ಆಲೆಮನೆ
ಮನೆಯ ಅಂಗಳ ದಾಟಿ, ಗದ್ದೆಯ ಬಯಲಿಗೆ ಇಳಿದು ಎಡಕ್ಕೆ ತಿರುಗಿ ಅದೇ ಕೋಗಿನಲ್ಲಿ ಒಂದರ್ಧ ಮೈಲು ನಡೆದರೆ ಕೋಗಿನ ಅಂಚಿನಲ್ಲಿ ಹರಿಯುತ್ತಿದ್ದ ಆ ದೊಡ್ಡ ಹಳ್ಳ ಸಿಗುತಿತ್ತು. ಅಲ್ಲಿ ಮಾತ್ರ ಇನ್ನೊಂದು ಹಳ್ಳವೂ ಬಂದು ಸೇರಿ ಇದು ಇನ್ನಷ್ಟು ಕೊಬ್ಬುತಿತ್ತು. ಬೇಸಿಗೆಯಲ್ಲಿ ಆರಾಮಾಗಿ ಇಳಿದು ದಾಟಬಹುದಾದರೂ ಮಳೆಗಾಲದಲ್ಲಿ ಅದರ ಆರ್ಭಟ ಜೋರಾಗಿರುತ್ತಿದ್ದರಿಂದ ಅಡಿಕೆಯ ಮರದ ಸಂಕವನ್ನು ಹಾಕಲಾಗಿತ್ತು. ತುಸು ಎತ್ತರವೇ ಅನ್ನಿಸಬಹುದಾದ ಆ ಸಂಕಕ್ಕೆ ಅಲ್ಲಲ್ಲಿ ಕೋಲು ಕಟ್ಟಿ ಹಿಡಿದು ದಾಟಲು ಅನುಕೂಲ ಮಾಡಿದ್ದರು. ಆ ಸಂಕ ದಾಟಿದರೆ ಕಬ್ಬಿನಕೇರಿ. ಇದ್ದಿದ್ದು ಒಂದೇ ಮನೆ ನರಸಿಂಹ ಶಾಸ್ತ್ರಿಗಳದ್ದು. ಮಳೆಗಾಲದಲ್ಲಿ ಅಲುಗಾಡುವ ಸಂಕ, ಕೆಳಗೆ ಭೋರ್ಗೆರೆದು ಕೆಂಪಾಗಿ ಹರಿಯುವ ಹಳ್ಳ ಭಯ ಹುಟ್ಟಿಸುತ್ತಿದ್ದರಿಂದ ಹೋಗುವುದು ಕಡಿಮೆಯಾಗಿದ್ದರೂ ಸಂಕ್ರಾಂತಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು. ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ಅಲ್ಲಿ ಆಲೆಮನೆ ಶುರುವಾಗುತ್ತಿತ್ತು. ಅವರು ಕಬ್ಬು ಬೆಳೆಯುತ್ತಿದ್ದರಿಂದ ಕಬ್ಬಿನಕೇರಿ ಅಂತಾರೆ ಎಂದು ನಾವೇ ಹೆಸರಿಗೊಂದು ಕಾರಣ ಕೊಟ್ಟುಕೊಳ್ಳುತ್ತಿದ್ದೆವು. ಕಣದಲ್ಲಿ ಕೋಣವನ್ನು ಕಟ್ಟಿ ಗಾಣ ತಿರುಗಿಸುವವರು, ತುಸು ದೂರದಲ್ಲಿ ಉರಿಯುವ ದೊಡ್ಡ ಒಲೆಯಾ... ಬೆಂಕಿಯ ಗೋಳವಾ ... ಅದರ ಮೇಲೊಂದು ದೊಡ್ಡದಾದ ಬಾಣಲೆ.. ಅದರಲ್ಲಿ ಕುದಿಯುವ ಬೆಲ್ಲ.. ಸುತ್ತಲೂ ನೋಡುವ ಜನ, ಮಾತು ಕತೆ, ಕುತೂಹಲದಿಂದ ಮುಂದಕ್ಕೆ ನುಗ್ಗುವ ನಮ್ಮ...