ಆಲೆಮನೆ

ಮನೆಯ ಅಂಗಳ ದಾಟಿ, ಗದ್ದೆಯ ಬಯಲಿಗೆ ಇಳಿದು ಎಡಕ್ಕೆ ತಿರುಗಿ ಅದೇ ಕೋಗಿನಲ್ಲಿ ಒಂದರ್ಧ ಮೈಲು ನಡೆದರೆ ಕೋಗಿನ ಅಂಚಿನಲ್ಲಿ ಹರಿಯುತ್ತಿದ್ದ ಆ ದೊಡ್ಡ ಹಳ್ಳ ಸಿಗುತಿತ್ತು. ಅಲ್ಲಿ ಮಾತ್ರ ಇನ್ನೊಂದು ಹಳ್ಳವೂ ಬಂದು ಸೇರಿ ಇದು ಇನ್ನಷ್ಟು ಕೊಬ್ಬುತಿತ್ತು. ಬೇಸಿಗೆಯಲ್ಲಿ ಆರಾಮಾಗಿ ಇಳಿದು ದಾಟಬಹುದಾದರೂ ಮಳೆಗಾಲದಲ್ಲಿ ಅದರ ಆರ್ಭಟ ಜೋರಾಗಿರುತ್ತಿದ್ದರಿಂದ ಅಡಿಕೆಯ ಮರದ ಸಂಕವನ್ನು ಹಾಕಲಾಗಿತ್ತು. ತುಸು ಎತ್ತರವೇ ಅನ್ನಿಸಬಹುದಾದ ಆ ಸಂಕಕ್ಕೆ ಅಲ್ಲಲ್ಲಿ ಕೋಲು ಕಟ್ಟಿ ಹಿಡಿದು ದಾಟಲು ಅನುಕೂಲ ಮಾಡಿದ್ದರು. ಆ ಸಂಕ ದಾಟಿದರೆ ಕಬ್ಬಿನಕೇರಿ. ಇದ್ದಿದ್ದು ಒಂದೇ ಮನೆ ನರಸಿಂಹ ಶಾಸ್ತ್ರಿಗಳದ್ದು.

ಮಳೆಗಾಲದಲ್ಲಿ ಅಲುಗಾಡುವ ಸಂಕ, ಕೆಳಗೆ ಭೋರ್ಗೆರೆದು ಕೆಂಪಾಗಿ ಹರಿಯುವ ಹಳ್ಳ ಭಯ ಹುಟ್ಟಿಸುತ್ತಿದ್ದರಿಂದ ಹೋಗುವುದು ಕಡಿಮೆಯಾಗಿದ್ದರೂ ಸಂಕ್ರಾಂತಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು. ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ಅಲ್ಲಿ ಆಲೆಮನೆ ಶುರುವಾಗುತ್ತಿತ್ತು. ಅವರು ಕಬ್ಬು ಬೆಳೆಯುತ್ತಿದ್ದರಿಂದ ಕಬ್ಬಿನಕೇರಿ ಅಂತಾರೆ ಎಂದು ನಾವೇ ಹೆಸರಿಗೊಂದು ಕಾರಣ ಕೊಟ್ಟುಕೊಳ್ಳುತ್ತಿದ್ದೆವು. ಕಣದಲ್ಲಿ ಕೋಣವನ್ನು ಕಟ್ಟಿ ಗಾಣ ತಿರುಗಿಸುವವರು, ತುಸು ದೂರದಲ್ಲಿ ಉರಿಯುವ ದೊಡ್ಡ ಒಲೆಯಾ... ಬೆಂಕಿಯ ಗೋಳವಾ ... ಅದರ ಮೇಲೊಂದು ದೊಡ್ಡದಾದ  ಬಾಣಲೆ.. ಅದರಲ್ಲಿ ಕುದಿಯುವ ಬೆಲ್ಲ.. ಸುತ್ತಲೂ ನೋಡುವ ಜನ, ಮಾತು ಕತೆ, ಕುತೂಹಲದಿಂದ ಮುಂದಕ್ಕೆ ನುಗ್ಗುವ ನಮ್ಮಂತ ಕಪಿ ಸೈನ್ಯ... ಎಲ್ಲಾದರೂ ಒಲೆಗೆ ಬಿದ್ದು ಬಿಟ್ಟಿರಾ ಎಂದು ಕೂಗುತ್ತಲೇ ನಮ್ಮನ್ನು ಪಕ್ಕಕ್ಕೆ ಸರಿಸಿ ಅಲ್ಲೇ ಇದ್ದ  ಹಲಸಿನ ಮರದಿಂದ ಎಲೆಯನ್ನು ಕೊಯ್ದು ಅದಕ್ಕಷ್ಟು ಬಿಸಿ ಬಿಸಿ ನೊರೆಬೆಲ್ಲ ಹಾಕಿಕೊಂಡುವ ಮಂಜುನಾಥಣ್ಣ .

ಕುಡಿದಷ್ಟೂ ಕಬ್ಬಿನಹಾಲು, ತಿಂದಷ್ಟೂ ನೊರೆಬೆಲ್ಲ, ಗಾಣದ ಹಿಂದೆ ಓಡುತ್ತಾ ಆಡುವ ಅವಕಾಶ, ಮಧ್ಯೆ ಹಸಿವಾದಾಗ ಪುಟ್ಟಿ ಅಕ್ಕ ಕರೆದುಕೊಂಡು ಹೋಗಿ ಊಟ ಹಾಕಿ, ಒಂದಷ್ಟು ಹರಟಿ ಮತ್ತೆ ಗಾಣದ ಬಳಿ ಬಂದು ಮನೆಯ ನೆನಪೇ ಆಗುತ್ತಿರಲಿಲ್ಲ. ರಾತ್ರಿ ಆಗುತ್ತಿದ್ದ ಹಾಗೆ ಚಳಿ ಶುರುವಾದಾಗ ಒಳಗೆ ಹೋಗಿ ಅಡುಗೆಮನೆಯ ಒಲೆಯ ಮುಂದೆ ಕುಳಿತು ಹರಟೆ ಹೊಡೆಯುತ್ತಾ, ಊಟ ಮಾಡಿ ಮಲಗುವ ಹೊತ್ತಿಗೆ ಮಾತ್ರ ಭಯ ಶುರುವಾಗುತ್ತಿತ್ತು. ಅದಕ್ಕೆ ಕಾರಣ ಅವರ ಮನೆಯ ಹಿಂದಿದ್ದ ಕಾಡು ಹಾಗೂ ಕೆಲವೊಮ್ಮೆ ಕೊಟ್ಟಿಗೆಯವರೆಗೂ ಆಹಾರ ಅರಸಿಕೊಂಡು ಬರುತ್ತಿದ್ದ ಹುಲಿರಾಯ. 

ನಡುಮನೆಯಲ್ಲಿ ಹಾಸಿಗೆ ಹಾಸಿ ಅಕ್ಕಂದಿರ ನಡುವೆ ಮಲಗಿದರೂ ಕೊಟ್ಟಿಗೆ ಬಾಗಿಲಿಗೆ ಬಿಳಿ ಪಂಚೆ ಕಟ್ಟಿದ್ದೀಯಾ ಎಂದು ಭಾಗ್ಯಮ್ಮ ಕೇಳುವಾಗ ಮಾತ್ರ ಬರುತ್ತಿದ್ದ ನಿದ್ದೆಯೂ ಓಡುತ್ತಿತ್ತು. ಕಟ್ಟಿದೀನಿ ಬಿಡಮ್ಮಾ ಅಷ್ಟೊಂದು ಜನ, ಸದ್ದು  ಇರುವಾಗ ಹುಲಿ ಎಲ್ಲಿಂದ ಬರುತ್ತೆ ಎನ್ನುತ್ತಿದ್ದಳು ಅಕ್ಕ.  ಬಿಳಿ ಪಂಚೆ ಯಾಕೆ ಕಟ್ಟುತ್ತಿದ್ದರು, ಹುಲಿ ಹಿಂದಕ್ಕೆ ಹೋಗುತಿತ್ತಾ ಗೊತ್ತಿಲ್ಲ ಆದರೆ ಬಿಳಿ ಪಂಚೆ ಕಟ್ಟಿದರೆ ಹುಲಿ ಬರುವುದಿಲ್ಲ ಎನ್ನುವುದು ನಮ್ಮ ನಂಬಿಕೆ ಆದ್ದರಿಂದ ನಿಶ್ಚಿಂತೆಯಿಂದ ನಿದ್ದೆ ಹೋಗುತ್ತಿದ್ದೆವು. ಬೆಳಿಗ್ಗೆ ಎದ್ದು ಮುಖ ತೊಳೆಯುವ ಮುನ್ನ  ಮತ್ತೆ ನೊರೆಬೆಲ್ಲ ತಿಂದು ಮನಸ್ಸಿನಲ್ಲದ ಮನಸ್ಸಿನಿಂದ ಮನೆಗೆ ಬಂದರೂ ಮತ್ತೆ ಮಧ್ಯಾಹ್ನ ಆಲೆಮನೆ ಕರೆಯುತ್ತಿತ್ತು. ಅದು ಮುಗಿಯವರೆಗೂ ನಾವು ಅಲ್ಲೇ ಬಿಡಾರ ಹೂಡುತ್ತಿದ್ದೆವು.ಯಾರದ್ದೋ ಮನೆ, ಎಷ್ಟು ದಿನ, ಇದ್ಯಾವ ಭಾವವೂ ನಮಗೂ ಅವರಿಗೂ ಕಾಡಿದ್ದು ನೆನಪಿಲ್ಲ.ವಾರಾಹಿ ನೆಮ್ಮದಿಯಿಂದ ಹರಿಯುತ್ತಿದ್ದ ಕಾಲವದು.

ಊರು ಮುಳುಗಿ, ಆಲೆಮನೆಯೂ ಮರೆಯಾಗಿ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಹೋಗಿ  ಇವೆಲ್ಲವೂ ನೆನಪಾಗಿ ಉಳಿದು ಹೋಗಿದೆ. ವಾರಾಹಿಯ ಸಂಕಟದ ಮುಂದೆ ಇದ್ಯಾವ ಮಹಾ ಎಂದು ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳುವುದೂ ಕಲಿತಾಗಿದೆ. ಮೊನ್ನೆ ಲಾಕ್ ಡೌನ್ ಎಂದು ಊರಿಗೆ ಹೋಗಿದ್ದಾಗ ನಡು  ಮಧ್ಯಾಹ್ನದ ಹೊತ್ತಿಗೆ ಯಾರೋ ಬಂದಿದ್ದರು. ನಿಮ್ಮಲ್ಲಿ ಆಲೇ ಕಣೆ ಇದೆಯಂತಲ್ಲ ಕೊಡ್ತೀರಾ ಎಂದು ಕೇಳಿ ತೆಗೆದುಕೊಂಡು ಹೋಗಿದ್ದರು. ಮತ್ತೆ ಕಬ್ಬಿನಕೇರಿ ನೆನಪಾಗಿ ಗಾಳಿಯೂ ಆಡದ ಮಧ್ಯಾಹ್ನ ಬೇಗೆ ಹೆಚ್ಚಿಸಿತ್ತು. ಅದಾಗಿ ವಾರ ಕಳೆಯುವ ಹೊತ್ತಿಗೆ ಬಂದವರು ಒಂದು ಡಬ್ಬ ಬೆಲ್ಲ, ಕಬ್ಬಿನಹಾಲು ತಂದುಕೊಟ್ಟಿದ್ದರು.ಮಗಳಿಗೆ ಆಲೆಮನೆಯ ಕತೆ ಹೇಳುತ್ತಾ ಮತ್ತೆ ನೆನಪನ್ನು ಮೆಲಕು ಹಾಕುತ್ತಿದ್ದೆ. ವಾರಾಹಿ ನಿಂತೇ ಹೋದಳಾ ಅನ್ನಿಸಿ ಕಣ್ಣು ಒದ್ದೆ... 

ತಂಗಿಯ ಮದುವೆಗೆ ಮಂಜುನಾಥಣ್ಣ ಬಂದಿದ್ದ. ಕಣ್ಣರಳಸಿ ನೋಡುತ್ತಿದ್ದವಳನ್ನು ಬಂದವನೇ ಕೂಸು ಮರಿ ಮಾಡಿಕೊಂಡು ಒಂದು ಸುತ್ತು ಹೊಡೆಸಿ ಬೆರಗಿನಿಂದ ನೋಡುತ್ತಿದ್ದ ಮಗಳಿಗೆ ನಿನ್ನಷ್ಟು ಚಿಕ್ಕ ಇರುವಾಗ ನಿನ್ನಮ್ಮನ್ನ ಹೀಗೆ ಕೂಸುಮರಿ ಮಾಡ್ತಾ ಇದ್ದೆ ಎಂದವನ ಕಣ್ಣಲ್ಲಿ ಕಂಡೂ ಕಾಣದ ಹಾಗೆ ತೆಳು ಪರದೇ ... ಈಗ ಸಮಾಧಾನ ಆಯ್ತು ಕಣೆ ಅಂದವನನ್ನೇ ನೋಡುತ್ತಿದ್ದೆ. ಕಟ್ಟು ಹಾಕಿದರೂ ವಾರಾಹಿ ಹರಿಯುವುದು ನಿಲ್ಲಿಸಿಲ್ಲ ಅನ್ನಿಸಿ ತುಟಿಯಲ್ಲಿ ಸಣ್ಣ ನಗು.... ಕಣ್ಣಲ್ಲಿ ಮಳೆ.. ವಾರಾಹಿಗೂ ಸಮಾಧಾನ ಆಗಿರಬಹುದಾ.....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...