಸಿಕೊಳ್ಳುವ ತಪನೆ, ಸಂಪತ್ತಿನ ಕ್ರೋಡೀಕರಣ, ಇನ್ಯಾವುದೋ ಕಾರಣಗಳು ಈ ಉತ್ತರಾಧಿಕಾರಿಯ ಆಯ್ಕೆಯಲಿ ಮುಖ್ಯ ಪಾತ್ರ ವಹಿಸುತ್ತದೆ. ದೊಡ್ಡವರಾದರೆ ನಿರಾಕರಿಸಬಹುದು, ಬಂಡಾಯ ಏಳಬಹುದು ಅನ್ನುವ ಭಯ ಚಿಕ್ಕ ಮಕ್ಕಳನ್ನು ಆರಿಸುವಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಗಿಡವಾಗಿದ್ದಾಗ ಬಗ್ಗಿಸಬಹುದು ಅನ್ನುವ ನಂಬಿಕೆಯೂ ಮುಖ್ಯವಾಗಿರುತ್ತದೆ. ಹಾಗಾಗಿಯೇ ಏನೂ ಅರಿಯದ ಮಕ್ಕಳನ್ನು ಆರಿಸಿ ಅವರಿಗೆ ದೀಕ್ಷೆ ಕೊಟ್ಟು ಆ ಮಠದ ಸಂಪ್ರದಾಯ, ನಂಬಿಕೆಗಳಿಗೆ ತಕ್ಕಂತೆ ಬೆಳೆಸುವ ಏರ್ಪಾಡು ಮಾಡಲಾಗುತ್ತದೆ. ಇಲ್ಲಿ ಉಳಿದವರ ಮಾತು ನಿರ್ಧಾರಗಳೇ ಪ್ರಮುಖವೇ ಹೊರತು ಪೀಠ ಏರುವವರದಲ್ಲ. ಇಷ್ಟವಿಲ್ಲದೆ ಸನ್ಯಾಸ ಒಪ್ಪಿಕೊಂಡು ವಿಧಿ ವಿಧಾನ ಮುಗಿದ ಬಳಿಕ ಬಂದ ಉಡುಗೊರೆ ನೋಡುವಾಗ ವಿದ್ಯಾಭೂಷಣರಿಗೆ ಊರಿನ ಹಿರಿಯರೊಬ್ಬರು ಕಳುಹಿಸಿದ ಚಾಕಲೇಟ್ ಪೊಟ್ಟಣ ಸಿಕ್ಕಿತಂತೆ. ಇದಕ್ಕಿಂತ ವಸ್ತು ಸ್ಥಿತಿ ಮನಸ್ಥಿತಿಯನ್ನು ಚೆಂದವಾಗಿ ಹೇಳುವುದು ಸಾಧ್ಯವೇ....

ಇತ್ತ ಒಗ್ಗಿಕೊಳ್ಳಲಾಗದೆ, ಅತ್ತ ಹೊರಬರಲಾರದೆ ಅವರು ಪಟ್ಟ ತಪನೆ, ಪ್ರಯತ್ನ, ಜೊತೆ ಜೊತೆಗೆ ಮಾಡಿದ ಸಾಮಾಜಿಕ ಕಾರ್ಯಗಳು, ಜೊತೆಯಾದ ಸಾಂಗತ್ಯ ಕೊಟ್ಟ ಸಂಗೀತದ ಕಲಿಕೆ ಎಲ್ಲವನ್ನೂ ಹೇಳುತ್ತಲೇ ನೀರವ ರಾತ್ರಿಯಲ್ಲಿ ಒಂಟಿತನ ಕಾಡುವಾಗ ಕಂಡೂ ಕಂಡೂ ನೀ ಎನ್ನ ಕೈ ಬಿಡುವರೇ ಕೃಷ್ಣ ಎಂದು ಗುನುಗಿಕೊಳ್ಳುತ್ತಾ, ರಾಗ ತಾಳಗಳ ಹಂಗಿಲ್ಲದೆ ಎದೆಯ ಬಡಿತವನ್ನೇ ಶ್ರುತಿಯಾಗಿಸಿ ಹಾಡುತ್ತಾ ನಿದ್ದೆಹೋಗುತ್ತಿದ್ದರಂತೆ. ಎಂಥಾ ತಲ್ಲಣ.... ಅದನ್ನು ಮೆಟ್ಟಿ ನಿಲ್ಲುವ ತಪನ. ಮತ್ತೆ ಮತ್ತೆ ಸೆಳೆಯುವ ಬಿಡುಗಡೆಯ ಬಯಕೆ, ಕಟ್ಟಿಹಾಕುವ ಮಠ. ಅಬ್ಬಾ ಎಂಥ ದ್ವಂದ್ವದ ಬದುಕಿನಲ್ಲಿ ಅದೆಷ್ಟು ಕಾಲ ಗಟ್ಟಿಯಾಗಿ ಬದುಕಿದ್ದರು ಎಂದು ಯೋಚಿಸಿದರೆ ಮೈ ನಡುಗುತ್ತದೆ.

ಮಾನವ ಶೋಧಿಸಬೇಕು ನಿಚ್ಚ
ಅನುದಿನ ಮಾಡುವ ಪಾಪಪುಣ್ಯದ ವೆಚ್ಚ
ಎಂದು ಗುನುಗಿಕೊಳ್ಳುವಾಗ ತನ್ನನ್ನು ತಾನೇ ಶೋಧಿಸಿಕೊಳ್ಳುತ್ತಾ, ಯಾರಿಗಾಗಿ ಈ ಮುಖವಾಡ ಧರಿಸಿದೆನೋ ಅವರಿಗೆ ತನ್ನ ನಿಜದ ಒಳಗು ತೋರದೆ ಬರೀ ದೇವರಿಗೆ ತೋರಿದರೆ ಈ ಜೀವಕ್ಕೆ ಶಾಂತಿ ಸಿಗುವುದಾದರೂ ಹೇಗೆ ಎಂದು ನೋಯುತ್ತಾ ತೋಡಿಕೊಳ್ಳಲು ಒಂದು ಜೀವವನ್ನು ಹುಡುಕುತ್ತಾ ಇರುವಾಗಲೇ ಫಲಿಮಾರು ಮಠದ ಸ್ವಾಮಿಗಳಿಂದ ಪೀಠತ್ಯಾಗ ಎನ್ನುವ ಸುದ್ದಿ ಕೇಳಿ ಹಿಡಿದ ಸನ್ಯಾಸವನ್ನು ಬಿಡಲೂ ಬಹುದು ಎನ್ನುವ ಯೋಚನೆ ಮನದಲ್ಲಿ ತೇಲಿಹೋಯಿತು ಎನ್ನುತ್ತಾರೆ.. ಅಂತರಂಗದಲ್ಲಿ ಇಳಿದು ಗಟ್ಟಿಆಯಿತಾ...? ಅದನ್ನು ಅವರು ಉತ್ತರಿಸುವುದಿಲ್ಲ ಬದುಕೇ ಉತ್ತರಿಸುತ್ತದೆ. ಇಷ್ಟರ ನಡುವೆಯೂ ಮಠದ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾ, ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾ, ಶಾಲೆಯನ್ನೂ ಕಟ್ಟಿಸಿ ತಮ್ಮ ಕರ್ತವ್ಯ ನಿರ್ವಹಿಸುತ್ತಾ ಹೋಗುವ ಅವರು ಅದಕ್ಕಾಗಿ ಹಾಡಿನಿಂದ ಬಂದ ದುಡ್ಡನ್ನೂ ಉಪಯೋಗಿಸುತ್ತಾರೆ. ಸನ್ಯಾಸ ಬಿಟ್ಟ ಮೇಲೆ ಬೇಕಾಗಬಹುದು ಎಂದು ಕೂಡಿಟ್ಟ ಮೂರು ಲಕ್ಷವನ್ನೂ ಅದಕ್ಕೆ ಹಾಕಿ ಕಾಯುವನು ನೀನೆ ಅನ್ನುವ ಅವರ ನಂಬಿಕೆ, ನಿಸ್ಪ್ರುಹತೆ ಗೌರವ ಹುಟ್ಟಿಸುತ್ತದೆ.

ಬಳ್ಳಾರಿಯಲ್ಲಿ ನಿಶ್ಚಯವಾಗುವ ಕಾರ್ಯಕ್ರಮ, ಅಲ್ಲಿ ರಮಾ ಎಂಬುವವರ ಪರಿಚಯ, ಹಿಂದೆ ಮುಂದೆ ನೋಡದೆ ಅವರನ್ನು ಮನತುಂಬಿಸಿಕೊಂಡು ಪ್ರೀತಿಸುವ ವಿದ್ಯಾಭೂಷಣರು, ಮದುವೆಯಾಗಲು ನಿಶ್ಚಯಮಾಡಿದ ಮೇಲೆ ಬಂದ ಒತ್ತಡ, ಎದುರಿಸಿದ ಸಮಸ್ಯೆಗಳು, ಮಾನಸಿಕ ಒತ್ತಡ, ಬಿಡುವೆನೆಂದರೂ ಬಿಡಲಾಗದ ವಾತಾವರಣ, ಅನುಭವಿಸಿದ ಸಂಕಷ್ಟ ಎಲ್ಲವನ್ನೂ ಸಹಜವಾಗಿ ಹೇಳುತ್ತಾ ಹೋಗಿದ್ದಾರೆ. ಇಡೀ ಪುಸ್ತಕದುದ್ದಕ್ಕೂ ಕಾಣುವುದು ಕಾಡುವುದು ಅವರು ನಿರ್ಲಿಪ್ತವಾಗಿ ಹೇಳುವ ರೀತಿ, ಎಲ್ಲಿಯೂ ಉತ್ಪ್ರೇಕ್ಷೆ ಅನ್ನಿಸದ ಶೈಲಿ, ಹಾಗೂ ಇದ್ದದ್ದನ್ನು ಇದ್ದ ಹಾಗೆ ಹೇಳುವ ಸ್ವಭಾವ. ನದಿಯೊಂದು ಕಾಡು, ಗುಡ್ಡ ಬೆಟ್ಟ, ಕಣಿವೆಗಳನ್ನು ಬಳಸಿಕೊಂಡು ತಣ್ಣಗೆ ಹರಿದುಹೋಗುವಂತೆ. ನದಿಗುಂಟ ನಡೆದುಹೋಗುವ ನೆಮ್ಮದಿಯನ್ನು ಈ ಓದು ನೀಡುತ್ತದೆ. ವರ್ಷಾನುಗಟ್ಟಲೆ ಪೂಜಿಸಿದ ಲಕ್ಷ್ಮೀ ನರಸಿಂಹನನ್ನು ಬಿಟ್ಟು ಹೋದವರಿಗೆ ಯಾರೋ ಅಭಿಮಾನಿಯೊಬ್ಬ ಸ್ವಲ್ಪ ದೊಡ್ಡದೇ ಅನ್ನಿಸುವ ಬೆಳ್ಳಿ ವಿಗ್ರಹವನ್ನು ತಂದುಕೊಟ್ಟಾಗ ನೀನು ಬಿಟ್ಟರೂ ನಾನು ನಿನ್ನನ್ನು ಬಿಡೆ ಎನ್ನುವ ಸಾಲು ಅನುಭವಕ್ಕೆ ಬರುತ್ತದೆ. 

ಆಗಿನ ಕಾಲಘಟ್ಟದ ಎಷ್ಟೋ ಜನರ ಪ್ರಶ್ನೆಗೆ ಉತ್ತರವಾಗಿ ಅನ್ನುವುದಕ್ಕಿಂತ ಶೋಧಿಸಬೇಕು ಮಾನವ ನಿಚ್ಚ ಎನ್ನುವ ಸಾಲು ಧ್ಯಾನಿಸಿಯೇ ಇದನ್ನು ಬರೆದಿದ್ದಾರೆ ಅನ್ನಿಸುವದು ಪುಸ್ತಕ ಓದಿ ಕೆಳಗಿಡುವಾಗ. ನಾನು ಸಮಾಜವನ್ನು ಬಿಟ್ಟು ದೂರ ಹೋಗಲಿಲ್ಲ, ಸಮಾಜ ನನ್ನನ್ನೂ ದೂರ ಮಾಡಲಿಲ್ಲ ಅನ್ನುವ ಒಂದು ಸಾಲು ಇಡೀ ಅವರ ಜೀವನವನ್ನು, ವ್ಯಕ್ತಿತ್ವವನ್ನು ಸಮರ್ಥವಾಗಿ ಹಿಡಿದಿಡುತ್ತದೆ ಅನ್ನಿಸಿಬಿಟ್ಟಿತು. ಪುಸ್ತಕ ಸಂಗೀತದಂತೆ ಆವರಿಸುತ್ತದೆ.. ಮುಗಿದ ಹೋದ ಹಾಡಿನಂತೆ ಮನದಲ್ಲೂ ಉಳಿಯುತ್ತದೆ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...